Saturday, 10 December 2022

ಬದುಕೊಂದು ಬಹುರೂಪ ದರ್ಶಕ...

      ಎರಡು ದಿನ ಮೈಸೂರಿನಲ್ಲಿ ಮಗಳ
 ನೂತನ ಮನೆಯ ಗ್ರಹಪ್ರವೇಶವಿತ್ತು.
ತಿಂಗಳಿಗೂ ಮೀರಿ ಕಾಡುತ್ತಿದ್ದ ಬೆನ್ನು ನೋವು/ ಅಲರ್ಜಿ ಕೆಮ್ಮಿನಿಂದಾಗಿ
ನನ್ನ ಪಾತ್ರ ಕೇವಲ ಒಂದೆಡೆಗೆ ಕೂತು
ನೋಡಿ ಖುಶಿಪಡುವದಕ್ಕೆ ಸೀಮಿತವಾಗಿತ್ತು.ನಂತರ ಗೊತ್ತಾದದ್ದು
ನಾನೇ ಎಲ್ಲಕ್ಕಿಂತಲೂ ಹೆಚ್ಚು ಫಲಾನುಭವಿ ಎಂದು.
         ‌       ಒಳಗೊಳ್ಳುವಿಕೆ ಇಲ್ಲದೇ ದೂರದಲ್ಲಿ ನಿಂತು ಏನೋ ಒಂದನ್ನು
ನೋಡಿ ಅನುಭವಿಸುವದರ ಮೋಜು
ನನಗೆ ಪ್ರತಿಶತ ನೂರರಷ್ಟು ಸಿಕ್ಕದ್ದು ಈ ಸಲದ ವಿಶೇಷ.
                ತೊಂಬತ್ತರ ವಯಸ್ಸಿನವರು
/ ಅಥವಾ ಅದಕ್ಕೆ ಸಮೀಪವಿದ್ದವರ
ಗುಂಪೊಂದು ಒಂದೆಡೆ ಕೂತು ತಮ್ಮ ಕಾಲದ/ ಈ ಕಾಲದ  ಸ್ಥಿತ್ಯಂತರಗಳ
ತುಲನೆಯಲ್ಲಿ ತೊಡಗಿಕೊಂಡು ಅದರ
ಮೌಲ್ಯಮಾಪನ ನಡೆಸಿ ಲಾಭಾಲಾಭದ
ಸರಿದೂಗಿಸುವಿಕೆಯಲ್ಲಿ ತಲ್ಲೀನರಾಗಿದ್ರೆ
' ಎರಡು+' ವಯಸ್ಸಿನ ಮಕ್ಕಳ ಪಾಲಕರ ಥಕ ಥೈ- ನೋಡುಗರಿಗೆ ಹಬ್ಬ.
ಗೊತ್ತುಗುರಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ಅಲ್ಲಿಲ್ಲಿ ಓಡಾಡಿಕೊಂಡು / ಆಟ ಗಳಲ್ಲಿದ್ದರೂ ಆತಂಕ, ಏನೋ ಮಾಡಿಕೊಂಡು ಒಮ್ಮೆಲೇ ಅಳಲು ಸುರುವಾದರೂ ಆತಂಕ.ಅಮ್ಮ/ ಅಪ್ಪ/ ಅಜ್ಜ- ಅಜ್ಜಿಯರ ಭಾಗದೌಡು...
           ‌‌"ಅದು ತನ್ನಿ, ಇದು ಮಾಡಿ-"
ಇಂಥ ಸಣ್ಣ- ಪುಟ್ಟ ಸುಗ್ರೀವಾಜ್ಞೆ ಪಾಲಿಸುವ ಯುವ ಪಡೆ ಒಂದು ಕಡೆಯಾದರೆ, " ಕಾಫಿ ಬೇಕಾ? ಟೀ ಬೇಕಾ? ಶುಗರ್ ಇರಲಿಯಾ?/ ಬೇಡವಾ? ಗಳನ್ನು ಕೇಳಿಕೊಂಡು ಕೂತಲ್ಲೇ ಒದಗಿಸುತ್ತಿರುವ ಅಡುಗೆ ಯವರ ಸಹಾಯಕರ ರಂಗ ಪ್ರವೇಶ 
ಮಧ್ಯೆ ಮಧ್ಯೆ...ನಿರಂತರವಾಗಿ ಬರುತ್ತಿರುವ ಆಮಂತ್ರಿತರು ಯಾರ ಕಡೆಯವರು? ಮನೆ ಜನರ ಕಡೆಯಿಂದ ಮನೆಗೇ ಬಂದವರಾ, ಈಗ ಮಾತ್ರ ಕಾರ್ಯಕ್ರಮಕ್ಕೆ ಬಂದವರಾ? ತಿಳಿಯದೇ ಒಂದು ರೀತಿಯಲ್ಲಿ ಕಂಗಾಲಾದರೂ ದೇಶಾವರಿಯ ನಗೆ ನಕ್ಕು ಪರಿಸ್ಥಿತಿ ಸಂಭಾಳಿಸುವ ಹೊಣೆಗಾರಿಕೆ ಹೊತ್ತ ಸ್ವಾಗತಕಾರರ
ಪುಟ್ಟದೊಂದು ತಾಕಲಾಟ...ಏನೋ ಗಟ್ಟಿಯಾದದ್ದೊಂದು ಮಾಡಲಾಗದೇ/ ಹಾಗೇ ಸುಮ್ಮನೇ ಕೂಡಲೂ ಮುಜುಗರ ಪಡುವ ಕೆಲ ಸಹೃದಯ
ಮಧ್ಯವಯಸ್ಕರ ಗುರಿಯಿಲ್ಲದ ಅತ್ತಿಂದಿತ್ತ/ ಇತ್ತಿಂದತ್ತ ನಡೆದ ಪಥ ಸಂಚಲನ, ಸದ್ದು ಗದ್ದಲವಿಲ್ಲದೇ,ಒಂದು ಕಪ್ ಚಹವನ್ನೂ ಕುಡಿಯದೇ ದುಡಿಯಲೇ ಹುಟ್ಟಿದಂತಿದ್ದವರ 'ಪರೋಪಕಾರಾರ್ಥಂ ಇದಂ ಶರೀರಮ್'- ಗುಂಪು ಒಂದು ಕಡೆಯಾದರೆ, ಹಾಕಿದ ಶಾಮಿಯಾನಾ
ದಲ್ಲಿ,ಯಾರಿಗೂ ತೊಂದರೆಯಾಗದಂತೆ
ಸ್ಥಳಹುಡುಕಿಕೊಂಡು ' ಕರೆದಾಗ ಒಂದು ನಗೆಯೊಂದಿಗೆ ತಟ್ಟನೇ ಹಾಜರಾಗಿ ಹೇಳಿದ ಕೆಲಸ ಮುಗಿಸಿ ಮತ್ತೆ ಮರಳಿ ಸುಖಾಸೀನರಾಗುವ ' ನಿರುಪದ್ರವಿಗಳ'
ನಿರಾಳದ ತಂಡದ್ದು ಇನ್ನೊಂದು ದೃಶ್ಯ.
            ‌‌‌‌‌‌ಇಡೀ ವಾತಾವರಣವನ್ನೇ
ಒಂದು ಸೂತ್ರದಿಂದ ಬಂಧಿಸಿ ರಾಜ-ಮಹಾರಾಜರ ವಂದಿ ಮಾಗಧರ ಕಂಚಿನ ಕಂಠದಲ್ಲಿ ಮಂತ್ರೋಚ್ಚಾರಣೆ
ಮಾಡುತ್ತ ಸದಭಿರುಚಿಯ ಸಜ್ಜನರನ್ನು
ಮಂತ್ರಮುಗ್ಧರಾಗಿಸುವ ಪುರೋಹಿತ ತಂಡದವರ ಸಮ್ಮೋಹಿನಿಯದೇ ಒಂದು ಸೆಳೆತವಾದರೆ, ಕ್ಷಣಕ್ಕೊಂದು ಹೊಸ ಸೀರೆಯುಟ್ಟು ಗುಂಪುಗುಂಪಾಗಿ
ಹಾಡು- ಕುಣಿತ/ ಮೋಜು- ಮಸ್ತಿ mood ಗಳಲ್ಲಿ ,ಫೋಟೋ sessions ಮಾಡುತ್ತ  ವಯಸ್ಸಿನ ಭೇದವನ್ನೇ ಸಂಪೂರ್ಣ ಮರೆತುಬಿಟ್ಟು ಸಂಭ್ರಮಿಸುತ್ತಿದ್ದ ಹೂಮನಸ್ಸಿನವರ
ಪಡೆ ,ನಮ್ಮಂತೆ ಒಂದೆಡೆ ಕುಳಿತು  
ಆನಂದ ಪಡೆಯುತ್ತಿದ್ದ ಗುಂಪಿಗೆ ಚೇತೋಹಾರಿ...
         ‌‌‌  ಏನೂಂತ ಹೇಳುತ್ತ ಹೋಗುವದು? ಬಿಚ್ಚಿದಷ್ಟೂ ತೆರೆದು ಕೊಳ್ಳುವ  ಸಡಗರ ನೋಡಿದ ಮೇಲೆ ಕೊನೆಗೆ ನನಗನಿಸಿದ್ದು ' ಅಸಂಖ್ಯಾತ ಸಂದರ್ಭಗಳಿಗೆ ಧಾರ್ಮಿಕ ದಿರಿಸು ತೊಡಿಸಿ, ಯಾವುದೋ ಕಾರಣ ಕೊಟ್ಟು
ಜನರನ್ನು ಒಗ್ಗೂಡಿಸಿ, ದಿನದ ಆಗು ಹೋಗುಗಳನ್ನು ಒಂದು ದಿನವಾದರೂ ಮೈಮರೆಸುವಂತೆ ಮಾಡಿ,
 ಸಾರ್ವಜನಿಕ ಬದುಕನ್ನು ಹದಗೊಳಿಸಿದ  ಹರಕಾರರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ...




     ‌‌ ‌      ‌


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...