Saturday 29 April 2023

ನಾನೇಕೆ ಬರೆಯುತ್ತೇನೆ?

ಹೀಗೆಂದು ನನ್ನನ್ನು ನಾನು
ಹಲವು ಬಾರಿ ಕೇಳಿಕೊಂಡಿದ್ದೇನೆ... 
ಕೆಲವೊಂದು ಉತ್ತರಗಳನ್ನು
ಹೊತ್ತಿಗಿರಲೆಂದು ಸಾಕಿಕೊಂಡಿದ್ದೇನೆ...
ಅವು ಸಮರ್ಪಕವಾ?- ಗೊತ್ತಿಲ್ಲ,
ಆದರೂ ಬರೆಯುವದೇನೂ ಬಿಟ್ಟಿಲ್ಲ...
ಬರೆದಿದ್ದೇನೆ...ಬರೆಯುತ್ತಿದ್ದೇನೆ...
ಎಲ್ಲರೂ ಬರೆಯುತ್ತಿಲ್ಲವೇ?
ಎಂಬುದು ನನ್ನ ವಾದ...
ನಾನೇಕಾಗಬೇಕು ಅಪವಾದ?

ಹೇಗೆ ಬರೆಯುತ್ತೇನೆ?
ಪರವಾಗಿಲ್ಲವಾ?  
ಮುಂದುವರಿಸಬಹುದಾ?
ಆಗಾಗ ಆಗಿದೆ ಸ್ವಯಂ ಅವಲೋಕನ-
ಆಗೆಲ್ಲ, ಸಮರ್ಥಿಕೊಂಡದ್ದಿದೆ ನನ್ನನ್ನ...
ಇತರರು ಓದಿದರೆ/ ಲೈಕಿಸಿದರೆ/ 
/ ಕಾಮೆಂಟಿಸಿದರೆ ಖುಶಿ-
ಹಾಗಿಲ್ಲವಾ?-ಕಿಂಚಿತ್ತೂ ಇಲ್ಲ ತಲೆಬಿಸಿ...
ಪ್ರಕಟಣೆಗೆ/ ಪ್ರಶಸ್ತಿಗೆ/ ಪ್ರಶಂಸೆಗೆ ಬೇಕಷ್ಟು ಅರ್ಹರಿದ್ದಾರೆ,
ಅವರಿಗಿರಲಿ ಅದರ ಚಿಂತೆ,
ನನ್ನದು ಬರಿ 'ಬದುಕಿನ ಅಂತೆ- ಕಂತೆ.'

ಹರಳುಗಟ್ಟಿದ ಭಾವಗಳು ಕರಗಬೇಕು,
ತಪ್ಪಾಗಿದ್ದರೆ ಕಿಂಚಿತ್ತಾದರೂ ಕೊರಗಬೇಕು...
ಮನಸ್ಸಿನ ಕಾರ್ಮೋಡಗಳು ಮಳೆ ಸುರಿಸಿ ಲಘುವಾಗಬೇಕು...
ಇತರರ ಅನುಭವ- ಅನುಭಾವಗಳು
ಗುರುವಾಗಬೇಕು...
ಬದುಕಿನ ಪದರುಗಳ ಬಿಡಿಸಿ 
ಬಯಲಾಗಬೇಕು-ಇಂಥವೇ  ಹಳವಂಡಗಳು...
ಮಹಾಭಾರತದ ಹದಿನೆಂಟು 
ಪರ್ವ- ಕಾಂಡಗಳು....

ನಾವು ಅಂದುಕೊಂಡದ್ದೆಲ್ಲ ಬರವಣಿಗೆಯಿಂದಲೇ ಆಗಲಿಕ್ಕಿಲ್ಲ...
ಆಗಬೇಕಾಗಿಯೂ ಇಲ್ಲ...
ಹಾಗಂತ ಬರೆಯುವದನ್ನು 
ಬಿಡಬೇಕಾದ ದರ್ದೂ ಇಲ್ಲ...
ಬರೆಯಬೇಕೆನಿಸಿತಾ-
ಬರೆದು ಬಿಡಬೇಕು...
ಬೇಡವಾ? ತಲೆ ಕೊಡವಿ 
ಎದ್ದು ನಡೆದು ಬಿಡಬೇಕು...
ಅಷ್ಟೇಯಾ...









' ಯಾರಿಗೆ ಬರೆಯಬೇಕು?'- ಎಂಬ ಪ್ರಶ್ನೆಯನ್ನೊಳಗೊಂಡ ಜೋಗಿಯವರ
Fb post ನೋಡಿದೆ.ಇದು ನನಗೆ ನಾನೇ ನೂರು ಬಾರಿ ಕೇಳಿಕೊಂಡ ಪ್ರಶ್ನೆಯೂ ಹೌದು, ಉತ್ತರ ಮಾತ್ರ
ಇನ್ನೂ ಸಿಕ್ಕಿಲ್ಲ.ಸಿಕ್ಕಂತೆ ಅನಿಸಿದರೂ
ಅದೇ ಹೌದಾ ಎಂಬ ಖಚಿತತೆ ಕಂಡಿಲ್ಲ.'ಸಂತೆಗೆ ನೇಯ್ದ ಮೂರು ಮೊಳ'- ದಂತೆ ತುರ್ತಿಗೆ, ಸಮಾಧಾನಕ್ಕೆ,
ಆ ಹೊತ್ತಿಗೆ ಹೊಳೆದ ಉತ್ತರದಂತೆ ಅದು ಅನಿಸಿದ್ದೇ ಹೆಚ್ಚು. ಸಮರ್ಪಕ ವಾಗಿದ್ದರೆ ಪದೇ ಪದೇ ಆ ಪ್ರಶ್ನೆ ಏಳಬೇಕಾಗಿರಲಿಲ್ಲ.
               ಹಾಗೆ ನೋಡಿದರೆ ಈ ಪ್ರಶ್ನೆ
ಕೇಳಿಕೊಳ್ಳುವಷ್ಟು ನಾನು ಬರೆದಿಲ್ಲ. ಅದು ನನಗೆ ಸುರುವಾದದ್ದು ಕೇವಲ ಹವ್ಯಾಸದಂತೆ.ನಂತರ ಚಟವಾಗಿ,ಈಗ 
ಸಮಯ ಕೊಲ್ಲಲು...ಎಂದೂ ನಾನು
ಪತ್ರಿಕೆಗಳಿಗೆ ಕಳಿಸಿಲ್ಲ,ಯಾವುದೇ ಪ್ರಶಸ್ತಿಯ ಮಾತಂತೂ ಬಹುದೂರ. ಆದರೂ ಯಾಕೆ ಬರೆಯುತ್ತೇನೆ? ಕಣ್ಣಿನ‌ ತೊಂದರೆ ಸುರುವಾದಾಗ/ ಕೋವಿಡ್ ಕಾರಣದಿಂದ Operation ಮುಂದೆ ಮುಂದೆ ಹೋದಾಗ, ಆಗುವ/ ಆದ ಅನಾನುಕೂಲಕ್ಕಿಂತ ಬರೆಯಲಾಗುತ್ತಿ
ಲ್ಲವಲ್ಲ ಎಂದು ಚಡಪಡಿಸಿದ್ದೇ ಹೆಚ್ಚು.
                 ನನ್ನ face- book ನ್ನು ನನ್ನ ದಿನಚರಿಯಂತೆ ನಾನು ಬಳಸುವದೇ ಕಾರಣವಿರಬಹುದು.ಅತಿ
ವೈಯಕ್ತಿಕವೆನಿಸದ ಆದಷ್ಟೂ ಎಲ್ಲ ವಿಷಯಗಳ ಬಗ್ಗೆ  ಬರೆದುಕೊಳ್ಳುತ್ತೇನೆ.
ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅದರಲ್ಲಿಯೇ ಸಂಗ್ರಹಿಸುತ್ತೇನೆ, ಒಂದು
ಪುಟ್ಟದಾದ ಟಿಪ್ಪಣಿಯೊಂದಿಗೆ. ಅನವಶ್ಯಕವಾದ ಇತರರ tagged ಬರಹಗಳನ್ನು, forwarded ಮೆಸೇಜು
 



Thursday 27 April 2023

ಜಬ್ ಜಬ್ ಜೋ ಜೋ ಹೋನಾ
ಹೈ ...ತಬ್ ತಬ್ ಸೋ ಸೋ ಹೋತಾ ಹೈ...
         
   ನಮ್ಮ ಈಗಿನ ಮನೆಗೆ ಚಂದದೊಂದು ಹಿತ್ತಲವಿದೆ.ನಮಗೆ manage ಮಾಡಲು ಸಾಧ್ಯವಾಗುವ ಷ್ಟು ಗಿಡ- ಮರ ಹೂಬಳ್ಳಿ ಬೆಳೆಸಿದ್ದೇವೆ. ಸಾಲಿನಲ್ಲಿ ಕೊನೆಯ ಮನೆಯಾದ್ದರಿಂದ
ಸಾಕಷ್ಟು ಬಿಸಿಲು ಬರುತ್ತದೆ.ಬೆಳಗಿನ ತಿಂಡಿಗೆ ಮೊದಲು / ತಿಂಡಿಯ ನಂತರ
ಎರಡು ಕುರ್ಚಿಗಳನ್ನಿಟ್ಟುಕೊಂಡು ಎಳೆ ಬಿಸಿಲಿಗೆ ಮೈಯೊಡ್ಡಿ ಕೂಡುವದು ನನ್ನ ನಿತ್ಯದ ಅಭ್ಯಾಸ.
     ‌          ಇಂದೂ ೯-೩೦ ಕ್ಕೆ ಹೊರಗೆ ಹೋದೆ, ಕೂಡಲೊಂದು/ ಎರಡೂ ಕಾಲು ಚಾಚುವದಕ್ಕಾಗಿ ಒಂದು ಹೀಗೆ ಎರಡು ಕುರ್ಚಿಗಳನ್ನು ಹಾಕಿಕೊಂಡು
ಆಸೀನಳಾಗಿ ಕೈಯಲ್ಲಿ ಮೊಬೈಲ್ ಹಿಡಿದೆ.ಐದು ನಿಮಿಷವೂ ಆಗಿರಲಿಕ್ಕಿಲ್ಲ
ನನಗೆ ಕೆಳಗೆ ಜರಿದ ಅನುಭವ. Vertigo ಬಹಳ ದಿನಗಳ ಮೇಲೆ
ನನ್ನನ್ನು ನೆನೆಸಿಕೊಂಡಿತಾ? ಎಂದೆನೋ
ಅಂದುಕೊಳ್ಳುವದರಲ್ಲಿ ನಾನು ನೆಲಕ್ಕೆ
ಬಿದ್ದು ಆಗಿತ್ತು. ನನ್ನ ತಲೆ garden ಗಾಗಿ
ಕಟ್ಟಿದ ಇಟ್ಟಂಗಿ ಕಟ್ಟೆಗೆ ಬಡಿಯಿತು. ಏನು ನಡೆಯುತ್ತಿದೆ ಗೊತ್ತಾಗದೇ
ಕಾಲು ಸರಿಸಿ ಏಳಲು ಹೋದರೆ ಎರಡೂ ಕಾಲು ಕುರ್ಚಿಯೊಳಗೇ lock
ಆಗಿವೆ. ಕಷ್ಟಪಟ್ಟು ಕಾಲು ಹೊರತೆಗೆದು ಗೋಣು ಎತ್ತಿ ನೋಡಿದರೆ ಕುರ್ಚಿಗೆ ಮೂರೇ ಕಾಲು... ಮುರಿದ ತುಂಡು ಎಲ್ಲೂ ಕಾಣುತ್ತಿಲ್ಲ.ಹೊರಳಾಡಿ ಹೇಗೋ ಕೈ ಎದ್ದು ನೋಡಿದರೆ ಎಲ್ಲ ಅಯೋಮಯ ಕಂಡದ್ದು ...ಕುರ್ಚಿ ಎತ್ತಿದೆ.ದೊಡ್ಡದೊಂದು ಹೆಗ್ಗಣದ ಹೋರಿನಲ್ಲಿ ಕುರ್ಚಿಯ ಕಾಲು ಪೂರ್ತಿ ಹೂತು ಹೋಗಿದೆ.ಮೇಲೆ ಚನ್ನಾಗಿ Trim ಮಾಡಿದ ಹುಲ್ಲು ಇದ್ದ ಕಾರಣ 
ಆ ' ಛುಪಾ ರುಸ್ತುಮ್ 'ನ‌ ಅಂದಾಜು
ಯಾರಿಗೂ ಇಲ್ಲ, ಬಾಯ್ದೆರೆದು  ಕುರ್ಚಿಯ ಒಂದು ಕಾಲನ್ನು ಇಲ್ಲವೇ
ಇಲ್ಲ ಎಂಬಷ್ಟು 'ಸ್ವಾಹಾ' ಮಾಡುವವರೆಗೆ...
                  ನಾನು, ನನ್ನ ಕುರ್ಚಿ ಸುರಕ್ಷಿತ ಎಂದು ಗೊತ್ತಾದ ಕೂಡಲೇ
ತಲೆ ಬೇರೆ ಕಡೆ ಓಡತೊಡಗಿತು.ಎಂಥ ದೊಡ್ಡ ಅಪಾಯದಿಂದ ಪಾರಾದೆ ಎಂದು ಗೊತ್ತಾದ ಮೇಲೆಯೇ ಆಗಿದ್ದರೆ
'ಏನೇನು ಆಗ ಬಹುದಿತ್ತು? '-ಎಂದು
ಊಹಿಸಿ ನಡುಗು ಶುರುವಾಯಿತು. ನನಗೆ ಮರಣದ ಭಯಕ್ಕಿಂತ ಏನಾದರೊಂದು ಆಗಿ, ಪರಾವಲಂಬಿ
ಯಾಗುವದರ ಬಗ್ಗೆ ಸದಾ ಭಯ. ಮಕ್ಕಳ ಮನೆಯಲ್ಲಿರುವದರಿಂದ ಇನ್ನೂ ಹೆಚ್ಚು. ನಾವು ಅವರಿಗೆ ಹೆಚ್ಚು ನೆರವಾಗದಿದ್ದರೂ ಸರಿ, ಅವರಿಗೆ ಭಾರವಾಗಬಾರದೆಂಬ ಒಂದು ನೈಜ ಅನಿಸಿಕೆ.
      ‌     ಈ ವಯಸ್ಸಿನವರಿಗೆ  ಜಾರಿ ಬೀಳುವದು, ಎಲುಬು ಸುಲಭವಾಗಿ
ಮುರಿಯುವದು,ಒಮ್ಮೆಲೇ ಬಿದ್ದ ಪರಿಣಾಮವಾಗಿ ತಲೆಗೆ ಪೆಟ್ಟು ಬಿದ್ದು,
ಬೇರೇನೋ ಆಗುವದು ಎಲ್ಲ ನಿತ್ಯ
ಕೇಳುವ ಸುದ್ದಿ.ನನಗೇನಾಗಿದೇ ನನಗೇ ಗೊತ್ತಾಗದ್ದರಿಂದ ಯಾರನ್ನೂ ಕೂಗಿ
ಕರೆಯಲಿಲ್ಲ.ಒಂದು ಕ್ಷಣ ನಿಂತು ತಲೆ
ಸುತ್ತುತ್ತಿಲ್ಲ ತಾನೇ ಎಂದು ಖಚಿತ ಪಡಿಸಿಕೊಂಡು ನಿಧಾನವಾಗಿ ಕೈ- ಕಾಲಿನ ಮಣ್ಣು ತೊಳೆದುಕೊಂಡು ಏನೂ ಆಗಿಲ್ಲ ಎಂಬಂತೆ ಮಗಳನ್ನು ಕರೆದು ಒಂದು ಎಚ್ಚರಿಕೆ ಕೊಟ್ಟೆ. ದೇವರೆದುರು ಅರಿವಿಲ್ಲದೆ ಎರಡೂ ಕೈ
ಜೋಡಿಸಿ ಧನ್ಯವಾದಗಳನ್ನು ಹೇಳಿ ಮುಗಿಸಿದರೂ ಎದೆ ಬಡಿತ ತಪ್ಪಿದ ಸದ್ದು ನನಗೆ ಕೇಳುತ್ತಿತ್ತು.
            'ತೇನ ವಿನಾ ತೃಣಮಪಿ ನ ಚಲತಿ'- ಎಂದು ಕೇಳಿದ್ದೇನೆ, ಅನೇಕರಿಗೆ
ಅನೇಕ ಬಾರಿ ಹೇಳಿದ್ದೇನೆ, ಇಂದು
ಪೂರ್ಣ ಪ್ರಮಾಣದಲ್ಲಿ ಅನುಭವಿಸಿದ್ದೇನೆ ಕೂಡ...
               ನಿಜ- ಜಬ್ ಜಬ್ ಜೋ ಜೋ ಹೋನಾ ಹೈ...ತಬ್ ತಬ್ ಸೋ ಸೋ ಹೋತಾ ಹೈ...


             

Wednesday 26 April 2023

            ತುಂಬು ಕುಟುಂಬದಲ್ಲಿ ಬೆಳೆದವಳೆಂದೋ/ ಅಸಂಖ್ಯಾತ ಬಂಧು - ಬಳಗದಲ್ಲಿದ್ದ ಸಂಸ್ಕಾರದಿಂದ
ಲೋ, ಬಡತನ ಕಲಿಸಿದ ಮೌಲ್ಯಗಳಿಂ ದಲೋ ನಾನು ಸ್ವಭಾವದಿಂದ ಬಹು ರ್ಮುಖಿ, ಅಂತರ್ಮುಖಿಯಲ್ಲ... ಸಂತೋಷವನ್ನು ಸುಲಭವಾಗಿ ಹಂಚಿಕೊಳ್ಳುತ್ತೇನೆ.ದುಗುಡಗಳನ್ನು ಆಪ್ತರೊಂದಿಗೆ ತೋಡಿಕೊಳ್ಳುತ್ತೇನೆ. ಯಾವುದೇ ಘನವಾದ ಉದ್ದೇಶದಿಂದಲ್ಲ, ' ಮಳೆಸುರಿದು ಹಗುರಾದ ಮುಗಿಲಿನಂತಿರಲು' ಸಾಧ್ಯವಾಗುತ್ತದೆ ಎಂದು ಮಾತ್ರ...
                ಇಂಥ ಬದುಕಿನಲ್ಲಿ ಬದುಕಿನ ಹಲವಾರು ಬಣ್ಣಗಳನ್ನು ಕಂಡಿದ್ದೇನೆ, ಸತ್ಯಗಳನ್ನು ಅರಿತಿದ್ದೇನೆ, ಆದರೆ ಕೊಂಚ ತಡವಾಯಿತು ಎಂದು ಅನಿಸಿದ್ದೂ ಇದೆ.
      ‌‌‌           ಜಾಣರು/ ಸಾಧಕರು/ ವಿದ್ವಾಂಸರು/ ಸಮಾಜ ಸುಧಾರಕರು
ಇಂಥ ಪ್ರಭಾವೀ ವಲಯ ಸೇರಲು ನಾವೆಲ್ಲ ಹಪಹಪಿಸುತ್ತೇವೆ.ಇದಾವುದರ
ಅರಿವೇಯಿಲ್ಲದೇ ಸಾರ್ಥಕ ಜೀವನ ಬದುಕಿದ/ಈಗಲೂ ಬದುಕುತ್ತಿರುವ
ಒಂದು ವಲಯವಿದೆ. ಅದರಲ್ಲಿ ಕಲಿತವರಿಲ್ಲ, ಉದ್ದುದ್ದ ಪದವಿಗಳಿಲ್ಲ, ಬಹುಭಾಷೆಗಳ ಅರಿವಿಲ್ಲ, ಸ್ವಂತ ದುಡಿಮೆಯ ಹಣ ಕೈಯಲ್ಲಿಲ್ಲ.ಆದರೂ
ತಾವೂ ನೆಮ್ಮದಿಯಿಂದ ಇದ್ದು, ಹೆಚ್ಚಾದ
ನೆಮ್ಮದಿಯನ್ನು ಇತರರಿಗಾಗಿ ಬಳಸುತ್ತಾರೆ.ತಮ್ಮದೆಂಬುವ ಸಮಯ
ಕಳೆದು ಉಳಿದುದನ್ನು ಇತರರಿಗಾಗಿ
ವ್ಯಯಿಸುತ್ತಾರೆ .ಅಸಹಾಯಕರ ಸಮಯಕ್ಕೆ ಒದಗುತ್ತಾರೆ.ಹಸಿದವರಿಗೆ
ಊಟ ಕೊಡುವದು/ಆರೋಗ್ಯವಿಲ್ಲ ದವರನ್ನು ದವಾಖಾನೆಗೆ ಕರೆದೊಯ್ಯು ವದು ಅಗತ್ಯವಿದ್ದವರಿಗೆ ಕೈಲಾದಷ್ಟು/
ಸಾಧ್ಯವಾದಷ್ಟೂ ನೆರವಾಗುವದು ಇಂಥ  ಸಮಾಜಮುಖಿ ಕೆಲಸಗಳಲ್ಲಿ
ತೊಡಗಿಸಿಕೊಂಡು  ಹಾಯಾಗಿರುತ್ತಾರೆ, ಯಾವುದೇ ಮತ- ಪಂಥಗಳ ಗೊಡಿವೆಯೇ ಇಲ್ಲದೇ/ ಕೀರ್ತಿ- ಹೆಸರಿನ ಹಂಗಿಲ್ಲದೇ/ ಬದುಕನ್ನು ಗೊಣಗದೇ ಬಂದ ಹಾಗೆಯೇ ಸ್ವೀಕರಿಸುತ್ತಲೇ/ನಂಬಿದ ಯಾವುದೋ
ಒಂದು ನಿಯತಿಗೆ ಬಾಗುತ್ತಲೇ/ ಯಾವದೇ ತಮಟೆಯ ಸದ್ದಿಲ್ಲದೇ/ ವಂದಿಮಾಗಧರ ಸಂಗವಿಲ್ಲದೇ ತಾವೇ ತಾವಾಗಿ, ತಮಗಾದ ಮೇಲೆ ಆದಷ್ಟು
ಇತರರಿಗಾಗಿ...
          ‌ಈಗ ಚುನಾವಣೆಯ ಸಮಯ.
ಎಲ್ಲರಿಗೂ ಮನ್ನಣೆಯ ದಾಹ. ಯೋಗ್ಯತೆ ಇದೆಯಾ? ಇಲ್ಲವಾ? ಎಂಬ ಮಾತೇಯಿಲ್ಲ...ಎಲ್ಲರ ಬಾಯಲ್ಲಿ ಸೇವೆ ಮಾಡುವ ಮಂತ್ರ. ಪರಿವರ್ತನೆಯ ಹರಿಕಾರರಾಗುವ ಭರವಸೆ.ತಾವು ಸೋತರೆ ದೇಶ ಸೋತಂತೆ ಎಂದು ಬಿಂಬಿಸುವ ತವಕ. ಸ್ವಂತ ನೆಮ್ಮದಿಗೆ/ ಇತರರ ನೆಮ್ಮದಿಗೆ ಇದೆಲ್ಲಾ ಬೇಕಾ? ನಿಜವಾದ ಕಾಳಜಿ ಇದ್ದರೆ, ಜನಸೇವೆಯ ಹಂಬಲವಿದ್ದರೆ ಆ ಮಾತು ಬೇರೆ, ಸ್ವಂತದ ಹಿತಕ್ಕೆ/ ಮಹಾತ್ವಾಕಾಂಕ್ಷೆಗೆ ಪರೋಪಕಾರದ ಬಣ್ಣಬಳೆದು ಮುಗ್ಧರನ್ನು ಬಲೆ ಹಾಕುತ್ತಿರುವವರ ಬಗ್ಗೆ ಕೆಲವು ಗಳಿಗೆ ಯೋಚಿಸಿದಾಗ ಮಂಥನದಿಂದ ಬಂದ ನವನೀತವಿದು
       ನನ್ನ ಮಟ್ಟಿಗೆ ಮಾತ್ರ ಅನ್ವಯ...





Monday 24 April 2023

       ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ‌ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ ತಯಾರಿ ಮುಗಿದು ಹೊರಡುವವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆ ದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
          ‌        ನನಗೂ ಮಕ್ಕಳು ಆದಷ್ಟು
ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಧನಿಕಳಾಗಿರಲಿಲ್ಲ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ 
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
            " ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು /  ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನ ಮೂವತ್ಮೂರನೇ
ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
                  ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷ.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು graduation  day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಹೋಗಲಾಗುತ್ತಿಲ್ಲ.
                ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ  ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ‌ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.  
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ  ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು.
          ‌‌ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ 
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
    


                  

Saturday 22 April 2023

ಅಕ್ಷಯ ತೃತೀಯದ 'ಸ್ವರ್ಣ ಖರೀದಿ'ಯ ಪ್ರಸ್ತಾಪದಿಂದ ಬೇರೆಡೆಗೆ ಗಮನ ಸೆಳೆಯುವ ಮಹೋದ್ದೇಶ ದಿಂದ ಪ್ರಾರಂಭವಾದ ತೋರಣ ಅತಿ ಆಸಕ್ತಿಕರವಾದ ಸ್ವರ್ಣಾನುಪಾತಕ್ಕೆ ಬಂದು, ನಿಂತು ಫಿಬೋನಾಚಿ ಸರಣಿಗೆ
ನೀವು ಕೊಟ್ಟ ಅಸಂಖ್ಯಾತ  ಉದಾಹರಣೆಗಳಲ್ಲಿ ನಮ್ಮನ್ನು ಮುಳುಗಿಸಿ ಸಮರ್ಥವಾಗಿ ಗೆದ್ದುಬಿಟ್ಟಿರಿ. ಒಂದು ಕಾಲಕ್ಕೆ ಬಂಗಾರದ (ಜಿಂಕೆಯಲ್ಲ) ಹಿಂದೆ ಬಿದ್ದು ಅದೇ ಬದುಕು ಎಂಬಂತಿದ್ದು ಇದೀಗ ಅಕ್ಷಯ ತೃತೀಯಕ್ಕೆ ಅಕ್ಷಯವಾಗು ವದು ಅದೊಂದೇ ಅಲ್ಲ ಎಂಬ ನಿಜ ಸ್ವರೂಪ ತಿಳಿಯುವದಕ್ಕೆ ಸಾಕಷ್ಟು ಹೂರಣ ಒದಗಿಸಿದ್ದೀರಿ. ಫಿಬೋನಾಚಿ ಸರಣಿಗೆ ನೀವು ಕೊಟ್ಟ ಅಸಂಖ್ಯಾತ ಸ್ವರ್ಣಾನುಪಾತ ಉದಾಹರಣೆಗಳ 
ಅಕ್ಷರಶಃ ' ಅಕ್ಷಯ'ವಾದ (ಉದ್ದ/ ಅಗಲಗಳ)ಪಟ್ಟಿ ನಿಜಕ್ಕೂ ಆಸಕ್ತಿಕರವಷ್ಟೇ ಅಲ್ಲ ಜ್ಞಾನಕ್ಕೆ ಪೂರಕವೂ ಆಗಿದೆ.ಧನ್ಯವಾದಗಳು ತಮಗೆ...

Friday 21 April 2023

 ಹೀಗೊಂದು ಸಿನೆಮಾ ಶೂಟಿಂಗ್ ಕಥೆ .         
  ‌‌‌‌          ೧೯೭೦-೮೦ ರ ದಶಕ. ನಮ್ಮನೆಯಲ್ಲೊಂದು ಸಿನೆಮಾ ಶೂಟಿಂಗ್ ಆಗಿತ್ತು.ಹೆಸರು ' ಕಿತಾಪತಿ'.
ಗಿರೀಶ ಕಾರ್ನಾಡ್/ ವೈಜಯಂತಿ ಕಾಶಿ/ ಡಾ, ಗೋವಿಂದ ಮಣ್ಣೂರ್/ ಶಫಿ ಇನಾಮದಾರ್ ಮುಂತಾದವರು ಪಾತ್ರವರ್ಗದಲ್ಲಿ. ಸಂಪೂರ್ಣ ಕಥೆ ನೆನಪಿಲ್ಲ.ಅದರ ಬಹುಭಾಗ ಒಂದು ಚಾಳ್ನಲ್ಲಿ ಚಿತ್ರೀಕರಣವಾಗಬೇಕಿತ್ತು.
ನಮ್ಮದು ಅಂಥದೇ ಒಂದು ಚಾಳಿದ್ದು/ನನ್ನವರಿಗೆ ಅತಿಯಾದ ನಾಟಕ- ಸಿನೆಮಾದ ಹುಚ್ಚು ಇದ್ದ ಕಾರಣಕ್ಕಾಗಿ ಅದೇ ಆರು ಮನೆಗಳುಳ್ಳ ಚಾಳು ಚಿತ್ರೀಕರಣಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಒಂದು ಹೆರಿಗೆಯ ಹಾಗೂ ಮಗುವನ್ನು ತೊಟ್ಟಲಿಗೆ ಹಾಕುವ,
/ಹೀಗೆ ಮನೆಯ/ ಚಾಳಿನ ದೃಶ್ಯಗಳಿಗೆ ಸಂಬಂಧಿಸಿದ ದೃಶ್ಯಗಳಿಗೆ ಸುತ್ತಮುತ್ತ ಲಿನ ಹೆಣ್ಣುಮಕ್ಕಳನ್ನೇ ಆಯ್ದುಕೊಂಡು ಖರ್ಚು ಉಳಿಸುವ ಯೋಜನೆಯೂ ನಡೆದಿತ್ತು.ಅತ್ಯಂತ ಉತ್ಸಾಹಿ ಮಹಿಳೆ ಯರು ನಾಮುಂದು/ ತಾ ಮುಂದು ಎಂದು ಸ್ವಂತ ಇಚ್ಛೆಯಿಂದ ಮುಂದೆ ಬಂದವರಿಗೆ ಅವಕಾಶ‌ ಸಿಗುತ್ತಿತ್ತು.ನಮ್ಮ ಚಿಕ್ಕಮ್ಮ ಹುರುಪಿನ ಗಣಿ, ಅವಳದು ತೀರದ ಉತ್ಸಾಹ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಹೃದಯಿ.ಅವಳೂ ಅದರ ಕೆಲ ದೃಶ್ಯಗಳಲ್ಲಿ ಭಾಗವಹಿಸಿ ಶೂಟಿಂಗ್ ಸಮೃದ್ಧಗೊಳಿಸಿದಳು. ನಾನು ,ನನ್ನ ಇಬ್ಬರು ಹೆಣ್ಮಕ್ಕಳು, ನನ್ನ ಯಜಮಾನರು ಎಲ್ಲರೂ ಇದ್ದುದು
ಅವಳಿಗೆ ಧೈರ್ಯ ಕೊಟ್ಟಿತ್ತು.ಅದು ಹೇಗೋ ಈ ಸುದ್ದಿ ನನ್ನ ಮೌಶಿಯ ಗಂಡನಿಗೆ ತಿಳಿದದ್ದೇ ತಡ, ಮನೆಯಲ್ಲಿ
ವಾದ, ವಿವಾದ, ಗಲಾಟೆ, ಕೂಗಾಟಗಳು ಸುರುವಾದವು.ದೃಶ್ಯಗಳು ತೊಟ್ಟಿಲ ಸಮಾರಂಭಕ್ಕೆ ಸಂಬಂಧಿಸಿದ್ದು ಅವಳ ಜೊತೆ ಹತ್ತಾರು ಹೆಣ್ಣುಮಕ್ಕಳು ಭಾಗವಹಿಸಿದ್ದರು.ಅದೊಂದು ತೊಟ್ಟಿಲು ಹಾಗೂ ಮಗುವಿನ ನಾಮಕರಣದ ದೃಶ್ಯ ಮಾತ್ರ. ಬಿಡಿಯಾಗಿ ನೋಡಿದರೆ ಸಿನೆಮಾಕ್ಕೆ
ಸಂಬಂಧಿಸಿದ್ದು ಎಂದು ಆಣೆ ಮಾಡಿ ಹೇಳಬೇಕು.ಇದೆಲ್ಲ ಬಿಡಿಸಿ ಹೇಳಿದರೂ
ನಮ್ಮ ಕಾಕಾ convince ಆಗಲೇಯಿಲ್ಲ
ಯಾರೋ ಅವರಿಗೆ ಸಿನೇಮಾ poster
ಗಳನ್ನು ಕಸದ ತೊಟ್ಟಿಯ ಮೇಲೆ/ ಅಲ್ಲಲ್ಲಿ ಗೋಡೆಗಳ ಮೇಲೆ/ಸಾರ್ವಜನಿಕ ಶೌಚಾಲಯಗಳ ಮೇಲೆ/ magazines ಪುಟಗಳಲ್ಲಿ ಹಾಕುತ್ತಾರೆ
ಎಂದು ಹೇಳಿಬಿಟ್ಟಿದ್ದರು.ಶೂಟಿಂಗನ್ನೂ
ನೋಡದ ಅವರಿಗೆ ಏನೇನೋ ಊಹೆಗಳಿಂದ ಮನೆತನದ ಮರ್ಯಾದೆ ಹರಾಜಿಗೆ ಬಿದ್ದಷ್ಟೇ ಆಘಾತ. ಕೊನೆಗೆ ನಮ್ಮನೆಯವರು " posters ಎಲ್ಲರವೂ ಮಾಡುವದಿಲ್ಲ, ಮುಖ್ಯ ದೃಶ್ಯಗಳದ್ದು ಮಾತ್ರ ಮಾಡುತ್ತಾರೆ, ನಾವು ಮಾಡಿದ ದೃಶ್ಯಕ್ಕೆ Publicity ಬೇಕಿಲ್ಲ ,ಅದು ಅಂಥ ಮುಖ್ಯ ಸೀನಲ್ಲ ಎಂದೆಲ್ಲ ಒಂದು ತಾಸು ತಿಳಿ ಹೇಳಿ,
" ಹಾಗೇನೇ ಅದರೂ ನಾನೇ ಜವಾಬ್ದಾರ "- ಎಂದು ಹೇಳಿದ ಮೇಲೆ ಮಳೆಯ ಹನಿಗಳು ನಿಂತವು.ಆದರೆ ಮರದ ಹನಿಗಳು ಮಾತ್ರ ಎಷ್ಟೋ ದಿನಗಳವರೆಗೆ ನಿಲ್ಲಲಿಲ್ಲ.ಆಗಾಗ‌ ಸಿಡಿಯುತ್ತಲೇ ಇದ್ದವು...

                ಇದು ಆಗಿನ ಕಾಲದ ಜನರ ಬದುಕಿನ ರೀತಿ.ವೃತ್ತಿ ರಂಗಭೂಮಿ/ ಹವ್ಯಾಸಿ ರಂಗಭೂಮಿ / ಅಭಿನಯಾ ಸಕ್ತರನ್ನು ಹೊರತು ಪಡಿಸಿ ಸಮಾಜದ ಉಳಿದವರು ಸುಲಭವಾಗಿ ಸಾಮಾಜಿಕ Scrutiny ಗೆ ಸಿಕ್ಕು ಒದ್ದಾಡುತ್ತಿದ್ದರು. ಅದೇ ಈಗ‌ ಎಲ್ಲರಿಗೂ ವ್ಯಕ್ತಿ ಸ್ವಾತಂತ್ರ್ಯವಿದ್ದು ಎಲ್ಲರ ಆಯ್ಕೆಗಳಿಗೂ ಮುಕ್ತದ್ವಾರಗಳಿವೆ. ಇಂದಿನ ಪ್ರಸಾರ/ ಪ್ರಚಾರಗಳಲ್ಲಿ ಅದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಲ್ಲಿ ಯಾವುದೂ ಪ್ರಶ್ನಾರ್ಹವಲ್ಲ. ಅಷ್ಟೇ ಅಲ್ಲ, ಯಾರದೇ ಯಾವುದೇ ಕ್ರಮವನ್ನು ಬೇರೆಯವರು ಪ್ರಶ್ನಿಸಲಾರರು/ ಪ್ರಶ್ನಿಸಲಾಗದು. ನಾವೇ ಸ್ವತಃ ಸಿನೆಮಾಗಳ/ ನಾಟಕದ ಅಥವಾ ಸಾಹಿತ್ಯ ಕ್ರೇತ್ರದ ದಿಗ್ಗಜರ ಜೊತೆಯಲ್ಲಿ ನಿಂತು ಸಂಭ್ರಮಿಸುವ ಪರಿ ಯಾರಿಗೆ ಗೊತ್ತಿಲ್ಲ?ಅವರೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಂಡು ನಾವೇ celebrities ಆದಂತೆ ಹಿಗ್ಗುವುದಿಲ್ಲ...ಎಂದೋ ಒಮ್ಮೆ ತೆಗೆಸಿಕೊಂಡ ಫೋಟೋಗಳನ್ನು
ಪದೇ  ಪದೇ ನೆಪಿಸಿಕೊಂಡು ಇಂದೇ ನಡೆದಂತೆ ಭ್ರಮೆಗೆ ಜಾರುವುದಿಲ್ಲ??
  ‌
          ಒಂದು ವಯಸ್ಸಾಗಿ ಮೊದಲಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಾದಾಗ 
" ಕೂದಲುದುರಿದವಳು  ಹಳೆಯ  'ತುರುಬನ್ನು' ಸದಾ ನೆನೆಯುವಂತೆ 
ನೆನೆಯುವದಿಲ್ಲ!!??





       

Monday 17 April 2023

ಹಾಗೇ ಸುಮ್ಮನೇ...

ಅವರ ಬಿಟ್ಟು, ಇವರ  ಬಿಟ್ಟು, ಇವರಾರು?...

         ‌‌‌‌      ಸುಮಾರು  ಒಂಬತ್ತು ಹತ್ತರ ನಡುವೆ ಹೀಗೊಂದು ಫೋನು,
" ಕೃಷ್ಣಾ ಮನೇಲಿದೀರಾ??
" ಹಾ ,ಇದೀನಿ..." 
"ಒಂದ್ಹತ್ತು ನಿಮಿಷ ನಿಮ್ಮನೆಗೆ ಬರಬಹುದಾ?"
"ಅಯ್ಯೋ ಕೇಳೋದೇಕೆ?" ಬೇಕೆಂದರೆ ಬಂದು ಬಿಡಬೇಕಪ್ಪಾ"
" ಹಾಗಲ್ಲ. ಕೃಷ್ಣಾ,ಮಕ್ಕಳು ಮೊಮ್ಮಕ್ಕಳು ಇದ್ದರೆ
ತೊಂದರೆಯಾಗಲ್ವಾ?
" ಹಾಗೇನಿಲ್ಲ.ನನ್ನ ರೂಮಿನಲ್ಲಿ ಕೂಡೋಣ ..ಇಲ್ಲದಿದ್ದರೆ ಮನೆಯದುರು swimming pool  lawn ನಲ್ಲಿ ಕೂಡೋಣ..
ಬಂದಂತೂ ಬನ್ನಿ"
                    ‌‌ಅಲ್ಲಿಗೆ phone cut...ಮತ್ತು ಹತ್ತು ನಿಮಿಷಕ್ಕೆ walking ಮುಗಿಸಿ ಮನೆಕಡೆ ಮುಖಮಾಡಿದ  ಮೂರ್ನಾಲ್ಕು ಗೆಳತಿಯರು..
ತೆರೆದ ಬಾಗಿಲ ಎದುರು...
              ‌  ‌‌‌‌‌‌‌ಪ್ರಾರಂಭಿಕ ಮುಗುಳ್ನಗೆ,ಕೈ ಕುಲುಕುವಿಕೆ, ಹಾಗೊಂದು ಹಿಗ್ಗು ,ಮೇಲೊಂದು hugಉ  ಎಲ್ಲ  ಕಿಲಕಿಲ ಮುಗಿದಮೇಲೆ ಆಸೀನರಾಗಿ,ಸ್ವಲ್ಪು ಸುಧಾರಿಸಿಕೊಂಡರೋ
ಶುರು ಕಥಾನಕ..
                   ‌ ‌‌ ಒಬ್ಬರಿಗೆ ,ಮಗಳು ಲಕ್ಷಗಟ್ಟಲೇ ಪಗಾರದ ನೌಕರಿಗೆ bye ಹೇಳಿ ಸಮಾಜ ಸೇವೆಯಡೆಗೆ  ಮನವೊಲಿದಿದ್ದರ ಬಗ್ಗೆ ಆತಂಕ...ಈ ಎಲ್ಲ ಹುಚ್ಚು ನಾಕು ದಿನ..
ಇವರಂತೆ ಉಳಿದವರಿರದಿದ್ದರೆ  ಭ್ರಮ ನಿರಸನಗೊಂಡು ವಾಪಸ್ ಬಂದಾಗ ಅಷ್ಟು ಭದ್ರ ನೌಕರಿ ಇವರಿಗೆ ಕಾದಿರುತ್ತೆಯೇ? ನೌಕರಿ ಬಿಟ್ಟರೆ ಬಿಡಲಿ ,ಚಂದದೊಂದು  ಮಗು ಮಾಡಿಕೊಂಡು
ಬದುಕಿನಲ್ಲಿ settle ಆಗಲಿ ಎಂಬ ಬಯಕೆ...
                        ಇನ್ನೊಬ್ಬರ ಮಗನಿಗೆ ವಿದೇಶಕ್ಕೆ ಹೋಗಿ ಭವಿಷ್ಯ ಭದ್ರ ಮಾಡಿಕೊಂಡ ಮೇಲೆ ಮದುವೆಯಾಗುವ ಯೋಜನೆ...ಅವನ ಯೋಚನೆಗೆ ಮನೆಮಂದಿಯ ಸಹಮತವಿಲ್ಲ...
ರೆಕ್ಕೆ ಬಲಿತ ಹಕ್ಕಿ ಹಾರಿಹೋದ ಮೇಲೆ ತಿರುಗಿ ಗೂಡಿಗೆ ಬರುವ ಗ್ಯಾರಂಟಿ ಕೊಡುವವರಾರು??
             ‌‌‌‌‌ ‌        ಮತ್ತೊಬ್ಬರ ಮಗಳಿಗೆ ತನ್ನ ಜಾತಿಯದಲ್ಲದ  ಹುಡುಗನ  ಮೇಲೆ ಒಲವು..
ಇದೂ ಸುಲಭ ಪರಿಹಾರದ ವಿಷಯವಲ್ಲ..
               ಮಗದೊಬ್ಬರ ಸಂಸಾರದಲ್ಲಿ, ಹೊಂದಿಕೊಂಡು ಇರಲಾಗದ  ಸದಸ್ಯರ ಜೊತೆಗಿನ ಅಭಿಪ್ರಾಯ ಭೇದಗಳ  ತಾಕಲಾಟದಿಂದ ಬಿಸಿಲ್ಗುದುರೆಯಾದ ಮನಶ್ಶಾಂತಿ....
               ಎಲ್ಲರ ಬುಟ್ಟಿಗಳಲ್ಲೂ ಬೇರೆ ಬೇರೆ ಹಾವುಗಳದೇ ನರ್ತನ...ಆದರೆ ವಿಭಿನ್ನ ಪರಿಸರದಲ್ಲಿ ಬೆಳೆದ ಹಿರಿಯರಿಗೆ ಬಿಸಿ ತುಪ್ಪ...ಉಗುಳಲಾಗದೇ,ನುಂಗಲಾಗದೇ , ಹೊಂದಿಕೊಳ್ಳಲೂ ಆಗದೇ  ಒಳಗೊಳಗೇ  ಕಾಡುವ ನೋವುಗಳ ಮುಂದೆ ಹಿಡಿ- ಮುಷ್ಟಿಯಾಗುವ‌ ಅನಿವಾರ್ಯತೆ..
    ‌                  ‌ ‌ಈಗ ಜಗತ್ತು ಬದಲಾಗಿದೆ..ಆಗುತ್ತಿದೆ...ಯಾರೂ ಉಳಿದವರನ್ನು ಮೊದಲಿನಂತೆ ಆಡಿಕೊಳ್ಳುವದಿಲ್ಲ..
ಎಲ್ಲರ ಮನೆಯ ದೋಸೆಯೂ ತೂತೇ...ಆದಷ್ಟು ಹೇಳಿನೋಡೋಣ..ಮನವೊಲಿಸುವ ಪ್ರಯತ್ನ ಮಾಡೋಣ...ಸಾಕಷ್ಟು ಅವಕಾಶ ಕೊಟ್ಟುನೋಡೋಣ...ಪರಿಹಾರ ಕನಸು ಎಂತಾದರೆ ಅವರ ಮಟ್ಟಿಗೆ ಅವರನ್ನು ಬಿಟ್ಟು ಬಿಡುವದೊಂದೇ ದಾರಿ ..ಎಂತೆಲ್ಲ ಮಾತುಗಳು ಹರಿದಾಡಿ ,ಮಡುಗಟ್ಟಿದ  ಆತಂಕಗಳು ಕರಗತೊಡಗಿದ ಮೇಲೆ.ಒಂದಿಷ್ಟು ತಿಂಡಿಯೋ,snacksಒ,,ಒಂದು ತಂಪು ಪಾನೀಯವೋ,,ಒಂದೊಂದು  cup coffee ಓ ಸರಬರಾಜಾದ ಮೇಲೆ  ಎಲ್ಲರ ಮುಖದ ಮೇಲೊಂದು ತೆಳುನಗೆಯೊಂದಿಗೆ ತಾತ್ಕಾಲಿಕ ವಿದಾಯ...
 ‌‌                 ‌‌‌   ಇಂಥ ಭೇಟಿಗಳು,ಭಾವನೆಗಳ shareಮಾಡುವಿಕೆ, ಅಪಾಯಕಾರಿಯಲ್ಲದ  gossips ,ಗಳು ಮನಸ್ಸಿಗೆ tonic ಕೆಲಸ ಮಾಡುತ್ತವೆ ಎಂಬುದನ್ನು  ಇತ್ತೀಚೆಗೆ ಮನಶ್ಶಾಸ್ತ್ರಜ್ಞರು  ಒಪ್ಪಿಕೊಳ್ಳುತ್ತಿದ್ದಾರೆ..

       ‌‌      ‌      ‌‌ಮನುಷ್ಯ ಸಂಘಜೀವಿ...ಜನರ ಮಧ್ಯದಲ್ಲೇ ಹುಟ್ಟಿದ ಸಮಸ್ಯೆಗಳಿಗೆ ಅವರ ಮಧ್ಯದಲ್ಲೇ ಔಷಧ ಸಿಗುತ್ತಿರುತ್ತದೆ..ಹಾಗೆಂದು ಮಿತಿ ಮೀರಿ ಸುದ್ದಿಗಳಿಗೆ ಮಸಾಲೆ ತುಂಬಿ ಹರಿಬಿಟ್ಟು ಆತ್ಮೀಯರೆಂದು ಹೇಳಿಕೊಂಡವರಿಗೂ ವಿಶ್ವಾಸಘಾತಮಾಡಿ ಅವರ ಭಾವನೆಗಳೊಂದಿಗೆ ಆಡುವವರ ಬಗ್ಗೆ ಒಂದು ಎಚ್ಚರ ಇರಲೇಬೇಕು..
ಅದು ಉಭಯತರಿಗೂ ಅಪಾಯಕಾರಿ...ಆತಂಕಕಾರಿ...ನೊಂದ, ಬೇಸತ್ತ ಆತ್ಮೀಯರ  ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು  ವಿಕೃತ ಆನಂದ ಪಡೆಯುವ ಬದಲು,ಅವರ ನಂಬಿಕೆ,ವಿಶ್ವಾಸ ಗಳಿಸಿ ಅವರ ಕಷ್ಟ ಪರಿಹಾರಕ್ಕೆ  ಹೆಗಲು ಕೊಟ್ಟರೆ ಇರುವ ಸಮಾಧಾನ ಅದರಿಂದ ನಮ್ಮದಾಗುವ ತೃಪ್ತಿಗೆ ಸಾಟಿಯುಂಟೇ...
        ‌       ‌ಇದು ಅವರ/ ಇವರ/ ಇನ್ಯಾರದೋ ಕಥೆಯಲ್ಲ...ಬದುಕು ಯಾರನ್ನೂ spare ಮಾಡುವದಿಲ್ಲ.ಇಂದು ಅವರಿಗೆ..
ನಾಳೆ ನಮ್ಮ ಮನೆ ಬಾಗಿಲೊಳಗೆ...

Monday 10 April 2023

Reunion...

Reunion...
ಕ್ಲಾಸಿಗೇ ಫಸ್ಟಿದ್ದ ಜಾಣೆಯೀಗ
ಸಂತೃಪ್ತ ಗೃಹಿಣಿ
ಕೊನೇ ಬೆಂಚಿನ ರಾಕೆಟ್ ಪರಿಣತನೀಗ
ಯಶಸ್ವೀ ಉದ್ಯಮಿ

ಬಣ್ಣ ಬಣ್ಣದಂಗಿಯ ಸೊಗಸುಗಾರ
ಕಪ್ಪು ಕೋಟಿನ ವಕೀಲ
ಮಾತೇ ಆಡದೆ ಕುಳಿತಿರುತ್ತಿದ್ದ ಗೆಳೆಯ
ಹೆಸರಾಂತ ಬಂಡಾಯ ಕವಿ

ಲೆಕ್ಕ ಬರದೆ ಒದ್ದಾಡುತ್ತಿದ್ದವನೀಗ
ಫ್ಯಾಷನ್ ಡಿಸೈನರು
ಸದಾ ಹೊರಗೇ ನಿಲ್ಲುತ್ತಿದ್ದ ಶೂರ
ಆರ್ಮಿ ಆಫೀಸರು

ಮನುಷ್ಯರೆಷ್ಟು ಬೇರೆ ಎಂದು
ಮನಸು ಎಷ್ಟು ಬೇರೆ ಎಂದು
ರಿಯೂನಿಯನ್ ತಿಳಿಸಿತು
ಮುಖ ನೋಡಿ ಮಣೆ ಹಾಕಬೇಡಿ
ಎಂಬ ಪಾಠ ಕಲಿಸಿತು

ಪ್ರತಿ ಮಗುವೂ ಬೇರೆ ಬೇರೆ
ಯಶದ ಕತೆಗಳೂ ಬೇರೆ ಬೇರೆ
ಎಂಬ ಸತ್ಯ ಹೊಳೆಸಿತು
(ಅನುವಾದ)
(ಇಂಗ್ಲಿಷ್ ಪದ್ಯ ಕಾಮೆಂಟ್ ವಿಭಾಗದಲ್ಲಿದೆ)

Wednesday 5 April 2023



   ‌‌‌  ‌‌‌‌‌‌         ಕೇಳಿದ್ದೀರಾ?...ಧೂಳಿನ ಒಂದು ಪದರು ಕೆಳಗಿನ ಕಟ್ಟಿಗೆಯನ್ನು ಕಾಯುತ್ತದೆ.
        ‌        '' HOUSE' ಒಂದು HOME ಅನಿಸಿಕೊಳ್ಳಲು ಅಲ್ಲಲ್ಲಿ I  LOVE YOU,  'MY HOME 'ಅಂತ ಬರೆದಿರಬೇಕು. ಮೊದಲೆಲ್ಲ ನಾನು ಯಾರಾದರೂ ಆಕಸ್ಮಾತ್ ಮನೆಗೆ ಬಂದರೆ - ಎಂದು ವಾರದ ಕೊನೆಯ ಎಂಟಕ್ಕೂ ಮಿಕ್ಕಿ ಗಂಟೆಗಳನ್ನು ಮನೆಯನ್ನು ಅಚ್ಚುಕಟ್ಟಾಗಿ ಇರಿಸುವದರಲ್ಲೇ ಕಳೆಯುತ್ತಿದ್ದೆ... ಕೊನೆಗೆ ನನಗೆ ಅನಿಸಿದ್ದು,' ಯಾರೂ ಬರುವದಿಲ್ಲ..ಅವರೇನೂ ಹುಚ್ಚರಲ್ಲ. ಅವರೆಲ್ಲ ಮನೆಯಿಂದ ಹೊರಗೆ,WEEK END ಮಸ್ತಿಯಲ್ಲಿದ್ದಾರೆ....ಬದುಕನ್ನು ತೀವ್ರವಾಗಿ ಅನುಭವಿಸುವದಕ್ಕಾಗಿ"
             ‌  ‌‌‌         ಈಗ ಅಕಸ್ಮಿಕವಾಗಿ  ಮನೆಗೆಯಾರಾದರೂ ಬಂದರೆ ಅವರಿಗೆ ಮನೆಯ ಬಗ್ಗೆ ಏನೂ ವಿವರಣೆ ಕೊಡುವದಿಲ್ಲ.ಬಹಳಷ್ಟು ಜನರಿಗೆ ಅದರಲ್ಲಿ ಆಸಕ್ತಿಯೂ ಇರುವದಿಲ್ಲ..
ನಾನು ಹೇಗೆ ಸಮಯ ಕಳೆಯುತ್ತೇನೆ, ಏನು ಖರೀದಿಸಿದ್ದೇನೆ, ಎಲ್ಲೆಲ್ಲಿ ತಿರುಗಾಡಿದ್ದೇನೆ ಇದರಲ್ಲಿ ಕುತೂಹಲ ಜಾಸ್ತಿ... ಬದುಕು ತುಂಬಾ ಚಿಕ್ಕದು. ಅದನ್ನು ಇನ್ನಿಲ್ಲದಂತೆ ಆನಂದಿಸಿ..
ಅತಿ ಅವಶ್ಯವಿದ್ದರೆ ಆಗಾಗ ಮನೆಯನ್ನು ಚೊಕ್ಕಟಗೊಳಿಸಿ..ಆದರೆ ಅದನ್ನೇ ಖಂಡಿತ ತಲೆಗೇರಿಸಿಕೊಳ್ಳ ಬೇಡಿ. ಅದರ ಬದಲು ಆತ್ಮೀಯರಿಗೆ -
* ಚಂದದೊಂದು ಓಲೆ ಬರೆಯಿರಿ...
* ಪದ್ಯವೊಂದು ರಚಿಸಿ. 
* ಯಾವುದೋ ಚಿತ್ರ ಬಿಡಿಸಿ...
* ಮಕ್ಕಳೊಂದಿಗೆ ಸಿಹಿತಿಂಡಿ ಮಾಡಿ.       * ಒಂದೆರಡು ಗಿಡ ಬೆಳೆಸಿ...
          ' ಇದಾಗಬೇಕು' _ಮತ್ತು ಇದಾಗಲೇಬೇಕು_ ಗಳ ನಡುವಿನ ವ್ಯತ್ಯಾಸ ಅರಿಯಿರಿ...
             ‌‌' ಧೂಳು ಒರೆಸಿ...ಆದರೆ ಆ ಧೂಳು ನಿಮ್ಮ ಬದುಕಿಗೆ  ಹಾರುವದು ಬೇಡ...
     ‌‌           ‌ ಕಣ್ಬಿಟ್ಟು ನೋಡಿ...
*ಹೊರಗೆ ಸೂರ್ಯೋದಯ, ಸೂರ್ಯಾಸ್ತಗಳಿವೆ...
* ಕುಡಿಯಲು ಎಳೆನೀರಿನಂಥ  ಪಾನೀಯಗಳಿವೆ... 
* ಸ್ವಚ್ಛಂದವಾಗಿ  ಕೂದಲನ್ನು ಗಾಳಿಯಲ್ಲಿ ಹಾರಲು ಬಿಟ್ಟು ನೀವೇ ನೀವಾಗುವ ನೂರಾರು ಅವಕಾಶಗಳಿವೆ.  
*ಈಜಲು Poolಗಳಿವೆ. 
* ಮನದಣಿಯೇ ನೀರಿನಲ್ಲಿ ತೊಯ್ದು ಸುಖಿಸಲು ಮಳೆ ಸೆಳಕುಗಳು, ಕಾರಂಜಿಗಳು ಇವೆ..
*ಕೇಳಲು ಸಂಗೀತ, ಓದಲು ಸಾಹಿತ್ಯ, ಬದುಕು ಸುಂದರಗೊಳಿಸುವ  ಸ್ನೇಹಿತ ಬಳಗವಿರುತ್ತದೆ...
*ಬಂಧು ಬಾಂಧವರ ಕಿರಿ ಜಗತ್ತೊಂದು ಹಾಸಿಕೊಂಡಿದೆ..
                   ನೆನಪಿಡಿ...ಈ ಗಳಿಗೆಗಳು ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ಬರುವದಿಲ್ಲ..ವೃದ್ಧಾಪ್ಯ ಬರಲು ತಡವಾಗುವದಿಲ್ಲ...ಬಂದಾಗ ಅದು ತುಂಬಾ ತುಂಬಾ ನಿರ್ದಯಿ,ನಿಷ್ಕರುಣಿ. ಕಾರಣ ಧೂಳು ಹೊಡೆಯುತ್ತ ಮನೆ ಹಿಡಿಯಬೇಡಿ...ಸಾದ್ಧ್ಯವಾದಾಗಲೆಲ್ಲ ಅದಷ್ಟೂ ಬದುಕನ್ನು ಬಹುಮುಖವಾಗಿ ಬಹುಮೂಲ್ಯವೆಂಬಂತೆ ಕಳೆದು ಸುಖವಾಗಿರಿ..ಇತರರನ್ನೂ ಸುಖವಾಗಿಡಿ.
             ‌    ‌‌ಇಲ್ಲದಿದ್ದರೆ  ಮನೆ ಚಂದಕಾಣುತ್ತದೆ  ಆದರೆ  ನಿಮ್ಮ ಬದುಕು ಧೂಳು ತಿನ್ನುತ್ತದೆ...

( ಪ್ರಾಚಿ ಮಿಸ್ತ್ರಿ_ ಇವರ ಇಂಗ್ಲಿಷಮೂಲ...ಅನುವಾದ ಕೃಷ್ಣಾ ಕೌಲಗಿ)

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...