Tuesday 30 May 2023

ಮನಸಿನ ಪುಟಗಳ ನಡುವೆ...
     ‌‌‌‌        
               ಧಾರವಾಡದ ತವರು ಮನೆಯಲ್ಲಿ ಹತ್ತು ದಿನಗಳನ್ನು ಕಳೆದು ಅದೇ ತಾನೇ ಬಂದಿದ್ದೆ."ನಾಳೆ ಮಗನ ಮದುವೆಯಿದೆ, ಯಾವ ಕಾರಣಕ್ಕೂ ತಪ್ಪಿಸುವಂತಿಲ್ಲ, ಬರಲೇಬೇಕು"ಎಂದು 
ನಾದಿನಿಯ( cousin) ಫೋನು. ಅನುಮಾನ ಎಂದೆ. No way ಅಂದಳು. ಸಧ್ಯಕ್ಕಂತೂ ಇರಲಿ ಎಂದು
ಹೂಗುಟ್ಟಿದೆ.ಮೊದಲೇ ಆಮಂತ್ರಣ ಹೇಳಿ/ ಅಡ್ರೆಸ್ / map ಎಲ್ಲವೂ ತಲುಪಿಯಾಗಿತ್ತು.ಇದು Reminder...
               ಪ್ರವಾಸದ ದಣಿವಿನ್ನೂ ಆರಿರಲಿಲ್ಲ, ಆದರೂ ಮನಸ್ಸು ತಡೆಯದೇ ಹೋಗಿಯೇಬಿಟ್ಟೆ... ಹೋಗಿರದಿದ್ದರೆ ಏನು ಕಳೆದುಕೊಳ್ಳು ತ್ತಿದ್ದೆ ಎಂಬುದು ತಿಳಿದದ್ದು ನಂತರವೇ...
                 ಧಾರವಾಡದ ನಮ್ಮ ಮನೆ
ಆರು ಮನೆಗಳದೊಂದು ಚಾಳು.ಒಂದೇ ಮನೆಯಂತೆಯೇ ಇದ್ದದ್ದು...ಹತ್ತು ದಿನಗಳಿಗೊಮ್ಮೆ ಬರುವ ನಳದ ನೀರಿನಿಂದಾಗಿ ಒಬ್ಬರಿಗೊಬ್ಬರ ನಡುವೆ
ಅತಿ ಗಾಢಸಂಬಂಧ.ಸರಿರಾತ್ರಿಯಲ್ಲೂ  
ಒಬ್ಬರನ್ನೊಬ್ಬರು ಎಬ್ಬಿಸುವವರು/ಅಗತ್ಯ ಸಹಾಯಕ್ಕೆ ಹಿಂಜರಿಯದವರು ಕೈಗೆ Plaster ಬಿದ್ದರೆ ತಮ್ಮವೇ ಮನೆ ಗಳಿಂದ ಊಟ- ತಿಂಡಿ ಸರಬರಾಜು
ಮಾಡುವವರು, ನಾವು ಎಲ್ಲಿಯಾದರೂ
ಹೋಗಿದ್ದರೆ ನಮ್ಮ ಮಕ್ಕಳನ್ನು ತಮ್ಮ ಮಕ್ಕಳಂತೆಯೇನಡೆಸಿಕೊಳ್ಳುವವರು  ಎಲ್ಲರೂ ಬಂದದ್ದು ನೋಡಿ ನನ್ನ ದಣಿವು ಎಲ್ಲಿ ಮಾಯವಾಯಿತೋ  ತಿಳಿಯಲೇಯಿಲ್ಲ.ಅಕ್ಷತೆ ಬೇಗ ಇದ್ದು ಎಲ್ಲರೂ ಒಂದು ರೀತಿಯಲ್ಲಿ ವಿಶ್ರಾಂತಿಯ mood ನಲ್ಲಿ ಇದ್ದದ್ದು
Plus point...
             ಎಲ್ಲರೂ ಈಗ ೬೦+ ವಯಸ್ಸು ದಾಟಿದವರು. ಮಕ್ಕಳ ಬೆನ್ನು ಹತ್ತಿ
ಬೆಂಗಳೂರಿಗೆ ಬಂದರೂ ಧಾರವಾಡದ
ಗುಂಗು ಬಿಡದವರು/ ಮಾತಿಗೆ/ ಆತ್ಮೀಯತೆಗೆ ಸ್ವಲ್ಪಮಟ್ಟಿಗೆ ಬರಗೆಟ್ಟವರು/ ಯಾರಾದರೂ ಆತ್ಮೀಯರು ಕಂಡರೆ ಕಣ್ತುಂಬಿ ನಿಲ್ಲುವವರು/ ನೆನಪಿನ ಜೇನುಗೂಡಿಗೆ
ಕಲ್ಲು ಹೊಡೆದು ಹುಳಗಳ ಕಡಿತ/ ಜೇನಿನ ಸವಿ ಎರಡನ್ನೂ ಸಮಸಮವಾಗಿ ಹಂಚಿಕೊಳ್ಳುವವರು/
ತಮ್ಮ ಎರಡನೇ - ಮೂರನೇ ತಲೆಮಾರುಗಳ ಸುತ್ತಲೇ ಗಿರಕಿ ಹೊಡೆಯುತ್ತ ಏನೋ ಖುಶಿ/ ಭ್ರಮೆಗಳ
ನಡುವೆ ಜೀಕುವವರು/ ಎಷ್ಟು ಜನರೋ ಅಷ್ಟೊಂದು " ನೆನಪಿನ ಬಣ್ಣ ಬಣ್ಣದ ನವಿಲುಗರಿಗಳು".
               ಹಿಂದಿನವರು ದಡ್ಡರಲ್ಲ.
ಹಳೆಯದೆಲ್ಲ ಬದಿಗೆ ಸರಿಸಲೇ ಬೇಕಂತಿಲ್ಲ. ಕೂಡು ಕುಟುಂಬಗಳಲ್ಲಿ
ಬಿಡುವಿಲ್ಲದ ದುಡಿಮೆಯ ಮಧ್ಯದಲ್ಲಿಯೂ, ಪರಸ್ಪರ ಭಿನ್ನಾಭಿಪ್ರಾಯ/ ಮನಸ್ತಾಪಗಳಿಗೆ ಒಂದು ತೆರೆಯಳೆದು ಸುಖವಾಗಿಯೇ
ಇದ್ದವರು. ಅಂಥವರ ನೋವುಗಳಿಗೆಲ್ಲ
ಇಂಥ ಸಮಾರಂಭದ ಖುಶಿಯ ಅನುಭವಗಳೇ ಮದ್ದು"- ಎಂಬುದನ್ನು
ಮತ್ತೊಮ್ಮೆ/ ಮಗದೊಮ್ಮೆ ಧೃಡ ಪಡಿಸಿಕೊಂಡು ಮನೆ ಸೇರಿದಾಗ ಮನಸ್ಸು ಅರಳಿದ ಹೂವಾಗಿತ್ತು...

( ವಿಪರೀತ ಜನ/ ಎಲ್ಲರೂ ಅಲ್ಲಲ್ಲಿ busy ಆಗಿ ಕಾರ್ಯಾಲಯದ ತುಂಬ 
ಹಂಚಿ ಹೋಗಿದ್ದರಿಂದ ಒಟ್ಟಾಗಿ ಒಂದು ಫೋಟೋ ಬೇಕೆಂಬ demand - demand ಆಗಿಯೇ ಉಳಿಯಿತು.)

Sunday 28 May 2023

ಒಂದು ದವಾಖಾನೆಯ ದೃಶ್ಯ...

(ಒಬ್ಬ ರೋಗಿ ಡಾಕ್ಟರ್ ಬಳಿ ಬರುತ್ತಾನೆ..)

ರೋಗಿ: ನಮಸ್ಕಾರ ಡಾಕ್ಟರ್...

ಡಾಕ್ಟರ್: ಓ ಬನ್ನಿಒಳಗೆ, ಕುಳಿತುಕೊಳ್ಳಿ.(ಕುಳಿತುಕೊಳ್ಳುತ್ತಾನೆ) ಈಗ ಹೇಳಿ, ನಿಮ್ಮ ತಕರಾರು ಏನು? ಏನು ಸಮಸ್ಯೆ
ಯಾಗಿದೆ.

ರೋಗಿ:  ನನ್ನ ಹೊಟ್ಟೆ ಸರಿಯಿಲ್ಲ, ಡಾಕ್ಟರ್. ಏನೂ ತಿನ್ನುವ ಹಾಗೆ ಅನಿಸುವದೇ ಇಲ್ಲ.

ಡಾ: ಎಷ್ಟು ದಿನಗಳಿಂದ ಆಗ್ತಿದೆ ಹೀಗೆ?

ರೋಗಿ: ಸುಮಾರು ಒಂದು ವಾರದಿಂದ.

ಡಾ:  ಏನಾದರೂ ಹೊರಗಿನ ತಿಂಡಿ ತಿಂದಿದ್ದಿರಾ?

ರೋಗಿ: ಹೌದು ಡಾಕ್ಟರ್! ಒಂದು ಮದುವೆಗೆ ಹೋಗಿದ್ದೆ...

ಡಾ: ಬಹುಶಃ ಹೆಚ್ಚು ಎಣ್ಣೆಯ ಪದಾರ್ಥ/ ಮಸಾಲೆ ತಿಂದು ಹಾಗಾಗಿರಬಹುದು.

ರೋಗಿ: ಈಗ ಬಿಸಿಲು ಬಹಳ .ಅಂಥ ಊಟದಿಂದ ನೀರಡಿಕೆಯಾಗಿ ನೀರು
ಕುಡಿದಾಗಿನಿಂದ ಹಾಗಾಗಿರಬಹುದು.

ಡಾ: ಬೇಸಿಗೆಯಲ್ಲಿ ನೀರು ಶುದ್ಧವಾಗಿರುವದಿಲ್ಲ.ಕಾಸದೇ ನೀರು ಕುಡಿಯಬಾರದು. ಮನೆಯಲ್ಲಿ ನೀರು
ಕುದಿಸಿಟ್ಟು ಕುಡಿಯಿರಿ. ಕರಿದ ತಿನಿಸು
ತಿನ್ನಬೇಡಿ.ಹಗುರವಾದ ಊಟ ಮಾಡಿ.
ಊಟದ ನಂತರ ಕೂಡಲೇ ಮಲಗಬೇಡಿ.

ರೋಗಿ: ಆಯ್ತು ಡಾಕ್ಟರ್...

ಡಾ: ಔಷಧಿ ಏನೂ ಬೇಡ.ಎರಡು ದಿನ ಹಗುರ ಆಹಾರ/ ಹೆಚ್ಚು ನೀರು ಕುಡಿದು
ನೋಡಿ. ಕಡಿಮೆಯಾಗುತ್ತದೆ.



Saturday 27 May 2023

KEEP GOING/ KEEP GROWING
Teju...
       Heartiest Congratulations dear Tejas...YOU ARE the Pioneer to become A Graduate from US.in our Koulagi family. All smiles for you. You have made all of us PROUD...Lots and lots of blessings from All the members of our family...
GOD BLESS...
LOVE YOU...
  
      ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ‌ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ನಾನೆಲ್ಲಿ ಹೆದರಿಕೆ/ ನೋವು ಅನುಭವಿಸು ತ್ತೇನೆಂದೋ ತಯಾರಿ ಮುಗಿದು ಹೊರಡುವದು ನಿರ್ಧರಿತವಾಗುವ ವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
          ‌        ನನಗೂ ನನ್ನ ಮಕ್ಕಳು ಆದಷ್ಟು ಸಮೃದ್ಧರಾಗಿ ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಖಂಡಿತ ಅನುಕೂಲಸ್ಥಳಾಗಿರಲಿಲ್ಲ ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ 
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
            " ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು /  ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನವರು ನನ್ನ ಮೂವತ್ಮೂರನೇ ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
                  ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷಗಳು.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು ಅಂದರೆ ನಿನ್ನೆ graduation  day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಅಲ್ಲಿಗೆ ಹೋಗಲಾಗಲಿಲ್ಲ...
                ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ  ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ‌ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.  
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ  ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು. ಪರಸ್ಪರರನ್ನು ನೋಡಬಹುದು.
          ‌‌ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ 
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
    


                  

Thursday 25 May 2023

       ‌    ನಾನು ನೌಕರಿಗೆ ಸೇರಿದ ಹೊಸತು.ಪ್ರಾರಂಭದಲ್ಲಿ ಪ್ರಾಥಮಿಕ ವಿಭಾಗದಲ್ಲಿದ್ದೆ.ಹೀಗಾಗಿ ಆರು/ ಏಳನೇ ಇಯತ್ತೆಗಳಿಗೆ ಕಲಿಸುತ್ತಿದ್ದೆ. ಮುಗ್ಧತೆ/ ಕಪಟವರಿಯದ ಮಕ್ಕಳು.ಅವರ ಮಧ್ಯದಲ್ಲಿ ಮನೆಯ/ ಮನಸ್ಸಿನ ದುಗುಡಗಳೆಲ್ಲದರಿಂದ ದೂರವಾಗುವು ದೇ ಒಂದು ಪವಾಡ ಸದೃಶ್ಯ ಅನುಭವ. ಏನು ಮಾಡಿದರೂ ಸಿಟ್ಟಿಗೇಳುವ ಮಾತೇ ಇಲ್ಲ...
              ಒಂದು ಸಲ ಒಂದು ಕ್ಲಾಸಿನ 
Absentee period ಗೆ ಹೋಗಿದ್ದೆ. ಮಕ್ಕಳಿಗೇನೋ ಕೆಲಸ ಕೊಟ್ಟು ನಾನು ಒಂದು magazine ಮೇಲೆ ಸುಮ್ಮನೇ ಕಣ್ಣಾಡಿಸುತ್ತಿದ್ದೆ. ಒಬ್ಬ ಹುಡುಗಿ ನನ್ನ ಬಳಿ ಬಂದು ಮುಂದಿನ table ಮೇಲೆ
ಅರ್ಧ ಮಲಗಿ, ಪತ್ರಿಕೆಯ ಮೇಲೆ ಕಣ್ಣಾಡಿಸಿ, " ಟೀಚರ್, 'ಸುಧಾ' ಏನ್ರಿ? 
ನನಗ ಈ ವಾರದ್ದು ಸಿಕ್ಕೇ ಇಲ್ರಿ, ಒಂದ ಹತ್ತು ಮಿನಿಟು ಕೊಡ್ರಿ, ನೋಡಿ ಕೊಡತೇನಿ"- ಅಂದ್ಲು.ಕೊಡಬಹುದಿತ್ತು, ಆದರೆ ಕೊಡಲಿಲ್ಲ, ಅಷ್ಟು ಚಿಕ್ಕ ಹುಡುಗಿಗೆ ಅದನ್ನು ರೂಢಿಸಬಾರದೆಂದೆ
ಹಾಗೆ ಮಾಡಿದ್ದು.‌ ಅವಳು ವಕೀಲೆ, ಇಬ್ಬರೂ ಭೇಟಿಯಾದಾಗೊಮ್ಮೆ ಕಾಯಂ ಅದನ್ನೇ ಮಾತಾಡಿ ಮಜಾ ತೆಗೆದು ಕೊಳ್ಳುತ್ತೇವೆ. ಆ ಮಾತು ಬೇರೆ.
             ಅದು ಮಸಿ ಪೆನ್ನು ಮುಗಿಯು ತ್ತಿದ್ದ ಕಾಲ. ಎಲ್ಲೆಡೆಗೆ ಬಾಲ್ ಪೆನ್
ಅದೇ ತಾನೇ ಕಾಲಿಡಲು ಪ್ರಾರಂಭವಾ ಗಿತ್ತು. ನೀಲಿ cap ಹಾಗೂ ಮಸಿ ತೀರಿ
ಖಾಲಿ ಆಗುವದನ್ನು ಸ್ಪಷ್ಟವಾಗಿ ತೋರಿ
ಸುವ ರೀತಿ ಎಲ್ಲರಿಗೂತಿಳಿಯುತ್ತಿದ್ದುದೇ
ಒಂದು ಹೊಸ ಆಕರ್ಷಣೆ.ಪೆನ್ನಿನ 
ನಿಬ್ಬಿನಿಂದ ಮಸಿ ಸೋರುವ/ ಕೈ ಮೈ ಮಸಿಯಾಗುವ ಗೋಜಿಲ್ಲ. ಎಲ್ಲರ ಕೈಯಲ್ಲೂ ಅಂಥದೇ ಪೆನ್ನುಗಳು.
ಒಮ್ಮೆ Note books correction 
ಮಾಡುತ್ತ ಕುಳಿತಿದ್ದೆ.‌ಐದನೇ ಈಯತ್ತೆ ಯ ಒಬ್ಬ ಹುಡುಗ ಬಂದು/ ಎದುರು ನಿಂತು, "ಟೀಚರ್, ಆ ಪೆನ್ ನಂದು. ನಿನ್ನೆ ಕಳೆದಿದೆ"- ಅಂದ." ಹೌದಾ, ಕೊಡುತ್ತೇನೆ, ಅದಕ್ಕೂ ಮೊದಲು class ನ್ನು ಒಂದು ಸಲ ಸುತ್ತಿ ಬಾ, ಯಾರ ಯಾರ ಹತ್ತಿರ  ಎಂಥ pen ಇದೆ, ಒಮ್ಮೆ ನೋಡಿ ಬಾ.- ಅಂದೆ. "ಬಹಳ ಮಂದಿಯ ಹತ್ತಿರ ಇವೇ ಇವೆ ಟೀಚರ್, "- ಎಂಬುದು ಅವನ ಉತ್ತರವಾಗಿತ್ತು.ಮುಖದ ತುಂಬ ಗೊಂದಲ.ನನ್ನನ್ನು ಕೇಳಿದ್ದರ ಬಗ್ಗೆ ಎಲ್ಲೋ ಚಡಪಡಿಕೆ." ಈಗ ಮನೆಗೆ ಹೋದ ಮೇಲೆ ಮನೆಯಲ್ಲೆಲ್ಲ ಒಮ್ಮೆ
ಹುಡುಕಿ ನೋಡು,ಸಿಗದಿದ್ದರೆ ನಾನು ನಿನಗೆ ಇದರ ಜೊತೆಗೆ ಇನ್ನೊಂದು ಪೆನ್ನನ್ನೂ ಕೊಡುತ್ತೇನೆ." - ಅಂದೆ. ಮರುದಿನ ಶಾಲಾ ಪ್ರಾರ್ಥನೆಗೂ ಮೊದಲೇ ಬಂದು, ಕೈಯಲ್ಲಿ ಹಿಡಿದ
ತನ್ನ ಪೆನ್ನು ಮನೆಯಲ್ಲೇ ಸಿಕ್ಕ ಸುದ್ದಿ ಕೊಟ್ಟ.ಮುಖದ ಮೇಲೆ ಪೆನ್ನು ಸಿಕ್ಕ ಶುದ್ಧ ಖುಶಿ ಬಿಟ್ಟರೆ ಬೇರೆ ಯಾವ ಭಾವವೂ ಇರಲಿಲ್ಲ...ಅದಕ್ಕೇ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ
ಎನಿಸಿಬಿಟ್ಟಿತು ನನಗೆ.ಈಗ 
ನನ್ನದೊಂದೇ ಪ್ರಶ್ನೆ  ಬೆಳೆ ಬೆಳೆಯುತ್ತ 
ಈ ಮುಗ್ಧತೆ  ಎಲ್ಲಿ ಮಾಯವಾಗುತ್ತದೆ?

        



Monday 22 May 2023

ಮಾತುಗಳು ಮಾತ್ರ 'ಮಾಮೂಲು...'
ಪ್ರೀತಿಯಲ್ಲ...
          ‌  
-"ನಮಸ್ಕಾರ್ರೀ ಟೀಚರ್, ನನ್ನ ಗುರ್ತು
ಸಿಕ್ತೇನ್ರಿ?"
- ಟೀಚರ್ ,ನಾನು ನಿಮ್ಮ 82 batch
Student ರೀ...
- ನಮಗ ನೀವು ಎರಡು ವರ್ಷ English ಕಲಿಸೀರಿ...
- Pls, ಒಂದು selfee ರಿ ಟೀಚರ್, ನಮ್ಮ WA ಗುಂಪಿಗೆ ಹಾಕ್ತೇನ್ರಿ...
         ಹತ್ತಾರು ಮಕ್ಕಳು, ನೂರಾರು ನೆನಪುಗಳ ಕದಡುವಿಕೆ. ಮೂವತ್ತು ವರ್ಷಗಳ ಕಲಿಕೆಯ ಫಸಲು ಕಣ್ಣೆದುರು ನಳನಳಸಿದಾಗ ಆಗುವ ಸಂತೋಷವೇ ಬೇರೆ...ನಡುನಡುವೆ
ಗೊಂದಲದ ಗಾಬರಿ, ಯಾರ ಹೆಸರು ಯಾರಿಗೋ? ಯಾರ ನೆನಪು ಇನ್ನಾರಿಗೋ ಅಂಟಿಸಿ,ಅವರು ಅದನ್ನು
ತಿದ್ದುಪಡಿ ಮಾಡಿ ನೇರವಾಗಿಸುವದು,
ಇಂಥದ್ದಂತೂ ಇದ್ದದ್ದೇ...
              ಸಂದರ್ಭ: ಅಣ್ಣನ ಮಗನ ಮನೆಯ ವಾಸ್ತುಶಾಂತಿ .ಅಣ್ಣನ ಮಕ್ಕಳು, ಸೊಸೆ ಕೂಡ ನನ್ನದೇ ವಿದ್ಯಾರ್ಥಿಗಳು.ಹೀಗಾಗಿ ಆಮಂತ್ರಿತ ರೆಲ್ಲರೂ ಪರಿಚಿತ ವಿದ್ಯಾರ್ಥಿಗಳು  ಇಲ್ಲವೇ ಅವರ ಪಾಲಕ ವರ್ಗ... ಅಲ್ಲದೇ  ಧಾರವಾಡದ ನನ್ನ 
ನಲವತ್ತಕ್ಕೂ ಮೀರಿದ ವರ್ಷಗಳ ವಾಸ್ತವ್ಯ, ಮೂವತ್ತು ವರ್ಷಗಳ ಶಿಕ್ಷಕ
ವೃತ್ತಿ ಎರಡೂ ಹೆತ್ತುಕೊಟ್ಟ ಸಾವಿರಾರು 
ನೆನಪುಗಳು.ಅಂದ ಹಾಗೆ ನನ್ನ ನೆನಪಿನ ಶಕ್ತಿಯ ಬಗ್ಗೆ ನನಗೇ ನಂಬಿಕೆಯಿಲ್ಲ. ಭರ್ತಿ ಹರಯದಲ್ಲಿಯೇ ಸಾರಿಗೆ ಚಹಾ ಪುಡಿ/ ಚಹಕ್ಕೆ ಮಸಾಲೆ ಪುಡಿ ಹಾಕುವ /ಕಣ್ಣುಗಳ ಮೇಲೆ  ಚಸ್ಮಾಹಾಕಿಕೊಂಡು ಅದನ್ನೇ ಅರ್ಧಗಂಟೆ ಅದನ್ನೇ ಹುಡುಕುವಷ್ಟು ಮರೆಗುಳಿತನ..
ಅಂಥದರಲ್ಲಿ ಹದಿಮೂರರಿಂದ ಹದಿ ನಾರರ ವಯಸ್ಸಿನಲ್ಲಿ ಕಲಿತ ಮಕ್ಕಳು ಗುಂಪುಗೂಡಿ ಬಂದು ಎಪ್ಪತ್ತೆಂಟರ ನನ್ನ ನೆನಪಿನ ಶಕ್ತಿಯ ಪರೀಕ್ಷೆ ತೆಗೆದುಕೊಳ್ಳತೊಡಗಿದರೆ ನನ್ನ ಗತಿ ಏನಾಗಬೇಡ...!!!
  ‌           ‌   ಆದರೆ ಅಂಥ ಘೋರ ಪ್ರಮಾದಗಳೇನೂ ಆಗಲಿಲ್ಲ.ಆದದ್ದೆಲ್ಲ ಒಳಿತೇ ಆಯಿತು.ನನ್ನ ವಿದ್ಯಾರ್ಥಿಗಳ ಮರು ಪರಿಚಯ/ ಅವರ ಕುಟುಂಬಗಳ ಪರಿಚಯ/ಹಳೆಯ ಘಟನೆಗಳ ಚರ್ವಿತ ಚರ್ವಣ,ಅಸಂಖ್ಯ ಆಮಂತ್ರಣಗಳು ಹೀಗೆ...
         ಒಟ್ಟು ಮೂರು ದಿನಗಳ ಕಾರ್ಯಕ್ರಮಗಳು - ಮೊದಲ ದಿನ ಗ್ರಹಹೋಮ, ಮರುದಿನ ಗ್ರಹ ಪ್ರವೇಶ,
ಮೂರನೇ ದಿನ‌ Social Gathering.
ಪ್ರತಿದಿನ ಬೇರೆ ಬೇರೆ ಜನರ ಭೇಟಿಯ ಸಂಭ್ರಮ...
             ಒಟ್ಟಿನಲ್ಲಿ ಹೇಳಬೇಕೆಂದರೆ ಕೋವಿಡ್ಡೋತ್ತರದಲ್ಲಿ ಮತ್ತೆ ಕೋವಿಡ್ ಪೂರ್ವದ ನೆಮ್ಮದಿಯ ದಿನಗಳಿಗೆ  ನಾವೆಲ್ಲ ಮರಳುತ್ತಿರುವದು ಕಡಿಮೆ ಖುಶಿಯೇನೂ ಅಲ್ಲ...

         ಅದಕ್ಕೇ ಹೇಳಿದ್ದು- " ಮಾತುಗಳು
ಮಾಮೂಲಾಗಿರಬಹುದು ಖಂಡಿತ ಪ್ರೀತಿಯಲ್ಲ."

                

Saturday 20 May 2023

ಅಣ್ಣನ ಮಗನ ಮನೆಯ ವಾಸ್ತುಶಾಂತಿ
೨೧ ಕ್ಕೆ ತಯವಾಗಿತ್ತು.ಈ ಬಾರಿ ಒಂದು ವಾರದ plan ಇದ್ದುದರಿಂದ ಎರಡು ದಿನ ಮೊದಲೇ First AC book ಮಾಡಿಕೊಂಡು ಆರಾಮಾಗಿ ಪಯಣಿಸಿ
ಮಜವಾಗಿ ವೇಳೆ ಕಳೆಯವದಾಗಿ ಠರಾಯಿಸಿ ಅಣ್ಣನ ಮಗಳ ಜೊತೆ ಹೊರಟದ್ದಾಯಿತು.train ಸಮಯ ರಾತ್ರಿ ಹನ್ನೊಂದು ಗಂಟೆಗೆ. ಎರಡು
ತಾಸು ಮೊದಲೇ ಜಾಹ್ನವಿಯ ಮನೆಗೆ
ಹೋಗಿ, ಊಟ ಮುಗಿಸಿ, ನಿಲ್ದಾಣ ತಲುಪಿದಾಗ ಸರಿಯಾಗಿ ೧೦-೪೫.
ಅದಾಗಲೇ ಬಂದು ನಿಂತ ಗಾಡಿ ಏರಿ
ಅದು ಹೊರಟಾಗ ಸರಿಯಾಗಿ ಹನ್ನೊಂದು. ನಮ್ಮ ಸಮಯ ಪಾಲನೆಗೆ ನಾವೇ ಬೆನ್ನು ತಟ್ಟಿಕೊಂಡು, ಹತ್ತೇ ನಿಮಿಷಗಳಲ್ಲಿ TC ಬಂದು ಟಿಕೆಟ್ ಪರಿಶೀಲಿಸುವ ಕೆಲಸವೂ ಮುಗಿದು,
ಎಚ್ಚರವಾಗದಿದ್ದರೆ- ಎಂಬ ಅನುಮಾನ ದಲ್ಲಿ ಒಂದು ಗಂಟೆ ಮೊದಲೇ ಅಲಾರಾಂ  ಇಟ್ಟು ಮಲಗಿದಾಗ ಹನ್ನೆರಡರ ಸಮೀಪ. ಸರಿಯಾಗಿ ಐದು ಗಂಟೆಗೆ ಅಲಾರಾಂ ಆದಾಗ ಎದ್ದು ಕಿಟಕಿ ಗಾಜಿನಲ್ಲಿ ' ಹುಬ್ಬಳ್ಳಿ' ಎಂದು confirm ಮಾಡಿಕೊಳ್ಳಲು ನೋಡಿದಾಗ ಕಂಡದ್ದು, ಬೆಂಗಳೂರಿ ನಿಂದ ಕೆಲವೇ ಕಿಲೋಮೀಟರ್ ದೂರದ ' ಕಡೂರು'. ಗಾಬರಿಯಾಗಿ ಗೂಗಲ್ ನಲ್ಲಿ Location search ಮಾಡಿದಾಗ ೪೦೦ km ಸಮೀಪದ ಅಂತರ ತೋರಿಸುತ್ತಿದೆ. ಗಾಬರಿಯಲ್ಲಿ, 
ಬೇರೆ ಗಾಡಿ ಏನಾದರೂ ಏರಿದ್ದೇವಾ? ಎಂದು ಯೋಚಿಸಿಯೇ ಬಿಪಿ ಏರಿದ್ದೂ ಆಯ್ತು. TC ಬಂದು ಟಿಕೆಟ್ confirm
ಮಾಡಿ ಹೋದದ್ದು ನೆನಪಾದಾಗ ಸ್ವಲ್ಪ
ನಿರಾಳ. ಆದರೆ special ಬೋಗಿ ಆದ್ದರಿಂದ ಜನರ ಓಡಾಟವಿಲ್ಲದೇ ಏನೂ ತಿಳಿಯುತ್ತಲೇಯಿಲ್ಲ. ಆದದ್ದಾಗಲಿ ಎಂದು ಮತ್ತೆ ಮತ್ತೆ ಗಡಿಯಾರ ನೋಡುತ್ತ/ ತೂಕಡಿಸುತ್ತ
ಒಂದೂವರೆ ಗಂಟೆ,- ೬-೩೦- ಕ್ಕೆ ದಿನದಂತೆ ಎದ್ದು ನೋಡಿದಾಗ ಡಾವಣಗೆರೆಯೂ ಬಂದಿರಲಿಲ್ಲ.ನಮ್ಮ ತಲೆ ಕೆಲಸಮಾಡಲು ಒಂದು ಕಪ್ ಚಹ ಬೇಕಿತ್ತು.ಅದು ಬಂದದ್ದು,ಹರಿಹರದಲ್ಲಿ.
" ಬೆಂಗಳೂರು ಸಮೀಪದಲ್ಲಿಯೇ ಸ್ವಲ್ಪು ದೂರದಲ್ಲಿ track extension
ಕೆಲಸ ನಡೆದಿದ್ದು ನಮ್ಮ track ನಲ್ಲೂ
ಕೊಂಚ ಅನುಮಾನ ಬಂದದ್ದರಿಂದ ಗಾರ್ಡ ಸಿಗ್ನಲ್ ಕೊಡಲು ನಿರಾಕರಿಸಿದ್ದ,
ಅದೆಲ್ಲ ಬಗೆಹರಿದು,clear ಆಗಿ ಹಸಿರು
ನಿಶಾನೆ ತೋರಿಸಲು ಪೂರ್ತಿ ನಾಲ್ಕು ಗಂಟೆಗೂ ಹೆಚ್ಚಾಗಿದ್ದು ನಂತರ ತಿಳಿದು
ಬಂದ ವಿಷಯ...ಆ ನಂತರ ವೇಳೆ ಕಳೆಯುವುದು ಸಮಸ್ಯೆಯಾಗಲೇ ಇಲ್ಲ
ನಮ್ಮ ಬರುವನ್ನು ನಿರೀಕ್ಷಿಸುತ್ತಿದ್ದವರ
ಫೋನುಗಳ ಮೇಲೆ ಫೋನುಗಳು... 
ಎಲ್ಲಿದ್ದೀರಿ? ಮುಟ್ಟಿದಿರಾ? 
ನಾವು ಎಷ್ಟೊತ್ತಿಗೆ ಕಾರು ತರೋಣ?
ನಮ್ಮನೆಗೇ ಬಂದುಬಿಡಿ.
Tiffin ಗೆ ಕಾಯುತ್ತೇವೆ...
ಇಂಥ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಂಗು ರಂಗಿನ ಅನುಭವಗಳನ್ನು ಮತ್ತಷ್ಟು ರಂಗಾಗಿ ವಿವರಿಸುತ್ತಾ, ಅಂದಿನ ಬೆಳಗಿನ  ಕಾರ್ಯಕ್ರಮಗಳನ್ನು reschedule ಮಾಡುತ್ತಾ, ಅದರ ತಕ್ಕಂತೆ ದಿನಚರಿಯನ್ನು  ಬದಲಾಯಿ ಸಲು ಪ್ರಯತ್ನಿಸುತ್ತಾ, ಹರಿಹರದಲ್ಲಿ
ಸಿಕ್ಕ ಇಡ್ಲಿ/ ವಡೆ/ ಚಹಾ ಚಪ್ಪರಿಸುತ್ತಾ
ಮುಂದಿನ ನಾಲ್ಕು ಗಂಟೆಗಳು ಕಳೆದದ್ದೇ
ತಿಳಿಯದೇ ಧಾರವಾಡ ಮುಟ್ಟಿದ್ದು/ 
ಪ್ರವಾಸದ ಹೊಸ ಅನುಭವ ಮನಸ್ಸನ್ನು ತಟ್ಟಿದ್ದು ಈಗ ಇತಿಹಾಸ.
            ಆದರೆ ಹತ್ತು - ಹನ್ನೆರಡು ಜನರ ಗುಂಪೊಂದು ಅಂದೇ ದಿನ ನಡೆಯಬೇಕಾಗಿದ್ದ ಮದುವೆಗೆ ಹೋಗಲಾಗದೇ ನಿರಂತರ ಚಡಪಡಿಸಿ ದ್ದು ನೋಡಿ ನಾವೂ ಚಡಪಡಿಸುವಂತಾ ಯಿತು. ಒಂದು ನಿಲ್ದಾಣದಲ್ಲಿ ಅಪ್ಪ, ಮಗ ಇಳಿಯುವ ಹೊತ್ತಿಗೆ ರೈಲು ನಿಧಾನವಾಗಿ ಹೊರಟು ಅಮ್ಮ ಗಾಬರಿ ಯಾಗಿ ಇಳಿಯಲು ನಿರಾಕರಿಸಿದ್ದರಿಂದ
ಹಳಿಗಳ ಗುಂಟ guards ಓಡಿ, ಒಬ್ಬರು
ಅನಾಮತ್ತು ಅವರನ್ನು ಇಳಿಸಿ, ಇನ್ನೊಬ್ಬರು ಕೆಳಗೆ ಹಿಡಿದುಕೊಂಡು
ಕೆಲಸ ಸಾಧಿಸಿದ್ದನ್ನು ಕಾಣುವ ಭಾಗ್ಯವೂ ದೊರೆಯಿತು.
               ನೀವು ಏನೇ master plan
ಹಾಕಿ, ಅದು ನಡೆಯುವದು ಮಾತ್ರ ಆ 
GREAT MASTER ನ plan ನಂತೆ  ಎಂಬುದನ್ನು ಮಾತ್ರ ನೆನಪಿಡಿ...
ಏಕೆಂದರೆ - 
' ಬದುಕಿಗಿಂತ ದೊಡ್ಡ ಗುರು ಬೇರಿಲ್ಲ'.





Monday 15 May 2023

       ‌‌‌  ‌‌‌‌‌       ನಿನ್ನೆಯಿಡೀ ಎಲ್ಲೆಲ್ಲೂ mother'day post ಗಳು, ಫೋಟೋ ಗಳು, ವೀಡಿಯೋಗಳು, reels ಗಳು...
ದಿನಾಲೂ ನನ್ನ ದಿನಚರಿಯನ್ನೇ fb post ಗಳಂತೆ ಹಾಕುವ ನಾನು ಅವ್ವನ 
ಹೆಸರಲ್ಲಿ ಏನೂ ಹಾಕಲಿಲ್ಲ.ಯಾಕೋ
ಮನಸ್ಸೇ ಒಪ್ಪಲಿಲ್ಲ.ನಾವೆಲ್ಲ ಅವಳಿಗೆ
'ಅಮ್ಮ' ಅನ್ನಲೇಯಿಲ್ಲ, ಅಪ್ಪನಿಗೆ ಅಪ್ಪ'
ಎಂದು ಕರೆಯಲಿಲ್ಲ.ಕೂಡು ಕುಟುಂಬ ಗಳಲ್ಲಿ ಉಳಿದವರು ಅವರನ್ನು ಹೇಗೆ ಕರೆದರೋ ಹಾಗೆ ಅಕ್ಕ/ ಅಣ್ಣ ಎಂದೇ ಕರೆಯುತ್ತಿದ್ದುದು.ಈಗಿನ ವಿಭಕ್ತ ಕುಟುಂಬಗಳಂತೆ ಪ್ರತಿಯೊಬ್ಬರಿಗೆ 
ಪ್ರತ್ಯೇಕ ಅಸ್ತಿತ್ವ ಆಗೆಲ್ಲ ಕಡಿಮೆಯೇ...
ಮನೆಯವರೆಲ್ಲರೂ ತಮಗೆ ಆಗುವ/ ವಹಿಸಿಕೊಟ್ಟ/ ಕೆಲಸಗಳನ್ನು ಮಾಡುವದು,ಮಾಡುತ್ತಲೇ ಇರುವದು ...ಕುಟುಂಬ ದೊಡ್ಡದಿದ್ದರಂತೂ 'ಅವ್ವ' ಎಂಬಾಕೆ ಅಕ್ಷರಶಃ ಗಾಣದೆತ್ತು.ಆರ್ಥಿಕ
ಕಾರಣಗಳಿಗಾಗಿ ಕೆಲಸದವರ ಸುದ್ದಿ ಎತ್ತುವಂತಿಲ್ಲ, ಕೆಲಸದಿಂದ ದಣಿದರೂ
ಕ್ಷಣಹೊತ್ತು ಕೂಡುವಂತಿಲ್ಲ,ಅನಾರೋ ಗ್ಯದಿಂದ ನೆಲಕಚ್ಚಿ ಮಲಗುವವರೆಗೂ
'ಹೇಗಿದ್ದೀಯಾ? ವಿಶ್ರಾಂತಿ ತಗೋ,"- ಎಂದು ಹೇಳುವವರಿಲ್ಲ.ಒಂದು ವೇಳೆ ಹೇಳಿದರೂ ದೊಡ್ಡ ಕುಟುಂಬದಲ್ಲಿ ಅದು ಸುಲಭ ಸಾಧ್ಯವಿರಲೇಯಿಲ್ಲ' -ಅದು ಬೇರೆ ಮಾತು
              ಇದು ನಮ್ಮ ಮನೆಯದಷ್ಟೇ
ಅಲ್ಲ, ಎಲ್ಲರ ಮನೆಯಲ್ಲೂ ಹಾಗೇನೇ
ಇದ್ದದ್ದು.ಮುಗ್ಧರಾದ ನಮಗೆಲ್ಲ,' ಇಡಿ ಜಗತ್ತು ನಡೆಯುವದೇ ಹಾಗಿರಬಹುದು '- ಎಂಬ ಭಾವ. ನಾವು ದೊಡ್ಡವರಾಗಿ ಆಖಾಡಕ್ಕೆ ಇಳಿದಾಗಲೇ ಅದರ ಕಷ್ಟ
ತಿಳಿದದ್ದು." ನೀವಿನ್ನೂ ಸಣ್ಣವರು, ಎಲ್ಲದಕ್ಕೂ  ತಲೆಹಾಕಲು ಬರಬೇಡಿ"-
ಎಂಬುದನ್ನು ಕೇಳಿ, ಕೇಳಿ, ಆಗಿನ ಮಡಿ, ಮೈಲಿಗೆಯ ವಾತಾವರಣದಲ್ಲಿ ಒಂದು
ರೀತಿ ಹೊರತಾದವರಾಗಿ, ಎಲ್ಲೋ ಚಿಕ್ಕ ಪುಟ್ಟ ಚಿಲ್ಲರೆ ಕೆಲಸ ಮಾಡಿಕೊಂಡು
ಹೊರ ಹೊರಗೇ ಬಾಲ್ಯ ಕಳೆದ ನಮಗೆ
ಅವ್ವಂದಿರಿಗೆ ನೆರವಾಗುವದು/ ಅವರ ಸಾಮೀಪ್ಯ ,ಒಡನಾಡಿದ ಖುಶಿ ಎಲ್ಲ ಕಳೆದುಕೊಂಡುದು ತಿಳಿದಾಗ ಬಹಳ ತಡವಾಗಿ ಹೋಗಿತ್ತು.ಮತ್ತೆ ಅದೇ...ಎಲ್ಲರದೂ ಒಂದೇ ರೀತಿ...
            ಈಗ ಮಕ್ಕಳು,ಮೊಮ್ಮಕ್ಕಳ
ಜೀವನದ ಪರಿ ನೋಡಿದರೆ, ಅವರಿಗೆ
ಸಿಕ್ಕ ಸ್ವಾತಂತ್ರ್ಯ/ ಶಿಕ್ಷಣ/ ಸಾಮಾಜಿಕ ನೆಲೆ ಇದೆಲ್ಲ ನೋಡಿದರೆ ದಿನದಿನವೂ
ತಾಯಂದಿರ ದಿನವೇ...!!!
                 No...No...ಇದು ಖಂಡಿತ ಕರುಬುವ ಮಾತಲ್ಲ...ಏಕೆಂದರೆ ಬದಲಾಗುವ ಜಗತ್ತಿನಲ್ಲಿ ನಮ್ಮ ಅವ್ವಂದಿರಿಗಿಂತ ನಾವು ತುಂಬಾನೇ
ಆರಾಮವಾಗಿ ಕಳೆದಿದ್ದಿದೆ. ಅದು ನಮ್ಮ ಅವ್ವಂದಿರಿಗೆ ಸಿಗದ ಬಗ್ಗೆ ಚಡಪಡಿಸಿದ್ದಿ ದೆ. ಅವರ ಮಕ್ಕಳಿಗೆ ಸಿಕ್ಕ ಇನ್ನೂ ಚಂದದ ಜೀವನದ ಬಗ್ಗೆ ಖುಶಿಯಿದೆ...
              ಆದರೂ ಅವ್ವನ ಬದುಕಿನ ಬದುಕು- ಬವಣೆಗಳನ್ನು ಕಣ್ಣಾರೆ ಕಂಡು
ನಾವೇ ಎಲ್ಲ ಅನುಭವಿಸುತ್ತಿರುವಾಗ ಬಾಯಿ ಮಾತಿನ Happy mother's day ಹೇಳುವಾಗ ಗಂಟಲಲ್ಲಿ ಏನೋ
ಸಿಕ್ಕಂತಾಗುವದು ಮಾತ್ರ ಸುಳ್ಳಲ್ಲ...
" ಅಕ್ಕಾ! ಎಲ್ಲಿದ್ದೀಯೋ ಅಲ್ಲಿ ಆರಾಮಾಗಿರು...ನಿನ್ನ ಮಕ್ಕಳು/ ಮೊಮ್ಮಕ್ಕಳು ಎಲ್ಲರೂ ಸಹ ಆರಾಮಾಗಿದ್ದೇವೆ" ಎಂದು ಒಂದು ನಿಮಿಷ ಮೌನವಾಗುವದು ನನ್ನ ರೀತಿ.
             ಇದು ನನ್ನ, ಕೇವಲ ನನ್ನ ಮನದ ಮಾತು...ಎಲ್ಲರದೂ ಖಂಡಿತ
ಆಗಬೇಕಾಗಿಲ್ಲ...
       

Saturday 13 May 2023

  ಯಾವುದೊಂದು ಖುಶಿಯೂ ಚಿಕ್ಕದಲ್ಲ...
              
       ನನಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿಯೇನೂ ಇಲ್ಲ. ನಮ್ಮ ಸಮೀಪದ / ದೂರದ ಸಂಬಂಧಿ ಗಳಲ್ಲಿ ರಾಜಕಾರಣಕ್ಕಿಳಿದವರೂ ಯಾರೂಇಲ್ಲ.ಆದರೆ ಪ್ರಾಸಂಗಿಕವಾಗಿಪ್ರಾಸ್ತಾವಿಕವಾಗಿ ಎಷ್ಟು ಬೇಕೋ ಅಷ್ಟು ಆಸಕ್ತಿ ಇದೆ. ಹೀಗಾಗಿ ಬೇಸರವಿಲ್ಲದೇ ಪ್ರತಿ ಚುನಾವಣೆಯಲ್ಲೂ ಮತವನ್ನು ಚಲಾಯಿಸಿ ತಪ್ಪದೇ ಫಲಿತಾಂಶಕ್ಕಾಗಿ  ಕಾಯುತ್ತೇನೆ.

                ಈ ಸಲದ ಫಲಿತಾಂಶ ಒಂದು ರೀತಿಯಲ್ಲಿ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿ ಪ್ರತಿ ಪಕ್ಷಕ್ಕೂ ಒಂದಿಲ್ಲ ಒಂದು ಪಾಠ ಕಲಿಸಿದೆ.ಅನೇಕ ನಿರೀಕ್ಷೆ/ಅಪೇಕ್ಷೆಗಳ 
ಹುಡಿ ಹಾರಿಸಿ ಎಲ್ಲರೂ ತಮ್ಮನ್ನು ತಾವು ಮುಟ್ಟಿ ನೋಡಿಕೊಳ್ಳುವಂತೆ
ಮಾಡಿದೆ.

               ಅದೇನೇ ಇರಲಿ, ನನ್ನ ಮಟ್ಟಿಗೆ ಮಾತ್ರ ಈ ದಿನ ಹ್ಯಾಟ್ರಿಕ್ ಖುಶಿ ತಂದ ಶುಭ ದಿನ...‌ ನನ್ನ ಮೂರನೇ ಮಗಳ ಇಪ್ಪತ್ಮೂರನೇ  ವಿವಾಹ ವಾರ್ಷಿಕೋತ್ಸವ / ಅಳಿಯನ‌ ಚುನಾವಣೆಯ ಸಂಭ್ರಮಕ್ಕಾಗಿಯೇ ಧಾರವಾಡದಿಂದ ಬಂದ  ನನ್ನ ಆಪ್ತ ಗೆಳತಿ ಅವರ ವಿಜಯೋತ್ಸವದಲ್ಲಿ ಮಗಳು, ಮಕ್ಕಳು,ಮೊಮ್ಮಕ್ಕಳೊಂದಿಗೆ ಭಾಗಿಯಾಗಿ ತುಂಬು ಸಂತಸದಲ್ಲಿದ್ದು ಮರಳಿ ಹೋಗುವಂತಾದುದು / ಈ ಮೊದಲೇ book ಮಾಡಿದ ಕಾರು
( ಟೊಯೋಟಾ ಗ್ಲಾಂಝಾ) ಇಂದೇ ಬಂದು ಗುಡಿಗೆ ಹೋಗುವ ನೆಪದಲ್ಲಿ ಒಂದು ಪುಟ್ಟ jolly ride ನ ಖುಶಿ ದಕ್ಕಿದ್ದು...

                ಸಾಕಲ್ಲವಾ ಮುಖದ ಮೇಲೆ ನಗು ಅರಳೋಕೆ???

Wednesday 10 May 2023

ಪ್ರಸಿದ್ಧಳಾಗುವ ಹುಚ್ಚು ನನಗಿಲ್ಲ, 
ನೀವು ನನ್ನನ್ನು ಗುರುತಿಸಿದಿರಿ,
ಅಷ್ಟೇ ಸಾಕು ನನಗೆ...
ಒಳ್ಳೆಯವರಿಗೆ ಒಳ್ಳೆಯವಳಾಗಿ, 
ಕೆಟ್ಟವರಿಗೆ ಕೆಟ್ಟವಳಾಗಿ ನಾ ಕಂಡೆ, ಅದಕ್ಕಾಗಿ ಕಿಂಚಿತ್ತೂ ಖೇದವಿಲ್ಲ ನನಗೆ. 

ಈ ಬದುಕಿನ‌ ರೀತಿಯೇ ಒಂದು ವಿಚಿತ್ರ.
ದಿನದ ಸಂಜೆಗಳು ಕಳೆಯಲು 
ದುಸ್ತರವಾಗುತ್ತವೆ...
ಆದರೆ
ವರ್ಷದ ಮೇಲೆ ವರ್ಷಗಳು ಉರುಳುತ್ತಲೇ ಇರುತ್ತವೆ...
ಬದುಕಿನಲ್ಲಿ ಗೆಲುವು ಕಂಡರೆ,  ಜನ ಬೇತಾಳದಂತೆ ಬೆನ್ನೇರುತ್ತಾರೆ...
ಸೋಲುಂಡರೆ, ಪರಿಚಯಸ್ಥರು ಸಹ ಕಾಣೆಯಾಗುತ್ತಾರೆ...

ಸಮುದ್ರದಿಂದ ನಾನೊಂದು
ಪಾಠ ಕಲಿತಿದ್ದೇನೆ,
ನನ್ನಷ್ಟಕ್ಕೇ ನಾನು ಬದುಕಿರುವದು,
ಇರುವಿನ ಸೊಗಸನ್ನು ಸವಿಯುವದು.
ಹಾಗೆಂದು ನನ್ನಲ್ಲಿ ಯಾವುದೇ 
ಐಬು ಇದೆಯಂದರ್ಥವಲ್ಲ,
ಹಾಗೆಯೇ ಯಾವ ಸುಳ್ಳು ಅಹಮ್ ಸಹ ಇಲ್ಲ...

ನನ್ನ ಬದುಕು/ ಭಾವಗಳಿಂದ 
ನನ್ನ ಗೆಳೆತಿಯರಿಗೇನೋ ಅಸೂಯೆ...
ಹಾಗೆಂದು ಆ ಕಾರಣಕ್ಕೆ ನಾನು ಅವರನ್ನಾಗಲೀ, ನನ್ನ ರೀತಿಯನ್ನಾಗಲಿ
ಈಗಲೂ ಬದಲಿಸಿಲ್ಲ...

ಒಂದು ದಿನ ಗಡಿಯಾರ ಖರೀದಿಸಿ 
ಕೈಗೆ ಕಟ್ಟಿದ್ದೇ‌ ಬಂತು,
ಸಮಯ ಓಡುತ್ತಲೇ ಇದೆ, 
ನನ್ನನ್ನೂ ಓಡಿಸುತ್ತಲೇ ಇದೆ...
ಒಂದು ಮನೆ ಮಾಡಿಕೊಂಡು
ಆರಾಮಾಗಿ ಇರುವ ಕನಸ ಕಂಡೆ,
ಆದರೆ ನಂತರದ ಅವಶ್ಯಕತೆಗಳು
ನನ್ನನ್ನು ಕ್ಷಣಕೂಡ ಆರಾಮು ಕೊಡದೇ
ಕಾಯಮ್ ಅಲೆಮಾರಿಯಾಗಿಸಿವೆ...

ಬಾಲ್ಯದ ಆ ದಿನಗಳು, ಆ ಆನಂದ ಮತ್ತೊಮ್ಮೆ ಬರಲಾರವು, ಗೊತ್ತು...
ದಿನಗಳುರುಳಿದಂತೆ ಬದುಕಿನ ಬಣ್ಣಗಳೇಕೆ ಮಾಸುತ್ತವೆ...?
ಚಂದದ ಗಳಿಗೆಗಳೇಕೆ ಅತ್ಯಂತ ಸಹಜವೆನಿಸತೊಡಗುತ್ತವೆ?

ಹಿಂದೊಮ್ಮೆ, ನಗುನಗುತ್ತಲೇ 
ಏಳುವ ಬೆಳಗುಗಳಿದ್ದವು...
ಈಗ, ಒಂದೂ ಮುಗುಳುನಗೆ 
ಇಲ್ಲದೇ  ದಿನಗಳೇ ಕಳೆದುಹೋಗುತ್ತಿವೆ.

ಬದುಕನ್ನು ಸಂಭ್ರಮಿಸುತ್ತ,
ಸಂಬಂಧಗಳನ್ನು ಬೆಸೆಯುತ್ತ,
ಎಷ್ಟೊಂದು ದೂರ ಪಯಣಿಸಿದ್ದೇನೆ,
ಅದೇ ಕಾಯಕದಲ್ಲಿ ನನ್ನನ್ನು 
ನಾನೇ ಕಳೆದುಕೊಂಡು ಹುಡುಕಿದ್ದೇನೆ...

ನಗುತ್ತೇನೆ, ನಗುತ್ತಲೇ ಇರುತ್ತೇನೆ, ನೋವನ್ನೆಲ್ಲ ನುಂಗುತ್ತೇನೆ...
ನನ್ನನ್ನೇ ಅಲಕ್ಷಿಸಿಕೊಂಡು
ಇತರರನ್ನು ಗೌರವಿಸುತ್ತೇನೆ...
ನನಗೆ ಅದಕ್ಜಾಗಿ ಕಿಂಚಿತ್ತೂ ಖೇದವಿಲ್ಲ.

ನನಗೆ ಗೊತ್ತಿದೆ,
ಇದರ ಮೌಲ್ಯ ಎಲ್ಲರಿಗೂ
ಅರಿವಾಗುವುದಿಲ್ಲ, ಎಂದು.
ಪರವಾಯಿಲ್ಲ, 
ನನಗೆ ಇದೂ ಗೊತ್ತಿದೆ...
ಇದರಿಂದ ನಾನು ಅನೇಕ ಬಹುಮೌಲ್ಯ
ಸಂಬಂಧಗಳನ್ನು ಗಳಿಸಿ
ಉಳಿಸಿಕೊಳ್ಳುವೆನೆಂದು...

Tuesday 9 May 2023

        ಬದುಕು ತರುವ ಅಚ್ಚರಿಗಳಿಗೆ
ಕೊನೆ ಮೊದಲಿಲ್ಲ.ಮನಸ್ಸಿನಲ್ಲೇನೋ ಅಂದುಕೊಂಡದ್ದು ಎಷ್ಟೋ ಸಲ ಆಗುವದಿಲ್ಲ ಎಂಬ ನಿರಾಶೆಯ ಜೊತೆ
ಜೊತೆಗೇನೇ ಕನಸು ಮನಸ್ಸಿನಲ್ಲೂ
ಎಣಿಸದ ಒಂದು ಸುಯೋಗವನ್ನೇ
ಧಿಡೀರನೇ ಕರುಣಿಸಿಬಿಡುತ್ತದೆ ಈ ಬದುಕು.
                  ಚುನಾವಣೆಯ ಸಮಯ.
ಎಲ್ಲರಿಗೂ ಎಂಥದೋ ಉದ್ವೇಗ/ ಹುಮ್ಮಸು/ ನಿರೀಕ್ಷೆಗಳು/ ಸಂಭ್ರಮ. ಇನ್ನು ಒಂದು ವಾರ ಯಾರನ್ನೂ ಮಾತನಾಡಿಸುವ ಹಾಗೇಯಿಲ್ಲ- ಎಂದಂದುಕೊಳ್ಳುವಾಗ ಧಿಡೀರನೇ
ನನ್ನ ಜೊತೆ ಒಂದನೇ ವರ್ಗದಿಂದ ಕೂಡಿ ಕಲಿತ/ ಎಪ್ಪತ್ತು ವರ್ಷಗಳಿಗೂ ಮಿಕ್ಕಿ ಸ್ನೇಹಸಂಬಂಧ ನಿಭಾಯಿಸಿದ/ಇಂದಿಗೂ ನಿಭಾಯಿಸುತ್ತಲೇ ಇರುವ ಬಾಲ್ಯದ ಗೆಳತಿಯೊಬ್ಬಳು ಮನೆಗೆ ಬಂದದ್ದಲ್ಲದೇ,ಅವಳೊಂದಿಗೆ ನಮ್ಮ ಗೆಳೆತನಕ್ಕೂ ಮಿಗಿಲಾದ, ವಯಸ್ಸಿನಲ್ಲಿ ಹಿರಿಯರೂ ಆದ ಗುರುಪತ್ನಿಯವರನ್ನು
ಭೇಟಿಯಾಗಬೇಕೆಂಬ ಬಹುದಿನದ ಆಶೆ
ಯೂ ನೆರವೇರಿದ್ದು/ನಾವು ಮೂವರೂ
ಕೆಲ ಗಂಟೆಗಳನ್ನು ಕಳೆಯಲು ಅನುಕೂ ಲವಾಗುವಂತೆ ನಮ್ಮಷ್ಟಕ್ಕೆ ನಮ್ಮನ್ನು ಬಿಟ್ಟು ತಾನು ಮಾತ್ರ ಅಡಿಗೆ ಮನೆಹೊಕ್ಕು ಗಂಟೆಯೊಂದರಲ್ಲಿ ವಿಧ ವಿಧದ  ಅಡಿಗೆ ತಯಾರಿಸಿ/ ಉಣಿಸಿ ಅಭೂತ ಪೂರ್ವ ಸತ್ಕಾರ ನೀಡಿದ ಅವರ ಸೊಸೆಯಾದ ವೈಜಯಂತಿ ಹಾಗೂ ಮನೆಜನರೊಂದಿಗೆ ಕಳೆದ ಕೆಲ ಸಮಯ ಬಹುದಿನಗಳ ನೆನಪಿಗೆ ಬುತ್ತಿಯಾದದ್ದಲ್ಲದೇ/ ನಾಳೆ Vote ಹಾಕಲು Extra Energy ಯಾಗಿ
ಕೆಲಸ ಮಾಡುವದರಲ್ಲಿ ಸಂದೇಹವಿಲ್ಲ.


Wednesday 3 May 2023

          ‌‌       "ನನಗೆ ಹೊಸ ಸೀರೆ ತರಬೇಡಿರೇ, ಉಡಲಿಕ್ಕೆ ಆಗೂದುಲ್ಲ,
ನೀವು ಉಟ್ಟು, ಒಗೆದು, ಮೈ ಮೇಲೆ ಹಗುರಾದ ಹತ್ತಿ ಬಟ್ಟೆಯ ಸೀರೆಯೇ ಸಾಕು"- ಸದಾ ಅಚ್ಚುಕಟ್ಟಾಗಿ  ಒಂಬತ್ತು  ವಾರಿಯ ಕಚ್ಚೆಯ ಸೀರೆಯುಟ್ಟು ಮೆರೆದ ಅವ್ವ ಕೊನೆ ಕೊನೆಗೆ ಹಗುರಾದ ಹತ್ತಿ ಸೀರೆ ಸುತ್ತಿಕೊಂಡು ದಿನಗಳೆಯು ತ್ತಿದ್ದಾಗ ಮಕ್ಕಳಿಗೆ ಹೇಳುತ್ತಿದ್ದ ಮಾತು...
         ‌‌      " ವಯಸ್ಸಾಯ್ತಲ್ಲ, ಹೊರಗೆ ಹೋಗುವದು ತೀರ ಕಡಿಮೆಯಾಗಿದೆ. ಪೂರಾ ನಿಂತು ಹೋಗಿ ಯಾರೋ ನಮಗೆ ನೈಟಿಯೋ/ ಚೂಡಿ ಟಾಪೋ ಹಾಕಿ ಕೂಡಿಸುವಂತಾಗುವ ಮೊದಲೇ
ನಾವೇ ರೂಢಿಸಿಕೊಂಡುಬಿಡುವದೇ ಒಳ್ಳೆಯದಲ್ಲವೇನೇ?-" ಆಕಸ್ಮಿಕವಾಗಿ
ಹಿರಿಯ ಗೆಳತಿಯೊಬ್ಬಳನ್ನು ಏಕಾಏಕಿ ನೈಟಿಯಲ್ಲಿ ಕಂಡು ಪ್ರಶ್ನಾರ್ಥಕವಾದಾಗ ಅವಳ cool cool ಉತ್ತರ...
        ‌‌‌      " ಕೆಡುಕೆನಿಸಿಕೊಳ್ಳಬೇಡಿ,  ‌ ಟೀಚರ್, Relax ಆಗಿ...ತಿಂಗಳು/ ಎರಡು ತಿಂಗಳಿಗೊಮ್ಮೆ ಗೆಜ್ಜೆಗಳನ್ನು ಬದಲಾಯಿಸಿ ಡೌಲು ಮಾಡುತ್ತಿದ್ದ ನನ್ನ ಕಾಲಿಗೆ ಸತ್ಯದ ಅರಿವಾಗುವ ಅವಶ್ಯಕ ಕತೆಯಿತ್ತು,ಒಂದು ಸಮಯಕ್ಕೆ ಗೆಜ್ಜೆ ಹಾಕಿಕೊಳ್ಳಲು ಕಾಲೂ ಇರಲಿಕ್ಕಿಲ್ಲ"- ಎಂದು...ಇದೂ ಬದುಕಿನ ಭಾಗವೇ!"- 
ನನ್ನ ಅಚ್ಚುಮೆಚ್ಚಿನ ಶಿಕ್ಷಕಿಯೊಬ್ಬರು
ಮಧಮೇಹದ ಕಾರಣದಿಂದ ಕಾಲಿನ  operation ಆಗಿ ಮಲಗಿದಾಗ ಭೇಟಿಗೆ
ಹೋದ ನಾನು ಹನಿಗಣ್ಣಾದಾಗ ಅವರೇ ಹೇಳಿದ ಮಾತು...
       ‌‌‌‌            ಬದುಕಿನ ತತ್ವ,ಉಪದೇಶ ಗಳನ್ನು ಹೇಳುವದು ಬೇರೆ/ ಅದನ್ನು ಎದುರಿಸಬೇಕಾಗಿ ಬಂದಾಗ ಹಾಗೆಯೇ ಬದುಕುವದು ಬೇರೆ.‌Be positive/ change your attitude/ Face life
boldly ಇಂಥವನ್ನು fb ಲಿ ಹಾಕಿ likes
ಗಿಟ್ಟಿಸಿಕೊಳ್ಳುವಷ್ಟು ಸುಲಭವಲ್ಲ ಹಾಗೆಯೇ ಬದುಕುವದು...
               ಮೊನ್ನೆ ನಮ್ಮ ಗುಂಪಿನ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಜೊತೆಗೆ ಸಾಕಷ್ಟು ಗೆಳತಿಯರಿದ್ದರು, ಮಳೆ ಬರುತ್ತಿದ್ದುದರಿಂದ ಕಿರಿಯ ಗೆಳತಿಯರು ಜೊತೆ ಜೊತೆಯಲ್ಲೇ ಇದ್ದು
ನನಗೆ ಸಾಥ್ ಕೊಟ್ಟರು.ಒಬ್ಬ ಗೆಳತಿ (ಜಯಶ್ರೀ  ಕಾಸರವಳ್ಳಿ) ಕಾರಿನಲ್ಲಿ ಇನ್ನೊಬ್ಬ ಗೆಳತಿ ಶಾಲಿನಿಯ ಮನೆಗೆ drop ಮಾಡಿದರೆ, ಆ ಗೆಳತಿ ಮಳೆ ನಿಂತು ನನ್ನ cab ಬರುವವರೆಗೂ ಉಪಚರಿಸಿ ಬಾಗಿಲಿಗೆ ಬಂದು ಕಾರು ಹತ್ತಿಸಿದ್ದಲ್ಲದೇ ಬಾರಿ ಬಾರಿ ಫೋನ್
ಮಾಡಿ ವಿಚಾರಿಸಿಕೊಂಡರು.
             ಒಂದು ಕಾಲಕ್ಕೆ ಲಂಡನ್/ ಅಮೇರಿಕಾಗಳಿಗೆ ನಾನೊಬ್ಬಳೇ ಏಕಾಕಿಯಾಗಿ ಪಯಣಿಸಿದ್ದು  ನೆನಪಾದರೆ ಇದನ್ನು ಒಪ್ಪಿಕೊಳ್ಳಲು
ಕಷ್ಟವಾಗುತ್ತದೆ ,ಆದರೆ ಒಪ್ಪಿಕೊಳ್ಳಲೇ ಬೇಕು- ಎಂಬುದನ್ನು ಬದುಕು ಎಲ್ಲರಿಗೆ ಕಲಿಸುವದೂ ನನಗೆ ತುಂಬ ಇಷ್ಟವೂ ಆಗುತ್ತದೆ...
   ‌‌ಬದುಕಿಗಿಂತ ಮೇಲಾದ ಗುರು ಇನ್ನೊಂದಿಲ್ಲ....


                




Monday 1 May 2023

                     ನಮ್ಮಲ್ಲಿ ಒಂದು ಪದ್ಧತಿಯಿದೆ. ಏಕಾದಶಿ ಪೂರ್ಣ ಉಪವಾಸ ಮಾಡಿದರೆ ಮರುದಿನ ಬೆಳಿಗ್ಗೆ ಲಘು ಆಹಾರ ಸೇವಿಸಬೇಕು.
ಹೆಸರು ಬೇಳೆ ಪಾಯಸ, ಮೆತ್ತಗಿನ ಅನ್ನ/ತುಪ್ಪ ,ತವಿ ಹೀಗೆ ಏನಾದರೂ. ಖಾಲಿ ಹೊಟ್ಟೆಗೆ ಒಮ್ಮೆಲೆ ಹೆಚ್ಚು ತುಂಬುವದು ಅಪಾಯ ಎಂಬ ಹಿನ್ನೆಲೆಯಲ್ಲಿ...
          ಈಗ ಇದೆಲ್ಲ ನೆನಪಾಗಲೂ ಒಂದು ಕಾರಣವಿದೆ.ಕೋವಿಡ್ ನಂತರ
ಎಲ್ಲರಲ್ಲೂ ಏನೋ ಬದಲಾವಣೆ ಬಂದಿದೆ.ಮೊದಲಿನಂತೆ ಸ್ನೇಹ ಕೂಟಗಳಿಲ್ಲ, ಮೇಲಿಂದ ಮೇಲೆ ಸ್ನೇಹಿತರ ಭೇಟಿಗಳಿಲ್ಲ,ಒಮ್ಮೊಮ್ಮೆ ಅವು ಸಾಧ್ಯವಾದರೂ ಹೆಚ್ಚು ಜನ, ಹೆಚ್ಚು ಸಮಯ ಇರುವದಿಲ್ಲ.ಬಹುಶಃ
ಮೊದಲಿನಂತೆ ಆಗಲು ಇನ್ನೂ ಕೆಲ
ಸಮಯದ ಅವಶ್ಯಕತೆ ಇದೆ ಏನೋ!
ಆದರೂ ಅಂಥ  ಚಿಕ್ಕ ಪುಟ್ಟ ಆಕಸ್ಮಿಕ ಭೇಟಿಗಳಿಗೂ ಎಲ್ಲರೂ ಸ್ಪಂದಿಸುತ್ತಿರುವದು ಅಪೇಕ್ಷಣೀಯ...
        ‌‌'ಈ ಹೊತ್ತಿಗೆ' ಸಂಘಟಿಸಿದ  'ಅವಳ ಕಾಗದ' ನಾಟಕದ ಏಕವ್ಯಕ್ತಿ
ಪ್ರಯೋಗದ ಎರಡು ಪ್ರಯೋಗಗಳನ್ನು
ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಿದ
Post ಮೊದಲ ಬಾರಿ ಬಂದಕೂಡಲೇ
ಮೊದಲ ಕೆಲಸ ಎಂದರೆ tickets book ಮಾಡಿದ್ದು.ಅದೂ ಮೊದಲ ಶೋಕ್ಕೆ.ನಂತರ ಯಾರು ಯಾವ ಆಟಕ್ಕೆ
ಬರ್ತಾರೆ, ಸ್ವಲ್ಪು ಹೆಚ್ಚು ಸಮಯ ದಕ್ಕಲು ಯಾವ ಆಟ ಉತ್ತಮ ೦

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...