Saturday 27 October 2018

( Thanks Radha Kulkarni for sending this beautiful GAZAL of Gulzar Saheb for TRANS- CREATION...)

ಎಲೆ,ಬದುಕೆ...
ಸ್ವಲ್ಪ ನಿಧಾನ...
ಇರಲಿ ಕೊಂಚ ವ್ಯವಧಾನ...

ಇನ್ನೂ ಎಷ್ಟೋ
ಋಣಸಂದಾಯ ಮಾಡಬೇಕಿದೆ...
ನೋವುಗಳ ನಿವಾರಿಸಬೇಕಿದೆ...
ಕೆಲಸಗಳ ಮಾಡಿ ಮುಗಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿ ಕೊಂಚ ವ್ಯವಧಾನ..

ಎಷ್ಟೋಜನ  ಮುನಿದಿದ್ದಾರೆ...
ಕೆಲವರು ಹಿಂದೆ ಉಳಿದಿದ್ದಾರೆ...
ಮುನಿದವರ ಮನವೊಲಿಸಬೇಕು..
ಅಳುವವರ  ಮನ ಅರಳಿಸಬೇಕು..
ಸ್ವಲ್ಪು ನಿಧಾನ....
ಇರಲಿ ಕೊಂಚ ವ್ಯವಧಾನ..

ಎಷ್ಟೋ ಸಂಬಂಧಗಳು
ಬೆಳೆಯುತ್ತ ಮುರಿದಿವೆ...
ಮತ್ತೆಷ್ಟೋ ಬೆಳೆವಾಗಲೇ ಮುಗಿದಿವೆ...
ಅಳಿದುಳಿದವುಗಳ
ಉಳಿಸಿಕೊಳ್ಳಬೇಕು...
ಸ್ವಲ್ಪು ನಿಧಾನ....
ಇರಲಿ ಕೊಂಚ ವ್ಯವಧಾನ.....

ಎಷ್ಟೋ ..
ಕನಸುಗಳಿನ್ನೂ ಉಳಿದಿವೆ..
ಕೆಲ ಮನದಾಸೆಗಳು ಫಲಿಸಬೇಕಿವೆ..
ಬದುಕಿನ ಗೋಜಲುಗಳ
ಬಿಡಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿಕೊಂಚ ವ್ಯವಧಾನ...

ಉಸಿರು ನಿಲ್ಲುವ ವೇಳೆ
ಕಳೆದು ಕೊಳ್ಳುವದೇನು??
ಉಳಿಸಿ ಕೊಳ್ಳುವದೇನು??
ಹಟಮಾರಿ ಮನಸಿಗೆ
ಅರಿವಾಗಿಸಬೇಕಿದೆ...
ಸ್ವಲ್ಪು ನಿಧಾನ...
ಇರಲಿ ಕೊಂಚ ವ್ಯವಧಾನ..

Friday 26 October 2018

ಸಾವು....

ದೇಶ ನೋಡದಿದ್ದರೆ...
ಕೋಶ ಓದದಿದ್ದರೆ...
ಬದುಕಿನ ಬದಲಾಗುವ ಬಣ್ಣಗಳ
ಅರಿಯದಿದ್ದರೆ...
ನಮ್ಮನ್ನೇ ನಾವು ಪ್ರೀತಿಸದಿದ್ದರೆ...
ನಿಧಾನವಾಗಿ..
ಇಂಚಿಂಚು
ಸಾಯುತ್ತೇವೆ...

ನಮ್ಮ ಬಗ್ಗೆ ನಮಗೇ
ಗೌರವವಿರದಿದ್ದರೆ....
ಇತರರ ಹಂಗೇ ಬೇಡೆಂದು
ಕೊಡವಿಕೊಂಡರೆ....
ನಮ್ಮ ಚಟಗಳಿಗೆ ನಾವೇ
ದಾಸರಾದರೇ...
ನಡೆದ ದಾರಿಯನ್ನೇ
ನಡೆಯುತ್ತಿದ್ದರೆ...
ಬದುಕನ್ನು ಬದಲಾವಣೆಗೆ
ಒಡ್ಡದಿದ್ದರೆ...
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ....

ಬದುಕಿನ ತಿರುವುಗಳ
ಒಪ್ಪದಿದ್ದರೆ...
ಅಪರಿಚಿತರೊಡನೆ
ಬೆರೆಯದಿದ್ದರೆ...
ಹುಚ್ಚೊಂದ ತಗಲಿಸಿಕೊಳ್ಳದಿದ್ದರೆ...
ಸುನಾಮಿಯ ಸುಳಿಯ
ಎದುರಿಸದಿದ್ದರೆ...
ಆಹ್ವಾನಗಳು ಕಂಗಳಿಗೆ
ಹೊಳಪು ತರದಿದ್ದರೆ...
ಹೃದಯದ ಬಡಿತಗಳ
ತೇಜಗೊಳಿಸದಿದ್ದರೆ...
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ...

ಬೇಡವೆನಿಸಿದ್ದು
ಬಿಡದಿದ್ದರೆ..
ಸಲ್ಲದ ಪ್ರೀತಿ
ಮರೆಯದಿದ್ದರೆ...
ಪರಿಸರ,ಪರಸ್ಥಿತಿಗೆ ಬದ್ಧತೆ
ತೋರದಿದ್ದರೆ....
ಕಂಡ ಕನಸು
ಕಾಡದಿದ್ದರೆ
ನಿಧಾನವಾಗಿ
ಇಂಚಿಂಚು
ಸಾಯುತ್ತೇವೆ...

( Pablo Neruda- ಅವರ English ಕವನದ Trans- creation)

Thursday 25 October 2018

ಹಾಗೇ ಸುಮ್ಮನೇ...

ಸಂ- ಸ್ಖಾರ...

                 ಈಗೊಂದು ವಾರದ ಹಿಂದೆ ಒಂದು ಮನೆಯ ಗ್ರಹಪ್ರವೇಶಕ್ಕೆ ಹೋಗಿದ್ದೆ.ಊಟಕ್ಕೆ ಕುಳಿತಾಗ ಎದುರುಗಡೆ ಸಾಲಿನಲ್ಲಿ ಒಂದು ಗುಂಪು ಕುಳಿತಿತ್ತು.ಬಹುಶಃ ಅತಿಥೇಯರ ಕಡೆಯವರಿರಬೇಕು- ಅವರೆಲ್ಲರ ವಿಶೇಷ ಕಾಳಜಿಗಾಗಿ ಒಬ್ಬ ಮಹಾಶಯ ಅತ್ತಿಂದಿತ್ತ ಓಡಾಡಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ...ಅತಿಥೇಯನೊಬ್ಬನ ಆದರ್ಶಮಾದರಿಯಾಗಿ ಕಂಡು  ನನಗೆ ತುಂಬಾನೇ ಖುಶಿಯಾಗಿಹೋಯಿತು...

                ಸ್ವಲ್ಪ ಹೊತ್ತಿನಲ್ಲಿಯೇ
‌‌‌‌ಪದಾರ್ಥಗಳನ್ನು ಬಡಿಸತೊಡಗಿದರು...ಕುಳಿತವರು ಹಸಿವೆಗೋ,ಸುಮ್ಮನೇಕೂಡಲಾರದ್ದಕ್ಕೋ,ಅಥವಾ ಅವರವರ ಅಭ್ಯಾಸವೋ ಬಡಿಸಿದಂತೆ ತಮಗೆ ಬೇಕಾದುದನ್ನು ತಿನ್ನಲಾರಂಭಿಸಿದರು....ಅತಿಥೇಯ ಮಹಾಶಯನೂ ತನ್ನ ಆಪ್ತ(?) ಸ್ನೇಹಿತರ ಎಲೆಗಳಿಂದ ಅದು- ಇದನ್ನು ಅಷ್ಟಿಷ್ಟು ಬಾಯಿಗೆಸೆದುಕೊಳ್ಳಲು ಪ್ರಾರಂಭಿಸಿದ...ಅದೂ ಅಷ್ಟೇನೂ ಆಕ್ಷೇಪಣೀಯವೆನಿಸದೇ ನೋಡುತ್ತಲೇ ಇದ್ದೆ.ಅಥವಾ ನನಗೆ ನೇರವಾಗಿ ಆ ಸಾಲು ಇದ್ದು ತಾನಾಗೇ ಕಾಣಿಸುತ್ತಲೇ ಇತ್ತು..

                     ಮುಂದಿನದು ಮಾತ್ರ ನಾನೆಂದೂ ಕಂಡು,ನೋಡಿ,ಕೇಳದ ಮಾತು...ಆ ಮಹಾಶಯ ಎಲ್ಲರ ಎಲೆಯಲ್ಲಿ ಬೇಕಾದ್ದನ್ನು ಹಾಕಿಸಿಕೊಂಡು ತಾನೇ ಕಲಿಸಿ ಎಲೆಯ ಮುಂದುಗಡೆಯಿಂದ ಆ ಎಲೆಯ ಒಡೆಯನೊಡನೆ ಸಹ ಭೋಜನ ಶುರು ಮಾಡಿದ...ಒಬ್ಬನೊಡನಾದರೆ ಓ.ಕೆ...ಪ್ರಾಣಸ್ನೇಹಿತರಿರಬಹುದು  ..ಅಂಥವರಿಗೆ ಎಂಜಲು ಏನು ಲೆಕ್ಕ ಅನಬಹುದು....

            ‌ಆದರೆ ಅವನು ಮಾಡುತ್ತಿದ್ದುದೇ ಬೇರೆ..ಒಂದು ಎಲೆಯಿಂದ ಅನ್ನ, ಇನ್ನೊಬ್ಬನೆಲೆಯಿಂದ ಪಲ್ಯ,ಮತ್ತೊಬ್ಬ ನಿಂದ ಮತ್ತೇನೋ ತೆಗೆದುಕೊಂಡು ಎಲ್ಲರ ಎಲೆಗಳನ್ನೂ ಕಲಸು ಮೇಲೋಗರ ಮಾಡಿ ಅವರೇನಂದುಕೊಂಡಾರು ಎಂಬುದನ್ನು ಲೆಕ್ಕಿಸದೇ ಇಡೀ ಸಾಲನ್ನೇ ಆವರಸಿಕೊಂಡಾಗ ಮಾತ್ರ ನನ್ನ ಊಟ ನನಗೇ ಜಿಗುಪ್ಸೆ ಅನಿಸಲು ಸುರುವಿಟ್ಟುಕೊಂಡಿತು..

       ‌‌‌‌‌            ವೈಯಕ್ತಿಕ  ಸ್ವಾತಂತ್ರ್ಯ ಗಮನದಲ್ಲಿಟ್ಟು ನೋಡಿದರೆ ಇದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ...ಆಕ್ಷೇಪಿಸ ಬೇಕಾದವಳೂ ನಾನಲ್ಲ.ಹಾಗೆ ಮಾಡಿದರೆ ನನ್ನದೇ ತಪ್ಪು..
ಆದರೆ ಸಾಮೂಹಿಕವಾಗಿ ಒಬ್ಬ ವ್ಯಕ್ತಿಯ ನಡವಳಿಕೆಯ ಪ್ರಶ್ನೆ ಬಂದಾಗ ಇದು ಸರಿ ಅಲ್ಲ...ನಾನು ಅವನ ಸ್ನೇಹಿತರನ್ನು ಗಮನಿಸುತ್ತಿದ್ದೆ.ಮೊದಲಸಲ ತೆಗೆದುಕೊಂಡಾಗ ಖುಶಿಯಿಂದ ಇದ್ದ ಅವರು ನಂತರ ಕಿರಿಕಿರಿ ಅನುಭವಿಸುವರಂತೆ ಕಾಣತೊಡಗಿದರು..ಕೆಲವೊಬ್ಬರು ಅವನು ಕೈ ಹಾಕಿದ ಪದಾರ್ಥ ಬಿಟ್ಟು ಉಳಿದುದು ತಿಂದರೆ  ಒಬ್ಬಿಬ್ಬರು ಏನೂ ಮಾಡಲು ತಿಳಿಯದೇ ಅತ್ತಿತ್ತ ನೋಡತೊಡಗಿದರು..ಒಬ್ಬರಂತೂ ಹಿಂದೆ ಆತು ಕುಳಿತು ಎಲೆಯೇ ತನ್ನದಲ್ಲ ಎಂಬಂತೆ ನೋಡುತ್ತಿದ್ದರು....

                    ನನಗಿನ್ನೂ ಗೊಂದಲ....ಈ ರೂಢಿ ಈಗೀಗ fashion ಏನಾದರೂ ಆಗಿದೆಯಾ?ಎಂಜಲದ ಮಾತು ಬಿಟ್ಟು ಬಿಡೋಣ..ಆರೋಗ್ಯದ ದೃಷ್ಟಿಯಿಂದಲಾದರೂ ಅದು ಓಕೆನಾ? ಒಬ್ಬರ ಎಲೆಯಿಂದ ತಿಂದು ಬೆರಳುಗಳನ್ನು ಚನ್ನಾಗಿ ಚೀಪಿ ಇನ್ನೊಬ್ಬರ ಎಲೆಯ ಪದಾರ್ಥ ಮುಟ್ಟುವದು ಅಸಹ್ಯವಲ್ವಾ? ಇಷ್ಟು' mean and cheap' ಆಗಿ ವಿಚಾರಮಾಡುವ ನಾನು old model ಆಗಿ expiry date ಗೆ ಹತ್ತಿರದವಳಾ? ತಮ್ಮ ಜೊತೆ ತಾವು ಗೆಳೆಯರಷ್ಟೇ ಅಲ್ಲದೇ ಇತರ ಹಿರಿ ಕಿರಿಯರೂ ಕುಳಿತಿರುವಾಗ ಸಾಮೂಹಿಕ ನಡವಳಿಕೆ ಅಪೇಕ್ಷಿಸಲಾರದ ಹಂತಕ್ಕೆ ನಾವು ಹೋಗುತ್ತಿದ್ದೇವಾ? ಸರಿ,ತಪ್ಪು ತಿಳಿಸಬೇಕೆಂದರೆ ಹೇಗೆ? ಅಥವಾ ಏನಾದರೂ ಹೇಳಲೆಣಿಸುವದು
ವೈಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸಿದಂತಾಗುತ್ತದಾ?

    ‌          ಹತ್ತಾರು ಪ್ರಶ್ನೆಗಳು....ಉತ್ತರದ ಹಾದಿ ಬಹು ದೂರದಲ್ಲೂ ಕಾಣಿಸುತ್ತಿಲ್ಲ....

Tuesday 23 October 2018

ವಾಸ್ತು

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ಮನಸಾರೆ ನಗಲೆರಡು
ಮೂಲೆಗಳು ಇರಲಿ...

ಸೂರ್ಯನೆಲ್ಲೇ ಇರಲಿ
ಸೂರ್ಯ ರಶ್ಮಿಗಳ್ಹರಡಿ
ಮನೆಯ ಅಂಗಳಕೊಂದು
ಶೋಭೆ ತಂದಿರಲಿ..

ಮುದ್ದು ಮಕ್ಕಳು ಸೇರಿ
ಗೆದ್ದ ಭಾವದಲಿ ಸದಾ
ಬಿದ್ದೆದ್ದು ಆಡಲು
ಬಿಡಿ- ಅಂಗಳೊಂದಿರಲಿ..

ಪುಟ್ಟುಟ್ಟ ದೋಣಿಗಳು
ಬೀಳುತೇಳುತ ಸಾಗಿ
ನಲಿವ ಹುಟ್ಟಿಸುವಂಥ
ಮಳೆ ಝರಿಗಳಿರಲಿ....

ನಡುನಡುವೆ ಮೇಲೇರಿ
ಮಿನುಗುತಿಹ ತಾರೆಗಳ
ಲೆಕ್ಕ ಗುಣಿಸಲು ಒಂದು
ಮಾಳಿಗೆಯು ಇರಲಿ...

ಬಾನಿನುದ್ದಗಲಕ್ಕೂ
ಹಾರಾಡಿ ಹಿಡಿಕಾಳು
ಹೆಕ್ಕಿ ಗುಟುಗಿಕ್ಕಲು
' ಮರಗೂಡೊಂದು' ಇರಲಿ...

ಮುಂಜಾನೆ ಮುಗುಳ್ನಗೆಗೆ
ಸ್ನೇಹದಾಲಿಂಗನಕೆ
ಹೊರೆಯಾಗದಂತೆರಡು
ನೆರೆ- ಹೊರೆಗಳಿರಲಿ...

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ನಲಿಯುವಾ ಗಳಿಗೆಗಳ
ಬರವು ಬರದಿರಲಿ...

( ಗೆಳತಿ ಮೀರಾ ಕುಲಕರ್ಣಿ ಕಳಿಸಿದ ಹಿಂದಿ ಕವನದ ಭಾವಾನುವಾದ- Thank you Meera)

Saturday 20 October 2018

ಹಾಗೇ ಸುಮ್ಮನೇ...

ಮೈಕೆಲ್ ಜಾಕ್ಸನ್ ಗೆ ನೂರೈವತ್ತು ವರ್ಷ ಬದುಕಬೇಕೆಂಬ ಅಭಿಲಾಷೆಯಿತ್ತು.ಯಾರದಾದರೂ ಕೈಕುಲುಕುವಾಗ ಕೈಗವುಸು ಧರಿಸುತ್ತಿದ್ದ.ಜನರ ಮಧ್ಯ ಹೋಗುವಾಗ ಮುಖವನ್ನು ಮಾಸ್ಕದಿಂದ ಮುಚ್ಚಿಕೊಳ್ಳುತ್ತಿದ್ದ. ಪ್ರತಿದಿನದ ಆರೋಗ್ಯ ತಪಾಸಣೆಗೆ ಹನ್ನೆರಡು ಜನರ ವೈದ್ಯರ ತಂಡದ ನಿಯುಕ್ತಿಯಾಗಿತ್ತು.ತಲೆಯ ಕೂದಲಿನಿಂದ ಹಿಡಿದು ಕಾಲಿನ ಉಗುರುಗಳ ತಪಾಸಣೆ ಪ್ರತಿದಿನ ಆಗಲೇಬೇಕಿತ್ತು....ಅವನುಣ್ಣುವ ಆಹಾರವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದ ನಂತರವೇ ಅವನಿಗೆ ಕೊಡಲಾಗುತ್ತಿತ್ತು..ನಿತ್ಯದ ವ್ಯಾಯಾಮ ತರಬೇತಿಗೆ ಹದಿನೈದು ಜನರ team ಸದಾ ಸಿದ್ಧವಿರುತ್ತಿತ್ತು.. ಮೂಲವಾಗಿ ಕರಿಜನಾಂಗಕ್ಕೆ ಸೇರಿದ Jackson ಚರ್ಮದ plastic surgery ಯಿಂದ ಬಿಳಿಯನಾಗಿದ್ದ.oxygen ನ ಹಾಸಿಗೆಯ ಮೇಲೆಯೇ ಮಲಗುತ್ತಿದ್ದ.ಆಪತ್ಕಾಲದಲ್ಲಿ ಬೇಕಾದರೆ ಎಂದು ಕಿಡ್ನಿ,ಹೃದಯ,ಮುಂತಾದ ಅಂಗಾಂಗ ದಾನಮಾಡುವವರನ್ನೂ ಸಿದ್ಧಮಾಡಿಟ್ಟುಕೊಂಡಿದ್ದ.2009ದಲ್ಲಿ ಜೂನ್೨೫ ರಂದು ಹೃದಯಬಡಿತದಲ್ಲಿ ಇಳಿಕೆ ಪ್ರಾರಂಭವಾದಾಗ ಹನ್ನೆರಡು ಜನ ವೈದ್ಯತಂಡಕ್ಕೂ ಏನೂ ಮಾಡಲಾಗಲಿಲ್ಲ.ನೂರೈವತ್ತು ವರ್ಷ ಇರಬೇಕೆಂಬ ಅವನಾಸೆ ಅವನ ಜೊತೆಗೆ ಅಕಾಲವಾಗಿ  ಕೊನೆಯುಸಿರೆಳೆಯಿತು..
       ‌‌‌  ಪೋಸ್ಟ ಮಾರ್ಟಮ್ ಮುಗಿದಾಗ ಅವನೊಂದು ಅಸ್ಥಿಪಂಜರಮಾತ್ರವಾಗಿದ್ದ.ಮೈಮೇಲೆ ಅಸಂಖ್ಯಾತ ಸೂಜಿಚುಚ್ಚಿದ ಗುರುತುಗಳಿದ್ದವು.ನೋವುನಿವಾರಕ ಚುಚ್ಚುಮದ್ದಿನ ಪರಿಣಾಮಗಳವು. ಹಣದಿಂದ ಬದುಕನ್ನು ಖರೀದಿಸಿ ಇಟ್ಟುಕೊಳ್ಳ ಬಹುದೆಂಬ ಭ್ರಮೆಯೊಂದರ ದಾರುಣ ಅಂತ್ಯವಾದದ್ದು ಹೀಗೆ...
       ‌ ‌‌‌ಮೃತ್ಯುವನ್ನು ಗೆಲ್ಲುವದು ಆಗದ ಮಾತು.ಕೃತಕ ಬದುಕು ಬದುಕಬೇಕೆಂಬುವವರ ಮರಣವೂ ಸ್ವಾಭಾವಿಕವಾಗಿರುವದಿಲ್ಲವೆಂಬುದಕ್ಕೊಂದು ಸಶಕ್ತ ಉದಾಹರಣೆ.ತಮ್ಮ,ಆಸ್ತಿ,ಅಂತಸ್ತು,ಅಧಿಕಾರದ ಮದದಿಂದ ಮೆರೆಯುವವರಿಗೊಂದು ಸದಾ ನೆನಪಿರಲೇಬೇಕಾದ  ಜೀವನಪಾಠ.

Friday 19 October 2018

( ರಾವಣರ ಮುಖವಾಡ ಬಯಲಾಗುತ್ತಿರುವ
ಸಂದರ್ಭದಲ್ಲಿ..ಒಂದು ಪುಟ್ಟ ಆತ್ಮಾವಲೋಕನ..ಮನಸ್ಸಿದ್ದವರಿಗಾಗಿ)

ರಾವಣನಾಗುವದು
ಸುಲಭವಲ್ಲ...

ರಾವಣನೆದೆಯಲ್ಲಿ
ಅಹಂಕಾರವಿತ್ತು...ನಿಜ..
ಜೊತೆಗೆ ಪಶ್ಚಾತ್ತಾಪ ಕೂಡ...

ಲಾಲಸೆ ಯಿತ್ತು..ನಿಜ..
ಆತ್ಮ_ಸಂಯಮ  ಕೂಡ...

ಸೀತೆಯನ್ನು ಅಪಹರಿಸುವ ಸಾಮರ್ಥ್ಯವಿತ್ತು...
ನಿಜ  ....
ಆದರೆ ಒತ್ತಾಯದಿಂದ
ಭೋಗಿಸಬಾರದೆಂಬ ಸಂಕಲ್ಪ ಕೂಡ....

ಸೀತೆ ಪ್ರಾಣಸಹಿತ ಮರಳಿಸಿಕ್ಕದ್ದು
ರಾಮನ ಶಕ್ತಿಯಿಂದ  ನಿಜ...
ಆದರೆ ನಿಷ್ಕಳಂಕಳಾಗಿ ಸಿಕ್ಕದ್ದು
ರಾವಣನ ಸಂಸ್ಕಾರದಿಂದ...

ಮಹಾಪ್ರಭು, ಶ್ರೀರಾಮನೇ,
ನಿನ್ನ ಯುಗದ ರಾವಣ
ಒಳ್ಳೆಯವನಾಗಿದ್ದ...

ಇದ್ದ ಹತ್ತೂ ಮುಖಗಳು
ಯಾವುದೇ ಮುಖವಾಡಗಳಿಲ್ಲದೇ
ಬಹಿರಂಗವಾಗಿದ್ದವು...

ವರುಷಕ್ಕೊಮ್ಮೆ ಸುಟ್ಟು
ಭಸ್ಮವಾಗುವ ರಾವಣನ
ಮನದಲ್ಲೇನಿದೆ?
ಒಮ್ಮೆಯಾದರೂ ಯೋಚಿಸಿದ್ದೀರಾ?

" ನನ್ನನ್ನು ಸುಡಲು ನೆರೆದ
ಗುಂಪಿನಲ್ಲಿ ಒಬ್ಬನಾದರೂ
ರಾಮನಿದ್ದೀರಾ?"...

ಎಂದು ಮತ್ತೆ ಮತ್ತೆ ಕೇಳುವ
ಧ್ವನಿ ಕೇಳಿದ್ದೀರಾ?

( ಮೂಲ- WhatsApp ದಿಂದ...ಬರೆದವರ ಹೆಸರಿಲ್ಲ...
Trans_ creation- ಶ್ರೀಮತಿ ಕೃಷ್ಣಾ ಕೌಲಗಿ...)

Thursday 18 October 2018

ಹಾಗೇ ಸುಮ್ಮನೇ

ಹಾಗೇ  ಸುಮ್ಮನೇ...

Comfort zone....

ನಿನ್ನೆ ನನ್ನ ಹೊಸ mobile ಬಂತು...book ಮಾಡಿದ ದಿನದಿಂದ ಬರುವದನ್ನೇ ಕಾಯುತ್ತಿದ್ದೆ.set ಮಾಡಿಯೂ ಆಯಿತು..ಇದರ size ಸ್ವಲ್ಪ ದೊಡ್ಡದು...design ನಲ್ಲೂ ಕೊಂಚ ವ್ಯತ್ಯಾಸ...ಎರಡು ವರ್ಷಗಳಿಂದ ಬಳಸುತ್ತಿದ್ದ ಹಳೆ mobile ಎಡಗೈ, ಬಲಗೈ ಅನ್ನದೇ ಬಳಸುವಷ್ಟು ಸಲೀಸಾಗಿತ್ತು...ಹೊಸದೆಂತಲೋ, ನನ್ನ ಚಡಪಡಿಕೆ,ಅವಸರಗಳ ಮಾನದಲ್ಲೋ ಇದು ತುಂಬಾನೇ uncomfortable ಅನಿಸಹತ್ತಿತು..ತಲೆಗೆ ಒಂದೇಟು ಹಾಕಿ  ನೆನಪಿಸಿಕೊಂಡೆ." ಇದು ಹೊಸತು..ಇನ್ನೂ ಏನೆಲ್ಲ ಗೊತ್ತುಮಾಡಿಕೊಳ್ಳಲು ಕನಿಷ್ಟ ನಾಲ್ಕೈದು ದಿನಗಳು ಬೇಕೇಬೇಕು" _ ಎಂದು...ಅವಸರವಿದ್ದರೆ ಹಳೆಯದು,ವೇಳೆ ಇದ್ದರೆ ಹೊಸತರ ಬಳಕೆ ನಡೆದಿದೆ..
                ಇಷ್ಟೆಲ್ಲ ಆದಮೇಲೆ ಬದುಕಿನ ಒಂದು ಸತ್ಯ ನನ್ನನ್ನು ಅಚ್ಚರಿಗೊಳಿಸಿತು....ನಮ್ಮ ಮನೆ ಬಿಟ್ಟು ಬೇರೆ ಕಡೆ ಹೆಚ್ಚು ಇರಲಾಗುವದಿಲ್ಲ...ಬೇರೆಯವರು ನಮ್ಮಲ್ಲಿ ಬಂದರೆ ಇರುಸು- ಮುರುಸಿನ ಅನುಭವವಾಗುತ್ತದೆ...ಒಂದು ವಯಸ್ಸಾದ ಮೇಲೆ ಬೇರೆ ಜಾಗಕ್ಕೆ ಹೋಗಲೂ ಇಷ್ಟವಾಗುವದಿಲ್ಲ...Best place on the earth is OUR HOME ಎನಿಸೋಕೆ ಸುರುವಾಗುತ್ತೆ..ಇದೆಲ್ಲ ನಮ್ಮ comfort zone ಕಮಾಲ್..ನಮ್ಮದೇ ವ್ಯಾಪ್ತಿಯಲ್ಲಿ ಆರಾಮಾಗಿ ಇರುವಷ್ಟು ಬೇರೆಲ್ಲೂ ಇರುವದಕ್ಕಾಗುವದಿಲ್ಲ...ಚಿಕ್ಕ ಪುಟ್ಟ ಬದಲಾವಣೆಗಳೂ ಮನಸ್ಸಿಗೇನೋ ಕಿರಿಕಿರಿ ಮಾಡತೊಡಗುತ್ತವೆ...ಅಂತೆಯೇ ಬಹುಶಃ ಸೊಸೆ ಹೊಸದಾಗಿ ಬಂದಾಗ ಎರಡೂ ಬಣದವರ ಬಣ್ಣ ಮಾಸಲಾಗುವದು...
            ‌‌‌   ಇದು ನನ್ನ ಐದನೇ ಫೋನ್..ಪ್ರತಿಸಲ ಬದಲಾದಾಗಲೂ ಒಂದುವಾರ ಹಿಡಿದು- ಬಿಟ್ಟು ಅನುಭವವಾಗುತ್ತದೆ.ಸ್ವಲ್ಪು ದಿನ 
ತಡೆದುಕೊಂಡರೆ ತಾನೇ ಸರಿಹೋಗುವ,ಸಮಸ್ಯೆಯೇ ಆಗಿರದ ಅತಿ ಸಣ್ಣ ಕಿರಿಕಿರಿಯ ವಿಷಯ...
          ‌    ಆದರೂ - ನಿಮ್ಮ ವಿಷಯ ಗೊತ್ತಿಲ್ಲ- ನಾನೇಕೆ ಹೀಗೆ...?ಅಥವಾ ನಿಮಗೂ ಹೀಗೇ ಏನಾದರೂ...
            ದಯವಿಟ್ಟು ಕನ್ನಡದಲ್ಲಿ ' ನಾನೂ ಹೀಗೇ... ಅನ್ನಿ...ಇಂಗ್ಲಿಷ ವ್ಯಾಮೋಹದಲ್ಲಿ ME TOO ಅಂದೀರಿ ಜೋಕೆ..ಹಾಹಾಹಾ..

Monday 15 October 2018

" ಒಳ್ಳೆಯವನಿದ್ದ..
ಅವನು ನಿಜಕ್ಕೂ ಒಳ್ಳೆಯವನಾಗಿದ್ದ..." 

ನೀನು ಹೀಗೆ ಹೇಳಿದ್ದು
ಮುಲಾಜಿಗೋ..?
ಅವನ ಶವದೆದುರು
ಏನೋ ಒಂದು ಹೇಳಲೇ ಬೇಕಿತ್ತೆಂದೋ?
ಇಲ್ಲದಿದ್ದರೆ ಜಗತ್ತು ನಿನಗೆ
ಹೆಸರಿಡುತ್ತಿತ್ತು...ಎಂದೋ..?

ಒಳ್ಳೆಯವನಾಗಿದ್ದರೆ
ಅವನಿದ್ದಾಗಲೇ..ಅವನಿಗೇ
ಹೇಳಬೇಕಿತ್ತು...
ಅವ ಖುಶಿಯಿಂದ ಹುಚ್ಚನಾಗುತ್ತಿದ್ದ...

ಅವನು ಏನನ್ನೋ ಹೇಳುತ್ತಲೇ ಇದ್ದ...
ಯಾಕೆ ಕೇಳಿಸಿಕೊಳ್ಳಲಿಲ್ಲ...
" ನನ್ನ ಬದುಕಿನಲ್ಲಿ ಕಷ್ಟವೊಂದನ್ನು ಬಿಟ್ಟು
ಬೇರೇನೂ ಬರದೇಯಿಲ್ಲವೇ?"
ಅವನೆಂದಾಗ ನೀನು ಹೇಳಿದ್ದೇನು?"
" ನಿನ್ನ ಬಳಿ ಈ ಪ್ರಶ್ನೆ ಬಿಟ್ಟು ಬೇರೆ
ವಿಷಯವೇಯಿಲ್ಲವೇ?...

ಆ ನಗೆಯ ಹಿಂದಿನ ನೋವು ನೋಡಬೇಕಿತ್ತು ನೀನು..
ನಿನ್ನ ಭೇಟಿಯ ನಂತರ ಅವನೆಂದೂ
ಮನೆಗೆ ಹೋಗಲೇಯಿಲ್ಲ...
ಇಲ್ಲೇ ಮರದಾಸರೆಯಲ್ಲಿ,ರಸ್ತೆಯ ಬದಿಗಳಲ್ಲಿ
ಕುಳಿತು ಹೋಗು ಬರುವವರ ನೋಡುತ್ತಿದ್ದ...
ಈ ಜೀವನದಲ್ಲಿ ನಾನಾರಿಗೂ
ಬೇಕಾಗಿಲ್ಲವೆಂದು ಮರುಗುತ್ತಿದ್ದ...

ಒಂದುವೇಳೆ ನೀನವನ ಪಕ್ಕ ಕುಳಿತು
ಹೆಗಲಮೇಲೆ ಕೈಯಿರಿಸಿ
ಒಂದು ಸಾಂತ್ವನ,
ಒಂದೇಒಂದು ಭರವಸೆ ಕೊಟ್ಟಿದ್ದರೆ
ಅವ ಊಟಬಿಟ್ಟು ಎಚ್ಚರ ತಪ್ಪುತ್ತಿರಲಿಲ್ಲ...
ಮಾತನಾಡುತ್ತ ಆಡುತ್ತ ಮೌನದೊಳಗೆ
ಇಳಿಯುತ್ತಿರಲಿಲ್ಲ...
ತನ್ನ ಡೈರಿಗಿಂತ ಹೆಚ್ಚು
ಖಾಲಿ ಗೋಡೆ,ಸೂರು
ದಿಟ್ಟಿಸುತ್ತಿರಲಿಲ್ಲ...

ನಮ್ಮಲ್ಲಿ ಒಬ್ಬರೇಒಬ್ಬರು ಬಳಿಯಿದ್ದರೂ
ಅವನು ಆ ಬಾಟಲಿ ತೆರೆಯುತ್ತಿರಲಿಲ್ಲ...
ಅವನೆದುರು ಸತ್ತ ಅಪ್ಪನ ಫೋಟೋಯಿತ್ತು...
ತನ್ನವನೆಂಬ ಒಬ್ಬನೇ ಒಬ್ಬನಿರಲಿಲ್ಲ...
ಬದುಕಲು ಬೇಕಾಗುವ ಒಂದೇಒಂದು
ಕನಸಿರಲಿಲ್ಲ...
ಬೇಕಾದಷ್ಟು ಗೆಳೆಯರಿದ್ದರು..
ಒಬ್ಬ ಆಪ್ತನಿರಲಿಲ್ಲ...

ಅವನಿಗೆ " ಹೋಗುವದೇ ಲೇಸು ಎನಿಸಿರಬೇಕು"
'ಇದಕ್ಕಾರೂ ಕಾರಣವಲ್ಲ' - ಎಂದು ಬರೆದು
ನಡೆದುಬಿಟ್ಟ...

ಈಗ ಬಿಳಿ ಬಟ್ಟೆ ತೊಟ್ಟು 'ವಿದಾಯ' ಹೇಳಲು
ಬಂದಿರುವಿ..

ಅವನ ಸಮಾಧಿಗೆ ಹೂ ಅರ್ಪಿಸಲು ಹೋದಾಗ
ಕಿವಿಗೊಟ್ಟು ಕೇಳು..,
ಮಣ್ಣಿನಾಳದಿಂದ
ಬರುವ ಪಿಸುನುಡಿಯ..

"ಇನ್ನಾದರೂ
ಮುಂದೆ
ನನ್ನಂಥವನೇನಾರೂ ನಿನಗೆ
ಸಿಕ್ಕರೆ....
ಅವನ ಹೆಗಲಮೇಲೆ ಕೈಯಿಡು..
ಸಾಂತ್ವನದ ಎರಡು ಮಾತು ಹೇಳು..
ಬಾಟಲಿಗಳು ಕಂಡರೆ ಕಿಟಕಿಯ ಹೊರಗೆಸೆ...
ಸಂತಸದ ನುಡಿ ಹಂಚಿಕೋ..
ಆಗ ಅವನೂ ಆನಂದದ ದಿನ ಕಳೆದಾನು...
ನಿನಗೂ ಒಳ್ಳಯದು ಮಾಡಿದ ಸಾರ್ಥಕತೆ ದಕ್ಕೀತು....

( world depression day ಅಂಗವಾಗಿ ಪ್ರಸಾರವಾದ ಹಿಂದಿ ಕವನದ ಕನ್ನಡರೂಪ- ಶ್ರೀಮತಿ ಕೃಷ್ಣಾ ಕೌಲಗಿ)

Monday 8 October 2018

ಹಾಗೇ ಸುಮ್ಮನೆ..

         ನಾವಿರುವದು  ಒಂದು ಅತಿದೊಡ್ಡ ವಸತಿಸಮುಚ್ಚಯ..ಸಾವಿರಕ್ಕೂ ಮಿಕ್ಕಿ ಅಪಾರ್ಟಮೆಂಟ್ ಕಟ್ಟಿಉಳಿದ ಜಾಗದಲ್ಲಿ ಐವತ್ತೆರಡು villows ಗಳಿವೆ.ನಾಲ್ಕು ವರ್ಷಗಳ. ಹಿಂದೆ ಬಂದಾಗ ಕೇವಲ ಐದಾರು ಕುಟುಂಬಗಳಿದ್ದು ಎಲ್ಲರೂ ಒಬ್ಬರೊಬ್ಬರ ಮನೆಗೆ ಹೋಗುವದು,ಪರಿಚಯಿಸಿಕೊಳ್ಳುವದು,ಆಗಾಗಭೇಟಿಯಾಗುವದು ಸಾಮಾನ್ಯವಾಗಿತ್ತು.ಈಗ ಎಲ್ಲ ಮನೆಗಳಿಗೂ ಜನ ಬಂದಿದ್ದಾರೆ.ದಸರಾ, ದೀಪಾವಳಿಯ ಮಧ್ಯದ ರಜೆಯಲ್ಲೊಂದು annual function ಮಾಡುವ ವಿಚಾರದಿಂದ ಒಂದು core ಕಮೀಟಿಯ ರಚನೆಯಾಗಿ ಒಂದು date fix ಮಾಡಲಾಗಿದೆ...
                       ಅಲ್ಲಿಂದ ಸುರು...ನಮಗೆ ಆ date ಆಗೊಲ್ಲ...ನಾವು ಊರಲ್ಲಿ ಇರೋಲ್ಲ...ನಮ್ಮನೆಯಲ್ಲಿ Function....ನಮಗೆ ಆಗ ಕಡವಾ ಚೌತ್....ಎಷ್ಟು ಜನರೋ,ಅಷ್ಟು ಕಾರಣಗಳು..ಸಾಕಷ್ಟು ಹಗ್ಗ ಜಗ್ಗಾಟವಾಗಿ ಒಂದೆರಡು options ಕೊಟ್ಟರೂ ಬಗೆಹರಿಯಲಿಲ್ಲ...ಗಂಡಸರ ಪ್ರವೇಶವಾಯ್ತು..ಪರಿಣಾಮ ಇನ್ನೂ ಗೊಂದಲಮಯ...ತಲೆಗೊಂದು ಮಾತು... ಇಚ್ಛಿತ ರೀತಿಯಲ್ಲಿ ಬಗೆಹರಿಯಲಿಲ್ಲ..ಎಲ್ಲರದೂ ತಮ್ಮ ಮೂಗಿನ ನೇರಕ್ಕೇನೆ  ವಿಚಾರ..ಅದೊಂದು ಸಾರ್ವಜನಿಕ ಸಮಾರಂಭ ...ಬಹುಜನರ ಅಭಿಪ್ರಾಯ ಒಳ್ಳೆಯದು ಅಂದುಕೊಂಡು voting ಆಯಿತು...ಅಲ್ಲೂ ಕೆಲವರದು ಮತ್ತೆ  ತಕರಾರು...ಬಿಸಿಬಿಸಿ ಸಂದೇಶಗಳ ವಿನಿಮಯ..
ಕ್ರಮೇಣ ಅದು ವ್ಯಕ್ತಿ ಪ್ರತಿಷ್ಠೆಯ ವಿಷಯವಾಗಿ ಅವರವರವೇ ಚಿಕ್ಕ ಪುಟ್ಟ ಗುಂಪುಗಳಾಗಿ ಗುಂಪು ಗುದ್ದಾಟ....ಸಂಯೋಜಕರು ಅಸಹಾಯಕರು...
                     ಇದು ಹೆಚ್ವು ಕಡಿಮೆ ಒಂದು ತಿಂಗಳಿಂದ ನಡೆದ ವ್ಯರ್ಥ  ಗುದ್ದಾಟ...ಯಾವುದೂ ಇನ್ನೂ ಪಕ್ಕಾ ಆಗಿಲ್ಲ...ಎಲ್ಲವೂ ಅರೆ ಬರೆ ಬೆಂದ ಅಕ್ಕಿ...ಎಲ್ಲರೊಂದಿಗೆ ಕೂಡಿಕೊಂಡು ಒಂದು ಸಂಭ್ರಮದ ನಿರೀಕ್ಷೆಯಲ್ಲಿದ್ದ ಸೀದಾ ಸಾದಾ  ಮಂದಿಗೆ ತೀವೃ ಉತ್ಸಾಹ ಭಂಗ...ಯಾರ ಪರ ಮಾತಾಡಿದರೆ ಏನೋ ಎಂಬ ದಿಗಿಲು...
                ‌‌‌‌      ದೇಶದ ಆಡಳಿತದ ಬಗ್ಗೆ,ಆಡಳಿತ ಪಕ್ಷ,ವಿರೋಧ ಪಕ್ಷಗಳ ರೀತಿಯ ಬಗ್ಗೆ ನಡೆಯುವ ಚರ್ಚೆ ಎಷ್ಟೊಂದು ವೀರಾವೇಶದಿಂದ ನಡೆಯುತ್ತವೆ ಎಲ್ಲರಿಗೂ ಗೊತ್ತು...ಸದನಗಳಲ್ಲಿ,ಮಾಧ್ಯಮಗಳಲ್ಲಿ,ರಾಜಕೀಯ ವೇದಿಕೆಗಳಲ್ಲಿ,ಚುನಾವಣಾ ಪ್ರಸಾರಗಳಲ್ಲಿ
ಎಲ್ಲೆಂದರಲ್ಲಿ ಬಟ್ಟೆ ಕೂಡ ಹರಿದುಕೊಂಡು ಕಿರುಚಾಡಿದ್ದನ್ನು ಕಂಡು ರೋಸಿ ಹೋಗಿದ್ದೇವೆ...ವೈಯಕ್ತಿಕವಾಗಿ,ರಾಜಕೀಯ ಉದ್ದೇಶಕ್ಕಾಗಿ ತೊಡಗಿಕೊಂಡವರನ್ನು ಬಿಟ್ಟರೆ ಜನಸಾಮಾನ್ಯರಿಗೆ ರೇಜಿಗೆ ಹುಟ್ಟಿಸುತ್ತವೆ ಈ ವಿದ್ಯಮಾನಗಳು.... 
                         ಒಂದು ಸಮುಚ್ಚಯದ ಕೆಲವೇ ಕೆಲವು ಮನೆಗಳ ಒಂದು ಕಾರ್ಯಕ್ರಮ ಇಷ್ಟೆಲ್ಲ ಅಸಹನೀಯತೆ,ಅಶಿಸ್ತು,ಅರಾಜಕತೆ,ಅಸಹಕಾರ,ಅಸಮಾಧಾನದ ಹೊಗೆಯಬ್ಬಿಸಬಹುದಾದರೆ
ಭಾರತದಂಥ ಬ್ರಹತ್ ದೇಶದಲ್ಲಿ ನಡೆದಿರುವದು ಸುದ್ದಿಯೇ ಅಲ್ಲ ಎನಿಸತೊಡಗಿದ್ದು ಸುಳ್ಳಲ್ಲ...ಒಂದು ಸುಂದರ ತೋಟವಾಗಿ ನಳನಳಿಸಬೇಕಿದ್ದ ಪುಟ್ಟ ಪುಟ್ಟ ಗಿಡಗಳು pot garden ಸಂಸ್ಕೃತಿಯಲ್ಲಿ ಒಂದನ್ನೊಂದು ಮೈಗೂ ತಗುಲದಂತೆ ದೂರವುಳಿದಂತೆ ಮನಸ್ಸಿಗನಿಸಿ ಏಕೋ ಸಂಕಟ,ಕಿರಿಕಿರಿ,ಅರ್ಥೈಸಲಾಗದ ಕಳವಳ...

Tuesday 2 October 2018

Paani se tasveer kahan banti hai,
Khwabo se taqdeer kahan banti hai.
Kissi bhi rishte ko sachche dil se nibhao,
Kyunki ye zindagi phir wapas kahan milti hai.
Kaun kissi se chah kar dur hota hai,
Har koi apne halaton se majbur hota hai.
Hum to bus itna jante hai har rishta Moti aur har dost Kohinoor hota hai...

*Dedicated to all my friends*

(Trans- creation_ Krishna Koulagi)

ಬಂಧ

ನೀರಿನಿಂದ ಚಿತ್ರ
ಬರೆಯಲಾಗುವದಿಲ್ಲ...

ಕನಸುಗಳಿಂದ
ಅದೃಷ್ಟ ಬದಲಾಗುವದಿಲ್ಲ...

ಪ್ರತಿ ಸಂಬಂಧವನ್ನೂ
ಶುದ್ಧ ಮನಸ್ಸಿನಿಂದ
ಕಾಪಿಡಬೇಕು...
ಬದುಕು ಬಾರಿ ಬಾರಿ
ಸಿಗುವದಿಲ್ಲ....

ಯಾರೂ ಬಯಸಿ
ಬೇರೆಯಾಗುವದಿಲ್ಲ...
ಪ್ರತಿಯೊಬ್ಬರಿಗೂ
ಏನೋ ಅಸಹಾಯಕತೆ..
ಅವರವರವೇ ಏನೋ ವ್ಯಥೆ....

ನನಗನಿಸುವದಿಷ್ಟೇ....

ಪ್ರತಿ ಬಂಧವೂ ಒಂದು ಮುತ್ತು..
ಪ್ರತಿ ಗೆಳೆಯನೂ
ಅಪರೂಪದ ಸೊತ್ತು....
( ಮೂಲ- ಗುಲ್ಜಾರ್ )

Monday 1 October 2018

ಹಾಗೇ ಸುಮ್ಮನೇ...

"ನಾವಿರುವದು ಬಂಗಲೆಗಳಲ್ಲಿ ಅಲ್ಲ...duplexes ಅಥವಾ flat ಗಳಲ್ಲಿ ಅಲ್ಲ..ನಾವಿರುವದು ನಮ್ಮದೇ ಮನಸ್ಸಿನಲ್ಲಿ...ನಮ್ಮದೇ ಮನಸ್ಸಿಗನುಗುಣವಾಗಿ....ನಮ್ಮ ಮನಸ್ಸು ಹೇಳಿದಂತೆ...

        ಖಂಡಿತಕ್ಕೂ ಅದೇ ನಮ್ಮ ಶಾಶ್ವತವಾದ ತಾಣ...ಅದಕ್ಕೆ square feet ಲೆಕ್ಕದ ಹಂಗಿಲ್ಲ.ಅದೊಂದು ಪರಿಮಿತಿಯೇ ಇಲ್ಲದ ಅಖಂಡ ಕ್ಷೇತ್ರ...ಇನ್ನೊಂದು ಮುಖ್ಯ ಮಾತು..ನೀವೆಷ್ಟೇ ಮುತುವರ್ಜಿ ವಹಿಸಿ,ನಿಮ್ಮ ಮನೆಯ ರೂಮು,ಬಾಲ್ಕನಿ,ಗರಾಜು,ವರಾಂಡಾ ಅಚ್ಚುಕಟ್ಟಾಗಿ ಇಟ್ಟುಕೊಂಡಿರಬಹುದು...ಆದರೆ ನಿಮ್ಮ ಬುದ್ಧಿ,ಮನಸ್ಸು ಅಚ್ಚುಕಟ್ಟಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ...
  ನಿಮ್ಮ ಮನವೂ ಒಂದು ಕೋಣೆಯೇ..ಅಲ್ಲಿ ಎಷ್ಟೋ ಸಲ ಮೂಲೆಗಳಲ್ಲಿ ಪಶ್ಚಾತ್ತಾಪಗಳ ಗುಡ್ಡೆ ಬಿದ್ದಿರುತ್ತದೆ..ಬೀರುಗಳಲ್ಲಿ  ನಿರೀಕ್ಷೆಗಳು ಉಸಿರುಗಟ್ಟುತ್ತವೆ.ಅಲ್ಲಲ್ಲಿ ಚಿಂತೆಗಳ ಕಸದ ರಾಶಿ ಹರಡಿಕೊಂಡಿರುತ್ತದೆ.ಊಟದ ಮೇಜಿನ ತುಂಬ ಅಸಮರ್ಪಕ ತುಲನೆಗಳು ಜೀವ ಹಿಂಡಿ ಉಂಡದ್ದನ್ನು ಒಳಗಿಳಿಯಲು ಬಿಡುವದಿಲ್ಲ..ಕೀಳರಿಮೆಯೋ ,ಮೇರೆ ಮೀರಿದ ಸುಳ್ಳು ಅಭಿಮಾನವೋ ಸೋರಿ ಎಲ್ಲಕಡೆ ಹರಡಿಕೊಂಡಿರುತ್ತದೆ.
ಹಳೆಯ ಸೇಡಿನ ಗಬ್ಬು ವಾಸನೆ ಎಲ್ಲೆಡೆ ಹರಡಿ ಇರುವಿಕೆಯೇ ಅಸಹನೀಯವಾಗಿರುತ್ತದೆ...ನೆನಪಿಡಲೇಬೇಕಾದ ಒಂದು ಅಂಶವೆಂದರೆ ಇದರ ಸ್ವಚ್ಛತೆಗೆ ಯಾವುದೇ ಹೊರ ಕೆಲಸದವರನ್ನಿಟ್ಟು ಮಾಡಿಕೊಳ್ಳುತ್ತೇವೆ ಎಂಬ ಮಾತೇ ಇಲ್ಲ...ಎಷ್ಟೇ ಹಣ ಸುರಿಯುತ್ತೇವೆ ಅಂದರೂ ಅಸಾಧ್ಯದ ಮಾತದು...
             ಅದನ್ನು,ಆ ಕೆಲಸವನ್ನು ನೀವು ,ನೀವೇ,ನೀವೊಬ್ಬರೇ ಮಾಡಬೇಕಾಗಿ ಬರುವದು ಅನಿವಾರ್ಯ..."

           ಇದು ಮುಂಬೈಯಿಂದ ಇಂದು ಶ್ರೀ ಮನೋಹರ ನಾಯಕ ಅವರು ಕಳಿಸಿದ ಇಂಗ್ಲಿಷ  ಸಂದೇಶವೊಂದರ ಕನ್ನಡ ರೂಪ...ಆ ಸಂದೇಶದ ತೀಕ್ಷ್ಣತೆ, ವಾಸ್ತವಿಕತೆ,ಅವಶ್ಯಕತೆ ಎಷ್ಟಿದೆ ಅಂದರೆ  ನನಗೆ ಅನುವಾದಿಸದಿರಲು ಆಗಲೇಯಿಲ್ಲ..ಅನುವಾದ ಮುಗಿಯುತ್ತಲೇ ಈ ಮಹತ್ ಸಂದೇಶವನ್ನು ಹಂಚಿಕೊಳ್ಳಲೇ ಬೇಕಾದ ತುಡಿತ..
    ‌‌            ಯಾಕಂದರೆ ಇಂದು ವಿಶ್ವ ಹಿರಿಯ ನಾಗರಿಕರ ದಿನ..ಅವರಲ್ಲಿ ಒಬ್ಬಳಾದ ನಾನೂ ನನ್ನ ಮುಂದಿನ ಎರಡು ತಲೆಮಾರಿನೊಂದಿಗೆ ಇದ್ದೇನೆ.ಎಲ್ಲರ ಮನೆಗಳೂ ಹೊರಗೆ ನಾವಿರುವ ಜಗತ್ತಿನ ಪುಟ್ಟ ಪುಟ್ಟ ಪ್ರತಿಕೃತಿಗಳು...ಸಂಪೂರ್ಣ ಬದಲಾವಣೆ ಕಂಡ ಒಳ- ಹೊರಗುಗಳು, ವಿಭಿನ್ನ ಸ್ತರಗಳು, ವಿವಿಧ ಮನೋಭಾವ, ವಿವಿಧ ಹಿನ್ನೆಲೆಯನ್ನೊಳಗೊಂಡ ಸಂಕೀರ್ಣ ಬದುಕು...ಅದರಲ್ಲಿಯೇ ಈಸಿ ಜೈಸಲೇಬೇಕಾದ ಅನಿವಾರ್ಯತೆ...ಯಾವ short cut ಊ ಕೆಲಸ ಮಾಡದ ದಾರಿಯದು...ನಮ್ಮದೇ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು,ನಾವು ಅವಲಂಬಿಸಿದವರ ಮೇಲೆ ಹೊರೆಯಾಗದಂತೆ ಇದ್ದು    ನಮಗೆ,ಅವರಿಗೆ ಉಭಯತರರಿಗೂ ಹಿತವಾಗುವಂತೆ ಬದುಕಬೇಕಾದ ಅನಿವಾರ್ಯತೆ ಕಂಡುಕೊಂಡು  ಮನೆ,ಮನ ಎರಡರಲ್ಲೂ ನೆಮ್ಮದಿ ಕಾಯ್ದುಕೊಂಡು ಇರಬೇಕೆಂಬುದನ್ನು ಹೊರಗಿನವರಾರೋ ಬಂದು ಹೇಳುವ ಪ್ರಸಂಗ ಬರದಂತೆ ನಮಗೆ ನಾವೇ ತಿಳಿದುಕೊಂಡು ಇದ್ದರ ಬೇರೇನೂ ಬೇಕಾಗಲಿಕ್ಕಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...