Tuesday, 23 October 2018

ವಾಸ್ತು

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ಮನಸಾರೆ ನಗಲೆರಡು
ಮೂಲೆಗಳು ಇರಲಿ...

ಸೂರ್ಯನೆಲ್ಲೇ ಇರಲಿ
ಸೂರ್ಯ ರಶ್ಮಿಗಳ್ಹರಡಿ
ಮನೆಯ ಅಂಗಳಕೊಂದು
ಶೋಭೆ ತಂದಿರಲಿ..

ಮುದ್ದು ಮಕ್ಕಳು ಸೇರಿ
ಗೆದ್ದ ಭಾವದಲಿ ಸದಾ
ಬಿದ್ದೆದ್ದು ಆಡಲು
ಬಿಡಿ- ಅಂಗಳೊಂದಿರಲಿ..

ಪುಟ್ಟುಟ್ಟ ದೋಣಿಗಳು
ಬೀಳುತೇಳುತ ಸಾಗಿ
ನಲಿವ ಹುಟ್ಟಿಸುವಂಥ
ಮಳೆ ಝರಿಗಳಿರಲಿ....

ನಡುನಡುವೆ ಮೇಲೇರಿ
ಮಿನುಗುತಿಹ ತಾರೆಗಳ
ಲೆಕ್ಕ ಗುಣಿಸಲು ಒಂದು
ಮಾಳಿಗೆಯು ಇರಲಿ...

ಬಾನಿನುದ್ದಗಲಕ್ಕೂ
ಹಾರಾಡಿ ಹಿಡಿಕಾಳು
ಹೆಕ್ಕಿ ಗುಟುಗಿಕ್ಕಲು
' ಮರಗೂಡೊಂದು' ಇರಲಿ...

ಮುಂಜಾನೆ ಮುಗುಳ್ನಗೆಗೆ
ಸ್ನೇಹದಾಲಿಂಗನಕೆ
ಹೊರೆಯಾಗದಂತೆರಡು
ನೆರೆ- ಹೊರೆಗಳಿರಲಿ...

ಮನೆಯು ಹೇಗೇ ಇರಲಿ
ಮನೆಮಂದಿ ಒಗ್ಗೂಡಿ
ನಲಿಯುವಾ ಗಳಿಗೆಗಳ
ಬರವು ಬರದಿರಲಿ...

( ಗೆಳತಿ ಮೀರಾ ಕುಲಕರ್ಣಿ ಕಳಿಸಿದ ಹಿಂದಿ ಕವನದ ಭಾವಾನುವಾದ- Thank you Meera)

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...