Monday, 15 October 2018

" ಒಳ್ಳೆಯವನಿದ್ದ..
ಅವನು ನಿಜಕ್ಕೂ ಒಳ್ಳೆಯವನಾಗಿದ್ದ..." 

ನೀನು ಹೀಗೆ ಹೇಳಿದ್ದು
ಮುಲಾಜಿಗೋ..?
ಅವನ ಶವದೆದುರು
ಏನೋ ಒಂದು ಹೇಳಲೇ ಬೇಕಿತ್ತೆಂದೋ?
ಇಲ್ಲದಿದ್ದರೆ ಜಗತ್ತು ನಿನಗೆ
ಹೆಸರಿಡುತ್ತಿತ್ತು...ಎಂದೋ..?

ಒಳ್ಳೆಯವನಾಗಿದ್ದರೆ
ಅವನಿದ್ದಾಗಲೇ..ಅವನಿಗೇ
ಹೇಳಬೇಕಿತ್ತು...
ಅವ ಖುಶಿಯಿಂದ ಹುಚ್ಚನಾಗುತ್ತಿದ್ದ...

ಅವನು ಏನನ್ನೋ ಹೇಳುತ್ತಲೇ ಇದ್ದ...
ಯಾಕೆ ಕೇಳಿಸಿಕೊಳ್ಳಲಿಲ್ಲ...
" ನನ್ನ ಬದುಕಿನಲ್ಲಿ ಕಷ್ಟವೊಂದನ್ನು ಬಿಟ್ಟು
ಬೇರೇನೂ ಬರದೇಯಿಲ್ಲವೇ?"
ಅವನೆಂದಾಗ ನೀನು ಹೇಳಿದ್ದೇನು?"
" ನಿನ್ನ ಬಳಿ ಈ ಪ್ರಶ್ನೆ ಬಿಟ್ಟು ಬೇರೆ
ವಿಷಯವೇಯಿಲ್ಲವೇ?...

ಆ ನಗೆಯ ಹಿಂದಿನ ನೋವು ನೋಡಬೇಕಿತ್ತು ನೀನು..
ನಿನ್ನ ಭೇಟಿಯ ನಂತರ ಅವನೆಂದೂ
ಮನೆಗೆ ಹೋಗಲೇಯಿಲ್ಲ...
ಇಲ್ಲೇ ಮರದಾಸರೆಯಲ್ಲಿ,ರಸ್ತೆಯ ಬದಿಗಳಲ್ಲಿ
ಕುಳಿತು ಹೋಗು ಬರುವವರ ನೋಡುತ್ತಿದ್ದ...
ಈ ಜೀವನದಲ್ಲಿ ನಾನಾರಿಗೂ
ಬೇಕಾಗಿಲ್ಲವೆಂದು ಮರುಗುತ್ತಿದ್ದ...

ಒಂದುವೇಳೆ ನೀನವನ ಪಕ್ಕ ಕುಳಿತು
ಹೆಗಲಮೇಲೆ ಕೈಯಿರಿಸಿ
ಒಂದು ಸಾಂತ್ವನ,
ಒಂದೇಒಂದು ಭರವಸೆ ಕೊಟ್ಟಿದ್ದರೆ
ಅವ ಊಟಬಿಟ್ಟು ಎಚ್ಚರ ತಪ್ಪುತ್ತಿರಲಿಲ್ಲ...
ಮಾತನಾಡುತ್ತ ಆಡುತ್ತ ಮೌನದೊಳಗೆ
ಇಳಿಯುತ್ತಿರಲಿಲ್ಲ...
ತನ್ನ ಡೈರಿಗಿಂತ ಹೆಚ್ಚು
ಖಾಲಿ ಗೋಡೆ,ಸೂರು
ದಿಟ್ಟಿಸುತ್ತಿರಲಿಲ್ಲ...

ನಮ್ಮಲ್ಲಿ ಒಬ್ಬರೇಒಬ್ಬರು ಬಳಿಯಿದ್ದರೂ
ಅವನು ಆ ಬಾಟಲಿ ತೆರೆಯುತ್ತಿರಲಿಲ್ಲ...
ಅವನೆದುರು ಸತ್ತ ಅಪ್ಪನ ಫೋಟೋಯಿತ್ತು...
ತನ್ನವನೆಂಬ ಒಬ್ಬನೇ ಒಬ್ಬನಿರಲಿಲ್ಲ...
ಬದುಕಲು ಬೇಕಾಗುವ ಒಂದೇಒಂದು
ಕನಸಿರಲಿಲ್ಲ...
ಬೇಕಾದಷ್ಟು ಗೆಳೆಯರಿದ್ದರು..
ಒಬ್ಬ ಆಪ್ತನಿರಲಿಲ್ಲ...

ಅವನಿಗೆ " ಹೋಗುವದೇ ಲೇಸು ಎನಿಸಿರಬೇಕು"
'ಇದಕ್ಕಾರೂ ಕಾರಣವಲ್ಲ' - ಎಂದು ಬರೆದು
ನಡೆದುಬಿಟ್ಟ...

ಈಗ ಬಿಳಿ ಬಟ್ಟೆ ತೊಟ್ಟು 'ವಿದಾಯ' ಹೇಳಲು
ಬಂದಿರುವಿ..

ಅವನ ಸಮಾಧಿಗೆ ಹೂ ಅರ್ಪಿಸಲು ಹೋದಾಗ
ಕಿವಿಗೊಟ್ಟು ಕೇಳು..,
ಮಣ್ಣಿನಾಳದಿಂದ
ಬರುವ ಪಿಸುನುಡಿಯ..

"ಇನ್ನಾದರೂ
ಮುಂದೆ
ನನ್ನಂಥವನೇನಾರೂ ನಿನಗೆ
ಸಿಕ್ಕರೆ....
ಅವನ ಹೆಗಲಮೇಲೆ ಕೈಯಿಡು..
ಸಾಂತ್ವನದ ಎರಡು ಮಾತು ಹೇಳು..
ಬಾಟಲಿಗಳು ಕಂಡರೆ ಕಿಟಕಿಯ ಹೊರಗೆಸೆ...
ಸಂತಸದ ನುಡಿ ಹಂಚಿಕೋ..
ಆಗ ಅವನೂ ಆನಂದದ ದಿನ ಕಳೆದಾನು...
ನಿನಗೂ ಒಳ್ಳಯದು ಮಾಡಿದ ಸಾರ್ಥಕತೆ ದಕ್ಕೀತು....

( world depression day ಅಂಗವಾಗಿ ಪ್ರಸಾರವಾದ ಹಿಂದಿ ಕವನದ ಕನ್ನಡರೂಪ- ಶ್ರೀಮತಿ ಕೃಷ್ಣಾ ಕೌಲಗಿ)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...