ಗಾಂಭೀರ್ಯವೆಂಬ ಗುಮ್ಮ...
"ಇದುವರೆಗಿನ ಬದುಕಿನಲ್ಲಿ ಕೆಲ ಆತ್ಮೀಯರ ಮುಂದಾದರೂ ಹೃದಯ ತೆರೆದು ನಾಲ್ಕು ಮಾತಾಡಿದ್ದರೆ ಇಂದು ಇಲ್ಲಿ ಹೃದಯವನ್ನು ತೆರೆಯುವ ಪ್ರಸಂಗವೇ ಬರುತ್ತಿರಲಿಲ್ಲ"
ಇದು ಹೃದಯ ಶಸ್ತ್ರ ಚಿಕಿತ್ಸೆಯ ಕೋಣೆಯ ದ್ವಾರದ ಮೇಲೆ ಬರೆದ ವಾಕ್ಯ, ಎಂದೊ ಒಮ್ಮೆ ಓದಿದ್ದೆ.
ಅಂದಿನಿಂದ ಆಗಾಗ ನನ್ನನ್ನು ಅತಿಯಾಗಿ ಕಾಡುವ ವಾಕ್ಯವಿದು...ಕೆಲವೇ ಶಬ್ದಗಳ ಜೋಡಣೆಯಾದರೂ ಅದರ ಅರ್ಥವ್ಯಾಪ್ತಿ ಅಪಾರ. ಮಾತನಾಡುವ,ಯೋಚಿಸುವ,ಭಾವನೆಗಳನ್ನು ವ್ಯಕ್ತಪಡಿಸುವ ವಿಶೇಷ ಶಕ್ತಿಯನ್ನು ದೈವ ಮನುಷ್ಯ ಮಾತ್ರರಿಗೆ ಕೊಟ್ಟಿದೆ ,ಅಷ್ಟೇ ಅಲ್ಲ ಈ ಅಪರೂಪದ ಗುಣವಿಶೇಷವೇ ಅವನನ್ನು ಪ್ರಾಣಿಗಳಿಂದ ಪ್ರತ್ಯೇಕಿಸಿ ಭಿನ್ನವಾಗಿಸಿದೆ. ಅದರ ಸರಿಯಾದ ಬಳಕೆ ಅವನದೇ ಹೊಣೆ. ಆದರೆ ಬಹಳಷ್ಟು ಜನಕ್ಕೆ ಇದರ ಗಮನವಿರುವದೇ ಇಲ್ಲ. ಬದುಕಿಡೀ ಹೇಗ್ಹೇಗೋ ಇದ್ದು ಕಳೆದುಬಿಡುತ್ತೇವೆ.
೭೦ ರ ದಶಕದಲ್ಲಿ "ಖೂಬ ಸೂರತ್' ಎನ್ನುವ ಹಿಂದಿ ಚಿತ್ರವೊಂದು ಬಂದಿತ್ತು. ನೋಡಲು ಅದರ ಹೆಸರಿನಷ್ಟೇ ಚಂದ. ಒಂದು ಕೂಡು ಕುಟುಂಬ. ಮನೆಯೊಡತಿ ಅತಿ ಶಿಸ್ತಿನ ಸಿಪಾಯಿ, ಎಲ್ಲದಕ್ಕೂ ಶಿಸ್ತಿನ ಸಂಕೋಲೆ. ಕಟ್ಟಪ್ಪಣೆ. ಸ್ಥಾನ ಬದ್ಧತೆಯಲ್ಲಿದ್ದ ಕೈದಿಗಳಂತೆ ಆಜ್ಞೆ ಪಾಲಿಸುವದೊಂದೇ ಉಳಿದ ಎಲ್ಲರ ಕೆಲಸ. ನಗುವಿಲ್ಲ, ಮತ್ತೆರಡು ಮಾತಿಲ್ಲ, ತಪ್ಪು ಮಾಡಿದ ಕ್ಷಣ ಮಾತ್ರದಲ್ಲಿ ಶಿಕ್ಷೆ ಜಾಹೀರು. ಆಗೊಮ್ಮೆ ಆ ಮನೆಗೆ ದೊಡ್ಡ ಸೊಸೆಯ ಬಿಚ್ಚು ಮನದ ತಂಗಿಯ ಪ್ರವೇಶವಾಗುತ್ತದೆ.ಅವಳೋ ಸದಾ ಚಟುವಟಿಕೆಗಳ factory. ಇಲ್ಲಿಯ ಎಲ್ಲರ ಮನಸ್ಸನ್ನೂ ಕ್ರಮೇಣ ಬದಲಿಸಿ ,ನಿಜವಾದ ಜೀವನದ ರುಚಿ ತೋರಿಸಿ ಮನೆಯೊಡತಿಯ ಎರಡನೇ ಸೊಸೆಯಾಗಿ ಬಂದು ಅ ಮನೆಯನ್ನೇ ನಂದನವಾಗಿಸುವಲ್ಲಿಗೆ ಕಥೆ ಮುಗಿಯುತ್ತದೆ.
ಅವಳು ಮಾಡಿದ ಮೊದಲ ಕೆಲಸ ಸುಳ್ಳು ಗಾಂಭೀರ್ಯವೆಂಬ ಗುಮ್ಮನನ್ನು ಹೊರಹಾಕಿದ್ದು. ಅತಿ ಶಿಸ್ತಿನ ಉಸಿರು ಗಟ್ಟಿಸುವ ವಾತಾವರಣವನ್ನು ಸಡಿಲಿಸಿ ನೆಮ್ಮದಿಯುಸಿರಿಗೆ ದಾರಿ ಮಾಡಿ ಕೊಟ್ಟದ್ದು.ಮನೆ ಮಂದಿಯ ಮನದಾಳದ ಆಸೆ ಆಕಾಂಕ್ಷೆಗಳನ್ನು ಹೂತಿಟ್ಟ ಸ್ಥಳ ಅಗಿದು ಗೋರಿಯಿಂದ ಅವುಗಳನ್ನು ಹೊರತೆಗೆದು ಮುಕ್ತವಾಗಿಸಿದ್ದು. ನಗುವೆಂದರೆ ಏನು ಎಂದು ಮರೆತವರಿಗೆ ಮಂದಹಾಸದ ಮಂದಾರ ಅರಳಿಸಿ ಅದರ ಚಲುವು ತೋರಿಸಿದ್ದು.ನಾನು, ನನ್ನದು, ನನಗೆ, ಎಂದಿದ್ದವರ ಕಣ್ಣು ಪೊರೆ ಕಿತ್ತೆಸೆದು ಎಲ್ಲವೂ ನಮ್ಮೆಲ್ಲರದೂ, ನಮ್ಮೆಲ್ಲರಿಗಾಗಿ ಎನ್ನುವ ಹೊಸ ಸೂತ್ರದಲ್ಲಿ ಅವರನ್ನು ಬಂಧಿಸಿದ್ದು.
ಹೌದು, ಬದುಕೆಂದರೆ ಇಷ್ಟೇ. ಮುಕ್ತವಾಗಿ ನಗುವದನ್ನು ಕಲಿಯುವದು. ಭಾವನೆಗಳನ್ನು ಬದುಕುವದು , ಅಂದ ಮಾತ್ರಕ್ಕೆ ಗಾಂಭೀರ್ಯ ಮರೆತು ಸದಾ ಹಲ್ಲು ಕಿಸಿಯುವದಲ್ಲ. ಎಲ್ಲಿ ಹೇಗಿರಬೇಕೋ ಹಾಗಿರುವದನ್ನು ಬದುಕೂ ಸಹ ತಾನಾಗಿಯೇ ಕಲಿಸುತ್ತದೆ. ಸದಾ ಮುಖ ಬಿಗಿದು ಬೇಕೋ ಬೇಡವೋ ಲೆಕ್ಕದಲ್ಲಿ ಅನುಮಾನಿಸುತ್ತ ತುಟಿಗಳನ್ನು ಹಿಗ್ಗಿಸಿ ಕುಗ್ಗಿಸಿ
ಇಲ್ಲದ ಗಾಂಭೀರ್ಯವನ್ನು ಶ್ರಮಪಟ್ಟು ಪ್ರದರ್ಶಿಸುವ ಅಗತ್ಯವಿರುವದಿಲ್ಲ. ಹಾಗೆ ವ್ಯರ್ಥವಾದ ಗಳಿಗೆ ಮತ್ತೊಮ್ಮೆ ಬದುಕಿನಲ್ಲಿ ಮರಳಿ ನಮಗೆ ಸಿಗುವದಿಲ್ಲ. Laugh your heart out,/ Dil khol ke hasnaa ಅನ್ನುವದಿಲ್ಲವೇ, ಹಾಗೆ ಕೆಲವು ಬಾರಿ ನಕ್ಕರೂ, ಯಾವುದೋ ಪಾರ್ಕಿಗೆ ಹೋಗಿ, ಕೈ ತಟ್ಟಿ, ಕೈ ಮೇಲೆತ್ತಿ ವಿಲನ್ ಗಳು ನಕ್ಕಂತೆ ಗಹಗಹಿಸುವ ಪ್ರಮೇಯ ಬರುವದಿಲ್ಲ. ಬದುಕು ಸಹಜ... ಬದುಕು ಸುಂದರ...ಅಲ್ಲಿ ಅಳು ನಗುಗಳೂ ಸಹಜ ಸುಂದರವಾಗಿರಬೇಕು.
ನಕ್ಕರದೇ ಸ್ವರ್ಗ...
No comments:
Post a Comment