Wednesday, 27 January 2021

೩೪. ದೇವರ ಆಟ ಬಲ್ಲವರಾರು? ಆತನ ಎದುರು ನಿಲ್ಲುವರಾರು??



" ನನಗೂ ನಮ್ಮನೇಯವರಿಗೂ ಹದಿಮೂರು ವರ್ಷಗಳ ಅಂತರ ಕೃಷ್ಣಾ..."

"ಆಗೆಲ್ಲ ಹಾಗೇ ಅಲ್ವಾ ಇದ್ದದ್ದು...ನಮಗೂ ಹತ್ತು ವರ್ಷಗಳ ಅಂತರವಿತ್ತು. ಆಗ ವಯಸ್ಸು ನೋಡುತ್ತಲೇ ಇರಲಿಲ್ಲ, ವರನ ಗುಣ, ಶಿಕ್ಷಣ, ಮನೆತನ, ಸಂಸ್ಕಾರ, ಇದು ಹೆಚ್ಚು ಮುಖ್ಯವಾಗ್ತಾಯಿತ್ತು. ಕೂಡು ಕುಟುಂಬದಲ್ಲಿ ಹೊಂದಿಕೊಂಡು ಹೋಗುವುದಕ್ಕೆ ಆದ್ಯತೆ ಹೆಚ್ಚಾಗಿತ್ತು ಅಲ್ವಾ? "

"ಹೌದು, ಹಾಗಂತಲೇ ನಮಗೂ ಅದು
ಚಿಂತೆಯ ವಿಷಯವೇ ಆಗಿರಲಿಲ್ಲ." 
         "ಒಂದು ಗಂಡು, ಒಂದು ಹೆಣ್ಣು ಹೇಗೋ ಏನೋ ಕೂಡಿ ಕೊಂಡು" ಅಂತಾರಲ್ಲಾ, ಆ ಥರಾ".

"ಅದೂ  ಒಂದು ರೀತಿಯಲ್ಲಿ  ಸರೀನೇ ಅನಿಸುತ್ತದೆ ಅಲ್ವಾ, ಕೆಲವೊಂದು ಸಲ..."

"ಹೌದು ಕೃಷ್ಣಾ, Everything happens with a reason, ಅನ್ನೋ ಹಾಗೆ ಪ್ರತಿಯೊಂದು ವಿಷಯಕ್ಕೂ ಎರಡು ಮಗ್ಗಲು ಇದ್ದೇ ಇರುತ್ತವೆ ,- ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಸುಧಾರಿಸಿ ಕೊಂಡು, ಅನುಸರಿಸಿಕೊಂಡು ಹೋಗಲೇಬೇಕಾದುದೇ ಅಂತಿಮ ಸತ್ಯ. ಬದುಕು ಸಹ್ಯವಾಗಬೇಕು ಎಂದರೆ  ಸ್ವಲ್ಪ ಮಟ್ಟಿಗೆ ರಾಜಿಯಾಗದೇ ಅನ್ಯ ಮಾರ್ಗವಿಲ್ಲ."

ಹೀಗೇ  'ಹಾಗೇ ಸುಮ್ಮನೇ' ನಡೆದ ಇಬ್ಬರು ಗೆಳತಿಯರ ಹರಟೆಯ ಮಂಥನದಿಂದ ಹೊರಟ ನವನೀತ ಶುಭ್ರವಷ್ಟೇ ಅಲ್ಲ, ರುಚಿಯೂ ಹೆಚ್ಚಿದ್ದುದು ಗಮನಕ್ಕೆ ಬಂದಾಗ ನಿಜವಾಗಿಯೂ ಚಿಂತನೆಗೆ ಹಚ್ಚಿದ್ದು ಸುಳ್ಳಲ್ಲ...

ನನ್ನ, ಈ ಗೆಳತಿಯ ಪರಿಚಯ  ಆರು ವರ್ಷಗಳಷ್ಟು ಹಳೆಯದು. ಈ ಮನೆಗೆ ಹೊಸದಾಗಿ ಬಂದಾಗ, ಕಾಲನಿಯ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಆದ ಪರಿಚಯ, ಹೂವಾಗಿ, ಹಣ್ಣಾಗಿ, ಪಕ್ವವಾದದ್ದು. ಒಬ್ಬರ ಮನೆಗೊಬ್ಬರು ಹೋಗಿ, ಬಂದು ಮಾಡಿ ಪರೀಕ್ಷಿಸಿ ನೋಡಿದ್ದು. ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬುಗೆಗೆ  ಇಂಬು ಕೊಟ್ಟಿದ್ದು. ಹೀಗಾಗಿ ನಮ್ಮ ಮಾತುಗಳು ಔಪಚಾರಿಕತೆಯ ಪರಿಧಿ ಮೀರಿ  ವೈಯಕ್ತಿಕವಾಗಿ ವ್ಯಾಪ್ತಿ ಹೆಚ್ಚಿಸಿ ಕೊಂಡದ್ದು...

     ಅವರ ಮನೆಯೊಂದು 'ನಂದಗೋಕುಲ' ಅಂತಾರಲ್ಲಾ ,ಹಾಗೇ. ಎಲ್ಲರೂ ಸದಾ ಹಸನ್ಮುಖಿ ಗಳು. ಅಂತೆಯೇ ಸದಾ ಸುಖಿಗಳು. ಒಬ್ಬರಿಗೊಬ್ಬರು ಮಿಡಿಯುವ ರೀತಿ ನೋಡಿಯೇ ಕಲಿಯಬೇಕು. 'ಪಡೆಯುವದಕ್ಕೆ'  ಅಲ್ಲ, 'ಬಿಟ್ಟು ಕೊಡುವುದಕ್ಕೆ' ಸದಾ  ಪೈಪೋಟಿ.
ಯಾರೇ ,ಯಾಕಾಗಿಯೇ, ಯಾವಾಗಲೇ ಅವರ ಮನೆಗೆ  ಹೋಗಲಿ, ಮನದಾಳದ ಆತಿಥ್ಯ ಗ್ಯಾರಂಟಿ...
  
 "ಮೊದಮೊದಲು ನಮಗೆ ನಮ್ಮ ವಯಸ್ಸಿನ ಅಂತರ ಕಾಡುವದು ಸ್ವಾಭಾವಿಕ. ದಿನಗಳೆದಂತೆ  ಹಾಗಿರುವದಕ್ಕೂ ಅರ್ಥವಿದೆ ಅನಿಸುತ್ತದೆ. ಹಿಂದಿನಕಾಲದವರು ದಡ್ಡರಲ್ಲ. ಯೋಚಿಸಿಯೇ ಪದ್ಧತಿಗಳನ್ನು ರೂಪಿಸಿದ್ದಾರೆ. ಗಂಡ , ಹೆಂಡತಿ ಹೇಗಿದ್ದರೂ ಯೌವನದ ದಿನಗಳು , ತಂತಾನೇ ಕಳೆದು ಹೋಗುತ್ತವೆ. ಮನೆ, ಮಕ್ಕಳು, ಉದ್ಯೋಗದಂಥ ಅವಶ್ಯಕತೆಗಳಿಗೆ  ಸಮಯದ ಹೆಚ್ಚಿನ  ಪಾಲು ಕೊಡಲೇ ಬೇಕಾಗುವುದರಿಂದ  ಉಳಿದ ಕೊರತೆಗಳು ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿಯುತ್ತವೆ. ಪ್ರಶ್ನೆ ಬರುವುದು ಜವಾಬ್ದಾರಿ ಎಂಬುದು ಒಂದು ಹಂತಕ್ಕೆ ಬಂದು ಇಬ್ಬರಿಗೂ ವಯಸ್ಸಾಗತೊಡಗಿದಾಗ... ಒಬ್ಬರಿಗೊಬ್ಬರು ಅರಿತುಕೊಂಡು ಮನೆಯ ಸಮಸ್ಯೆಗಳನ್ನು ಗ್ರಹಿಸಿ ಸಾಮರಸ್ಯ ಕಾಯ್ದುಕೊಳ್ಳಲು ಶ್ರಮಿಸಬೇಕಾಗುವ ಹಂತ (ಪ್ರಸಂಗ) ಬಂದಾಗ. ಆಗ ಹಟ , ಅಹಂ, ದುರಭಿಮಾನ ಕಿಂಚಿತ್ತೂ ಉಪಯೋಗಕ್ಕೆ ಬರುವುದಿಲ್ಲ. ಕೊಳ್ಳುವದಕ್ಕಿಂತಲೂ ಕೊಡುವುದು ಹೆಚ್ಚಾಗಬೇಕಾಗುತ್ತದೆ. ಅಂದಾಗ ಮಾತ್ರ ಸಂಸಾರ ಒಗ್ಗಾಲಿ ಆಗುವುದಿಲ್ಲ. ಈಗ ನೋಡಿ, ನಮ್ಮ  ವಯಸ್ಸಿನ  ಅಂತರ ಕಡಿಮೆ ಇದ್ದು  ನನಗೂ ಅವರಷ್ಟೇ ವಯಸ್ಸಾಗಿದ್ದರೆ ಯಾರು ಯಾರಿಗೆ ಆಪತ್ಕಾಲದಲ್ಲಿ /ಅನಾರೋಗ್ಯದಲ್ಲಿ ಮಾಡಬೇಕಾಗಿತ್ತು.? ಹೇಳಿ. ಚಿಕ್ಕವಳಾಗಿದ್ದಕ್ಕೆ ತಾನೇ ನಾನು ಅವರಿಗೆ ಮಾಡಬಲ್ಲೆ, ಮಕ್ಕಳಿಗೂ ಅವರವರ ಬದುಕು, ತಮ್ಮವೇ ಜವಾಬ್ದಾರಿ ಇರುವುದಿಲ್ಲವೇ? ಅವರೂ ಎಷ್ಟೂಂತ  ಮಾಡಬಹುದು?" ದೇವರು ಜಾಣ. ಯಾರನ್ನು ಹೇಗಿಡಬೇಕು ಎಂಬುದನ್ನು ಅವನಷ್ಟು ಚೆನ್ನಾಗಿ ಬಲ್ಲವರಾರು? ಅಲ್ವಾ!?

ಹೀಗೆ ನನ್ನ ಆ ಗೆಳತಿ ಹೇಳುತ್ತಾ ಹೋದರೆ
ಯಾರೂ ಆ ಕ್ಷಣಕ್ಕೆ ಅದನ್ನು ಒಪ್ಪಲೇಬೇಕು, ಹಾಗಿರುತ್ತದೆ ಅವರ ಮಾತುಗಳು.ನಾನು ಅವರ ಮನೆಯಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಗಂಡನ ಆರೋಗ್ಯ ಸಮಸ್ಯೆ ಶುರುವಾದ ಮೇಲಂತೂ  ಅವರು ' 'ಮಗು'ವಾಗಿ ಬಿಟ್ಟಿದ್ದರು.ಹೆಂಡತಿಯ ಮೇಲೆ ಮಾನಸಿಕವಾಗಿ ಸಂಪೂರ್ಣ ಅವಲಂಬಿಸುವಂತಾಗಿತ್ತು. ಹೆಂಡತಿ ಅರೆಕ್ಷಣ ಆಚೀಚೆ ಆದರೂ ಗಾಬರಿ ಬೀಳುತ್ತಿದ್ದರು. ಅವರು ಎದುರಿಗೆ ಕಂಡಾಗ  ಗಂಡನ ಅರಳಿದ ಕಣ್ಣುಗಳನ್ನೊಮ್ಮೆ ನೋಡಬೇಕು. ತಮ್ಮಿಂದ  ಹೆಂಡತಿಗೆ ಸ್ವಲ್ಪ ತೊಂದರೆಯಾಗುತ್ತದೆ ಎಂಬುದು ತಿಳಿಯುತ್ತಿತ್ತು, ಆದರೆ ಅದನ್ನು ಗೆಲ್ಲುವುದು ಅವರ ಸಾಮರ್ಥ್ಯಕ್ಕೆ ಮೀರಿದ ಮಾತಾಗಿತ್ತು.ನನ್ನ ಗೆಳತಿಯೂ ಕೂಡ ಗಂಡನನ್ನು ಆರಾಮವಾಗಿರಿಸಲು ಸದಾ ಯಾವ ತ್ಯಾಗಕ್ಕೂ ಸಿದ್ಧರಿರುವದು  ಅಚ್ಚರಿ ತರುತ್ತಿತ್ತು .ಅವರ ಕಿರಿಕಿರಿ, ಕೊಂಚ ಪ್ರಮಾಣದ ಹಟ, ನೋಡುವವರಿಗೆ 
ಅತಿ ಅನಿಸಿದರೂ ಹೆಂಡತಿ ಮಾತ್ರ  ಅದನ್ನೇ ಅಕ್ಕರೆ, ಕಕ್ಕುಲಾತಿಯಿಂದ ನಮಗೆ  ಹೇಳುವಾಗ ಆ ಮಹಾತಾಯಿ ತಾನು ಹುಟ್ಟಿದ್ದು ಸಾರ್ಥಕವಾಯಿತೆಂಬಂತೆ ಧನ್ಯರಾಗುತ್ತಿದ್ದರು. ಆಗ ನನಗನಿಸಿದ್ದು 
" ಸುಖ, ನೆಮ್ಮದಿ  ಒಂದು ಮಾನಸಿಕ ಸ್ಥಿತಿ.  ಅದನ್ನು ಹೊರಗೆ ಹುಡುಕಲಾಗದು"  ಎಂದು.

ಇಂದು ಆ ಹಿರಿಯರು ತೀರಿಕೊಂಡು ಹತ್ತನೇ ದಿನ. ವೈಕುಂಠ ಸಮಾರಾಧನೆಗೆ
ಆಮಂತ್ರಣ ಬಂತು. ಹಾಗಾಗಿ ನೆನಪಿನ ಗಾಲಿ ಒಂದು ಸುತ್ತು ತಿರುಗಿ ನಿಂತಿದ್ದು ಹೀಗೇ.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...