Sunday 24 March 2024


        ‌ನಾನು ಬೆಂಗಳೂರಿಗೆ ಬಂದಾಗ ನನ್ನನ್ನು ಮೂಲೆ ಮೂಲೆ ಸುತ್ತಾಡಿಸಿ
ರೂಢಿ ಮಾಡಿಸಿದ್ದು ಶಾಲಿನಿ...ನಾನು ಅವರನ್ನು ಅಂತಃಪುರಕ್ಕೆ ಪರಿಚಯಿಸಿ ದಾಗ ಇಬ್ಬರೂ ಅದರ ಕಾರ್ಯಕ್ರಮಗ ಳಿಗೆ ಭೇಟಿ ನೀಡುತ್ತಾ, ಸ್ನೇಹಿತರ ವಲಯದ ವಿಸ್ತಾರ ಹೆಚ್ಚಿಸುತ್ತಾ ಹೊಸ ಹೊಸ ಗೆಳತಿಯರನ್ನು ತೆಕ್ಕೆಗೆ ಸೇರಿಸುತ್ತ
ಬದುಕು ವರ್ಣಮಯ ಮಾಡಿಕೊಂಡ ದ್ದಾಯಿತು...ಅದರ ರಂಗು ಏರುತ್ತಿದ್ದಾಗ ಲೇ ಬಂದ ಎರಡು ಕೋವಿಡ್ ಅವಧಿ
ಗಳು ನಮ್ಮ ಭೇಟಿಗಳನ್ನು ಕಿರಿದು ಗೊಳಿಸುತ್ತಾ/ಸಂಖ್ಯೆಗಳನ್ನು ಇಳಿಸುತ್ತಾ
ಹೋಗಿ, ಅದೂ ಒಂದು ರೂಢಿಯಾಗಿ
ಭೇಟಿಗಳು fb /WA/ messenger
ಮೂಲಕ ಮಾತ್ರ ಉಳಿದು ಪರಸ್ಪರ ಭೇಟಿಗಳೂ ತುಟ್ಟಿಯಾಗತೊಡಗಿದವು.
ನನ್ನಂಥ ಹಿರಿಯ ನಾಗರಿಕರಿಗಂತೂ
ಒಂದೊಂದು ಭೇಟಿಯೂ ಒಂದೊಂದು
ಸವಾಲು...
             ಇಂಥದರಲ್ಲಿ ಜಯಲಕ್ಷ್ಮಿ
ಪಾಟೀಲರ 'ಈ ಹೊತ್ತಿಗೆ'ಕಾರ್ಯಕ್ರಮ ಒಂದು Oasis...ಮೂರೂವರೆ ತಾಸಿನ
ಈ ಸುಂದರ ಕಾರ್ಯಕ್ರಮದಿಂದ ಆದ
ಪ್ರಾಪ್ತಿ ಬಹಳಷ್ಟು.ಜಯಶ್ರೀ ದೇಶಪಾಂಡೆ, ಮೀರಾ, ಸಂಗೀತಾ, ಪೂರ್ಣಿಮಾ, ರೇಖಾ,ಇನ್ನೂ ಅನೇಕರ
ಜೊತೆಗೆ ಕಳೆದ ಒಂದು ದಿನ ನಮಗಿನ್ನೂ
ಒಂದು ತಿಂಗಳ ಮೆಲುಕಿಗೆ ಆಹಾರ. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮ ದಲ್ಲಿ ವಿದ್ವತ್ಪೂರ್ಣ ಭಾಷಣ/ವಿವಿಧ ವಿಷಯಗಳ ಕುರಿತು ಚರ್ಚೆ/ ಸಂವಾದ
ರುಚಿಕಟ್ಟಾದ ಭೋಜನ/ಎಷ್ಟೇ ದಣಿವು
ಮುಖದ ಮೇಲಿದ್ದರೂ ಪಾದರಸದಂತೆ 
ಓಡಾಡಿ ಎಲ್ಲವನ್ನೂ ಅಚ್ಚುಕಟ್ಟಾಗಿ
ನಿರ್ವಹಿಸುತ್ತಿದ್ದ ಜಯಲಕ್ಷ್ಮಿ/ವೇದಿಕೆಗೆ
ಭೂಷಣಪ್ರಾಯರಾದ  ದೇವೂ ಪತ್ತಾರ/ ಜಯಶ್ರೀ ದೇಶಪಾಂಡೆ/ ಶಶಿಕಲಾ ವಸ್ತ್ರದ/ಆಶಾದೇವಿಯಂಥ
ಹಿರಿಯರ ಉಪಸ್ಥಿತಿಯ ಮೆರುಗು -
ಇವುಗಳಿಂದಾಗಿ ಮೂರು ತಾಸು ಕಳೆದದ್ದೇ ತಿಳಿಯಲಿಲ್ಲ...
           ‌ ನನಗೆ ನನ್ನ ಕಾಲುನೋವಿನ 
ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದ್ದು ಹತ್ತು
ಬಾರಿ ಯೋಚಿಸಿ, ಜಯಶ್ರೀಯವರ 
ಬೆಂಬಲದ ಭರವಸೆಯ ಮೇಲೆ ಹೋಗಿದ್ದು ಸಾರ್ಥಕವಾಗಿದ್ದಲ್ಲದೇ ಅನೇಕ ಗೆಳತಿಯರ ಭೇಟಿ ಒಂದು
ಅಲಭ್ಯ ಲಾಭವೇ!!!


Thursday 21 March 2024

"International Day of Happiness..." 

ಇಂದು ಅಂತರ್ರಾಷ್ಟ್ರೀಯ ಆನಂದದ ದಿನವಂತೆ.Happiness - ಸಂತೋಷ- ಆನಂದ- ಖುಶಿ...ಏನೆಲ್ಲ ಹೆಸರಿನಿಂದ ಕರೆದರೂ ಹಿಂದಿನ ಭಾವವೊಂದೇ...
Happiness is a state of mind.- 
ಅದು ಸ್ಥಿರವಿರುವುದಿಲ್ಲ, ಸದಾ ಬದಲಾ ಗುತ್ತಿರುತ್ತದೆ.ಚಳಿಗಾಲದಲ್ಲಿ ಒಂದು ಕಪ್ ಬಿಸಿ ಚಹದಲ್ಲಿ/ಬೇಸಿಗೆಯಲ್ಲಿ ಐಸ್ಕ್ರೀಮ್ನಲ್ಲಿ/ಮಳೆಗಾಲದಲ್ಲಿ ಸಕಾಲಕ್ಕೆ ದೊರಕುವ ಸೂರಿನಡಿಯಲ್ಲಿ ಕಾಣುವ ಆನಂದ ಕೆಲವೊಮ್ಮೆ ಬದುಕಿಡೀ  ಕಾಯಂ 'ಮರೀಚಿಕೆ'ಯಾಗಿ ಕಾಡುತ್ತದೆ. ಅದಕ್ಕೆ ಒಂದು ಸರ್ವ ಸಮ್ಮತವಾದ ವ್ಯಾಖ್ಯಾನ ಇಲ್ಲದಿರುವುದೇ ದುರಂತ...

ನನಗೆ ಹೊಳೆದ ವ್ಯಾಖ್ಯೆಗಳು:
ಮೇಲೆ ಮೇಲೆ ಹೊಳೆದವುಗಳು...
ಭಿನ್ನಾಭಿಪ್ರಾಯಕ್ಕೆ ಯಾವುದೇ ಅಭ್ಯಂತರವಿಲ್ಲ...

*ಅ-ಅದೊಂದು ಮನಸ್ಥಿತಿ ಮಾತ್ರ.ಇದೆ ಅಂದ್ರೆ ಇದೆ, ಇಲ್ಲ ಅಂದ್ಕೊಂಡ್ರೆ ಇಲ್ಲ...
*ಆ- ಆರೋಗ್ಯವೇ ಆನಂದ...
*ಇ- ಇಚ್ಛೆ ಪಟ್ಟದ್ದು ದಕ್ಕಿದ ಖುಶಿ.
*ಈ- ಈರ್ಷೆಯಿಲ್ಲದ ಸರಳ ಜೀವನ.
*ಉ-ಉಂಡುಟ್ಟು ಕಳೆವ ಸ್ವಸ್ಥ ಬದುಕು.
*ಊ-ಊರು ಉಸಾಬರಿ ಇಲ್ಲದ ಬಾಳು. 
*ಋ- ಋಣವಿಲ್ಲದ ಬಾಳು...
*ಎ-ಎಷ್ಟಿದೆಯೋ, ಅಷ್ಟರದೇ- ಖುಶಿ...
*ಏ- ಏನಿದೆಯೋ ಅದರಲ್ಲಿ ತೃಪ್ತಿ...
*ಐ-ಐಬುಗಳಿಲ್ಲದ ಇರುವಿಕೆ.
*ಒ- ಒಲವು ತುಂಬಿದ ಜೀವನ.
*ಓ-ಓಟದ ರೇಸಿನಲ್ಲಿ ಇರದಿರುವುದು.
* ಔ- ಔಷಧಿ ಮುಕ್ತ ಆರೋಗ್ಯ.
* ಅಂ-ಅಂದುಕೊಂಡದ್ದರ ಸಾಧನೆ...    
*ಅಃ- 'ಅಹಮಿಕೆ'ಯ - ನಿಯಂತ್ರಣ.

Tuesday 19 March 2024

ಯಾವಾಗಲಾದರೂ  ‌‌‌‌ನಿಮಗೂ ಹೀಗಾಗುತ್ತ?
  
      ನನಗೆ likes/comments ಬಗ್ಗೆ
ಅತಿ ಅನ್ನುವಷ್ಟು ಓಲೈಕೆಯಿಲ್ಲ.ಹಾ! ಬಂದರೆ ಖುಶಿಯಿದೆ,ಬರದಿದ್ದರೆ ವ್ಯಸನವಿಲ್ಲ...ಯಾರಾದರೂ ನಾವು ಬರೆದದ್ದನ್ನು ಮೆಚ್ಚಿದರೆ ಖುಶಿಯನಿಸು ವುದು ಸಹಜ ಕೂಡ...

           ಅನೇಕರು ನನಗೆ ಅನೇಕ ಬಾರಿ
" ನಾವು ನಿಮ್ಮನ್ನು follow ಮಾಡುತ್ತೇವೆ.ಆದರೆ comment ಹಾಕಲು ತಿಳಿಯುವುದಿಲ್ಲ.ಆ ಕಾರಣಕ್ಕೆ
ಏನೂ ಹಾಕಿರುವುದಿಲ್ಲ"- ಎಂದು ಅನೇಕ ಬಾರಿ ಹೇಳಿದ್ದಿದೆ...

               ಇಷ್ಟಾದರೂ ನನಗೊಂದು
ಹುಚ್ಚು ರೂಢಿಯಿದೆ.ಒಂದು ಲೇಖನಕ್ಕೆ
ಹತ್ತು likes-comments ಬಂದರೆ ಕೆಡುಕೆನಿಸುವದಿಲ್ಲ.ಆದರೆ 48 ಬಂದರೆ, 98  ಬಂದರೆ, ತೆಂಡೂಲ್ಕರ್ ನ batting ನೆನಪಾಗಿ Out ಆಗುವ ಭಯವಾಗು ತ್ತದೆ.ಎರಡು ಹೆಚ್ಚಿಗೆ ಬರಬಾರದೇ ಎಂಬ half century/full century ಗಳ ನಿರೀಕ್ಷೆ ಶುರುವಾಗುತ್ತದೆ.ಅದೇ ನನಗೆ ಮಜಾ ಅನಿಸುವುದು.

            ‌‌      ಬಹುಶಃ ಇದು ನನ್ನ  'ಪೂರ್ವಾಶ್ರಮ'-ದ ಕರ್ಮ 
ಶೇಷವಿರಬೇಕು... ಶಾಲೆಯಲ್ಲಿ ಕಲಿಯುವಾಗ/ನಂತರ ಕಲಿಸುವಾಗ
ಹೀಗೇ ಮಾರ್ಕ್ಸಗಳ ಬಗೆಗಾದ ಯುದ್ಧಗಳೆಲ್ಲ ಇದೇ ಪೂರ್ಣಾಂಕದ
ಕಾರಣಕ್ಕಾಗಿಯೇ.passing/ first class/ Rank ಇಂಥವುಗಳು ಒಂದೆರಡು ಗುಣಗಳಿಂದ ತಪ್ಪುತ್ತಿದ್ದರೆ
ಶಿಕ್ಷಕಿಯರ ಬಳಿ ಬಂದು ದೀನರಾಗಿ, ಕೈ ಜೋಡಿಸಿ ಮಾಡುವ ಪ್ರಾರ್ಥನೆಗೆ
ನಿಂತರೆ ಎಂಥ ದೇವನಿಗೂ ದಿಗಿಲಾಗು ವ ಹೊತ್ತು.ಹೋಗಲಿ ಎಂದು ಆಚೀಚೆ
ನೋಡಿ ಮಾರ್ಕ್ಸ ಕೊಟ್ಟದ್ದೇ ಆದರೆ
ಉಳಿದವರ ಬಳಿಯಲ್ಲಿ ಹೋಗಿ ಡಂಗುರ ಸಾರಿ ತಾವು ವಿಜೇತರಾದ 
ಸುದ್ದಿ ತಲುಪಿಸಿದರೆ, ಉಳಿದೆಲ್ಲ ವಿದ್ಯಾರ್ಥಿಗಳು ಅನಿರೀಕ್ಷಿತ ಮುತ್ತಿಗೆ
ಹಾಕಿ, ಗಲಾಟೆ ನಡೆದು, ಮುಖ್ಯಾಧ್ಯಾಪಕರ ಗಮನಕ್ಕದು ಬಂದು ನಮ್ಮ ಪರೀಕ್ಷೆಯಾಗುವದು
ಖಂಡಿತ...

              ಇದೀಗ fb ತೆಗೆದಾಗ  ನನ್ನ ಹಲವು post ಗಳು 48/99/09/39
ಅಂತ likes ಗಳ ಸಂಖ್ಯೆ ನೋಡಿ
ಇಷ್ಟೆಲ್ಲ ನೆನಪಾಯ್ತು ನೋಡಿ...
 






     ‌          

Monday 18 March 2024

ಅಮ್ಮನಿಲ್ಲದ ಮನೆ...

"ನಿಂತುಕೊಂಡು ಹಾಲು
ಕುಡಿಯಬೇಡ.
ಪಚನವಾಗುವುದಿಲ್ಲ- ಉಸಿರೆಳೆದುಕೊಂಡು
ನಿಧಾನವಾಗಿ ಕುಡಿ"
ಇಷ್ಟೊಂದು ಥಂಡಿಯಿದೆ,
ಕೋಟ್ ಹಾಕಿಕೊಂಡು ಹೋಗು"

ಇದು ಅಮ್ಮಂದೇ ದನಿ, 
ಇದೀಗ 
ಅಡಿಗೆ ಮನೆಯಿಂದ 
ಹಿಟ್ಟು ನಾದಿದ ಕೈಯಿಂದಲೇ
ಹೊರಗೆ ಬರುತ್ತಾಳೆ...

ತಿರುಗಿ ನೋಡಿದೆ,
ಅಲ್ಲಿತ್ತು ಬರೀ ಮೌನ...
ಒಬ್ಬನೇ ಇದ್ದಾಗಲೆಲ್ಲ
ಸುತ್ತಲ ಗಾಳಿಯೊಡನೆ
ಮಾತಾಡುವ ನನ್ನ ಹುಚ್ಚು ಮನ -

"ಹೊರಗೆ ಕೆಲಸದ ಮೇಲೆ ಹೋಗುತ್ತಿದ್ದರೆ 
ಒಂದು ಚಮಚ ಮೊಸರು ತಿನ್ನು,
ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೋ"-ಒಳ್ಳೆಯ ಲಕ್ಷಣ..."
ಎಂದಂತೆ ಭಾಸವಾಗುತ್ತದೆ...

ಈ ಸ್ವಾತಂತ್ರ್ಯಕ್ಕಾಗಿ
ಬದುಕಿಡೀ ಬಯಸಿದ್ದೆ,
ಇದೀಗ ನನ್ನ ಬಳಿ ಸ್ವಾತಂತ್ರ್ಯವಿದೆ. ಏನಾದರೂ ಒಂದು ಹೇಳಿ ತಡೆಯುವರಾರೂ ಈಗ ನನಗಿಲ್ಲ...
ಬೆಳಿಗ್ಗೆ ಯಾವಾಗಲೇ ಏಳಲಿ,
ರಾತ್ರಿ ತಡವಾಗಿ ಮಲಗಲಿ
ಏಕೆಂದು ಕೇಳುವವರಿಲ್ಲ...

"ಎಲ್ಲಿಗೆ ಹೋಗಿದ್ದೆ?
ಏಕೆ ತಡವಾಯಿತು?
ನೀನು ಎಂದು ಸುಧಾರಿಸುವವ?
ನಾ ಕೊಟ್ಟ ದುಡ್ಡು ಏನು ಮಾಡಿದೆ?
ರಾತ್ರಿ ಏಕೆ ಇಷ್ಟು ಲೇಟು?
ಎಷ್ಟೂಂತ ನಿನ್ನ ದಾರಿ ಕಾಯುತ್ತಿರಲಿ?
ನಿನ್ನ ಹಿಂದೆಯೇ ಓಡುತ್ತಿರಲಿ?

ಇವಕ್ಕೆಲ್ಲ ಸುಳ್ಳು ನೆಪ ಹೇಳುವ ಕಾರಣವೀಗ ಇಲ್ಲವೇ ಇಲ್ಲ...
ಏನು ಮಾಡಿದರೂ ಕೇಳುವವರಿಲ್ಲ...
ನನಗೀಗ ಏನೂ ಕಡಿಮೆಯಿಲ್ಲ,
ಅಂದುಕೊಂಡದ್ದೆಲ್ಲವೂ ಇದೆ...
ಆದರೆ 
ನೂರು ಪ್ರಶ್ನೆ ಕೇಳಿ ನನ್ನನ್ನು
ಸತಾಯಿಸುವ ಅಮ್ಮನೇ ಇಲ್ಲ...

ದಣಿದು ಬಂದರೆ ದಣಿದೆಯಾ?
ಎನ್ನುವವರಿಲ್ಲ...
ತಲೆಗೆ ಬಾಮ್ ಹಚ್ಚಿ ಹಣೆ ನೇವರಿಸುವವರಿಲ್ಲ...
"ದೀಪಾವಳಿಗೆ ಹಣೆಗೆ ತಿಲಕ ಇಟ್ಟು,
ಹಿರಿಯರಿಗೆ ನಮಿಸು-
ಆಶೀರ್ವಾದ ಸಿಗುತ್ತದೆ"
ಎನ್ನುವವರಿಲ್ಲ...
ಅಪ್ಪನ ಬೈಗಳ ಹೆದರಿಕೆ ಹುಟ್ಟಿಸುವವರಿಲ್ಲ...
"ಇನ್ನು ಹೊಸ ಅಂಗಿ
ಮುಂದಿನ ದೀಪಾವಳಿಗೇನೇ-"
ಎಂದು ಎಚ್ಚರಿಸುವವಳಿಲ್ಲ...

ನನ್ನ ಏಳ್ಗೆಗಾಗಿ ಹರಕೆ ಹೊರುವುದು,
ಅದು ಫಲಿಸಿದರೆ, 
ಎಲ್ಲಿ ದೂರ ಹೋಗುತ್ತೇನೋ 
ಎಂದು ಬಾಗಿಲ ಹಿಂದೆ
ನಿಂತು ಅಳುವುದು...
ಪರೀಕ್ಷೆ ಮುಗಿಸಿ ಬಂದರೆ 
ಕಾದು ಕುಳಿತು ಊಟಕ್ಕಿಡುವುದು...
ಯಾವುದೂ ಇಲ್ಲ ಈಗ...

ಈಗ
ನಾನು-ನೀನು ಅಂದುಕೊಂಡ 
ಎಲ್ಲವೂ ದಕ್ಕಿದೆ.
ಅದೆಲ್ಲ ಸಾಧಿಸಿದ ಖುಶಿಯೂ ಇದೆ.
ಆದರೆ ನೀನೇ ಇಲ್ಲವಲ್ಲ ಎಂಬ
ಅಗಾಧ ನೋವೊಂದು
ಸದಾಕಾಲ ಕಾಡುತ್ತಿದೆ...


Saturday 16 March 2024

 ‌‌‌ದೇವರೇ! ಈ ಬಾರಿ ನಿನ್ನನ್ನು ಕ್ಷಮಿಸಿವುದಿಲ್ಲ...
      
     ‌ಅದು 1999 ನೇ ಇಸ್ವಿ.ಸರಿಯಾಗಿ ಇಪ್ಮತೈದು ವರ್ಷಗಳ ಹಿಂದಿನ ಮಾತು. ಮೊದಲ ಬಾರಿಗೆ ಅಮೇರಿಕಾದ Boston ಗೆ ಹೊರಟಿದ್ದೆ. ಎದೆಯಲ್ಲಿ ಡವಡವ. ಹೇಗೋ ಏನೋ ಎಂಬ ಆತಂಕವಿತ್ತು. ಆ ಪ್ರವಾಸವನ್ನು ಬದುಕಿನಲ್ಲಿಯೇ ಅತ್ಯಂತ ಸುಂದರ ನೆನಪಾಗಿ ಪರಿವರ್ತಿಸಿದ ಹಲವಾರು ಜನ ನನಗಲ್ಲಿ ಸಿಕ್ಕರು.ಅವರಲ್ಲಿ ನನ್ನ ಮಗನ ಗೆಳೆಯರ ಪಾತ್ರ ದೊಡ್ಡದು. ಆಗ  ಈಗಿನ ಪ್ರಮಾಣದಲ್ಲಿ ಜನ ವಲಸೆ ಹೋಗುತ್ತಿರಲಿಲ್ಲ.ಹೋದವರಿ ಗೂ ಏನೋ ಅನಾಥ ಭಾವ ಕಾಡುತ್ತಿದ್ದ ದಿನಗಳವು.ಹೀಗಾಗಿ ಅವರೂ ಮೇಲಿಂದ ಮೇಲೆ ಭೇಟಿಯಾಗುವುದು
ಸಾಮಾನ್ಯವಾಗಿ,ಮನೆಯವರೇ ಆಗಿ
ಬಿಡುತ್ತಿದ್ದರು.ಬಹುಶಃ ಎಲ್ಲರೂ ಭಾವನಾತ್ಮಕ ಅವಲಂಬನೆಗೆ ಹಪಹಪಿಸುತ್ತಿದ್ದ ಕಾಲವದು...
             ಹೇಮಂತ ನಾಡ್ಗಿರ್ - ಅಂಥವರಲ್ಲಿ ಒಬ್ಬ.ಒಬ್ಬನೇ ಮಗ, ಎಲ್ಲರನ್ನೂ ಹಿಂದೆ ಬಿಟ್ಟು ಅಮೇರಿಕಾ
ಸೇರಿದವರಲ್ಲಿ ಒಬ್ಬ.ನನ್ನ ಮಗನನ್ನೊಬ್ಬ ನನ್ನು ಬಿಟ್ಟು ಇನ್ನೂ ಯಾರದೂ ಮದುವೆಯಾಗಿರಲಿಲ್ಲ.ಹೀಗಾಗಿ ಆಂಟಿ, ಆಂಟಿ ಎನ್ನುತ್ತ, ಬಗಲಿಗೆಗೊಂದ ಕೆಮರಾ ಇಳಿಬಿಟ್ಟು ನನ್ನ ಜೊತೆ ಹೆಜ್ಜೆ ಹಾಕುತ್ತಾ ,ತನಗೆ- ನನಗೆ ಬೇಕಾದಲ್ಲಿ
ನಿಂತು ಫೋಟೋ ತೆಗೆಯುತ್ತ ಖುಶಿಯನ್ನು ಸಮೃದ್ಧವಾಗಿ ಹಂಚಿದವ. ಅವೆಲ್ಲ ಸೇರಿಸಿ ಒಂದು ಪ್ರವಾಸದ ಸೋವಿನಿಯರ್ ಬರೆದಾಗ ನನಗಿಂತ ಲೂ ಖುಶಿ ಪಟ್ಟವ. ಧಾರವಾಡದ ಹುಡುಗರೆಂದರೆ ಸುಮ್ಮನೆಯೇ! ಅದರಲ್ಲೂ ನನ್ನ ಮಗನ ಖಾಸ ಗೆಳೆಯ.ನಮ್ಮದೇ ಶಾಲೆಯ ವಿದ್ಯಾರ್ಥಿ.
ಪುಟ್ಟ ನಗರವೊಂದರ ' ಗೆಳೆಯರ ಗುಂಪೆಂ'ದರೆ- ಅದರ ಸೊಗಸು/ ಸೊಗಡು ಬೇರೆಯೇ!!!
     ‌      2005 ರಲ್ಲಿ ಎರಡನೇ ಬಾರಿಗೆ
California ದಲ್ಲಿ ಮಗ ಇದ್ದಾಗ ಮತ್ತೊಮ್ಮೆ ಹೋಗಿದ್ದೆ.ಅದಾಗಲೇ  ಹೇಮಂತನಿಗೆ ಮದುವೆಯಾಗಿತ್ತು. ನಾವು ಕುಟುಂಬ ಸಮೇತ ಹೋಗಿದ್ದರೂ ಎಲ್ಲರನ್ನೂ ಕರೆಸಿಕೊಂಡು ತಾನೇ ' ರುಚಿ ರುಚಿ ಪಾವ್ಭಾಜಿ' ತಯಾರಿಸಿ ರಾಜಾತಿಥ್ಯ ಮಾಡಿದ್ದು ನಿನ್ನೆ ಎಂಬಂತೆ ನೆನಪಿದೆ.
" ಆಂಟಿ, ನಿಮ್ಮ ಕವನಗಳ ಹವ್ಯಾಸ ನನಗೆ ಗೊತ್ತು.ಹಾಗಾಗಿ ಅಡ್ಡಾಡಿ ನಿಮಗೆಂದೇ ತಂದಿದ್ದೇನೆ"- ಎಂದು
ನಾಲ್ಕು ಕವನ ಸಂಕಲನಗಳನ್ನು ಕೈಗಿತ್ತ
ಅಂತಃಕರಣದ ಜೀವವದು...
              ಅಂಥ ಸಹೃದಯಿ ಜೀವಗಳು
ಇದ್ದಲ್ಲೆಲ್ಲ ಖುಶಿಯನ್ನು ಕಾಣುತ್ತವೆ, ಇತರರಿಗೂ ಹಂಚುತ್ತವೆ, ಆದರೆ ದೇವರಿಗೇಕೆ ಅಂಥವರ ಮೇಲೆ ಅಷ್ಟು
ಪ್ರೀತಿ!!!ಹೇಮಂತನದು ಅಂಥದೇ ಹೆಂಗರುಳು.ಈಗಲೂ ನಾನು ಅಮೇರಿಕೆಗೆ ಬರಬೇಕೆಂದು ಮಗನ ಒತ್ತಾಯ. ಆದರೆ ಸಮಸ್ಯೆಯಾಗಿರು ವುದು ವೀಸಾ.ಇಂದಿಲ್ಲ ನಾಳೆ ಹೋದೇನು.ಆದರೆ ಮೊದಲ ಸಲ ಬ್ರಮ್ಹಚಾರಿಯಾಗಿ/ಎರಡನೇ ಬಾರಿ
ಧನಶ್ರೀಗೆ ಪ್ರೀತಿಯ ಜೊತೆಯಾಗಿ ಇದ್ದವನನ್ನು ಈ ಬಾರಿ ಆರವನ‌ ಅಪ್ಪನಾಗಿ ನೋಡಬೇಕೆಂದಿದ್ದೆ.ಅದು
ಆಗುವುದಿಲ್ಲ ಎಂದಮೇಲೆ ಹೋಗುವಲ್ಲಿ ಹುರುಪೂ ಇರುವುದಿಲ್ಲ. ಅಲ್ಲದೇ ಅಲ್ಲಿ ಹೋಗಿ ಎರಡು ಪ್ರವಾಸಗಳನ್ನು ಸಂತೋಷದಿಂದ ಕಳೆದ ನೆನಪುಗಳು ಇನ್ನೂ ಹಸಿರಾಗಿ ರುವಾಗ ಹೇಮಂತನಿಲ್ಲದ ಪ್ರವಾಸ ಕಲ್ಪನೆಗೆ ತಂದುಕೊಳ್ಳಲೂ ಕಷ್ಟ... ಹಾಗೆಂದು ಅವನಿಗೆ-Rest in peace- ಅನ್ನಲೂ ಆಗುವುದಿಲ್ಲ.
  ‌‌      
      ದೇವರೇ! ಈ ಬಾರಿ ನಿನ್ನನ್ನು
ಕ್ಷಮಿಸುವುದಿಲ್ಲ...



Friday 15 March 2024

ಹಸಿರಿದ್ದಲ್ಲಿ ಮೇದು...ಬೆಚ್ಚಗಿದ್ದಲ್ಲಿ
ಮಲಗಿ...          
    ‌          ದೂರದ ದಾರಿ ಕ್ರಮಿಸುವಾಗ
ಕೆಲವೊಮ್ಮೆ ಹೊರಳು ನೋಟ ಬೇಕೇ ಬೇಕು. ಒಂದು ವಯಸ್ಸಾಗಿ ದೇಹದಿಂದ ಲೋ/ಮನಸ್ಸಿನಿಂದಲೋ 'ಇನ್ನು ಸಾಕಪ್ಪಾ'- ಅಂತ ಒಮ್ಮೆಯಾದರೂ ಅನಿಸುವುದು ಸ್ವಾಭಾವಿಕ.ಆಗ ಕಳೆದ 
ಬದುಕಿನ ಸಿಹಿ ಕಹಿ ನೆನಪುಗಳೇ ನಂತರದ ಬದುಕನ್ನು 'ಹದ' ಗೊಳಿಸು ತ್ತವೆ.
   ‌      ‌‌‌‌      ನನ್ನ ಬಾಲ್ಕನಿಯಂದರೆ ನಾನು ಹೀಗೆ ಧ್ಯಾನಸ್ಥಳಾಗುವ ಜಾಗ...ಎಲ್ಲರೂ ತಮ್ಮತಮ್ಮ ಕೆಲಸ ಗಳಲ್ಲಿ ಮಗ್ನರಾದಾಗ ನನ್ನ ವಿರಾಮ ಕ್ಕಿದು ತಕ್ಕ ಸಮಯ.ನನ್ನ ನೆನಪಿನ ನವಿಲು ' ಗರಿಬಿಚ್ಚಿ' ಕುಣಿವ ಕಾಲ...

   ‌‌       ಒಂದು ಕಾಲವಿತ್ತು. ಇದಕ್ಕೆ ಬಡತನವೆನ್ನುತ್ತಾರೆ- ಎಂದು ಗೊತ್ತೇ ಇಲ್ಲದೇ ಹಸಿದಾಗ ಬೊಗಸೆ ನೀರು ಕುಡಿಯುತ್ತಿದ್ದೆವು.ಇವು 'ದೇಹಕ್ಕೆ ಅವಶ್ಯವಾದವುಗಳು ಎಂದು ತಿಳಿಯದೇ ಬಯಲಲ್ಲಿ ಆಡುತ್ತಿದ್ದೆವು.
ಬೇರೆಯವರ ಮನೆಯಲ್ಲಿ ಇರಲು ಕೆಲವು ನಿಯಮಗಳಿರುತ್ತವೆ ಎಂಬುದನ್ನು ಲೆಕ್ಕಿಸದೇ ಎಲ್ಲೆಲ್ಲೋ  ವೇಳೆ ಕಳೆಯುತ್ತಿದ್ದೆವು.ರ್ಯಾಂಕ್/ class/ ಸ್ಪರ್ಧೆಗಳೇ ಇಲ್ಲದ ಶಾಲೆಗಳಿಗೆ
ಹೋಗುತ್ತಿದ್ದೆವು.ಉತ್ತಮ ಸ್ಥಾನಗಳನ್ನು ಪಡೆದವರು/ನಪಾಸಾದವರು ಒಟ್ಟಿಗೆ ಸೇರಿಯೇ ಹೆಗಲಮೇಲೆ ಕೈಹಾಕಿಕೊಂಡೆ
ರಜೆ ಕಳೆದುಬಿಡುತ್ತಿದ್ದೆವು. ಅವರು ಪಾಸಾದ ಪಾರ್ಟಿ 'ಶುಂಠಿ' ಪೆಪ್ಪರ್ ಮೆಂಟ್ ಇಲ್ಲವೇ ಕಿತ್ತಲೆ ತೊಳೆಯ ಪೆಪ್ಪರ್ಮೆಂಟ್ಗಳಲ್ಲಿ ಆಚರಿಸಲ್ಪಡುತ್ತಿ ದ್ದವು.ಅದೂ ದೊಡ್ಡವರೂ ಮನಸ್ಸು
ಮಾಡಿ, ಆಣೆಯೊಂದನ್ನು ಕೊಟ್ಟರೆ...

        ಆಟಗಳೂ ಗುಂಪು ಆಟಗಳೇ...
ಈಗಿನಂತೆ ಒಬ್ಬನಿಗೆ ಒಂದು ಕೋಣೆಯಿದ್ದು,ಅದರ ಬಾಗಿಲು ಜಡಿದು, ಅಮ್ಮ- ಅಪ್ಪನ ಕೂಗಿಗೂ ಲೆಕ್ಕಿಸದೇ ಕಳೆದು ಹೋಗುವ  ಬೋರ್ಡ ಗೇಮ್ ಅಥವಾ online game ಗಳಲ್ಲ. ಆಡಲು ಬಾರದ ಮಕ್ಕಳನ್ನೂ ಜೊತೆಗೆ ಸೇರಿಸಿಕೊಂಡು,  'ಲೆಕ್ಕಕ್ಕುಂಟು, ಆಟಕ್ಕಿಲ್ಲ'-ಮಾಡಿಬಿಡು ತ್ತಿದ್ದೆವು. ಆಡಲೂ ಹೆಚ್ಚಿಗೆ ಬೆಲೆಯ ಆಟಿಕೆಗಳು ಇರುತ್ತವೆ ಎಂಬುದೇ ಗೊತ್ತಿರದ ಕಾಲ ಅದು.ಜೋಳದ ದಂಟು, ಕಲ್ಲು, ಮಣ್ಣು, ಬಳೆ ಚೂರು, ಡಬ್ಬಿ ಸಿಗದ ಮುಚ್ಚಳ, ಮುಚ್ಚಳ ಕಳೆದ ಡಬ್ಬಿ, ಅಮ್ಮನ ಸೀರೆ,ಅಪ್ಪನ ಪಂಜೆ, ಗಾಜಿನ ಗೋಲಿಗಳು ಏನೆಲ್ಲಾ ಆದಿ- ಅಂತ್ಯ ಗಳಿಲ್ಲದ ಸರಕುಗಳೇ ನಮ್ಮ Toy store ನಲ್ಲಿ ಬಿಕರಿಯಾಗುವ ಆಟಿಗೆಗಳು.ದಣಿದಾಗ ಮಲಗಲಂತೂ ಒಂದು ಹರಿ ಹಾಸಿಗೆ ಅಂದರೆ 'ಏಕ ಹಾಸು'...ಇದ್ದಷ್ಟು ದಿಂಬು - ಹೊದಿಕೆ ಗಳನ್ನಂತೂ ಇತರರಿಗೆ ನಿದ್ದೆ ಹತ್ತುವ ವರೆಗೂ ಕಾಯ್ದು ಕಳವು ಮಾಡಲು ಕಾಯುವ ಅಣ್ಣಂದಿರು-ಅಕ್ಕಂದಿರು ಪ್ರತಿ ಮನೆಯಲ್ಲೂ ಇರುತ್ತಿದ್ದರು.

    ‌‌‌     ಎಲ್ಲದರಲ್ಲಿಯೂ, ಎಲ್ಲವೂ ಹೀಗೇ... ಸಾಮೂಹಿಕ...ಅದನ್ನೇ ಬರೆದರೆರಡು ಪುಸ್ತಕಗಳಾದಾವು.ಆದರೆ
ಬರೆಯಲಾರೆವು,ಏಕೆಂದರೆ ಆಗಿನವರಿಗೆ ಲ್ಲವೂ ಗೊತ್ತಿದೆ. ಈಗಿನವರಿಗೆ
ಅದಾವುದರ ಅವಶ್ಯಕತೆಯೇ ಇಲ್ಲ...

           ಹೀಗೆಯೇ ಕಳೆದ ಬದುಕು
ನಮಗೆ ಕಲಿಸಿದ ತಾಳ್ಮೆ- ಸಹಜೀವನ, ಹಂಚಿಕೊಳ್ಳುವಿಕೆ,ಸ್ಪರ್ಧೆ- ಅಸೂಯೆಗ ಳು ಅಷ್ಟಾಗಿ ಇಲ್ಲದ ಜೀವನದ ಪರಿಣಾಮವೇ ಬಹುಶಃ ಈ ವಯಸ್ಸಿನ ಲ್ಲಿಯೂ ಬಾಲ್ಕನಿಯಲ್ಲೊಂದು Recliner chair ಹಾಕಿಕೊಂಡು ಅಪರೂಪದ- ಅಲಭ್ಯ - ಆಲ್ಹಾದಕರ
ನೆನಪುಗಳಲ್ಲಿ ಕಳೆದುಹೋಗುವ ' ವರ'-
ವೊಂದನ್ನು ದಯಪಾಲಿಸಿರಬೇಕು...



         

   ‌‌‌‌        







Thursday 14 March 2024

 ಬಾಲ್ಕನಿಯಿಂದ...
          
    ‌‌ ‌‌‌‌‌    ಹೊಸ ಮನೆಗೆ ಬಂದು ಬರಿ ಒಂದೂವರೆ ತಿಂಗಳೂ ಆಗಿಲ್ಲ.ಐದು
Bedroom ಗಳ ಸ್ವಂತ ಮನೆ ಬಾಡಿಗೆಗೆ ಕೊಟ್ಟು ಮೂರು ಬೆಡ್ರೂಮ್ flat ಒಂದಕ್ಕೆ ಬದಲಾಗಬೇಕಾದ ಅನಿವಾರ್ಯತೆ ಬಂದಾಗ ಸಾಕಷ್ಟು
ಯೋಚಿಸಬೇಕಾಯ್ತು.ಆದರೆ ಮನೆಯ ಎಲ್ಲರೂ ಬೇರೆ ಬೇರೆ ಏರಿಯಾಗಳಿಗೆ
ಸ್ಕೂಲ್/ ಕಾಲೇಜು/ office ಅಂತ ಮತ್ತೆ ಮತ್ತೆ  ತಿರುಗಾಡಬೇಕಾಗಿ ಬಂದಾಗ ಎಲ್ಲದಕ್ಕೂ ಅನುಕೂಲವಾ
ಗುವ ಜಾಗವೊಂದನ್ನು ಹುಡುಕಬೇಕಾ ದ  ಅವಶ್ಯಕತೆ ಎದುರಾಗಿ ಈ ನಿರ್ಧಾರ ತಡವಾಗಿಯಾದರೂ ತೆಗೆದುಕೊಳ್ಳಲೇ
ಬೇಕಾಯಿತು...
              ಸರಿ, ಅರ್ಧಕ್ಕರ್ಧದಷ್ಟು ಸಾಮಾನುಗಳನ್ನು ಬಿಟ್ಟುಬರುವ/ ಹಂಚುವ/ ಕೆಲವನ್ನು ಮಾರಬೇಕಾದ
ಅನಿವಾರ್ಯತೆಯನ್ನು ಒಪ್ಪಿಕೊಂಡು
ಅವಶ್ಯಕತೆ ಇದ್ದಷ್ಟೇ ಎತ್ತಿ ಹಾಕಿಕೊಂಡು
ಬಂದು ಎರಡು ತಿಂಗಳಾಗುತ್ತ ಬಂತು.
ಆಶ್ಚರ್ಯವೆಂದರೆ ಒಂದೇ ಒಂದು ಬಿಟ್ಟು ಬಂದ ವಸ್ತುವಿನ ಕೊರತೆ ಕಾಡಿಲ್ಲ.ಮನೆ ದೊಡ್ಡದು, ಇಡಲು ಜಾಗದ ಅಭಾವವಿರಲಿಲ್ಲ,ಯಾರಿಗೆ ಏನು ಬೇಕೋ ಅದೆಲ್ಲ ಮನೆಯನ್ನು ಸೇರುತ್ತಿತ್ತು.ಅವು ಎಲ್ಲ ಎಲ್ಲಿದ್ದವೋ ಕೂಡ ಗೊತ್ತಿರಲಿಲ್ಲ. ಎಲ್ಲವನ್ನೂ ಹೊರ ತೆಗೆದು ಗುಡ್ಡೆ ಹಾಕಿದಾಗಲೇ ನಮಗೆ ಗೊತ್ತಾಗಿದ್ದು.ಈ ಮನೆ ಚಿಕ್ಕದೆಂಬ ಕಾರಣಕ್ಕೆ ಏನೆಲ್ಲಾ ಅಲ್ಲೇ ಕೊಟ್ಟು/ಬಿಟ್ಟು ಬಂದರೂ ಒಂದಿಷ್ಟೂ ಸಹ
ಕೊರತೆಯೆನಿಸದಾಗ ನಮಗೇನೇ ನಮ್ಮ ಅನವಶ್ಯಕ ಸಂಗ್ರಹದ ಬಗ್ಗೆ ಅಚ್ಚರಿ.ಅಲ್ಲಿ ಮನೆಗೆಲಸದ ಸಹಾಯಕಿ ಯಾಗಿ ಇಡೀ ದಿನ ಒಬ್ಬಳು ಮನೆಯಲ್ಲಿ ಇರುತ್ತಿದ್ದಳು.ಇಲ್ಲಿ flat ನಲ್ಲಿ ಹಾಗೆ
ಇಟ್ಟುಕೊಳ್ಳುವ ಒಂದು ಸಾಧ್ಯತೆಯೇ 
ಇರಲಿಲ್ಲ.ಎಲ್ಲ ಮನೆಗಳಂತೆ ತಾಸೆರಡು ತಾಸು ಬಂದು ಮಾಮೂಲಿ ಕೆಲಸ ಮುಗಿಸಿ ಹೋಗುತ್ತಾಳೆ.ಅದೂ ಸಮಸ್ಯೆ ಎನಿಸಿಲ್ಲ.ಹೀಗೇನೇ ನಾವು ಇದುವರೆಗೆ
ನಡೆದುಕೊಂಡು ಬಂದದ್ದು ಎಂಬಷ್ಟು
ಸಹಜವಾಗಿಯೇ ಇದ್ದುಬಿಟ್ಟಿದ್ದೇವೆ. ಅಲ್ಲಿದ್ದದ್ದು independent villa ಆದ ಕಾರಣ ಕ್ಷಣಕ್ಕೊಮ್ಮೆ ಹೊರಬಂದು ಸುತ್ತಾಡುವ ಚಟವಿತ್ತು.ಇಲ್ಲಿ ಆರನೇ floor. ಒಮ್ಮೆಕೆಳಗಿಳಿದು walking ಮುಗಿಸಿಬಿಟ್ಟರೆ ಮತ್ತೆ ಮರುದಿನವೇ 
ಕೆಳಗೆ ಹೋಗುವುದು...ಅದೂ O.K ಯಾಗಿದೆ.
             ಅಲ್ಲಿ ಇದ್ದಷ್ಟು ನಮ್ಮ ಸಮಾನ ವಯಸ್ಕರೂ ಇಲ್ಲಿಲ್ಲ...ಕೇವಲ ಮೂರೇ ಮೂರು ಕನ್ನಡ families.ಅದೂ ಅವರಾರೂ ನನ್ನ ವಯೋಮಾನದವ ರಲ್ಲ...ದೂರದಿಂದ ಮುಗುಳ್ನಗೆ ತೂರಿ
ಕೈಯಾಡಿಸಿ ನಡೆದು ಬಿಡುತ್ತಾರೆ.ಒಂದು ವೇಳೆ ನಿಂತು ಮಾತನಾಡಿದರೂ ಬದಲಾಗುವ Wave length ಗಳಿಂದಾ ಗಿ ವಿಷಯಗಳೂ ಇರುವುದಿಲ್ಲ. ಆದರೆ
ನೋಡಿ ಅದಾವುದೂ ನನ್ನನ್ನು ಕಿಂಚಿತ್ತೂ ಕಾಡಿದ್ದಿಲ್ಲ.ನನ್ನ ತಿರುಗಾಟದ
ಸಮಯ ಮುಗಿಸಿ ಮನೆಗೆ ಬಂದರೆ
ನನ್ನ ರೂಮಿನ‌ ಬಾಲ್ಕನಿಯೇ ಒಂದು ಪುಟ್ಟ ವಿಶ್ವ...ಇಲ್ಲಿಂದಲೇ ಹಳೆಯ/ ಹೊಸ ಗೆಳತಿಯರ - ಸಂಬಂಧಿಕರ ಸಂಪರ್ಕ- ಫೋನ್- ಫೇಸ್ ಬುಕ್ ಮುಖಾಂತರ...
               ಈಗ ನನ್ನನ್ನು ಕಾಡುವ ಪ್ರಶ್ನೆ ಎಂದರೆ- ಎಷ್ಟೋ ವರ್ಷಗಳ ನಂಟೊಂ ದನ್ನು ಈ ರೀತಿ ನಿರ್ಭಾವುಕತೆಯಿಂದ
ಬದಿಗಿರಿಸುವ ಮನಸ್ಥಿತಿ ನಮಗೆ ಹೇಗೆ ಬರುತ್ತದೆ??? 
   ‌‌‌‌‌          ಅನಿವಾರ್ಯವಾಗಿಯೇ? ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿ ಗನುಗುಣವಾಗಿಯೇ?ಅವಕಾಶವಾದಿ ತನದ ನಮ್ಮ ಸ್ವಭಾವದಿಂದಲೇ?ಈಗ ಬದಲಾದ ಸ್ಥಿತಿಯಿಂದ ನಮಗಾಗುತ್ತಿ ರುವ ಅನುಕೂಲತೆಗಳಿಂದಲೇ?ಫೋನ್,ಫೇಸ್‌ಬುಕ್‌, What's App
ಮುಖಾಂತರ ಎಲ್ಲ ರೀತಿಯ ಸಂಪರ್ಕ
ಸಾಧ್ಯವಿದ್ದ ಕಾರಣಕ್ಕಾಗಿಯೇ? ಅಥವಾ
ಏನೊಂದೂ ದಾರಿ ಇಲ್ಲವೆಂದೇ?
  



Wednesday 13 March 2024

ಗೆ ಆಕಾಶವೂ ಮಿತಿಯಲ್ಲ...       
     ಜಯಶ್ರೀ ದೇಶಪಾಂಡೆ ಹಾಗೂ ನನ್ನ ಸ್ನೇಹ-ಪರಿಚಯ ಹತ್ತು ವರ್ಷಗಳ ಇತ್ತೀಚಿನದು...ನಮ್ಮಅಂತಃಪುರ group ನ್ನು ನಾನು ಸೇರಿಕೊಂಡ ಮೇಲಿನದು...ಫೇಸ್ಬುಕ್ ಮನೆ ಮನೆ ತಲುಪಿ ಆಗಲೇ ಎಲ್ಲರನ್ನೂ ತನ್ನ ನಿಯಂತ್ರಣದ ತೆಕ್ಕೆಗೆ ತೆಗೆದುಕೊಳ್ಳುತ್ತಿ ದ್ದರ ಹೊಸತರಲ್ಲಿ...
          ‌‌‌ಆದರೆ ಅವರ ಹೆಸರು ನನ್ನ ಕಾಲೇಜು ದಿನಗಳಿಂದಲೂ ನಮಗೆಲ್ಲ ಸುಪರಿಚಿತ.ಅಭ್ಯಾಸದ ಏಕತಾನತೆ
ಯಿಂದ ಬೇಸತ್ತು ಬದಲಾವಣೆ ಬಯಸಿದಾಗಲೆಲ್ಲ ಕೈಗೆತ್ತಿಕೊಳ್ಳುತ್ತಿದ್ದ
ಪ್ರತಿ ಮ್ಯಾಗಝೈನ್ ಗಳಲ್ಲೆಲ್ಲ ಅವರ
ಹೆಸರು ಕಡ್ಡಾಯವೇನೋ ಎಂಬಂತೆ
ಕಾಣುತ್ತಿದ್ದ ದಿನಗಳವು.ಕಾಣದಿದ್ದರೆ
ಅದನ್ನು ಹುಡುಕಿ ಅವರ ಲೇಖನಗಳ
ನ್ನು‌ ಓದಿದ ನಂತರವೇ ದಿನವೊಂದು ಸಾಂಗವಾದಂತೆ...
   ‌      ಪರಸ್ಪರ ಪರಿಚಯವಾದ ಮೇಲೆ -ನನಗೆ ತಿಳಿದದ್ದು, - ಕೇವಲ ತೇಲುವ ಮಂಜುಗಡ್ಡೆಯ ತುದಿ ಮಾತ್ರ- ನಾನು ಕಂಡದ್ದು...ಪೂರ್ತಿ ಗೊತ್ತಾಗಲು ವರ್ಷಗಳೇ ಬೇಕಾಗಬಹುದು ಎಂಬ‌ ಸತ್ಯ.. ಕಾಣಿಸಲು ತುಂಬ ನಾಜೂಕು,
ನಯ- ವಿನಯ, ಮೃದು ಮಾತುಗಳು,
ಮುಂದೆ ಮುಂದೆ ತೋರಿಸಿಕೊಳ್ಳುವು ದಕ್ಕಿಂತಲೂ ಹಿಂಜರಿಯುವ ಸ್ವಭಾವ, ಇನ್ನೂ ಕಲಿಯುವುದು ಸಾಕಷ್ಟಿದೆ/ ನಾನೇನೂ ಹೆಚ್ಚಿಗೆ ಸಾಧಿಸಿಲ್ಲ ಎಂಬ ವಿನೀತ ಭಾವ, ಇವುಗಳಿಂದಾಗಿ ಅವರ ಸಾಹಿತ್ಯ ಪ್ರತಿಭೆಯ ಆಳ- ಅಗಲ ಗೊತ್ತಾಗಲು ಅವರ ಜೊತೆಯಲ್ಲಿದ್ದು ಪರಿಚಯವಾಗಬೇಕು ಇಲ್ಲವೇ ಅವರ ಸಾಹಿತ್ಯ ಪ್ರಪಂಚ ಹೊಕ್ಕು ಬರಬೇಕು
ಎಂಬುದು ನನಗೆ ಬಹು ಬೇಗನೇ ಅರಿ
ವಾಯಿತು...
   ‌‌        ತಿರು ಶ್ರೀಧರ ಅವರು ಹೇಳಿದಂತೆ, ಜಯಶ್ರೀ ದೇಶಪಾಂಡೆ ಅಂದರೆ ತಕ್ಷಣವೇ ಮನಸ್ಸಿನಲ್ಲಿ ಮೂಡಿಬರುವುದು ವಿಶ್ವದೆಲ್ಲೆಡೆಯ ಮನಗಳ ಸೂಕ್ಷ್ಮಾತಿಸೂಕ್ಷ್ಮಗಳ ಎಳೆಗಳನ್ನು ಒಂದೆಳೆಯಾಗಿ ಪೋಣಿಸುವ ವಿಶಿಷ್ಟ ಬರಹಗಳು,-
ಕವನಗಳು,ಕಥೆಗಳು,ಹರಟೆಯಂಥ ಲಘು ಬರೆಹಗಳು,ಪ್ರವಾಸ ಕಥನಗಳು,
ಕಾದಂಬರಿಗಳು,ವಿಮರ್ಶಾಲೇಖನಗಳು ಏನೆಲ್ಲ ಸಾಹಿತ್ಯ ಪ್ರಕಾರಗಳಿವೆಯೋ ಎಲ್ಲದರಲ್ಲೂ ಸಿದ್ಧಿ ಪಡೆದದ್ದಲ್ಲದೇ ಹೆಚ್ಚು ಕಡಿಮೆ ಪ್ರತಿಯೊಂದರಲ್ಲೂ 
ಪ್ರಶಸ್ತಿ, ಸನ್ಮಾನಗಳನ್ನು ಪಡೆದ ಲೇಖಕಿ
ಎಂದು ಗುರುತಿಸಿಕೊಂಡವರು ಜಯಶ್ರೀ. ಅವೆಲ್ಲವುಗಳ ಯಾದಿಗೆಂದೇ ಒಂದು ಕೈಪಿಡಿ ಪ್ರಕಟಿಸಬೇಕಾಗಬಹು ದೇನೋ!
   ‌‌‌‌       ಸಧ್ಯದ ವಿಶೇಷವೆಂದರೆ ಆ ಯಾದಿಗೆ ಮತ್ತೊಂದು ಪ್ರಶಸ್ತಿಯ ಗರಿ.
ಅವರ ಪ್ರವಾಸ ಕಥನ" ಹೊಸ ನಾಡು...ಹೆಜ್ಜೆ ಹಾಡು" ಪುಸ್ತಕಕ್ಕೆ ನಾಡೋಜ ಡಾ ಸಾರಾ ಅಬೂಬಕ್ಕರ ದತ್ತಿ ನಿಧಿ ಪ್ರಶಸ್ತಿ ದೊರಕಿದ್ದು, ಸಧ್ಯದಲ್ಲೇ  ಅಂದರೆ ಮುಂಬರುವ ಬುಧವಾರದಂದು,( ೨೪- ಮಾ) ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವುದಿದೆ. ಕಾರ್ಯಕ್ರಮ ಆಯೋಜನೆ, ಪ್ರಶಸ್ತಿ ಪ್ರದಾನ,  ಇದು ರಾಜ್ಯ'ಕರಾವಳಿ ಲೇಖಕಿಯರ, ವಾಚಕಿಯರ ಸಂಘ 
( ರಿ).ಇವರಿಂದ...
 ‌‌‌            ಇನ್ನೇನಿದ್ದರೂ ಕಾರ್ಯಕ್ರಮ 
ಮುಗಿದ ಮೇಲೆ ಅದರ ವಿವರಗಳು/ ಅನುಭವ/ಆನಂದಗಳು ಎಲ್ಲರಿಗೂ ದಕ್ಕುವುದಷ್ಟೇ ಬಾಕಿ...
         ‌ 




Sunday 10 March 2024

ಇಂದು ಮಾರ್ಚ ಹತ್ತು...
'ವಾಹ್...ವಾಹ್'...ಅದ್ಭುತ-' ಎಂದು ಹೇಳುವ  ದಿನ...
       This is really AWESOME...
ಎಂದು ಹೇಳಿ ಮೆಚ್ಚುಗೆ ವ್ಯಕ್ತ ಪಡಿಸುವ ಅಂತರ್ ರಾಷ್ಟ್ರೀಯ ದಿನವಂತೆ
ಇಂದು...ಹಾಗೆಂದು ಬಿ.ಕೆ ಸುಮತಿಯವರ post ಒಂದನ್ನು ಇಂದು ಬೆಳಿಗ್ಗೆಯೇ ನೋಡಿದೆ.ತಕ್ಷಣ ನೆನಪಾದದ್ದು ಶ್ರೀಮತಿ ಶಾಲಿನಿ ಮೂರ್ತಿಯವರ 'ಕಥೆಗಳ ತೋರಣ'ದ
ಐದು ಮತ್ತು ಆರನೆಯ ಆವೃತ್ತಿ ಗಳ
ಬಿಡುಗಡೆ ಸಮಾರಂಭ...ಈ ಮೊದಲೇ ನಾಲ್ಕು ಪುಸ್ತಕಗಳ ಬಿಡುಗಡೆಯು  ಮುಗಿದಿದ್ದು ಈ ಬಾರಿ ಮಕ್ಕಳ ಜೊತೆಗೇನೆ/ ಅವರದೇ ಶಾಲೆಯಲ್ಲಿ ಯೇ ಬೆಳಗಿನ ಉಪಹಾರದಿಂದ  ಹಿಡಿದು ಪುಸ್ತಕ ಬಿಡುಗಡೆ/ಕಥಾ ವಾಚನ/ ಚಿತ್ರಗಳಿಗೆ ಬಣ್ಣ ತುಂಬುವುದು ಮುಂತಾದ ಕಾರ್ಯಕ್ರಮವನ್ನು ಸಾಂಗಗೊಳಿಸಿ
ಆ ದಿನದ ಬಹುಭಾಗವನ್ನು ಮಕ್ಕಳಂತೆಯೇ ಕಳೆದು ಸ್ವಂತಕ್ಕೂ- ಮಕ್ಕಳಿಗೂ ಹೊಸ ಚೇತನ ತುಂಬಿದ
ವಿಶೇಷ ದಿನ...ನನ್ನ ಮಟ್ಟಿಗೆ ಅದು
' ವಾಹ್...ವಾಹ್...ಅದ್ಭುತ' ಎನಿಸಿದ್ದು
ಅಚ್ಚರಿಯ ವಿಷಯವೇನೂ ಅಲ್ಲ... ಅದನ್ನೇ ತಮ್ಮದೇ ಶಬ್ದಗಳಲ್ಲಿ 
ಶಾಲಿನಿ ಮೂರ್ತಿ ವ್ಯಕ್ತ ಪಡಿಸಿದ್ದು ಹೀಗೆ...

         "ಕೇವಲ ಒಂದು ವರ್ಷದ ಹಿಂದೆ ನನ್ನ ದೂರದ ಕನಸಾಗಿದ್ದ ಕಥೆ ಪುಸ್ತಕಗಳನ್ನು ಬರೆಯಬೇಕೆಂಬ ಇಚ್ಛೆಯೊಂದು ಸಾಕಾರಗೊಂಡು, ಒಂದು ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಯಡಿ ಪ್ರಕಟಗೊಂಡು ಇಂಥದೊಂದು ಕಾರ್ಯಕ್ರಮ ಮಕ್ಕಳ ನಡುವೆ ನಾವೆಲ್ಲರೂ ಬೆರೆತು ಆಚರಿಸುತ್ತೇವೆ ಎಂಬ ಕನಸೊಂದು ನನಸಾಗುತ್ತದೆ ಎಂಬ ಕಿಂಚಿತ್ತೂ ಕಲ್ಪನೆಯಿರಲಿಲ್ಲ.
ದೇವರು ದೊಡ್ಡವನು!ಅಂಥ ನನ್ನ ಒಂದು ಕನಸನ್ನು ಅವನು ಸಾಕಾರ ಗೊಳಿಸಿದ ದಿನವಿದು.‌ಈ ಕಾರ್ಯಕ್ರಮ ವನ್ನು ಇಷ್ಟು ಸಡಗರದೊಂದಿಗೆ,
ಇಷ್ಟೊಂದು ಕ್ರಮಬದ್ಧವಾಗಿ ನಡೆಸಿ ಕೊಟ್ಟ ಅನಂತನಗರ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ/ ಶಾಲಾ ಸಿಬ್ಬಂದಿ/ ಮುದ್ದು ಮುದ್ದಾದ ಮಕ್ಕಳು ನನ್ನ ಮಟ್ಟಿಗೆ ಒಂದು ಪವಾಡವನ್ನೇ ಮಾಡಿದ್ದಾರೆ.ನಾವು ಇಂದು ಬಿಡುಗಡೆ ಗೊಳಿಸಿದ್ದು'ಕಥೆಗಳ ತೋರಣ'ದ
ಐದು ಮತ್ತು ಆರನೆಯ ಸಂಪುಟಗಳು. ಒಟ್ಟು ಹನ್ನೆರಡು ಪುಸ್ತಕಗಳ
ಯೋಜನೆಯಲ್ಲಿ ಇದೀಗ ಕ್ರಮಿಸಿದ್ದು ಸರಿ ಅರ್ಧ ದಾರಿ ಮಾತ್ರ...ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ಕಣ್ಣುಗಳ ಹೊಳಪು/ ಮುಖದ ಮೇಲಿನ ಕುತೂಹಲಗಳು ನನಗೆ ಮುಂದಿನ ಆರು ಪುಸ್ತಕಗಳನ್ನು ಆದಷ್ಟು ಬೇಗ ಹೊರ ತರಬೇಕೆಂಬ ಹುಮ್ಮಸು ತುಂಬಿವೆ.
ಆದಷ್ಟು ಬೇಗ ಆ ಕೆಲಸ ಮುಗಿಸಿ ಮಕ್ಕಳ ಕೈಗೆ ಇಡುತ್ತೇನೆಂಬ ಬಗ್ಗೆ ಅಗಾಧವಾದೊಂದು ನಂಬಿಕೆಯಿದೆ. ಈ ನಂಬಿಕೆ- ವಿಶ್ವಾಸಗಳನ್ನು ಹೆಚ್ಚು ಬಲ ಗೊಳಿಸಿದ ಇಂದಿನ ಕಾರ್ಯಕ್ರಮಕ್ಕೆ /ಅದರ ಅನಂತನಗರ ಶಾಲೆಯ ರೂವಾರಿಗಳಿಗೆ ಎಲ್ಲರಿಗೂ ನನ್ನ ' ಅನಂತಾನಂತ' ಕೃತಜ್ಞತೆಗಳು..."
       
     
  ‌‌‌    
       

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...