Wednesday, 22 February 2023

ಹಾಗೇ ಸುಮ್ಮನೇ...

       ೧೯೫೦ ರ ದಶಕ...ಆಗ ನಾನು ಇನ್ನೂ ಐದು  ವರ್ಷಗಳೂ ತುಂಬದ ಹುಡುಗಿ. ಸುತ್ತಮುತ್ತಲೂ ನಡೆಯುವ ದನ್ನು ಕಣ್ಣರಳಿಸಿ ನೋಡುವದು ಬಿಟ್ಟರೆ ಬೇರೇನೂ ಕೆಲಸವಿಲ್ಲದ ದಿನಗಳವು...

        ಆಗಿನ ಕಾಲದಲ್ಲಿ ಹಿತ್ತಾಳೆ, ತಾಮ್ರ, ಅಲ್ಯೂಮಿನಿಯಮ್ ಬಳಕೆ ಮಾತ್ರ ಇದ್ದ ಕಾಲ..ಕೆಲವರುಷ ಬಳಸಿದ ನಂತರ ತೆಳ್ಳಗಾಗಿ ಅಲ್ಲಲ್ಲಿ ತಳದಲ್ಲಿ ತೂತುಗಳು ಬಿದ್ದು ಬಳಕೆಗೆ ಬಾರದ ಅಲ್ಯೂಮಿನಿಯಮ್ ಪಾತ್ರೆಗಳು. ನಮ್ಮಮ್ಮ B.E. degree ಪಡೆಯದ ಇಂಜಿನಿಯರ್. ಅವುಗಳನ್ನು ಬೋರಲು ಹಾಕಿ ಸಾಲುಸಾಲಾಗಿ ಮೊಳೆಯಿಂದ ಅಂಥವೇ ಮತ್ತಷ್ಟು ತೂತು ಹೊಡೆದು ಸೊಪ್ಪು,ಕಾಳು ಬಸಿಯಲು,ತೊಳೆದು,ಹೆಚ್ಚಿದ ಸೊಪ್ಪು ಹಾಕಿ ಬೇಳೆಯ ಕೊಳಗದ ಮೇಲಿಟ್ಟು ಉಗಿಯಮೇಲೆ ಬೇಯಿಸಿ ವೇಳೆ, ಇಂಧನ ಎರಡೂ ಉಳಿಸಲು ಬಳಸುತ್ತಿದ್ದಳು.

          ದೀಪಾವಳಿಯಲ್ಲಿ ನಾವೆಲ್ಲ ಹಾರಿಸಿ ಬೀಸಿ ಒಗೆದ ಚುಚೇಂದ್ರಿಯ ಕಡ್ಡಿಗಳನ್ನಾರಿಸಿ,ಕಲ್ಲಿಗೆ ತಿಕ್ಕಿ, ಮದ್ದು ಉದುರಿಸಿ,ಹೊಳಪು ಬರಿಸಿ,ಸರಿ ಮಧ್ಯಭಾಗದಲ್ಲಿ U ಆಕಾರಕ್ಕೆ ಬಗ್ಗಿಸಿ ತುರುಬಿಗೆ ಅಕ್ಕಡ( ಆಗಿನ hairclip) ವಾಗಿಸುತ್ತಿದ್ದಳು..

               ನಮ್ಮದು ಮಣ್ಣಿನ ಮನೆ.. ಕೂಡಿಸಿಟ್ಟ ಕಾಳುಕಡಿಗೆ ಇಲಿಗಳು ಸಾಮಾನ್ಯ... ಇಲಿಯೇನಾದರೂ ಗೋಡೆಯಲ್ಲಿ ಗುದ್ದು ಮಾಡಿದರೆ ,ಇಟ್ಟಿಗೆ,ಕಲ್ಲುಗಳಿಂದ ಅದನ್ನು ಅರ್ಧ ಮುಚ್ಚಿ,ಇನ್ನರ್ಧಕ್ಕೆ ಒಡ್ಡುಕಟ್ಟಿ ,ಮೂರು ಗುಂಪುಗಳನ್ನಿಟ್ಟು ಒಂದು ಕಬ್ಪಿಣದ ಪಟ್ಟಿ ಹಾಕಿ ಮಣ್ಣಿನ ನೆಲದಲ್ಲೊಂದು ಹಾಲು/ ಚಹ  ಕಾಸಲು ಇದ್ದಲು ಒಲೆ ಸಿದ್ಧಮಾಡುತ್ತಿದ್ದಳು.ಹರಿದ ಸೀರೆಗಳ ನ್ನು  ನೀಟಾಗಿ ಕತ್ತರಿಸಿ ಜೋಡಿಸಿ ಕೈ ಹೊಲಿಗೆ ಹಾಕಿ ಮಕ್ಕಳಿಗೆ ದುಪ್ಪಟಿ ಗಳನ್ನು ಹೊಲಿದು ಮೈ ಮನ ಬೆಚ್ಚಗಾಗಿಸುತ್ತಿದ್ದಳು.

            ಹೇಳ ಹೊರಟರೆ ಒಂದು ಕಾದಂಬರಿಯಾದೀತು. ಈಗ ಅವಳ ಎಲ್ಲ ಮಕ್ಕಳು, ಮೊಮ್ಮಕ್ಕಳು ಬಹು ಮಹಡಿ ಕಟ್ಟಡದಲ್ಲಿದ್ದಾರೆ.ಮನೆಮುಂದೆ ಸಾಲುಸಾಲಾಗಿ ಕಾರುಗಳು ನಿಲ್ಲುತ್ತಿವೆ. ಎತ್ತರೆತ್ತರ ಬೆಳೆದಂತೆ ಬದುಕು ನೆಲದಿಂದ ದೂರವೇತಾನೇ!!!?? ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ ನಾನು ಮಾತ್ರ ನೆಲದಾಳದಿಂದ ಚಿಗುರೊಡೆದ ಬದುಕು ಬೆಳೆಬೆಳೆದು ಗಗನಚುಂಬಿ ಯಾದ ಪರಿಯನ್ನು ದಂಗಾಗಿ ನೋಡಿ ದ್ದೇನೆ...ಅನುಭವಿಸಿದ್ದೇನೆ...ಅನುಭಾವಿಸಿದ್ದೇನೆ...ಆಗಿನ ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿಯ ಮಣ್ಣಿನ ನೆಲದಿಂದೆದ್ದ ಧೂಳು ಧಾರವಾಡ, ಬೆಂಗಳೂರಿನ ಪರಿಸರದಲ್ಲಿ ಹಾದು, ಅಮೆರಿಕಾ/ ಸ್ವಿಜರ್ಲ್ಯಾಂಡ್/ಕೆನಡಾ/ ಆಸ್ಟ್ರೇಲಿಯಾ/  ಜರ್ಮನಿಯಂಥ ಅನೇಕ ವಿದೇಶೀ ನಗರಗಳ ಗಾಳಿಯಲ್ಲಿ ಲೀನವಾಗಿ ಅಲ್ಲಿಯದೇ ಎಂಬಂತೆ ಒಂದಾಗಿ ಹೋದ ಪವಾಡವನ್ನು ನಾನು
ನಿತ್ಯವೂ ಕಾಣುತ್ತಿದ್ದೇನೆ.ಮನೆಯಲ್ಲಿ ನಮ್ಮೆಲ್ಲರ ಒಟ್ಟು ಮೊಮ್ಮಕ್ಕಳ ಸಂಖ್ಯೆ
ಇಪ್ಪತ್ತಾರು - Not out...
                ಒಮ್ಮೊಮ್ಮೆ ಅನಿಸುತ್ತದೆ, ಅವರನ್ನು ಕೂಡಿಸಿಕೊಂಡು ಅಜ್ಜಿ/ ಮುತ್ತಜ್ಜಿಯರ ಕಥೆಗಳನ್ನು ಹೇಳಿದರೆ
ಅವರು ಹೇಗೆ ಪ್ರತಿಕ್ರಯಿಸಿಯಾರು???

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...