Friday 16 April 2021

ಅಡಿ ಜಾರಿ ಬೀಳುವುದು...
ತಡವಿಕೊಂಡೇಳುವುದು...

       ‌‌‌          I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ  ಒಂದು ಆರೋಗ್ಯದ ತಕರಾರಿದೆ.  Irritable  Bowel
syndrome_ ಅದರ ಪೂರ್ಣ ಹೆಸರು... ಅತಿ ಹೆಚ್ಚು ಪ್ರೋಟೀನಯುಕ್ತ ಆಹಾರ, ಅತಿ ಮಸಾಲೆ, ಕರಿದ ಪದಾರ್ಥಗಳು, ಹೈನು/ ಮೈದಾದಂಥ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು  ಹೊಟ್ಟೆ  ಮಾನ್ಯ ಮಾಡುವದಿಲ್ಲ. ಅದು ಅತಿ ಗಂಭೀರ  ಆರೋಗ್ಯ ತಕರಾರೇನೂ ಅಲ್ಲ . ಆದರೆ ಗ್ಯಾಸ್, ಹೊಟ್ಟೆಯುಬ್ಬರ, ಮಲಬದ್ಧತೆ ಯಂಥ ಕಿರಿಕಿರಿ ಹೆಚ್ಚು ಮಾಡುತ್ತದೆ. ಹೀಗಾಗಿ ಅದನ್ನು  ಅಲಕ್ಷಿಸುವ, ಅಮಾನ್ಯ ಮಾಡುವ ಧೈರ್ಯ ಬರುವ ಪ್ರಮೇಯವೇಯಿಲ್ಲ.
ಹಾಗೇನಾದರೂ ಮಾಡಿದಿರೋ ಎರಡೇ ದಿನಗಳಲ್ಲಿ ಮಂಡೆಯೂರಿಸಿ ಕಿವಿ ಹಿಡಿಸಿ ಬಿಡುತ್ತದೆ...ಮುಂದೆ ಅದನ್ನು ಎಚ್ಚರತಪ್ಪಿಯೂ ಮರೆಯುವ ಹಾಗೇಯಿಲ್ಲ...
                           ನನಗೂ ಇತ್ತೀಚೆಗೆ I.B.S problem,  but  here  'B 'stands for  BRAIN...not  IRRITABLE  BOWEL...but irritable brain syndrome.  ಹಹಹ! ಗಾಬರಿ ಬೇಡ, ಅತಿ  ಹೆಚ್ಚು  ಸಾರವಿದ್ದು , ಗಂಭೀರ ವಿಷಯಗಳುಳ್ಳ ಲೇಖನಗಳು , ಪುಸ್ತಕಗಳು  ತಲೆಯೊಳಗೆ ಹೋಗಲು strike ಮಾಡುತ್ತಿವೆ. ಒತ್ತಾಯಿಸಿ ಒಳಹಾಕ ಹೋದರೆ ತಲೆ ನೋವು ಶುರುವಾಗುತ್ತದೆ,  ಇಲ್ಲವೇ ಕಣ್ಣುಗಳು ಓದುತ್ತವೆ- ಬುದ್ಧಿ  ಗ್ರಹಿಸುವದೇಯಿಲ್ಲ.
ಇಂಥ ಆಗ್ರಹದೋದು ಖುಶಿ ತರುವದರ ಬದಲು ಕಿರಿಕಿರಿ  ಎನಿಸಲು ಸುರುವಾಗುತ್ತದೆ.  ಓದಬೇಕೆಂದು ಆಶೆಯಿಂದ ಖರೀದಿಸಿದ ಪುಸ್ತಕರಾಶಿ ದಿನಾಲೂ  ಅಣಕಿಸುತ್ತದೆ. " ನಿನ್ನ ಯೋಗ್ಯತೆ ಗೊತ್ತಾಯಿತೇ" ಎಂದು ಛೇಡಿಸತೊಡಗುತ್ತವೆ,  ತಲೆದಿಂಬಿನ ಹತ್ತಿರದ ಪುಸ್ತಕ  ಒತ್ತತೊಡಗುತ್ತದೆ.
ಇದು ತಾತ್ಕಾಲಿಕವಾಗಿರಬಹುದು ಎಂದುಕೊಂಡು ಸಮಾಧಾನ  ಮಾಡಿಕೊಳ್ಳುತ್ತಿದ್ದೇನೆ. ಕೆಲವರಂತೂ  ಇತ್ತೀಚೆಗೆ   ತಮಗೂ ಹಾಗೇ ಆಗುತ್ತದೆ ಎಂದು ನನ್ನೊಂದಿಗೆ ಸ್ವರ ಜೋಡಿಸಿದಾಗ ಮನಸ್ಸಿಗೆ ಅದೇನೋ ಕೊಂಚ ಸಮಾಧಾನ. ಸಮಸ್ಯೆಗೆ ಪರಿಹಾರ ವಿರಬಹುದೆಂಬುದೊಂದು ದೂರದ ಆಶೆ. ದಿನಕ್ಕೊಂದು ಪುಸ್ತಕ ಜಿದ್ದಿಗೆ ಬಿದ್ದು ಓದಿದವಳು ನಾನು. ಈಗೀಗ ಒಂದು ವಾರವಾದರೂ ಅರ್ಧಮುಗಿಯುವದಿಲ್ಲ.
ಒಮ್ಮೆ ಹೆಚ್ಚುತ್ತಿರುವ ವಯಸ್ಸನ್ನು ಬಯ್ದು ಕೊಂಡರೆ, ಮತ್ತೊಮ್ಮೆ ಇತ್ತೀಚೆಗಿನ fb ಯು ಮುಗಿಯಲಾರದ ಗೀಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇನೆ.

             ಕೋವಿಡ್ನಿಂದಾಗಿ ಕಣ್ಣುಪೊರೆಯ operation ಬಹುಕಾಲ ಮಾಡಿಸಲಾಗದೇ ಅನಿವಾರ್ಯವಾಗಿ ಓದುವುದು ನಿಂತಿದ್ದರಿಂದ ಆದ ಆಲಸ್ಯದ ಪರಿಣಾಮವೇ ಗೊತ್ತಾಗುತ್ತಿಲ್ಲ.‌ ಯಾವುದೇ ಕಾರಣದಿಂದ ಓದಿಗೆ ಹಿನ್ನಡೆಯಾಗಿರಬಹುದು ಎಂದುಕೊಂಡರೂ ನನ್ನ ಅತಿ ಮೆಚ್ಚಿನ ಹವ್ಯಾಸವೊಂದು  ನನಗೆ ಹೀಗೆ ಕೈಕೊಡುತ್ತಿರುವದು ಸಹಿಸಲಾಗುತ್ತಿಲ್ಲ..
 ಅಷ್ಟು ಸುಲಭವಾಗಿ ನಾನಾದರೂ ಸೋಲೊಪ್ಪಿಕೊಳ್ಳುವದಾದರೂ ಹೇಗೇ?? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಬೆಂಗಳೂರಿನಲ್ಲಿ ಹೀಗೆ ಕಾಲಾಡಿಸಿಕೊಂಡು , ಕೆಲವರಿಗೆ Hi, Bye  ಹೇಳಿ ಅರ್ಧಗಂಟೆ ಕಳೆಯುವ ಮಾರ್ಗಗಳಿಲ್ಲ...ಪಕ್ಕದವರದೇ ಒಂದೊಂದು ವಾರ ಕಳೆದರೂ ಮುಖ ದರ್ಶನವಾಗುವ ಮಾತಿಲ್ಲ. ಈಗಂತೂ  ಕೋವಿಡ್ ನ ಎರಡನೇ ಅಲೆ ಸುರುವಾಗಿ ಸುದ್ದಿಗಳೂ ಗುಂಪಿನ WhatsApp ಮೂಲಕ ತಲುಪಬೇಕಾದ ಅನಿವಾರ್ಯತೆ. ಮನೆಯಲ್ಲಿ ನನ್ನಂತೆ ಒಬ್ಬರಾದರೂ ಲಭ್ಯವಿದ್ದರೆ ಆಗಾಗ ಫೋನ್ ಮಾಡಬಹುದಾದ ಮಹತ್ ಅವಕಾಶವಾದರೂ ಸಿಗುವದುಂಟು. ಇಲ್ಲದಿದ್ದರೆ  ಅದೂ ಇಲ್ಲದಾಗಿ ಬಹಳಷ್ಟು ಜನ TV ಮೊರೆಹೋಗುತ್ತಾರೆ...ನನಗದು
ಇತ್ತೀಚೆಗೆ  ತೀವ್ರ ಅಲರ್ಜಿ...ಕಥೆಯ ಗುಂಗು ಹಿಡಿಸಿಕೊಂಡು, ನೋಡಲು ಸಿಗದಾಗ ಏನೋ ಕಳೆದುಕೊಂಡಂತೆ  ವ್ಯಥೆ ಹಚ್ಚಿಕೊಂಡು ವರ್ಷಗಟ್ಟಲೇ ಮರುಗುವ ಜಾಯಮಾನ ನನ್ನದಲ್ಲ...ಅಲ್ಲದೇ ಎಲ್ರೂ ಒಟ್ಟಾಗಿ ಕೂತು ಟೀವಿ ನೋಡುತ್ತಿದ್ದ ಆ ಕಾಲ ಎಂದೋ ಇಲ್ಲದಾಗಿದೆ. ಹೀಗಾಗಿ ಆ ದಾರಿಯೂ ನನಗೆ ಬಂದ್...

 My never failing friends are they, With whom I converse day by day...

         _ ಎಂಬಂತೆ  ಓದು/ ಪುಸ್ತಕಗಳೇ  ನನ್ನ all time favourite ಆಗಿದ್ದು, ಆ ಹವ್ಯಾಸ  ಈಗ ನನ್ನ ಚಾಳಿ ಠೂ ಬಿಡಲು ಹೊಂಚು ಹಾಕುತ್ತಿದೆ. ಅಷ್ಟು ಸುಲಭವಾಗಿ ಕೈ ಚಲ್ಲಲು ಪುಸ್ತಕಗಳೇನು ಚುನಾವಣೆಯ ರಾಜಕೀಯ ವಿದ್ಯಮಾನಗಳನ್ನೊಳಗೊಂಡ ಕಲಸು ಮೇಲೋಗರದ ಪತ್ರಿಕೆಗಳೇ?

       ‌‌‌        ಕೆಲಕಾಲ ನನ್ನನ್ನು ಸೋಲಿಸಿದ  ಭ್ರಮೆಯ  ಸುಖವನ್ನು ಮನಸ್ಸೂ  ಒಂದಿಷ್ಟು  ಅನುಭವಿಸಲಿ...ನಾನೂ ನೋಡುತ್ತೇನೆ...ಎಷ್ಟು ದಿನ ಹೂಂಕರಿಸೀತು ಈ IBS_ Irritable  Brain Syndrome...( ನಾನೇ  ಕೊಟ್ಟ ಹೆಸರು, ಮೆದುಳಿನ ಆಲಸ್ಯ ರೋಗ)...ಹ..ಹ..ಹ.

ದುಡುಕಿ ಮತಿ ತಪ್ಪುವುದು,
ತಪ್ಪನೊಪ್ಪೆನ್ನುವದು
ಬದುಕೆಂದರಿದು ತಾನೇ??? 

ಎಂದು ಡಿವಿಜಿಯವರೇ ' ಕಗ್ಗದಲ್ಲಿ'
ಹೇಳಿಲ್ಲವೇ? ಅಂದ ಮೇಲೆ ನಮ್ಮದೇನು ಹೆಚ್ಚುಗಾರಿಕೆ?

Sunday 11 April 2021

ಹೀಗೂ ಒಂದು ಯುಗಾದಿ...

ಹೀಗೂ ಒಂದು ಯುಗಾದಿ...

ಯುಗಾದಿ...
ಹಿಂದೆಯೂ ಬಂದಿತ್ತು,
ಇಂದೂ ಬಂದಿದೆ,
ಮುಂದೂ ಬರುತ್ತದೆ,
ಹೊಸದೇನನ್ನೋ ತರುತ್ತದೆ...

ಈ ಸಲ...
ಬೇವಿಗೆ ಕಹಿ ಹೆಚ್ಚಿದೆ,
ಬೆಲ್ಲಕ್ಕೆ ಸಿಹಿಯಿನ್ನೂ ಬೇಕಿದೆ,
ಇರಬೇಕೊಂದಿಷ್ಟು ಸಂಯಮ,
'ಪರಿವರ್ತನೆ'  ಜಗದ ನಿಯಮ...

ಬದುಕು...
ನಿರಂತರ ಕಲಿಸುತ್ತದೆ,
ಅತ್ತು-ಅಳಿಸಿ  ತಿಳಿಸುತ್ತದೆ,
ನಕ್ಕು-ನಗಿಸಿ ಹರಸುತ್ತದೆ,
ಬೇವು-ಬೆಲ್ಲ 'ಸಮ'ವಿರಿಸುತ್ತದೆ

ಹೊಸವರ್ಷ,
ಬರುತ್ತಲೇ ಇರುತ್ತದೆ, 
ಹೊಸಲೆಕ್ಕ ಇಡುತ್ತದೆ,
ಮತ್ತೇನೋ ಬದಲಿಸುತ್ತದೆ,
ನಮ್ಮನ್ನೂ ಮಣಿಸುತ್ತದೆ.

ಅಂತೆಯೇ...
'ಕೊರೋನಾ ಚಿಂತೆ ಬಿಡೋಣ,
ಅಂತೆ-ಕಂತೆಗಳ  ಸರಿಸಿಡೋಣ,
ನಾವು-ನಾವೇ ಹಬ್ಬಮಾಡೋಣ,
ಒಳ್ಳೆಯದಾಗಲೆಂದು ಬೇಡೋಣ...

ಕಾರಣದನು
ಬರಮಾಡಿಕೊಳ್ಳೋಣ,
ಒಳ್ಳೆಯದ ನೆನೆಯೋಣ,
ಬೇಡದುದ ಮರೆಯೋಣ,
ಮುಂದ್ಮುಂದೆ ನಡೆಯೋಣ...

    ***   ***  ***  ***  ***  ***
        





















Saturday 10 April 2021

ಹಾಗೇ ಸುಮ್ಮನೇ...

ದಾರಿಯಾವುದಯ್ಯಾ ಸಂತೋಷಕೆ..

             ಮಕ್ಕಳದೆಲ್ಲ ಪರೀಕ್ಷೆ ಮುಗಿದು   ಬೇಸಿಗೆ ರಜೆ ಪ್ರಾರಂಭವಾಗಿದೆ..ಹಾಗೆಯೇ ಬೇಸಿಗೆಯ ಚಟುವಟಿಕೆಗಳು ಸಹ...ಬೆಂಗಳೂರಿನಲ್ಲಿ ಬೇಸಿಗೆಯ ಶಿಬಿರಕ್ಕೆ ಮಕ್ಕಳನ್ನು  ಕಳಿಸುವದು ಸುಲಭವಲ್ಲ...ಕಾರಣ  ಪಾಲಕರದೇ ಒಂದು group ಮಾಡಿಕೊಂಡು ,ಒಬ್ಬೊಬ್ಬರು ಒಮ್ಮೊಮ್ಮೆ  lead ತೆಗೆದುಕೊಂಡು ಮಕ್ಕಳನ್ನು ರಂಜಿಸುವ plan ಮಾಡುತ್ತಾರೆ...ಬಹಳ ದಿನಗಳ ರಜೆಯಲ್ಲಿ ಇಷ್ಟು ಸಾಕಾಗುವದಿಲ್ಲ..ಆವಾಗ sleep over ಅಂದರೆ ಒಂದೆರಡು ದಿನಗಳು ಸ್ನೇಹಿತರ ಮನೆಯಲ್ಲಿಯೇ ಇರುವ ಯೋಜನೆ ಹಾಕುತ್ತಾರೆ...
     ‌          ಹಾಗೇ ನಮ್ಮ ಮನೆಯಲ್ಲೂ ಎರಡು ದಿನಗಳಿಂದ ಮಕ್ಕಳಿದ್ದರು...ಅವರನ್ನು ಸಹಜವಾಗಿ ಮಾತಾಡಿಸಿದಾಗ ಒಬ್ಬ ಹೇಳಿದ ,"ಒಂದು ಹದಿನೈದು ದಿನ‌ Italy ಗೆ‌ ಹೋಗುತ್ತಿದ್ದೇವೆ ಆಂಟಿ." ಮತ್ತೊಬ್ಬ ಹೇಳಿದ, ನಮ್ಮ cousin ನ convocation ಗೆ US ಗೆ ಹೋಗ್ತೀವಿ next week...
            ನಾನೇನೂ ಬೆಚ್ಚಿ ಬೀಳಲಿಲ್ಲ ...ಯಾಕಂದರೆ ನನ್ನ ಒಬ್ಬ ಮೊಮ್ಮಗ ರಜೆಗೆಂದು London ನಲ್ಲಿ ಇದ್ದು ಹತ್ತು ದಿನಗಳ ನಂತರ ಸಧ್ಯ ವಾಪಸ್ ಬರಲು flight ನಲ್ಲಿ ಇದ್ದಾನೆ...ಇನ್ನೊಬ್ಬ ಮೊಮ್ಮಗ ಇನ್ನೆರಡು ತಾಸಿಗೆ   ರಜೆಗೆ Zurich ಗೆ ಹೋಗಲು Air port taxi ಹಿಡಿಯುವವನಿದ್ದಾನೆ..ಇದು ಇಪ್ಪತ್ತು  ದಿನಗಳ Schedule..
             ಇದನ್ನೆಲ್ಲ ನೋಡಿದಾಗ ನಾವು ಅಜ್ಜಿಯ ಮನೆಗೆ  ಸೂಟಿಗೆ ಹೋಗುತ್ತಿದ್ದುದು ನೆನಪಾಯಿತು...ರಟ್ಟೀಹಳ್ಳಿಯಿಂದ ಐದು ಮೈಲು ಮಾಸೂರು..ಅದೇ ಅಜ್ಜಿಯ ಮನೆ...ಅಲ್ಲಿ ಹೊರಡುವಾಗಿನ ಉತ್ಸಾಹ ನೆನಸಿಕೊಂಡರೆ, ನಂತರದ ವಿದೇಶ ಪ್ರವಾಸಗಳೂ  ಸಪ್ಪೆ..ಸಪ್ಪೆ..ಕಾರಣಗಳನ್ನು ವಿಶ್ಲೇಷಿದಾಗ  ಎರಡು ಕಾರಣಗಳು ಸ್ಪಷ್ಟವಾಗಿ ಕಂಡವು...
   ‌‌           ಅದು ಬಾಲ್ಯ...ಗಂಗೆ ಗಂಗೋತ್ರಿಯಲ್ಲಿ ಮಾತ್ರ ಶುದ್ಧ ಅಂತಾರಲ್ಲ ಹಾಗೆ..ಮನಸ್ಸಿನಲ್ಲಿ ರಾಗ ,ದ್ವೇಷಗಳಿಲ್ಲ...ಸಣ್ಣ ಸಣ್ಣ ಖುಶಿಯೂ ನೇರ ಹೃದಯದಾಳಕ್ಕೆ...ಮಾತು,ಕತೆ,ಊಟ,ತಿಂಡಿ, ಎಲ್ಲವೂ ಸಾರ್ವಜನಿಕ..ಸಾಮೂಹಿಕ...' ನಾನು' ಅಂದದ್ದು ನೆನಪೇಯಿಲ್ಲ.. ಎಲ್ಲೆಲ್ಲಿಯೂ,ಎಲ್ಲ ಕಾಲಕ್ಕೂ ನಾವು...ನೇರ ಸಂಬಂಧಿಕರಲ್ಲದಿದ್ದರೂ ಆಪ್ತೇಷ್ಟರ ಮನೆಗೂ ಹೋಗಿ ಕೆಲದಿನ ಯಾವುದೇ ಮುಲಾಜಿಲ್ಲದೇ ಹೋಗಿ ಬರುವಷ್ಟು ಆಪ್ತತೆ...ಎಷ್ಟೋಸಲ ಆಡಲು ಹೋದ ಮಕ್ಕಳು ಆಟದ ಬಯಲಿನಿಂದಲೇ ಯಾವುದೋ ಮಾಮಾ,ಚಾಚಾರ ಮನೆಗೆ ಹೋದ ಸಮಾಚಾರ ಸಂಬಂಧಿತರ ಮುಖಾಂತರ ಮನೆ ತಲುಪುವದೂ ಇತ್ತು...ಬಟ್ಟೆ ಬರೆಯ ಯೋಚನೆಯೂ ತಲೆಯಲ್ಲಿ ಹೋಗದಷ್ಟು ಎಲ್ಲರೂ ನಿರಾಳ...ಎಲ್ಲರವೂ ಉಳಿದವರಿಗೆ  ಮಾನ್ಯ...
      ‌‌‌        ಇದು ನಮ್ಮ ಬಾಲ್ಯ...ಈಗ ಬೆಂಗಳೂರಲ್ಲಿ ಯಾರನ್ನು ಯಾರೂ ನಂಬದಷ್ಟು ಅಪನಂಬಿಕೆ...ಅದು ಬ್ರಹತ್ ನಗರಗಳ  ಸಾಮಾನ್ಯ ಗುಣಲಕ್ಷಣ...ಕೆಲ ಆತ್ಮೀಯರು ಅಂತಾದರೆ ಮೇಲೆ ಹೇಳಿದ ಹಾಗೆ ಒಂದೆರಡು ದಿನಗಳ sleep over ಭಾಗ್ಯ...ಇಲ್ಲದಿದ್ದರೆ ಯಾವುದಾದರೂ day care ಇಲ್ಲವೇ full time maid ಗಳ ಉಸ್ತುವಾರಿ..ಅದೂ ಸಂಪೂರ್ಣ ನಿಶ್ಚಿಂತೆಯಿಂದಲ್ಲ...ಒಂದು ಡೆಮೊಕ್ಲಸ್ ಕತ್ತಿ ಸದಾ ನೆತ್ತಿಯ ಮೇಲೆ...ಯಾರು ಹೇಗೋ,ಜೊತೆಗಿರುವ ಮಕ್ಕಳು ಎಂಥವೋ...ಎಂಬಂಥ ಹತ್ತು,ಹಲವು ಯೋಚನೆಗಳು ಸದಾ ಒತ್ತಡ,ಭಯ,ಅಕಾಲಿಕ ವೃದ್ಧಾಪ್ಯಗಳಲ್ಲಿ ಪರ್ಯಾವಸಾನ....
               ಓಡುವ ಸಮಾಜದೊಂದಿಗೆ ಓಡಿ ಕಾಲಕ್ಕೆ ಶರಣಾಗುವದೋ,ಅದನ್ನು ನಿರಾಕರಿಸಿ ಹಿಂದುಳಿದು ಬದುಕಿನ ಅವಕಾಶಗಳಿಂದ ವಂಚಿತರಾಗಿ ಜೀವನ ಪರ್ಯಂತ  ಪರಿತಪಿಸುವದೋ ನಿರ್ಣಯ ಸುಲಭವಿಲ್ಲ...ಬಹುಕಾಲ ತಮ್ಮದೇ ವರ್ತುಲದಲ್ಲಿ ತಮಗೆ ಬೇಕಾದಂತೆ ಜೀವನ ಕಳೆದ ಪಾಲಕರಿಗೆ ವೃದ್ಧಾಪ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಮಕ್ಕಳ ಬಳಿ ಇರುವದು ಸುಲಭವೂ ಅಲ್ಲ...ಎಲ್ಲರಿಗೂ ಮನಸ್ಸು ಇರುವದಿಲ್ಲ..ಹೀಗಾಗಿ ಅಜ್ಜ ಅಜ್ಜಿ ಇದ್ದರೂ ಮಕ್ಕಳಿಗೆ ಅವರ ಸಾಂಗತ್ಯ ಸಿಗುವದಿಲ್ಲ..ಭಾಷಾ ತೊಂದರೆ, ಯಾವಾಗಲಾದರೂ ಬರುವಿಕೆ,ವಿಚಾರ ಸಾಮ್ಯತೆ ಗಳ  ಅಂತರಗಳಿಂದಾಗಿ ಉಭಯತರಲ್ಲೂ ಅನ್ಯೋನ್ಯತೆಯ ಕೊರತೆಯ ಸಾಧ್ಯತೆ ಹೆಚ್ಚು...ಒಂದುವೇಳೆ ಹೇಗೋ ಹಿರಿಯರೂ ಹೊಂದಿಕೊಂಡರೆನ್ನಿ...,ಮಕ್ಕಳ ಲಕ್ಷ್ಯ ಸೆಳೆಯುವ ಹತ್ತಾರು gadgets ಗಳಿಂದಾಗಿ ಪಕ್ಕದಲ್ಲಿದ್ದರೂ ಮೈಲು ದೂರ...
              ಕೂಡಿಸುವ ಒಂದೇ ಒಂದು  ದಾರಿ  ಒಂದೆಡೆ... 
 ಬೇರ್ಪಡಿಸುವ ಹಲವಾರು ದಾರಿಗಳು ಇನ್ನೊಂದೆಡೆ..
   ‌‌‌‌             ಇದೆಲ್ಲವನ್ನೂ ಗೆದ್ದು  ಇಂದಿನ ಅವಕಾಶಗಳ ಜೊತೆ ಹಿಂದಿನ ಆಪ್ತತೆ ಬೆಸೆಯುವ ಕೆಲಸ ಹೇಗೆ? ಯಾರಿಂದ,? ಯಾವಾಗ ? ಎಂಬ ಯಕ್ಷಪ್ರಶ್ನೆಗಳಿಗೆ ಉತ್ತರಿಸಲು ಯುಧಿಷ್ಟಿರನೊಬ್ಬ  ಉದಯಿಸಿ ಬರಬೇಕೇನೋ..!!!

Thursday 1 April 2021

ಹಾಗೇ ಸುಮ್ಮನೇ...

ದೇವರಿದ್ದಾನೆ...

                    "ಒಂದು ದಿನ ದೇವರು,ಹಾಗೂ ಮನುಷ್ಯನ ಮುಖಾಮುಖಿಯಾಯಿತು..ಇಬ್ಬರ ಬಾಯಿಂದಲೂ ಉದ್ಗಾರ ಹೊರಟಿತು,
   "Oh!!!!! HERE IS MY  CREATOR"...
                  ಇದನ್ನು ಯಾರು ಮೊದಲು ಬರೆದರೋ ಗೊತ್ತಿಲ್ಲ...ಆದರೆ ಹೇಳಿಕೆ ಮಾತ್ರ ಹದಿನಾರಾಣೆ ಸತ್ಯ...ದೇವರು ಜಗನ್ನಿಯಾಮಕ, ಸೃಷ್ಟಿಕರ್ತ ,ಜಗನ್ನಾಥ ಅಂತ
ಏನೆಲ್ಲ ಹೇಳುವದರ ಹಿಂದೆ ನಮ್ಮ ಅಚಲ ವಿಶ್ವಾಸವಿದೆ..ಅಲುಗಾಡದ ನಂಬಿಕೆ ಇದೆ..ಇನ್ನು ಆ ದೇವರು ಯಾರು ಎಂಬುದು ಅವರವರಿಗೆ ಬಿಟ್ಟ ವಿಷಯ..ಕೆಲವರು ಗುರುದ್ವಾರ,ಮಂದಿರ,ಚರ್ಚು,ಮಸೀದಿಗಳಲ್ಲಿ ಅವನ ನೆಲೆ ಕಂಡರೆ ,ಇನ್ನು ಕೆಲವರು ಸತ್ಕರ್ಮ,ಸದ್ವಿಚಾರ,ಸದಾಚಾರ ಗಳ ನೆಲೆಯಲ್ಲಿ ದೈವತ್ವ ಕಾಣುವದು ಇದೆ...ದೇವರೆಂದರೆ positive energy..ಒಳ್ಳೆಯದು ಎಲ್ಲಿದೆಯೋ,ಅಲ್ಲೆಲ್ಲ ದೇವರಿದ್ದಾನೆ..ಸತ್ಯಂ,ಶಿವಂ,ಸುಂದರಂ ಅನ್ನುವದು ಅದಕ್ಕೇನೆ...ಸತ್ಯ,ದೇವರು, ಸುಂದರವಾದ,ಅನಂತವಾದ ಸೃಷ್ಟಿ ಎಲ್ಲವೂ ಭಗವಂತನ ಇನ್ನೊಂದು ರೂಪ..A thing of beauty is joy for ever - ಎಂಬುದು ತ್ರಿಕಾಲ ಸತ್ಯ...
                ನಮ್ಮದೊಂದು  ಹಳ್ಳಿ....ಪುಟ್ಟದೊಂದು ಜಗತ್ತು...ಅಲ್ಲಿ ಕೇಳಿ ಕಲಿಯುವದಕ್ಕಿಂತ ನೋಡಿ ಕಲಿಯುವದೇ ಬಹಳವಿತ್ತು..ದೇವರೆಂದರೆ ಏನು‌ ಎಂದು ಗೊತ್ತಾಗುವ ಮೊದಲೇ ಇತರರನ್ನು ನೋಡಿ ಗುಡಿಗೆ ಹೋಗುವದು,ಭಜನೆಗಳಲ್ಲಿ ಭಾಗವಹಿಸುವದು,ಸರತಿಯಲ್ಲಿ ನಿಂತು ತೀರ್ಥ,ಪ್ರಸಾದ ಸೇವಿಸುವದು ಮುಂತಾದವುಗಳನ್ನು ಮಾಡುತ್ತಿದ್ದರೂ ಏಕೆಂಬುದು ನಮಗೇ ಗೊತ್ತಿರಲಿಲ್ಲ...ಕ್ರಮೇಣ ಸ್ವಲ್ಪು ಸ್ವಲ್ಪು ಅರಿವಾಗತೊಡಗಿದಂತೆ ನಮ್ಮಲ್ಲೇ ಪ್ರಶ್ನೆಗಳು ಏಳತೊಡಗಿದವು..ಇನ್ನೂ ದೊಡ್ಡವರಾದಂತೆ ಯಾರನ್ನು ಮಾದರಿ ಎಂದುಕೊಂಡಿದ್ದೆವೋ ಅಂಥವರ ಮಾತು,ಕೃತಿಗಳ ನಡುವಿನ ಅಂತರ ನಮಗೇ ದಿಗಿಲು , ಅಪನಂಬಿಕೆ ಹುಟ್ಟಿಸುತ್ತಿತ್ತು..ದೇವರ ಹೆಸರಿನಲ್ಲಿ ನಡೆವ ರಾಜಕೀಯ,ಧಾರ್ಮಿಕ ಸಂಘರ್ಷಗಳ ಅತಿರೇಕ,ದೇವರದೇ ಮೂರ್ತಿಗಳ ,ಆಭರಣಗಳ ಕಳವಿನ ಪ್ರಕರಣಗಳು , ದೇವಾಲಯದ ಆಸ್ತಿ ಕಲಹಗಳು,ಕೊಲೆಗಳು, ಪ್ರಸಾದದಲ್ಲಿ ವಿಷ ಸೇರಿಸುವದು,ಇಂಥ ಪ್ರಕರಣಗಳನ್ನು ಓದಿ,ಕೇಳಿ,ನೋಡಿ ಅನುಭವಿಸಿದಾಗ  ನಂಬಿಕೆಯ ಮರ ಬುಡಕಡಿದು ಬಿತ್ತು...ಎಲ್ಲರೂ ಹಾಗೇ ಇರುವದಿಲ್ಲ...ಸಾತ್ವಿಕ ಹಾಗೂ ಧಾರ್ಮಿಕ ಜೀವಿಗಳೂ ಇಂಥ ಸಂದರ್ಭದಲ್ಲಿ ಬಲಿಪಶುವಾಗಿದ್ದಾರೆ..ಆಗುತ್ತಿದ್ದಾರೆ...ಆದರೆ  ಅಂಥವರೇ ಇವರಂಥವರ ಮಧ್ಯೆ  ನಮಗೆ ದಾರಿ ದೀಪವೂ ಆಗಿದ್ದಾರೆ...ಆದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವಂಥ "ಭಗವಾನ" ರು ಇರುವವರೆಗೆ ಭಯ,ಅವಿಶ್ವಾಸ,ಆತಂಕಗಳಿಗೇನೂ ಬರವಿಲ್ಲ...
"ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ...ದೇಗುಲದಿ ಕೂಡಿದನು ವೈದಿಕನು ಅವನ.." ಎಂಬಂಥ ಕವಿತೆಗಳ ಹುಟ್ಟಿಗೂ ಕಾರಣವಾಗುವದನ್ನು  ತಪ್ಪಿಸುವಂತೆಯೇ ಇಲ್ಲ...
            ‌‌ಅಂತಿಮವಾಗಿ ನನಗನನಿಸಿದ್ದು_
ದೇವರು ಒಂದು ಶಕ್ತಿ,ಒಂದು ಭಕ್ತಿ,ಒಂದು ಏಕಾಂತ..ಒಂದು ಸಂಕೇತ...ದೇವರು  ಅವರವರ ಭಾವಕ್ಕೆ...ಅವರವರ ಭಕುತಿಗೆ...ಎಲ್ಲಿ ಒಳ್ಳೆಯದಿದೆಯೋ ಅಲ್ಲಿ ಖಂಡಿತ ದೇವರಿದ್ದಾನೆ...ನಮ್ಮ  ಆತ್ಮೀಯರೊಬ್ಬರ ವಿಷಯವನ್ನಿಲ್ಲಿ ಬರೆಯಲೇಬೇಕು...ಅವರ ಮಟ್ಟಿಗೆ ಸಾತ್ವಿಕವಾದುದು,ಒಳ್ಳೆಯದು,ಆನಂದ ನೀಡುವ ಪ್ರತಿಯೊಂದೂ ದೇವರೇ...ದೇವರ ಸಾನಿಧ್ಯವೇ..." ನನಗೆ ದೇವರೆಂದರೆ ಬೇರೆಯೇ.ಆದರೆ ಯಾವುದಾದರೂ ಸಜ್ಜನೊಬ್ಬರು ಪೂಜೆ,ಆರಾಧನೆಗೆ ನನ್ನನ್ನು ಆಮಂತ್ರಿಸಿದರೆ ಅವರು ಹೇಳಿದ ಹಾಗೆ ಕೇಳಿ ,ಅವರು ಬಯಸಿದಂತೆ ಇದ್ದು ಅವರ ಮುಖದ ಮೇಲೊಂದು ಕಿರುನಗೆ ಮೂಡಿಸಲು ನಾನು ಸಿದ್ಧನಿದ್ದೇನೆ...ನನ್ನದೊಂದು ಚಿಕ್ಕ ಕಾರ್ಯದಿಂದ ಬೇರೊಬ್ಬರಿಗೆ ಸಂತಸ ಸಿಗುವಂತಾದರೆ  ನಾನದಕ್ಕೆ ಸದಾ ರೆಡಿ".. ಇದೂ ಒಂದು ದೈವತ್ವ...'ದೇವ ಮಾನವ' ರೆನ್ನುವದು ಇಂಥವರಿಗೇ...
ಅಂತೆಯೇ ನಾವು ದೇವರನ್ನು ಕಾಣಬಹುದಾದ ಇನ್ನಿತರ ತಾಣಗಳೆಂದರೆ,_

ಏನೂ ಅರಿಯದ ಹಸುಗೂಸಿನಲ್ಲಿ,..
ಒಂದು ಉದಾತ್ತ ಭಾವದಲ್ಲಿ,..
ಒಂದು ಸಹಾಯ ಹಸ್ತದಲ್ಲಿ,..
ಅನುಕಂಪ,ಸಹಾನು ಭೂತಿಗಳಲ್ಲಿ,..
ಅಳುವವರಿಗೆ ಹೆಗಲು ಕೊಟ್ಟವರಲ್ಲಿ..
ಇತರರ ಅಳಲಿಗೆ ಕಿವಿಯಾಗುವವರಲ್ಲಿ..
ಅಸಹಾಯಕರ ಊರುಗೋಲಾಗುವದರಲ್ಲಿ..
ಅಶಕ್ತರ ಕಣ್ಣೊರೆಸುವಲ್ಲಿ...

 ದೇವರಿದ್ದಾನೆ...

ಎಲ್ಲ ಕಡೆಯಲ್ಲೂ...
ಎಲ್ಲ ಕಾಲಕ್ಕೂ..
ಎಲ್ಲರಿಗೂ..

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...