ಹಾಗೇ ಸುಮ್ಮನೇ..
"ಸಬ್ ಕುಛ್ ಸೀಖಾ ಹಮ್ನೆ..ನಾ ಸೀಖೀ ಹೋಶಿಯಾರೀ..."
ಈ ಇಡೀ ಜಗತ್ತು ಒಂದು ಸಂಕೀರ್ಣ ವ್ಯವಸ್ಥೆ...ಇಲ್ಲಿ ಚಿಕ್ಕದು_ ದೊಡ್ಡದು, ಒಳ್ಳೆಯದು_ ಕೆಟ್ಟದು, ಜಾಣ- ದಡ್ಡ ,ಶಿಷ್ಟ_ ದುಷ್ಟ, ಶ್ರೇಷ್ಠ,- ಕನಿಷ್ಠ ಏನೆಲ್ಲಾ ಇದೆ....ಸಾಮಾನ್ಯ ಸ್ಥಿತಿಯಲ್ಲಿ ಎಲ್ಲವೂ ಸುಸೂತ್ರವಾಗಿ, ವ್ಯವಸ್ಥಿತವಾಗಿ ಇದೆ ಎಂದೆನಿಸಿದರೂ ನಮಗೇ ಗೊತ್ತಿಲ್ಲದೇ ಲಕ್ಷಗಟ್ಟಲೇ ಸ್ಥಿತ್ಯಂತರಗಳು ತಂತಾನೇ ಆಗುತ್ತಲೇ ಇರುತ್ತವೆ...ಅವು ಒಂದು ಹಂತಮೀರಿದಾಗಲಷ್ಟೇ ನಮಗೆ ಗೋಚರವಾಗುತ್ತವೆ..
ತಮಿಳು ಕವಯತ್ರಿ ಅವೈ ಪ್ರಕಾರ ಜಗತ್ತಿನಲ್ಲಿಯ ಮನುಷ್ಯರನ್ನು ಎರಡೇ ರೀತಿ ವಿಂಗಡಿಸಬಹುದು...HAVES/ HAVE NOTS..
ಇದ್ದುಳ್ಳವರು/ ಇಲ್ಲದವರು...ಆ ಇರಬೇಕಾದ ಸಂಗತಿ ಏನೂ ಆಗಿರಬಹುದು...ಹಣ, ಆರೋಗ್ಯ, ಐಶ್ವರ್ಯ, ಗುಣ ಮುಂತಾಗಿ ಏನೆಲ್ಲವೂ...
ಹಣ, ಐಶ್ವರ್ಯ, ಆರೋಗ್ಯ ಇವುಗಳ ಏರಿಳಿತ ಕೆಲವು ಮಟ್ಟಿಗೆ ವೈಯಕ್ತಿಕ ನೆಲೆಯಲ್ಲಿ ಪರಿಣಾಮ ಬೀರುತ್ತವೆ..ಆದರೆ ಗುಣದ ಬಗ್ಗೆ ಆ ಮಾತು ಅಷ್ಟು ಸುಲಭದಲ್ಲಿ ಹೇಳಿ ಬಿಡುವಂಥದಲ್ಲ..ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಲವು ಬಗೆಯಲ್ಲಿ ಹಲವಾರು ಜನರ ಬದುಕು ಕಟ್ಟಲೂ ಬಹುದು...ಕೆಡವಲೂ ಬಹುದು...
ಕೆಟ್ಟವರು ನಿಜರೂಪದಲ್ಲಿದ್ದರೆ ಎಷ್ಟೋ ಕ್ಷೇಮ...ಅಂಥವರಿಂದ ಎಷ್ಟು ಬೇಕೋ ಅಷ್ಟು ಅಂತರ ಕಾಯ್ದುಕೊಳ್ಳಬಹುದು..
ಸಜ್ಜನರಿದ್ದರಂತೂ ಪ್ರಶ್ನೆ ಬರುವದೇಯಿಲ್ಲ... ಹೆಜ್ಜೇನು ಸವಿದಂತೆ...ಪ್ರಶ್ನೆ ಬರುವದು ಹಸುವೇಷದ ಹುಲಿಗಳದು...ಒಳ್ಳೆಯವರಾಗಿ ಕಾಣಿಸಿಕೊಂಡು ಹೆಗಲಮೇಲೆ , ಭುಜದ ಮೇಲೆ ಕೈ ಹಾಕುತ್ತಲೇ, ಜನರಿಗೆ ಮಂಕುಬೂದಿ ಎರಚುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳವವರದು..ಒಂದು ರೀತಿಯಲ್ಲಿ ' ಹೋಶಿಯಾರಿ' ಜನರದ್ದು...ಒಂದು ಕೈಯಲ್ಲಿ ಹೂಗುಚ್ಛ ಕಾಣುವಂತೆ ಹಿಡಿದು, ಇನ್ನೊಂದು ಕಾಣದ ಕೈಯಲ್ಲಿ ಹಿಂದಿನಿಂದ ಚೂರಿ ಮಸೆಯುವವರದು...
ಇಂಥವರನ್ನು ಸಾರಾ ಸಗಟಾಗಿ ಸರಿಸಿ ಇಡುವದೂ ಸಾಧ್ಯವಿಲ್ಲದ ಮಾತು....ಅದೇ ನಂಜನ್ನು ಬೆಳೆಸಿ, ಪೋಷಿಸಿ, ತಾವೂ. ವಿಷವುಂಡು ಇತರರಿಗೂ ಎಗ್ಗಿಲ್ಲದೇ ವಿಷ ಉಣಿಸಬಲ್ಲ ಘಟಾನುಘಟಿಗಳಿವರು...ಇವರ ದ್ವೇಷಕ್ಕಿಂತ ಸ್ನೇಹ ಅಪಾಯಕಾರಿ... ಇತರರನ್ನು ಮಣಿಸುವ ಭರದಲ್ಲಿ ಸ್ವಂತದ ಹಾನಿಯೂ ಅವರಿಗೆ ಗೌಣ... ಏನಕೇನ ಪ್ರಕಾರೇಣ ಮೇಲುಗೈ ಸಾಧಿಸಿ ಮೆರೆಯುವದೇ ಬದುಕಿನ ಗುರಿ ಅವರದು....ಅದನ್ನವರು 'ಚಾಣಾಕ್ಷತನ ' ಎಂದು ಬಿಂಬಿಸುವದೇ ಹೆಚ್ಚು.. ..ಹಾಗಿಲ್ಲದ ಸಭ್ಯರಿಗೆ ' ಹೇಡಿ' 'ಕೈಲಾಗದವ' ನೆಂಬ ಪದವಿಗಳನ್ನೂ ಪ್ರದಾನಮಾಡಬಲ್ಲ ಚತುರರು...'ದುಷ್ಟರಿಂದ ದೂರವಿರೋಣ' ಎಂಬ ಸಜ್ಜನರ ನಿಲುವನ್ನು ತಮ್ಮದೇ ಹೆಗ್ಗಳಿಕೆ,ತಮ್ಮನ್ನು ಎದುರಿಸಲಾಗದ ನಪುಂಸಕರ ನಿಲುವು ಎಂದು ಬಿಂಬಿಸಲೂ ಹೇಸದವರು..ಈ ಅಪಾಯಕಾರಿ ನಿಲುವನ್ನು
ಹೊರಗೆ ಪ್ರಕಟಿಸದೇ ಗೌಪ್ಯವಾಗಿರಿಸಿ ಜನರ ಮೈದಾನದಲ್ಲಿ ಅವರನ್ನೇ ಬೋರಲು ಬೀಳಿಸುವವರು...ಒಂದು ರೀತಿಯಲ್ಲಿ ಇವೆಲ್ಲ ರಾಜಕೀಯದ ಪಟ್ಟುಗಳಿಗೆ ಸಮ...ತದ್ವಿರುದ್ಧ ರಾಜಕೀಯ ಪಕ್ಷಗಳ ತಂತ್ರಗಳು..
ರಾ_ ರಾವಣ,
ಜ_ ಜರಾಸಂಧ
ಕೀ_ ಕೀಚಕ
ಯ_ ಯಮ.
ಇವರೆಲ್ಲರ ವಂಶಜರು ಎಂಬ ತಮಾಷೆಯ ಮಾತುಂಟು...
ಎಲ್ಲರೂ ಹಾಗಲ್ಲ...ಸಾಕಷ್ಟು ಸಜ್ಜನರೂ ಇರುತ್ತಾರೆ...ಆದರೆ ಇವರ 'ಹೋಶಿಯಾರಿ 'ಮುಂದೆ ಅಂಥವರು ಸುಲಭದಲ್ಲಿ ಗುರುತಿಸಲ್ಪಡುವದಿಲ್ಲ...Survival of d fittest ಆಗಲೀ, ಜಿಸಕೀ ಲಾಠಿ ಉಸಕಿ ಭೈಸ್_ ಆಗಲೀ ಹೇಳುವದು ಇದನ್ನೇ...
ಆದರೆ ಮಾತಾಡಿದಷ್ಟು ಏನಾದರೂ ಮಾಡುವದು ಸುಲಭವಿಲ್ಲ...ಬೀಸುಕಲ್ಲಿನ ಬುಡದಲ್ಲಿ ಸಿಕ್ಕ ಬೆರಳುಗಳಂತೆ, ಮುಳ್ಳುಕಂಟಿಯ ಮೇಗಣ ರೇಶ್ಮೆ ಸೀರೆ ತೆಗೆದಂತೆ ಇವರಿಂದ ಬಿಡುಗಡೆ ಪಡೆಯಬೇಕು...ನಿಜವಾಗಿ ಮಲಗಿದವರನ್ನು ಎಬ್ಬಿಸಬಹುದು..ಮಲಗಿದಂತೆ ನಟಿಸುವವರನ್ನು ಎಬ್ಬಿಸಲಾರಿರಿ...ನಿಜವಾದ ಕೆಟ್ಟವರನ್ನು ಸಂಭಾಳಿಸಬಲ್ಲಿರಿ...ಆದರೆ ನಿಮ್ಮ ಬಗಲಲ್ಲೇ ಇದ್ದು ನಿಮ್ಮ ಹಿತೈಷಿಯಂತೆ ನಟಿಸಿ ನಿಮ್ಮನ್ನೇ ದಿವಾಳಿ ಎಬ್ಬಿಸ ಬಿಡಬಹುದಾದ ಆಷಾಢಭೂತಿಗಳ 'ಹೋಶಿಯಾರಿತನವನ್ನು' ಅರಿತುಕೊಳ್ಳದಿದ್ದರೆ ಬದುಕು ಮೂರಾಬಟ್ಟೆ ಎಂಬುದು, ಹಾಗಾದಮೇಲೆಯೇ ತಿಳಿಯುವ ಸಂಭವವೇ ಜಾಸ್ತಿ ಎಂಬುದೂ ಒಂದು ವಿಡಂಬನೆ...
No comments:
Post a Comment