Friday, 16 April 2021

ಅಡಿ ಜಾರಿ ಬೀಳುವುದು...
ತಡವಿಕೊಂಡೇಳುವುದು...

       ‌‌‌          I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ  ಒಂದು ಆರೋಗ್ಯದ ತಕರಾರಿದೆ.  Irritable  Bowel
syndrome_ ಅದರ ಪೂರ್ಣ ಹೆಸರು... ಅತಿ ಹೆಚ್ಚು ಪ್ರೋಟೀನಯುಕ್ತ ಆಹಾರ, ಅತಿ ಮಸಾಲೆ, ಕರಿದ ಪದಾರ್ಥಗಳು, ಹೈನು/ ಮೈದಾದಂಥ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು  ಹೊಟ್ಟೆ  ಮಾನ್ಯ ಮಾಡುವದಿಲ್ಲ. ಅದು ಅತಿ ಗಂಭೀರ  ಆರೋಗ್ಯ ತಕರಾರೇನೂ ಅಲ್ಲ . ಆದರೆ ಗ್ಯಾಸ್, ಹೊಟ್ಟೆಯುಬ್ಬರ, ಮಲಬದ್ಧತೆ ಯಂಥ ಕಿರಿಕಿರಿ ಹೆಚ್ಚು ಮಾಡುತ್ತದೆ. ಹೀಗಾಗಿ ಅದನ್ನು  ಅಲಕ್ಷಿಸುವ, ಅಮಾನ್ಯ ಮಾಡುವ ಧೈರ್ಯ ಬರುವ ಪ್ರಮೇಯವೇಯಿಲ್ಲ.
ಹಾಗೇನಾದರೂ ಮಾಡಿದಿರೋ ಎರಡೇ ದಿನಗಳಲ್ಲಿ ಮಂಡೆಯೂರಿಸಿ ಕಿವಿ ಹಿಡಿಸಿ ಬಿಡುತ್ತದೆ...ಮುಂದೆ ಅದನ್ನು ಎಚ್ಚರತಪ್ಪಿಯೂ ಮರೆಯುವ ಹಾಗೇಯಿಲ್ಲ...
                           ನನಗೂ ಇತ್ತೀಚೆಗೆ I.B.S problem,  but  here  'B 'stands for  BRAIN...not  IRRITABLE  BOWEL...but irritable brain syndrome.  ಹಹಹ! ಗಾಬರಿ ಬೇಡ, ಅತಿ  ಹೆಚ್ಚು  ಸಾರವಿದ್ದು , ಗಂಭೀರ ವಿಷಯಗಳುಳ್ಳ ಲೇಖನಗಳು , ಪುಸ್ತಕಗಳು  ತಲೆಯೊಳಗೆ ಹೋಗಲು strike ಮಾಡುತ್ತಿವೆ. ಒತ್ತಾಯಿಸಿ ಒಳಹಾಕ ಹೋದರೆ ತಲೆ ನೋವು ಶುರುವಾಗುತ್ತದೆ,  ಇಲ್ಲವೇ ಕಣ್ಣುಗಳು ಓದುತ್ತವೆ- ಬುದ್ಧಿ  ಗ್ರಹಿಸುವದೇಯಿಲ್ಲ.
ಇಂಥ ಆಗ್ರಹದೋದು ಖುಶಿ ತರುವದರ ಬದಲು ಕಿರಿಕಿರಿ  ಎನಿಸಲು ಸುರುವಾಗುತ್ತದೆ.  ಓದಬೇಕೆಂದು ಆಶೆಯಿಂದ ಖರೀದಿಸಿದ ಪುಸ್ತಕರಾಶಿ ದಿನಾಲೂ  ಅಣಕಿಸುತ್ತದೆ. " ನಿನ್ನ ಯೋಗ್ಯತೆ ಗೊತ್ತಾಯಿತೇ" ಎಂದು ಛೇಡಿಸತೊಡಗುತ್ತವೆ,  ತಲೆದಿಂಬಿನ ಹತ್ತಿರದ ಪುಸ್ತಕ  ಒತ್ತತೊಡಗುತ್ತದೆ.
ಇದು ತಾತ್ಕಾಲಿಕವಾಗಿರಬಹುದು ಎಂದುಕೊಂಡು ಸಮಾಧಾನ  ಮಾಡಿಕೊಳ್ಳುತ್ತಿದ್ದೇನೆ. ಕೆಲವರಂತೂ  ಇತ್ತೀಚೆಗೆ   ತಮಗೂ ಹಾಗೇ ಆಗುತ್ತದೆ ಎಂದು ನನ್ನೊಂದಿಗೆ ಸ್ವರ ಜೋಡಿಸಿದಾಗ ಮನಸ್ಸಿಗೆ ಅದೇನೋ ಕೊಂಚ ಸಮಾಧಾನ. ಸಮಸ್ಯೆಗೆ ಪರಿಹಾರ ವಿರಬಹುದೆಂಬುದೊಂದು ದೂರದ ಆಶೆ. ದಿನಕ್ಕೊಂದು ಪುಸ್ತಕ ಜಿದ್ದಿಗೆ ಬಿದ್ದು ಓದಿದವಳು ನಾನು. ಈಗೀಗ ಒಂದು ವಾರವಾದರೂ ಅರ್ಧಮುಗಿಯುವದಿಲ್ಲ.
ಒಮ್ಮೆ ಹೆಚ್ಚುತ್ತಿರುವ ವಯಸ್ಸನ್ನು ಬಯ್ದು ಕೊಂಡರೆ, ಮತ್ತೊಮ್ಮೆ ಇತ್ತೀಚೆಗಿನ fb ಯು ಮುಗಿಯಲಾರದ ಗೀಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತೇನೆ.

             ಕೋವಿಡ್ನಿಂದಾಗಿ ಕಣ್ಣುಪೊರೆಯ operation ಬಹುಕಾಲ ಮಾಡಿಸಲಾಗದೇ ಅನಿವಾರ್ಯವಾಗಿ ಓದುವುದು ನಿಂತಿದ್ದರಿಂದ ಆದ ಆಲಸ್ಯದ ಪರಿಣಾಮವೇ ಗೊತ್ತಾಗುತ್ತಿಲ್ಲ.‌ ಯಾವುದೇ ಕಾರಣದಿಂದ ಓದಿಗೆ ಹಿನ್ನಡೆಯಾಗಿರಬಹುದು ಎಂದುಕೊಂಡರೂ ನನ್ನ ಅತಿ ಮೆಚ್ಚಿನ ಹವ್ಯಾಸವೊಂದು  ನನಗೆ ಹೀಗೆ ಕೈಕೊಡುತ್ತಿರುವದು ಸಹಿಸಲಾಗುತ್ತಿಲ್ಲ..
 ಅಷ್ಟು ಸುಲಭವಾಗಿ ನಾನಾದರೂ ಸೋಲೊಪ್ಪಿಕೊಳ್ಳುವದಾದರೂ ಹೇಗೇ?? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಬೆಂಗಳೂರಿನಲ್ಲಿ ಹೀಗೆ ಕಾಲಾಡಿಸಿಕೊಂಡು , ಕೆಲವರಿಗೆ Hi, Bye  ಹೇಳಿ ಅರ್ಧಗಂಟೆ ಕಳೆಯುವ ಮಾರ್ಗಗಳಿಲ್ಲ...ಪಕ್ಕದವರದೇ ಒಂದೊಂದು ವಾರ ಕಳೆದರೂ ಮುಖ ದರ್ಶನವಾಗುವ ಮಾತಿಲ್ಲ. ಈಗಂತೂ  ಕೋವಿಡ್ ನ ಎರಡನೇ ಅಲೆ ಸುರುವಾಗಿ ಸುದ್ದಿಗಳೂ ಗುಂಪಿನ WhatsApp ಮೂಲಕ ತಲುಪಬೇಕಾದ ಅನಿವಾರ್ಯತೆ. ಮನೆಯಲ್ಲಿ ನನ್ನಂತೆ ಒಬ್ಬರಾದರೂ ಲಭ್ಯವಿದ್ದರೆ ಆಗಾಗ ಫೋನ್ ಮಾಡಬಹುದಾದ ಮಹತ್ ಅವಕಾಶವಾದರೂ ಸಿಗುವದುಂಟು. ಇಲ್ಲದಿದ್ದರೆ  ಅದೂ ಇಲ್ಲದಾಗಿ ಬಹಳಷ್ಟು ಜನ TV ಮೊರೆಹೋಗುತ್ತಾರೆ...ನನಗದು
ಇತ್ತೀಚೆಗೆ  ತೀವ್ರ ಅಲರ್ಜಿ...ಕಥೆಯ ಗುಂಗು ಹಿಡಿಸಿಕೊಂಡು, ನೋಡಲು ಸಿಗದಾಗ ಏನೋ ಕಳೆದುಕೊಂಡಂತೆ  ವ್ಯಥೆ ಹಚ್ಚಿಕೊಂಡು ವರ್ಷಗಟ್ಟಲೇ ಮರುಗುವ ಜಾಯಮಾನ ನನ್ನದಲ್ಲ...ಅಲ್ಲದೇ ಎಲ್ರೂ ಒಟ್ಟಾಗಿ ಕೂತು ಟೀವಿ ನೋಡುತ್ತಿದ್ದ ಆ ಕಾಲ ಎಂದೋ ಇಲ್ಲದಾಗಿದೆ. ಹೀಗಾಗಿ ಆ ದಾರಿಯೂ ನನಗೆ ಬಂದ್...

 My never failing friends are they, With whom I converse day by day...

         _ ಎಂಬಂತೆ  ಓದು/ ಪುಸ್ತಕಗಳೇ  ನನ್ನ all time favourite ಆಗಿದ್ದು, ಆ ಹವ್ಯಾಸ  ಈಗ ನನ್ನ ಚಾಳಿ ಠೂ ಬಿಡಲು ಹೊಂಚು ಹಾಕುತ್ತಿದೆ. ಅಷ್ಟು ಸುಲಭವಾಗಿ ಕೈ ಚಲ್ಲಲು ಪುಸ್ತಕಗಳೇನು ಚುನಾವಣೆಯ ರಾಜಕೀಯ ವಿದ್ಯಮಾನಗಳನ್ನೊಳಗೊಂಡ ಕಲಸು ಮೇಲೋಗರದ ಪತ್ರಿಕೆಗಳೇ?

       ‌‌‌        ಕೆಲಕಾಲ ನನ್ನನ್ನು ಸೋಲಿಸಿದ  ಭ್ರಮೆಯ  ಸುಖವನ್ನು ಮನಸ್ಸೂ  ಒಂದಿಷ್ಟು  ಅನುಭವಿಸಲಿ...ನಾನೂ ನೋಡುತ್ತೇನೆ...ಎಷ್ಟು ದಿನ ಹೂಂಕರಿಸೀತು ಈ IBS_ Irritable  Brain Syndrome...( ನಾನೇ  ಕೊಟ್ಟ ಹೆಸರು, ಮೆದುಳಿನ ಆಲಸ್ಯ ರೋಗ)...ಹ..ಹ..ಹ.

ದುಡುಕಿ ಮತಿ ತಪ್ಪುವುದು,
ತಪ್ಪನೊಪ್ಪೆನ್ನುವದು
ಬದುಕೆಂದರಿದು ತಾನೇ??? 

ಎಂದು ಡಿವಿಜಿಯವರೇ ' ಕಗ್ಗದಲ್ಲಿ'
ಹೇಳಿಲ್ಲವೇ? ಅಂದ ಮೇಲೆ ನಮ್ಮದೇನು ಹೆಚ್ಚುಗಾರಿಕೆ?

No comments:

Post a Comment

Smt. Veena Nayak  Flat no 402, 4th floor  Presidency Crown Court Apts, C.G.Kamath Road, Karagalapady, Mangalore 575003 Mobile: 7760774037