'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು...
ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ , ಅವರ ' ಶತಾಯುಷ್ಯದ' ಗುಟ್ಟೇನು ಎಂದು ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ."ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.
" ಒಂದು ವರ್ಷ ನಮ್ಮ ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ, ನಮ್ಮ ಸಾವಿಗೆ ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮಿಸುವದುವಿಚಿತ್ರವಲ್ಲವೇ? _ಹೀಗೆಂದು ಒಮ್ಮೆ ನಮ್ಮ ಗುರುಗಳನ್ನು ಕೇಳಿದ್ದೆ.
" ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ,ನಂತರ ವೋ ಅಂಗವಿಕಲರಾಗಿರುತ್ತಾರೆ. ಅನೇಕರಿಗೆ ಬದುಕು ದಿನನಿತ್ಯದ ಹೋರಾಟವಾಗಿರುತ್ತದೆ. ಇದಾವುದೂ ಇಲ್ಲದೇ ಅಥವಾ ಇದನ್ನೆಲ್ಲ ಗೆದ್ದು ದೈವೀ ಕೃಪೆಯಿಂದ ಕೆಲವರ್ಷಗಳನ್ನು ಕಳೆಯುವಂತಾದರೆ ಅದು ಸಂಭ್ರಮ ವಲ್ಲವೇ?"- ಎಂದಿದ್ದರು ಗುರುಗಳು. ಮರುಮಾತಾಡದೇ ಒಪ್ಪಿಕೊಂಡಿದ್ದೆ.
ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾ ದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು ಅನಿಸುತ್ತದೆ. ಅಂದಮೇಲೇ 'ಹುಟ್ಟು' 'ಹಬ್ಬ'ವಾಗು ವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ನನಗೆ ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).
ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.ಆದರೆ ಅದಕ್ಕೆ ಸಮೀಪದಲ್ಲಿ ಮುಂಬರುವ
ಯಾವುದೋ ಒಂದು ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು. 'ಎರೆದು ಕೊಳ್ಳುವವರ ನಡುವೆ ಡೊಗ್ಗಿದಂತೆ' ಅಂದೊಂದು ದಿನ ನಮ್ಮನ್ನು ಕೂಡಿಸಿ, ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು 'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ ನಮ್ಮ' ಹುಟ್ಟು ಹಬ್ಬದ' main ಮೆನ್ಯೂ'.
ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಇದಕ್ಕೂ ಹೆಚ್ಚು ಏನನ್ನೂ ಬಯಸುತ್ತಲೇ ಇರಲಿಲ್ಲ ಎಂಬುದು. ಒಂದು ರೀತಿಯಲ್ಲಿ ಬದುಕನ್ನೇ 'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ನಮಗೆ ಹೇಳಿಕೊಡದಿದ್ದರೂ ನಾವು ಕಲಿತಿದ್ದು ನಮ್ಮ ಪಾಲಕರನ್ನು ಅವರ ಸಾದಾ ಬದುಕನ್ನು ನೋಡಿಕೊಂಡೇ ...
ಇಂದಿಗೆ ನನಗೆ ಎಪ್ಪತ್ತೇಳು ಮುಗಿದು ಎಪ್ಪತ್ತೆಂಟಕ್ಕೆ ಕಾಲಿಟ್ಟೆ. ಮನುಷ್ಯನ ಸರಾಸರಿ ವಯಸ್ಸಿನ ಮಿತಿಯನ್ನೂ ದಾಟಿದ್ದಾಗಿದೆ.ಹಲವು ಬಗೆಯ ಸುಖ-ದುಃಖ, ಸವ್ಯ-ಅಪಸವ್ಯ, ಪ್ರೀತಿ-ದ್ವೇಷ, ಅನುಭವ - ಅನುಭಾವ ಗಳ ಅಗ್ನಿದಿವ್ಯ ಹಾದು ಬಂದದ್ದಾಗಿದೆ. ಇದುವರೆಗೆ ಶಾಲೆ- ಕಾಲೇಜುಗಳು ನನಗೆ ಕಲಿಸಿದ್ದಕ್ಕಿಂತ ಬದುಕಿನಿಂದ ನಾನು ನೇರವಾಗಿ ಕಲಿತದ್ದೇ ಹೆಚ್ಚು.
ಈಗ ನನಗೆ ಬೇಕಾದಂತೆ ಬದುಕಬಹುದಾದ ಸ್ವಾತಂತ್ರ್ಯ ಸಿಕ್ಕಿದೆ.
ಮೊಮ್ಮಕ್ಕಳೆಲ್ಲ ಹದಿಹರಯ ದಾಟಿ
ಅಪ್ಪ- ಅಮ್ಮಂದಿರ ವೃತ್ತಗಳಿಂದಲೂ ನಿಧಾನವಾಗಿ ಬಹಿರ್ಮುಖವಾಗಿ ಸ್ವಂತ
ವಲಯಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ME TIME
ಹೆಚ್ಚು ದೊರಕುತ್ತಿದೆ. ಪರಿಣಾಮವಾಗಿ
ನಮ್ಮದೆಂದೇ ಒಂದು Work strategy
ಕಂಡುಕೊಳ್ಳುವದು ಸುಲಭವಾಗಿದೆ.
ನನ್ನದ್ಯಾವಾಗಲೂ ಒಂದು
Frame Work ನಲ್ಲೇ ಕೆಲಸ.ಬೆಳಗಿನ
ದಿನಚರಿ/ ಸ್ನಾನ/ break fast/ ಅರ್ಧ ಗಂಟೆ ಬಿಸಿಲು- ಸ್ನಾನ/ ಒಂದು ಗಂಟೆ face- book ಓದು- ಬರಹ/ ನಂತರ ಒಂದು ಗಂಟೆ ಅಡುಗೆ ಮನೆಯಲ್ಲಿ/ ಊಟದ ನಂತರ ವಿಶ್ರಾಂತಿ/ಒಂದೆರೆಡು
ಸೀರಿಯಲ್- U Tube ಆಯ್ದ ಕಾರ್ಯ
ಕ್ರಮಗಳು/ ಚಹ- ಒಂದೆರಡು ಫೋನುಗಳು ಹೀಗೆ...ಯಥಾಪ್ರಕಾರ
ಸಂಜೆ- ರಾತ್ರಿ...ಒಮ್ಮೊಮ್ಮೆ ಆಚೀಚೆ ಯಾಗುವದುಂಟು, ಆದರೂ ತುಂಬಾ ಕಡಿಮೆ...
ಬದುಕು ಏನೇ ಪರೀಕ್ಷೆ ಒಡ್ಡಲಿ, ತಕರಾರು ಮಾಡುವ ಹಂತ ಮೀರಿದ್ದೇನೆ.ಇಷ್ಟೂ ಸಿಗದ ಅನೇಕ ಹತಭಾಗ್ಯರನ್ನು ಕಂಡಿದ್ದೇನೆ/ ಓದಿದ್ದೇನೆ/ ಕೇಳಿದ್ದೇನೆ/ನನಗೆ ಬದುಕಿನ ಬಗ್ಗೆ ತಕರಾರಿಲ್ಲ. ಒಂದೊಮ್ಮೆ ಮುಖ್ಯ 'ಬಾಗಿಲನ್ನೇ'- ಮುಚ್ಚಿ ಹೆದರಿಸಿದ್ದರೂ ನಂತರದಲ್ಲಿ ನೂರು 'ಕಿಟಕಿ'ಗಳನ್ನು ನನಗಾಗಿ ತೆರೆದು, ಬದುಕು ನನ್ನ ದಾರಿ ಸುಗಮಗೊಳಿಸಿದೆ. ಅದಕ್ಕಾಗಿ ನಾನದಕ್ಕೆ ಚಿರ ಋಣಿ... ಅದು ಕೊಟ್ಟದ್ದನ್ನು ಸಮರ್ಥವಾಗಿ ಬಳಸಿಕೊಂಡ ಬಗ್ಗೆ ನನಗೆ ತೃಪ್ತಿ/ ಹೆಮ್ಮೆ ಎರಡೂ ಇದೆ. ಹೀಗೆಯೇ ಮುಂದೆಯೂ ನಡೆಯಬಹುದೆಂಬ ಕನಿಷ್ಟ ಆಸೆ- ಭರವಸೆ- ನಿರೀಕ್ಷೆ ಎಲ್ಲವುಗಳೊಂದಿಗೆ ಬದುಕಿನ ಶೇಷಭಾಗ ಕಳೆಯುವದೀಗ ನನ್ನ ಆದ್ಯತೆ...
ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions.90% Emotions. ಇದು ನನ್ನ ಭಾವನೆ.
ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು ರಸಗಳಿಗೆಗಳು...
THAT'S IT...
No comments:
Post a Comment