Monday, 1 October 2018

ಹಾಗೇ ಸುಮ್ಮನೇ...

"ನಾವಿರುವದು ಬಂಗಲೆಗಳಲ್ಲಿ ಅಲ್ಲ...duplexes ಅಥವಾ flat ಗಳಲ್ಲಿ ಅಲ್ಲ..ನಾವಿರುವದು ನಮ್ಮದೇ ಮನಸ್ಸಿನಲ್ಲಿ...ನಮ್ಮದೇ ಮನಸ್ಸಿಗನುಗುಣವಾಗಿ....ನಮ್ಮ ಮನಸ್ಸು ಹೇಳಿದಂತೆ...

        ಖಂಡಿತಕ್ಕೂ ಅದೇ ನಮ್ಮ ಶಾಶ್ವತವಾದ ತಾಣ...ಅದಕ್ಕೆ square feet ಲೆಕ್ಕದ ಹಂಗಿಲ್ಲ.ಅದೊಂದು ಪರಿಮಿತಿಯೇ ಇಲ್ಲದ ಅಖಂಡ ಕ್ಷೇತ್ರ...ಇನ್ನೊಂದು ಮುಖ್ಯ ಮಾತು..ನೀವೆಷ್ಟೇ ಮುತುವರ್ಜಿ ವಹಿಸಿ,ನಿಮ್ಮ ಮನೆಯ ರೂಮು,ಬಾಲ್ಕನಿ,ಗರಾಜು,ವರಾಂಡಾ ಅಚ್ಚುಕಟ್ಟಾಗಿ ಇಟ್ಟುಕೊಂಡಿರಬಹುದು...ಆದರೆ ನಿಮ್ಮ ಬುದ್ಧಿ,ಮನಸ್ಸು ಅಚ್ಚುಕಟ್ಟಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ...
  ನಿಮ್ಮ ಮನವೂ ಒಂದು ಕೋಣೆಯೇ..ಅಲ್ಲಿ ಎಷ್ಟೋ ಸಲ ಮೂಲೆಗಳಲ್ಲಿ ಪಶ್ಚಾತ್ತಾಪಗಳ ಗುಡ್ಡೆ ಬಿದ್ದಿರುತ್ತದೆ..ಬೀರುಗಳಲ್ಲಿ  ನಿರೀಕ್ಷೆಗಳು ಉಸಿರುಗಟ್ಟುತ್ತವೆ.ಅಲ್ಲಲ್ಲಿ ಚಿಂತೆಗಳ ಕಸದ ರಾಶಿ ಹರಡಿಕೊಂಡಿರುತ್ತದೆ.ಊಟದ ಮೇಜಿನ ತುಂಬ ಅಸಮರ್ಪಕ ತುಲನೆಗಳು ಜೀವ ಹಿಂಡಿ ಉಂಡದ್ದನ್ನು ಒಳಗಿಳಿಯಲು ಬಿಡುವದಿಲ್ಲ..ಕೀಳರಿಮೆಯೋ ,ಮೇರೆ ಮೀರಿದ ಸುಳ್ಳು ಅಭಿಮಾನವೋ ಸೋರಿ ಎಲ್ಲಕಡೆ ಹರಡಿಕೊಂಡಿರುತ್ತದೆ.
ಹಳೆಯ ಸೇಡಿನ ಗಬ್ಬು ವಾಸನೆ ಎಲ್ಲೆಡೆ ಹರಡಿ ಇರುವಿಕೆಯೇ ಅಸಹನೀಯವಾಗಿರುತ್ತದೆ...ನೆನಪಿಡಲೇಬೇಕಾದ ಒಂದು ಅಂಶವೆಂದರೆ ಇದರ ಸ್ವಚ್ಛತೆಗೆ ಯಾವುದೇ ಹೊರ ಕೆಲಸದವರನ್ನಿಟ್ಟು ಮಾಡಿಕೊಳ್ಳುತ್ತೇವೆ ಎಂಬ ಮಾತೇ ಇಲ್ಲ...ಎಷ್ಟೇ ಹಣ ಸುರಿಯುತ್ತೇವೆ ಅಂದರೂ ಅಸಾಧ್ಯದ ಮಾತದು...
             ಅದನ್ನು,ಆ ಕೆಲಸವನ್ನು ನೀವು ,ನೀವೇ,ನೀವೊಬ್ಬರೇ ಮಾಡಬೇಕಾಗಿ ಬರುವದು ಅನಿವಾರ್ಯ..."

           ಇದು ಮುಂಬೈಯಿಂದ ಇಂದು ಶ್ರೀ ಮನೋಹರ ನಾಯಕ ಅವರು ಕಳಿಸಿದ ಇಂಗ್ಲಿಷ  ಸಂದೇಶವೊಂದರ ಕನ್ನಡ ರೂಪ...ಆ ಸಂದೇಶದ ತೀಕ್ಷ್ಣತೆ, ವಾಸ್ತವಿಕತೆ,ಅವಶ್ಯಕತೆ ಎಷ್ಟಿದೆ ಅಂದರೆ  ನನಗೆ ಅನುವಾದಿಸದಿರಲು ಆಗಲೇಯಿಲ್ಲ..ಅನುವಾದ ಮುಗಿಯುತ್ತಲೇ ಈ ಮಹತ್ ಸಂದೇಶವನ್ನು ಹಂಚಿಕೊಳ್ಳಲೇ ಬೇಕಾದ ತುಡಿತ..
    ‌‌            ಯಾಕಂದರೆ ಇಂದು ವಿಶ್ವ ಹಿರಿಯ ನಾಗರಿಕರ ದಿನ..ಅವರಲ್ಲಿ ಒಬ್ಬಳಾದ ನಾನೂ ನನ್ನ ಮುಂದಿನ ಎರಡು ತಲೆಮಾರಿನೊಂದಿಗೆ ಇದ್ದೇನೆ.ಎಲ್ಲರ ಮನೆಗಳೂ ಹೊರಗೆ ನಾವಿರುವ ಜಗತ್ತಿನ ಪುಟ್ಟ ಪುಟ್ಟ ಪ್ರತಿಕೃತಿಗಳು...ಸಂಪೂರ್ಣ ಬದಲಾವಣೆ ಕಂಡ ಒಳ- ಹೊರಗುಗಳು, ವಿಭಿನ್ನ ಸ್ತರಗಳು, ವಿವಿಧ ಮನೋಭಾವ, ವಿವಿಧ ಹಿನ್ನೆಲೆಯನ್ನೊಳಗೊಂಡ ಸಂಕೀರ್ಣ ಬದುಕು...ಅದರಲ್ಲಿಯೇ ಈಸಿ ಜೈಸಲೇಬೇಕಾದ ಅನಿವಾರ್ಯತೆ...ಯಾವ short cut ಊ ಕೆಲಸ ಮಾಡದ ದಾರಿಯದು...ನಮ್ಮದೇ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು,ನಾವು ಅವಲಂಬಿಸಿದವರ ಮೇಲೆ ಹೊರೆಯಾಗದಂತೆ ಇದ್ದು    ನಮಗೆ,ಅವರಿಗೆ ಉಭಯತರರಿಗೂ ಹಿತವಾಗುವಂತೆ ಬದುಕಬೇಕಾದ ಅನಿವಾರ್ಯತೆ ಕಂಡುಕೊಂಡು  ಮನೆ,ಮನ ಎರಡರಲ್ಲೂ ನೆಮ್ಮದಿ ಕಾಯ್ದುಕೊಂಡು ಇರಬೇಕೆಂಬುದನ್ನು ಹೊರಗಿನವರಾರೋ ಬಂದು ಹೇಳುವ ಪ್ರಸಂಗ ಬರದಂತೆ ನಮಗೆ ನಾವೇ ತಿಳಿದುಕೊಂಡು ಇದ್ದರ ಬೇರೇನೂ ಬೇಕಾಗಲಿಕ್ಕಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...