Saturday, 10 April 2021

ಹಾಗೇ ಸುಮ್ಮನೇ...

ದಾರಿಯಾವುದಯ್ಯಾ ಸಂತೋಷಕೆ..

             ಮಕ್ಕಳದೆಲ್ಲ ಪರೀಕ್ಷೆ ಮುಗಿದು   ಬೇಸಿಗೆ ರಜೆ ಪ್ರಾರಂಭವಾಗಿದೆ..ಹಾಗೆಯೇ ಬೇಸಿಗೆಯ ಚಟುವಟಿಕೆಗಳು ಸಹ...ಬೆಂಗಳೂರಿನಲ್ಲಿ ಬೇಸಿಗೆಯ ಶಿಬಿರಕ್ಕೆ ಮಕ್ಕಳನ್ನು  ಕಳಿಸುವದು ಸುಲಭವಲ್ಲ...ಕಾರಣ  ಪಾಲಕರದೇ ಒಂದು group ಮಾಡಿಕೊಂಡು ,ಒಬ್ಬೊಬ್ಬರು ಒಮ್ಮೊಮ್ಮೆ  lead ತೆಗೆದುಕೊಂಡು ಮಕ್ಕಳನ್ನು ರಂಜಿಸುವ plan ಮಾಡುತ್ತಾರೆ...ಬಹಳ ದಿನಗಳ ರಜೆಯಲ್ಲಿ ಇಷ್ಟು ಸಾಕಾಗುವದಿಲ್ಲ..ಆವಾಗ sleep over ಅಂದರೆ ಒಂದೆರಡು ದಿನಗಳು ಸ್ನೇಹಿತರ ಮನೆಯಲ್ಲಿಯೇ ಇರುವ ಯೋಜನೆ ಹಾಕುತ್ತಾರೆ...
     ‌          ಹಾಗೇ ನಮ್ಮ ಮನೆಯಲ್ಲೂ ಎರಡು ದಿನಗಳಿಂದ ಮಕ್ಕಳಿದ್ದರು...ಅವರನ್ನು ಸಹಜವಾಗಿ ಮಾತಾಡಿಸಿದಾಗ ಒಬ್ಬ ಹೇಳಿದ ,"ಒಂದು ಹದಿನೈದು ದಿನ‌ Italy ಗೆ‌ ಹೋಗುತ್ತಿದ್ದೇವೆ ಆಂಟಿ." ಮತ್ತೊಬ್ಬ ಹೇಳಿದ, ನಮ್ಮ cousin ನ convocation ಗೆ US ಗೆ ಹೋಗ್ತೀವಿ next week...
            ನಾನೇನೂ ಬೆಚ್ಚಿ ಬೀಳಲಿಲ್ಲ ...ಯಾಕಂದರೆ ನನ್ನ ಒಬ್ಬ ಮೊಮ್ಮಗ ರಜೆಗೆಂದು London ನಲ್ಲಿ ಇದ್ದು ಹತ್ತು ದಿನಗಳ ನಂತರ ಸಧ್ಯ ವಾಪಸ್ ಬರಲು flight ನಲ್ಲಿ ಇದ್ದಾನೆ...ಇನ್ನೊಬ್ಬ ಮೊಮ್ಮಗ ಇನ್ನೆರಡು ತಾಸಿಗೆ   ರಜೆಗೆ Zurich ಗೆ ಹೋಗಲು Air port taxi ಹಿಡಿಯುವವನಿದ್ದಾನೆ..ಇದು ಇಪ್ಪತ್ತು  ದಿನಗಳ Schedule..
             ಇದನ್ನೆಲ್ಲ ನೋಡಿದಾಗ ನಾವು ಅಜ್ಜಿಯ ಮನೆಗೆ  ಸೂಟಿಗೆ ಹೋಗುತ್ತಿದ್ದುದು ನೆನಪಾಯಿತು...ರಟ್ಟೀಹಳ್ಳಿಯಿಂದ ಐದು ಮೈಲು ಮಾಸೂರು..ಅದೇ ಅಜ್ಜಿಯ ಮನೆ...ಅಲ್ಲಿ ಹೊರಡುವಾಗಿನ ಉತ್ಸಾಹ ನೆನಸಿಕೊಂಡರೆ, ನಂತರದ ವಿದೇಶ ಪ್ರವಾಸಗಳೂ  ಸಪ್ಪೆ..ಸಪ್ಪೆ..ಕಾರಣಗಳನ್ನು ವಿಶ್ಲೇಷಿದಾಗ  ಎರಡು ಕಾರಣಗಳು ಸ್ಪಷ್ಟವಾಗಿ ಕಂಡವು...
   ‌‌           ಅದು ಬಾಲ್ಯ...ಗಂಗೆ ಗಂಗೋತ್ರಿಯಲ್ಲಿ ಮಾತ್ರ ಶುದ್ಧ ಅಂತಾರಲ್ಲ ಹಾಗೆ..ಮನಸ್ಸಿನಲ್ಲಿ ರಾಗ ,ದ್ವೇಷಗಳಿಲ್ಲ...ಸಣ್ಣ ಸಣ್ಣ ಖುಶಿಯೂ ನೇರ ಹೃದಯದಾಳಕ್ಕೆ...ಮಾತು,ಕತೆ,ಊಟ,ತಿಂಡಿ, ಎಲ್ಲವೂ ಸಾರ್ವಜನಿಕ..ಸಾಮೂಹಿಕ...' ನಾನು' ಅಂದದ್ದು ನೆನಪೇಯಿಲ್ಲ.. ಎಲ್ಲೆಲ್ಲಿಯೂ,ಎಲ್ಲ ಕಾಲಕ್ಕೂ ನಾವು...ನೇರ ಸಂಬಂಧಿಕರಲ್ಲದಿದ್ದರೂ ಆಪ್ತೇಷ್ಟರ ಮನೆಗೂ ಹೋಗಿ ಕೆಲದಿನ ಯಾವುದೇ ಮುಲಾಜಿಲ್ಲದೇ ಹೋಗಿ ಬರುವಷ್ಟು ಆಪ್ತತೆ...ಎಷ್ಟೋಸಲ ಆಡಲು ಹೋದ ಮಕ್ಕಳು ಆಟದ ಬಯಲಿನಿಂದಲೇ ಯಾವುದೋ ಮಾಮಾ,ಚಾಚಾರ ಮನೆಗೆ ಹೋದ ಸಮಾಚಾರ ಸಂಬಂಧಿತರ ಮುಖಾಂತರ ಮನೆ ತಲುಪುವದೂ ಇತ್ತು...ಬಟ್ಟೆ ಬರೆಯ ಯೋಚನೆಯೂ ತಲೆಯಲ್ಲಿ ಹೋಗದಷ್ಟು ಎಲ್ಲರೂ ನಿರಾಳ...ಎಲ್ಲರವೂ ಉಳಿದವರಿಗೆ  ಮಾನ್ಯ...
      ‌‌‌        ಇದು ನಮ್ಮ ಬಾಲ್ಯ...ಈಗ ಬೆಂಗಳೂರಲ್ಲಿ ಯಾರನ್ನು ಯಾರೂ ನಂಬದಷ್ಟು ಅಪನಂಬಿಕೆ...ಅದು ಬ್ರಹತ್ ನಗರಗಳ  ಸಾಮಾನ್ಯ ಗುಣಲಕ್ಷಣ...ಕೆಲ ಆತ್ಮೀಯರು ಅಂತಾದರೆ ಮೇಲೆ ಹೇಳಿದ ಹಾಗೆ ಒಂದೆರಡು ದಿನಗಳ sleep over ಭಾಗ್ಯ...ಇಲ್ಲದಿದ್ದರೆ ಯಾವುದಾದರೂ day care ಇಲ್ಲವೇ full time maid ಗಳ ಉಸ್ತುವಾರಿ..ಅದೂ ಸಂಪೂರ್ಣ ನಿಶ್ಚಿಂತೆಯಿಂದಲ್ಲ...ಒಂದು ಡೆಮೊಕ್ಲಸ್ ಕತ್ತಿ ಸದಾ ನೆತ್ತಿಯ ಮೇಲೆ...ಯಾರು ಹೇಗೋ,ಜೊತೆಗಿರುವ ಮಕ್ಕಳು ಎಂಥವೋ...ಎಂಬಂಥ ಹತ್ತು,ಹಲವು ಯೋಚನೆಗಳು ಸದಾ ಒತ್ತಡ,ಭಯ,ಅಕಾಲಿಕ ವೃದ್ಧಾಪ್ಯಗಳಲ್ಲಿ ಪರ್ಯಾವಸಾನ....
               ಓಡುವ ಸಮಾಜದೊಂದಿಗೆ ಓಡಿ ಕಾಲಕ್ಕೆ ಶರಣಾಗುವದೋ,ಅದನ್ನು ನಿರಾಕರಿಸಿ ಹಿಂದುಳಿದು ಬದುಕಿನ ಅವಕಾಶಗಳಿಂದ ವಂಚಿತರಾಗಿ ಜೀವನ ಪರ್ಯಂತ  ಪರಿತಪಿಸುವದೋ ನಿರ್ಣಯ ಸುಲಭವಿಲ್ಲ...ಬಹುಕಾಲ ತಮ್ಮದೇ ವರ್ತುಲದಲ್ಲಿ ತಮಗೆ ಬೇಕಾದಂತೆ ಜೀವನ ಕಳೆದ ಪಾಲಕರಿಗೆ ವೃದ್ಧಾಪ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಮಕ್ಕಳ ಬಳಿ ಇರುವದು ಸುಲಭವೂ ಅಲ್ಲ...ಎಲ್ಲರಿಗೂ ಮನಸ್ಸು ಇರುವದಿಲ್ಲ..ಹೀಗಾಗಿ ಅಜ್ಜ ಅಜ್ಜಿ ಇದ್ದರೂ ಮಕ್ಕಳಿಗೆ ಅವರ ಸಾಂಗತ್ಯ ಸಿಗುವದಿಲ್ಲ..ಭಾಷಾ ತೊಂದರೆ, ಯಾವಾಗಲಾದರೂ ಬರುವಿಕೆ,ವಿಚಾರ ಸಾಮ್ಯತೆ ಗಳ  ಅಂತರಗಳಿಂದಾಗಿ ಉಭಯತರಲ್ಲೂ ಅನ್ಯೋನ್ಯತೆಯ ಕೊರತೆಯ ಸಾಧ್ಯತೆ ಹೆಚ್ಚು...ಒಂದುವೇಳೆ ಹೇಗೋ ಹಿರಿಯರೂ ಹೊಂದಿಕೊಂಡರೆನ್ನಿ...,ಮಕ್ಕಳ ಲಕ್ಷ್ಯ ಸೆಳೆಯುವ ಹತ್ತಾರು gadgets ಗಳಿಂದಾಗಿ ಪಕ್ಕದಲ್ಲಿದ್ದರೂ ಮೈಲು ದೂರ...
              ಕೂಡಿಸುವ ಒಂದೇ ಒಂದು  ದಾರಿ  ಒಂದೆಡೆ... 
 ಬೇರ್ಪಡಿಸುವ ಹಲವಾರು ದಾರಿಗಳು ಇನ್ನೊಂದೆಡೆ..
   ‌‌‌‌             ಇದೆಲ್ಲವನ್ನೂ ಗೆದ್ದು  ಇಂದಿನ ಅವಕಾಶಗಳ ಜೊತೆ ಹಿಂದಿನ ಆಪ್ತತೆ ಬೆಸೆಯುವ ಕೆಲಸ ಹೇಗೆ? ಯಾರಿಂದ,? ಯಾವಾಗ ? ಎಂಬ ಯಕ್ಷಪ್ರಶ್ನೆಗಳಿಗೆ ಉತ್ತರಿಸಲು ಯುಧಿಷ್ಟಿರನೊಬ್ಬ  ಉದಯಿಸಿ ಬರಬೇಕೇನೋ..!!!

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...