Tuesday, 13 June 2023

ಹೌದೋ...ಅಲ್ಲವೋ...ನೀವೇ ಹೇಳಿ...      
    
     " ಒಂದು ದೊಡ್ಡ Milton Hot pot" ತಗೋಬೇಕು ನೋಡು ಮುಂದಿನ ಸಲ"- ನನ್ನ ಗಾಡಿ ಇನ್ನೂ ಸುರುವಾಗಿರ ಲಿಲ್ಲ, ಇಂಜಿನ್ ಡುರ್ ಡುರ್ ಅನ್ಲಿಕ್ಕೆ ಸುರುವಾಗಿತ್ತು,ಅಷ್ಟೇ...ಆಗಲೇ Break ಬಿತ್ತು...

"ಯಾಕ? ಮೂರ್ನಾಲ್ಕು ಅವ ಅಲ್ಲ?"
"ಅವು size ಸಣ್ಣವ, ಜಾಸ್ತಿ ಇದ್ರ ದೊಡ್ಡದು ಬೇಕಾಗ್ತದ."
" ಹಂಗಾಗೋದು ಯಾವಾಗರ ಒಮ್ಮೆ, ಸದಾ ಅಲ್ಲ, ದಿನಾ ಯಾರ ಮನಿಗೆ ಯಾರ ಬರ್ತಾರ? ಹಂಗ ತಂದ್ರ ಅಡಿಗಿ ಮನೀಕಿಂತ ಗೋಡೌನ್ಯಾಗ ಜಾಸ್ತಿ ಆಗ್ತಾವ ಸಾಮಾನು..."

              ನಂಗ ಈ ಮಾತು ಬಿಲ್ಕುಲ್
ಅನಿರೀಕ್ಷಿತ ಅಲ್ಲ, ಮೊದಲss  ಊಹಿಸಿದ್ದೆ,  ಆದ್ರೂ ಇಂಥ ಸಂಭಾಷಣೆ ಆಗಾಗ ಆಗಲೇಬೇಕು ನಮ್ಮನ್ಯಾಗ... ನನಗೂ ನನ್ನ ಮಕ್ಕಳಿಗೂ ಈ ವಿಷಯದಾಗ ನೆಲ ಮುಗಿಲಷ್ಟು ಅಂತರ.ಅವರು ಬಹಳಾನೇ simple/ ಲೆಕ್ಕಾಚಾರ ಮೊದಲಿನಿಂದಲೂ...ಅತಿ ಅನಿವಾರ್ಯ ಆಗದ ಹೊರ್ತು ಬೇಡಿಕೆ ಯಿಲ್ಲ.ನಾನೋ ಸ್ವಲ್ಪಮಟ್ಟಿಗೆ ಆಶೆ ಬುರುಕಿ, ದೊಡ್ಡ ದೊಡ್ಡ demand 
ಗಳೆಂದಿಗೂ ಇಲ್ಲ,  ಆದರೆ ಚಿಕ್ಕ ಚಿಕ್ಕ( ಅಂಗೈ ಮುಚ್ಚುವ) ಆಶೆಗಳ ಒಲವು. ಬಹುಶಃ ಬದುಕಿನ ಓಟದಲ್ಲಿ ಮನಸ್ಸಿನಲ್ಲಿದ್ದದ್ದು ಹಣ್ಣಾಗದೇ ಉಳಿದು ಸದಾಕಾಲ ಜವಾಬ್ದಾರಿಗೆ ಪಕ್ಕಾಗಿ ಕಳೆದ ದಿನಗಳ ಶೇಷ ಪರಿಣಾಮ ಇರಬಹುದು!!! 
               ಈಗ ಮಕ್ಕಳೆಲ್ಲರೂ ಚನ್ನಾಗಿದ್ದಾರೆ, ಬೇಕಾದ್ದು ಖರೀದಿಸ ಬಹುದು,ಆದರೆ ಸದಾ ಒಂದು ಎಚ್ಚರದಲ್ಲಿಯೇ ಇರುವದು ಶ್ಲಾಘನೀಯ.ಬದುಕು /ಶಿಕ್ಷಣದಂಥ 
ಅಗತ್ಯಗಳಿಗೆ ಕ್ಷಣ ಕೂಡ ಕಿಂಚಿತ್ತೂ ಯೋಚಿಸದಿದ್ದರೂ ಅನವಶ್ಯಕವಾಗಿ
ಖಯಾಲಿಗೆ ಖರೀದಿಸಿ ಗುಡ್ಡೆ ಹಾಕುವದನ್ನು ಅವರು ವಿರೋಧಿಸು ತ್ತಾರೆ.ಅದು ಸರಿಯೂ ಹೌದು. ಮೊದಲಾದರೆ ಯಾರಿಗಾದರೂ ಕೊಟ್ಟರೆ ಖುಶಿ, ಖುಶಿಯಾಗಿ ಒಯ್ಯುತ್ತಿದ್ದರು.ಈಗ ಅದೂ ಇಲ್ಲ. ಹಳೆಯ ಸೀರೆ/ bedsheets ಬಳಸಿ
ನಾವು comforters( ದುಪ್ಪಟಿ/ ಕೌದಿ
ಹೊಲಿಸುತ್ತಿದ್ದೆವು.ಮಕ್ಕಳು ಬೆಳೆದರೆ
ಅವರ ಬಟ್ಟೆಗಳನ್ನು ಎಗ್ಗಿಲ್ಲದೇ
ಉಳಿದವರು ಪುನರ್ಬಳಕೆ ಮಾಡುತ್ತಿ ದ್ದರು. ಬುಟ್ಟಿಯಲ್ಲಿ ಪಾತ್ರೆಗಳನ್ನು ಇಟ್ಟುಕೊಂಡು ಮನೆಮನೆಗೆ ಬಂದು
ಹಳೆಯ ಬಟ್ಟೆಗಳಿಗೆ ಹೊಸಪಾತ್ರೆ ಕೊಡುವವರು ಆಗಾಗ ಬರುತ್ತಿದ್ದರು.
ಯಾವುದೂ ವ್ಯರ್ಥವಾಗದೇ ಯಾರೋ
ಒಬ್ಬರಿಗೆ ಯಾವ ರೀತಿಯಿಂದಲೋ ಬಳಕೆಯಾಗುತ್ತಿದ್ದವು.ಬಳಕೆಯಾದ ಹಳೆಯ ಪಾತ್ರೆಗಳನ್ನು ಕಂಚುಗಾರರ
ಅಂಗಡಿಗಳಲ್ಲಿ ಬದಲಾಯಿಸಿ ತರುವದು ಮಾಮೂಲಿಯಾಗಿತ್ತು. ಕಾಲ ಬದಲಾಗಿದೆ. Kitchen ಗಳ ಸ್ವರೂಪವೂ ಈಗ ಬದಲಾಗಿದೆ.Gas stove/ Microwave/ Induction ಒಲೆ/ Refrigerator/ ಇಂಥ ಆಧುನಿಕ
ಉಪಕರಣಗಳಿಗೆ ಅಗತ್ಯವಾಗಿ Modular kitchen ನ ಯುಗ‌ ಎಂದೋ ಬಂದಾಗಿದೆ. ಒಳ್ಳೆಯದೇ... 
ತಾಮ್ರ/ ಹಿತ್ತಾಳೆ/ ಕಂಚಿನ ಪಾತ್ರೆಗಳು
Interior Design ಗೆ ಬಳಕೆಯಾಗುತ್ತ
ಹೊಸ ಆಯಾಮ ಕಂಡಿವೆ... ಅಷ್ಟೇ ಏಕೆ? ನಾವು  ಬಯಸಿ ಬಯಸಿ ಮಾಡಿಸಿಕೊಂಡ ಚಿನ್ನದ ಆಭರಣಗಳೂ
ಈಗ ವಿನ್ಯಾಸ ಬದಲಿಸಿಕೊಂಡಿವೆ. ಯಾವಾಗಲಾದರೂ ಬಳಕೆಯಾದರೆ ಹೆಚ್ಚು. ಹಾಗೆಂದು ಬದಲಿಸಿ ಸುಲಭಕ್ಕೆ
ಮತ್ತೆ  ಮಾಡಿಸಿಕೊಳ್ಳಲಾಗದೆಂಬುದೂ
ಅಷ್ಟೇ ನಿಜ...ಒಟ್ಟಿನಲ್ಲಿ ಜಗತ್ತು ಬದಲಾಗುತ್ತ ಹೋಗುವ ವೇಗದ ಪರಿ ನೋಡಿದರೆ ಬೆಳಗಿನದು ಸಂಜೆಗೆ ಹಳಸಲು., ಯಾವದೂ ಹೆಚ್ಚುಕಾಲ
ಚಲಾವಣೆಯಲ್ಲಿರದು ಎಂಬುದೊಂದೇ
ಅಖಂಡ ಸತ್ಯ...ಒಟ್ಟಿನಲ್ಲಿ ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು. ನಾನೀಗ ಹೇಳ ಬಯಸುವದಿಷ್ಟೇ, ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ.ಈಗಂತೂ ಅದರ ವೇಗ
ಕಲ್ಪನೆಗೂ ನಿಲುಕದ್ದು. ಅದಕ್ಕನುಗುಣ ವಾಗಿ Consumerism ಕೂಡ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದಾಗ
ನಾನೂ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳುತ್ತೇನೆ.ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು...




     ‌‌‌         

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...