Wednesday, 21 February 2024

ಬಿ.ವಿ.ಭಾರತಿ...            
  ‌ನೆನಪುಗಳು ಕೆಲವೊಮ್ಮೆ ಮಧುರವೆನ್ನಿಸಿದರೆ, ಮತ್ತೆ ಕೆಲವೊಮ್ಮೆ ಶಿಕ್ಷೆಯೂ ಅನ್ನಿಸಿಬಿಡುತ್ತದೆ. ಆದರೆ ಚೆಂದದ ನೆನಪುಗಳು ಮಾತ್ರ ನನಗಿರಲಿ ಅನ್ನಲಾಗದು. ಬದುಕೆನ್ನುವ ಪ್ಯಾಕೇಜ್ ಡೀಲ್‌ ಸೂಪರ್ ಮಾರ್ಕೆಟ್‌ಗಳಲ್ಲಿ ಸಿದ್ಧ ಪಡಿಸಿಟ್ಟ ಈರುಳ್ಳಿ ಪ್ಯಾಕೆಟ್‌ನ ಹಾಗೆ. ಎಲ್ಲ ಸೈಜ಼್‌ನ ಗಡ್ಡೆಗಳ ನಡುನಡುವೆ ಒಂದೆರಡು ಕೊಳೆತವನ್ನೂ ಸೇರಿಸಿಬಿಟ್ಟಿರುತ್ತಾರೆ. ಮನೆಗೆ ಹೋಗಿ ತೆರೆದ ನಂತರವೇ ಅದು ಅರಿವಿಗೆ ಬರುವುದು. ಬದುಕಲ್ಲಿಯೂ ದೇವರು ಹೀಗೆಯೇ ಮಾಡಿರುತ್ತಾನೆ. ಹಲವು ನೋವಿನ ನೆನಪುಗಳು, ಹಲವು ಸಂಭ್ರಮದ ನೆನಪುಗಳು, ಹಲವು ವಿಷಾದದ ನೆನಪುಗಳು, ಹಲವು ದುಃಖದ ನೆನಪುಗಳು...

ಕೃಷ್ಣಾ ಮಾ ಎಂದೇ ನಾನು ಕರೆಯುವ ಕೃಷ್ಣಾ ಕೌಲಗಿಯವರ 'ಹಾಯಿ ದೋಣಿಯ ಪಯಣ'ದಲ್ಲಿನ ಎಲ್ಲ ಬರಹಗಳೂ ವಿವಿಧ ನೆನಪುಗಳು, ವಿವಿಧ ಅನಿಸಿಕೆಗಳು, ಸಂದರ್ಭಗಳು, ಸಂಭ್ರಮಗಳನ್ನು ಕುರಿತು ಬರೆದವು. ಮಾಗಿದ ಮನಸ್ಸಿನ ಬರಹಗಳು. ಏನೆಲ್ಲ  ಹೇಳುವಾಗಲೂ ಅವರದ್ದು ತಣ್ಣನೆಯ ದನಿ. ಬದಲಾದ ಬದುಕಿನ ಬಗ್ಗೆ ಬರೆಯುವಾಗಲೂ ಆಕ್ರೋಶವಿಲ್ಲ, ಚೀರಾಟವಿಲ್ಲ... ಒಪ್ಪಿಕೊಳ್ಳುವ ಸ್ಥಿತಪ್ರಜ್ಞತೆಯಷ್ಟೇ. ಅಲ್ಲಲ್ಲಿ ಸಣ್ಣ ವಿಷಾದ ತಲೆದೋರಿದರೂ, ಅದನ್ನು ಕೊಡವಿ ಮುಂದೆ ಸಾಗಿ ಯಾವುದೋ ಆಧುನಿಕ ಕಾಲದ ಬದಲಾವಣೆಯ ಬಗ್ಗೆ ಬೆರಗಿನಿಂದ ಹೇಳಲಾರಂಭಿಸುತ್ತಾರೆ! 

ಇಡೀ ಪುಸ್ತಕದಲ್ಲಿ ಅತ್ಯಂತ ನೋವಿನ ಬರಹವೆಂದರೆ ಅವರು ಓದಿ ಟೀಚರ್ ಆಗುವ ಸಂದರ್ಭ. ಇಡೀ ಪುಸ್ತಕದಲ್ಲಿನ ಎಲ್ಲ ಬರಹಗಳು ಸೇರಿ ಒಂದು ತೂಕವಾದರೆ, ಇದೊಂದು ಬರಹದ್ದೇ ಬೇರೊಂದು ತೂಕ. ಅದನ್ನು ಬರೆಯುವಾಗಿನ ಅವರ ಸಂಯಮ ನೀವು ಅವರ ಹಾಯಿ ದೋಣಿಯ ಪಯಣದಲ್ಲಿ ಜೊತೆಯಾದರಷ್ಟೇ ತಿಳಿಯುತ್ತದೆ...

ಭಾರತಿ ಬಿ ವಿ

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...