Monday, 22 May 2023

ಮಾತುಗಳು ಮಾತ್ರ 'ಮಾಮೂಲು...'
ಪ್ರೀತಿಯಲ್ಲ...
          ‌  
-"ನಮಸ್ಕಾರ್ರೀ ಟೀಚರ್, ನನ್ನ ಗುರ್ತು
ಸಿಕ್ತೇನ್ರಿ?"
- ಟೀಚರ್ ,ನಾನು ನಿಮ್ಮ 82 batch
Student ರೀ...
- ನಮಗ ನೀವು ಎರಡು ವರ್ಷ English ಕಲಿಸೀರಿ...
- Pls, ಒಂದು selfee ರಿ ಟೀಚರ್, ನಮ್ಮ WA ಗುಂಪಿಗೆ ಹಾಕ್ತೇನ್ರಿ...
         ಹತ್ತಾರು ಮಕ್ಕಳು, ನೂರಾರು ನೆನಪುಗಳ ಕದಡುವಿಕೆ. ಮೂವತ್ತು ವರ್ಷಗಳ ಕಲಿಕೆಯ ಫಸಲು ಕಣ್ಣೆದುರು ನಳನಳಸಿದಾಗ ಆಗುವ ಸಂತೋಷವೇ ಬೇರೆ...ನಡುನಡುವೆ
ಗೊಂದಲದ ಗಾಬರಿ, ಯಾರ ಹೆಸರು ಯಾರಿಗೋ? ಯಾರ ನೆನಪು ಇನ್ನಾರಿಗೋ ಅಂಟಿಸಿ,ಅವರು ಅದನ್ನು
ತಿದ್ದುಪಡಿ ಮಾಡಿ ನೇರವಾಗಿಸುವದು,
ಇಂಥದ್ದಂತೂ ಇದ್ದದ್ದೇ...
              ಸಂದರ್ಭ: ಅಣ್ಣನ ಮಗನ ಮನೆಯ ವಾಸ್ತುಶಾಂತಿ .ಅಣ್ಣನ ಮಕ್ಕಳು, ಸೊಸೆ ಕೂಡ ನನ್ನದೇ ವಿದ್ಯಾರ್ಥಿಗಳು.ಹೀಗಾಗಿ ಆಮಂತ್ರಿತ ರೆಲ್ಲರೂ ಪರಿಚಿತ ವಿದ್ಯಾರ್ಥಿಗಳು  ಇಲ್ಲವೇ ಅವರ ಪಾಲಕ ವರ್ಗ... ಅಲ್ಲದೇ  ಧಾರವಾಡದ ನನ್ನ 
ನಲವತ್ತಕ್ಕೂ ಮೀರಿದ ವರ್ಷಗಳ ವಾಸ್ತವ್ಯ, ಮೂವತ್ತು ವರ್ಷಗಳ ಶಿಕ್ಷಕ
ವೃತ್ತಿ ಎರಡೂ ಹೆತ್ತುಕೊಟ್ಟ ಸಾವಿರಾರು 
ನೆನಪುಗಳು.ಅಂದ ಹಾಗೆ ನನ್ನ ನೆನಪಿನ ಶಕ್ತಿಯ ಬಗ್ಗೆ ನನಗೇ ನಂಬಿಕೆಯಿಲ್ಲ. ಭರ್ತಿ ಹರಯದಲ್ಲಿಯೇ ಸಾರಿಗೆ ಚಹಾ ಪುಡಿ/ ಚಹಕ್ಕೆ ಮಸಾಲೆ ಪುಡಿ ಹಾಕುವ /ಕಣ್ಣುಗಳ ಮೇಲೆ  ಚಸ್ಮಾಹಾಕಿಕೊಂಡು ಅದನ್ನೇ ಅರ್ಧಗಂಟೆ ಅದನ್ನೇ ಹುಡುಕುವಷ್ಟು ಮರೆಗುಳಿತನ..
ಅಂಥದರಲ್ಲಿ ಹದಿಮೂರರಿಂದ ಹದಿ ನಾರರ ವಯಸ್ಸಿನಲ್ಲಿ ಕಲಿತ ಮಕ್ಕಳು ಗುಂಪುಗೂಡಿ ಬಂದು ಎಪ್ಪತ್ತೆಂಟರ ನನ್ನ ನೆನಪಿನ ಶಕ್ತಿಯ ಪರೀಕ್ಷೆ ತೆಗೆದುಕೊಳ್ಳತೊಡಗಿದರೆ ನನ್ನ ಗತಿ ಏನಾಗಬೇಡ...!!!
  ‌           ‌   ಆದರೆ ಅಂಥ ಘೋರ ಪ್ರಮಾದಗಳೇನೂ ಆಗಲಿಲ್ಲ.ಆದದ್ದೆಲ್ಲ ಒಳಿತೇ ಆಯಿತು.ನನ್ನ ವಿದ್ಯಾರ್ಥಿಗಳ ಮರು ಪರಿಚಯ/ ಅವರ ಕುಟುಂಬಗಳ ಪರಿಚಯ/ಹಳೆಯ ಘಟನೆಗಳ ಚರ್ವಿತ ಚರ್ವಣ,ಅಸಂಖ್ಯ ಆಮಂತ್ರಣಗಳು ಹೀಗೆ...
         ಒಟ್ಟು ಮೂರು ದಿನಗಳ ಕಾರ್ಯಕ್ರಮಗಳು - ಮೊದಲ ದಿನ ಗ್ರಹಹೋಮ, ಮರುದಿನ ಗ್ರಹ ಪ್ರವೇಶ,
ಮೂರನೇ ದಿನ‌ Social Gathering.
ಪ್ರತಿದಿನ ಬೇರೆ ಬೇರೆ ಜನರ ಭೇಟಿಯ ಸಂಭ್ರಮ...
             ಒಟ್ಟಿನಲ್ಲಿ ಹೇಳಬೇಕೆಂದರೆ ಕೋವಿಡ್ಡೋತ್ತರದಲ್ಲಿ ಮತ್ತೆ ಕೋವಿಡ್ ಪೂರ್ವದ ನೆಮ್ಮದಿಯ ದಿನಗಳಿಗೆ  ನಾವೆಲ್ಲ ಮರಳುತ್ತಿರುವದು ಕಡಿಮೆ ಖುಶಿಯೇನೂ ಅಲ್ಲ...

         ಅದಕ್ಕೇ ಹೇಳಿದ್ದು- " ಮಾತುಗಳು
ಮಾಮೂಲಾಗಿರಬಹುದು ಖಂಡಿತ ಪ್ರೀತಿಯಲ್ಲ."

                

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...