ಆಟ ಮುಗಿದು ಹೋದ ಮೇಲೆ...
- ನಾವು ಗೆದ್ವಿ...
- ಎಷ್ಟು ಗೋಲಿನಿಂದ?
- ಒಂದು...
- ಮೊದಲೆಲ್ಲ, 5-0 6-0 ಅಂತಿದ್ದೆಲ್ಲೊ...
- ಅಜ್ಜಿ, ಹಂಗ ಗೆದ್ರ ಚಲೋ ಆಟ ಅಲ್ಲ ಅದು.ಎದುರುಗಡೆ team ಭಾಳ weak ಇದ್ರ ಅಂಥ result ಬರತದ. One sided ಆಟ ಆಗತದ. Cricket match ನಾಗ ಅದsss ವರ್ಷ ಬಂದ ಟೀಮ್ ಗೂ/ವಿಶ್ವಕಪ್ ಗೆದ್ದ ಟೀಮ್ಗೂ ಆಟ ಆದ್ಹಂಗ...ಎರಡೂ ಟೀಮ್ ಸಮ ಸಮ ಇರ್ಬೇಕು.ಒಬ್ರು ಗೋಲ್ ಮಾಡಲಿಕ್ಕೆ ನೋಡ್ತಿದ್ರ ,ಇನ್ನೊಂದು ಟೀಮ್ ಅದನ್ನ ತಡಿಬೇಕು.ಆ ಗೋಲ್
ಆಗಗೊಡಬಾರ್ದು, ಅದು ತುರುಸಿನ ಆಟ.ಒಂದ ಸಲ ಇವರ ' ಗೋಲ್ ಆದ್ರ
Next time ಅವರ ಗೋಲ್ ಆಗ್ಬೇಕು. ಅದು ಖರೆ ಆಟ...ಸಮಬಲದ ಟೀಮು ಜೊತೆ ಆಡಿದ್ಹಾಂಗ...ಒಂದ ಟೀಮ್ ಆಡಿದ್ರ ಉಪಯೋಗಿಲ್ಲ
- penalty ಒಳಗ ಆದ್ರ?
- ಅದೂ ಚಲೋ ಅಲ್ಲ.ಆಗ result 50/50 ಇರ್ತದ.ಕೊನೆತನಕ tension.
- ಅಂದ್ರ ಕೊನೆ ತನಾ ಸೆಣಸಾಟ ಇರ್ಬೇಕು ಅನ್ನು...
- ಹಾಂ...
ಸುಮಾರು ಹತ್ತು ವರ್ಷಗಳಿಂದ
ಬೆಂಗಳೂರು foot ball clubನ ಆಟಗಾರನಾದ ಮೊಮ್ಮಗನಿಂದ ಇವತ್ತು ಕಲಿತ ಒಂದು ಬದುಕಿನ ಪಾಠವಿದು. ಬದುಕಿನಾಗ ಕೊನೆತನಕಾ ಕಲಿಯೋದು ಮುಗಿಯೂದಿಲ್ಲ. ಸಾಯೂತನ- ಅಷ್ಟ ಯಾಕ- ಹೆಂಗ ಸಾಯ್ಬೇಕು ಅನ್ನೋದನ್ನ ಸಹಾ ಕಲಿಯೋದಿರತದ...
ಬದುಕೊದಂದ್ರನೂ ಒಂದು ಆಟsssನ...ನಮ್ಮ ಆಟಕ್ಕೆ ಪರವಾಗಿ- ವಿರೋಧವಾಗಿ ಆಟಗಾರರು ಇದ್ದೇ ಇರ್ತಾರ.ಕೆಲವರು ನುರಿತ ಆಟಗಾರ ರಾದ್ರ ಇನ್ನೂ ಅನೇಕರು ನಮ್ಮ ಆಟಕ್ಕ ಅಡ್ಡಗಾಲು ಹಾಕೋರು.ಆಟಗಳ ತಂತ್ರಗಳನ್ನು ತಿಳಿದು,ಹುಶಾರು ತಪ್ಪದೇ
ಎದುರಾಳಿಗಳ ಪಟ್ಟುಗಳನ್ನು ಅರಿತು
ಆಡಿದರ ಗೆಲ್ಲಬಹುದು...ಎದುರಾಳಿ
ಅಸಮರ್ಥರಿದ್ದರೆ ಆಟದ ಉತ್ಸಾಹ ಇರೂದೆ ಇಲ್ಲ...ಸ್ಪರ್ಧೆಯೊಳಗ ಪರಿಣತಿ ಇಲ್ಲದವರ ಜೊತೆ ಸೆಣಸಾಟ ದಿಂದ ಆಟದ ತೃಪ್ತಿ ಸಿಗೂದಿಲ್ಲ...
ಅಂತೇನೇನೋ ಹುಚ್ಚು ಲಾಜಿಕ್ ಶುರುವಾತು.ಹಂಗ ನೋಡಿದ್ರ ನಾನೂ ಒಂದು ಕಾಲಕ್ಕೆ ಹಳ್ಳಿಯಲ್ಲಿಯ ಆಟೋಟಗಳಲ್ಲಿ ಮುಂದಿದ್ದವಳೇ. ಆದರೆ ಅದು ಅತಿ ಸಣ್ಣ ಹಳ್ಳಿ...ಕಡಿಮೆ ಸ್ಪರ್ಧಾಭಾವದ/ ತರಬೇತಿ ಪೂರ್ಣ ಪ್ರಮಾಣದಲ್ಲಿ ಸಿಕ್ಕಿರದ ಜವಾರಿ ಆಟಗಾರಳು... ಹೈಸ್ಕೂಲ್ ಮುಗಿದ ತಕ್ಷಣ ಅವೆಲ್ಲಕ್ಕೂ ' ಜನ- ಗಣ- ಮನ' ಹಾಡಿಯಾಗಿತ್ತು. ನಂತರದ ಬದುಕಿನಲ್ಲಿ ಬದುಕೂ ಒಂದು ಆಟವೇ- ಎಂಬುದು ಅರಿವಾದಾಗ ಆಟಗಳ ಪಟ್ಟುಗಳನ್ನು ಹೆಜ್ಜೆ ಹೆಜ್ಜೆಗೂ ಕಲಿಯುವ ಅನಿವಾರ್ಯತೆ ಬಂತು. ಉಳಿದ ಆಟಗಳಂತೆ ಬೇಡವೆನಿಸಿದಾಗ ಮೈದಾನ ಬಿಟ್ಟುಹೊರಡುವ ಸ್ವಾತಂತ್ರ್ಯ
ವಿಲ್ಲದ ಆಟವದು...
ಎಲ್ಲವನ್ನೂ ಶಕ್ತಿಗೆ ಅನುಸಾರ ವಾಗಿ ಆಡಿ ಮುಗಿಸಿ retirement ಘೋಷಿಸಿದ ಮೇಲೆ ಮೈದಾನದಲ್ಲಿದ್ದು
ಇತರ ಆಟಗಾರರ ಆಟದ ಬಗೆಗಿನ commentary ಹೇಳುವ ಮಾಜಿ ಆಟಗಾರಳು ನಾನೀಗ ಎನಿಸಿ ಮನಸ್ಸಿನಲ್ಲೇ ನಕ್ಕೆ...
No comments:
Post a Comment