Monday, 17 August 2026

ಇಷ್ಟೊಂದು ಅಂಧಕಾರ
ಈ ಮೊದಲು ಹಿಂದೆಂದೂ
ಇರಲಿಲ್ಲ...

ಎಂದಾದರೂ 
ಒಂದುದಿನ ಏಕಾಏಕಿ 
ಮನೆಯ ದೀಪ ಆರಿದರೆ 
ಮತ್ತಾವುದೋ ಮನೆಯ 
ಒಂದು ದೀಪದ ಹಟಮಾರಿ ಬೆಳಕು ನಮ್ಮನೆಯವರೆಗೂ ಹರಡುತ್ತಿತ್ತು..

ಯಾವುದೋ ರಸ್ತೆಯ 
ಮೇಲಿನ ಒಂದು ಬೆಳಕು
ಕಿಂಡಿಯಲ್ಲಿ ಇಣುಕಿ
ನಮ್ಮನೆಗೂ ಕೊಂಚ ಹಾಯುತ್ತಿತ್ತು... 

ಅದೇನೂ ಇಲ್ಲದಿದ್ದರೂ 
ಮನೆಯ ಮೂಲೆಯಲ್ಲಿಯ
ಯಾವುದೋ ಚೂರು ಬೆಳಕು
ಒಂದು ದೀಪವನ್ನೋ/
ಮೊಂಬತ್ತಿಯ ಚೂರನ್ನೋ 
ಉರಿಸುವಷ್ಟು ಕೆಲಸ ಮಾಡುತ್ತಿತ್ತು...
ಇಷ್ಟು ಕತ್ತಲೆ ಮಾತ್ರ
ಎಂದಿಗೂ ಇರಲಿಲ್ಲ...

ಯಜ್ಞಕುಂಡದಲ್ಲಿ ಒಣಕಡ್ಡಿಗಳೊಳಗೆ
ಕೊಂಚವಾದರೂ ಬೆಳಕು ಕಾಣುತ್ತಿತ್ತು.
ಆಕಾಶವೂ ಎಂದೂ ಇಷ್ಟು
ಕಾಂತಿಹೀನವಾಗಿರಲಿಲ್ಲ...
ನಕ್ಷತ್ರಗಳ ಬೆಳಕಿನಿಂದಲೇ
ಹಲವು ಬಾರಿ ಭೂಮಿ ಬೆಳಗಿದ್ದುಂಟು..

ಇದು ಬರಿ ನಮ್ಮ ಗೋಲಾರ್ಧದ 
ಸಮಸ್ಯೆಯಲ್ಲ,
ಇಡೀ ವಿಶ್ವವೇ ನಿಧಾನವಾಗಿ
ಕತ್ತಲೆಗಿಳಿಯುತ್ತಿದೆ.
ಕೇವಲ  ಗೂಗೆಗಳು ಮಾತ್ರ
ಶಬ್ದಮಾಡುತ್ತಿವೆ...
ಅವುಗಳ ಬೆನ್ನ ಮೇಲಿರುವ ದೇವತೆ ಅಲ್ಲಿಂದ ಅದೆಲ್ಲಿಗೋ ಜಾರಿದ್ದಾಳೆ!!!
ಇಷ್ಟು ಕತ್ತಲೆ 
ಈ ಮೊದಲು ಎಂದೂ ಇರಲಿಲ್ಲ...

No comments:

Post a Comment

ಇಷ್ಟೊಂದು ಅಂಧಕಾರ ಈ ಮೊದಲು ಹಿಂದೆಂದೂ ಇರಲಿಲ್ಲ... ಎಂದಾದರೂ  ಒಂದುದಿನ ಏಕಾಏಕಿ  ಮನೆಯ ದೀಪ ಆರಿದರೆ  ಮತ್ತಾವುದೋ ಮನೆಯ  ಒಂದು ದೀಪದ ಹಟಮಾರಿ ಬೆಳಕು ನಮ್ಮನೆಯವರೆಗೂ ಹರ...