Thursday 29 July 2021

ನಿನ್ನ ಕೈಲಿಹ ಫೋನು...(ಕವನ).

ನಿನ್ನ ಕೈಲಿಹ ಫೋನು 
ಎಲ್ಲೊ ಮುಚ್ಚಿಟ್ಟು ಬಿಡು
ಮರೆತು ಹೋಗಲಿ ಒಂದು ವಾರದಲ್ಲಿ;
ಮರೆಯಾದ ಫೋನದುವೆ 
ತುಸುವೇ ನೆಮ್ಮದಿ ನೀಡೆ;
ಧನ್ಯವಾಯಿತು ಮೋಹ ಅರಿವಿನಲ್ಲಿ.

ನಿನ್ನ ಕೈಲಿಹ ಫೋನು, 
ಬಳಸದೆಯೆ ಇದ್ದುಬಿಡು
ಕಳೆದು ಹೋಗಲಿ ಕಾಲ ನಿನ್ನಿಚ್ಛೆಯಂತೆ;
ಮರೆಗೆ ಸರಿದಿಹ  ಭಾವ 
ಮತ್ತೆ ತುಂಬಲಿ ಜೀವ,
ಶಾಂತವಾಗಲಿ ಮನಸು ಮುನ್ನಿನಂತೆ...

ನಿನ್ನ ಕೈಲಿಹ ಫೋನು, 
ನಿನ್ನದೆಂದೆನಬೇಡ,
ದಾನದಲಿ ಕೊಟ್ಟುಬಿಡು ಮನಸು ಮಾಡಿ;
ಮರೆತ ಹವ್ಯಾಸಗಳು
ಮರುಜೀವ ಪಡೆಯಲಿ,
ಬುದ್ಧಿಮಾಗಲಿ ಕೊಂಚ ಅರಿವುಮೂಡಿ...

ಸ್ವಲ್ಪ ಹೊತ್ತಾದರೂ 
ಮನಸು ಕೇಳಲಿ ಮಾತು;
ಹಿಡಿತವನೆ ಬಿಡುವದು ಸೂಕ್ತವಲ್ಲ;
ಒಮ್ಮೆ ಸೂತ್ರವು ಹರಿದ
ಗಾಳಿಪಟವನೆ ನೋಡು;
ಬದುಕೆ ಬಲಿಕೊಡುವದು ಯುಕ್ತವಲ್ಲ...

Friday 16 July 2021

ಹಮ್ ಹೋಂಗೆ ಕಾಮಯಾಬ್...



              ಈ ಬದುಕೂ ತುಂಬಾ ವಿಚಿತ್ರ. ಎಷ್ಟೋ ಸಲ ಕಾರಣವಿಲ್ಲದೇ ಎಲ್ಲವೂ ಮುಗಿದು ಹೋಯಿತೇನೋ ಎಂಬ ಭಾವ ಕಾಡುತ್ತದೆ. ಯಾವುದರಲ್ಲಿಯೂ ಆಸಕ್ತಿ ಉತ್ಸಾಹ ಉಳಿಯುವದಿಲ್ಲ. ಆಗ ಸಂಪೂರ್ಣ ಕುಗ್ಗಿಹೋಗುತ್ತೇವೆ. ಇದು ಎಂಥವರನ್ನೂ ಬಿಟ್ಟಿಲ್ಲ. ಅರ್ಜುನನನ್ನು ಕೂಡ...
               ಒಮ್ಮೊಮ್ಮೆ ನಾವು ಕಾರಣವಿಲ್ಲದೇ ಸೋತು ಕೈಯೆತ್ತಿ ಬಿಡುತ್ತೇವೆ. ಶರಣಾಗುತ್ತೇವೆ. ಶಸ್ರಾಸ್ತ್ರ ಚಲ್ಲಿಬಿಡುತ್ತೇವೆ. ಹೋರಾಟಕ್ಕೆ ವಿಮುಖರಾಗುತ್ತೇವೆ. ಏನೂ  ಮಾಡಲೂ ಉತ್ಸಾಹ ಬರುವದೇ ಇಲ್ಲ. ಕೆಲಸಗಳನ್ನು ತಪ್ಪಿಸಿಕೊಳ್ಳುವದು, ಕಾರಣವಿಲ್ಲದೇ ಮುಂದೂಡುವದು ಅನಿವಾರ್ಯ ಅಭ್ಯಾಸವಾಗಿಬಿಡುತ್ತದೆ.

          ಆದರೆ ನೆನಪಿರಲಿ. ಇದೇ ಕೊನೆಯಲ್ಲ. ಕಾರ್ಯಮಧ್ಯದ ಚಿಕ್ಕಚಿಕ್ಕ ವಿಶ್ರಾಂತಿಗಳು ಗುರಿಗಳನ್ನು ಹೆಚ್ಚು ಗಟ್ಟಿಗೊಳಿಸುತ್ತವೆ.  ಮುಂದಿನ ಹಾದಿಯನ್ನು ಸುಗಮಗೊಳಿಸುತ್ತವೆ. ಹೆಚ್ಚು ಉತ್ಸಾಹ ತುಂಬಿಸಿ ಹೋರಾಟಕ್ಕೆ ಸನ್ನದ್ಧಗೊಳಿಸುತ್ತವೆ. ಕಾರಣ ಯಾವುದಾದರೂ ಕಾರಣಕ್ಕೆ ಜೀವನದಲ್ಲಿ 'ಖಾಲಿತನ ಕಾಡಿದರೆ ಖೇದಗೊಳ್ಳಬೇಕಿಲ್ಲ, ಹತಾಶರಾಗಬೇಕಿಲ್ಲ. ಖಾಲಿತನಕ್ಕೂ ತನ್ನದೇ ಆದ ತೂಕವಿದೆ...ಅದು ಅರ್ಥಪೂರ್ಣವೂ ಆಗಿದೆ...

      ಅಂತೆಯೇ ಬದುಕಿಗೊಂದು ಬಿನ್ನಹವಿರಲಿ...ಅದು ತನ್ನ ಕಷ್ಟ ನಷ್ಟ, ಅವಶ್ಯಕತೆಗಳನ್ನು ತಾನೇ ಸರಿದೂಗಿಸುತ್ತ ನಿರಂತರ ಚಲನೆಯಲ್ಲಿರಲಿ...ಅದು ಬತ್ತಲಾರದಂತೆ ಚಂದಗೊಳಿಸುತ್ತಲೇ ಇರೋಣ...ಖಾಲಿ ಅನಿಸಿದರೆ ತುಂಬೋಣ...

                ಇದರಲ್ಲಿ ಏನೂ ತಪ್ಪಿಲ್ಲ . ಹಿಮ್ಮೆಟ್ಟುವದು ಹೇಡಿತನವೇನೂ ಅಲ್ಲ.
ದಣಿವಿನ ಅರ್ಥ ಸಂಪೂರ್ಣ ಬಿಟ್ಟು ಕೊಡುವದಲ್ಲ...ಅದು ಮನಸ್ಸು ಕ್ಷಣಕಾಲ  ಅಸ್ಥಿರವಾಗಿದ್ದರ  ನಿಮಿತ್ತವಾಗಿರಲೂ ಬಹುದು. ಒಂದು ದೊಡ್ಡ ಜಿಗಿತಕ್ಕೆ ಮೊದಲಿಗೆ ಹಾಕುವ ಒಂದೆರಡು ಅವಶ್ಯಕ ಹೆಜ್ಜೆಗಳಿರಬಹುದು.

                ‌ಅಂತೆಯೇ ಬದುಕಿನ ಚಿಕ್ಕ ಪುಟ್ಟ ಅಡ್ಡಿಗಳು ನಮಗೆ ಮುಂದಿನ ಜಿಗಿತಕ್ಕೆ ' ಚಿಮ್ಮು ಹಲಿಗೆ'ಗಳಾಗಲಿ. 

Thursday 15 July 2021

ಒಂದು ಅಲ್ಬಮ್ ಕಥೆ...

 ಕಳೆದ ಮೇ ತಿಂಗಳಲ್ಲಿ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ
ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳು plan ಆಗಿತ್ತು.ನಾನು ಅವರ ಮದುವೆಯ ಅಲ್ಬಮ್ ನೋಡಲೆಂದು  ಹೊರಗಿಟ್ಟಿದ್ದೆ. ಇಪ್ಪತ್ತು ವರ್ಷಗಳಲ್ಲಿ  ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವದು ನನ್ನ ಉದ್ದೇಶವಾಗಿತ್ತು. ಅದನ್ನು ಸಾಕಷ್ಟು ಮಜಾ ತೆಗೆದುಕೊಂಡು ನೆನಪುಗಳನ್ನು ಮರಳಿ ಮರಳಿ ಹಸಿರಾಗಿಸಿಕೊಂಡದ್ದಾಯಿತು. ಅಲ್ಬಮ್ ತುಂಬಾ ದೊಡ್ಡದಿದ್ದು ಒಂದೇ ಸಲ ನೋಡಲಾಗುವುದಿಲ್ಲ ಎಂಬ ಕಾರಣಕ್ಕೆ
ತೆಗೆದಿಟ್ಟಿರಲಿಲ್ಲ. ಇಂದು ಮತ್ತೊಮ್ಮೆ ಆರಾಮಾಗಿ ನೋಡಲು  ಕುಳಿತರೆ  ಆದದ್ದೇ ಬೇರೆ. ಆ ದಿನ ನಮ್ಮೆಲ್ಲರ ಗಮನ ಮದುಮಕ್ಕಳ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿಯೇ  ಸೀಮಿತ ವಾದ್ದರಿಂದಲೋ ಏನೋ ಬರಿ ಸಂತಸದ ಗಳಿಗೆಗಳನ್ನು ಕೇಂದ್ರೀಕರಿಸಿ ಫೋಟೋ ನೋಡಿರಬಹುದು ನಾವು.
ಇಂದು ತೆಗೆದರೆ ಢಾಳಾಗಿ ಈ ಇಪ್ಪತ್ತು ವರ್ಷಗಳಲ್ಲಿ ನಮ್ಮನ್ನು ಬಿಟ್ಟು ಹೋದವರು ಎದ್ದು ಕಾಣುತ್ತಿದ್ದರು.
ಬಡತನವಿದ್ದರೂ ಸ್ವಾಭಿಮಾನ ಧನನಾದ ಅಪ್ಪ /ಕೈಯಲ್ಲಿ ಏನೂ ನೀಗದಿದ್ದರೂ
 ' ಅವ್ವಾ' ಎಂದು ಕರೆದಾಗ ಹಾಜರಾಗುತ್ತಿದ್ದ ಅವ್ವ,/ ಅವ್ವನ ಚಿಕ್ಕ ಅನುಪಸ್ಥಿತಿಯಲ್ಲಿ ಅವಳ ಕೊರತೆ ಒಂದಿಷ್ಟೂ ಆಗದಂತೆ ನೋಡಿಕೊಂಡ ಚಿಕ್ಕಮ್ಮ/ ಚಿಕ್ಕಪ್ಪಂದಿರು,  ಆಪತ್ಕಾಲದಲ್ಲಿ ಸದಾ ಸಾಥ್ ನೀಡುತ್ತಿದ್ದ ಬಂಧುಗಳು ಎಲ್ಲ ಸೇರಿ ಸಂಖ್ಯೆ ಹತ್ತಿರ ಹತ್ತಿರ
ಇಪ್ಪತ್ತೈದು ಮೀರಿದಾಗ ಒಂದು ರೀತಿಯ
ಸಂಕಟ ಶುರುವಾಯಿತು. ಸಮಾರಂಭಗಳಲ್ಲಿ  ಅವರೆಲ್ಲರ ಸ್ವ ಪ್ರೇರಣೆಯಿಂದ ಭಾಗವಹಿಸುವಿಕೆ/ ಮುಂದಾಳತ್ವ/ ಅಮೂಲ್ಯವಾದ  ಸಲಹೆಗಳು/ ಹಿರಿತನ ಎಲ್ಲ ಕಣ್ಣುಮುಂದೆಯೇ ಸಧ್ಯ ನಡೆದ ಸಿನೆಮಾ ರೀತಿಯಲ್ಲಿ ತೆರೆದು ಕೊಂಡಿತು. ಮದುಮಕ್ಕಳ ಉಪಸ್ಥಿತಿ, ಸಂತಸ, ಹುರುಪು ಸಂಪೂರ್ಣವಾಗಿ ಗಮನ ಕಳೆದುಕೊಂಡು ಯಾವಾವುದೋ ಕಾರಣಗಳಿಗೆ ನಮ್ಮಿಂದ
ಶಾಶ್ವತವಾಗಿ ದೂರವಾಗಿ ಹೋದವರ
ಗುಂಗಿನಲ್ಲಿ ಮನಸ್ಸು ಖಿನ್ನವಾಗತೊಡಗಿತು. ಸುಮಾರು ವರ್ಷವೊಂದು ಮಿಕ್ಕಿ ಸಾವಿನ ಸುದ್ದಿಗಳನ್ನು ಕೇಳುತ್ತಲೇ ಕಳೆಯುತ್ತಿರುವ ಇಂದಿನ ದಿನಗಳಿಗೆ ಮನಸ್ಸು ಮರಳಿತು.
ಕುಟುಂಬ ಸದಸ್ಯರು/ಬಂಧುಗಳು/  ಸ್ನೇಹಿತರು/ ನೆರೆಹೊರೆಯವರು/ ಪರಿಚಯಸ್ಥರು/ ಸಹೋದ್ಯೋಗಿಗಳು/
ಯಾರೆಲ್ಲ ನಮ್ಮನ್ನು ಅಗಲಿದ್ದರೋ ಅವರೆಲ್ಲರ ನೆನಪುಗಳು/ ಒಡನಾಟ ಗಳು/ ಘಟನೆಗಳು/ ಮಾತುಗಳು 
ಮನಸ್ಸನ್ನು ಗಾಸಿಗೊಳಿಸಿ ಹಣ್ಣಾಗಿಸಿದವು. ಮದುವೆಗಳು ಸಾವಿರ ಬರುತ್ತವೆ, ಹೆಚ್ಚು ಹೆಚ್ಚು ಸಂಭ್ರಮದಿಂದ
ಆಚರಿಸಲ್ಪಡುತ್ತವೆ, ವಿಜ್ರಂಭಣೆಯೂ ಹತ್ತಾರು ಪಟ್ಟು ಹೆಚ್ಚೂ ಇರಬಹುದೇನೊ!!! ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ, ತಮ್ಮ ಹೊಣೆಗಾರಿಕೆಯನ್ನು ಹೊರಲೇಬೇಕಾದ 
ಅನಿವಾರ್ಯತೆಯಿಂದಾಗಿ ಕುಟುಂಬದ ಸದಸ್ಯರು ನಿರಾಳವಾಗಿ ಒಂದುಕಡೆ ಹೆಚ್ಚಾಗಿ ಸೇರಲು ಸಮಯದ ಅಭಾವವೂ ಒಂದು ಕಾರಣವಾಗಿದೆ. ಉಪಾಯವಿಲ್ಲದೇ ಸಮಾರಂಭಗಳು Event management ದವರ ಪಾಲಾಗಿ ಆಗಿನ ಮುಕ್ತ ವಾತಾವರಣ ಇಂದಿನ ದಿನಗಳಲ್ಲಿ ಒಂದು ಕನಸು. ಯಾವುದನ್ನೂ ಪ್ರತಿಪಾದಿಸುವದಾಗಲೀ/ ವಿರೋಧಿಸುವದಾಗಲೀ ನನ್ನ ಉದ್ದೇಶ ವಲ್ಲ. ಒಂದೊಂದು ಕಾಲಘಟ್ಟದ ದಿನಗಳು ಸರಿದಂತೆ ಆಗುವ ಬದಲಾವಣೆಗಳನ್ನು ನನ್ನ ನೋಟವಷ್ಟೇ..

  




Saturday 10 July 2021

ತುಣುಕು- ಮಿಣುಕು..


    
       ‌‌‌‌‌‌       "  ಇತ್ತೀಚೆಗೆ ಮನೆಯಲ್ಲಿ ಅಡುಗೆ ಮಾಡುವದು ತುಂಬಾ ಕಡಿಮೆಯಾಗಿದೆ. ಹೆಣ್ಣುಮಕ್ಕಳೂ ಸಹ ದುಡಿಯುತ್ತಿರುವದರಿಂದ 
ಹೊರಗಿನ ಊಟವೇ ಪ್ರಧಾನವೆನಿಸುತ್ತಿದೆ. ನಮ್ಮ ಹಿರಿಯರಿಗೆ ಹೊರ ಊಟದ concept ಇರಲೇಇಲ್ಲ. ಅಡುಗೆ ಮಾಡುವದೂ ಒಂದು ಕಲೆ...
ಅದೊಂದು ಪೂಜೆ, ಧ್ಯಾನ. ಅದಕ್ಕೇ ಅದಕ್ಕೆ ' ಪ್ರಸಾದವೆಂಬ ಹೆಸರೂ ಇದೆ...ಅದನ್ನರಿತು ಮಾಡುವ ಅಡುಗೆ ಉಣ್ಣುವವರಿಗೆ ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ." 

ಬ್ರಹ್ಮ ಕುಮಾರಿ  ಶಿವಾನಿಯವರ ಮಾತು ಹಾಗೆಯೇ ಸಾಗಿತ್ತು..

ಅವರ ಮಾತುಗಳು ಮುಗಿದರೂ ಅವರೆತ್ತಿದ ವಿಷಯದ ಗುಂಗು ನನ್ನನ್ನು ಬಿಡಲೇಯಿಲ್ಲ...ಅದೇ ಧಾಟಿಯಲ್ಲಿ ಸಾಗಿದಾಗ ನನಗೆ ಅನಿಸಿದ್ದಿಷ್ಟು...

ಈಗ ಎಲ್ಲರ ಮನೆಯಲ್ಲೂ ಅಡುಗೆ ಮಾಡುವವರೇ ಇರುವದು ಜಾಸ್ತಿ...ಹಣಕ್ಕೆ ಬೇಯಿಸಿಟ್ಟು ಹೋದದ್ದರಲ್ಲಿ ಮನೆಯಡಿಗೆಯ ಆರೋಗ್ಯ, ಪ್ರೀತಿ, ಉಳಿತಾಯ, ರುಚಿ, ಸ್ವಚ್ಛತೆ  ಎಲ್ಲವೂ ಕಡಿಮೆ...
ವಿಶೇಷ ಸಂದರ್ಭಗಳಲ್ಲಿ ಅಡಿಗೆ ಮಾಡಿಸುವದು ಖಂಡಿತ ಅಡ್ಡಿಯಿಲ್ಲ. ಸಮಯಾಭಾವದ ನೆವವೊಡ್ಡಿ ದಿನಾಲೂ ಹೊರಗೆ ಊಟಮಾಡುವದು ಅಥವಾ ಯಾರೋ,  ಯಾವಾಗಲೋ ಬೇಯಿಸಿಟ್ಟದ್ದು ದಿನಾಲೂ ತಿನ್ನುವದೆಂದರೆ ಅಪಾಯ ಆಹ್ವಾನಿಸಿ ಕೊಂಡಂತೆ... ಈಗಿರುವ ಪರಿಸ್ಥಿತಿ ನೋಡಿದರೆ _ kitchenless homes ಬರಬಹುದು...ಮಕ್ಕಳಿಗೆ ಅಡಿಗೆ ಏನೋ ನಮ್ಮದಲ್ಲದ ಪರಕೀಯ ವ್ಯವಸ್ಥೆ ಎನಿಸುವ ದಿನಗಳು  ದೂರವಿಲ್ಲ...
ನಾನು ಅಮೆರಿಕೆಯ Boston ದಲ್ಲಿ  ಊಟಕ್ಕೆ ಹೋದ ಹೋಟೆಲ್ ಹೆಸರು clay oven...( ಮಣ್ಣಿನ ಒಲೆ) ನೈಜವಾಗಿ ಕಳೆದುಕೊಂಡದ್ದನ್ನು ಹೆಸರಿನಲ್ಲಿ ಹುಡುಕುವ ಹವಣಿಕೆ. " ಮನಪಸಂದ್'' 'ರಸೋಯಿ'  'ರಂಗೋಲಿ' 'ಹಳ್ಳಿಮನೆ'
ಇಂಥ ಭಾವನಾತ್ಮಕ ಹೆಸರಿನಡಿಯಲ್ಲಿ ' ನಮ್ಮತನ' ದ ಹುಡುಕಾಟ... 'ಬಾಲವಿಹಾರಕ್ಕೆ' ಎಂದೋ ಕಳೆದುಕೊಂಡ 'ಅಜ್ಜಿಮನೆ' ಅಂದು ಕೊಂಡು  ಖುಶಿಪಟ್ಟಂತೆ...
               ಯಾವುದೂ  ತಪ್ಪಲ್ಲ...
ಅನಿವಾರ್ಯವೆಂದಾದಲ್ಲಿ ಕೆಲಮಟ್ಟಿಗೆ ಅಪೇಕ್ಷಣೀಯವೂ ಹೌದು. ಅಷ್ಟೇ ಏಕೆ? ಕೆಲವೊಂದು  ಪರ್ಯಾಯ ವ್ಯವಸ್ಥೆಗಳು( ಬೆಂಗಳೂರಿನ ' ಅಜ್ಜೀ ಮನೆ) ಅಸಲನ್ನು ಮೀರಿಸಿ ಉತ್ತಮವಾಗಿರಲೂ ಬಹುದು
...ಹಾಗೆಂದು ಮೂಲ ವ್ಯವಸ್ಥೆ ಮರೆತು ಅದಕ್ಕೇ ಅಂಟಿಕೊಳ್ಳುವದು ಅವಶ್ಯಕವೂ ಇರುವದಿಲ್ಲ,
ಅನಿವಾರ್ಯವೂ ಇರುವದಿಲ್ಲ ...ಅತಿಯಾದರೆ ಅಮೃತವೂ ವಿಷವಂತೆ ..ಹಾಗಾಗದೆ ನಡುವಿನ golden mid point ನ ಆಯ್ಕೆ ಮಾಡುವದು ಪರ್ಯಾಯವೆನಿಸಬಹುದು...

      ‌‌     ಹಾಗೇ fb ತಿರುವಿಹಾಕುವಾಗ ಸಾಧ್ವಿ  ಶಿವಾನಿಯವರ ಭಾಷಣ ಕೇಳಿದಾಗ ತಲೆಯಲ್ಲಿ ಹಾದುಹೋದ ವಿಚಾರಗಳಿವು..ನನ್ನವು..ಕೇವಲ ನನ್ನ ದೃಷ್ಟಿಯಿಂದ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...