Monday, 5 December 2022

 ಇಷ್ಟು  ಸಾಕೇ ಸಾಕು...

ಬದುಕಿನಲಿ ಏನೇ ಬರಲಿ,
ಹೃದಯವೆಷ್ಟೇ ಭಾರವಾಗಿರಲಿ,
ಸುತ್ತೆಲ್ಲ ಬರಿ ಕತ್ತಲೆ ಕವಿದಿರಲಿ,
ಒಂದು ಗಳಿಗೆ ಸಹಿಸಿದರೆ ಸಾಕು...

ಜಗವೆಲ್ಲ ವಿರೋಧಿಸಲಿ,
ಜನವೆಲ್ಲ ಎದುರಾಗಲಿ,
ಜಗದೀಶನ ದಯೆಯಿದೆ
ಎಂಬ ಭಾವವೊಂದು  ನನ್ನೆದೆ ತಂಪಾಗಿಸಲು ಸಾಕು...

ಮನಸಿಗೆ ಅನಿಸಿದ್ದನ್ನು 
ನಾನು ನಂಬುವವರೆಗೂ...
ಅದು ಸುತ್ತ ಕವಿದ ಕತ್ತಲನ್ನು ಕರಗಿಸುವವರೆಗೂ
ನನ್ನ ನಂಬುಗೆ/ವಿಶ್ವಾಸಗಳು 
ನನಗೆ ಸಾಕು...

ಅರಿವೊಂದು ನನ್ನ 
ಕೈ ಹಿಡಿವವರೆಗೂ...
ದೇವರು ಇದಕ್ಕೂ
ಕೊನೆ ಹಾಡುವ ನಂಬುಗೆ  ಇರುವವರೆಗೂ...
ಜೀವನದ ಸವಾಲುಗಳನ್ನೆಲ್ಲ
ಎದುರಿಸುವ ಛಾತಿ ನನ್ನದಾಗಿರುವವರೆಗೂ...
ಬದುಕಿನ ಏನೊಂದೂ
ನನ್ನ ಕೂದಲು ಸಹ ಕೊಂಕಿಸಲಾರದೆಂಬ
ಭಾವವೊಂದೇ ಸಾಕು...

ಕತ್ತಲೆಯ ಕೂಪದಲ್ಲೇ ಇರಲಿ...
ನನಗೆ ಭಯ ಹುಟ್ಟಿಸುವ 
ಗಾಢ ಸಂಚೇ ನಡೆದಿರಲಿ...
ಪ್ರತಿರಾತ್ರಿಗೂ ಒಂದು
ಬೆಳಗಿದೆ ಎಂಬ ಅರಿವು
ನನಗೆ ಸಾಕು...
All is well and wisely put...        
   ‌‌  
        ಒಂದು ಸೆಂಟಿಪೆಡ್ - ಶತಪದಿ 
ತನ್ನಷ್ಟಕ್ಕೆ ತಾನೇ ತೆವಳುತ್ತಾ ಮುನ್ನಡೆಯುತ್ತಿತ್ತು. ಒಂದು ಕಪ್ಪೆ ಅದನ್ನು ನೋಡಿತು, ನೋಡುತ್ತಲೇ ಇತ್ತು.ಅದಕ್ಕೋ ಗೊಂದಲ. ಎರಡು / ನಾಲ್ಕು ಕಾಲುಗಳುಳ್ಳವರೇ ಎಡವಿ/ ತಡವರಿಸಿ/ ಮುಗ್ಗರಸಿ ಬೀಳುವದುಂಟು.ಈ ಶತಪದಿ ನೂರು ಕಾಲುಗಳನ್ನಿಟ್ಟುಕೊಂಡು ಅದು ಹೇಗೆ
Confusion ಆಗದೇ ನಡೆಯುತ್ತಿದೆ. ಎಷ್ಟು ನೋಡಿದರೂ ಸಮಸ್ಯೆ ಬಗೆಹರಿಯದಾದಾಗ ಅದು ಶತಪದಿಯ ಬಳಿಗೇನೇ ಹೋಗಿ ಕೇಳಿತು," ನೀನು ಅದು ಹೇಗೆ  ನಡೆಯುವಾಗ ನೂರು ಕಾಲುಗಳನ್ನು ಸಂಭಾಳಿಸುತ್ತೀಯಾ? ಯಾವುದನ್ನು ಯಾವಾಗ ಇಡಬೇಕು ಎಂದು ಅದ್ಹೇಗೆ ನಿರ್ಧರಿಸುತ್ತೀಯಾ?- ಎಂದು. ಶತಪದಿಗೆ ನಡೆಯುವದಷ್ಟೇ ಗೊತ್ತು. ಹೇಗೆ ಎಂದು ಅದೆಂದೂ ಯೋಚಿಸಿದ್ದೇ ಇಲ್ಲ.ಈಗ ಅದಕ್ಕೆ ಗೊಂದಲ. ಉತ್ತರ ಹೊಳೆಯಲಿಲ್ಲ. ತಾನೇ ಪರೀಕ್ಷಿಸತೊಡಗಿತು, ಈಗ ಯಾವ ಕಾಲಿಟ್ಟೆ, ಮುಂದಿನದು ಯಾವುದು? ಅದರ ಲಕ್ಷ್ಯ( ಗಮನ )ಹಳಿ ತಪ್ಪಿತು. ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಹೊಯ್ದಾಡಿ ಪಕ್ಕದ ಗುಂಡಿಯೊಳಗೆ ಬಿದ್ದೇ ಬಟ್ಟಿತು. 
              ‌
           ಇದು ನಮ್ಮದೂ ಕತೆ ಹೌದು.
ಯಾರೋ ಏನೋ  ತಮಗೆ ಬೇಕಾದದ್ದು
ತಮಗೆ ಬೇಕಾದ ವೇಗದಲ್ಲಿ/ರೀತಿಯಲ್ಲಿ
ತಮಗೆ ತಿಳಿದಂತೆ ಮಾಡುತ್ತಿರುತ್ತಾರೆ.
ಅದು ಚನ್ನಾಗಿಯೇ ನಡೆದಿರುತ್ತದೆ. ಅವರೂ ಅದರೊಂದಿಗೆ comfortable ಆಗಿಯೇ ಇರುತ್ತಾರೆ.
ಜಗತ್ತಿನಲ್ಲಿ ತನ್ನಷ್ಟಕ್ಕೆ ಎಲ್ಲವೂ 
ಹಗಲು/ ರಾತ್ರಿಯಂತೆ ತನ್ನ ಪಾಡಿಗೆ ನಡೆದಿರುತ್ತದೆ.ಆದರೆ ಅದನ್ನು ಸಹಿಸದ
ಕಪ್ಪೆಗಳಿಗೇನೂ ಬರವಿಲ್ಲ.ಸ್ವಭಾವ ದೋಷವೋ/ ಚಟವೋ/ ಸುಮ್ಮನೇ ಕೂಡಲಾಗದ್ದಕ್ಕೋ/ ಉದ್ದೇಶಪೂರ್ವಕವಾಗಿ ಮಾಡುವ ಕಿತಾಪತಿಯೋ/ ಅಥವಾ ಏನು ಮಾಡಿದರೆ ಪರಿಣಾಮ ಮುಂದೆ  ಏನಾಗಬಹುದು ತಿಳಿಯದ ಅಮಾಯಕತೆಯೋ/ ಉಂಡ ಅನ್ನ ಕರಗಲಾಗದ್ದಕ್ಕೋ/ ಬೇರೆ ಯಾವುದೇ ಕೆಲಸವಿಲ್ಲದ್ದಕ್ಕೋ ಅಂತೂ ಉಪದ್ವ್ಯಾಪ ಮಾಡಿ ಒಂದು ಕೊಕ್ಕೆ ಹಾಕಿಯೇ ಬಿಡುತ್ತಾರೆ. ಅದು ಕೆಲವರಿಗೆ
ನಿಭಾಯಿಸಿ ಗೊತ್ತಿದ್ದರೆ ಸರಿ. ಇಲ್ಲದಿದ್ದರೆ
ಮೊದಲೇ ಅನುಮಾನ/ ಆತ್ಮವಿಶ್ವಾಸ ದ ಕೊರತೆ/ ತಮ್ಮ ಬಗ್ಗೆ ತಮಗೇ  ಒಂದು ಗೊಂದಲವಿದ್ದು ಸ್ಪಷ್ಟತೆ ಇಲ್ಲದೇ ಇರುವವರಿಗೆ/ಬೇರೆಯವರ ಮಾತನ್ನು
ಎಷ್ಟು/ ಯಾವಾಗ/ ಪರಿಗಣಿಸಬೇಕು
ಎಂಬ ಅರಿವಿಲ್ಲದವರಿಗೆ ನೇರ ಗುರಿ ತಪ್ಪಿ, ವಿಚಲತೆಯಿಂದ /ಭ್ರಮೆಯಿಂದ
ದಾರಿ ತಪ್ಪಿದವರಾಗುತ್ತಾರೆ. ಪರಿಣಾಮ ವೆಂದೂ ಅಪೇಕ್ಷಿತವಾಗಿರುವದಿಲ್ಲ.
           ‌  
           ಇದರರ್ಥ ಒಂದು ಪ್ರಶ್ನೆ/ ಸಲಹೆ / ಮಾರ್ಗದರ್ಶನ ತಪ್ಪು ಎಂದಲ್ಲ. ಆದರೆ ಅದು ಅನವಶ್ಯಕ ಮೂಗು ತೂರಿಕೆಯಾಗದಂತೆ ಪುಟ್ಟದೊಂದು ಎಚ್ಚರಿಕೆ ಸದಾ ಇರಬೇಕು.ಆ ಇನ್ನೊಬ್ಬರಿಗೆ ಮಧ್ಯಪ್ರವೇಶ ಬೇಕಾ?ಬೇಕಿದ್ದರೆ ಯಾವಾಗ?ಅವರು ಅದನ್ನು
ಸ್ವೀಕರಿಸುವ ಮನಸ್ಥಿತಿ ಇದ್ದವರಾ? 
ಅದರ ಪರಿಣಾಮವೇನಾಗಬಹುದು?
ಇಂಥ ಚಿಕ್ಕ ಪುಟ್ಟ ಪ್ರಶ್ನೆಗಳನ್ನು ಸ್ವಂತಕ್ಕೆ ಒಮ್ಮೆ ಕೇಳಿಕೊಂಡು ಮುಂದುವರಿಯುವದು ಕ್ಷೇಮ...ಅಷ್ಟೇ...

 ‌‌    ‌ ‌‌‌    

Sunday, 4 December 2022

   ‌‌‌    ಒಬ್ಬ ವ್ಯಕ್ತಿಯಿದ್ದ.ಅವನಿಗೆ ಮೈ ತುಂಬ ಬಟ್ಟೆ ಹಾಕ್ಕೊಂಡ್ರೆ ಏನೋ ಇರುಸು ಮುರಿಸು. ಹೀಗಾಗಿ ಎಲ್ಲೆ ಹೋದರೂ ಕನಿಷ್ಟತಮ ಬಟ್ಟೆಯಲ್ಲೇ ತಿರುಗುತ್ತಿದ್ದ. ಒಂದುಸಲ ಪರಿಚಯದ ವ್ಯಕ್ತಿಯೊಬ್ಬರು ," ಯಾಕಯ್ಯಾ, ಏನಿದು
ಅವತಾರ? ಹೊರಗಡೆಯಾದರೂ ಚಂದಾಗಿ dress ಮಾಡಿ ಅಡ್ಡಾಡಬಾರ್ದೇ"- ಅಂದರು.ಅವನು
ಹೇಳಿದ," ಎಂಥ ವಿಚಿತ್ರ ನೋಡಿ ಸಾರ್,
ನಾನೂ ನಿಮನ್ನು ಒಂದು ಪ್ರಶ್ನೆ  ಕೇಳ್ಬೇಕೂಂತಾನೇ ಇದ್ದೆ,ಅದೇಕೆ ಸಾರ್, ಸದಾ ಉಸಿರುಗಟ್ಟುವ ಹಾಗೇ ಮೈತುಂಬಾ ಬಟ್ಟೆ ಸುತ್ಗೋತೀರಾ? ಸ್ವಲ್ಪು ಸಡಿಲಾಗಿ ಎಷ್ಟು ಬೇಕು ಅಷ್ಟೇ
Dress ಮಾಡಿ ಹಾಯಾಗಿ ಉಸರಾಡ್ಕೊಂಡು ಇರ್ಬಾರ್ದಾ?"
ಎಂದು ಕೇಳಿದ...
              ‌ಯಾರದು ಸರಿ? ಯಾರದು
ತಪ್ಪು? ಅವರವರಿಗೆ ಅವರವರದೇ ಸರಿ. ಯಾಕೆಂದರೆ ಅವೆಲ್ಲ ವೈಯಕ್ತಿಕ
ನಿಲುವುಗಳು.ಆಚಾರ, ವಿಚಾರದಂತೆ
ಉಡುಪು ಸಹ ವ್ಯಕ್ತಿಗತ ವಿಷಯ. ನಮ್ಮ ಅಭಿಪ್ರಾಯ ಅಲ್ಲಿ ಅನಗತ್ಯ. ಹಾಗೆಯೇ ನಮ್ಮ ಅನಿಸಿಕೆಗಳು ನಮ್ಮವು.ಅವು ಇತರರಿಗೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮವಾಗದಿದ್ರೆ  ಕೇಳುವ ಅವಶ್ಯಕತೆಯಿಲ್ಲ.
             " ಹೌದು, ಇದು ನನ್ನ ನಿಲುವು. ನಾನು ಅತಿ ಓದಿದವಳಲ್ಲ.ಯಾವುದೇ
'ಇಸಂ' ಗೆ ಸೇರಿದವಳಲ್ಲ.ಹೀಗೇ ಇರಬೇಕು ಎಂಬ ಹಟವಿಲ್ಲ. ಹೀಗೇ ಎಂದು ಹಟಹಿಡಿದು  ಸಾಧಿಸುವಷ್ಟು ಜ್ಞಾನ ಸಂಪಾದನೆಯೂ ನನ್ನದಲ್ಲ.ನನ್ನ
ಅರಿವಿಗೆ ಬಂದಷ್ಟು ಬರೆದುಕೊಂಡು, ತಿಳಿದಷ್ಟು ಅರಗಿಸಿಕೊಂಡು, ನನ್ನದೇ
ಒಂದು ಮಿತಿಯಲ್ಲಿ ಬದುಕುವದನ್ನು ಕಲಿತಿದ್ದೇನೆ.ಆದರೆ ನನ್ನ ಸ್ನೇಹಿತ ವರ್ಗ ತುಂಬ ವಿಶಾಲ ಹಾಗೂ ವೈವಿಧ್ಯಮಯ
ಎಲ್ಲನಮೂನೆಯ ಪ್ರತಿಭಾವಂತರಿದ್ದಾರೆ
ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಂತ ವರಿದ್ದಾರೆ.ಅದನ್ನು ಯಾವುದೇ  ಪೂರ್ವಾಗ್ರಹವಿಲ್ಲದೇ ಅನುಭವಿಸಿ
ಆನಂದಿಸುತ್ತೇನೆ.- ಎಂದೆಲ್ಲ ನನ್ನ ಮಟ್ಟಿಗೆ ನಾನು ಅಂದುಕೊಂಡದ್ದಿದೆ.
ಎಲ್ಲರನ್ನೂ ಮೀರಿದ ಅರಿವು ನನಗಿದೆ, ಪರವಾಗಿಲ್ಲ ಎಂಬುದೊಂದು ಸಣ್ಣ ಜಂಬವಿತ್ತಾ? ಗೊತ್ತಿಲ್ಲ.
      ‌‌‌         ತಿಳಿರು- ತೋರಣ ಮಾಲಿಕೆ ಯಲ್ಲಿ ಶ್ರೀವತ್ಸ ಜೋಶಿಯವರ ಇಂದಿನ ಕಂತು ಓದಿ, ಪ್ರತಿಕ್ರಿಯೆ ನೀಡಿ, ಆದಮೇಲೆ ಸಾಯಂಕಾಲ ಅವರದೇ ಒಂದು ಶತಾವಧಾನದ ಹಳೆಯ ವೀಡಿಯೋ ನೋಡಿ ಅದೇ ಗುಂಗಿನಲ್ಲಿದ್ದಾಗ ಜೋಶಿಯವರಿಗೆ ಧನ್ಯವಾದಗಳನ್ನು ಹೇಳಿದ ಶತಾವಧಾನಿ ಆರ್ ಗಣೇಶ್ ಅವರ ಧ್ವನಿಯ ಆಡಿಯೋ ಕೇಳಿದೆ.ನನ್ನ ಅಹಂ ನ ಬಲೂನಿಗೆ ಸೂಜಿ ಚುಚ್ಚಿದಂತಾಗಿ  ಚಪ್ಪಟೆಯಾದದ್ದು ಇನ್ನೂ ಸರಿಯಾಗಿಲ್ಲ...

       




Saturday, 3 December 2022

ನಾನೂ ಧಾರವಾಡದಲ್ಲಿ ಅವರ ಅಷ್ಟಾವಧಾನ ಕಾರ್ಯಕ್ರಮಗಳನ್ನು ನೋಡಿದ್ದೇನೆ.ಒಂದಂತೂ ನಮ್ಮ school ನಲ್ಲೇ ಆಯೋಜಿತವಾಗಿತ್ತು. ಸಂಸ್ಕೃತದಲ್ಲಿ ನನಗೆ ಹೆಚ್ಚಿನ ಜ್ಞಾನ ವಿಲ್ಲದಿದ್ದರೂ ಯಾವುದೇ ಪದಗಳನ್ನು ಕ್ಷಣಾರ್ಧದಲ್ಲಿ ಹೊಂದಿಸಿ/ ಪೋಣಿಸಿ ಪದ್ಯ ರಚಿಸಿ ಹೇಳುವ ಅವರ ಜಾಣ್ಮೆಗೆ
ತೆರೆದ ಬಾಯಿ ಮುಚ್ಚದೇ ನೋಡುತ್ತಿದ್ದ ನೆನಪು.ಆ ಅಪ್ರಸ್ತುತ ಅಧಿಕ ಪ್ರಸಂಗಿಯ ತಲೆ- ಬುಡವಿಲ್ಲದ ಪ್ರಶ್ನೆಗಳಂತೂ ನಮ್ಮ ತಲೆಯನ್ನು ಗಿರಿಗಿರಿ ತಿರುಗಿಸಿಬಿಟ್ಟರೆ ಅವಧಾನಿಗಳು ಎಲ್ಲಿಂದಲೋ ಕೊಂಡಿ
ಸೃಷ್ಟಿಸಿ ಧಿಡೀರ್ ಉತ್ತರ ಕೊಡುತ್ತಿದ್ದರು
ರಘು ಅಪಾರವರ  ' ಚೌ- ಚೌಪದಿ- ಯಲ್ಲಿ ಎಲ್ಲಿಂದಲೋ ಹೆಕ್ಕಿ ತೆಗೆದ ನಾಲ್ಕು ಪದಗಳನ್ನು ಬಳಸಿ ಬರೆಯಬೇಕಾದ ಆಶು- ಕವನಗಳಿಗೆ 
ಇವರ ಅಷ್ಟಾವಧಾನ ನೋಡಿದ ಅನುಭವದ ಆಧಾರದ ಮೇಲೆಯೇ
 ಬರೆದ ಕವನಗಳನ್ನು ಅದೇ ಹೆಸರಿನಲ್ಲಿ
ಪ್ರಕಟಿಸಿದ್ದು ನನ್ನ ಮೊದಲ ಪ್ರಯತ್ನ...
ಇದೀಗ 'ಜ್ಞಾನ- ಗಣಿ'ಗಳು ಅರವತ್ತು ಸಂವತ್ಸರಗಳ ಒಂದು ಸುತ್ತು ಮುಗಿಸಿ
ಎರಡನೇ ಸುತ್ತು ಓಡಲು ಅಣಿಯಾಗಿದ್ದಾರೆ.ಅವರಿಗೆ ಆಯುರಾರೋಗ್ಯ/ ದೀರ್ಘಾಯುಷ್ಯ
ನೀಡಿ ವಿಶೇಷವಾಗಿ ಆಶೀರ್ವದಿಸಲು ಆ ದೇವರಲ್ಲಿ ಪ್ರಾರ್ಥನೆ...
            ನನಗೀಗ ಎಪ್ಪತ್ತೇಳು ವರ್ಷ. ನಡೆದು ಬಂದ ದಾರಿ ವೈವಿಧ್ಯಮಯ, ಹೊಸ ಹೊಸ ಪ್ರಯೋಗಗಳ ಹಂತ ಗಳನ್ನು ದಾಟಿ ಇಲ್ಲಿಯವರೆಗೆ ಬಂದದ್ದು. ಸೌದೆಯಿಂದ ಸೋಲಾರ್ ವರೆಗೆ, ಬಯಲು ಶೌಚದಿಂದ ಕಮೋಡ ವರೆಗೆ, ಸಾಲೆ ಗುಡಿಯಿಂದ ವಿಶ್ವವಿದ್ಯಾ ಲಯದ ವರೆಗೆ, ರಟ್ಟೀಹಳ್ಳಿಯಿಂದ 
ಒಂಬತ್ತು ದೇಶಗಳ‌ ಪರ್ಯಟನದ ವರೆಗೆ, ಕಚ್ಚೆ ಸೀರೆಯಿಂದ ಚೂಡಿ
ದಾರದ ವರೆಗೆ... List goes endless.
  ‌‌            ಆದರೆ ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಹಣವಿದ್ದ ರೆ ಗುಣವಿಲ್ಲ.ಪ್ರತಿಭೆ ಇದ್ದರೆ ಬಡತನ, ಎರಡೂ ಇದ್ದರೆ ಆರೋಗ್ಯ ಸಮಸ್ಯೆ. ಎಲ್ಲ ನೆಟ್ಟಗಿದೆಯೋ ಮಕ್ಕಳು ಇಲ್ಲ ವೆಂಬ ಚಿಂತೆ. ಅಷ್ಟೇ ಆದರೆ  ಒಂದೇ ಸಮಸ್ಯೆ, ಇದ್ದರೆ ನೂರಾರು...ಹೀಗೇ...
  ‌‌‌‌           ಬಹುತೇಕ ಬದುಕಿಗಿರುವಷ್ಟು
ಉಪಮಾನ/ ಉಪಮೇಯಗಳು ಬೇರೆಯದಕ್ಕೆ ಇಲ್ಲವೇನೋ.  ಅದೊಂದು ಒಗಟು (ಪಹೇಲಿ) ಅನ್ನುವದರಿಂದ ಹಿಡಿದು ಬದುಕೊಂದು ಸಂಗ್ರಾಮ ಅನ್ನುವದರ ನಡುವೆ ನೀವು ಏನನ್ನೇ ಸೇರಿಸಿ, ಹೀರಿಕೊಳ್ಳುತ್ತದೆ, ಅಷ್ಟು ದೊಡ್ಡ ಒಡಲು ಅದಕ್ಕೆ...
                ‌  
     ‌‌        ಬಾಲ್ಯಕ್ಕೆ ಮುಗ್ಧತೆಯಿದೆ,
ಸಮಯವಿದೆ,ನಿಷ್ಕಲ್ಮಷ ಪ್ರೀತಿಯಿದೆ-ಜೊತೆಗೆ ಅಭ್ಯಾಸದ ಒತ್ತಡ, ಅನಾರೋಗ್ಯಕರ ಪೈಪೋಟಿ, ಮೊಬೈಲ್/ ಕಂಪ್ಯೂಟರ್ ಗಳ ಅಪರಿಮಿತ ಸೆಳೆತವಿದೆ... ಯೌವನಕ್ಕೆ ಶಕ್ತಿಯಿದೆ,ಕನಸಿನ ಹಾದಿಗಳಿವೆ, ವೇಗದ ಬದುಕಿನ ಒತ್ತಡವೂ ಇದೆ. ಹೀಗಾಗಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಬಹಳವಿದೆ. ಮುಪ್ಪಿಗೆ ವಿಶ್ರಾಂತಿಯಿದೆ, ಮಕ್ಕಳ ಭಾಗ್ಯವಿದೆ,ಆದರೆ ನೆಮ್ಮದಿಯ
ಖಚಿತತೆ ಕಡಿಮೆ...
              ಇಷ್ಟೆಲ್ಲ ಪುರಾಣಕ್ಕೂ ಒಂದು ಹಿನ್ನೆಲೆಯಿದೆ.ಬೆಳಿಗ್ಗೆ ಸೋನೂ ವೇಣುಗೋಪಾಲ ಅವಳ ವೀಡಿಯೋ ಒಂದು ನೋಡಿದೆ.
        
        " ಬದುಕು ರಾಜಾಜಿನಗರವಿದ್ದಂತೆ" - ಒಂದು ಬದಿ 'ನವರಂಗ'- ಇನ್ನೊಂದು ಬದಿ ' ಹರಿಶ್ಚಂದ್ರ ಘಾಟ್ '- ಅಂದಳು.
ಹಸಿಗೋಡೆಗೆ ಹರಳು ಒಗೆದಂತೆ ನೆಟ್ಟಿತು.ಅದರ ಬಗ್ಗೆಯೇ ವಿಚಾರ ಲಹರಿ ಹರಿದಾಗ ಹೊರಬಂದ ಹೂರಣವಿಷ್ಟು...




ಬದುಕೆನಗೆ ದಿನಕ್ಕೊಂದು ಪಾಠ ಕಲಿಸಿತು.. ಒಂದು ದಿನ  ನಗುವುದನ್ನು  ಕಲಿಸಿದರೆ  ಮರುದಿನ ಹಲ್ಲು ಕಚ್ಚಿ  ನೋವು  ನುಂಗುವುದನ್ನು   ಕಲಿಸಿತು. ಕೆಲವು ಕನಸುಗಳು  ಭಗ್ನವಾದವು...