Saturday 28 April 2018

ಮಳೆಬಿಲ್ಲು (ಅನುವಾದ)

( ಅನುವಾದ ನನ್ನ  ಮೊದಲ ಹುಚ್ಚು..ಜಯಶ್ರಿಯವರಿಂದ ಪ್ರೇರಿತಗೊಂಡು ನಾನೂ ಪ್ರಯತ್ನಿಸಿದ್ದೇನೆ...ಅವರ ಓದು,ಬರಹದ ಆಳ ನನ್ನದಲ್ಲ...ಒಂದು ಶಿಶು ಹೆಜ್ಜೆ..ಜಯಶ್ರಿಯವರ ಹೆಜ್ಜೆಗಳ ಹಿಂದೆರಡು ಪುಟ್ಟ ಹೆಜ್ಜೆ..)
ಮುಗಿಲಿನಲ್ಲಿ
ಮಳೆಬಿಲ್ಲು ಕಂಡಾಗಲೆಲ್ಲ
ನನ್ನ
ಹೃದಯ ಮಿಡಿತ
ಆಕಾಶಕ್ಕೇ ನೆಗೆತ...
ನನ್ನ ಬದುಕು ಅಂಕುರಿಸಿದಾಗ,
ಬೆಳೆದು
ದೊಡ್ಡವನಾದಾಗಲೂ ಅಷ್ಟೇ ವರ್ಣಮಯ..
ನನ್ನದೊಂದೇ ಮನದಾಸೆ...
ಮೈಗೆ ಮುದಿತನ ಬರಲಿ..
ಸಾವು ಬಾಗಿಲು ತಟ್ಟಲಿ..
ಮಳೆಬಿಲ್ಲು ಮಾತ್ರ
ಕಣ್ಣುತುಂಬಿರಲಿ...
ಮಗುವು ಮಾನವನ ತಂದೆ...
ನನ್ನ ಮುಂಬರುವ
ದಿನಗಳು ಈ ಭಾವಬಂಧದ
ಸರಪಳಿಯಲ್ಲಿ ಸಹಜ ಸುಂದರ, ಸರಳ
ವಾಗಿ ಹೆಣೆದುಕೊಂಡಿರಲಿ...

Tuesday 24 April 2018

ಮುಖಾಮುಖಿ

ಮುಖಾಮುಖಿ
( ನಾ ಮೆಚ್ಚಿದ ಇಂಗ್ಲಿಷ ಕವಿತೆಯೊಂದರ ಅನುವಾದ __ನನ್ನಿಂದ..)
ಮನದಾಳ
ಕತ್ತಲಿನಲ್ಲಿ ದಿನದಿನಕ್ಕೆ ಕೊನೆಯುಸಿರೆಳೆವ
ನನ್ನಂತರಂಗದ ಸಾಕ್ಷಿ ಪ್ರಜ್ಞೆಗೆ ಆಗಾಗ
ಮುಖಾಮುಖಿಯಾಗುತ್ತೇನೆ..
ಸುಸಜ್ಜಿತ, ಐಷಾರಾಮಿ
ಹೊಟೆಲ್ಗಳಲ್ಲಿ  ಬಾಗಿಲು ತೆರೆದು ಸ್ವಾಗತಿಸಿದ ಬಂಟನ
ತಿಂಗಳವೇತನದಷ್ಟು
ಮೊತ್ತವನ್ನು ಟೇಬಲ್ಮೇಲೆ ಇಟ್ಟು ಬರುವಾಗ...
ತರಕಾರಿ ಪೇಟೆಯಲ್ಲಿ
ಅಪ್ಪನ ಜೊತೆಯಲ್ಲಿ
ಕುಳಿತು ನಗುನಗುತ್ತ
ತರಕಾರಿ ತೂಗುವ
ಚಿಣ್ಣನೊಬ್ಬ ತನ್ನ ಶಾಲಾದಿನಗಳಾಬಹುದಾಗಿದ್ದ ಹಗಲುರಾತ್ರಿಗಳನ್ನುಬಯಲಿನಲ್ಲಿ ಕರಗಿಸುವದನ್ನು ಕಂಡಾಗ...
ಕೂಡುರಸ್ತೆಯಲ್ಲಿ
ದಾಟಿಹೋಗುತ್ತಿರುವ
ಹೆಣ್ಣಮಗಳೊಬ್ಬಳು
ಮೈಮುಚ್ಚಿ ಮರ್ಯಾದೆಯುಳಿಸಿಕೊಳ್ಳಲು ಹರಕು ಸೀರೆಯನ್ನು ಹಿಂದೆಮುಂದೆ ಜಗ್ಗುವಾಗ'  ಉಡುಪು ತಜ್ನನೊಬ್ಬನ ಥಳಕು ಬಳುಕಿನ ಬಟ್ಟೆ ಧರಿಸಿದ
ನಾನು ಕಿಟಕಿಯ ಬಾಗಿಲು ಮುಚ್ಚಿ ಆಚೀಚೆ ನೋಡಿದ ನಾಟಕವಾಡಿದಾಗ ....
ದೀಪಾವಳಿಯ ಹಬ್ಬಕ್ಕೆ
ದುಬಾರಿ ಉಡುಗೊರೆ
ಖರೀದಿಸುವಾಗ, ರಸ್ತೆಯಲ್ಲಿ ದೀಪ ಮಾರುವ ಬೆನ್ನು ಹತ್ತಿದ ಹೊಟ್ಟೆಯ ಪುಟಾಣಿ ಮಕ್ಕಳನ್ನು ಕಂಡಾಗ...
ಅನಾರೋಗ್ಯದಿಂದಾಗಿ
ಮನೆಗೆಲಸದವಳು ತನ್ನ ಚಿಕ್ಕ ಮಗಳ ಶಾಲೆ ಬಿಡಿಸಿ ಕಳಿಸಿದಾಗ
ಹನಿಗಣ್ಣಾಗಿ ಬಟ್ಟೆ, ಪಾತ್ರೆಯ ರಾಶಿ
ದಿಟ್ಟಿಸುವಾಗ...
ಮಗನಿಗೆ ಬೇಕಾದಾಗ ಮನೆಗೆ ಬರುವ ಸ್ವಾತಂತ್ರ್ಯ ಕೊಟ್ಟು ,ಒಂದುದಿನ ತಡವಾಗಿ ಬಂದ ಮಗಳ ಕಂಡು ಕೆಂಡವಾದಾಗ
ಅವಳ ಕಣ್ಣಲ್ಲಿ ಕಂಡ ಪ್ರಶ್ನೆ ಕಂಡಾಗ..
ಚಿಕ್ಕ ಚಿಕ್ಕ ಮಕ್ಕಳ ಮೇಲಿನ ಅತ್ಯಾಚಾರ,ಕೊಲೆ,ಅಪಹರಣಗಳ ಸುದ್ದಿ ಕೇಳಿದಾಗ : ಸಧ್ಯ ನನ್ನ ಮಗಳಲ್ಲ'ಎಂಬ ನೆಮ್ಮದಿಯ ಉಸಿರು ಬಂದಾಗ...
ಜಾತಿ ಧರ್ಮಗಳ ಮೇಲಾಟದ ಗೊಂದಲಗಳಿಂದಾಗಿ
ನನ್ನ ದೇಶ ಹದಗೆಟ್ಟು
ಹದ್ದುಗಳ ಪಾಲಾಗುವಾಗ
ಸುಲಭವಾಗಿ ಭ್ರಷ್ಟ ರಾಜಕಾರಣಿಗಳ ಹೆಗಲಿಗೆ
ಜವಾಬ್ದಾರಿ ವರ್ಗಾಯಿಸಿ ಪಾರಾದಾಗ..
ನನ್ನ ಊರು ಅತಿ ದೂಷಿತವಾಗಿ
ಉಸಿರುಗಟ್ಟಿ ಸಾಯುತ್ತಿರುವಾಗ
ನನ್ನ ಕಾರನ್ನು ರಸ್ತೆಗಿಳಿಸಿದಾಗ...
ನನ್ನ ಆತ್ಮಸಾಕ್ಷಿ ನನ್ನಿಂದಲೇ ದಿನಾಲೂ ಅಷ್ಟಿಷ್ಟು ಸಾಯುತ್ತ
ಈಗ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣಗೊಂಡಾಗ....
ಮೈಕೊಡವಿ ಹಗರವಾಗಲು
ಯತ್ನಿಸುತ್ತೇನೆ..

Tuesday 17 April 2018

ಅಮ್ಮಾ ,ಕ್ಷಮಿಸು...

ಅಮ್ಮಾ,
ನಾನು ನನ್ನ ಕುದುರೆಗಳ
ವಾಪಸ್ ಕಳಿಸಿದೆ..
ಆದರೆ ನನಗೆ ಬರಲಾಗಲಿಲ್ಲ...
ನನ್ನ
ಚಿಗರೆ -ವೇಗದ
ಕಾಲುಗಳು ಕೊರಡಾಗಿದ್ದವು
ಅಮ್ಮ...
ಆದರೂ ಕುದುರೆಗಳ
ಮನೆಗೆ ಕಳಿಸಿದೆ..
ಆ ರಾಕ್ಷಸರಿಗೆ
ಕೋಡುಗಳಿರಲಿಲ್ಲ...
ಉದ್ದುದ್ದ ಉಗುರುಗಳಿರಲಿಲ್ಲ..
ಆದರೂ ತುಂಬಾ
ತುಂಬಾ ನೋವುಣ್ಣಿಸಿದರಮ್ಮಾ
ನೇರಳೇ ಹೂಗಳು..
ಹಳದಿ ಚಿಟ್ಟೆಗಳುಅಸಹಾಯಕವಾಗಿ ಬಿಟ್ಟವು ಅಮ್ಮಾ...
ಅಪ್ಪ ನನಗಾಗಿ
ಹಂಬಲಿಸಿದ್ದು ಬಲ್ಲೆ..
ನನ್ನ ಹೆಸರಿನಿಂದ
ಕೂಗಿದ್ದೂ ಗೊತ್ತು...
ನಾನು ದಣಿದಿದ್ದೆ..
ನನಗೆ ಅರೆಮಂಪರು..
ರಾಕ್ಷಸರು ಅಷ್ಟೊಂದು
ಹಿಂಡಿದ್ದರು ಅಮ್ಮಾ...
ನಿನಗೆ ಅಚ್ಚರಿ ಯಾದೀತು..
ನನಗೀಗ ನಿನ್ನ
ಮಡಿಲಲ್ಲಿ ಮಲಗಿದ ಹಾಗಿದೆ...
ಕಿಂಚಿತ್ತೂ ನೋವಿಲ್ಲ..
ರಕ್ತ ಒಣಗಿದೆ..ನೇರಳೆ ಬಣ್ಣದ ಹೂಗಳು
ನನ್ನಲ್ಲಿ ಲೀನವಾಗಿದೆ...
ಆ ರಾಕ್ಷಸರು ಇನ್ನೂ ಇದ್ದಾರೆ...
ಹಾಗೆಯೇ ಬಣ್ಣಬಣ್ಣದ
ಕಥೆಗಳೂ ಸಹ...ಆ ಯಾತನಾಮಯ
ಅಧ್ಯಾಯಕ್ಕೆ
ಕಿವುಡಾಗು ಅಮ್ಮಾ....

ಛೆ....ಛೆ...

ಛೆ...ಛೆ...
ಪ್ರತಿಸಲ ಹೀಗೇನೇ ಆಗುತ್ತದೆ..
ಮನದ ಮಾತುಗಳು ಕಸಿವಿಸಿಗೊಂಡು ಹೊರಬಂದೇ ಬಿಡುತ್ತವೆ...
ಕೇಳುವದೇ ಇಲ್ಲ..
"ಹೇಳುವದಿಲ್ಲ...
ಎಲ್ಲ ಹೇಳುವ ತುರ್ತಾದರೂ ಏನು?
ಕೇಳಿ ಯಾರಾದರೂ ಏನು
ಮಾಡಬಲ್ಲರು????
ಕೇಳುವ ಮನಸ್ಸಿದೆಯೋ...
ಇಲ್ಲವೋ ನೋಡಬೇಡವೇ?"
ಚಿಂತನ,ಮಂಥನದ ನಡುವೆಯೇ ನುಗ್ಗಿಬರುತ್ತವೆ..ಮನದ ಮಾತುಗಳು..
ಯಾರು ಎಲ್ಲಿಗೆ ಹೋಗುತ್ತಾರೆ?
ಇಲ್ಲೇ ಹತ್ತರದಲ್ಲಿಯೇ ತಾನೇ ಇರುವದು..
ಆದರೂ  ಹೃದಯಗಳು..
ಬೇರೆ...ಬೇರೆ...
ಬಡಿತಗಳು ಬೇರೇಯೇ...
ಹುಟ್ಟುಹಬ್ಬದ ಶುಭಾಶಯಗಳನ್ನು
ಹೇಳಿದಷ್ಟು
ಸಲೀಸಲ್ಲ ಮಾತುಗಳ
ಬಿಚ್ಚಿ ಹರಹುವದು..
ಆದರೆ ನನ್ನ ಚಡಪಡಿಕೆಗೆ ಯಾರು ತಿಳಿಹೇಳಬೇಕು?...
ಎದೆಯಂಗಳದಲಿ ಮೂಡಿದ ಹೆಜ್ಜೆ ಅಳಿಸುವ ಮೊದಲೇ ಎಲ್ಲಾ ರವಾನಿಸುವ ಖಟಿಪಿಟಿ..
ಎಲ್ಲ ಹೇಳಿಸಿಬಿಟ್ಟರೇನೆ ವಿರಾಮ...
ಇತ್ತ ಮನಸೋ..
"ಸರಿಯಾ? ತಪ್ಪಾ?"
?????????????????
ಗೊಂದಲದಲ್ಲಿ ಸಿಲುಕಿದ
ಇಬ್ಬಗೆಯ ಮನಸಿಗೋ
ನಿರಂತರ ಕಸಿವಿಸಿ!!!!

ಬಯಕೆ

ಮೊಬೈಲು,ಕಂಪ್ಯೂಟರು, ಐಪ್ಯಾಡು ಇರದಂಥ ದೂರದ್ಹಳ್ಳಿಯಲೊಂದು
ಪುಟ್ಟ ಮನೆಯಿರಲಿ....
ಕಣ್ಣು ಹಾಯಿಸಿದಲ್ಲಿ ಪುಸ್ತಕದ ರಾಶಿಗಳು..
ಒಂದು ಆರಾಮಕುರ್ಚಿ ಬಯಲಿನಲ್ಲಿರಲಿ...
ಪಕ್ಕದಲ್ಲಿಯೇ ಒಂದು ಚಿಕ್ಕ ಟೀಪಾಯಿರಲಿ
ಹಾಲ್ನೊರೆಯ ಬಿಸಿ ಕಾಫಿ ಮಗ್ಗೊಂದು ಇರಲಿ..
ಖಾರಾ ಬುಂದಿಕಾಳು,ಹುರಿದ ಸೇಂಗಾಬೀಜ
ಎರಡೆರಡು ಬಟ್ಟಲಲಿ ಕೈಗೆ ಎಟುಕಿರಲಿ..
ಆಗಾಗ ಹೊರಬಂದು ಕಣ್ಣಸನ್ನೆಯಮಾಡಿ
'ಏನು ಬೇಕೆಂದುಲಿವ' ಮನದನ್ನೆಯಿರಲಿ..
' ಸಾಕುಬಿಡು ಅಪ್ಪಯ್ಯ..ನಾಳೆ ಓದುವಿರಂತೆ'
ಎಂದೆನುತ ಕನ್ನಡಕ
ಕಸಿವ ಮಗನಿರಲಿ.
' ಅವರಿಗ್ಹೇಗಿರಬೇಕೋ ಹಾಗಿರಲಿ ,ಅಣ್ಣಯ್ಯ,
ಕಾಡಬೇಡೆಂದೆನ್ನೋ ಕುವರಿ ಇರಲಿ...
ಅರಳೊ ಹೂಗಳ ಗಂಧ ಹೊತ್ತೊಯ್ಯೊ ಗಾಳಿ-
ಯದು ಲಾಲಿಯುಲಿಯುತ ಎನ್ನ ಮೊಗವ ಮುದ್ದಿಸಲಿ...
ರಾತ್ರಿ ಹಗಲೆನ್ನದಲೇ
ತೆಕ್ಕೆಯಲಿ ಸಂತೈಸಿ
ವೃದ್ಧಾಪ್ಯ ಹಿತ- ಭಾವ 
ಬದುಕು ಮೂಡಿಸಲಿ..
ಇದ್ದೆನೋ..ಇಲ್ಲವೋ..
ಎಂಬಂತೆ 'ಬದುಕಿ'ರಲಿ..
'ಹೊತ್ತು'ಕರೆದಾಗೆದ್ದು
ನಡೆದು ಬಿಡಲಿ...
         ‌‌        ***********

Tuesday 10 April 2018

ಮಕ್ಕಳು ದೊಡ್ಡವರಾಗಿದ್ದಾರೆ...

( WhatsApp ನಲ್ಲಿ share ಆಗಿದ್ದ ಹಿಂದಿ ಕವನದ ಅನುವಾದ...ನನ್ನಿಂದ....ಯಾರು ಬರೆದದ್ದು ಗೊತ್ತಿಲ್ಲ...ನನಗೆ ಅತಿ ಮೆಚ್ಚುಗೆಯಾಯಿತು...ಬರೆದವರಿಗೂ, ಹಂಚಿಕೊಂಡವರಿಗೂ ಧನ್ಯವಾದಗಳು)
ಮಕ್ಕಳು ದೊಡ್ಡವರಾಗಿದ್ದಾರೆ...
ಹೆಗಲಮೇಲೆ ಮಲಗಿ ಈಗ
ಯಾರೂ ನಿದ್ದೆ ಮಾಡುವದಿಲ್ಲ...
ಎದೆಗೊತ್ತಿ ಗುಣಗುಣಿಸುತ್ತಿದ್ದ
ಜೋಗುಳ ನೆನಪಿಲ್ಲ...
ಗಳಿಗೆಗೊಮ್ಮೆದ್ದು ಹೊದಿಕೆ ಸರಿಮಾಡುವ ಗೋಜಿಲ್ಲ...
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ..
ಹಾಸಿಗೆಗಳೀಗ ಸುಕ್ಕಾಗುವದಿಲ್ಲ...
ಉಟ್ಟ ಬಟ್ಟೆಗಳು ಅಲ್ಲಲ್ಲಿ ಬೀಳುವದಿಲ್ಲ...
ರಿಮೋಟಿಗೆ ಮಾರಾಮಾರಿಯಿಲ್ಲ...
ಮನಮೆಚ್ಚಿದ ಊಟ- ತಿಂಡಿಗಳ ಬೇಡಿಕೆಯಿಲ್ಲ...
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ..
ಹಿಂದಿನಿಂದ ಕೊರಳಿಗೆ ಜೋತು ಬೀಳುವದಿಲ್ಲ....
ಬಗ್ಗಿಸಿ ತಗ್ಗಿಸಿ ಬೆನ್ನಮೇಲೆ
ಕುದುರೆ ಸವಾರಿಯಿಲ್ಲ...
ಊಟ ಮಾಡುವಾಗ ಹಕ್ಕಿಗಳೀಗ ಹಾರುವದಿಲ್ಲ..
ಹರಟೆ- ವಾದ- ತರ್ಕಗಳಿಲ್ಲ...
ಜಗಳ ಬಿಡಿಸುವ ಜಂಜಾಟಗಳಿಲ್ಲ...
ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ....
ಕಣ್ಣು ಮುಚ್ಚಿ ತೆಗೆಯುವದರಲ್ಲಿ
ಸ್ವರ್ಗ ಸರಿದಿದೆ...
ಸುಂದರ ಅನುಭೂತಿಗಳು
ಮಾಯವಾಗಿವೆ.....
ಮನೆ ದೊಡ್ಡದಾಗಿ,ವಿಶಾಲವಾಗಿ ಹೆದರಿಸುತ್ತಿದೆ....
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ....
ದಿನಕ್ಕೆರಡು ಬಾರಿ
ಆರೋಗ್ಯ ವಿಚಾರಿಸುತ್ತಾರೆ...
ಆರಾಮವಾಗಿರಲು ನೆನಪಿಸುತ್ತಾರೆ...
ನಾವು ಜಗಳ ಬಗೆಹರೆಸುತ್ತಿದ್ದೆವು..
ಅವರೀಗ ನಮಗೆ ಉಪದೇಶಿಸುತ್ತಾರೆ...
ಬಹುಶಃ ನಾವೀಗ  ಮಕ್ಕಳಾಗಿದ್ದೇವೆ..
ಅವರು ಬೆಳೆದು ದೊಡ್ಡವರಾಗಿದ್ದಾರೆ..

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...