Thursday 27 June 2019

Poem...translation

ಬದುಕಿನೋಟದಲ್ಲಿ
ಅನುಭವ ಪಕ್ವವಾಗಲೇಯಿಲ್ಲ...
ಇತರರಂತೆ ಚಾಲಾಕಿತನ
ಕಲಿಯಲಾಗಲೇ ಇಲ್ಲ..
ಮನಸ್ಸು ಮಾಗಬೇಕಿತ್ತು,
ಮಾಗಲೇಯಿಲ್ಲ..

ಬೇಕೆಂದಾಗ
ನಕ್ಕು
ಬೇಕಾದ ಹಾಗೆ
ಅತ್ತು
ಕಳೆದುಬಿಟ್ಟಿತು
ಬಾಲ್ಯ...

ಈಗ ಮುಗುಳ್ನಗೆಗೂ
ಬಿಂಕ...
ಕಣ್ಣೀರಿಗೂ ಏಕಾಂತದ ಸುಂಕ...

ನಗಬೇಕೆಂದೇ ನಕ್ಕ
ಕೆಲ
ಮುಕ್ತ ಕ್ಷಣಗಳಿವೆ
ಹಳೆಯ  ಪಟಗಳಲ್ಲಿ....
ಮಾಸಿದ ನೆನಪಿನ
ಪುಟಗಳಲ್ಲಿ...

ನಕ್ಕ ಕಾರಣ 'ಈಗ'
ತಿಳಿಯಬೇಕಿದೆ...
ನಗು ನಮ್ಮನ್ನು
ನಾವು ನಗುವನ್ನು
ಹುಡುಕಬೇಕಿದೆ...

ಮೂಲ_ ಗುಲ್ಜಾರ್..
ಅನು_ ಕೃಷ್ಣಾ ಕೌಲಗಿ..

Thursday 20 June 2019

ಹಾಗೇ ಸುಮ್ಮನೆ

ಹಾಗೇ ಸುಮ್ಮನೆ...

"ದಿಲ್  ಥಾ  ಛೋಟಾ ಸಾ....ಛೋಟಿ ಸಿ ಆಶಾ..."

                ‌‌1970 ರ ದಶಕ..ಮದುವೆಯಾಗಿ ಮೂರು ಮಕ್ಕಳಾಗಿದ್ದವು....ನನ್ನವರಿಗಾಗಲೇ ಹೃದಯಾಘಾತವಾಗಿತ್ತು... Doctor ಸಲಹೆಯ ಮೇರೆಗೆ  ಹೆಚ್ಚು ಆಯಾಸಮಾಡಿಕೊಳ್ಳುವ ಹಾಗಿರಲಿಲ್ಲ..ಕರ್ನಾಟಕ ಹೈಸ್ಕೂಲ್ ಯಾವ ಕಡೆಯಿಂದ ಏರಿದರೂ  ದಿಬ್ಬ ಹತ್ತಬೇಕಾಗುತ್ತಿತ್ತು..ಸೈಕಲ್ ಮೇಲೆ ಅಲ್ಲಿಯ ವರೆಗೆ ಹೋಗಿ ಹೇಗೋ ಒದ್ದಾಡುತ್ತ ಶಾಲೆ ತಲುಪಬೇಕಾಗಿತ್ತು..( ಕೊನೆಗೆ ಅನಿವಾರ್ಯವಾಗಿ ವಿದ್ಯಾರಣ್ಯ ಹೈಸ್ಕೂಲ್ಗೆ ವರ್ಗಮಾಡಬೇಕಾಯಿತು) ನನಗೋ ವಿಪರೀತ ಹೆದರಿಕೆ..ಆದರೆ ಅನ್ನುವ ಹಾಗಿಲ್ಲ ..ಬಿಡುವ ಹಾಗೂ ಇಲ್ಲ....ಒಂದು ರೀತಿಯ ಬಿಸಿತುಪ್ಪ...ನಾನು ಶಾಲೆಯಿಂದ ಬಂದಾಗ ಮನೆಯದುರು ಸಣ್ಣದೊಂದು ಗುಂಪು ಇದ್ದರೂ ಏನೇನೋ ಊಹಿಸಿಕೊಂಡು ಎದೆ ಧಸ್ ಎನ್ನುತ್ತಿತ್ತು...ಏಳುವದು ಸ್ವಲ್ಪ ತಡವಾದರೂ ವಿಚಲಿತಳಾಗಿಬಿಡುತ್ತಿದ್ದೆ...
ಹಾಗೆಂದು ಅವರ ಆರೋಗ್ಯ ಕುರಿತಾದ ಚರ್ಚೆ ಮಾಡುವದು ಅವರಿಗೆಂದೂ ಸೇರುತ್ತಿರಲಿಲ್ಲ...ನನಗೆ ಒಂದು ರೀತಿಯ tension ನ್ನು ಸದಾ...
ನನಗೋ ಅವರೊಂದು ಲೂನಾ  ಆದರೂ ತೆಗೆದು ಕೊಳ್ಳಲಿ ಎಂಬ ಆಸೆ..ಆದರೆ ಪಗಾರ ನಾಲ್ಕಂಕಿಯೂ ಇಲ್ಲದ ದಿನಗಳವು...ಅಡಚಣಿಗೆ ಮಾಧ್ಯಮಿಕ  ಶಿಕ್ಷಕರ ಸಹಕಾರ ಸಂಘದಿಂದ ಸಾಲ ಪಡೆವ ಸೌಲಭ್ಯವಿತ್ತು..ಆದರೆ ನಂತರ  ಐದು ಜನರ ಸಂಸಾರ ತೂಗಿಸಿಕೊಂಡು ಅಷ್ಟು ಸಾಲ ಮರುಪಾವತಿಸುವದೂ ಸುಲಭದ ಮಾತಾಗಿರಲಿಲ್ಲ...ಅಂತೂ ಅವರ ಲೂನಾದ ಕನಸು, ಕನಸಾಗಿಯೇ ಮುಂದುವರಿಯಿತು...ನಾನೂ ಕುಮಠಾದಲ್ಲಿ BEd ಮುಗಿಸಿಬಂದು ನೌಕರಿಗೆ ಸೇರಿಕೊಂಡ ಮೇಲೆ ನಮ್ಮ ಕನಸುಗಳು ಬಣ್ಣಕಟ್ಟತೊಡಗಿದವು.. ಆರೋಗ್ಯ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿ ನಡೆಯುವದು ಹೆಚ್ಚು ತ್ರಾಸದಾಯಕ ಅನಿಸಿದಾಗ ನಾನು ಗಾಡಿ ಖರೀದಿಸಲು ಆಗ್ರಹ ಪಡಿಸ ತೊಡಗಿದೆ..ಮುಂಬೈಗೆ ಒಮ್ಮೆ ಹೋಗಿ ಬಂದಮೇಲೆ ಆಗ ಬಹುದಾದ ಖರ್ಚು_ ವೆಚ್ಚ ನೋಡಿ ನಂತರ ಗಾಡಿ ಎಂದು ಅವರು  ಹಟ ಹಿಡಿದಾಗ ನಾನೇನೂ  ಮಾಡುವ ಹಾಗೆ ಇರಲೇಯಿಲ್ಲ...ಒಪ್ಪಲೇಬೇಕಾದ ಅನಿವಾರ್ಯತೆ.
             ನಾವು ಒಂದು ಬಗೆದರೆ ದೈವ ಇನ್ನೊಂದು ಬಗೆಯಿತು..ಮುಂಬೈಗೆ ಹೋದವರು ಮರಳಿಬರಲಿಲ್ಲ...ಕೊನೆಗೂ ಅವರ  ಪುಟ್ಟ ಕನಸು ಕನಸಾಗಿಯೇ ಉಳಿಯಿತು...
        ‌‌     ಆ ಮಾತಿಗೆ ಮೂವತೈದು ವರ್ಷ...ಪರಿಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ..ಮಕ್ಕಳು ಶೃದ್ಧೆಯಿಂದ ಓದಿ ಅತ್ಯುತ್ತಮ ನೌಕರಿಯಲ್ಲಿದ್ದಾರೆ...ಎಲ್ಲರೂ ಎರಡೆರಡು ಕಾರುಗಳನ್ನಿಟ್ಟುಕೊಂಡಿದ್ದಾರೆ...ದೇಶ ವಿದೇಶ ಎಗ್ಗಿಲ್ಲದೇ ಸುತ್ತಿದ್ದಾರೆ..ನನ್ನನ್ನೂ ಸಾಕು ಸಾಕೆನಿಸುನಿಸುವಷ್ಟು ಸುತ್ತಿಸಿದ್ದಾರೆ...ಆದರೆ ಯಾವುದೇ ಒಂದು ಗಾಡಿಯಮೇಲೆ ಅವರ ವಯಸ್ಸಿನವರು ಕಂಡರೆ ನನ್ನವರ ಅಪೂರ್ಣ ಕನಸು ಕಣ್ಣು ತುಂಬಿ ಬಿಡುತ್ತದೆ...ಮಕ್ಕಳ high end ಕಾರುಗಳಲ್ಲಿ ತೇಲಿದಂತೆ ಹೋಗುವಾಗಲೆಲ್ಲ ನನ್ನವರು ಏದುಸಿರು ಬಿಡುತ್ತಾ ಕರ್ನಾಟಕ ಹೈಸ್ಕೂಲ್ ದಿಬ್ಬ ಏರುತ್ತಿರುವ ದೃಶ್ಯ ನೆನಪಾಗಿ ಸಂಕಟವಾಗುತ್ತದೆ...
                ನಾವೇನೂ ಅಸಾಧ್ಯವೆನಿಸಬಹುದಾದ ಕನಸು ಕಂಡಿರಲಿಲ್ಲ..ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ...ಒಂದು ಅತಿ ಸಾದಾ ಅನಿಸುವಂಥ ಪುಟ್ಟ ಕನಸು...ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನೇ ಕಂಡಿದ್ದ ಜೀವವೊಂದು ಮುಂದಿಟ್ಟ ಪುಟ್ಟದೊಂದು ಆಸೆ...
      ‌       ನನಗೆ ಈಗ ಬದುಕಿನ ಬಗ್ಗೆ ಪ್ರಶ್ನೆಗಳಿಲ್ಲ..ಗೊಂದಲಗಳಿಲ್ಲ...
ತಕರಾರುಗಳಂತೂ ಮೊದಲೇಯಿಲ್ಲ...ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ದೊರೆತಿದೆ....ಅದಕ್ಕಾಗಿ  ದೈವಕ್ಕೆ ನಾನು ಜೀವನಪರ್ಯಂತ ಋಣಿ..ಆದರೆ
ಇದರಲ್ಲಿ ಸ್ವಲ್ಪು  ಕಡಿತ ಮಾಡಿಯಾದರೂ ನನ್ನವರ ಆ ಪುಟ್ಟ ಬಯಕೆ ಈಡೇರಿಸಿದ್ದರೆ ಎಂಬ ಮಾತು ಮಾತ್ರ ನಾನಿರುವವರೆಗೂ ನನ್ನನ್ನು ಬಿಡುವಂತೆ ಕಾಣುವದಿಲ್ಲ...

Wednesday 19 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..
       
ಅದೊಂದು ಕಾಲ...ಇದೂ ಒಂದು ಕಾಲ....

            ಸುಮ್ಮನೇ ಫೇಸ್ ಬುಕ್ ನೋಡುತ್ತ ಕುಳಿತಿದ್ದೆ...ಅದೊಂದು ಪುಟ್ಟ ಪ್ರಪಂಚದಂತೆ ಕಂಡರೂ  ವ್ಯಾಪ್ತಿ ಬಹು ದೊಡ್ಡದು...ವಿಕ್ರಮನ ಹೆಗಲನೇರಿದ ಬೇತಾಳದಂತೆ... ಇದಿಲ್ಲದಿದ್ದಾಗ ಹೇಗಿದ್ದೆವು? ಎಂದು ನನಗೆ ನಾನೇ ಕೇಳಿಕೊಂಡೆ..' ಹೆಚ್ಚು ಚನ್ನಾಗಿ" ಎಂದು ಉತ್ತರ ತಕ್ಷಣ ಬಂತು...internet ಬಳಕೆ ಒಂದು ಅತ್ಯದ್ಭುತ ಆವಿಷ್ಕಾರ. ಅದರಲ್ಲಿ ಎರಡು ಮಾತಿಲ್ಲ..ಇಡಿ ಜಗತ್ತನ್ನೇ ಅಂಗೈಯಲ್ಲದು  ಸೆರೆ ಹಾಕಿದೆ...ಜಗತ್ತಿನ ಇಂಚಿಂಚು ಮಾಹಿತಿಯೂ ನಡೆದ ಸ್ಥಳದಷ್ಟೇ ಕ್ಷಿಪ್ರವಾಗಿ ಕಣ್ಣೆದುರು ತಡವಿಲ್ಲದೇ ತೆರೆದುಕೊಳ್ಳುತ್ತದೆ...ಆದರೆ ದೀಪದ ಬುಡದಲ್ಲೇ ಕತ್ತಲೆಯೂ ಉಂಟು...ಅದರ ಇನ್ನೊಂದು ಮುಖ ಅಷ್ಟೊಂದು ಆಕರ್ಷಕವಾಗಿರದೇ ಸ್ವಲ್ಪು ಮಟ್ಟಿಗೆ  ಕರಾಳವಾಗಿದೆ ಎಂಬುದೂ ಅಷ್ಟೇ ಸತ್ಯ...ಆದರೆ ಸಿಗರೇಟು ಪ್ಯಾಕ್ಮೇಲೆ ಚಂದ ಚಂದದ  ಸಿಗರೇಟು ತೋರಿಸಿ  " smoking is injurious to health" ಅನ್ನುವದನ್ನು ದುರ್ಬೀನು ಹಿಡಿದೇ ನೋಡುವಂತೆ ಬರೆದಿರುವದಿಲ್ಲವೇ ಹಾಗೆ
ಕಂಡೂ ಕಾಣದಂತೆ ಅದು ಇರುತ್ತದೆ..ನಮ್ಮ ಕ್ರಿಯಾಶಕ್ತಿ ಕ್ರಮೇಣ ಜಡವಾಗಿ ಕೈ ಕೊಡುತ್ತದೆ...ತಾಸುಗಟ್ಟಲೇ ಕುಳಿತೇ ಇರುವದರಿಂದ ಸೋಮಾರಿತನ ವೃದ್ಧಿಸುತ್ತಿದೆ...ಮನೆಯ ಜನರೊಂದಿಗೇನೇ ಸಂಪರ್ಕ,ಸಂವಹನ ಕಡಿಮೆಯಾಗುತ್ತದೆ..ಒಂದು ಫ್ಲೋರ್ದಿಂದ  ಇನ್ನೊಂದು ಫ್ಲೋರ್ಗೆ ಮಾತಿನ ಬದಲು ಸಂದೇಶಗಳು ರವಾನೆಯಾಗುವದೇ ಹೆಚ್ಚು.....ಮೆದುಳು ಚುರುಕಾದಷ್ಟೂ ಹೃದಯ ಮಿಡಿತ ಮಂದವಾಗುತ್ತದೆ...ಎಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ...ಆದರೆ ಒಳಗೆಲ್ಲೋ ಎಲ್ಲವೂ ಸೋರಿಹೋದ ಹತಾಶೆ ಕಾಣುತ್ತಿದೆ..
ಇದೆಲ್ಲವೂ ಪರ್ಯಾಯವಾಗಿ fb ಯಲ್ಲಿ  ಪ್ರದರ್ಶಿತವಾಗುತ್ತಿರುವದು
ಗುಟ್ಟಾಗಿಯೇನೂ ಉಳಿದಿಲ್ಲ...ಜನರಲ್ಲಿ ಸಹನಶಕ್ತಿ ಕಡಿಮೆಯಾಗಿ
ಅಸಹನೆ,ಅಪನಂಬಿಕೆ,ಅವಿಶ್ವಾಸ,ಅಪರಿಹಾರ್ಯ ಸಮಸ್ಯೆಗಳು ತಲೆ ಎತ್ತುತ್ತಿವೆ...ಸಣ್ಣ ಸಣ್ಣ ವಿಷಯಗಳನ್ನು ಹಿಗ್ಗಿಸುವದು,ವಾದಗಳನ್ನು,ಬೆಳೆಸುವದು,ಅನವಶ್ಯಕ ಅಪನಂಬಿಕೆಗಳು ಹೆಚ್ಚಾಗಿ ಉದ್ವೇಗದಲ್ಲಿ ಸಲ್ಲದ ನಿರ್ಣಯಕ್ಕೆ ಬಂದು ಮನಸ್ಸು ಕಹಿ ಮಾಡಿಕೊಳ್ಳುವದು ಹೆಚ್ಚಾಗಿದೆ..ಇವೆಲ್ಲ ಇಲ್ಲದ ಕಾಲಕ್ಕೆ ಎಲ್ಲವೂ ಸರಿಯಿತ್ತು ಎಂದೇನೂ ನಾನು ಹೇಳುವದಿಲ್ಲ..ಆದರೆ ಹೆಚ್ಚು ಜಿದ್ದಿಗೆ ಬೀಳದೇ ಸ್ವಲ್ಪೇ ಹೊತ್ತಿನಲ್ಲಿ ಸರಿ ಪಡಿಸಿಕೊಳ್ಳುವ ತಾಳ್ಮೆಯಿತ್ತು.. .ಅನಿವಾರ್ಯತೆ ಯಿತ್ತು..
'ಕಹಿ' ಹೆಚ್ಚು ಹೊತ್ತು ಕಹಿಯಾಗಿಯೇ ಉಳಿಯುತ್ತಿರಲಿಲ್ಲ ಅನಿಸುತ್ತದೆ..
    ‌‌‌‌‌    ಅದೇ fb ನೋಡುತ್ತಿದ್ದೆ ಅಂದೆನಲ್ಲ...ಅದರಲ್ಲಿಯ ಕೆಲವು post ಗಳನ್ನು ನೋಡಿದಾಗ ಹೀಗೆಲ್ಲ ವಿಚಾರಬಂತು..ಬಾಲ್ಯದ ಅಮಾಯಕತೆ ಕಳೆದುಕೊಂಡು , ನನ್ನನ್ನು ನಾನೇ ಅರ್ಥೈಸಿಕೊಳ್ಳ ತೊಡಗಿದಾಗಿನ ಫಲಿತಾಂಶವಿದು...ಬಹುಶಃ ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಅನಿಸುವಂಥದ್ದೇ...
      ‌‌‌ಎರಡು ತಾಸಿನ ಹಿಂದೆ
ನಾನೊಂದು post ಹಾಕಿದೆ,

_ಅವನು  ಬಸವ...
_ ಅವಳು ಕಮಲ...
_ಕಮಲ ಬಸನ
ವನ  ತಂಗಿ..

           ಇಷ್ಟೇ ನಾನು ಬರೆದದ್ದು..ತಾಸೊಂದರಲ್ಲಿ ಅರವತ್ತರಷ್ಟು ಜನ ಆ ದಿನಗಳಿಗೆ ಹೋಗಿ ಆ ಇಡೀ ಪಾಠವನ್ನು,ಆ ಪಠ್ಯದ ಕವಿತೆಗಳನ್ನು ಹಾಕಿ ಅಂದಿನ ದಿನಗಳನ್ನು ಮರು ಜೀವಿಸಿದ್ದಾರೆ..ಮೂಲಾಕ್ಷರಗಳ ಕಲಿಕೆ ಮುಗಿದ ಮೇಲೆ ವಾಕ್ಯ ರಚನೆಗಳನ್ನು ಪರಿಚಯಿಸುವಾಗಿನ ಕನಿಷ್ಠ ಶಬ್ದ ಬಳಕೆಯ ವಾಕ್ಯಗಳು ಅವು..
ಅದರಲ್ಲಿ ಜಾಣತನವಿಲ್ಲ..
ಹೆಗ್ಗಳಿಕೆಯಿಲ್ಲ...ನೆನಪಿರಲೇ ಬೇಕೆಂಬ ಅಂಶಗಳಿಲ್ಲ..
ಆದರೆ ಅಮಾಯಕ ಬಾಲ್ಯದ ಮುಗ್ಧತೆಯಿದೆ..ಕಲಿಕೆಯ
ಜಂಭವಿದೆ...ಕಲಿತ ಆನಂದವಿದೆ...ಸುಂದರ ನೆನಪಿನ  ಭಂಡಾರವೇ ಇದೆ..ಅದಕ್ಕೊಂದು ಆತ್ಮೀಯ ಸಂವೇದನೆಯಿದೆ...ಅಂತೆಯೇ ಅರವತ್ತು/ ಎಪ್ಪತ್ತರ ವಯಸ್ಸಿನವರೂ ಚಿಕ್ಕವರಾಗಿ, ಬಾಲ್ಯಕ್ಕೆ ಮರಳಿ ಸ್ಪಂದಿಸಿದ್ದಾರೆ..ಆನಂದಿಸಿದ್ದಾರೆ....
         ನಾವು ಎಷ್ಟೇ ದೊಡ್ಡವರಾಗಲೀ ,ಎಷ್ಟೇ ಮುಖವಾಡ ಧರಿಸಲೀ, ಅದು ಹೇಗೋ ಒಮ್ಮೊಮ್ಮೆ ಅನಾವರಣ ವಾಗಿ ಗೊತ್ತಿಲ್ಲದೇ ಬತ್ತಲೆಯಾಗಿ ಬಿಡುತ್ತೇವೆ...ಹಾಗೆ ಮಾಡಿಸುವದೊಂದು ಶಕ್ತಿ  ಅದೆಲ್ಲೋ ಅದಮ್ಯವಾಗಿದ್ದು ಕಾಲ ಬಂದಾಗ ಹೊರಬರುತ್ತದೆ...
            ಒಟ್ಟಿನಲ್ಲಿ ಇದುವರೆಗಿನ ಬದುಕಿನಲ್ಲೊಂದು  ಸುತ್ತು ಹೋಗಿ ಬಂದಾಗ "ಮಾನಸಿಕ google search" ನಲ್ಲಿ
ನನಗೆ ಅನಿಸಿದ ಭಾವನೆಗಳಿವು...ನನ್ನೊಡನೆ ಬಾಲ್ಯಕ್ಕೆ ಮರಳಿದ ಎಲ್ಲರಿಗೂ ಧನ್ಯವಾದಗಳು/ ಅಭಿನಂದನೆಗಳೂ ಸಹ..

Sunday 16 June 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ ಅಲ್ಲ...
         
             ಮಧ್ಯಾನ್ಹ ಹನ್ನೆರಡರ ಉರಿಬಿಸಿಲು..ಸೂರ್ಯನಿಗೂ ಬೆವರಿಡುವ ಸಮಯ...ಕೂದಲಿಲ್ಲದ ಬಕ್ಕನೆತ್ತಿಯ ಮೇಲೆ ಇಪ್ಪತೈದು kg ಅಕ್ಕಿಯ ಮೂಟೆ ಹೊತ್ತು ತಂದು ಪಡಸಾಲೆಯಲ್ಲಿ ಇಳಿಸಿ ನಾಲ್ಕು ಬೆರಳುಗಳಿಂದ ಬೆವರು ಗೀರಿ ತೆಗೆದರೆ ಒಂದು ಲೋಟ ತುಂಬಬೇಕು..ಯಾರಿಗೋ ಒಬ್ಬರಿಗೆ ಐದು/ಹತ್ತು ರೂಪಾಯಿ ಕೂಲಿ  ಕೊಟ್ಟರೆ  ಮನೆವರೆಗೂ ತರಬಹುದಾದದ್ದಕ್ಕೂ ಶ್ರಮ ಪಡುವ ಅನಿವಾರ್ಯತೆ ಆಗ ನಮ್ಮಪ್ಪನಿಗೆ...ಎಂಟು ಮಕ್ಕಳು,ಅಮ್ಮ - ಅಪ್ಪ- ಅಜ್ಜಿ ಹನ್ನೊಂದು ಜನರ ಸಂಸಾರದಲ್ಲಿ ' ಉಳಿತಾಯ' ಬಿಟ್ಟರೆ ಬೇರೆ ಇನ್ನೊಂದು ಪದಕ್ಕೆ ಮಹತ್ವವೇ ಇಲ್ಲ ಎಂಬಂತಿದ್ದ ಬದುಕು...ಕಾಯಂ ಅಲ್ಲದ ಪುಟ್ಟ ನೌಕರಿ..ದೊಡ್ಡ ಪೋಸ್ಟನಿಂದ wholesale ನಲ್ಲಿ  ಕಾರ್ಡು,ಇನ್ಲ್ಯಾಂಡ್, ಪೋಸ್ಟ cover ಗಳು,ರೆವಿನ್ಯೂ stamps, money order forms ನಂಥ ಎಲ್ಲ  ಸರಕು- ಸಾಮಗ್ರಿ ತಂದು ಕಮೀಶನ್ ಮೇಲೆ ಊರಲ್ಲಿ ಕೊಡುವದು...ಪುಟ್ಟ ಒಂದು ಕೋಣೆಯ ಮನೆ, ಒಂದಿಷ್ಟು ಜಮೀನು ಇದ್ದುದರಿಂದ ಹೊಟ್ಟೆ ಪಾಡಿಗೆ ಚಿಂತೆಯಿಲ್ಲದಿದ್ದರೂ ಸ್ವಲ್ಪು ತಲೆಗೆಳೆದರೆ ಕಾಲಿಗೆ,ಕಾಲಿಗೆಳೆದರೆ ತಲೆಗೆ ಸಾಲದ ಬದುಕು...ಆದರೆ ಕೊರತೆಗಳ  ಬಗ್ಗೆ ಒಂದೇ ಒಂದು ದಿನವೂ ಮನೆಯಲ್ಲಿ ಮಾತುಗಳಾದ ನೆನಪು ನನಗಿಲ್ಲ..ಸ್ವಲ್ಪು ಹೆಚ್ಚು ,ಸ್ವಲ್ಪು ಕಡಿಮೆ ಎಲ್ಲರದೂ ಅದೇ ಸ್ಥಿತಿಯಿತ್ತೋ,ಬದುಕೆಂದರೆ ಇಷ್ಟೇ ಎಂಬುದು ಪೂರ್ವ ಗ್ರಹಿತವಿತ್ತೋ ಇಂದಿಗೂ ಒಗಟು ನನಗೆ.ಇಷ್ಟಾದರೂ
ಮಧ್ಯಾಹ್ನದ ವೇಳೆ ಯಾರೇ ಪರೂರಿಂದ ಬರಲಿ ಅವರು ನಮ್ಮನೆಯಲ್ಲಿ ಉಣಲೇಬೇಕು ಎನ್ನುವಷ್ಟು ಔದಾರ್ಯ...
            ಆಗ ಸೌದೆ ಒಲೆಗಳ ಕಾಲ...ಕಡಿದ ಕಟ್ಟಿಗೆ ತುಂಬಾ ತುಟ್ಟಿ ...ಮರದ ಬೊಡ್ಡೆಗಳನ್ನು ಖರೀದಿಸಿ ಬೆಳಿಗ್ಗೆ ಎರಡು ಗಂಟೆ ಕಟ್ಟಿಗೆ ಕಡಿಯುವ ಕೆಲಸ..ಚಹ ಕುಡಿದು,ಬಾಯಲ್ಲಿ ಎಲೆ,ಅಡಿಕೆ ತುಂಬಿ ನಮ್ಮಪ್ಪ 'ರಾಮ'ಣ್ಣ 'ಪರಶು ರಾಮಣ್ಣ'ನಾಗುತ್ತಿದ್ದ...ನಮ್ಮ ಕೆಲಸ ಒಡೆದು ಗುಡ್ಡೆ ಹಾಕಿದ ಕಟ್ಟಿಗೆಗಳನ್ನು ಚಾಚಿದ ಕೈಗಳ ಮೇಲೆ ಬೇರೊಬ್ಬರಿಂದ ಏರಿಸಿಕೊಂಡು ಸೌದೆ ರೂಮಿಗೆ ಸಾಗಿಸುವದು...ಎಳೆಯ ಕೈಗಳು,ಕಟ್ಟಿಗೆ ಚುಚ್ಚಿ ಇನ್ನೇನು ರಕ್ತ ಚಿಮ್ಮತ್ತೇನೋ ಅನ್ನುವಂತಾದ ಮೇಲೆಯೇ ವಿರಾಮ..ಕೈಗಳ ಮೇಲೆ ತಣ್ಣೀರು ಸುರಿದುಕೊಂಡು ಕೊಬ್ಬರಿ ಎಣ್ಣೆ ಸವರಿಕೊಳ್ಳುತ್ತಿದ್ದ ನೆನಪು ಈಗಲೂ...
           ‌ ನಂತರ ದೇವರ ಪೂಜೆ ಮುಗಿಸಿ ಒಂದು ಸುತ್ತು ಹೊರಗೆ ಹೋಗಿ ಬಂದರೆ ಕೈಗಳಲ್ಲಿ ಕನಿಷ್ಟ ಒಂದೆರಡು ಪುಸ್ತಕಗಳು ಇರಲೇ ಬೇಕು...ಖರೀದಿಯಲ್ಲ...ಕೈಗಡ...ಅವನ ಪುಸ್ತಕ ಪ್ರೀತಿ  ಜನ ಜನಿತವಾದ್ದರಿಂದ  ಪರಿಚಯಸ್ಥರು  ತಾವೇ ಕರೆದು ಪುಸ್ತಕ ಕೊಡುತ್ತಿದ್ದರು... ಕುರ್ಚಿಗೆ
ಒರಗಿ ಕುಳಿತು ಸಾರಸ್ವತ ಹೊಕ್ಕರೆ  ಅದೊಂದು ರೀತಿ ಸಮಾಧಿಯೇ...
       ೧೯೦೯ ರಲ್ಲಿ ಹುಟ್ಟಿ ೨೦೦೦ ರದಲ್ಲಿ ೯೦ ನೇ ವರ್ಷಕ್ಕೆ ಸತ್ತರೂ ಒಂದೇ ರೀತಿಯ ಬದುಕು..ಶುದ್ಧ ಖಾದಿಧಾರಿ...ಮನೆತುಂಬಾ ಗಾಂಧಿ,ನೆಹರೂ,ರವೀಂದ್ರನಾಥ ಟ್ಯಾಗೋರ್,ಚಿತ್ತರಂಜನ ದಾಸ,ಲಾಲಬಹದ್ದೂರ ಶಾಸ್ರಿಗಳಂಥ ದೇಶ ಭಕ್ತರ ಫೋಟೋಗಳು..ಮಾತಿನಲ್ಲೂ ನೇರ,ದಿಟ್ಟ...ತಮಾಷೆಗೂ ಕಡಿಮೆ ಇರಲಿಲ್ಲ...ಡಾಕ್ಟರರ ಬಳಿ ಹೋದಾಗ,ಏನಾಗಿದೆ ಎಂದವರು ಕೇಳಿದರೆ," ನೀವು ತಾನೇ ಡಾಕ್ಟರ್.. ನೀವು ಹೇಳಬೇಕು..ನನಗೆ ಗೊತ್ತಿದ್ದರೆ ನಿಮ್ಮ ಬಳಿ ಏಕೆ ಬರುತ್ತಿದ್ದೆ? " ಎಂಬ ಉತ್ತರ...
              ಅವನು ಓದಿದ್ದು ಏಳನೇ ಇಯತ್ತೆ...ಇಂಗ್ಲಿಷ ,ಕನ್ನಡ ತುಂಬ ಚೊಕ್ಕ...ಒಂದೇ ಒಂದು ತಪ್ಪು ಸಾಧ್ಯವೇ ಇಲ್ಲ...ನಾವು ಹಾಕಿದ ಪತ್ರಗಳಲ್ಲಿ ತಪ್ಪುಗಳೇನಾದರೂ ಇದ್ದರೆ ಅವುಗಳನ್ನು ತಿದ್ದಿ ತಂತಿಗೆ ಸಿಕ್ಕಿಸಿಟ್ಟು ನಾವು ಊರಿಗೆ ಹೋದಾಗ ಮೊದಲ ಕೆಲಸ
ಅದನ್ನು ಮುಖಕ್ಹಿಡಿದು ಮಂಗಳಾರತಿ ಮಾಡುವದು....ಅವನಿಗೆ ಬರೆಯುವಾಗ ತಪ್ಪಾದರೆ ಎಂಬ ಗಾಬರಿಯಿಂದಲೇ
ಹೆಚ್ಚು,ಹೆಚ್ಚು ತಪ್ಪಾಗುತ್ತಿದ್ದುದೂ ಉಂಟು...
            ಪರೋಪಕಾರದ ಆಯ್ಕೆಯ ಪ್ರಸಂಗಬಂದರೆ  ಯಾವಾಗಲೂ ಪರರ ಪರ...ಮನೆಮಂದಿ ಕೊನೆಗೆ...ವಿಪರೀತ ಅಂತಃಕರುಣಿ...ಆದರೆ ಕೃತಿಯಿಂದ..ತೋರಿಕೆ ಶಬ್ದ ನಿಘಂಟುವಿನಲ್ಲೇ ಇರಲಿಲ್ಲ...ಒಂದೇ ಒಂದು ಸಲ ನಮ್ಮನ್ನು ಅಪ್ಪಿ ಮುದ್ದಾಡಿದ ನೆನಪಿಲ್ಲ...ಆದರೆ ಯಾವ ಮಕ್ಕಳಿಗಾದರೂ ಅಜಾರಿಯಾದರೆ ಊಟ ಬಿಟ್ಟು ಓಡಾಡಿದ್ದು ಕಂಡ ಅನುಭವಗಳಿವೆ.. ಅತಿ ಸಲಿಗೆ ಮಕ್ಕಳಿಗೆ ಸಲ್ಲದು ಎಂಬ ನಿಲುವು...ಮಾತು ಜೋರು ಅನಿಸುತ್ತಿದ್ದರೂ ಅದರ ಹಿಂದೆ ಕಳಕಳಿ ಎದ್ದು ಕಾಣುವಷ್ಟು ಪಾರದರ್ಶಕ...ತನಗೆ ಎಂಬತ್ತಾದರೂ ತನ್ನ ಹಿರಿಯರ ಮುಂದೆ ಚರ್ಚಿಸದೇ ಒಂದೇ ಒಂದು ನಿರ್ಣಯ ತೆಗೆದುಕೊಂಡವನಲ್ಲ..ಎದುರು ಆಡಿದವನಲ್ಲ..
ಇದ್ದಾಗ ಬಿಡಿ,ಸತ್ತ ಮೇಲೂ ಹಿರಿಯರ ' ಶ್ರಾದ್ಧ' ಕರ್ಮಗಳನ್ನು ಮಾಡುವಾಗ ತನ್ನೆಲ್ಲ ಶೃದ್ಧೆಯಿಂದ ಎಲ್ಲ ಅಡಚಣಿಗಳನ್ನು ಪಣಕ್ಕಿಟ್ಟು ದೇವರಾರಾಧನೆಯ ರೂಪವನ್ನದಕ್ಕೆ ಕೊಟ್ಟು ಬಿಡುತ್ತಿದ್ದ..ಅದಕ್ಕೆ ಹಣ ಜೋಡಿಸಿ ಇದ್ದುದೆಲ್ಲ ಖರ್ಚು ಮಾಡಿ, ಜನರನ್ನು ಕೂಡಿಸಿ ಆಚರಿಸಿದಾಗ ನಾವು ತಮಾಷೆ ಮಾಡುತ್ತಿದುಂಟು, "ಇದು ಸತ್ತವರದಲ್ಲ.. ಇದ್ದವರ ಶ್ರಾದ್ಧ" ಎಂದು...
  ‌‌‌           ಸ್ವಾವಲಂಬನೆ ಅವನ ಇನ್ನೊಂದು ಹೆಗ್ಗುರುತು. ಸಾಯುವ ಮೊದಲಿನ ಕೆಲ ತಿಂಗಳು ಬಿಟ್ಟರೆ ತನ್ನ ಬಟ್ಟೆ ತಾನೇ ಒಗೆದು ಒಣಗಿಸಿ,ಇಟ್ಟುಕೊಳ್ಳುತ್ತಿದ್ದ..ಎಂದಿಗೂ ತನ್ನ ಕೆಲಸ ತಾನೇ ಮಾಡಿಕೊಂಡರೇನೆ  ಅವನಿಗೆ ತೃಪ್ತಿ..
          ಹೀಗೆ ಸರಳ,ಸಹಜ,ಆಡಂಬರರಹಿತ,ಪರೋಪಕಾರದ,ಬದುಕು ಬದುಕಿ ನಮಗೆ  ದೃಷ್ಟಾಂತವಾದ ನಮ್ಮ ಅಪ್ಪನ ನೆನಪು ಒಂದೇ ದಿನವಲ್ಲ...ನಾವಿರುವವರೆಗೂ ನಿರಂತರ...

Friday 14 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..

"ಕಿ(ಇ)ತನಾ ಬದಲ್ ಗಯಾ  ಇನ್ಸಾನ್"  ..     
             
               ಮೋಸ, ವಂಚನೆ ಮನುಷ್ಯನಷ್ಟೇ ಹಳೆಯದು......ಆದರೆ  ಅದರ ರೀತಿ ಕಾಲ ಕಾಲಕ್ಕೆ  ಬೇರೆಬೇರೆ...'ಮೈಯೆಲ್ಲಾ ಕಣ್ಣಾಗಿರು'- ಎಂಬ ನುಡಿಗಟ್ಟು ಬಂದದ್ದೇ ಇಂಥವರನ್ನು ನೋಡಿಯೇ..ಮೊದಲು ಇಷ್ಟೊಂದು ಪ್ರಕರಣಗಳು ಇರಲಿಲ್ಲ...ಎಲ್ಲೋ ಅಲ್ಲೋ ಇಲ್ಲೋ ಒಂದೊಂದು ಪ್ರಕರಣ ಕೇಳುತ್ತಿದ್ದೆವು....ಬಹುಶಃ ರೆಡಿಯೋ,ಟೀವಿ,ಹತ್ತಾರು ದಿನಪತ್ರಿಕೆಗಳಿಲ್ಲದ್ದೂ ಪ್ರಮುಖ ಕಾರಣವಿರಬಹುದು...ಅಂಥ ಪ್ರಕರಣಗಳು ಸ್ಥಾನಿಕ ಮಹತ್ವ ಪಡೆದು,ಒಂದೆರಡು ದಿನಗಳ  ವರೆಗೆ ಮಾತ್ರ ಅವರಿವರ ಬಾಯಿಗೆ  ಬಿದ್ದು ನೆನಪಿನಾಳಕ್ಕೆ ಸೇರಿ ಕ್ರಮೇಣ ಮರೆಯಾಗಿಬಿಡುತ್ತಿದ್ದವು..ಈಗ ಸುದ್ದಿ ಮಾಧ್ಯಮಗಳು,ವೃತ್ತ ಪತ್ರಿಕೆಗಳು,ಯಾವುದೇ ವಿಷಯವನ್ನು ಕ್ಷಣಮಾತ್ರದಲ್ಲಿ  ವಿಶ್ವದ ತುಂಬ ಏಕಕಾಲಕ್ಕೆ ಬಿತ್ತರಿಸಿ ಮಿಂಚಿನ ವೇಗದಲ್ಲಿ
ಜನಸಮೂಹಕ್ಕೆ ತಿಳಿಸುತ್ತವೆ...
           ‌ಈಗ ಇಪ್ಪತೈದು ವರ್ಷಗಳ ಹಿಂದೆ "ಸಂಚಯನಿ" ಎಂಬ ಹಣಕಾಸು ಸಂಸ್ಥೆಯಲ್ಲಿ ನಾನೂ ಹಣ ಕಳೆದುಕೊಂಡಿದ್ದೆ..ಗೆಳತಿಯೊಬ್ಬರ ಅಗ್ರಹಕ್ಕೆ ಮಣಿದು ಮನಸ್ಸಿಲ್ಲದೇ ಮಾಡಿದ ಅನಧಿಕ್ರತ ಉಳಿತಾಯ ಯೋಜನೆಯಾಗಿತ್ತದು...ನಂತರ ತಾತ್ಕಾಲಿಕವಾಗಿ ಧಿಡೀರ್ ಎಂದು ಗ್ರಹೋಪಯೋಗಿ ಸಾಮಾನುಗಳನ್ನು ಕಡಿಮೆ ದುಡ್ಡಿಗೆ ಕೊಡುವದೇನೋ scheme ಶುರುವಾಗಿ ಹಣ ಕಳೆದುಕೊಳ್ಳುವದು ಸಾಮಾನ್ಯ ವಾಯಿತು..ಮೊದಮೊದಲು ಅತ್ಯಂತ ಪ್ರಾಮಾಣಿಕತೆಯಿಂದ ವ್ಯಾಪಾರ ನಡೆಸಿ, ಜನರ ವಿಶ್ವಾಸ ಗಳಿಸಿ ಅವರು ಹೆಚ್ಚು ಹೆಚ್ಚು ಹಣ ಹೂಡಿ ಬ್ರಹತ್ ಪ್ರಮಾಣದಲ್ಲಿ  ಸಂಗ್ರಹವಾದ ಒಂದೆರಡು ದಿನಗಳಲ್ಲಿ ರಾತ್ರೋರಾತ್ರಿ ಅಂಗಡಿಗೆ ಬೀಗ ಬೀಳುತ್ತಿತ್ತು.... ಭಂಡರು, ಧೈರ್ಯವಂತರು,ಗಟ್ಟಿಗರು ಆ ಮನೆ ಬಾಗಿಲ ಕೀಲಿ ಮುರಿದು ಇದ್ದ ಬಿದ್ದ ಸಾಮಾನುಗಳನ್ನು ಮನೆಗೆ ಸಾಗಿಸುವ ಪ್ರಕರಣಗಳೂ ನಡೆದವು..ಬೆಂಗಳೂರಿನಂಥ ಮಹಾನಗರಗಳಲ್ಲಂತೂ ಅನಧಿಕೃತ ,ಚೀಟಿ ವ್ಯವಹಾರಗಳಿಗೆ  ಯಾವುದೇ ಅಂಕುಶವೇ ಇಲ್ಲ..ಯಾವು ಯಾವುದೋ ಮೂಲೆಯಿಂದ ಕನಸುಗಳನ್ನು ಬೆನ್ನೇರಿಸಿಕೊಂಡು ಬಂದ ಬಡ ಕುಟುಂಬಗಳು ಇಂಥವಕ್ಕೆ ಮೊದಲ ಬಲಿ...ತಮ್ಮವೇ ಕಾರಣಕ್ಕೆ ಯಾರಿಗೂ ಹೇಳದೇ ಗಳಿಸಿದ್ದರಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ,ಮುರುಕು ಧರ್ಮಶಾಲೆಯಲ್ಲಿ ಒರಗಿ ಕನಸುಕಾಣುವ ತಿರುಕನಂತೆ  ಆನೆಯಿಂದ ವರಮಾಲೆ ಹಾಕಿಸಿಕೊಂಡು ಕನಸಿನಲ್ಲಿಯೇ ರಾಜರಾಗಿ
ಸುಖಿಸುವ ಬಡಪಾಯಿಗಳಿಗೆ ಎಚ್ಚರವಾದಾಗ ಕಾಣುವದು ದಂಡೆತ್ತಿ ಬಂದ ಸಶಸ್ತ್ರ ಪಡೆಯೇ...
    ‌    ಯಾವುದೋ ರೀತಿ ಒಬ್ಬರ ಬಳಿ ದೊಡ್ಡ ಮೊತ್ತವಿದೆ ಎಂದು ಗೊತ್ತಾದರೆ ಸಾಕು ಅವರ ಮುಂದೆ ಹತ್ತು,ನೂರು ಬಿಡಿ ನೋಟುಗಳನ್ನೋ,ಹೊಲಸನ್ನೋ ತೋರಿಸಿ ಗಮನ ಬೇರೆಡೆ ಸೆಳೆದು ಹಣ ದೋಚಿ ಫರಾರಿಯಾಗುವವರದು ಮತ್ತೊಂದು ತಂಡ...ಒಂಟಿ ಮಹಿಳೆಯರಿಗೆ ಅಭದ್ರತೆ ಭಾವ ಬರಿಸಿ ,ಹೆದರಿಸಿ, ಚಿನ್ನಾಭರಣ ದೋಚುವವರದು ಮಗದೊಂದು ಗುಂಪು...ನಿಶ್ಚಿತ ಅವಧಿಯಲ್ಲಿ ದುಪ್ಪಟ್ಟು ಹಣದ ಆಸೆ ತೋರಿಸುವ ವಂಚನೆಯ ಜಾಲವೂ ಸಣ್ಣದೇನಿಲ್ಲ...ಗೆಳೆತನದ ನಾಟಕವಾಡಿ ಒಳ್ಳೆ ರೀತಿಯಲ್ಲೇ ಸಾಲ ಪಡೆದು ಕೊಟ್ಟ ಸಾಲ  ಗುಳುಂ ಮಾಡುವದಕ್ಕೂ ಸಾಕಷ್ಟು ಹಳೆಯ ಇತಿಹಾಸವಿದೆ...
            ನನಗೆ ಅಚ್ಚರಿಯನಿಸುವದು ಜನರು ಹಣದ ಆಮಿಷಕ್ಕೆ ಬಲಿಯಾಗಿ " ಆ ಬೈಲ್ ಮುಝೆ ಮಾರ್" ಎಂದು ತಾವೇ ವಂಚಕರಿಗೆ ಹಗ್ಗ ಕೊಟ್ಟು  ಕೈಕಟ್ಟಿಕೊಳ್ಳುವದು..ತಿಳಿದವರೇನಾದರೂ ನಾಲ್ಕು ಎಚ್ಚರಿಕೆ ಮಾತು ಹೇಳಿದರೆ ನಂಬದಿರುವದು ಅವರ ದಡ್ಡತನವೋ..ಅವರ ಕೆಟ್ಟ ನಸೀಬವೋ ಅರ್ಥ ವಾಗುವದಿಲ್ಲ...
          ‌‌‌ಉರಿವ ಕೆಂಡ ತನ್ನನ್ನು ಕೈಯಲ್ಲಿ ಹಿಡಿದವರು ಗೊತ್ತಿಲ್ಲದೇ ಹಿಡಿದ ಅಮಾಯಕರೇ/ ಅಲ್ಲವೇ ಎಂದು ನೋಡಿ ಸುಡುವದಿಲ್ಲ..ಸುಡುವದೇ ಅದರ ಗುಣಧರ್ಮ..ಎಚ್ಚರವಿರಬೇಕಾದವರು ನಾವು..
        ‌‌‌‌ಮೂರನೇಯವರಾಗಿ
ಮಾತನಾಡುವದು ಸುಲಭ..ಎಲ್ಲರಿಗೂ ಎಲ್ಲ ವಿವೇಚನೆ ಇದ್ದರೆ ಇಂಥ ಘಟನೆಗಳ ಪುನರಾವರ್ತನೆ ಖಂಡಿತ  ಆಗುವದಿಲ್ಲ...ಆಗುತ್ತಿವೆ ಎಂದಮೇಲೆ ನಾವೆಲ್ಲೋ ತಪ್ಪಿದ್ದೇವೆ... ಅಂತೆಯೇ ಒಮ್ಮಿಲ್ಲ ಒಮ್ಮೆ ಎಲ್ಲರ  ವಿಷಯಗಳಲ್ಲೂ ಇಂಥ ಪ್ರಮಾದಗಳು ಮರುಕಳಿಸುತ್ತಲೇ ಇವೆ..ಸ್ಮಶಾನ ವೈರಾಗ್ಯ,ಪ್ರಸವ ವೈರಾಗ್ಯ,ಅಭಾವ ವೈರಾಗ್ಯಗಳಂತೆ ಆ ಹೊತ್ತಿಗೆ ಬುದ್ಧಿ ಬಂದಂತಾಗಿ ಕ್ರಮೇಣ "ಎಲ್ಲಿದ್ದೀಯೋ ರಂಗ ಅಂದರೆ...ಮೊದಲು ಇದ್ದಲ್ಲೇ" ಅನ್ನುವ ಹಂತಕ್ಕೆ ನಾವಿರುವ ವರೆಗೂ ಬಹಳಷ್ಟು ಬದಲಾವಣೆ ಆಶಿಸುವಂತಿಲ್ಲ...
      ‌        ನಿನ್ನೆ  ನಡೆದ ಒಂದು ಬಹತ್ ಹಗರಣದ ಸುದ್ದಿ    ಓದಿ ,ಕಂಗೆಟ್ಟ ಜನರನ್ನು ನೋಡಿದಾಗ ಇಷ್ಷೆಲ್ಲ ನೆನಪಾಯಿತು....

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ..

MAN AND  THE MACHINE...
 
‌          ‌ನನಗೆ ಚನ್ನಾಗಿ  ನೆನಪಿದೆ, ಈ ಹೆಸರಿನದೊಂದು ಪಾಠ ಎಂಟನೇ ವರ್ಗದ ಇಂಗ್ಲಿಷ ಪಠ್ಯದಲ್ಲಿತ್ತು...ಇವೆರಡರ ನಡುವಿನ  ಸಾಮ್ಯಗಳನ್ನು ಅನೇಕ ಉದಾಹರಣೆಗಳನ್ನು ಕೊಟ್ಟು  ಮನುಷ್ಯನೂ ಒಂದು ಯಂತ್ರವೇ ಎಂದು
ಪ್ರತಿಪಾದಿಸಿದ ಪಾಠವದು...
ಮೆದುಳು- computer, ಕಣ್ಣು- camera, ಕೈಗಳು- levers, ಕಾಲುಗಳು,- wheels, ಹೊಟ್ಟೆ- ಪೆಟ್ರೋಲ್ tank, ಹೀಗೆ ಸಮಾನ ಅಂಶಗಳನ್ನು ವಿಶದವಾಗಿ  ವಿವರಿಸಿ ಹೇಳಲಾಗಿತ್ತು..ಮನುಷ್ಯನ ಜೀವನಶೈಲಿ  machine maintenance ಗೆ ಸಮ...ಚನ್ನಾಗಿ ಆರೋಗ್ಯಸೂತ್ರಗಳನ್ನು ಅನುಸರಿಸಿ ಬದುಕಿದರೆ ಶರೀರ ನಿರ್ವಹಣೆ ಅತ್ಯುತ್ತಮವಾದಂತೆ..
ಅದನ್ನು ಅಲಕ್ಷಿಸಿ ಯರ್ರಾ ಬಿರ್ರಿ ನಿರ್ವಹಣೆ, ಯಂತ್ರಗಳನ್ನು ಶೀಘ್ರ ಗರಾಜು ಸೇರಿಸುವಂತೆ, ದೇಹಾರೋಗ್ಯ ಕಡೆಗಣಿಸಿ ಬದುಕಿನ ಹಳಿ ತಪ್ಪಿಸಿಕೊಂಡರೆ ಅಂಥವರಿಗೆ  ಆಸ್ಪತ್ರೆಯೇ ಗತಿ...ಒಂದು  ವಾಹನವನ್ನು ಅದರ ಮಾಲಿಕನೊಬ್ಬನೇ  ಸರಿಯಾಗಿ ನೋಡಿಕೊಂಡು ಓಡಿಸಿದರೆ/ servicing ಮಾಡಿಸುತ್ತಿದ್ದರೆ ಅದರ ಬಾಳಿಕೆ ಹೆಚ್ಚು...ಹೆಚ್ಚು ಹೆಚ್ಚು  ಅವಧಿಯವರೆಗೆ ಅದು ನಿಮಗೆ ಸೇವೆ ಕೊಟ್ಟು ಒಂದು ತರಹದ attachment ಬೆಳೆಯುವಂತೆ ಮಾಡುವ ಸಾಧ್ಯತೆಯಿದೆ...ಅದೇ ರೀತಿ ನಮ್ಮ ಶರೀರವೂ ಒಂದು ರೀತಿಯಲ್ಲಿ  ಅದೇ ತರಹದ ನಿರ್ವಹಣೆ ಬಯಸುತ್ತದೆ...' ಹಿತ ಭುಕ್..ಮಿತ ಭುಕ್' ಅಂದರೆ ಹಿತವಾದ ಮಿತವಾದ ಆಹಾರಸೇವನೆ
ಆರೋಗ್ಯವರ್ಧನೆಗೆ ಪೂರಕ.. ಸಹಾಯಕ...ಸಮಯ ಸಿಕ್ಕಾಗ ಕೈಲಾದಷ್ಟು ಯೋಗ/ ಪ್ರಾಣಾಯಾಮ/ walking ಗಳಂಥ ನಿಯಮಿತ ಚಟುವಟಿಕೆಗಳು , ಶಾಂತ,ಶುಭ್ರ ಮನಸ್ಥಿತಿ  ದೇಹವೆಂಬ ಯಂತ್ರವನ್ನು ಸುರಕ್ಷಿತ, ಸುಭದ್ರ ಸ್ಥಿತಿಯಲ್ಲಿ ಉಳಿಸುತ್ತವೆ...ಪ್ರತಿಯೊಬ್ಬರೂ ತಮಗೆ  ಸರಿಯನಿಸಿದ ರೀತಿಯಲ್ಲಿ ಗಾಡಿ ಓಡಿಸಿದರೆ ಅದಕ್ಕೆ ಆಗಬಹುದಾದ ಧಕ್ಕೆಗಳೇ
ಮನಬಂದಂತೆ ಬದುಕಿದರೆ
ಶರೀರಕ್ಕೂ ಆಗುವ ಸಾಧ್ಯತೆ ಹೆಚ್ಚು..
ಯಂತ್ರಗಳಿಗೆ ಗರಾಜು, ಮನುಷ್ಯನಿಗೆ  ದವಾಖಾನೆಗಳು ...ಅಷ್ಟೇ ವ್ಯತ್ಯಾಸ...ಅವು  ತಕ್ಕಮಟ್ಟಿಗೆ ಸಮಸ್ಯೆಗಳಿಗೆ ಪರಿಹಾರ ಕೊಡುತ್ತವೆ ನಿಜ...ಆದರೆ ಎಷ್ಟೇ ಪ್ರಯತ್ನಿಸಿದರೂ,ಎಷ್ಟೇ ಹಣ ಸುರಿದರೂ ಯಂತ್ರಗಳಗಲೀ,ಶರೀರವಾಗಲೀ ಒಮ್ಮೆ ಶಿಥಿಲಗೊಂಡರೆ ಪೂರ್ವ ಸ್ಥಿತಿಗೆ ಮರಳಲಾರವು...
  ‌          ‌ಮೇಲೆ ಹೇಳಿದ್ದಾವದೂ ಹೊಸದಿಲ್ಲ..ಯಾರಿಗೂ ತಿಳಿಯದ್ದಿಲ್ಲ...ಆದರೆ ಅವೂ ಸಹ ಎಲ್ಲ ಹಿತನುಡಿಗಳಂತೆ ಒಂದು ರೀತಿ ಒಗರು...ಕಹಿ...ಸುಲಭದಲ್ಲಿ ಪಚನವಾಗುವದಿಲ್ಲ...ಹೊಸ ಗಾಡಿಕೊಂಡವನಿಗೆ ಕಾಣುವದು ಮುಂದೆ ಚಾಚಿದ  ಬ್ರಹತ್ ರಸ್ತೆಗಳು...ತಾನು plan ಮಾಡಿದ Ride ಗಳು...ತತ್ಷಣಕ್ಕೆ ರೋಡುಗಳ ಉಬ್ಬು ತಗ್ಗುಗಳಾಗಲೀ, rideಗೆ ಬೇಕಾದ ವೇಗವಾಗಲೀ  ಮನಸ್ಸಿನಲ್ಲಿರುವದಿಲ್ಲ..ಬೇರೆಯವರ  ಸೂಚನೆಗಳಿಗೂ ದಿವ್ಯ ನಿರ್ಲಕ್ಷ್ಯ.... ಹಾಗೆಯೇ ಹದಿಹರೆಯದ ಭರದಲ್ಲಿ ಯಾವುದೇ ಹಿತನುಡಿಗಳಿಗೆ NO ENTRY board..ಏನಾದರೊಂದು ಅಪಸವ್ಯ ನಡೆದಾಗಲೇ ಗಾಡಿಯ break fail ಆಗುವಂತೆ ,ಮನುಷ್ಯನೂ ಹತಾಶನೂ ಕಂಗಾಲೂ ಆಗುವದನ್ನು ಕಾಣುತ್ತೇವೆ..
  ‌‌‌          ‌‌ಇದೆಲ್ಲ ಆ MAN AND THE MACHINE ಪಾಠದಲ್ಲಿತ್ತು...ಅದನ್ನು ಮಕ್ಕಳಿಗೆ ಕಲಿಸುವಾಗ ನಾನೂ serious ಇರಲಿಲ್ಲ..ಅದು ಪರೀಕ್ಷೆಗೆ  ವಿದ್ಯಾರ್ಥಿಗಳಿಗೆ ಕೆಲ marks ಗಳನ್ನು ಕೊಡಿಸುವ ಒಂದು ಪಾಠ/ chapter ಮಾತ್ರವಾಗಿತ್ತು...ಬದುಕಿನಲ್ಲಿ ಮುಂದುವರಿದಂತೆ ತಲೆಗೆ ಬಡಿದ  ಅನುಭವಗಳ  ತೂಕ ಎಷ್ಟಿದೆ ಅಂದರೆ ಈಗ ನಾನೆಂದೋ ಕಲಿಸಿದ ಪಾಠಗಳನ್ನು ಬದುಕು ನನಗೆ ಕಲಿಸುತ್ತಿದೆ  ನಿರ್ದಾಕ್ಷಿಣ್ಯವಾಗಿ....ಹೌದು ಆದರೆ  ತಡವಾಗಿ...
     YESSSS! ಮಾನವ ಬರಿ ಮೂಳೆ,ಮಾಂಸದ  ತಡಿಕೆ ಮಾತ್ರವಲ್ಲ... ದೇವ ನಿರ್ಮಿತ ಅತ್ಯದ್ಭುತ ಯಂತ್ರ...

Sunday 9 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..

"ಸಬ್ ಕುಛ್ ಸೀಖಾ ಹಮ್ನೆ..ನಾ ಸೀಖೀ ಹೋಶಿಯಾರೀ..."

               ಈ ಇಡೀ ಜಗತ್ತು ಒಂದು ಸಂಕೀರ್ಣ ವ್ಯವಸ್ಥೆ...ಇಲ್ಲಿ ಚಿಕ್ಕದು_ ದೊಡ್ಡದು, ಒಳ್ಳೆಯದು_ ಕೆಟ್ಟದು, ಜಾಣ- ದಡ್ಡ ,ಶಿಷ್ಟ_ ದುಷ್ಟ,  ಶ್ರೇಷ್ಠ,- ಕನಿಷ್ಠ  ಏನೆಲ್ಲಾ ಇದೆ....ಸಾಮಾನ್ಯ ಸ್ಥಿತಿಯಲ್ಲಿ ಎಲ್ಲವೂ ಸುಸೂತ್ರವಾಗಿ, ವ್ಯವಸ್ಥಿತವಾಗಿ ಇದೆ ಎಂದೆನಿಸಿದರೂ ನಮಗೇ ಗೊತ್ತಿಲ್ಲದೇ  ಲಕ್ಷಗಟ್ಟಲೇ ಸ್ಥಿತ್ಯಂತರಗಳು  ತಂತಾನೇ ಆಗುತ್ತಲೇ  ಇರುತ್ತವೆ...ಅವು ಒಂದು  ಹಂತಮೀರಿದಾಗಲಷ್ಟೇ ನಮಗೆ ಗೋಚರವಾಗುತ್ತವೆ..
        ‌‌‌    ತಮಿಳು ಕವಯತ್ರಿ ಅವೈ ಪ್ರಕಾರ ಜಗತ್ತಿನಲ್ಲಿಯ ಮನುಷ್ಯರನ್ನು ಎರಡೇ ರೀತಿ ವಿಂಗಡಿಸಬಹುದು...HAVES/ HAVE NOTS..
ಇದ್ದುಳ್ಳವರು/ ಇಲ್ಲದವರು...ಆ ಇರಬೇಕಾದ ಸಂಗತಿ ಏನೂ ಆಗಿರಬಹುದು...ಹಣ, ಆರೋಗ್ಯ, ಐಶ್ವರ್ಯ, ಗುಣ ಮುಂತಾಗಿ ಏನೆಲ್ಲವೂ...
                          ಹಣ, ಐಶ್ವರ್ಯ, ಆರೋಗ್ಯ ಇವುಗಳ ಏರಿಳಿತ  ಕೆಲವು ಮಟ್ಟಿಗೆ ವೈಯಕ್ತಿಕ ನೆಲೆಯಲ್ಲಿ ಪರಿಣಾಮ  ಬೀರುತ್ತವೆ..ಆದರೆ ಗುಣದ ಬಗ್ಗೆ ಆ ಮಾತು ಅಷ್ಟು ಸುಲಭದಲ್ಲಿ ಹೇಳಿ ಬಿಡುವಂಥದಲ್ಲ..ಒಬ್ಬ ವ್ಯಕ್ತಿಯ  ವ್ಯಕ್ತಿತ್ವ  ಹಲವು ಬಗೆಯಲ್ಲಿ ಹಲವಾರು ಜನರ ಬದುಕು ಕಟ್ಟಲೂ ಬಹುದು...ಕೆಡವಲೂ ಬಹುದು...
  ‌‌‌        ಕೆಟ್ಟವರು ನಿಜರೂಪದಲ್ಲಿದ್ದರೆ  ಎಷ್ಟೋ ಕ್ಷೇಮ...ಅಂಥವರಿಂದ ಎಷ್ಟು ಬೇಕೋ  ಅಷ್ಟು  ಅಂತರ ಕಾಯ್ದುಕೊಳ್ಳಬಹುದು..
ಸಜ್ಜನರಿದ್ದರಂತೂ  ಪ್ರಶ್ನೆ ಬರುವದೇಯಿಲ್ಲ... ಹೆಜ್ಜೇನು ಸವಿದಂತೆ...ಪ್ರಶ್ನೆ  ಬರುವದು ಹಸುವೇಷದ ಹುಲಿಗಳದು...ಒಳ್ಳೆಯವರಾಗಿ ಕಾಣಿಸಿಕೊಂಡು ಹೆಗಲಮೇಲೆ , ಭುಜದ ಮೇಲೆ ಕೈ ಹಾಕುತ್ತಲೇ, ಜನರಿಗೆ ಮಂಕುಬೂದಿ ಎರಚುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳವವರದು..ಒಂದು ರೀತಿಯಲ್ಲಿ ' ಹೋಶಿಯಾರಿ' ಜನರದ್ದು...ಒಂದು ಕೈಯಲ್ಲಿ ಹೂಗುಚ್ಛ ಕಾಣುವಂತೆ ಹಿಡಿದು, ಇನ್ನೊಂದು ಕಾಣದ ಕೈಯಲ್ಲಿ ಹಿಂದಿನಿಂದ  ಚೂರಿ ಮಸೆಯುವವರದು...
            ಇಂಥವರನ್ನು  ಸಾರಾ ಸಗಟಾಗಿ ಸರಿಸಿ ಇಡುವದೂ ಸಾಧ್ಯವಿಲ್ಲದ ಮಾತು....ಅದೇ ನಂಜನ್ನು  ಬೆಳೆಸಿ, ಪೋಷಿಸಿ, ತಾವೂ. ವಿಷವುಂಡು ಇತರರಿಗೂ ಎಗ್ಗಿಲ್ಲದೇ  ವಿಷ  ಉಣಿಸಬಲ್ಲ ಘಟಾನುಘಟಿಗಳಿವರು...ಇವರ  ದ್ವೇಷಕ್ಕಿಂತ  ಸ್ನೇಹ ಅಪಾಯಕಾರಿ... ಇತರರನ್ನು ಮಣಿಸುವ ಭರದಲ್ಲಿ ಸ್ವಂತದ ಹಾನಿಯೂ ಅವರಿಗೆ  ಗೌಣ... ಏನಕೇನ ಪ್ರಕಾರೇಣ ಮೇಲುಗೈ ಸಾಧಿಸಿ ಮೆರೆಯುವದೇ ಬದುಕಿನ ಗುರಿ ಅವರದು....ಅದನ್ನವರು 'ಚಾಣಾಕ್ಷತನ ' ಎಂದು ಬಿಂಬಿಸುವದೇ ಹೆಚ್ಚು.. ..ಹಾಗಿಲ್ಲದ ಸಭ್ಯರಿಗೆ ' ಹೇಡಿ'  'ಕೈಲಾಗದವ' ನೆಂಬ ಪದವಿಗಳನ್ನೂ ಪ್ರದಾನಮಾಡಬಲ್ಲ ಚತುರರು...'ದುಷ್ಟರಿಂದ ದೂರವಿರೋಣ' ಎಂಬ ಸಜ್ಜನರ  ನಿಲುವನ್ನು ತಮ್ಮದೇ ಹೆಗ್ಗಳಿಕೆ,ತಮ್ಮನ್ನು ಎದುರಿಸಲಾಗದ ನಪುಂಸಕರ ನಿಲುವು  ಎಂದು ಬಿಂಬಿಸಲೂ ಹೇಸದವರು..ಈ ಅಪಾಯಕಾರಿ ನಿಲುವನ್ನು 
ಹೊರಗೆ ಪ್ರಕಟಿಸದೇ ಗೌಪ್ಯವಾಗಿರಿಸಿ  ಜನರ ಮೈದಾನದಲ್ಲಿ ಅವರನ್ನೇ ಬೋರಲು ಬೀಳಿಸುವವರು...ಒಂದು ರೀತಿಯಲ್ಲಿ ಇವೆಲ್ಲ ರಾಜಕೀಯದ ಪಟ್ಟುಗಳಿಗೆ ಸಮ...ತದ್ವಿರುದ್ಧ ರಾಜಕೀಯ ಪಕ್ಷಗಳ  ತಂತ್ರಗಳು..
ರಾ_ ರಾವಣ,
ಜ_ ಜರಾಸಂಧ
ಕೀ_ ಕೀಚಕ
ಯ_ ಯಮ.
ಇವರೆಲ್ಲರ ವಂಶಜರು ಎಂಬ ತಮಾಷೆಯ ಮಾತುಂಟು...
ಎಲ್ಲರೂ ಹಾಗಲ್ಲ...ಸಾಕಷ್ಟು ಸಜ್ಜನರೂ ಇರುತ್ತಾರೆ...ಆದರೆ ಇವರ 'ಹೋಶಿಯಾರಿ 'ಮುಂದೆ ಅಂಥವರು ಸುಲಭದಲ್ಲಿ ಗುರುತಿಸಲ್ಪಡುವದಿಲ್ಲ...Survival of d fittest ಆಗಲೀ, ಜಿಸಕೀ ಲಾಠಿ ಉಸಕಿ ಭೈಸ್_ ಆಗಲೀ ಹೇಳುವದು ಇದನ್ನೇ...
          ‌‌‌ ಆದರೆ ಮಾತಾಡಿದಷ್ಟು ಏನಾದರೂ ಮಾಡುವದು ಸುಲಭವಿಲ್ಲ...ಬೀಸುಕಲ್ಲಿನ ಬುಡದಲ್ಲಿ ಸಿಕ್ಕ ಬೆರಳುಗಳಂತೆ, ಮುಳ್ಳುಕಂಟಿಯ ಮೇಗಣ ರೇಶ್ಮೆ ಸೀರೆ ತೆಗೆದಂತೆ ಇವರಿಂದ ಬಿಡುಗಡೆ ಪಡೆಯಬೇಕು...ನಿಜವಾಗಿ ಮಲಗಿದವರನ್ನು ಎಬ್ಬಿಸಬಹುದು..ಮಲಗಿದಂತೆ ನಟಿಸುವವರನ್ನು ಎಬ್ಬಿಸಲಾರಿರಿ...ನಿಜವಾದ  ಕೆಟ್ಟವರನ್ನು ಸಂಭಾಳಿಸಬಲ್ಲಿರಿ...ಆದರೆ ನಿಮ್ಮ ಬಗಲಲ್ಲೇ ಇದ್ದು ನಿಮ್ಮ ಹಿತೈಷಿಯಂತೆ ನಟಿಸಿ ನಿಮ್ಮನ್ನೇ ದಿವಾಳಿ ಎಬ್ಬಿಸ ಬಿಡಬಹುದಾದ  ಆಷಾಢಭೂತಿಗಳ 'ಹೋಶಿಯಾರಿತನವನ್ನು'  ಅರಿತುಕೊಳ್ಳದಿದ್ದರೆ ಬದುಕು ಮೂರಾಬಟ್ಟೆ ಎಂಬುದು, ಹಾಗಾದಮೇಲೆಯೇ ತಿಳಿಯುವ ಸಂಭವವೇ ಜಾಸ್ತಿ ಎಂಬುದೂ ಒಂದು ವಿಡಂಬನೆ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...