Thursday 23 February 2023

         ಒಂದು ಸಂಜೆ.ಹಾಗೆಯೇ ಫೇಸ್ ಬುಕ್ ನಲ್ಲಿ ಕಣ್ಣಾಡಿಸುತ್ತಿದ್ದೆ.ಒಂದೆಡೆ
ಗಕ್ಕನೇ ನಿಂತೆ.ಅದೊಂದು Pre wedding photo Shoot...ಒಂದು ಹೆಣ ಹೂಳುವ ಕುಣಿ...ಅದರಲ್ಲಿ ಮದುವೆ ವೇಷ ಭೂಷಣಗಳೊಂದಿಗೆ 
ಭಾವೀ ವಧು- ವರರು ಕೈ ಕೈಹಿಡಿದು/ ಕಣ್ಣುಮುಚ್ಚಿಕೊಂಡು ಮಲಗಿದ್ದಾರೆ.
" ಕೊನೆಯ ಉಸಿರಿರುವವರೆಗೂ ನಾವು ಒಬ್ಬರಿಗೊಬ್ಬರು ಬಿಟ್ಟಿರುವದಿಲ್ಲ ವೆಂಬ ಭಾವ ಪ್ರದರ್ಶನವಿರಬಹುದು.
ವಿಚಾರವೇನೋ ಉದಾತ್ತವೇ...ಆದರೆ ಹೇಳಿದ ರೀತಿಯಲ್ಲಿ ಸ್ವಲ್ಪ  ಭಿನ್ನವಾಗಿ ದ್ದರೆ ಒಳ್ಳೆಯದಿತ್ತೇನೋ...
            ‌‌‌   ' ಬದಲಾವಣೆಯೊಂದೇ ಶಾಶ್ವತ'- ಎಂಬ ಮಾತಿದೆ.ಅದು ಆಗ ಬೇಕಾದ್ದೇ...ಆಗತಕ್ಕದ್ದೇ...Wedding Shoot ನಲ್ಲಿ ಆಕಾಶದಲ್ಲಿ ಹಾರಲಿ, ಸಾಗರದಲ್ಲಿ ತೇಲಲಿ...ಆದರೆ  ಮಂಗಲಮಯ ಕಾರ್ಯಗಳ ಮೊದಲೇ
'ಶವದ ಕುಣಿ'- ಯಲ್ಲಿ...ತಲೆ ಝಾಡಿಸಿ, fb ಮುಚ್ಚಿ ಹೊರಬಂದೆ... ಆದರೆ ಒಳಹೊಕ್ಕದ್ದು ನಮ್ಮ ಕಾಲದ ಮದುವೆ ಯ ದಿನಗಳಿಗೆ...
     ‌‌‌‌            ಆಗಿನ ಕಾಲದಲ್ಲಿ ಮದುವೆ ಎಂದರೆ ಕೌಟುಂಬಿಕ ಕಾರ್ಯಕ್ರಮವಲ್ಲ .ಊರಹಬ್ಬ...ನಾನು ,ನೀನು ಎನ್ನದೇ ಎಲ್ಲರದೂ ಒಳಗೊಳ್ಳುವಿಕೆ ಸ್ವಯಂಪ್ರೇರಿತವಾದದ್ದು. ಯಾರೂ ಯಾರಿಂದಲೂ ಹೇಳಿಸಿಕೊಳ್ಳದೇ ತಮ್ಮಿಂದ ಆದದ್ದನ್ನು ಮಾಡುತ್ತ, ತಿಳಿಯಲಾರದ್ದನ್ನು ತಿಳಿದವರಿಂದ ಕಲಿಯತ್ತ ಒಟ್ಟು ಕೆಲಸವನ್ನು ಪೂರೈಸುವದು.ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ಕೆಲಸಗಳ ಜವಾಬ್ದಾರಿ. ಎಲ್ಲರಿಗೂ ಚಹ/ ತಿನಸಿನ 
ವ್ಯವಸ್ಥೆಯಾದರೆ ಸಾಕು
    ‌ ‌‌          

Wednesday 22 February 2023

ಹಾಗೇ ಸುಮ್ಮನೇ...

       ೧೯೫೦ ರ ದಶಕ...ಆಗ ನಾನು ಇನ್ನೂ ಐದು  ವರ್ಷಗಳೂ ತುಂಬದ ಹುಡುಗಿ. ಸುತ್ತಮುತ್ತಲೂ ನಡೆಯುವ ದನ್ನು ಕಣ್ಣರಳಿಸಿ ನೋಡುವದು ಬಿಟ್ಟರೆ ಬೇರೇನೂ ಕೆಲಸವಿಲ್ಲದ ದಿನಗಳವು...

        ಆಗಿನ ಕಾಲದಲ್ಲಿ ಹಿತ್ತಾಳೆ, ತಾಮ್ರ, ಅಲ್ಯೂಮಿನಿಯಮ್ ಬಳಕೆ ಮಾತ್ರ ಇದ್ದ ಕಾಲ..ಕೆಲವರುಷ ಬಳಸಿದ ನಂತರ ತೆಳ್ಳಗಾಗಿ ಅಲ್ಲಲ್ಲಿ ತಳದಲ್ಲಿ ತೂತುಗಳು ಬಿದ್ದು ಬಳಕೆಗೆ ಬಾರದ ಅಲ್ಯೂಮಿನಿಯಮ್ ಪಾತ್ರೆಗಳು. ನಮ್ಮಮ್ಮ B.E. degree ಪಡೆಯದ ಇಂಜಿನಿಯರ್. ಅವುಗಳನ್ನು ಬೋರಲು ಹಾಕಿ ಸಾಲುಸಾಲಾಗಿ ಮೊಳೆಯಿಂದ ಅಂಥವೇ ಮತ್ತಷ್ಟು ತೂತು ಹೊಡೆದು ಸೊಪ್ಪು,ಕಾಳು ಬಸಿಯಲು,ತೊಳೆದು,ಹೆಚ್ಚಿದ ಸೊಪ್ಪು ಹಾಕಿ ಬೇಳೆಯ ಕೊಳಗದ ಮೇಲಿಟ್ಟು ಉಗಿಯಮೇಲೆ ಬೇಯಿಸಿ ವೇಳೆ, ಇಂಧನ ಎರಡೂ ಉಳಿಸಲು ಬಳಸುತ್ತಿದ್ದಳು.

          ದೀಪಾವಳಿಯಲ್ಲಿ ನಾವೆಲ್ಲ ಹಾರಿಸಿ ಬೀಸಿ ಒಗೆದ ಚುಚೇಂದ್ರಿಯ ಕಡ್ಡಿಗಳನ್ನಾರಿಸಿ,ಕಲ್ಲಿಗೆ ತಿಕ್ಕಿ, ಮದ್ದು ಉದುರಿಸಿ,ಹೊಳಪು ಬರಿಸಿ,ಸರಿ ಮಧ್ಯಭಾಗದಲ್ಲಿ U ಆಕಾರಕ್ಕೆ ಬಗ್ಗಿಸಿ ತುರುಬಿಗೆ ಅಕ್ಕಡ( ಆಗಿನ hairclip) ವಾಗಿಸುತ್ತಿದ್ದಳು..

               ನಮ್ಮದು ಮಣ್ಣಿನ ಮನೆ.. ಕೂಡಿಸಿಟ್ಟ ಕಾಳುಕಡಿಗೆ ಇಲಿಗಳು ಸಾಮಾನ್ಯ... ಇಲಿಯೇನಾದರೂ ಗೋಡೆಯಲ್ಲಿ ಗುದ್ದು ಮಾಡಿದರೆ ,ಇಟ್ಟಿಗೆ,ಕಲ್ಲುಗಳಿಂದ ಅದನ್ನು ಅರ್ಧ ಮುಚ್ಚಿ,ಇನ್ನರ್ಧಕ್ಕೆ ಒಡ್ಡುಕಟ್ಟಿ ,ಮೂರು ಗುಂಪುಗಳನ್ನಿಟ್ಟು ಒಂದು ಕಬ್ಪಿಣದ ಪಟ್ಟಿ ಹಾಕಿ ಮಣ್ಣಿನ ನೆಲದಲ್ಲೊಂದು ಹಾಲು/ ಚಹ  ಕಾಸಲು ಇದ್ದಲು ಒಲೆ ಸಿದ್ಧಮಾಡುತ್ತಿದ್ದಳು.ಹರಿದ ಸೀರೆಗಳ ನ್ನು  ನೀಟಾಗಿ ಕತ್ತರಿಸಿ ಜೋಡಿಸಿ ಕೈ ಹೊಲಿಗೆ ಹಾಕಿ ಮಕ್ಕಳಿಗೆ ದುಪ್ಪಟಿ ಗಳನ್ನು ಹೊಲಿದು ಮೈ ಮನ ಬೆಚ್ಚಗಾಗಿಸುತ್ತಿದ್ದಳು.

            ಹೇಳ ಹೊರಟರೆ ಒಂದು ಕಾದಂಬರಿಯಾದೀತು. ಈಗ ಅವಳ ಎಲ್ಲ ಮಕ್ಕಳು, ಮೊಮ್ಮಕ್ಕಳು ಬಹು ಮಹಡಿ ಕಟ್ಟಡದಲ್ಲಿದ್ದಾರೆ.ಮನೆಮುಂದೆ ಸಾಲುಸಾಲಾಗಿ ಕಾರುಗಳು ನಿಲ್ಲುತ್ತಿವೆ. ಎತ್ತರೆತ್ತರ ಬೆಳೆದಂತೆ ಬದುಕು ನೆಲದಿಂದ ದೂರವೇತಾನೇ!!!?? ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ ನಾನು ಮಾತ್ರ ನೆಲದಾಳದಿಂದ ಚಿಗುರೊಡೆದ ಬದುಕು ಬೆಳೆಬೆಳೆದು ಗಗನಚುಂಬಿ ಯಾದ ಪರಿಯನ್ನು ದಂಗಾಗಿ ನೋಡಿ ದ್ದೇನೆ...ಅನುಭವಿಸಿದ್ದೇನೆ...ಅನುಭಾವಿಸಿದ್ದೇನೆ...ಆಗಿನ ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿಯ ಮಣ್ಣಿನ ನೆಲದಿಂದೆದ್ದ ಧೂಳು ಧಾರವಾಡ, ಬೆಂಗಳೂರಿನ ಪರಿಸರದಲ್ಲಿ ಹಾದು, ಅಮೆರಿಕಾ/ ಸ್ವಿಜರ್ಲ್ಯಾಂಡ್/ಕೆನಡಾ/ ಆಸ್ಟ್ರೇಲಿಯಾ/  ಜರ್ಮನಿಯಂಥ ಅನೇಕ ವಿದೇಶೀ ನಗರಗಳ ಗಾಳಿಯಲ್ಲಿ ಲೀನವಾಗಿ ಅಲ್ಲಿಯದೇ ಎಂಬಂತೆ ಒಂದಾಗಿ ಹೋದ ಪವಾಡವನ್ನು ನಾನು
ನಿತ್ಯವೂ ಕಾಣುತ್ತಿದ್ದೇನೆ.ಮನೆಯಲ್ಲಿ ನಮ್ಮೆಲ್ಲರ ಒಟ್ಟು ಮೊಮ್ಮಕ್ಕಳ ಸಂಖ್ಯೆ
ಇಪ್ಪತ್ತಾರು - Not out...
                ಒಮ್ಮೊಮ್ಮೆ ಅನಿಸುತ್ತದೆ, ಅವರನ್ನು ಕೂಡಿಸಿಕೊಂಡು ಅಜ್ಜಿ/ ಮುತ್ತಜ್ಜಿಯರ ಕಥೆಗಳನ್ನು ಹೇಳಿದರೆ
ಅವರು ಹೇಗೆ ಪ್ರತಿಕ್ರಯಿಸಿಯಾರು???

Saturday 11 February 2023

   ನಾನೊಮ್ಮೆ ಹಿಂದೆ TNS  Sir ಅವರನ್ನು ಕೇಳಿದ್ದೆ." ಯಾಕೆ ನಿಶ್ಚಿತ ವಾದ engagements ಗಳು ಸದಾ ಮುರಿಯುತ್ತವೆ/ ಮದುವೆಯಾದವರು
ಏಕೆ ಸುಖವಾಗಿ ಇರೋದಿಲ್ಲ/ ಏನೋ ಸರಿಯಾಯ್ತಲ್ಲ- ಅಂತ ನೆಮ್ಮದಿ
ಯಿಂದ‌ ಇರುವಾಗಲೇ ಆಕಸ್ಮಿಕವಾದ ದ್ದೊಂದು ನಡೆದು ಕಥೆ ಅನಿರೀಕ್ಷಿತ ತಿರುವು ಪಡೆಯುತ್ತದೆ."- ಎಂದು. ಆಗಾಗ ನಡೆವ ಸಂವಾದಗಳಲ್ಲೂ  ಇದೇ ಪ್ರಶ್ನೆಗಳು ಕೇಳಲ್ಪಟ್ಟಾಗ  ಅವರು ಹೇಳಿದ್ದು ಯಾವುದೋ ಒಂದು ಕೋನದಿಂದ ಸರಿಯೇ ಎಂದು ಒಪ್ಪಿಕೊಳ್ಳಲೇ ಬೇಕಾಯ್ತು., "ಸಂತೋಷದಲ್ಲಿ ಹುಟ್ಟುವ ಕಥೆಗಳಿಗಿಂತ ನೋವಿನಲ್ಲಿ ಹುಟ್ಟುವ ಕಥೆಗಳು ಅಪಾರ/ಅಸಂಖ್ಯ/ಅನಿರ್ದಿಷ್ಟ/ ಅಪರಿಮಿತ...ಹೀಗಾಗಿ
ದೊಡ್ಡ ' Canvas' ಸಿಗುತ್ತದೆ,ಕಥೆಗೆ 'ಕವಲು'ಗಳೂ ಹೆಚ್ಚು.ಹೆಚ್ಚು ಪಾತ್ರಗಳು/ ವಿಷಯಗಳು ಲಭ್ಯವಿರುವ
ದರಿಂದ ಧಾರವಾಹಿಗೂ 'ಗತಿ'  ಸುಲಭ
ವಾಗಿ ಸಿಗುತ್ತದೆ. ಹೆಚ್ಚು ಜನಸ್ಪಂದನೆಗೆ  ಕಾರಣವಾಗಿ ಬಹುಕಾಲ ಜನಮಾನಸ ದಲ್ಲಿ ಉಳಿಯುತ್ತದೆ. ಸುಖದಲ್ಲಿ  ಹಿತ 
ವಿರಬಹುದು, ಕಥೆ ಇರುವದಿಲ್ಲ,"-ಎಂದು.

            ಆಗ ನೆನಪಾದದ್ದು ನಾವು ನೋಡುತ್ತಿದ್ದ ಹಳೆಯ ಚಲನಚಿತ್ರಗಳು.
ಪಂಢರಿಬಾಯಿ/ ಮೀನಾಕುಮಾರಿ ಯರು ನೆನಪಿನಲ್ಲಿದ್ದಷ್ಟು ಗಿಡ- ಮರ ಸುತ್ತಿ duet ಹಾಡುತ್ತಿದ್ದವರಲ್ಲ. ಕೆಲವೇ ಕೆಲವರನ್ನು ಹೊರತು ಪಡಿಸಿದರೆ ನಟ- ನಟಿಯರ ಹಾಡುಗಳಿಂದಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೆವೇ ವಿನಃ ಅವರ
ವ್ಯಕ್ತಿತ್ವದ ಪ್ರಭಾವದಿಂದಲ್ಲ ಎಂದು
ಈಗ ಅನಿಸುತ್ತದೆ.ಎರಡು ತಾಸು ಏನೇ ಕಥೆ ಬೆಳಸಿದರೂ ನಮಗೆ ಕೊನೆಗೆ ಎಲ್ಲರೂ ನಗುನಗುತ್ತ  ಒಂದು group photo/ ಶುಭಂ  ಬಂದಾಗಲೇ ಅವರೊಂದಿಗೆ ನಾವೂ ನಿರಾಳವಾಗು ವಷ್ಟು ಕಥೆಯಲ್ಲಿ ತಲ್ಲೀನರಾಗುತ್ತಿದ್ದೆವು. ಮೊದಲೇ ಎಲ್ಲವೂ ನಮ್ಮಾಶೆಗೆ/ ನಿರೀಕ್ಷೆಗೆ ತಕ್ಕುದಾಗಿ ನಡೆದುಬಿಟ್ಟರೆ ಸಿನೆಮಾ ಅರ್ಧ ಗಂಟೆಯಲ್ಲಿ ಮುಗಿದು
ನಂತರದಲ್ಲಿ ಪಾರ್ಟಿ/ ಮೇಜವಾನಿ/ ವಿದೇಶ ಪ್ರವಾಸ/share market/ Race course/ pub- bar ಗಳಲ್ಲಿ shooting ಆಗಬೇಕಾಗುತ್ತಿತ್ತು ಅನಿಸಿತು...
    ‌‌       



Friday 10 February 2023

    ‌    ‌  ‌ಈ ಹಿಂದೆ ಎರಡು ವರ್ಷಗಳ ಕಾಲ ಕೊರೋನಾ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ಥಾನ ಬದ್ಧತೆಯ ಶಿಕ್ಷೆ
ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ್ಕೇನೇ ಸಂಪೂರ್ಣ ಒಗ್ಗಿಕೊಂಡ ಜನ ಹೊರಹೋಗಲೇ ಬೇಸರಿಸತೊಡಗಿ 
ಮನೆಯಲ್ಲೇ ಇರತೊಡಗಿದರು. ನಮ್ಮ  ಸಖಿಯರೂ ಇದಕ್ಕೆ ಹೊರತಾಗಲಿಲ್ಲ. ಚಿಕ್ಕಪುಟ್ಟ get together ಆದರೂ ಮೊದಲಿನ ಆಸಕ್ತಿ /ವೇಗ ಪಡೆದಿರಲೂ ಇಲ್ಲ...
    ‌ ‌           ಈ‌ ರಿವಾಜನ್ನು ಪುನಃ ಸ್ಥಾಪಿಸಿದ್ದು ದೀಪಾ ಜೋಶಿ, ಅದ್ಧೂರಿ ಯಾಗಿ ಮಗನ ಮದುವೆ ಮಾಡಿ... ನನಗೂ ಆಮಂತ್ರಣ ಬಂದಾಗ ಹಲವು ಬಾರಿ ಯೋಚಿಸಿದೆ. ಕೊನೆಗೆ ಗೆದ್ದದ್ದು
- ಆದದ್ದಾಗಲೀ ಗೆಳತಿಯರನ್ನು ಕಾಣಲೇಬೇಕೆಂಬ ಹಂಬಲ-ವೇ. ಅದರ ಪರಿಣಾಮ ಕೆಳಗಿದೆ. ಸುಂಕವನ್ನೇನನ್ನೂ
ಹೆಚ್ಚು ತೆರುವ ಪ್ರಸಂಗ ಬರಲಿಲ್ಲ. ಕೆಲವೇ ಗಂಟೆಗಳ ಮೊಣಕಾಲು ನೋವಷ್ಟೇ.ಆದರೆ ಎಲ್ಲರೂ ಸೇರಿ ಕಳೆದ quality time ಗೆ ಬದಲಾಗಿ ಅಷ್ಟಾದರೂ ಕಷ್ಟ ಪಡದಿದ್ದರಾದೀತೆ?


Wednesday 8 February 2023

'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು...

          ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ , ಅವರ ' ಶತಾಯುಷ್ಯದ' ಗುಟ್ಟೇನು ಎಂದು  ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ."ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ, ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮಿಸುವದುವಿಚಿತ್ರವಲ್ಲವೇ? _ಹೀಗೆಂದು ಒಮ್ಮೆ ನಮ್ಮ ಗುರುಗಳನ್ನು ಕೇಳಿದ್ದೆ.
       ‌‌‌‌‌‌   " ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ,ನಂತರ ವೋ  ಅಂಗವಿಕಲರಾಗಿರುತ್ತಾರೆ. ಅನೇಕರಿಗೆ ಬದುಕು ದಿನನಿತ್ಯದ ಹೋರಾಟವಾಗಿರುತ್ತದೆ. ಇದಾವುದೂ ಇಲ್ಲದೇ ಅಥವಾ ಇದನ್ನೆಲ್ಲ ಗೆದ್ದು  ದೈವೀ ಕೃಪೆಯಿಂದ ಕೆಲವರ್ಷಗಳನ್ನು ಕಳೆಯುವಂತಾದರೆ ಅದು ಸಂಭ್ರಮ ವಲ್ಲವೇ?"- ಎಂದಿದ್ದರು ಗುರುಗಳು.  ಮರುಮಾತಾಡದೇ ಒಪ್ಪಿಕೊಂಡಿದ್ದೆ.

   ‌‌‌           ‌   ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾ ದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು ಅನಿಸುತ್ತದೆ. ಅಂದಮೇಲೇ 'ಹುಟ್ಟು' 'ಹಬ್ಬ'ವಾಗು ವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ನನಗೆ  ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

      ‌‌  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.ಆದರೆ ಅದಕ್ಕೆ ಸಮೀಪದಲ್ಲಿ ಮುಂಬರುವ 
ಯಾವುದೋ ಒಂದು ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು. 'ಎರೆದು ಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ, ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು 'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' main ಮೆನ್ಯೂ'.

          ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಇದಕ್ಕೂ  ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು. ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ನಮಗೆ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ಅವರ ಸಾದಾ ಬದುಕನ್ನು ನೋಡಿಕೊಂಡೇ ...

   ‌‌‌       ಇಂದಿಗೆ ನನಗೆ ಎಪ್ಪತ್ತೇಳು ಮುಗಿದು ಎಪ್ಪತ್ತೆಂಟಕ್ಕೆ ಕಾಲಿಟ್ಟೆ. ಮನುಷ್ಯನ ಸರಾಸರಿ ವಯಸ್ಸಿನ ಮಿತಿಯನ್ನೂ ದಾಟಿದ್ದಾಗಿದೆ.ಹಲವು ಬಗೆಯ ಸುಖ-ದುಃಖ, ಸವ್ಯ-ಅಪಸವ್ಯ, ಪ್ರೀತಿ-ದ್ವೇಷ, ಅನುಭವ - ಅನುಭಾವ ಗಳ ಅಗ್ನಿದಿವ್ಯ ಹಾದು ಬಂದದ್ದಾಗಿದೆ.  ಇದುವರೆಗೆ ಶಾಲೆ- ಕಾಲೇಜುಗಳು ನನಗೆ ಕಲಿಸಿದ್ದಕ್ಕಿಂತ ಬದುಕಿನಿಂದ ನಾನು ನೇರವಾಗಿ ಕಲಿತದ್ದೇ ಹೆಚ್ಚು.

                  ‌‌‌‌‌‌‌   ‌‌ಈಗ ನನಗೆ ಬೇಕಾದಂತೆ ಬದುಕಬಹುದಾದ ಸ್ವಾತಂತ್ರ್ಯ ಸಿಕ್ಕಿದೆ.
ಮೊಮ್ಮಕ್ಕಳೆಲ್ಲ ಹದಿಹರಯ ದಾಟಿ
ಅಪ್ಪ- ಅಮ್ಮಂದಿರ ವೃತ್ತಗಳಿಂದಲೂ ನಿಧಾನವಾಗಿ ಬಹಿರ್ಮುಖವಾಗಿ ಸ್ವಂತ
ವಲಯಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ME TIME
ಹೆಚ್ಚು ದೊರಕುತ್ತಿದೆ. ಪರಿಣಾಮವಾಗಿ
ನಮ್ಮದೆಂದೇ ಒಂದು Work strategy
ಕಂಡುಕೊಳ್ಳುವದು ಸುಲಭವಾಗಿದೆ.

                  ನನ್ನದ್ಯಾವಾಗಲೂ ಒಂದು
Frame Work ನಲ್ಲೇ ಕೆಲಸ.ಬೆಳಗಿನ
ದಿನಚರಿ/ ಸ್ನಾನ/ break fast/ ಅರ್ಧ ಗಂಟೆ ಬಿಸಿಲು- ಸ್ನಾನ/ ಒಂದು ಗಂಟೆ face- book ಓದು- ಬರಹ/ ನಂತರ ಒಂದು ಗಂಟೆ ಅಡುಗೆ ಮನೆಯಲ್ಲಿ/ ಊಟದ ನಂತರ ವಿಶ್ರಾಂತಿ/ಒಂದೆರೆಡು
ಸೀರಿಯಲ್- U Tube ಆಯ್ದ ಕಾರ್ಯ
ಕ್ರಮಗಳು/ ಚಹ- ಒಂದೆರಡು ಫೋನುಗಳು ಹೀಗೆ...ಯಥಾಪ್ರಕಾರ
ಸಂಜೆ- ರಾತ್ರಿ...ಒಮ್ಮೊಮ್ಮೆ ಆಚೀಚೆ ಯಾಗುವದುಂಟು, ಆದರೂ ತುಂಬಾ ಕಡಿಮೆ...

            ‌   ಬದುಕು‌ ಏನೇ ಪರೀಕ್ಷೆ ಒಡ್ಡಲಿ, ತಕರಾರು ಮಾಡುವ ಹಂತ ಮೀರಿದ್ದೇನೆ.ಇಷ್ಟೂ ಸಿಗದ ಅನೇಕ ಹತಭಾಗ್ಯರನ್ನು ಕಂಡಿದ್ದೇನೆ/ ಓದಿದ್ದೇನೆ/ ಕೇಳಿದ್ದೇನೆ/ನನಗೆ ಬದುಕಿನ ಬಗ್ಗೆ ತಕರಾರಿಲ್ಲ. ಒಂದೊಮ್ಮೆ ಮುಖ್ಯ 'ಬಾಗಿಲನ್ನೇ'- ಮುಚ್ಚಿ ಹೆದರಿಸಿದ್ದರೂ ನಂತರದಲ್ಲಿ ನೂರು 'ಕಿಟಕಿ'ಗಳನ್ನು ನನಗಾಗಿ ತೆರೆದು, ಬದುಕು ನನ್ನ ದಾರಿ ಸುಗಮಗೊಳಿಸಿದೆ. ಅದಕ್ಕಾಗಿ‌ ನಾನದಕ್ಕೆ ಚಿರ ಋಣಿ... ಅದು ಕೊಟ್ಟದ್ದನ್ನು ಸಮರ್ಥವಾಗಿ ಬಳಸಿಕೊಂಡ ಬಗ್ಗೆ ನನಗೆ ತೃಪ್ತಿ/ ಹೆಮ್ಮೆ ಎರಡೂ ಇದೆ.  ಹೀಗೆಯೇ ಮುಂದೆಯೂ ನಡೆಯಬಹುದೆಂಬ ಕನಿಷ್ಟ ಆಸೆ- ಭರವಸೆ- ನಿರೀಕ್ಷೆ ಎಲ್ಲವುಗಳೊಂದಿಗೆ ಬದುಕಿನ ಶೇಷಭಾಗ ಕಳೆಯುವದೀಗ ನನ್ನ ಆದ್ಯತೆ...
    
     ‌   ‌‌‌‌  ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions.90% Emotions. ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...

Tuesday 7 February 2023

ನಾವು ಕೂಡಿ ಕಳೆದ 
ಗಳಿಗೆಗಳು ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, ಬಾಗಿಲಲ್ಲಿ 
ತುಸುಹೊತ್ತು‌ ನಿಲ್ಲು...
ಹೋಗುವ ಮೊದಲು
ಗುರುತೊಂದು 
ಬಿಟ್ಟು ಹೋಗು...
ಅದನ್ನು ಮರಳಿ ಪಡೆಯಲು
ಮತ್ತೊಮ್ಮೆ ಬರಬಹುದು...

Saturday 4 February 2023

" ಬರೆಯುವುದು ಅನಿವಾರ್ಯ ಕರ್ಮ 
ನನಗೆ..."      

        ಮೊದಲಿನಿಂದಲೂ ನನಗೆ ಡೈರಿ ಬರೆಯುವ ಚಟವಿತ್ತು.ಹಾಗಂತ ನಮ್ಮದು ಅತಿ ಬಣ್ಣ ಬಣ್ಣದ ಬದುಕು/ ಅಥವಾ ಕಣ್ಣು ಕುಕ್ಕುವ ಬಿಸಿನೆಸ್ ಇರುವ ಜೀವನವೇನೂ ಅಲ್ಲ.ಒಬ್ಬ ಸಾಮಾನ್ಯ ಶಿಕ್ಷಕಿಯ ಮೇಲಿನ ಅಭಿಮಾನಕ್ಕೋ/ ಪ್ರೀತಿ-ಗೌರವ ಅಂತಲೋ ನನ್ನ ವಿದ್ಯಾರ್ಥಿಗಳಲ್ಲಿ ಕೆಲವರು ಹೊಸವರ್ಷದಂದು ಡೈರಿಗಳನ್ನು ಕಾಣಿಕೆಯಾಗಿ  ಕೊಡುತ್ತಿದ್ದರು.ಹೇಗೂ ಇದೆಯಲ್ಲ ಅಂತ ಪ್ರಾರಂಭಿಸಿ,ಶುರುವಾಗಿದೆಯಲ್ಲ  ಅಂತ ಬರೆಯುತ್ತಹೋಗಿ,ಬರೆದದ್ದನ್ನೇಕೆ
ನಿಲ್ಲಿಸಬೇಕು ಎಂದು ಮುಂದುವರಿಸಿ,
ಅದೇ ಹವ್ಯಾಸವಾಗಿ ಬೆಳೆದದ್ದು ಸಹಜ.

               ‌ನಿವೃತ್ತಳಾಗಿ ಮನೆ ಬದುಕಿಗೆ ಒಗ್ಗಿಕೊಂಡ ಮೇಲೆ ಸೊರಗುತ್ತ ಹೋದ
ಆ ಹವ್ಯಾಸ ಇಲ್ಲವಾಗುವ ಭಯ ಹುಟ್ಟುವ ಮೊದಲೇ face book ಬಂದು ಅದಕ್ಕೆ ಮತ್ತೆ ಜೀವ ತುಂಬಿತು. ಕನ್ನಡ/ಇಂಗ್ಲಿಷ್ typing ಕಲಿತು/ practice ಇರಲಿ ಎಂದು ಬೇಕಾದ್ದು/ ಬೇಡದ್ದು ಕುಟ್ಟುತ್ತ ಹೋಗಿ 'ಹಾಡ್ಹಾಡ್ತ ರಾಗ' ಅಂದ ಹಾಗೆ ಒಂದು ಲಯ ಕಂಡು,ಅನೇಕ ಲಘು ಬರಹಗಳು ಸಂಗ್ರಹವಾಗಿ ' ನೀರಮೇಲೆ ಅಲೆಯ ಉಂಗುರ'- ಎಂಬ ಪುಸ್ತಕ ರೂಪದಲ್ಲಿ ಹೊರಬಂತು.
             ‌ ‌‌‌‌  ಈಗ ನನ್ನ ಅದರ ಸಖ್ಯ ಅವಿನಾಭಾವ ಸಂಬಂಧದಂತೆ.ಒಂದು ರೀತಿಯಲ್ಲಿ ನನ್ನ personal diary ಅನ್ನಬಹುದು.ಮನಸ್ಸಿನಲ್ಲಿ ಮೂಡಿ,
ತಲೆಯಲ್ಲಿ ವಿಚಾರರೂಪದಲ್ಲಿ ಬಂದು ವೈಯಕ್ತಿಕವಾಗಿ ಅನಿಸಿದ್ದನ್ನೂ ಸಹಿತ
ಅತಿ ವೈಯಕ್ತಿಕ ಅನ್ನಿಸದಂತೆ 
generalise ಮಾಡಿ ದಾಖಲಿಸುವ ಕೆಲಸಕ್ಕೆ ಅಂಟಿಕೊಂಡೆ.ಪರಿಣಾಮ ನನ್ನ ಎರಡನೇ ಪುಸ್ತಕ ' ತುಂತುರು...ಇದು ನೀರಹಾಡು...' ಬಂತು. Face book ನಲ್ಲಿಯ ನನಗೆ ಸೇರಿದ/ ಇತರರಿಗೆ ಪ್ರಯೋಜನವಾಗುವ  ಇತರರ post 
ಗಳನ್ನೂ  share ಮಾಡುವದು, ಮೆಚ್ಚಿದ  ಇತರ ಭಾಷೆಯ ಕವನಗಳನ್ನು
ಕನ್ನಡಕ್ಕೆ ಭಾವಾನುವಾದ ಮಾಡುವದು
ಮುಂತಾದ ಚಟುವಟಿಕೆಗಳು ಈಗಲೂ ಜಾರಿಯಲ್ಲಿ ಇವೆ.
           " ಎಲ್ಲ ಓದಲಿ ಎಂದು ನಾನು ಬರೆಯುವದಿಲ್ಲ, ಬರೆಯುವದು ಅನಿವಾರ್ಯ ಕರ್ಮ ನನಗೆ"- ಎನ್ನಬಹುದು.ಮೊದಲಿನಂತೆ ಜಾಸ್ತಿ ಹೊರಹೋಗುವದಿಲ್ಲ ಎಂಬುದೊಂದು
ಕಾರಣವಾದರೆ ಆದಾಗ/ ಆದಷ್ಟು/ ಆದಂತೆ ಬರೆಯುವದರ ರೂಢಿ ತಪ್ಪಬಾರದು,ಆ ಕಾರಣದಿಂದಲಾದರೂ
ಚಟುವಟಿಕೆಗಳಿಗೊಂದು 'ಗತಿ' ಇರಲಿ
ಎಂಬುದಷ್ಟೇ ನನ್ನ ಉದ್ದೇಶ.
                ನಿನ್ನೆ ಧಾರವಾಡದ‌ ಪೋಸ್ಟ
ಒಂದನ್ನು share ಮಾಡಿದ್ದೆ.ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಯ ಸಮಯದಲ್ಲಿ ಉಟ್ಟುಕೊಂಡದ್ದು ಧಾರವಾಡದ ಕಸೂತಿ ಸೀರೆ - ಎಂಬ ಸುದ್ದಿ ರಾಷ್ಟ್ರೀಯ
ಮಟ್ಟದಲ್ಲಿ ಸದ್ದು ಮಾಡಿದ ವೇಳೆಯಲ್ಲಿ
ಧಾರವಾಡದವಳಾದ ನಾನು ಸುಮ್ಮನೇ
ಕೂಡಲಾದೀತೇ?
   ‌‌‌      ‌‌‌     ಇಂದು ಬೆಳಿಗ್ಗೆ ನನಗೆ ಬಂದ
ಮೊದಲ  ಸಂದೇಶ ಆ ಸುದ್ದಿಯನ್ನು ಪ್ರಸಾರ ಮಾಡಿದ ವಾಹಿನಿಯವರದು.
ಇಷ್ಟು ಸರಳವಾಗಿ/ ಸುಲಭವಾಗಿ/ 
ಧನ್ಯವಾದಗಳು ಕೂಡಿಬೀಳುವದಾದರೆ
ಅವಕಾಶ ಯಾಕ್ರೀ  ಬಿಟ್ಟು ಕೊಡಬೇಕು!? ನಮಗಂತೂ ಪ್ರಚಾರ ಗಿಟ್ಟಿಸಿಕೊಳ್ಳುವ  ಭಾಗ್ಯವಿಲ್ಲ.ಪ್ರಚಾರ ವಾಹಿನಿಯ ಧನ್ಯವಾದಗಳಾದರೆ ಅದೇ
ಆದೀತು...


                 
                 

   

    

            





Friday 3 February 2023

ನಾವು ಕೂಡಿ ಕಳೆದ 
ಗಳಿಗೆಗಳು 
ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, 
ಬಾಗಿಲಲ್ಲಿ ತುಸುಹೊತ್ತು‌ 
ನಿಲ್ಲು...
ಹೋಗುವ ಮೊದಲು
ಗುರುತೊಂದನಾದರೂ 
ಬಿಟ್ಟು ಹೋಗು...
ಅದನ್ನು ಮರಳಿ 
ಪಡೆಯಲು
ಮತ್ತೊಮ್ಮೆಯಾದರೂ 
ಬರಬಹುದು...

ನಾವು ಜೊತೆಯಾಗಿ ಕಳೆದ ಕೆಲವು ಗಂಟೆ-ನಿಮಿಷಗಳು ಬರೇ ಕ್ಷಣಗಳು. ತೆರೆದ ಬಾಗಿಲ ಹೊಸ್ತಿಲ ಪೂರ್ತಿ ದಾಟದಿರು.. ಈ ಕಡೆ ಒಂದಿಷ್ಟು ಇರು. ದಾವಣಿಯ ಒಂದಿಂಚು ಅಂಚು ಆ ಚಿಲಕವನ್ನು ಹಿಡಿಯಲಿ.. ಬಾಗಿಲ ಮುಚ್ಚದಿರು, ಮುಚ್ಚಲೇ ಬೇಕಾದರೆ *ಒಳ ಅಗುಳಿ ಹಾಕು.*
-MN

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...