Thursday 15 June 2023

 ನೀವೆಳೆದ ' ಗೆರೆ' ಚಿಕ್ಕದಾಗಬೇಕೇ?
 ಪಕ್ಕಕ್ಕೊಂದು 'ದೊಡ್ಡ ಗೆರೆ'       ಎಳೆಯಿರಿ... 
           
                 ಕೋವಿಡ್ ಶುರುವಾದ ಪೂರ್ವದಿಂದಲೇ ಇದ್ದ ನನ್ನ ಕಣ್ಣಪೊರೆ ಯ ತಕರಾರು ಯಾವ್ಯಾವದೋ ಕಾರಣಕ್ಕೆ ಮುಂದೆ ಮುಂದೆ ಹೋಗಿ, ನಂತರ ಕೋವಿಡ್ ನ ಎರಡು ಅಲೆಗಳ ಪರಿಣಾಮದಿಂದ ಬಾಕಿಯುಳಿದು ಕೊನೆಗೊಮ್ಮೆ 2020 ರ ಡಿಸೆಂಬರ್ ಎರಡನೇ ತಾರೀಕಿಗೆ ಸಂಪನ್ನವಾಯಿತು
ಆದರೆ ಮೂರನೇ ಅಲೆಯ ' ತೋಳ ಬಂತಲೇ ತೋಳ' - ಕಥೆಯಾಗಿ ಮೂರನೇ ಅಲೆ ಯಾವಾಗ ಬರುವದೋ ಎಂಬ ಆತಂಕದಡಿ ಆಪರೇಶನ್ ನಂತರದ check up ಆಗಿರಲೇಯಿಲ್ಲ.ಆ ಕಾರಣಕ್ಕೆ ನಿನ್ನೆ
ಪೂರ್ವಾನುಮತಿ ಪಡೆದು ನಾರಾಯಣ
ನೇತ್ರಾಲಯದ ದರ್ಶನ ಭಾಗ್ಯ ಪಡೆಯುವ ಭಾಗ್ಯ ನನ್ನದಾಯ್ತು..

              " ನಾವೆಷ್ಟು ಸ್ವತಂತ್ರರು ಎಂದು ತಿಳಿಯಲು ಜೇಲಿಗೆ, ನಾವೆಷ್ಟು
ಅಜ್ಞಾನಿಗಳು ಎಂದು ಗೊತ್ತಾಗಲು ಗ್ರಂಥಾಲಯಗಳಿಗೆ, ನಾವೆಷ್ಟು ಆರೋಗ್ಯವಂತರು ಎಂದು ತಿಳಿಯಲು
ಆಸ್ಪತ್ರೆಗಳಿಗೆ ಆಗಾಗ ಭೇಟಿ ಕೊಡಬೇಕಂತೆ."- ಈ ಹೇಳಿಕೆಯ ನಿಜಾಂಶ ನಿನ್ನೆ ಅರಿವಾಯ್ತು ನನಗೆ...
ಇನ್ನೂ ತಾಯ ಎದೆಹಾಲು ಕುಡಿಯುವ ಮಕ್ಕಳಿಂದ ಹಿಡಿದು, ಬದುಕೆಂಬ ಬಾಗಿಲಿನ ಹೊರಬಾಗಿಲನ್ನು ಶಾಶ್ವತವಾಗಿ ಮುಚ್ಚಿಕೊಂಡು ದಾಟಿ ಹೋಗುವ ಹಂತದ ಅನೇಕರನ್ನು
ಕಣ್ಣಾರೆ ಕಂಡೆ.ನನಗೆ ಹುಟ್ಟಿನಿಂದಲೇ
ಒಂದು ಕಣ್ಣಿನ ದೋಷವಿದೆ.ಇನ್ನೊಂದ
ರ ಬಲದ ಮೇಲೆಯೇ ಕಲಿತು/ ಕಲಿಸಿ,
ಬರೆದು/ ಓದಿ ಎಂಬತ್ತರ ಅಂಚನ್ನು
ತಲುಪಿದ್ದೇನೆ.ನನಗೆ ನಾನೇ ' ನನ್ನನ್ನು ಶುಕ್ರಾಚಾರ್ಯರ ಮಗಳು / ಪಟೌಡಿ ನವಾಬನ ಬಂಧು ಎಂದು ತಮಾಷೆ ಮಾಡಿಕೊಂಡಿದ್ದೇನೆ.' ಆದರೂ ನನಗೇ ಇಷ್ಟೊಂದು ಆತಂಕವಿದ್ದಾಗ ಚಿಕ್ಕವರು- ದೊಡ್ಡವರೆನ್ನದೇ ಇನ್ನೊಬ್ಬರ ಆಧಾರ ದಿಂದ ತಡವರಿಸುತ್ತ ಹೆದರಿಕೆಯಲ್ಲಿ
ಯೇ ಹೆಜ್ಜೆ ಊರಿ ನಡೆವ ದೃಶ್ಯದಿಂದ ಕಂಗಾಲಾದೆ.ನನ್ನ ನೋವು/ ಆತಂಕ/ ಕಾಳಜಿ ಯಾವ ಲೆಕ್ಕಕ್ಕೆ !? ಎಂದು ಮೊದಲ ಬಾರಿ ಅನಿಸಿತು.ಇಷ್ಟೊಂದು ಬವಣೆ ಬದುಕಿನಲ್ಲಿದ್ದವರು
ಆಸ್ಪತ್ರೆಗಳ ಭೇಟಿಯಲ್ಲಿ ಒಟ್ಟಾಗಿ ಸಿಕ್ಕಾಗ ಆಗುವ ಮನಸ್ಸಿನ ತುಡಿತ- ಭಾವಗಳನ್ನು ದಾಖಲಿಸಲಾಗುವದಿಲ್ಲ.
ಇನ್ನು ಉಳಿದ ಒಂದೊಂದೇ ಆಸ್ಪತ್ರೆ/ ಅಲ್ಲಿಯ ನೋವು- ನರಳಿಕೆಗಳನ್ನು
ಕಣ್ಣಾರೆ ಕಂಡು ಲೆಕ್ಕ ಹಾಕಿದಾಗ, ಸಿದ್ದಾರ್ಥ ನಡುರಾತ್ರಿಯಲ್ಲಿಯೇ ಹೆಂಡತಿ, ಮಗು, ಸಾಮ್ರಾಜ್ಯಗಳನ್ನೆಲ್ಲ ತೊರೆದು ಹೋಗಿದ್ದರ ನಿಜಾರ್ಥ ಅರಿವಾದೀತು ಎಂದೆನಿಸಿಬಿಟ್ಟಿತು  ನನಗೆ.ಈ ಅನಾರೋಗ್ಯದ ಜೊತೆ ಜೊತೆಗೆ ಆರ್ಥಿಕ ಅಡಚಣೆಗಳು/ ಆಪ್ತರಿಲ್ಲದ ಅನಾಥಭಾವ / ಕಣ್ಣೆದುರೇ ಕುಣಿದು ಗಾಬರಿ ಪಡಿಸುವ ಭವಿಷ್ಯದ ಆತಂಕ ಇವೆಲ್ಲವೂ ಸೇರಿದರಂತೂ ' ನರಕ ದರ್ಶನಕ್ಕೆ'- ಪಾಪಗಳನ್ನು ಮಾಡಬೇಕಾದ ಅವಶ್ಯಕತೆಯೇ ಇಲ್ಲ ಅನಿಸಿಬಿಟ್ಟಿತು ನನಗೆ...
             ಅಂತೂ ದವಾಖಾನೆಯಲ್ಲಿಯ
ಎರಡು ಗಂಟೆಗಳಲ್ಲಿ ನನಗೆ ಅನಿಸಿದ್ದಿಷ್ಟು:-
        " ಈಗಾಗಲೇ ನೀವೆಳೆದ ಗೆರೆಯೊಂದನ್ನು ಮುಟ್ಚದೇ ಚಿಕ್ಕದಾಗಿಸ ಬೇಕಾಗಿದ್ದರೆ ಅದರ ಪಕ್ಕದಲ್ಲಿ ದೊಡ್ಡ ಗೆರೆಯೊಂದನ್ನು ಎಳೆಯಬೇಕು ಎಂಬ
ಮಾತಿದೆ. ಹಾಗೆಯೇ ನಿಮಗಿದ್ದ ಯಾವುದೇ ಸಮಸ್ಯೆ ದೊಡ್ಡದಾಗಿ ಕಾಡಿದರೆ/ ಅದನ್ನು ಚಿಕ್ಕದಾಗಿಸಬೇಕೆ? ಕಣ್ತೆರೆದು ಸುತ್ತಮುತ್ತಲಿನ ಇತರರ ದೊಡ್ಡ ದೊಡ್ಡ ಸಮಸ್ಯೆಗಳನ್ನು ಒಂದೇ ಒಂದು ಸಲ ಕಣ್ಬಿಟ್ಟು ನೋಡಿ...
        ಅಷ್ಟು ಸಾಕು...

Tuesday 13 June 2023

ಹೌದೋ...ಅಲ್ಲವೋ...ನೀವೇ ಹೇಳಿ...      
    
     " ಒಂದು ದೊಡ್ಡ Milton Hot pot" ತಗೋಬೇಕು ನೋಡು ಮುಂದಿನ ಸಲ"- ನನ್ನ ಗಾಡಿ ಇನ್ನೂ ಸುರುವಾಗಿರ ಲಿಲ್ಲ, ಇಂಜಿನ್ ಡುರ್ ಡುರ್ ಅನ್ಲಿಕ್ಕೆ ಸುರುವಾಗಿತ್ತು,ಅಷ್ಟೇ...ಆಗಲೇ Break ಬಿತ್ತು...

"ಯಾಕ? ಮೂರ್ನಾಲ್ಕು ಅವ ಅಲ್ಲ?"
"ಅವು size ಸಣ್ಣವ, ಜಾಸ್ತಿ ಇದ್ರ ದೊಡ್ಡದು ಬೇಕಾಗ್ತದ."
" ಹಂಗಾಗೋದು ಯಾವಾಗರ ಒಮ್ಮೆ, ಸದಾ ಅಲ್ಲ, ದಿನಾ ಯಾರ ಮನಿಗೆ ಯಾರ ಬರ್ತಾರ? ಹಂಗ ತಂದ್ರ ಅಡಿಗಿ ಮನೀಕಿಂತ ಗೋಡೌನ್ಯಾಗ ಜಾಸ್ತಿ ಆಗ್ತಾವ ಸಾಮಾನು..."

              ನಂಗ ಈ ಮಾತು ಬಿಲ್ಕುಲ್
ಅನಿರೀಕ್ಷಿತ ಅಲ್ಲ, ಮೊದಲss  ಊಹಿಸಿದ್ದೆ,  ಆದ್ರೂ ಇಂಥ ಸಂಭಾಷಣೆ ಆಗಾಗ ಆಗಲೇಬೇಕು ನಮ್ಮನ್ಯಾಗ... ನನಗೂ ನನ್ನ ಮಕ್ಕಳಿಗೂ ಈ ವಿಷಯದಾಗ ನೆಲ ಮುಗಿಲಷ್ಟು ಅಂತರ.ಅವರು ಬಹಳಾನೇ simple/ ಲೆಕ್ಕಾಚಾರ ಮೊದಲಿನಿಂದಲೂ...ಅತಿ ಅನಿವಾರ್ಯ ಆಗದ ಹೊರ್ತು ಬೇಡಿಕೆ ಯಿಲ್ಲ.ನಾನೋ ಸ್ವಲ್ಪಮಟ್ಟಿಗೆ ಆಶೆ ಬುರುಕಿ, ದೊಡ್ಡ ದೊಡ್ಡ demand 
ಗಳೆಂದಿಗೂ ಇಲ್ಲ,  ಆದರೆ ಚಿಕ್ಕ ಚಿಕ್ಕ( ಅಂಗೈ ಮುಚ್ಚುವ) ಆಶೆಗಳ ಒಲವು. ಬಹುಶಃ ಬದುಕಿನ ಓಟದಲ್ಲಿ ಮನಸ್ಸಿನಲ್ಲಿದ್ದದ್ದು ಹಣ್ಣಾಗದೇ ಉಳಿದು ಸದಾಕಾಲ ಜವಾಬ್ದಾರಿಗೆ ಪಕ್ಕಾಗಿ ಕಳೆದ ದಿನಗಳ ಶೇಷ ಪರಿಣಾಮ ಇರಬಹುದು!!! 
               ಈಗ ಮಕ್ಕಳೆಲ್ಲರೂ ಚನ್ನಾಗಿದ್ದಾರೆ, ಬೇಕಾದ್ದು ಖರೀದಿಸ ಬಹುದು,ಆದರೆ ಸದಾ ಒಂದು ಎಚ್ಚರದಲ್ಲಿಯೇ ಇರುವದು ಶ್ಲಾಘನೀಯ.ಬದುಕು /ಶಿಕ್ಷಣದಂಥ 
ಅಗತ್ಯಗಳಿಗೆ ಕ್ಷಣ ಕೂಡ ಕಿಂಚಿತ್ತೂ ಯೋಚಿಸದಿದ್ದರೂ ಅನವಶ್ಯಕವಾಗಿ
ಖಯಾಲಿಗೆ ಖರೀದಿಸಿ ಗುಡ್ಡೆ ಹಾಕುವದನ್ನು ಅವರು ವಿರೋಧಿಸು ತ್ತಾರೆ.ಅದು ಸರಿಯೂ ಹೌದು. ಮೊದಲಾದರೆ ಯಾರಿಗಾದರೂ ಕೊಟ್ಟರೆ ಖುಶಿ, ಖುಶಿಯಾಗಿ ಒಯ್ಯುತ್ತಿದ್ದರು.ಈಗ ಅದೂ ಇಲ್ಲ. ಹಳೆಯ ಸೀರೆ/ bedsheets ಬಳಸಿ
ನಾವು comforters( ದುಪ್ಪಟಿ/ ಕೌದಿ
ಹೊಲಿಸುತ್ತಿದ್ದೆವು.ಮಕ್ಕಳು ಬೆಳೆದರೆ
ಅವರ ಬಟ್ಟೆಗಳನ್ನು ಎಗ್ಗಿಲ್ಲದೇ
ಉಳಿದವರು ಪುನರ್ಬಳಕೆ ಮಾಡುತ್ತಿ ದ್ದರು. ಬುಟ್ಟಿಯಲ್ಲಿ ಪಾತ್ರೆಗಳನ್ನು ಇಟ್ಟುಕೊಂಡು ಮನೆಮನೆಗೆ ಬಂದು
ಹಳೆಯ ಬಟ್ಟೆಗಳಿಗೆ ಹೊಸಪಾತ್ರೆ ಕೊಡುವವರು ಆಗಾಗ ಬರುತ್ತಿದ್ದರು.
ಯಾವುದೂ ವ್ಯರ್ಥವಾಗದೇ ಯಾರೋ
ಒಬ್ಬರಿಗೆ ಯಾವ ರೀತಿಯಿಂದಲೋ ಬಳಕೆಯಾಗುತ್ತಿದ್ದವು.ಬಳಕೆಯಾದ ಹಳೆಯ ಪಾತ್ರೆಗಳನ್ನು ಕಂಚುಗಾರರ
ಅಂಗಡಿಗಳಲ್ಲಿ ಬದಲಾಯಿಸಿ ತರುವದು ಮಾಮೂಲಿಯಾಗಿತ್ತು. ಕಾಲ ಬದಲಾಗಿದೆ. Kitchen ಗಳ ಸ್ವರೂಪವೂ ಈಗ ಬದಲಾಗಿದೆ.Gas stove/ Microwave/ Induction ಒಲೆ/ Refrigerator/ ಇಂಥ ಆಧುನಿಕ
ಉಪಕರಣಗಳಿಗೆ ಅಗತ್ಯವಾಗಿ Modular kitchen ನ ಯುಗ‌ ಎಂದೋ ಬಂದಾಗಿದೆ. ಒಳ್ಳೆಯದೇ... 
ತಾಮ್ರ/ ಹಿತ್ತಾಳೆ/ ಕಂಚಿನ ಪಾತ್ರೆಗಳು
Interior Design ಗೆ ಬಳಕೆಯಾಗುತ್ತ
ಹೊಸ ಆಯಾಮ ಕಂಡಿವೆ... ಅಷ್ಟೇ ಏಕೆ? ನಾವು  ಬಯಸಿ ಬಯಸಿ ಮಾಡಿಸಿಕೊಂಡ ಚಿನ್ನದ ಆಭರಣಗಳೂ
ಈಗ ವಿನ್ಯಾಸ ಬದಲಿಸಿಕೊಂಡಿವೆ. ಯಾವಾಗಲಾದರೂ ಬಳಕೆಯಾದರೆ ಹೆಚ್ಚು. ಹಾಗೆಂದು ಬದಲಿಸಿ ಸುಲಭಕ್ಕೆ
ಮತ್ತೆ  ಮಾಡಿಸಿಕೊಳ್ಳಲಾಗದೆಂಬುದೂ
ಅಷ್ಟೇ ನಿಜ...ಒಟ್ಟಿನಲ್ಲಿ ಜಗತ್ತು ಬದಲಾಗುತ್ತ ಹೋಗುವ ವೇಗದ ಪರಿ ನೋಡಿದರೆ ಬೆಳಗಿನದು ಸಂಜೆಗೆ ಹಳಸಲು., ಯಾವದೂ ಹೆಚ್ಚುಕಾಲ
ಚಲಾವಣೆಯಲ್ಲಿರದು ಎಂಬುದೊಂದೇ
ಅಖಂಡ ಸತ್ಯ...ಒಟ್ಟಿನಲ್ಲಿ ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು. ನಾನೀಗ ಹೇಳ ಬಯಸುವದಿಷ್ಟೇ, ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ.ಈಗಂತೂ ಅದರ ವೇಗ
ಕಲ್ಪನೆಗೂ ನಿಲುಕದ್ದು. ಅದಕ್ಕನುಗುಣ ವಾಗಿ Consumerism ಕೂಡ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದಾಗ
ನಾನೂ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳುತ್ತೇನೆ.ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು...




     ‌‌‌         

Friday 2 June 2023

ಆವ ರೂಪದಲಿ ಬಂದರೂ ಸರಿಯೇ...
        
        ‌‌    ‌" ಅಜ್ಜೀ, ಇದು ನಮ್ಮ ಬಸ್ ಅಲ್ಲ.ನಮ್ಮ ಬಸ್ ನಂಬರ್ 100."-
ಮೂರು ವರ್ಷದ ಮೊಮ್ಮಗ ಹೇಳಿದ.

" ಹೌದು,ಇದು 100 ನಂಬರ್ ಬಸ್ಸsss. ನೋಡಿ ಹತ್ತೇನಿ"- ನಾನು ಹೇಳಿದೆ.

" ಇಲ್ಲ ಅಜ್ಜೀ,ನಮ್ಮ ಬಸ್ double decker  ಇರೂದಿಲ್ಲ."

              ಆಗ ನೋಡುತ್ತೇನೆ, ಅದು ಡಬ್ಬಲ್ ಡೆಕ್ಕರ್. ಎಲ್ಲಿ ತಪ್ಪಿದೆ? ಹಿಂದಿನ stop ನಲ್ಲಿ ಮುಂದೆಯೇ ನಿಂತ ನೂರು ನಂಬರ್ ಬಸ್ ನೋಡಿಯೇ ಮುಂದೆ
ಬಂದದ್ದು, ಬಹುಶಃ ಹಿಂದಿದ್ದ ಯಾವುದೋ ಬಸ್ ಅದನ್ನು overtake ಮಾಡಿ ಮುಂದೆ ಬಂದಿರ ಬೇಕು, ಅದು ನನ್ನ ಗಮನಕ್ಕೆ ಬಂದಿರಲಿಲ್ಲ.ಪ್ರತಿ ಸೀಟಿಗೂ ಇರುವ red button ಒತ್ತಿ ಬಸ್ ನಿಲ್ಲಿಸಿ ಕೆಳಗಿಳಿದೆ.ಅಷ್ಟರಲ್ಲಿ ಬಸ್ ಎರಡು stop ಮುಂದೆ ಬಂದಾಗಿತ್ತು. ಎದುರಿಗೇನೇ Central London ನ City Central Heights ಎತ್ತರದ Apartment ಢಾಳಾಗಿ ಕಾಣುತ್ತಿತ್ತು. ಬಂದ ದಾರಿಯಲ್ಲೇ pram ದೂಡುತ್ತ ಹಿಂದಿರುಗಿ ಮುಂದುವರಿದೆ. ಆದರೆ ಅಲ್ಲಿಗೆ ತಲುಪುವದು ಹೇಗೆ
ತಿಳಿಯಲಿಲ್ಲ.ಎದುರಿಗೇನೆ under pass ಕಂಡರೂ ಅದರೊಳಗೂ ಬಿಚ್ಚಿಕೊಳ್ಳುವ ಕವಲುಗಳ ಭಯ. ಮತ್ತೆ ದಾರಿ ತಪ್ಪಿಸಿಕೊಂಡರೆ ಎನಿಸಿ
ಅಲ್ಲಿಯೇ ಇದ್ದ ಒಬ್ಬ British Student ಒಬ್ಬನ ನೆರವು ಕೇಳಿದೆ. ಅವನು ಖುಶಿ ಖುಶಿಯಾಗಿ ಮೊಮ್ಮಗನ pram ಅನ್ನೂ ನನ್ನ  backpack ನ್ನೂ ತಾನೇ ತೆಗೆದುಕೊಂಡು ನಮ್ಮನ್ನು ಆ ದಾರಿಯ ಕೊನೆಗೆ ಕರೆತಂದು ಬಿಟ್ಟು, ನನ್ನ thanks ಗೆ ಮುಗುಳನಕ್ಕು ,Take care ಎಂದು ಹೇಳಿ ಮರೆಯಾದ...

             ಆ ಮಾತಿಗೆ ಸರಿಯಾಗಿ ಈಗ ಹದಿನೆಂಟು ವರ್ಷಗಳು.ಆ ಮೊಮ್ಮಗ ನಿಗೀಗ ಇಪ್ಪತ್ತೊಂದರ ಹರಯ... ಮೊನ್ನೆ ಒಂದು ಮದುವೆಗೆ ಹೋಗಬೇಕಿತ್ತು." ಅಜ್ಜಿ ,ಹೋಗಿ ತಲುಪಲು ಮುಕ್ಕಾಲು ಗಂಟೆಗೂ ಮಿಕ್ಕಿ ಸಮಯ ಬೇಕು, ಹಿಂದಿನ ಸೀಟಿಗೆ ಆತು
ಒಂದು ನಿದ್ದೆ ಮುಗಿಸು,ಕಾರ್ಯಕ್ರಮದ
ಹೊತ್ತಿಗೆ fresh ಆಗುತ್ತದೆ"- ಎಂದ.
ನನಗೆ ಉಪದೇಶಗಳು ಯಾರಿಂದಲೇ ಬರಲಿ/ ಯಾವ ರೂಪದಲ್ಲೇ ಬರಲಿ
ಮುಕ್ತವಾಗಿ ಸ್ವೀಕರಿಸುತ್ತೇನೆ.ವಯಸ್ಸೂ
ನೋಡುವುದಿಲ್ಲ. ಸರಿಯನಿಸಿದರೆ ' ಜೈ'
ಅಂದು ಬಿಡೋದೇ...ಸರಿಯಾಗಿ ಒಂದು ಗಂಟೆಗೆ ಕಾರ್ಯಾಲಯದಲ್ಲಿ ಹಾಜರು...ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹನ್ನೊಂದಾಗಿದ್ದರೂ
ಕಿಂಚಿತ್ತೂ ದಣಿವಾಗಲಿಲ್ಲ. ದಾರಿಯುದ್ದ ಕ್ಕೂ ಒಂದೇ ವಿಚಾರ...ಮಕ್ಕಳು ಅದು ಹೇಗೆ ಕಣ್ಣೆದುರೇ ಬೆಳೆದು ನಿಲ್ಲುತ್ತಾರೆ?
ನೋಡುನೋಡುತ್ತಲೇ ಅದು ಹೇಗೆ
ತಮ್ಮದೊಂದು  ವ್ಯಕ್ತಿತ್ವ ಬೆಳೆಸಿಕೊಂಡು
ವಿಸ್ಮಯ ಉಂಟು ಮಾಡುತ್ತಾರೆ? ಇನ್ನೂ ಚಿಕ್ಕವರು,  ನಮ್ಮದೇ ಕಣ್ಣಮುಂದೆ ಬೆಳೆದವರು, ನಮ್ಮಿಂದಲೇ
ಪ್ರಭಾವಿತರಾಗುತ್ತಾರೆ ಎಂಬ ಭ್ರಮೆಯಿಂದ ನಮ್ಮನ್ನು ಹೊರಗೆ ತರುತ್ತಾರೆ?- ಎಂದೆಲ್ಲ ಯೋಚಿಸುತ್ತಲೇ
ಇರುವಾಗ ಕಾರು ಮನೆ ಬಾಗಿಲಿಗೆ ಬಂದಾಗಿತ್ತು...



 ‌

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...