Thursday, 20 June 2019

ಹಾಗೇ ಸುಮ್ಮನೆ

ಹಾಗೇ ಸುಮ್ಮನೆ...

"ದಿಲ್  ಥಾ  ಛೋಟಾ ಸಾ....ಛೋಟಿ ಸಿ ಆಶಾ..."

                ‌‌1970 ರ ದಶಕ..ಮದುವೆಯಾಗಿ ಮೂರು ಮಕ್ಕಳಾಗಿದ್ದವು....ನನ್ನವರಿಗಾಗಲೇ ಹೃದಯಾಘಾತವಾಗಿತ್ತು... Doctor ಸಲಹೆಯ ಮೇರೆಗೆ  ಹೆಚ್ಚು ಆಯಾಸಮಾಡಿಕೊಳ್ಳುವ ಹಾಗಿರಲಿಲ್ಲ..ಕರ್ನಾಟಕ ಹೈಸ್ಕೂಲ್ ಯಾವ ಕಡೆಯಿಂದ ಏರಿದರೂ  ದಿಬ್ಬ ಹತ್ತಬೇಕಾಗುತ್ತಿತ್ತು..ಸೈಕಲ್ ಮೇಲೆ ಅಲ್ಲಿಯ ವರೆಗೆ ಹೋಗಿ ಹೇಗೋ ಒದ್ದಾಡುತ್ತ ಶಾಲೆ ತಲುಪಬೇಕಾಗಿತ್ತು..( ಕೊನೆಗೆ ಅನಿವಾರ್ಯವಾಗಿ ವಿದ್ಯಾರಣ್ಯ ಹೈಸ್ಕೂಲ್ಗೆ ವರ್ಗಮಾಡಬೇಕಾಯಿತು) ನನಗೋ ವಿಪರೀತ ಹೆದರಿಕೆ..ಆದರೆ ಅನ್ನುವ ಹಾಗಿಲ್ಲ ..ಬಿಡುವ ಹಾಗೂ ಇಲ್ಲ....ಒಂದು ರೀತಿಯ ಬಿಸಿತುಪ್ಪ...ನಾನು ಶಾಲೆಯಿಂದ ಬಂದಾಗ ಮನೆಯದುರು ಸಣ್ಣದೊಂದು ಗುಂಪು ಇದ್ದರೂ ಏನೇನೋ ಊಹಿಸಿಕೊಂಡು ಎದೆ ಧಸ್ ಎನ್ನುತ್ತಿತ್ತು...ಏಳುವದು ಸ್ವಲ್ಪ ತಡವಾದರೂ ವಿಚಲಿತಳಾಗಿಬಿಡುತ್ತಿದ್ದೆ...
ಹಾಗೆಂದು ಅವರ ಆರೋಗ್ಯ ಕುರಿತಾದ ಚರ್ಚೆ ಮಾಡುವದು ಅವರಿಗೆಂದೂ ಸೇರುತ್ತಿರಲಿಲ್ಲ...ನನಗೆ ಒಂದು ರೀತಿಯ tension ನ್ನು ಸದಾ...
ನನಗೋ ಅವರೊಂದು ಲೂನಾ  ಆದರೂ ತೆಗೆದು ಕೊಳ್ಳಲಿ ಎಂಬ ಆಸೆ..ಆದರೆ ಪಗಾರ ನಾಲ್ಕಂಕಿಯೂ ಇಲ್ಲದ ದಿನಗಳವು...ಅಡಚಣಿಗೆ ಮಾಧ್ಯಮಿಕ  ಶಿಕ್ಷಕರ ಸಹಕಾರ ಸಂಘದಿಂದ ಸಾಲ ಪಡೆವ ಸೌಲಭ್ಯವಿತ್ತು..ಆದರೆ ನಂತರ  ಐದು ಜನರ ಸಂಸಾರ ತೂಗಿಸಿಕೊಂಡು ಅಷ್ಟು ಸಾಲ ಮರುಪಾವತಿಸುವದೂ ಸುಲಭದ ಮಾತಾಗಿರಲಿಲ್ಲ...ಅಂತೂ ಅವರ ಲೂನಾದ ಕನಸು, ಕನಸಾಗಿಯೇ ಮುಂದುವರಿಯಿತು...ನಾನೂ ಕುಮಠಾದಲ್ಲಿ BEd ಮುಗಿಸಿಬಂದು ನೌಕರಿಗೆ ಸೇರಿಕೊಂಡ ಮೇಲೆ ನಮ್ಮ ಕನಸುಗಳು ಬಣ್ಣಕಟ್ಟತೊಡಗಿದವು.. ಆರೋಗ್ಯ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿ ನಡೆಯುವದು ಹೆಚ್ಚು ತ್ರಾಸದಾಯಕ ಅನಿಸಿದಾಗ ನಾನು ಗಾಡಿ ಖರೀದಿಸಲು ಆಗ್ರಹ ಪಡಿಸ ತೊಡಗಿದೆ..ಮುಂಬೈಗೆ ಒಮ್ಮೆ ಹೋಗಿ ಬಂದಮೇಲೆ ಆಗ ಬಹುದಾದ ಖರ್ಚು_ ವೆಚ್ಚ ನೋಡಿ ನಂತರ ಗಾಡಿ ಎಂದು ಅವರು  ಹಟ ಹಿಡಿದಾಗ ನಾನೇನೂ  ಮಾಡುವ ಹಾಗೆ ಇರಲೇಯಿಲ್ಲ...ಒಪ್ಪಲೇಬೇಕಾದ ಅನಿವಾರ್ಯತೆ.
             ನಾವು ಒಂದು ಬಗೆದರೆ ದೈವ ಇನ್ನೊಂದು ಬಗೆಯಿತು..ಮುಂಬೈಗೆ ಹೋದವರು ಮರಳಿಬರಲಿಲ್ಲ...ಕೊನೆಗೂ ಅವರ  ಪುಟ್ಟ ಕನಸು ಕನಸಾಗಿಯೇ ಉಳಿಯಿತು...
        ‌‌     ಆ ಮಾತಿಗೆ ಮೂವತೈದು ವರ್ಷ...ಪರಿಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ..ಮಕ್ಕಳು ಶೃದ್ಧೆಯಿಂದ ಓದಿ ಅತ್ಯುತ್ತಮ ನೌಕರಿಯಲ್ಲಿದ್ದಾರೆ...ಎಲ್ಲರೂ ಎರಡೆರಡು ಕಾರುಗಳನ್ನಿಟ್ಟುಕೊಂಡಿದ್ದಾರೆ...ದೇಶ ವಿದೇಶ ಎಗ್ಗಿಲ್ಲದೇ ಸುತ್ತಿದ್ದಾರೆ..ನನ್ನನ್ನೂ ಸಾಕು ಸಾಕೆನಿಸುನಿಸುವಷ್ಟು ಸುತ್ತಿಸಿದ್ದಾರೆ...ಆದರೆ ಯಾವುದೇ ಒಂದು ಗಾಡಿಯಮೇಲೆ ಅವರ ವಯಸ್ಸಿನವರು ಕಂಡರೆ ನನ್ನವರ ಅಪೂರ್ಣ ಕನಸು ಕಣ್ಣು ತುಂಬಿ ಬಿಡುತ್ತದೆ...ಮಕ್ಕಳ high end ಕಾರುಗಳಲ್ಲಿ ತೇಲಿದಂತೆ ಹೋಗುವಾಗಲೆಲ್ಲ ನನ್ನವರು ಏದುಸಿರು ಬಿಡುತ್ತಾ ಕರ್ನಾಟಕ ಹೈಸ್ಕೂಲ್ ದಿಬ್ಬ ಏರುತ್ತಿರುವ ದೃಶ್ಯ ನೆನಪಾಗಿ ಸಂಕಟವಾಗುತ್ತದೆ...
                ನಾವೇನೂ ಅಸಾಧ್ಯವೆನಿಸಬಹುದಾದ ಕನಸು ಕಂಡಿರಲಿಲ್ಲ..ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ...ಒಂದು ಅತಿ ಸಾದಾ ಅನಿಸುವಂಥ ಪುಟ್ಟ ಕನಸು...ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನೇ ಕಂಡಿದ್ದ ಜೀವವೊಂದು ಮುಂದಿಟ್ಟ ಪುಟ್ಟದೊಂದು ಆಸೆ...
      ‌       ನನಗೆ ಈಗ ಬದುಕಿನ ಬಗ್ಗೆ ಪ್ರಶ್ನೆಗಳಿಲ್ಲ..ಗೊಂದಲಗಳಿಲ್ಲ...
ತಕರಾರುಗಳಂತೂ ಮೊದಲೇಯಿಲ್ಲ...ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ದೊರೆತಿದೆ....ಅದಕ್ಕಾಗಿ  ದೈವಕ್ಕೆ ನಾನು ಜೀವನಪರ್ಯಂತ ಋಣಿ..ಆದರೆ
ಇದರಲ್ಲಿ ಸ್ವಲ್ಪು  ಕಡಿತ ಮಾಡಿಯಾದರೂ ನನ್ನವರ ಆ ಪುಟ್ಟ ಬಯಕೆ ಈಡೇರಿಸಿದ್ದರೆ ಎಂಬ ಮಾತು ಮಾತ್ರ ನಾನಿರುವವರೆಗೂ ನನ್ನನ್ನು ಬಿಡುವಂತೆ ಕಾಣುವದಿಲ್ಲ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...