ಪಕ್ಕಕ್ಕೊಂದು 'ದೊಡ್ಡ ಗೆರೆ' ಎಳೆಯಿರಿ...
ಕೋವಿಡ್ ಶುರುವಾದ ಪೂರ್ವದಿಂದಲೇ ಇದ್ದ ನನ್ನ ಕಣ್ಣಪೊರೆ ಯ ತಕರಾರು ಯಾವ್ಯಾವದೋ ಕಾರಣಕ್ಕೆ ಮುಂದೆ ಮುಂದೆ ಹೋಗಿ, ನಂತರ ಕೋವಿಡ್ ನ ಎರಡು ಅಲೆಗಳ ಪರಿಣಾಮದಿಂದ ಬಾಕಿಯುಳಿದು ಕೊನೆಗೊಮ್ಮೆ 2020 ರ ಡಿಸೆಂಬರ್ ಎರಡನೇ ತಾರೀಕಿಗೆ ಸಂಪನ್ನವಾಯಿತು
ಆದರೆ ಮೂರನೇ ಅಲೆಯ ' ತೋಳ ಬಂತಲೇ ತೋಳ' - ಕಥೆಯಾಗಿ ಮೂರನೇ ಅಲೆ ಯಾವಾಗ ಬರುವದೋ ಎಂಬ ಆತಂಕದಡಿ ಆಪರೇಶನ್ ನಂತರದ check up ಆಗಿರಲೇಯಿಲ್ಲ.ಆ ಕಾರಣಕ್ಕೆ ನಿನ್ನೆ
ಪೂರ್ವಾನುಮತಿ ಪಡೆದು ನಾರಾಯಣ
ನೇತ್ರಾಲಯದ ದರ್ಶನ ಭಾಗ್ಯ ಪಡೆಯುವ ಭಾಗ್ಯ ನನ್ನದಾಯ್ತು..
" ನಾವೆಷ್ಟು ಸ್ವತಂತ್ರರು ಎಂದು ತಿಳಿಯಲು ಜೇಲಿಗೆ, ನಾವೆಷ್ಟು
ಅಜ್ಞಾನಿಗಳು ಎಂದು ಗೊತ್ತಾಗಲು ಗ್ರಂಥಾಲಯಗಳಿಗೆ, ನಾವೆಷ್ಟು ಆರೋಗ್ಯವಂತರು ಎಂದು ತಿಳಿಯಲು
ಆಸ್ಪತ್ರೆಗಳಿಗೆ ಆಗಾಗ ಭೇಟಿ ಕೊಡಬೇಕಂತೆ."- ಈ ಹೇಳಿಕೆಯ ನಿಜಾಂಶ ನಿನ್ನೆ ಅರಿವಾಯ್ತು ನನಗೆ...
ಇನ್ನೂ ತಾಯ ಎದೆಹಾಲು ಕುಡಿಯುವ ಮಕ್ಕಳಿಂದ ಹಿಡಿದು, ಬದುಕೆಂಬ ಬಾಗಿಲಿನ ಹೊರಬಾಗಿಲನ್ನು ಶಾಶ್ವತವಾಗಿ ಮುಚ್ಚಿಕೊಂಡು ದಾಟಿ ಹೋಗುವ ಹಂತದ ಅನೇಕರನ್ನು
ಕಣ್ಣಾರೆ ಕಂಡೆ.ನನಗೆ ಹುಟ್ಟಿನಿಂದಲೇ
ಒಂದು ಕಣ್ಣಿನ ದೋಷವಿದೆ.ಇನ್ನೊಂದ
ರ ಬಲದ ಮೇಲೆಯೇ ಕಲಿತು/ ಕಲಿಸಿ,
ಬರೆದು/ ಓದಿ ಎಂಬತ್ತರ ಅಂಚನ್ನು
ತಲುಪಿದ್ದೇನೆ.ನನಗೆ ನಾನೇ ' ನನ್ನನ್ನು ಶುಕ್ರಾಚಾರ್ಯರ ಮಗಳು / ಪಟೌಡಿ ನವಾಬನ ಬಂಧು ಎಂದು ತಮಾಷೆ ಮಾಡಿಕೊಂಡಿದ್ದೇನೆ.' ಆದರೂ ನನಗೇ ಇಷ್ಟೊಂದು ಆತಂಕವಿದ್ದಾಗ ಚಿಕ್ಕವರು- ದೊಡ್ಡವರೆನ್ನದೇ ಇನ್ನೊಬ್ಬರ ಆಧಾರ ದಿಂದ ತಡವರಿಸುತ್ತ ಹೆದರಿಕೆಯಲ್ಲಿ
ಯೇ ಹೆಜ್ಜೆ ಊರಿ ನಡೆವ ದೃಶ್ಯದಿಂದ ಕಂಗಾಲಾದೆ.ನನ್ನ ನೋವು/ ಆತಂಕ/ ಕಾಳಜಿ ಯಾವ ಲೆಕ್ಕಕ್ಕೆ !? ಎಂದು ಮೊದಲ ಬಾರಿ ಅನಿಸಿತು.ಇಷ್ಟೊಂದು ಬವಣೆ ಬದುಕಿನಲ್ಲಿದ್ದವರು
ಆಸ್ಪತ್ರೆಗಳ ಭೇಟಿಯಲ್ಲಿ ಒಟ್ಟಾಗಿ ಸಿಕ್ಕಾಗ ಆಗುವ ಮನಸ್ಸಿನ ತುಡಿತ- ಭಾವಗಳನ್ನು ದಾಖಲಿಸಲಾಗುವದಿಲ್ಲ.
ಇನ್ನು ಉಳಿದ ಒಂದೊಂದೇ ಆಸ್ಪತ್ರೆ/ ಅಲ್ಲಿಯ ನೋವು- ನರಳಿಕೆಗಳನ್ನು
ಕಣ್ಣಾರೆ ಕಂಡು ಲೆಕ್ಕ ಹಾಕಿದಾಗ, ಸಿದ್ದಾರ್ಥ ನಡುರಾತ್ರಿಯಲ್ಲಿಯೇ ಹೆಂಡತಿ, ಮಗು, ಸಾಮ್ರಾಜ್ಯಗಳನ್ನೆಲ್ಲ ತೊರೆದು ಹೋಗಿದ್ದರ ನಿಜಾರ್ಥ ಅರಿವಾದೀತು ಎಂದೆನಿಸಿಬಿಟ್ಟಿತು ನನಗೆ.ಈ ಅನಾರೋಗ್ಯದ ಜೊತೆ ಜೊತೆಗೆ ಆರ್ಥಿಕ ಅಡಚಣೆಗಳು/ ಆಪ್ತರಿಲ್ಲದ ಅನಾಥಭಾವ / ಕಣ್ಣೆದುರೇ ಕುಣಿದು ಗಾಬರಿ ಪಡಿಸುವ ಭವಿಷ್ಯದ ಆತಂಕ ಇವೆಲ್ಲವೂ ಸೇರಿದರಂತೂ ' ನರಕ ದರ್ಶನಕ್ಕೆ'- ಪಾಪಗಳನ್ನು ಮಾಡಬೇಕಾದ ಅವಶ್ಯಕತೆಯೇ ಇಲ್ಲ ಅನಿಸಿಬಿಟ್ಟಿತು ನನಗೆ...
ಅಂತೂ ದವಾಖಾನೆಯಲ್ಲಿಯ
ಎರಡು ಗಂಟೆಗಳಲ್ಲಿ ನನಗೆ ಅನಿಸಿದ್ದಿಷ್ಟು:-
" ಈಗಾಗಲೇ ನೀವೆಳೆದ ಗೆರೆಯೊಂದನ್ನು ಮುಟ್ಚದೇ ಚಿಕ್ಕದಾಗಿಸ ಬೇಕಾಗಿದ್ದರೆ ಅದರ ಪಕ್ಕದಲ್ಲಿ ದೊಡ್ಡ ಗೆರೆಯೊಂದನ್ನು ಎಳೆಯಬೇಕು ಎಂಬ
ಮಾತಿದೆ. ಹಾಗೆಯೇ ನಿಮಗಿದ್ದ ಯಾವುದೇ ಸಮಸ್ಯೆ ದೊಡ್ಡದಾಗಿ ಕಾಡಿದರೆ/ ಅದನ್ನು ಚಿಕ್ಕದಾಗಿಸಬೇಕೆ? ಕಣ್ತೆರೆದು ಸುತ್ತಮುತ್ತಲಿನ ಇತರರ ದೊಡ್ಡ ದೊಡ್ಡ ಸಮಸ್ಯೆಗಳನ್ನು ಒಂದೇ ಒಂದು ಸಲ ಕಣ್ಬಿಟ್ಟು ನೋಡಿ...
ಅಷ್ಟು ಸಾಕು...
No comments:
Post a Comment