Wednesday, 19 June 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ..
       
ಅದೊಂದು ಕಾಲ...ಇದೂ ಒಂದು ಕಾಲ....

            ಸುಮ್ಮನೇ ಫೇಸ್ ಬುಕ್ ನೋಡುತ್ತ ಕುಳಿತಿದ್ದೆ...ಅದೊಂದು ಪುಟ್ಟ ಪ್ರಪಂಚದಂತೆ ಕಂಡರೂ  ವ್ಯಾಪ್ತಿ ಬಹು ದೊಡ್ಡದು...ವಿಕ್ರಮನ ಹೆಗಲನೇರಿದ ಬೇತಾಳದಂತೆ... ಇದಿಲ್ಲದಿದ್ದಾಗ ಹೇಗಿದ್ದೆವು? ಎಂದು ನನಗೆ ನಾನೇ ಕೇಳಿಕೊಂಡೆ..' ಹೆಚ್ಚು ಚನ್ನಾಗಿ" ಎಂದು ಉತ್ತರ ತಕ್ಷಣ ಬಂತು...internet ಬಳಕೆ ಒಂದು ಅತ್ಯದ್ಭುತ ಆವಿಷ್ಕಾರ. ಅದರಲ್ಲಿ ಎರಡು ಮಾತಿಲ್ಲ..ಇಡಿ ಜಗತ್ತನ್ನೇ ಅಂಗೈಯಲ್ಲದು  ಸೆರೆ ಹಾಕಿದೆ...ಜಗತ್ತಿನ ಇಂಚಿಂಚು ಮಾಹಿತಿಯೂ ನಡೆದ ಸ್ಥಳದಷ್ಟೇ ಕ್ಷಿಪ್ರವಾಗಿ ಕಣ್ಣೆದುರು ತಡವಿಲ್ಲದೇ ತೆರೆದುಕೊಳ್ಳುತ್ತದೆ...ಆದರೆ ದೀಪದ ಬುಡದಲ್ಲೇ ಕತ್ತಲೆಯೂ ಉಂಟು...ಅದರ ಇನ್ನೊಂದು ಮುಖ ಅಷ್ಟೊಂದು ಆಕರ್ಷಕವಾಗಿರದೇ ಸ್ವಲ್ಪು ಮಟ್ಟಿಗೆ  ಕರಾಳವಾಗಿದೆ ಎಂಬುದೂ ಅಷ್ಟೇ ಸತ್ಯ...ಆದರೆ ಸಿಗರೇಟು ಪ್ಯಾಕ್ಮೇಲೆ ಚಂದ ಚಂದದ  ಸಿಗರೇಟು ತೋರಿಸಿ  " smoking is injurious to health" ಅನ್ನುವದನ್ನು ದುರ್ಬೀನು ಹಿಡಿದೇ ನೋಡುವಂತೆ ಬರೆದಿರುವದಿಲ್ಲವೇ ಹಾಗೆ
ಕಂಡೂ ಕಾಣದಂತೆ ಅದು ಇರುತ್ತದೆ..ನಮ್ಮ ಕ್ರಿಯಾಶಕ್ತಿ ಕ್ರಮೇಣ ಜಡವಾಗಿ ಕೈ ಕೊಡುತ್ತದೆ...ತಾಸುಗಟ್ಟಲೇ ಕುಳಿತೇ ಇರುವದರಿಂದ ಸೋಮಾರಿತನ ವೃದ್ಧಿಸುತ್ತಿದೆ...ಮನೆಯ ಜನರೊಂದಿಗೇನೇ ಸಂಪರ್ಕ,ಸಂವಹನ ಕಡಿಮೆಯಾಗುತ್ತದೆ..ಒಂದು ಫ್ಲೋರ್ದಿಂದ  ಇನ್ನೊಂದು ಫ್ಲೋರ್ಗೆ ಮಾತಿನ ಬದಲು ಸಂದೇಶಗಳು ರವಾನೆಯಾಗುವದೇ ಹೆಚ್ಚು.....ಮೆದುಳು ಚುರುಕಾದಷ್ಟೂ ಹೃದಯ ಮಿಡಿತ ಮಂದವಾಗುತ್ತದೆ...ಎಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ...ಆದರೆ ಒಳಗೆಲ್ಲೋ ಎಲ್ಲವೂ ಸೋರಿಹೋದ ಹತಾಶೆ ಕಾಣುತ್ತಿದೆ..
ಇದೆಲ್ಲವೂ ಪರ್ಯಾಯವಾಗಿ fb ಯಲ್ಲಿ  ಪ್ರದರ್ಶಿತವಾಗುತ್ತಿರುವದು
ಗುಟ್ಟಾಗಿಯೇನೂ ಉಳಿದಿಲ್ಲ...ಜನರಲ್ಲಿ ಸಹನಶಕ್ತಿ ಕಡಿಮೆಯಾಗಿ
ಅಸಹನೆ,ಅಪನಂಬಿಕೆ,ಅವಿಶ್ವಾಸ,ಅಪರಿಹಾರ್ಯ ಸಮಸ್ಯೆಗಳು ತಲೆ ಎತ್ತುತ್ತಿವೆ...ಸಣ್ಣ ಸಣ್ಣ ವಿಷಯಗಳನ್ನು ಹಿಗ್ಗಿಸುವದು,ವಾದಗಳನ್ನು,ಬೆಳೆಸುವದು,ಅನವಶ್ಯಕ ಅಪನಂಬಿಕೆಗಳು ಹೆಚ್ಚಾಗಿ ಉದ್ವೇಗದಲ್ಲಿ ಸಲ್ಲದ ನಿರ್ಣಯಕ್ಕೆ ಬಂದು ಮನಸ್ಸು ಕಹಿ ಮಾಡಿಕೊಳ್ಳುವದು ಹೆಚ್ಚಾಗಿದೆ..ಇವೆಲ್ಲ ಇಲ್ಲದ ಕಾಲಕ್ಕೆ ಎಲ್ಲವೂ ಸರಿಯಿತ್ತು ಎಂದೇನೂ ನಾನು ಹೇಳುವದಿಲ್ಲ..ಆದರೆ ಹೆಚ್ಚು ಜಿದ್ದಿಗೆ ಬೀಳದೇ ಸ್ವಲ್ಪೇ ಹೊತ್ತಿನಲ್ಲಿ ಸರಿ ಪಡಿಸಿಕೊಳ್ಳುವ ತಾಳ್ಮೆಯಿತ್ತು.. .ಅನಿವಾರ್ಯತೆ ಯಿತ್ತು..
'ಕಹಿ' ಹೆಚ್ಚು ಹೊತ್ತು ಕಹಿಯಾಗಿಯೇ ಉಳಿಯುತ್ತಿರಲಿಲ್ಲ ಅನಿಸುತ್ತದೆ..
    ‌‌‌‌‌    ಅದೇ fb ನೋಡುತ್ತಿದ್ದೆ ಅಂದೆನಲ್ಲ...ಅದರಲ್ಲಿಯ ಕೆಲವು post ಗಳನ್ನು ನೋಡಿದಾಗ ಹೀಗೆಲ್ಲ ವಿಚಾರಬಂತು..ಬಾಲ್ಯದ ಅಮಾಯಕತೆ ಕಳೆದುಕೊಂಡು , ನನ್ನನ್ನು ನಾನೇ ಅರ್ಥೈಸಿಕೊಳ್ಳ ತೊಡಗಿದಾಗಿನ ಫಲಿತಾಂಶವಿದು...ಬಹುಶಃ ಎಲ್ಲರಿಗೂ ಒಮ್ಮಿಲ್ಲ ಒಮ್ಮೆ ಅನಿಸುವಂಥದ್ದೇ...
      ‌‌‌ಎರಡು ತಾಸಿನ ಹಿಂದೆ
ನಾನೊಂದು post ಹಾಕಿದೆ,

_ಅವನು  ಬಸವ...
_ ಅವಳು ಕಮಲ...
_ಕಮಲ ಬಸನ
ವನ  ತಂಗಿ..

           ಇಷ್ಟೇ ನಾನು ಬರೆದದ್ದು..ತಾಸೊಂದರಲ್ಲಿ ಅರವತ್ತರಷ್ಟು ಜನ ಆ ದಿನಗಳಿಗೆ ಹೋಗಿ ಆ ಇಡೀ ಪಾಠವನ್ನು,ಆ ಪಠ್ಯದ ಕವಿತೆಗಳನ್ನು ಹಾಕಿ ಅಂದಿನ ದಿನಗಳನ್ನು ಮರು ಜೀವಿಸಿದ್ದಾರೆ..ಮೂಲಾಕ್ಷರಗಳ ಕಲಿಕೆ ಮುಗಿದ ಮೇಲೆ ವಾಕ್ಯ ರಚನೆಗಳನ್ನು ಪರಿಚಯಿಸುವಾಗಿನ ಕನಿಷ್ಠ ಶಬ್ದ ಬಳಕೆಯ ವಾಕ್ಯಗಳು ಅವು..
ಅದರಲ್ಲಿ ಜಾಣತನವಿಲ್ಲ..
ಹೆಗ್ಗಳಿಕೆಯಿಲ್ಲ...ನೆನಪಿರಲೇ ಬೇಕೆಂಬ ಅಂಶಗಳಿಲ್ಲ..
ಆದರೆ ಅಮಾಯಕ ಬಾಲ್ಯದ ಮುಗ್ಧತೆಯಿದೆ..ಕಲಿಕೆಯ
ಜಂಭವಿದೆ...ಕಲಿತ ಆನಂದವಿದೆ...ಸುಂದರ ನೆನಪಿನ  ಭಂಡಾರವೇ ಇದೆ..ಅದಕ್ಕೊಂದು ಆತ್ಮೀಯ ಸಂವೇದನೆಯಿದೆ...ಅಂತೆಯೇ ಅರವತ್ತು/ ಎಪ್ಪತ್ತರ ವಯಸ್ಸಿನವರೂ ಚಿಕ್ಕವರಾಗಿ, ಬಾಲ್ಯಕ್ಕೆ ಮರಳಿ ಸ್ಪಂದಿಸಿದ್ದಾರೆ..ಆನಂದಿಸಿದ್ದಾರೆ....
         ನಾವು ಎಷ್ಟೇ ದೊಡ್ಡವರಾಗಲೀ ,ಎಷ್ಟೇ ಮುಖವಾಡ ಧರಿಸಲೀ, ಅದು ಹೇಗೋ ಒಮ್ಮೊಮ್ಮೆ ಅನಾವರಣ ವಾಗಿ ಗೊತ್ತಿಲ್ಲದೇ ಬತ್ತಲೆಯಾಗಿ ಬಿಡುತ್ತೇವೆ...ಹಾಗೆ ಮಾಡಿಸುವದೊಂದು ಶಕ್ತಿ  ಅದೆಲ್ಲೋ ಅದಮ್ಯವಾಗಿದ್ದು ಕಾಲ ಬಂದಾಗ ಹೊರಬರುತ್ತದೆ...
            ಒಟ್ಟಿನಲ್ಲಿ ಇದುವರೆಗಿನ ಬದುಕಿನಲ್ಲೊಂದು  ಸುತ್ತು ಹೋಗಿ ಬಂದಾಗ "ಮಾನಸಿಕ google search" ನಲ್ಲಿ
ನನಗೆ ಅನಿಸಿದ ಭಾವನೆಗಳಿವು...ನನ್ನೊಡನೆ ಬಾಲ್ಯಕ್ಕೆ ಮರಳಿದ ಎಲ್ಲರಿಗೂ ಧನ್ಯವಾದಗಳು/ ಅಭಿನಂದನೆಗಳೂ ಸಹ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...