Wednesday 27 January 2021

೩೪. ದೇವರ ಆಟ ಬಲ್ಲವರಾರು? ಆತನ ಎದುರು ನಿಲ್ಲುವರಾರು??



" ನನಗೂ ನಮ್ಮನೇಯವರಿಗೂ ಹದಿಮೂರು ವರ್ಷಗಳ ಅಂತರ ಕೃಷ್ಣಾ..."

"ಆಗೆಲ್ಲ ಹಾಗೇ ಅಲ್ವಾ ಇದ್ದದ್ದು...ನಮಗೂ ಹತ್ತು ವರ್ಷಗಳ ಅಂತರವಿತ್ತು. ಆಗ ವಯಸ್ಸು ನೋಡುತ್ತಲೇ ಇರಲಿಲ್ಲ, ವರನ ಗುಣ, ಶಿಕ್ಷಣ, ಮನೆತನ, ಸಂಸ್ಕಾರ, ಇದು ಹೆಚ್ಚು ಮುಖ್ಯವಾಗ್ತಾಯಿತ್ತು. ಕೂಡು ಕುಟುಂಬದಲ್ಲಿ ಹೊಂದಿಕೊಂಡು ಹೋಗುವುದಕ್ಕೆ ಆದ್ಯತೆ ಹೆಚ್ಚಾಗಿತ್ತು ಅಲ್ವಾ? "

"ಹೌದು, ಹಾಗಂತಲೇ ನಮಗೂ ಅದು
ಚಿಂತೆಯ ವಿಷಯವೇ ಆಗಿರಲಿಲ್ಲ." 
         "ಒಂದು ಗಂಡು, ಒಂದು ಹೆಣ್ಣು ಹೇಗೋ ಏನೋ ಕೂಡಿ ಕೊಂಡು" ಅಂತಾರಲ್ಲಾ, ಆ ಥರಾ".

"ಅದೂ  ಒಂದು ರೀತಿಯಲ್ಲಿ  ಸರೀನೇ ಅನಿಸುತ್ತದೆ ಅಲ್ವಾ, ಕೆಲವೊಂದು ಸಲ..."

"ಹೌದು ಕೃಷ್ಣಾ, Everything happens with a reason, ಅನ್ನೋ ಹಾಗೆ ಪ್ರತಿಯೊಂದು ವಿಷಯಕ್ಕೂ ಎರಡು ಮಗ್ಗಲು ಇದ್ದೇ ಇರುತ್ತವೆ ,- ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಸುಧಾರಿಸಿ ಕೊಂಡು, ಅನುಸರಿಸಿಕೊಂಡು ಹೋಗಲೇಬೇಕಾದುದೇ ಅಂತಿಮ ಸತ್ಯ. ಬದುಕು ಸಹ್ಯವಾಗಬೇಕು ಎಂದರೆ  ಸ್ವಲ್ಪ ಮಟ್ಟಿಗೆ ರಾಜಿಯಾಗದೇ ಅನ್ಯ ಮಾರ್ಗವಿಲ್ಲ."

ಹೀಗೇ  'ಹಾಗೇ ಸುಮ್ಮನೇ' ನಡೆದ ಇಬ್ಬರು ಗೆಳತಿಯರ ಹರಟೆಯ ಮಂಥನದಿಂದ ಹೊರಟ ನವನೀತ ಶುಭ್ರವಷ್ಟೇ ಅಲ್ಲ, ರುಚಿಯೂ ಹೆಚ್ಚಿದ್ದುದು ಗಮನಕ್ಕೆ ಬಂದಾಗ ನಿಜವಾಗಿಯೂ ಚಿಂತನೆಗೆ ಹಚ್ಚಿದ್ದು ಸುಳ್ಳಲ್ಲ...

ನನ್ನ, ಈ ಗೆಳತಿಯ ಪರಿಚಯ  ಆರು ವರ್ಷಗಳಷ್ಟು ಹಳೆಯದು. ಈ ಮನೆಗೆ ಹೊಸದಾಗಿ ಬಂದಾಗ, ಕಾಲನಿಯ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆದ ಪರಿಚಯ, ಹೂವಾಗಿ, ಹಣ್ಣಾಗಿ, ಪಕ್ವವಾದದ್ದು. ಒಬ್ಬರ ಮನೆಗೊಬ್ಬರು ಹೋಗಿ, ಬಂದು ಮಾಡಿ ಪರೀಕ್ಷಿಸಿ ನೋಡಿದ್ದು. ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬುಗೆಗೆ  ಇಂಬು ಕೊಟ್ಟಿದ್ದು. ಹೀಗಾಗಿ ನಮ್ಮ ಮಾತುಗಳು ಔಪಚಾರಿಕತೆಯ ಪರಿಧಿ ಮೀರಿ  ವೈಯಕ್ತಿಕವಾಗಿ ವ್ಯಾಪ್ತಿ ಹೆಚ್ಚಿಸಿ ಕೊಂಡದ್ದು...

     ಅವರ ಮನೆಯೊಂದು 'ನಂದಗೋಕುಲ' ಅಂತಾರಲ್ಲಾ ,ಹಾಗೇ. ಎಲ್ಲರೂ ಸದಾ ಹಸನ್ಮುಖಿ ಗಳು. ಅಂತೆಯೇ ಸದಾ ಸುಖಿಗಳು. ಒಬ್ಬರಿಗೊಬ್ಬರು ಮಿಡಿಯುವ ರೀತಿ ನೋಡಿಯೇ ಕಲಿಯಬೇಕು. 'ಪಡೆಯುವದಕ್ಕೆ'  ಅಲ್ಲ, 'ಬಿಟ್ಟು ಕೊಡುವುದಕ್ಕೆ' ಸದಾ  ಪೈಪೋಟಿ.
ಯಾರೇ ,ಯಾಕಾಗಿಯೇ, ಯಾವಾಗಲೇ ಅವರ ಮನೆಗೆ  ಹೋಗಲಿ, ಮನದಾಳದ ಆತಿಥ್ಯ ಗ್ಯಾರಂಟಿ...
  
 "ಮೊದಮೊದಲು ನಮಗೆ ನಮ್ಮ ವಯಸ್ಸಿನ ಅಂತರ ಕಾಡುವದು ಸ್ವಾಭಾವಿಕ. ದಿನಗಳೆದಂತೆ  ಹಾಗಿರುವದಕ್ಕೂ ಅರ್ಥವಿದೆ ಅನಿಸುತ್ತದೆ. ಹಿಂದಿನಕಾಲದವರು ದಡ್ಡರಲ್ಲ. ಯೋಚಿಸಿಯೇ ಪದ್ಧತಿಗಳನ್ನು ರೂಪಿಸಿದ್ದಾರೆ. ಗಂಡ , ಹೆಂಡತಿ ಹೇಗಿದ್ದರೂ ಯೌವನದ ದಿನಗಳು , ತಂತಾನೇ ಕಳೆದು ಹೋಗುತ್ತವೆ. ಮನೆ, ಮಕ್ಕಳು, ಉದ್ಯೋಗದಂಥ ಅವಶ್ಯಕತೆಗಳಿಗೆ  ಸಮಯದ ಹೆಚ್ಚಿನ  ಪಾಲು ಕೊಡಲೇ ಬೇಕಾಗುವುದರಿಂದ  ಉಳಿದ ಕೊರತೆಗಳು ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿಯುತ್ತವೆ. ಪ್ರಶ್ನೆ ಬರುವುದು ಜವಾಬ್ದಾರಿ ಎಂಬುದು ಒಂದು ಹಂತಕ್ಕೆ ಬಂದು ಇಬ್ಬರಿಗೂ ವಯಸ್ಸಾಗತೊಡಗಿದಾಗ... ಒಬ್ಬರಿಗೊಬ್ಬರು ಅರಿತುಕೊಂಡು ಮನೆಯ ಸಮಸ್ಯೆಗಳನ್ನು ಗ್ರಹಿಸಿ ಸಾಮರಸ್ಯ ಕಾಯ್ದುಕೊಳ್ಳಲು ಶ್ರಮಿಸಬೇಕಾಗುವ ಹಂತ (ಪ್ರಸಂಗ) ಬಂದಾಗ. ಆಗ ಹಟ , ಅಹಂ, ದುರಭಿಮಾನ ಕಿಂಚಿತ್ತೂ ಉಪಯೋಗಕ್ಕೆ ಬರುವುದಿಲ್ಲ. ಕೊಳ್ಳುವದಕ್ಕಿಂತಲೂ ಕೊಡುವುದು ಹೆಚ್ಚಾಗಬೇಕಾಗುತ್ತದೆ. ಅಂದಾಗ ಮಾತ್ರ ಸಂಸಾರ ಒಗ್ಗಾಲಿ ಆಗುವುದಿಲ್ಲ. ಈಗ ನೋಡಿ, ನಮ್ಮ  ವಯಸ್ಸಿನ  ಅಂತರ ಕಡಿಮೆ ಇದ್ದು  ನನಗೂ ಅವರಷ್ಟೇ ವಯಸ್ಸಾಗಿದ್ದರೆ ಯಾರು ಯಾರಿಗೆ ಆಪತ್ಕಾಲದಲ್ಲಿ /ಅನಾರೋಗ್ಯದಲ್ಲಿ ಮಾಡಬೇಕಾಗಿತ್ತು.? ಹೇಳಿ. ಚಿಕ್ಕವಳಾಗಿದ್ದಕ್ಕೆ ತಾನೇ ನಾನು ಅವರಿಗೆ ಮಾಡಬಲ್ಲೆ, ಮಕ್ಕಳಿಗೂ ಅವರವರ ಬದುಕು, ತಮ್ಮವೇ ಜವಾಬ್ದಾರಿ ಇರುವುದಿಲ್ಲವೇ? ಅವರೂ ಎಷ್ಟೂಂತ  ಮಾಡಬಹುದು?" ದೇವರು ಜಾಣ. ಯಾರನ್ನು ಹೇಗಿಡಬೇಕು ಎಂಬುದನ್ನು ಅವನಷ್ಟು ಚೆನ್ನಾಗಿ ಬಲ್ಲವರಾರು? ಅಲ್ವಾ!?

ಹೀಗೆ ನನ್ನ ಆ ಗೆಳತಿ ಹೇಳುತ್ತಾ ಹೋದರೆ
ಯಾರೂ ಆ ಕ್ಷಣಕ್ಕೆ ಅದನ್ನು ಒಪ್ಪಲೇಬೇಕು, ಹಾಗಿರುತ್ತದೆ ಅವರ ಮಾತುಗಳು.ನಾನು ಅವರ ಮನೆಯಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಗಂಡನ ಆರೋಗ್ಯ ಸಮಸ್ಯೆ ಶುರುವಾದ ಮೇಲಂತೂ  ಅವರು ' 'ಮಗು'ವಾಗಿ ಬಿಟ್ಟಿದ್ದರು.ಹೆಂಡತಿಯ ಮೇಲೆ ಮಾನಸಿಕವಾಗಿ ಸಂಪೂರ್ಣ ಅವಲಂಬಿಸುವಂತಾಗಿತ್ತು. ಹೆಂಡತಿ ಅರೆಕ್ಷಣ ಆಚೀಚೆ ಆದರೂ ಗಾಬರಿ ಬೀಳುತ್ತಿದ್ದರು. ಅವರು ಎದುರಿಗೆ ಕಂಡಾಗ  ಗಂಡನ ಅರಳಿದ ಕಣ್ಣುಗಳನ್ನೊಮ್ಮೆ ನೋಡಬೇಕು. ತಮ್ಮಿಂದ  ಹೆಂಡತಿಗೆ ಸ್ವಲ್ಪ ತೊಂದರೆಯಾಗುತ್ತದೆ ಎಂಬುದು ತಿಳಿಯುತ್ತಿತ್ತು, ಆದರೆ ಅದನ್ನು ಗೆಲ್ಲುವುದು ಅವರ ಸಾಮರ್ಥ್ಯಕ್ಕೆ ಮೀರಿದ ಮಾತಾಗಿತ್ತು.ನನ್ನ ಗೆಳತಿಯೂ ಕೂಡ ಗಂಡನನ್ನು ಆರಾಮವಾಗಿರಿಸಲು ಸದಾ ಯಾವ ತ್ಯಾಗಕ್ಕೂ ಸಿದ್ಧರಿರುವದು  ಅಚ್ಚರಿ ತರುತ್ತಿತ್ತು .ಅವರ ಕಿರಿಕಿರಿ, ಕೊಂಚ ಪ್ರಮಾಣದ ಹಟ, ನೋಡುವವರಿಗೆ 
ಅತಿ ಅನಿಸಿದರೂ ಹೆಂಡತಿ ಮಾತ್ರ  ಅದನ್ನೇ ಅಕ್ಕರೆ, ಕಕ್ಕುಲಾತಿಯಿಂದ ನಮಗೆ  ಹೇಳುವಾಗ ಆ ಮಹಾತಾಯಿ ತಾನು ಹುಟ್ಟಿದ್ದು ಸಾರ್ಥಕವಾಯಿತೆಂಬಂತೆ ಧನ್ಯರಾಗುತ್ತಿದ್ದರು. ಆಗ ನನಗನಿಸಿದ್ದು 
" ಸುಖ, ನೆಮ್ಮದಿ  ಒಂದು ಮಾನಸಿಕ ಸ್ಥಿತಿ.  ಅದನ್ನು ಹೊರಗೆ ಹುಡುಕಲಾಗದು"  ಎಂದು.

ಇಂದು ಆ ಹಿರಿಯರು ತೀರಿಕೊಂಡು ಹತ್ತನೇ ದಿನ. ವೈಕುಂಠ ಸಮಾರಾಧನೆಗೆ
ಆಮಂತ್ರಣ ಬಂತು. ಹಾಗಾಗಿ ನೆನಪಿನ ಗಾಲಿ ಒಂದು ಸುತ್ತು ತಿರುಗಿ ನಿಂತಿದ್ದು ಹೀಗೇ.

Sunday 17 January 2021

೩೨." ಈ ಬ್ರಹ್ಮಾಂಡವೇ ಆ ದೇವನಾಡುವಾ ಬೊಂಬೆಯಾಟವಯ್ಯಾ..."

ಡಾ, ಶಿವರಾಮ ಕಾರಂತರು ತಮ್ಮ 20 ವರ್ಷದ ತುಂಬು ಹರೆಯದ ಮಗನನ್ನು ಕಳೆದುಕೊಂಡಾಗ ಅವರ ಸಾಹಿತಿ ಮಿತ್ರರೊಬ್ಬರು ಸಂತಾಪ ಸೂಚಕ ಪತ್ರವೊಂದನ್ನು ಬರೆದಿದ್ದರಂತೆ. ಅದಕ್ಕೆ ಧನ್ಯವಾದ ಸೂಚಿಸಿ ಮರು ಓಲೆ ಬರೆದ  ಕಾರಂತರು ," ನಿಮ್ಮ ಪತ್ರಕ್ಕೆ ಧನ್ಯವಾದಗಳು. ಆದರೆ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡವ ಈ ಜಗತ್ತಿನಲ್ಲಿ ನಾನೊಬ್ಬನೇ ಅಲ್ಲ, ಮೊದಲಿಗನೂ ಅಲ್ಲ, ಇನ್ನೂ ಅನೇಕರು ಅನುಭವಿಸಿದ ನೋವಿದು ಎಂಬ ಅರಿವು ನನಗಿದೆ" ಎಂದು  ಉತ್ತರಿಸಿದ್ದರಂತೆ.

           ಇಂಥ ಅರಿವು, ಸ್ಥಿತಪ್ರಜ್ಞತೆ ಎಲ್ಲರ ಕೈಯೊಳಗಿನ ತುತ್ತಲ್ಲ. ಅದಕ್ಕೆ ವಿಶೇಷ ಪ್ರಜ್ಞೆ ಬೇಕು. ಮನಸ್ಸು, ಬುದ್ಧಿಗಳ ಪರಿಪಕ್ವ ಮೇಳ ಬೇಕು. ಅವೆರಡರ ಮೇಲೂ ಒಂದು 'ಬಿಗಿ ಹಿಡಿತ' ಬೇಕು.

ನಾವು ಶಾಲೆಯಲ್ಲಿದ್ದಾಗ ಒಂದು ಆಟವಾಡುತ್ತಿದ್ದೆವು. ಕಾಗದ, ಇಲ್ಲವೇ ಪಾಟಿಯ ಮೇಲೆ ಒಂದು ಗೆರೆಯಳೆದು ಎದುರಿನವರು ಅದನ್ನು ಮುಟ್ಟದೇ ಸಣ್ಣದಾಗಿಸಬೇಕೆಂಬುದು ನಮ್ಮ ಕರಾರು. ಬಹಳ ಜನರಿಗೆ ಗೊತ್ತಾಗುತ್ತಿರಲಿಲ್ಲ. ಯಾರೋ ಒಬ್ಬಿಬ್ಬರು ಅದರ ಕೆಳಗೆ ಒಂದು ಅದಕ್ಕೂ ದೊಡ್ಡ ಗೆರೆ ಎಳೆದಾಗ 
ಮೊದಲಿನದು ತಂತಾನೇ ಚಿಕ್ಕದಾಗುತ್ತಿತ್ತು...

ಬಹುಶಃ ಆ ದೇವರಿಗೂ ಈ ಆಟ ಗೊತ್ತು
ಎನಿಸುತ್ತದೆ. ಡಿಸೆಂಬರ್ ೧೮ ನೇ ತಾರೀಖು ಅರ್ಧ ಗಂಟೆಯಲ್ಲಿ ಬರುತ್ತೇನೆ ಎಂದು ಹೊರಬಿದ್ದ ನನ್ನ ತಮ್ಮ ಮರಳಿ ಮನೆಗೆ ಬಂದದ್ದು  ಪಾರ್ಥಿವ  ಶರೀರದ ರೂಪದಲ್ಲಿ. ನಾವಷ್ಟೇ ಏಕೆ, ಯಾರೊಬ್ಬರೂ ಊಹಿಸಿರದ ರೀತಿಯಲ್ಲಿ... ಅದನ್ನು ಅರಗಿಸಿಕೊಳ್ಳಲು
ಸಾಧ್ಯವೇಯಿಲ್ಲ ಎಂಬಂಥ ಸ್ಥಿತಿಯಲ್ಲಿ.
ಆ ಮಾತಿಗೆ ತಿಂಗಳೂ ಆಗಿಲ್ಲ, ಧಾರವಾಡದ bypass ರಸ್ತೆಯ ಅಪಘಾತಕ್ಕೆ ದಾವಣಗೆರೆಯ ಹನ್ನೆರಡು ಮಹಿಳೆಯರು ಬಲಿ, ಮೂವರು ಗಂಭೀರ ವಾಗಿ ಗಾಯಗೊಂಡವರು. ಎಲ್ಲರದೂ ೪೦/೪೫ರ ಆಸುಪಾಸಿನ ವಯಸ್ಸು.
ಬದುಕಿನ ಸಂಘರ್ಷದ ಮೊದಲ ಹಂತ ಮುಗಿಸಿ,  ಹರೆಯದ ಮಕ್ಕಳ ಕಣ್ಣಿನ ಕನಸುಗಳಿಗೆ ಬಣ್ಣ ತುಂಬುವ  ಕಾಯಕದ
ಸಿದ್ಧತೆಯಲ್ಲಿದ್ದವರು. ನಡುವೆ ಕಷ್ಟಪಟ್ಟು ತಮ್ಮದಾಗಿಸಿಕೊಂಡ ತುಸು ವೇಳೆಯನ್ನು
ಮಜವಾಗಿ ಕಳೆಯುವ ಕನವರಿಕೆಯಲ್ಲಿ
ಅಲ್ಪಕಾಲಿಕ ಪ್ರವಾಸಕ್ಕೆಂದು ಹೊರಟವರು...ಮೂರೇ ಗಂಟೆಗಳಲ್ಲಿ
ಅವರ ದುರಾದೃಷ್ಟ ಕರೆದುಕೊಂಡು ಹೋದ  ಜಾಗ ಮತ್ತೆಂದೂ ಮರಳಿ ಬರಲಾರದಂತಾದುದು  ಯಾವ ಪಾಪಕ್ಕಾಗಿ ???ಯಾರು ಹೇಳಬೇಕು???
ಈ ದೊಡ್ಡ ದುರಂತ ನಮ್ಮ ವೈಯಕ್ತಿಕ ನಷ್ಟವನ್ನು ಕೆಲಕಾಲ ಬದಿಗೆ  ಒತ್ತಿದ್ದೇನೋ ಹೌದು. ಅದೇ ದೊಡ್ಡ ಗೆರೆಯೊಂದು  ಪಕ್ಕದ  ಸಣ್ಣ ಗೆರೆಯನ್ನು ಚಿಕ್ಕದಾಗಿಸಿದಂತೆ.

ಹಿಂದೆ ಹತ್ತನೇ ವರ್ಗದವರಿಗೊಂದು ಆಂಗ್ಲ  ಕವಿತೆಯಿತ್ತು.'MOTHER' ಎಂದು ಹೆಸರು. ಅದು  mother/ ಹಾಗೂ mother nature  ಎರಡರ ನಡುವಿನ ಸಾಮ್ಯತೆಯ ಕುರಿತಾದದ್ದು. ತಾಯಿ ಮಕ್ಕಳ ಆನಂದಕ್ಕಾಗಿ ಆಡಲು ಆಟಿಗೆ ಕೊಡಿಸಿ ಆಡಲೆಂದು ಬಿಡುತ್ತಾಳೆ. ಮಗು ಚಂದಾತಿಚಂದದ ಆಟಿಗೆಗಳಿಂದ 
ಆಕರ್ಷಣೆಗೊಂಡು ಇಡೀ ದಿನ ಅವುಗಳೊಂದಿಗೆ ಆಡುತ್ತದೆ .ರಾತ್ರಿಯಾಗಿ ದೇಹ/ ಮನಸ್ಸು ಪೂರ್ತಿ ದಣಿದು, ಬಂದ ನಿದ್ರೆಯನ್ನು ಹಿಮ್ಮೆಟ್ಟಿಸಿ ತೂಕಡಿಸಿದರೂ
ಅಪ್ಪಿ ಹಿಡಿದ ಆಟಿಗೆಗಳ ಹಿಡಿತ ಸಡಲಿಸುವುದಿಲ್ಲ. ಬೇರೆ ಮಾರ್ಗವೇ ಇಲ್ಲದೇ ತಾಯಿ ಮಗುವನ್ನು ರಮಿಸಿ, ಮುದ್ದು ಮಾಡಿ, ಮರುದಿನ ಹೊಸ  ಆಟಿಕೆಗಳ  ಭರವಸೆ ಕೊಟ್ಟು ಮಲಗಿಸಲು ಕರೆದೊಯ್ಯುತ್ತಾಳೆ.
ಈ ಹೋಲಿಕೆ ಕೊಟ್ಟು ಕವಿ ಮನುಷ್ಯ ನನ್ನು ಮಗುವಿಗೆ, ಅವನ ಐತಿಕ ಭೋಗದ ವಸ್ತುಗಳನ್ನು ಆಟಿಗೆಗೆ, ರಾತ್ರಿ ನಿದ್ದೆಯನ್ನು ' ಸಾವಿಗೆ'  ಸಮೀಕರಣಗೊಳಿಸಿ ಬರೆದ ಸುಂದರ ಕವನವದು. 8/10 ವರುಷ  ಶಾಲಾ ಮಕ್ಕಳಿಗೆ ನಿರ್ಭಾವುಕವಾಗಿ  ಕಲಿಸಿದ್ದರೂ
ಈಗ  ನನಗೆ  ಬದುಕು ಅದನ್ನೇ ದಿನನಿತ್ಯ
ಕಲಿಸುತ್ತಿದೆ.

"ಆಡಿಸಿದಾತ ಬೇಸರ ಬಂದು ಆಟ ಮುಗಿಸಿದ" ಎನ್ನುತ್ತಾರಲ್ಲ, ಥೇಟ್ ಹಾಗೆಯೇ ಘಟನೆಗಳು ನಡೆಯುತ್ತವೆ ಎಂದು ಎಷ್ಟೇ  ಅಂದುಕೊಂಡು ,ಸಮಾಧಾನ ಮಾಡಿಕೊಂಡರೂ  ಇಂಥ ಆಘಾತಗಳನ್ನು ಗೆಲ್ಲುವುದು ಕಷ್ಟಸಾಧ್ಯ, ಬಹುತೇಕ ಅಸಾಧ್ಯ. ಅತೀವ  ವಯಸ್ಸಾಗಿದ್ದರೆ, ತೀವ್ರ ತರದ ಅನಾರೋಗ್ಯ ಕಾಡುತ್ತಿದ್ದರೆ, ಆ ಮಾತು ಬೇರೆ. ಸಂಬಂಧಿಸಿದವರಿಗೆ ಸ್ವಲ್ಪವಾದರೂ ಮಾನಸಿಕ ತಯಾರಿ ಇರುತ್ತದೆ ಎನ್ನಬಹುದು. ಆದರೆ ' ಗುಬ್ಬಿಯೊಂದು ಹಾರಿಬಂದು ಗಬಕ್ಕನೇ ಕೈ ತುತ್ತನ್ನು ಕಸಿದುಕೊಂಡು ಹೋದಂತೆ'-
 ಘಟನೆ ನಡೆದರೆ ಸಂಬಂಧಿಸಿದವರು
ಅನುಭವಿಸಬೇಕಾದ ನೋವು ಮಾತ್ರ 
ಅಪಾರ...

 ‌ ‌.           

Friday 8 January 2021

೩೩ ."ಅವಳ ತೊಡಿಗೆ ಇವಳಿಗಿಟ್ಟು..."



         ‌‌‌   ‌  ನನ್ನ ಲೇಖನಗಳನ್ನು ಓದಿದವರಿಗೆ ಒಂದು ಮಾತು ಸ್ಪಷ್ಟವಾಗಿ ಗೊತ್ತಿದೆ.  ನನ್ನ ಸ್ವಂತ ಲೇಖನಗಳಷ್ಟೇ
, ಕೆಲವೊಮ್ಮೆ ಅದನ್ನೂ ಮೀರಿ ಅನುವಾದಿತ  ಲೇಖನಗಳಿವೆ. ಅದಕ್ಕೆ ಕಾರಣವನ್ನೂ ಆಗಾಗ ಹೇಳುತ್ತಲೇ ಬಂದಿದ್ದೇನೆ...

    ‌‌‌‌‌‌‌‌‌‌    ‌‌‌‌        ‌‌‌‌‌‌‌‌‌‌   ಪದವಿಗೆ, ನಂತರದ  BEd ಗೆ,  ಆ ನಂತರದ  ಶಿಕ್ಷಕ ವೃತ್ತಿಗೆ ಆಯ್ದುಕೊಂಡ  ವಿಷಯಗಳು ಮೂರು,- English _ Major,  /Hindi_ minor,/ ಆಸಕ್ತಿಯ  ಭಾಷೆ  ಮಾತೃಭಾಷೆ
 ಕನ್ನಡ. ಮೂರರಲ್ಲೂ ಸಾಹಿತ್ಯ ಓದಿದಾಗ ಸ್ವಾಭಾವಿಕವಾಗಿ  ವಿಷಯಗಳ ಸಾಮ್ಯ, ವೈಷಮ್ಯಗಳ ಅರಿವಾಗತೊಡಗಿತು.
ಉತ್ತಮವಾದುದನ್ನು ಇನ್ನೊಂದು ಭಾಷೆಯಲ್ಲಿ  ಪುನರ್ಸೃಷ್ಟಿಸುವ  ಆರೋಗ್ಯಕರ ಹವ್ಯಾಸ ಬೆಳೆಯಿತು. ಕಲಿಸುವ ಭಾಷೆಗಳ ಕೊನೆಗೆ ಅಂಥ ಭಾಷಾಂತರ ಚಟುವಟಿಕೆಗಳನ್ನು ಸೇರಿಸಿದ್ದೂ ಒಂದು plus point ಆಗಿ ಮಕ್ಕಳಿಗೆ ತುಲನಾತ್ಮಕ ಅಭ್ಯಾಸಕ್ಕೆ ಸಹಾಯಕವಾಯಿತು.  IN LONDON TOWN  ಕವಿತೆಯನ್ನು ' ಹೀಗೋಂದು ಊರಾಗ ' ಎಂದು ಅನುವಾದಿಸಿದ್ದನ್ನು ಆಕಾಶವಾಣಿಯವರು ಆಯ್ದ ಕಾರ್ಯಕ್ರಮಗಳಡಿ ತಮ್ಮ ವಾರ್ಷಿಕ ಕಾರ್ಯಕ್ರಮದಂದು ಶ್ರೀ ಇಂದುಹಾಸ ಜೇವೂರವರ ನಿರ್ದೇಶನದಲ್ಲಿ ರಂಗಕ್ಕೆ ತಂದುದು ಮುಖ್ಯಹೆಜ್ಜೆಯಾಯಿತು.
ಪ್ರಥಮ ಸಲದ ನನ್ನ' ಅಮೇರಿಕಾ ಪ್ರವಾಸದ ಅನುಭವದ ಇಂಗ್ಲಿಷ  ಕವನ ' ಮಂಥನ' ದ ಕನ್ನಡ ಅನುವಾದ ' ಅಕ್ಕ'  (America Kannad KootA)  ಹೊರತಂದ ಸ್ಮರಣಸಂಚಿಕೆಯಲ್ಲಿ
ಸ್ಥಾನ ಪಡೆದುದು ,' ಶಾಂತತಾ ಕೋರ್ಟ ಚಾಲೂ ಆಹೆ' ನಾಟಕಕ್ಕೆಅನುವಾದಿಸಿದ 
ಇಂಗ್ಲಿಷ ಕವನದ ಅನುವಾದ ಶ್ರೀ ಶ್ರೀನಿವಾಸ ಜೋಶಿ ಯವರ 'ರಂಗನಾದ' ಧ್ವನಿಸುರುಳಿಗೆ ಆಯ್ಕೆಯಾದದ್ದು ಮತ್ತೆರಡು ಮೈಲುಗಲ್ಲುಗಳು.

  ‌‌‌ ‌     ‌       ‌‌‌‌       ಇದರಿಂದ ಪ್ರೇರಿತಳಾಗಿ ಹೆಚ್ಚು ಕಡಿಮೆ ನಾನು ಕಲಿತ ,ಕಲಿಸಿದ ಎಲ್ಲ ಕವನಗಳನ್ನೂ ಅನುವಾದಿಸಿ ಇನ್ನೇನು print ಗೆ ( ಪೂರ್ವ- ಪಶ್ಚಿಮ) ಹಾಕಬೇಕೆಂದು ಹೋಗುವಾಗ  Railway  Station  ಬಸ್ನಲ್ಲಿ ಕಳೆದುಕೊಂಡೆ. ಪುನಃ ದೊರಕಿಸಲು ಮಾಡಿದ ಪ್ರಯತ್ನಗಳು ಫಲಿಸದ ಹಿನ್ನೆಲೆಯಲ್ಲಿ ಆದ ತೀವ್ರ ನಿರಾಶೆ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಕೆಲದಿನ ಬರೆಯುವದನ್ನೇ ಬಿಟ್ಟೆ...

              ನನಗೂ ಒಮ್ಮೊಮ್ಮೆ ಅನಿಸುವದಿದೆ.  ನಾನೇಕೆ ಅನುವಾದಕ್ಕೆ  ಬೆನ್ನು ಬಿದ್ದಿದ್ದೇನೆ , ಅದು ಎಷ್ಟರ ಮಟ್ಟಿಗೆ ಸರಿ ಎಂದು .ಆದರೆ ಇಂದು ನೋಡಿದ ಸಂದರ್ಶನವೊಂದು ನನ್ನ ಅನುಮಾನವನ್ನು ಬೇರು ಸಮೇತ ಕಿತ್ತೆಸೆದು ನನ್ನನ್ನು ನಿರಾಳವಾಗಿಸಿದ್ದು ಸುಳ್ಳಲ್ಲ...

  ‌‌‌‌          ' ಮಾಧ್ಯಮ ಅನೇಕ'ದ ಸಾಹಿತಿಗಳ ಸಂದರ್ಶನದ ನಾಲ್ಕನೇ ಕಂತಿನಲ್ಲಿ ಶ್ರೀ ,ಕೆ, ನಲ್ಲತಂಬಿಯವರ  ಸಂದರ್ಶನವೆಷ್ಟು convincing ಆಗಿತ್ತೆಂದರೆ ಅನುವಾದ ಸಾಹಿತ್ಯವೂ ಒಂದು ಬಲವಾದ ಸಾಹಿತ್ಯ ಎಂಬುದನ್ನು ವಿಶದವಾಗಿ, ವಿವರವಾಗಿ, ವಿವೇಚನಾ ದೃಷ್ಟಿಯಿಂದ ಹೇಳಿದ್ದು ಆ ಬಗೆಗಿನ ನನ್ನೆಲ್ಲ ಅನುಮಾನಗಳಿಗೂ ಪೂರ್ಣ
ವಿರಾಮ ಸಿಕ್ಕಂತಾಯಿತು...ಅವರಿಗೆ, ಸೂಕ್ತ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಹೊರಡಿಸಿದ ಸಂದರ್ಶನಕಾರ ರಾಜಕುಮಾರ ಮಡಿವಾಳರ ಅವರಿಗೆ ನಾನು ಆಭಾರಿ...

ಸಂದರ್ಶನದ ಮುಖ್ಯಾಂಶಗಳು:

     ‌‌‌‌‌   *ಅನುವಾದವೆಂದರೆ ಬೇರೆ ಬೇರೆ ಭಾಷಿಕರಿಗೆ ಪರಸ್ಪರ ಸಾಹಿತ್ಯ ದಕ್ಕುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ...

* ಅದು ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಗೆ ಪರಿಚಯಿಸುವ  ಪರಿ.....

* ಒಂದು ಜೀವನ ಪದ್ಧತಿಯನ್ನು ಇನ್ನೊಂದರ ಜೊತೆಗೆ ಹೆಣೆಯುವ ಕೆಲಸ...

* ಅನುವಾದವೆಂದರೆ ಶಬ್ದಗಳ ವಿನಿಮಯವಲ್ಲ...ಹಾಗಾಗಲೂ ಬಾರದು...

* ಹಟಕ್ಕೆ ಬಿದ್ದಂತೆ ಅನುವಾದ ಮಾಡುವದು ಸಲ್ಲ. ಬೇಕೆನಿಸಿದಾಗ,
ಬೇಕೆನಿಸಿದಷ್ಟು, ಬೇಕೆಂದ ರೀತಿಯಲ್ಲಿ ಮಾಡುವ ಪ್ರಯತ್ನ ಸ್ತುತ್ಯ...

* ಮಾತೃಭಾಷೆ, ನಮ್ಮ ಕಾರ್ಯಕ್ಷೇತ್ರದ ಸ್ಥಾನಿಕ ಭಾಷೆ,  ಒಂದು ದೇಶಿಯ, ಇನ್ನೊಂದು ಅಂತರ್ದೇಶಿಯ ಹೀಗೆ  ಕನಿಷ್ಟ ನಾಲ್ಕು ಭಾಷೆಗಳ ಪರಿಚಯ ಅಪೇಕ್ಷಣೀಯ...

* ಎಲ್ಲ ಭಾಷೆಗಳಿಗೂ ತನ್ನದೇ ಆದ ಸೌಂದರ್ಯವಿದೆ...ನಮ್ಮದನ್ನು ಖಂಡಿತಕ್ಕೂ ಪ್ರೀತಿಸೋಣ...ಯಾವುದೇ ಭಾಷೆಯ ಬಗ್ಗೆ  ದ್ವೇಷ ಕೂಡದು...

* ಬದುಕು ಒಂದು ತೂತಿನ ಕೊಡ...ತುಂಬ್ತಾನೇ ಇರಬೇಕು..
ಯಾಕೆಂದರೆ ಅದು ಸೋರ್ತಾನೇ  ಇರುತ್ತೆ...

* ಹಾಗಂತ ನಮ್ಮತನ  ಸರ್ವಥಾ ಬಿಟ್ಟುಕೊಡಬಾರದು...ಪ್ರಸಿದ್ಧ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನರಿಗೆ ಅಮೇರಿಕಾ ಆಹ್ವಾನವಿತ್ತು ,ಸಕಲ ಅನುಕೂಲಗಳನ್ನೂ ಮಾಡಿಕೊಡುತ್ತೇವೆ.
ಇಲ್ಲಿಗೆ ಬಂದುಬಿಡಿ ಎಂದು  ಆಹ್ವಾನ ಕೊಟ್ಟಾಗ ಅವರು ಹೇಳಿದರಂತೆ, " ನನ್ನ ' ಗಂಗೆಯನ್ನು' ಅಲ್ಲಿ ಹರಿಸುತ್ತೀರಾ"?!
   ‌
  ‌‌‌‌‌‌          ‌‌‌  ‌ ಇಷ್ಟು ಇಂದಿಗೆ ಸಾಕು....

೩೧. ದೇಖಾ ಏಕ ಖ್ವಾಬ ತೋ, ಏ ಸಿಲ್ ಸಿಲೇ ಹುಯೇ...

" ಮಲಗಿದಾಗ ಬೀಳುವವು ಕನಸುಗಳಲ್ಲ, ಮಲಗಲು ಬಿಡಲಾರದ್ದೇ ನಿಜವಾದ ಕನಸುಗಳು" ಎಂದರು ಶ್ರೀ ಅಬ್ದುಲ್ ಕಲಾಮ್ ಅವರು. ಪಾಪ, ಅಂಥ ಮಹಾನುಭಾವರಿಗೇನು ಗೊತ್ತು, ನಮ್ಮಂಥವರಿಗೆ ಬೀಳುವ ,ಮೂರನೇ ಪ್ರಕಾರದ ಕನಸುಗಳ ಕಥೆ!!!

ನನ್ನವೂ  ಮಲಗಿದಾಗೇನೋ ಬೀಳುತ್ತವೆ, ಆದರೆ  ಒಮ್ಮೆ ಬಿದ್ದರೆ ಮತ್ತೆ  ಗಾಢವಾಗಿ  ಮಲಗಲು  ಬಿಡುವುದಿಲ್ಲ. ನಿದ್ದೆ- ಎಚ್ಚರಗಳ ಮಧ್ಯದ ತುಂಡು ತುಂಡು ಹಳವಂಡಗಳಂತೆ  ಅವು. " ನಿದ್ದೆಗೊಮ್ಮೆ ನಿತ್ಯ ಕನಸು...ಎದ್ದ ಸಲ ಅಸ್ವಸ್ಥ ಮನಸು" - ಎಂಬ 'ಬೇಂದ್ರೆ ವಿರೋಧಿ' ಕವನಸಾಲು.

ನನಗೆ ಚೆಂದದ ಕನಸು ಬೀಳಲಿ ಎಂಬ 'ದುರಾಸೆ'  ಖಂಡಿತ ಇಲ್ಲ.ಆ ವಯಸ್ಸೂ ಅಲ್ಲ. ವಯಸ್ಸು ಇದ್ದಾಗಲೂ ಅಂಥ ಕನಸುಗಳು ನಮ್ಮ ಪಾಲಿಗೆ ತುಟ್ಟಿಯೇ.
ಕಣ್ಣು ಸರಿಯಾಗಿ ಕಂಡರೆ ಸಾಕು ಎಂಬುದೇ ನನ್ನ ' ಚಿಣ್ಣ ಚಿಣ್ಣ' ಆಸೆ. ಕನ್ನಡ ಕಾದಂಬರಿಗಳ/ ಸಿನೆಮಾ ನಾಯಕಿಯರ ಕನಸುಗಳನ್ನು ಅಲ್ಪ ಕಾಲ
ಕಡ ಪಡೆದುಕೊಂಡ ಸಂಭ್ರಮ ಎಷ್ಟೋ ಅಷ್ಟೇ...

ನಾನನ್ನುವದು,- ಯಾವುದೇ ಕನಸುಬೀಳಲಿ, ಅದೇನು ಎಂಬುದು ' ಕನಿಷ್ಠ ಪಕ್ಷ ನನಗಾದರೂ ತಿಳಿಯಲಿ ' -ಎಂಬ ಅತ್ಯಂತ ಪ್ರಾಮಾಣಿಕ ಬಯಕೆ.  ಆನೆಯ ದೇಹಕ್ಕೆ ಕುದುರೆ ಮುಖ, ಕತ್ತೆ ಬಾಲ, ಎತ್ತಿನ ಕೋಡು, ಸಿಂಹದ ಕಿವಿ ಇದ್ದರೆ ಅದಾವ ಪ್ರಾಣಿಯಾದೀತು? ಅಂಥ ಬರಗೆಟ್ಟ , ಅರೆಬೆಂದ ಕನಸು ಯಾವ ಸುಖಕ್ಕೆ ಅಲ್ವಾ?

ಆದರೆ ನಾನೂ ಅದನ್ನು ಅಲ್ಲಿಗೇ,ಅಷ್ಟಕ್ಕೇ ಬಿಟ್ಟರೆ ತಾನೇ!!  ಆಳ ಅಧ್ಯಯನಕಾರಳ
ವಿಶ್ಲೇಷಣೆಗಲ್ಲದಿದ್ದರೂ, ಕೆಟ್ಟ ಕುತೂಹಲದ  ಕುತ್ಸಿತ   ಬುದ್ಧಿಯಿಂದ ಲಾದರೂ     ಆ  ತುಂಡುಗಳನ್ನು ಕೂಡಿಸಿ ಹೊಲಿದು ' ಕಡೆಗೊಂದು ಕೌದಿ' ಯಾಗಿಸುವ  ಪ್ರಯತ್ನ ಮಾಡುತ್ತೇನೆ. ಆದರೆ, alas!! ಅದು ನನ್ನನ್ನು ಬೆಚ್ಚಗಾಗಿಸಲು  ಬಿಡದೇ  ಬೆಚ್ಚಿಸಿ ಬೆದರಿಸಿದ್ದೇ ಜಾಸ್ತಿ.

ಇದನ್ನು ಗೆಳತಿಯರಿಗೆ ಹೇಳಿದರೆ ಅದೊಂದು ಬೇರೆಯೇ ಅಧ್ವಾನ.
" ನಾವು ಬೇರೆ ಬೇರೆ ವಿಷಯಗಳಲ್ಲಿ busy ಇದ್ದಾಗ ನಮಗೆ ಬಂದ ಅನೇಕ ವಿಚಾರಗಳು ಹೊರಗೆ  ಪ್ರಕಟವಾಗದೇ ' ಸುಷುಪ್ತಿ'ಗೆ ಜಾರಿರುತ್ತವೆ, ರಾತ್ರಿ ಮೈ, ಹಾಗೂ ಮನಸ್ಸು ವಿರಾಮ ಸ್ಥಿತಿಯಲ್ಲಿ ಇದ್ದಾಗ  ಕನಸಿನ ರೂಪದಲ್ಲಿ ಹೊರಬರುತ್ತವೆ"- ಇದು ಒಬ್ಬ ಗೆಳತಿಯ ವಿಶ್ಲೇಷಣೆ."

     " ನಮ್ಮ ಮನಸ್ಸಿನಲ್ಲಿ ಇದ್ದ ಯಾವುದೇ ಆಸೆ ಆಕಾಂಕ್ಷೆಗಳು ಬದುಕಿನಲ್ಲಿ ಈಡೇರಿರದಿದ್ದರೆ , ಅದನ್ನೇ ಧೇನಿಸುವ ಮನಸ್ಸು ಅವುಗಳನ್ನು
ಕನಸಿನಲ್ಲಿ  ಈಡೇರಿಸಿಕೊಳ್ಳಲು ಹವಣಿಸುತ್ತಿದೆ.- ಇನ್ನೊಬ್ಬ ಮನಶ್ಶಾಸ್ತ್ರಜ್ಞಳ  ಬಡಬಡಿಕೆ.

       " ಅದೇನೂ ಮಣ್ಣಲ್ಲ, ಹೆಚ್ಚು ಖಾರ, ಮಸಾಲೆ ,ಎಣ್ಣೆ ಪದಾರ್ಥಗಳನ್ನು ತಿಂದು , ತಡವಾಗಿ ಮಲಗಿದರೆ , ಅಪಚನಕ್ಕೆ   ಪಿತ್ತ ಕೆದರಿ ಇದೆಲ್ಲ ಆಗುತ್ತೆ ,ಸಾದಾ ಉಂಡು, ಬೇಗ ಮಲಗಿ ನಿದ್ರೆ ಮಾಡು, ಸರಿಯಾಗುತ್ತದೆ" - ಇನ್ನೊಬ್ಬ ನನ್ನ ಮುತ್ತಜ್ಜಿಯಂಥ ಗೆಳತಿ.

        ಹಿಂದೆಂದೋ ಒಂದು ಪುರಾಣ
ಕಥೆಯಲ್ಲಿ ಓದಿದ್ದೆ- ಸಂತಾನಾಪೇಕ್ಷಿ ಭಕ್ತಳೊಬ್ಬಳಿಗೆ ದೇವರು ಕೇಳುತ್ತಾನೆ" ಸದ್ಗುಣಿಯಾದ ಅಲ್ಪಾಯುಷಿ ಮಗ ಬೇಕೋ? ದೀರ್ಘಾಯುಷ್ಯವಿರುವ ಕುಪುತ್ರ  ಬೇಕೋ" ,ಎಂದು. ಅವಳು ಏನು ಆಯ್ಕೆ ಮಾಡಿದಳು ಇಲ್ಲಿ ಅಪ್ರಸ್ತುತ. ನನಗೆ ದೇವರೇನಾದರೂ
ಪ್ರತ್ಯಕ್ಷವಾಗಿ ವರ ಕೊಡುತ್ತೇನೆಂದು ಅಂದರೆ ನನ್ನ  ಬೇಡಿಕೆ," ದೇವರೇ, ಅರ್ಥವಾಗದ ನೂರು ಕನಸುಗಳ ಬದಲಿಗೆ, ಅರ್ಥವಾಗುವ ಮೂರು ಕನಸುಗಳೆನಗೆ ಸಾಕು"
   
             ಕೊನೆಗೆ ನನಗನಿಸಿದ್ದು, ಕಠಿಣಾತಿ ಕಠಿಣ ,ವಿಷಯಕ್ಕಿಂತಲೂ ಗಹನ ಈ ವಿಚಾರ, ಅದನ್ನು ಅದರ ಪಾಡಿಗೆ ಬಿಟ್ಟು, ಬಂದಾಗ , ಬಂದಷ್ಟು ನಿದ್ದೆ ಮಾಡುವುದೇ ಸೂಕ್ತ ಎಂದು.
   
          ನೀವೇನಂತೀರಿ???

 

           

೩೦. ಕನ್ನಡವನ್ನು ಆರಾಧಿಸೋಣ...ಉಳಿದ ಭಾಷೆಗಳನ್ನು ಗೌರವಿಸೋಣ.

೩೦.  ಕನ್ನಡವನ್ನು ಆರಾಧಿಸೋಣ...
 ‌       ಉಳಿದ ಭಾಷೆಗಳನ್ನು ಗೌರವಿಸೋಣ...
    
               ನಾನು ನಿನ್ನೆ ಇಂಗ್ಲಿಷ್ ವ್ಯಾಕರಣದ ಮೇಲೆ ಒಂದು post ಹಾಕಿದ್ದೆ. ಬಂದ ಪ್ರತಿಕ್ರಿಯೆಗಳನ್ನು ನೋಡಿ ಆಶ್ಚರ್ಯ/ಸಂತೋಷ ಎರಡೂ ಆದವು. ಹಾಕಲು ನನ್ನದೇ ಆದ ಕಾರಣಗಳಿವೆ.

ನನ್ನದು ಕುಗ್ರಾಮ. ಓದಿದ್ದು ರಟ್ಟಿಹಳ್ಳಿಯ ತುಳಜಾಭವಾನಿ ಗುಡಿಯಲ್ಲಿ. free special  class ಕೇಳಿದ್ದು ಅಲ್ಲಿಯ  ಆದಿಕೇಶವ ದೇವಸ್ಥಾನದಲ್ಲಿ. ಆಟೋಟಗಳಿಗೆ ಶ್ರೀ ಕದಂಬೇಶ್ವರ ದೇವಸ್ಥಾನದ ಅಂಗಳ . ಯಾವ ಮೂಲಭೂತ  ಸೌಕರ್ಯಗಳಿಲ್ಲದ ಬಯಲು ಶಾಲೆಗಳು. ಆದರೆ ರ್ಯಾಂಕ್,
Competition, prize, fine, punishment ಮುಂತಾದ  ಶಬ್ದಗಳು
ನಮ್ಮ ಪದಕೋಶದಲ್ಲಿ ಇರಲೇಯಿಲ್ಲ. ಎಲ್ಲವೂ 'ಆಡಿ ಕಲಿ' , 'ಮಾಡಿ ಕಲಿ',  'ನೋಡಿ ಕಲಿ' -ಗಳೇ.  ನಾವು ABCD ತೀಡಿದ್ದು 8 ನೇ  ವರ್ಗದಲ್ಲಿದ್ದಾಗ. ಇದ್ದ 26 ಅಕ್ಷರಗಳನ್ನು ಉಲ್ಟಾಪಲ್ಟಾ ಬರೆದದ್ದೇ ಹೆಚ್ಚು. ಅಂತೂ SSLC ದಾಟುವಷ್ಟು ರೂಢಿಸಿಕೊಂಡು, 'ನಾವೇ' ಉತ್ತರಗಳನ್ನು  ಬರೆದು ಪಾಸಾದದ್ದು ಆಗ ಸಾಧನೆಯೇ ನಮಗೆ/ನಮ್ಮ ಪಾಲಕರ ಮಟ್ಟಿಗೆ ...ಆದರೆ ಯಶಸ್ಸು ಸಂಪೂರ್ಣವಾಗಿ ಶಿಕ್ಷಕರಿಗೆ, ಅವರ ವಿದ್ವತ್ಪೂರ್ಣ ಕಲಿಕೆಗೆ, ಅವರ ದಣಿವರಿಯದ ಶ್ರಮಕ್ಕೆ ಸಲ್ಲಬೇಕು.

ನಂತರ ಧಾರವಾಡದ JSS college ಗೆ
ಬಂದು English major, Hindi minor
ಮಾಡಿ ಒಂದು ವರ್ಷವೂ ನಪಾಸಾಗದಂತೆ degree ಮುಗಿಸಿ
 ಮುಂದೊಮ್ಮೆ ಅವೇ ವಿಷಯಗಳು ನನ್ನ ಅನ್ನದ ಮಾರ್ಗವಾದಾಗ ನಾನು ಮನಸಾರೆ ನೆನೆದದ್ದು ನನ್ನ ಗುರುಗಳನ್ನೇ.
English major ಗೆ ಹನ್ನೊಂದು ಗಂಡು ಮಕ್ಕಳೊಂದಿಗೆ ನಾನೊಬ್ಬಳೇ ವಿದ್ಯಾರ್ಥಿನಿಯಾಗಿದ್ದರಿಂದ(1965/69)
ಸ್ವಲ್ಪ ಹೆಚ್ಚೇ ಅಕ್ಕರೆ ,ಕಾಳಜಿ ಸಿಕ್ಕಿದ್ದು ನನ್ನ ಪುಣ್ಯ.

ಇಷ್ಟೆಲ್ಲಾ ಸೌಲಭ್ಯಗಳ ಮಧ್ಯದಲ್ಲೂ ನನಗೇನೋ ನನ್ನ ಬಗ್ಗೆಯೇ ಕೀಳರಿಮೆ ಇತ್ತು. ಹಳ್ಳಿಯವಳು ಎಂಬ ಹಿಂಜರಿಕೆಯನ್ನು ಗೆಲ್ಲಲಾಗಲೇಯಿಲ್ಲ ನನಗೆ.  ಇದಾವುದನ್ನೂ ಲೆಕ್ಕಿಸದೇ ದಿನಗಳು ಕಳೆದು ಹೋಗಿ ಮುಂದೊಂದು ದಿನ  ಇಂಗ್ಲಿಷ್ ಶಿಕ್ಷಕಿಯಾಗಿ 58 ನೇ ವಯಸ್ಸಿನಲ್ಲಿ ನಿವೃತ್ತಿಯೂ ಆಗಿ ಹದಿನೇಳು ವರ್ಷಗಳೇ ಸಂದಿವೆ. ಆದರೆ ನನ್ನ ವಿಷಯದ
ಆಯ್ಕೆಯ ನಿಜವಾದ ಉಪಯೋಗ ನನಗೆ ಆದದ್ದು ನಿವೃತ್ತಿಯ 
ನಂತರವೇ  ಎನ್ನಬಹುದು.

ಮಕ್ಕಳ ಬೆನ್ನು ಹತ್ತಿ  ಹೊರಟ,  West/ East  ಅಮೇರಿಕಾ, ಲಂಡನ್, ಇಟಲಿ, ಫ್ರಾನ್ಸ್,  ದುಬೈ, ಮಲೇಶಿಯಾ, ಥಾಯ್ಲೆಂಡ್, ಸಿಂಗಪುರಗಳ ಪ್ರವಾಸದ ವೇಳೆಯಲ್ಲಿ ನನ್ನನ್ನು ಕಾಯ್ದದ್ದು ಇದೇ ಭಾಷೆಯೇ. ಬೆಂಗಳೂರಿನಂಥ metro city ಯಲ್ಲಿ ಎಡಕ್ಕೆ ತಮಿಳು, ಬಲಕ್ಕೆ, ತೆಲುಗು, ಮುಂದೆ ಮಲೆಯಾಳಿ, ಹಿಂದೆ ಹಿಂದಿಯ ಜನರಿದ್ದ  ವಾತಾವರಣದಲ್ಲಿ ಅಷ್ಟಿಷ್ಟು  ಇಂಗ್ಲೀಷ್/ ಹಿಂದಿ ಬರದಿದ್ದರೆ 
ದಿನ ದೂಡುವದೇ ದೊಡ್ಡದೊಂದು ಸಮಸ್ಯೆಯಾಗುತ್ತದೆ. ಅಂಥ ಪರಿಸ್ಥಿತಿಯನ್ನು  ಎದುರಿಸಿ  ಗೆಲ್ಲಲಾದರೂ ನಮಗೆ ಬೇರೆ ಭಾಷೆಗಳು ಬೇಕೇ ಬೇಕು...

ಇಂಥ ಪ್ರಸಂಗಗಳು ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಜೀವನದಲ್ಲಿ ಬಂದೇ ಬರುತ್ತವೆ. ಅವುಗಳನ್ನು ನಿಭಾಯಿಸಲು ಜೀವನದಲ್ಲಿ update ಆಗಬೇಕಾದುದು ನಮ್ಮ ಮಟ್ಟಿಗೆ ಅನಿವಾರ್ಯವೂ ಹೌದು.
ಕಲಿಕೆಗೆ  ಆಯುಷ್ಯದ ಹಂಗಿಲ್ಲ. ತಪ್ಪಬಹುದು ಎಂಬ ಭಯ ಬೇಡ.ಇದೆಲ್ಲ ಯೋಚಿಸಿಯೇ ಯಾರೂ ,ಹೇಗೂ,
ಎಂದೆಂದಿಗೂ ಬೇಕೆಂದಾಗ ಬಳಸಿಕೊಳ್ಳಲಿ ಎಂಬ ಸದುದ್ದೇಶದಿಂದ post ಮಾಡಿದೆ. ನಿಮ್ಮೆಲ್ಲರ ಪ್ರತಿಕ್ರಿಯೆ ಗಳಿಗೆ ನನ್ನ ಹಾರ್ದಿಕ ನಮನಗಳು.

ನಮ್ಮ ಭಾಷೆಯನ್ನು ಹೆಚ್ಚಾಗಿಯೇ ಪ್ರೀತಿಸೋಣ...ಆರಾಧಿಸೋಣ...ಅದರೊಂದಿಗೆ ವ್ಯಕ್ತಿತ್ವ ಬೆಳವಣಿಗೆಗೆ ಇತರ ಭಾಷೆಗಳನ್ನೂ ಕಲಿಯೋಣ. 
" ಅವಳ ತೊಡಿಗೆ ಇವಳಿಗಿಟ್ಟು  ನೋಡಬಯಸಿದೆ"- ಎಂದು ಬಿ.ಎಮ್.ಶ್ರೀ.ಯವರೇ ತಮ್ಮ ಇಂಗ್ಲಿಷ್ ಗೀತೆಗಳ ಅನುವಾದಕ್ಕೆ ಚೆಂದದೊಂದು ವಿವರಣೆ ಕೊಟ್ಟಿದ್ದಾರೆ.

ನಾವೂ ಬೆಳೆಯೋಣ... ಭಾಷೆಗಳನ್ನೂ ಬೆಳೆಸೋಣ... ಶುದ್ಧ ಗಾಳಿ ಯಾವ ದಿಕ್ಕಿನಿಂದ ಬಂದರೂ ಉಸಿರಾಟ ಯೋಗ್ಯವೇ!!! ನಮ್ಮದನ್ನು ಅಪ್ಪಿಕೊಂಡು, ಒಪ್ಪಿಕೊಂಡು, ಬೇರೊಂದು ಭಾಷೆಯನ್ನು ಬಳಸಿ, ಬೆಳೆಸಿದರೆ ಅಡ್ಡಿಯಾಕಾಗಬೇಕು? ಈ ಹಿಂದೆ ಹದಿನಾಲ್ಕು ಭಾಷೆಗಳನ್ನು ಆಡಬಲ್ಲ ಓರ್ವ ವ್ಯಕ್ತಿ ನಮ್ಮ ಪ್ರಧಾನಿಯಾದದ್ದು
ನಾವೆಂದಿಗೂ  ಮರೆಯುವದು ಬೇಡ.

ಕಲಿಯೋಣ...ಕಲಿಸೋಣ...





Sunday 3 January 2021

27. ಗಾಂಭೀರ್ಯ ಎಂಬ ಗುಮ್ಮ...

ಗಾಂಭೀರ್ಯವೆಂಬ ಗುಮ್ಮ...

           "ಇದುವರೆಗಿನ ಬದುಕಿನಲ್ಲಿ  ಕೆಲ ಆತ್ಮೀಯರ ಮುಂದಾದರೂ ಹೃದಯ ತೆರೆದು ನಾಲ್ಕು ಮಾತಾಡಿದ್ದರೆ ಇಂದು ಇಲ್ಲಿ‌ ಹೃದಯವನ್ನು ತೆರೆಯುವ ಪ್ರಸಂಗವೇ ಬರುತ್ತಿರಲಿಲ್ಲ"
            ‌‌ ಇದು ಹೃದಯ ಶಸ್ತ್ರ ಚಿಕಿತ್ಸೆಯ ಕೋಣೆಯ  ದ್ವಾರದ ಮೇಲೆ ಬರೆದ ವಾಕ್ಯ, ಎಂದೊ ಒಮ್ಮೆ ಓದಿದ್ದೆ.
ಅಂದಿನಿಂದ ಆಗಾಗ  ನನ್ನನ್ನು ಅತಿಯಾಗಿ ಕಾಡುವ ವಾಕ್ಯವಿದು...ಕೆಲವೇ ಶಬ್ದಗಳ ಜೋಡಣೆಯಾದರೂ ಅದರ  ಅರ್ಥವ್ಯಾಪ್ತಿ ಅಪಾರ. ಮಾತನಾಡುವ,ಯೋಚಿಸುವ,ಭಾವನೆಗಳನ್ನು ವ್ಯಕ್ತಪಡಿಸುವ  ವಿಶೇಷ ಶಕ್ತಿಯನ್ನು ದೈವ ಮನುಷ್ಯ ಮಾತ್ರರಿಗೆ  ಕೊಟ್ಟಿದೆ ,ಅಷ್ಟೇ ಅಲ್ಲ ಈ ಅಪರೂಪದ ಗುಣವಿಶೇಷವೇ  ಅವನನ್ನು ಪ್ರಾಣಿಗಳಿಂದ  ಪ್ರತ್ಯೇಕಿಸಿ ಭಿನ್ನವಾಗಿಸಿದೆ. ಅದರ ಸರಿಯಾದ ಬಳಕೆ ಅವನದೇ ಹೊಣೆ. ಆದರೆ ಬಹಳಷ್ಟು ಜನಕ್ಕೆ ಇದರ ಗಮನವಿರುವದೇ ಇಲ್ಲ. ಬದುಕಿಡೀ ಹೇಗ್ಹೇಗೋ ಇದ್ದು ಕಳೆದುಬಿಡುತ್ತೇವೆ.
           ‌‌೭೦ ರ ದಶಕದಲ್ಲಿ  "ಖೂಬ ಸೂರತ್' ಎನ್ನುವ ಹಿಂದಿ  ಚಿತ್ರವೊಂದು ಬಂದಿತ್ತು. ನೋಡಲು ಅದರ‌ ಹೆಸರಿನಷ್ಟೇ ಚಂದ. ಒಂದು ಕೂಡು ಕುಟುಂಬ. ಮನೆಯೊಡತಿ ಅತಿ ಶಿಸ್ತಿನ ಸಿಪಾಯಿ, ಎಲ್ಲದಕ್ಕೂ ಶಿಸ್ತಿನ ಸಂಕೋಲೆ. ಕಟ್ಟಪ್ಪಣೆ. ಸ್ಥಾನ ಬದ್ಧತೆಯಲ್ಲಿದ್ದ ಕೈದಿಗಳಂತೆ  ಆಜ್ಞೆ ಪಾಲಿಸುವದೊಂದೇ ಉಳಿದ ಎಲ್ಲರ ಕೆಲಸ. ನಗುವಿಲ್ಲ, ಮತ್ತೆರಡು ಮಾತಿಲ್ಲ, ತಪ್ಪು ಮಾಡಿದ ಕ್ಷಣ ಮಾತ್ರದಲ್ಲಿ ಶಿಕ್ಷೆ ಜಾಹೀರು. ಆಗೊಮ್ಮೆ ಆ ಮನೆಗೆ ದೊಡ್ಡ ಸೊಸೆಯ ಬಿಚ್ಚು ಮನದ ತಂಗಿಯ ಪ್ರವೇಶವಾಗುತ್ತದೆ.ಅವಳೋ ಸದಾ ಚಟುವಟಿಕೆಗಳ factory. ಇಲ್ಲಿಯ ಎಲ್ಲರ ಮನಸ್ಸನ್ನೂ ಕ್ರಮೇಣ  ಬದಲಿಸಿ ,ನಿಜವಾದ ಜೀವನದ ರುಚಿ ತೋರಿಸಿ ಮನೆಯೊಡತಿಯ  ಎರಡನೇ ಸೊಸೆಯಾಗಿ ಬಂದು ಅ ಮನೆಯನ್ನೇ ನಂದನವಾಗಿಸುವಲ್ಲಿಗೆ ಕಥೆ ಮುಗಿಯುತ್ತದೆ.
     ‌‌‌‌‌‌    ‌ ‌‌‌ ‌‌ ಅವಳು ಮಾಡಿದ ಮೊದಲ ಕೆಲಸ ಸುಳ್ಳು ಗಾಂಭೀರ್ಯವೆಂಬ ಗುಮ್ಮನನ್ನು ಹೊರಹಾಕಿದ್ದು. ಅತಿ ಶಿಸ್ತಿನ  ಉಸಿರು ಗಟ್ಟಿಸುವ ವಾತಾವರಣವನ್ನು  ಸಡಿಲಿಸಿ ನೆಮ್ಮದಿಯುಸಿರಿಗೆ ದಾರಿ ಮಾಡಿ ಕೊಟ್ಟದ್ದು.ಮನೆ ಮಂದಿಯ ಮನದಾಳದ ಆಸೆ ಆಕಾಂಕ್ಷೆಗಳನ್ನು ಹೂತಿಟ್ಟ ಸ್ಥಳ ಅಗಿದು ಗೋರಿಯಿಂದ ಅವುಗಳನ್ನು  ಹೊರತೆಗೆದು ಮುಕ್ತವಾಗಿಸಿದ್ದು. ನಗುವೆಂದರೆ ಏನು ಎಂದು ಮರೆತವರಿಗೆ  ಮಂದಹಾಸದ ಮಂದಾರ ಅರಳಿಸಿ  ಅದರ ಚಲುವು ತೋರಿಸಿದ್ದು.ನಾನು, ನನ್ನದು, ನನಗೆ, ಎಂದಿದ್ದವರ ಕಣ್ಣು ಪೊರೆ ಕಿತ್ತೆಸೆದು  ಎಲ್ಲವೂ ನಮ್ಮೆಲ್ಲರದೂ, ನಮ್ಮೆಲ್ಲರಿಗಾಗಿ  ಎನ್ನುವ ಹೊಸ ಸೂತ್ರದಲ್ಲಿ ಅವರನ್ನು ಬಂಧಿಸಿದ್ದು.
         ‌ ‌‌‌   ಹೌದು, ಬದುಕೆಂದರೆ ಇಷ್ಟೇ. ಮುಕ್ತವಾಗಿ ನಗುವದನ್ನು  ಕಲಿಯುವದು. ಭಾವನೆಗಳನ್ನು ಬದುಕುವದು , ಅಂದ ಮಾತ್ರಕ್ಕೆ ಗಾಂಭೀರ್ಯ ಮರೆತು ಸದಾ ಹಲ್ಲು ಕಿಸಿಯುವದಲ್ಲ. ಎಲ್ಲಿ ಹೇಗಿರಬೇಕೋ ಹಾಗಿರುವದನ್ನು ಬದುಕೂ ಸಹ ತಾನಾಗಿಯೇ  ಕಲಿಸುತ್ತದೆ. ಸದಾ ಮುಖ ಬಿಗಿದು ಬೇಕೋ ಬೇಡವೋ ಲೆಕ್ಕದಲ್ಲಿ ಅನುಮಾನಿಸುತ್ತ ತುಟಿಗಳನ್ನು ಹಿಗ್ಗಿಸಿ ಕುಗ್ಗಿಸಿ
ಇಲ್ಲದ ಗಾಂಭೀರ್ಯವನ್ನು ಶ್ರಮಪಟ್ಟು  ಪ್ರದರ್ಶಿಸುವ ಅಗತ್ಯವಿರುವದಿಲ್ಲ. ಹಾಗೆ ವ್ಯರ್ಥವಾದ ಗಳಿಗೆ ಮತ್ತೊಮ್ಮೆ ಬದುಕಿನಲ್ಲಿ ಮರಳಿ ನಮಗೆ ಸಿಗುವದಿಲ್ಲ. Laugh your heart out,/ Dil khol ke hasnaa ಅನ್ನುವದಿಲ್ಲವೇ, ಹಾಗೆ ಕೆಲವು ಬಾರಿ ನಕ್ಕರೂ, ಯಾವುದೋ ಪಾರ್ಕಿಗೆ ಹೋಗಿ, ಕೈ ತಟ್ಟಿ, ಕೈ ಮೇಲೆತ್ತಿ  ವಿಲನ್ ಗಳು ನಕ್ಕಂತೆ ಗಹಗಹಿಸುವ ಪ್ರಮೇಯ ಬರುವದಿಲ್ಲ. ಬದುಕು ಸಹಜ... ಬದುಕು ಸುಂದರ...ಅಲ್ಲಿ ಅಳು ನಗುಗಳೂ ಸಹಜ ಸುಂದರವಾಗಿರಬೇಕು. 
     ‌ ‌‌     ನಕ್ಕರದೇ ಸ್ವರ್ಗ...

25. ಧೂಳು ಕಣ್ಣುಗಳಲ್ಲಿ ಇರುತ್ತದೆ...ನಾವು ಕನ್ನಡಿ ಒರೆಸುತ್ತಿರುತ್ತೇವೆ.

25.  "ಧೂಳು ಕಣ್ಣುಗಳಲ್ಲಿ ಇರುತ್ತದೆ, ನಾವು ಕನ್ನಡಿ ಒರೆಸುತ್ತಿರುತ್ತೇವೆ."

ಒಬ್ಬ  ವೃದ್ಧ  ತನ್ನ ವಯಸ್ಸಾದ ಕುದುರೆಯನ್ನು ಸಂತೆಯಲ್ಲಿ ಮಾರಿ ಹೊಸದನ್ನು ತರುವ ವಿಚಾರದೊಂದಿಗೆ ಮಗನೊಂದಿಗೆ ಪಕ್ಕದೂರಿಗೆ ಹೊರಟಿದ್ದ. ಇಬ್ಬರೂ ಕುದುರೆಯನ್ನು ಹಿಡಿದುಕೊಂಡು ಅಕ್ಕಪಕ್ಕದಲ್ಲಿ ನಡೆಯುತ್ತಿದ್ದರು. ಸ್ವಲ್ಪು ದೂರ ಕ್ರಮಿಸಿದಾಗ ಒಬ್ಬ ದಾರಿಹೋಕ ಭೇಟಿಯಾದ," ಏನ್ರಯ್ಯ ಇದು? ಇಷ್ಟು  ಚಂದದ  ಕುದುರೆ ಪಕ್ಕದಲ್ಲಿದ್ದೂ ನಡೆಯುವದಾ?" ಎಂದು ನಕ್ಕ.  ತಂದೆ/ ಮಗನಿಗೆ 'ಹೌದಲ್ಲ' ಅನಿಸಿ  ಮಗ ತಂದೆಯನ್ನು ಕುದುರೆಯ ಮೇಲೆ ಕೂಡಿಸಿ ತಾನು ನಡೆಯತೊಡಗಿದ.  ಹತ್ತು ಹೆಜ್ಜೆ ಹೋಗಿರಬೇಕು. ಇನ್ನೊಬ್ಬ  ದಾರಿಹೋಕ ಭೇಟಿಯಾಗಿ," ಛೆ ಏನನ್ಯಾಯ?  ಮಗನನ್ನು ನಡೆಯಲು ಬಿಟ್ಟು ಅಪ್ಪ ಕುದುರೆಯೇರುವಷ್ಟು ಸ್ವಾರ್ಥವೇ? ಛೆ  ಛೆಛೆ...ಏನು ದಿನಗಳಪ್ಪ!!"  ಎಂದದ್ದೇ ತಡ,  ಸಂಭಾವಿತ ತಂದೆ ನಾಚಿ  ತಕ್ಷಣವೇ ಕೆಳಗಿಳಿದು ಮಗನನ್ನ   ಕುದುರೆ ಮೇಲೆ ಹತ್ತಿಸಿದ...ಮತ್ತದೇ  sceneಉ... ಮುಂದೆ ಮುಂದೆ ನಡೆದಾಗ ಮತ್ತೊಬ್ಬ ," ಎಂಥ ನಿರ್ದಯಿಗಳಿವರು!!!..ಇದುವರೆಗೆ ಸೇವೆ ಸಲ್ಲಿಸಿದ  ಮುದಿ ಕುದುರೆಯನ್ನೂ ಬಿಡುತ್ತಿಲ್ಲ...ನಾನಾಗಿದ್ದರೆ ಹೆಗಲ ಮೇಲೆತ್ತಿಕೊಂಡುಹೋಗುತ್ತಿದ್ದೆ. ಸ್ವಲ್ಪಾದರೂ ಕೃತಜ್ಞತೆ ಬೇಡವೆ?" ಎಂದು ಇವರಿಗೆ ಕೇಳುವಂತೆ ಜೋರಾಗಿಯೇ ಗೊಣಗಿದ". ಇದನ್ನು ಕೇಳಿದ ತಂದೆ- ಮಗ ಒಂದು ದಪ್ಪ ಕೋಲನ್ನು ಕುದುರೆಯ ಕಟ್ಟಿದ ಕಾಲುಗಳ ಮಧ್ಯ ತೂರಿಸಿ  ಇಬ್ಬರೂ ಹೆಗಲಮೇಲೆ ಹೊತ್ತು ನಡೆಯತೊಡಗಿದರು...

ಸ್ವಲ್ಪು ದೂರದಲ್ಲಿ ನದಿಯ ಸೇತುವೆಯ  ಮೇಲೆ ಸಾಗುತ್ತಿದ್ದಾಗ ಕುದುರೆ ತನಗಾಾದ ತೊಂದರೆಯಿಂದ ಚಡಪಡಿಸಿ ಅವರಿಬ್ಬರ ಹೆಗಲಿಂದ ಜಾರಿ ನೀರಿಗೆ ಬಿದ್ದು ಪ್ರವಾಹ ಸುಳಿಯಗುಂಟ ಹರಿದು ಹೋಯಿತು...
              ಇದು ನಮಗೆ ಬಹಳ ದಿನಗಳ ಹಿಂದೆ ಕನ್ನಡ ಶಾಲೆಯ ಪಠ್ಯ ಪುಸ್ತಕದಲ್ಲಿಯ  ಒಂದು ನೀತಿ ಕಥೆ...ಸ್ವಂತ ಬುದ್ಧಿ ಉಪಯೋಗಿಸದೇ ಯಾರೇನೆಂದರೆ ಹಾಗೆ ಮಾಡುತ್ತ ಹೋದರೆ ಆಗಬಹುದಾದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಕಥೆ.

 ಜಗತ್ತಿನಲ್ಲಿ 'ತಮ್ಮೊಬ್ಬ'ರನ್ನು ಬಿಟ್ಟು ಉಳಿದವರು ಹೇಗಿದ್ದರೆ ಚನ್ನ  ಎಂಬ "ಬೇಕು  ಬೇಡ"ಗಳ ಪಟ್ಟಿ ಪ್ರತಿಯೊಬ್ಬರ ಬಳಿಯೂ ಇರುತ್ತದೆ  ಎಂದು Paulo Coelho  ಎಂದೋ "ಹೇಳಿದ್ದಾರೆ. ಎಲ್ಲರೂ ಪುಕ್ಕಟೆಯಾಗಿ ಇನ್ನೊಬ್ಬರಿಗೆ ಉಪದೇಶಿಸುವವರೇ...ತಮ್ಮ ವಿಚಾರಗಳನ್ನು ಕೇಳಲಿ/ ಬಿಡಲಿ ಇನ್ನೊಬ್ಬರ ಮೇಲೆ  ಹೇರುವವರೇ...

ಹೋಗಲಿ ಎಂದು ಒಬ್ಬರ ಮಾತು ಕೇಳಿದರೋ, ಉಳಿದವರಿಗೆ ಅಸಹನೆ. ಇದನ್ನೇ ನಮ್ಮ ಮಲ್ಲಿಗೆ ಕವಿ ಕೆ ಎಸ್ ನರಸಿಂಹಸ್ವಾಮಿಯವರು  ತಮ್ಮ ' ಇಕ್ಕಳ' ಕವಿತೆಯಲ್ಲಿ ಎಲ್ಲರಿಗೂ ಸುಲಭವಾಗಿ ಮನದಟ್ಟಾಗುವಂತೆ ಬರೆದಿದ್ದಾರೆ. ಅವರ ಪ್ರಕಾರ ' ಜನ ಮೆಚ್ಚುವ ವಸ್ತು ಈ ಜಗತ್ತಿನಲ್ಲಿಯೇ   ಇಲ್ಲ..' ಬೇಸಿಗೆಯಲ್ಲಿ ಸೆಖೆಗೆ ಬೈದರೆ ಚಳಿಗಾಲದಲ್ಲಿ ಚಳಿಯೆಂದು ಗೊಣಗಾಟ...'ಥೂ ಶನಿ ಮಳೆ ಬಿಡ್ತಾನೇಯಿಲ್ಲ' ಇದು ಮಳೆಗಾಲದಲ್ಲಿ ಕೇಳಿಬರುವ ಸೊಲ್ಲು...ಮನುಷ್ಯ ಒಳ್ಳೆಯವನಾದರೆ- ಕೈಲಾಗದ ದರಿದ್ರ..ಸ್ವಲ್ಪು ಖಡಕ್ ಆಸಾಮಿಯಾ?...ದುಷ್ಟತನದ ಆರೋಪ...ಹಣ ಬಳಸಿದೆಯಾ- ದುಂದುಗಾರ...ಕೂಡಿಟ್ಟೆಯಾ_ ಜಿಪುಣ...ಮಾತನಾಡಿದರೆ ವಾಚಾಳಿ, ಬಾಯಿಬಡುಕ...ಮಾತು ಕಡಿಮೆಯಿದ್ದು  ಗಂಭೀರ ಸ್ವಭಾವವಾಗಿದ್ದರೆ   ಸೊಕ್ಕಿನ ಮೂಟೆ....ಎಲ್ಲದರಲ್ಲಿಯೂ ಹುರುಪಿನಿಂದ ನೀವಾಗಿಯೇ ಮುಂದುವರೆದು ತೊಡಗಿಕೊಂಡಿರೋ_ ಅಧಿಕ ಪ್ರಸಂಗಿ_ ಯಾರಾದರೂ ಏನಾದರೂ ಹೇಳಲಿ ಎಂದು ಕಾದರೆ ಕೈಲಾಗದ ಸೋಂಬೇರಿ..

          ‌‌ಈ ಕವಿತೆ ನಮ್ಮ ಕನ್ನಡಶಾಲೆಯಲ್ಲಿ ನಮಗೆ ಪಾಠವಾಗಿತ್ತು.ಆ ಮಾತಿಗೆ ಅರವತ್ತಕ್ಕೂ ಮಿಕ್ಕಿ ವರ್ಷಗಳಾಗಿವೆ .ಇಂದಿಗೂ ಪ್ರಸ್ತುತವೇ... ಇಂದಿಗೂ ಮಂದಿಗೆ ಹೆಸರಿಡುವ, ಬೇರೆಯವರ ಖಾಸಗಿ ಬದುಕಿನಲ್ಲಿ ಮೂಗು ತೂರಿಸುವ  ಚಾಳಿ ಹೋಗಿಲ್ಲ . ಪ್ರಮಾಣ, ರೀತಿ, ಕಾಲ  ಸ್ವಲ್ಪು ಬದಲಾಗಿರಬಹುದು ಅಷ್ಟೇ. ಆದರೂ ಯಾರ ಬಗ್ಗೆಯಾದರೂ ಏನಾದರೂ ಒಂದು ಅಂದ ಮೇಲೆಯೇ ಉಂಡ  ಅನ್ನ  ಪಚನವಾಗುವದು ಎನ್ನುವಷ್ಟರ ಮಟ್ಟಿಗೆ ಸರ್ವವಿದಿತ. ಸಾರ್ವಕಾಲಿಕ...
       ‌‌‌       
               ಈಗಿನ ಕಾಲದಲ್ಲಿ ಇದರ ವ್ಯಾಪ್ತಿ , ಸ್ವರೂಪ, ವ್ಯಕ್ತಪಡಿಸುವ ರೀತಿ ಬದಲಾಗಿರಬಹುದು. ನೇರವಾಗಿ ಇರದೇ ಫೇಸಬುಕ್- ಗಳಲ್ಲಿ ಅಭಿಪ್ರಾಯಗಳ/ ಅನಿಸಿಕೆಗಳ  ರೂಪಗಳಲ್ಲಿ ಬರಬಹುದು...
        ‌ 

‌‌‌‌ಇಬ್ಬರು ವ್ಯಕ್ತಿಗಳು ಎಂದಾಗ ಎರಡು ಭಿನ್ನ ವ್ಯಕ್ತಿತ್ವಗಳು ಇರಲೇಬೇಕು. ಭಿನ್ನತೆಯೇ ಬದುಕಿನ  ಸೌಂದರ್ಯ..
ಎಲ್ಲ ಏಕರೂಪವಾಗಿದ್ದರೆ  ಏಕತಾನತೆ ಕಾಡದೇ ಬಿಟ್ಟಿತೇ? ವೈವಿಧ್ಯತೆಯೇ ಬದುಕಿನ  ಸಾರವಿಶೇಷ...

ಉತ್ತಮವಾದುದನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ, ಬೇಡವಾದುದನ್ನು  ದೂರವಿಟ್ಟು ಸ್ವಂತಕ್ಕೆ ನೆಮ್ಮದಿಯ ಬದುಕು ಪಡೆಯುವದೇ ಜೀವನ..

       ‌‌‌   ಈ ಬರಹ ಉಪದೇಶದ ಧಾಟಿಯಲ್ಲಿ ಸಾಗಿದ್ದಕ್ಕೆ ನನಗೂ ಬೇಸರವಿದೆ.  ಅದು ಇದ್ದುದೇ ಹಾಗೆ....


   ‌‌           ಹೀಗೆಲ್ಲ  ಬರೆದಿದ್ದೇನೆ ಅಂದರೆ ನಾನೆಲ್ಲ ಅದನ್ನು ಪಾಲಿಸಿ  ಗೆದ್ದು ನಿಂತಿದ್ದೇನೆ ಅಂತಲ್ಲ...ನಾನೂ ನಿಮ್ಮೊಳಗೊಬ್ಬಳೇ...ಇಲ್ಲಿ ಹೇಳಿದ್ದೆಲ್ಲ  ಮೊದಲು ನನಗೇನೇ ಅನ್ವಯಿಸುತ್ತದೆ ಎಂಬ ಅರಿವು ನನಗೆ ಇಲ್ಲದಿಲ್ಲ .ಆದರೆ ಸ್ವಲ್ಪು ( ego) ಅಹಂನ್ನು ತತ್ಕಾಲಕ್ಕೆ ಸರಿಸಿಟ್ಟು ನಮ್ಮ ಅನಿಸಿಕೆ, ಅನುಭವ, ಬೇಸರಗಳನ್ನು ಪರಾಮರ್ಶಿಸಿದರೆ ಮೇಲೆ ಹೇಳಿದ ಪ್ರತಿಯೊಂದೂ ಮಾತೂ  ಪ್ರತಿಯೊಬ್ಬರ ಸಮಸ್ಯೆಯೇ...ನಾನು, ನಾವು, ನೀನು ,ನೀವು , ಅವನು, ಅವಳು ಎಲ್ಲರೂ ಇದರ ಭಾಗವೇ...

       ‌‌ ‌ ಯಾರು ಎಷ್ಟೇ  ,ಏನೇ, ಯಾವುದೇ ಕಾರಣಕ್ಕೆ ಅನ್ನಲಿ...ಅನ್ನುವದೇ ಜನರ ಕೆಲಸ ಎಂದುಕೊಂಡರೂ ಒಬ್ಬಳೇ ನಿಂತು ಕನ್ನಡಿಯಲ್ಲಿ ನನ್ನನ್ನು ನಾನೇ ನೋಡಿಕೊಂಡಾಗಲೊಮ್ಮೆಯಾದರೂ ಇದರ ಬಗ್ಗೆ  ಸ್ವಲ್ಪು ಯೋಚಿಸುವದು ಒಳಿತು ಅನಿಸುತ್ತದೆ ನನಗೆ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...