ಅಮ್ಮನಿಲ್ಲದ ಮನೆ...
"ನಿಂತುಕೊಂಡು ಹಾಲು
ಕುಡಿಯಬೇಡ.
ಪಚನವಾಗುವುದಿಲ್ಲ- ಉಸಿರೆಳೆದುಕೊಂಡು
ನಿಧಾನವಾಗಿ ಕುಡಿ"
ಇಷ್ಟೊಂದು ಥಂಡಿಯಿದೆ,
ಕೋಟ್ ಹಾಕಿಕೊಂಡು ಹೋಗು"
ಇದು ಅಮ್ಮಂದೇ ದನಿ,
ಇದೀಗ
ಅಡಿಗೆ ಮನೆಯಿಂದ
ಹಿಟ್ಟು ನಾದಿದ ಕೈಯಿಂದಲೇ
ಹೊರಗೆ ಬರುತ್ತಾಳೆ...
ತಿರುಗಿ ನೋಡಿದೆ,
ಅಲ್ಲಿತ್ತು ಬರೀ ಮೌನ...
ಒಬ್ಬನೇ ಇದ್ದಾಗಲೆಲ್ಲ
ಸುತ್ತಲ ಗಾಳಿಯೊಡನೆ
ಮಾತಾಡುವ ನನ್ನ ಹುಚ್ಚು ಮನ -
"ಹೊರಗೆ ಕೆಲಸದ ಮೇಲೆ ಹೋಗುತ್ತಿದ್ದರೆ
ಒಂದು ಚಮಚ ಮೊಸರು ತಿನ್ನು,
ಒಂದು ತುಂಡು ಬೆಲ್ಲ ಬಾಯಿಗೆ ಹಾಕಿಕೋ"-ಒಳ್ಳೆಯ ಲಕ್ಷಣ..."
ಎಂದಂತೆ ಭಾಸವಾಗುತ್ತದೆ...
ಈ ಸ್ವಾತಂತ್ರ್ಯಕ್ಕಾಗಿ
ಬದುಕಿಡೀ ಬಯಸಿದ್ದೆ,
ಇದೀಗ ನನ್ನ ಬಳಿ ಸ್ವಾತಂತ್ರ್ಯವಿದೆ. ಏನಾದರೂ ಒಂದು ಹೇಳಿ ತಡೆಯುವರಾರೂ ಈಗ ನನಗಿಲ್ಲ...
ಬೆಳಿಗ್ಗೆ ಯಾವಾಗಲೇ ಏಳಲಿ,
ರಾತ್ರಿ ತಡವಾಗಿ ಮಲಗಲಿ
ಏಕೆಂದು ಕೇಳುವವರಿಲ್ಲ...
"ಎಲ್ಲಿಗೆ ಹೋಗಿದ್ದೆ?
ಏಕೆ ತಡವಾಯಿತು?
ನೀನು ಎಂದು ಸುಧಾರಿಸುವವ?
ನಾ ಕೊಟ್ಟ ದುಡ್ಡು ಏನು ಮಾಡಿದೆ?
ರಾತ್ರಿ ಏಕೆ ಇಷ್ಟು ಲೇಟು?
ಎಷ್ಟೂಂತ ನಿನ್ನ ದಾರಿ ಕಾಯುತ್ತಿರಲಿ?
ನಿನ್ನ ಹಿಂದೆಯೇ ಓಡುತ್ತಿರಲಿ?
ಇವಕ್ಕೆಲ್ಲ ಸುಳ್ಳು ನೆಪ ಹೇಳುವ ಕಾರಣವೀಗ ಇಲ್ಲವೇ ಇಲ್ಲ...
ಏನು ಮಾಡಿದರೂ ಕೇಳುವವರಿಲ್ಲ...
ನನಗೀಗ ಏನೂ ಕಡಿಮೆಯಿಲ್ಲ,
ಅಂದುಕೊಂಡದ್ದೆಲ್ಲವೂ ಇದೆ...
ಆದರೆ
ನೂರು ಪ್ರಶ್ನೆ ಕೇಳಿ ನನ್ನನ್ನು
ಸತಾಯಿಸುವ ಅಮ್ಮನೇ ಇಲ್ಲ...
ದಣಿದು ಬಂದರೆ ದಣಿದೆಯಾ?
ಎನ್ನುವವರಿಲ್ಲ...
ತಲೆಗೆ ಬಾಮ್ ಹಚ್ಚಿ ಹಣೆ ನೇವರಿಸುವವರಿಲ್ಲ...
"ದೀಪಾವಳಿಗೆ ಹಣೆಗೆ ತಿಲಕ ಇಟ್ಟು,
ಹಿರಿಯರಿಗೆ ನಮಿಸು-
ಆಶೀರ್ವಾದ ಸಿಗುತ್ತದೆ"
ಎನ್ನುವವರಿಲ್ಲ...
ಅಪ್ಪನ ಬೈಗಳ ಹೆದರಿಕೆ ಹುಟ್ಟಿಸುವವರಿಲ್ಲ...
"ಇನ್ನು ಹೊಸ ಅಂಗಿ
ಮುಂದಿನ ದೀಪಾವಳಿಗೇನೇ-"
ಎಂದು ಎಚ್ಚರಿಸುವವಳಿಲ್ಲ...
ನನ್ನ ಏಳ್ಗೆಗಾಗಿ ಹರಕೆ ಹೊರುವುದು,
ಅದು ಫಲಿಸಿದರೆ,
ಎಲ್ಲಿ ದೂರ ಹೋಗುತ್ತೇನೋ
ಎಂದು ಬಾಗಿಲ ಹಿಂದೆ
ನಿಂತು ಅಳುವುದು...
ಪರೀಕ್ಷೆ ಮುಗಿಸಿ ಬಂದರೆ
ಕಾದು ಕುಳಿತು ಊಟಕ್ಕಿಡುವುದು...
ಯಾವುದೂ ಇಲ್ಲ ಈಗ...
ಈಗ
ನಾನು-ನೀನು ಅಂದುಕೊಂಡ
ಎಲ್ಲವೂ ದಕ್ಕಿದೆ.
ಅದೆಲ್ಲ ಸಾಧಿಸಿದ ಖುಶಿಯೂ ಇದೆ.
ಆದರೆ ನೀನೇ ಇಲ್ಲವಲ್ಲ ಎಂಬ
ಅಗಾಧ ನೋವೊಂದು
ಸದಾಕಾಲ ಕಾಡುತ್ತಿದೆ...
No comments:
Post a Comment