'ಹಾಯಿ ದೋಣಿ'ಯ ಪಯಣ'ಕ್ಕೆ ಮೊದಲು...
ಇದ್ದಕ್ಕಿದ್ದಂತೆ ಗೊತ್ತಿಲ್ಲದೇ ಬಿರುಗಾಳಿಯೆದ್ದು ಹಾಯಿದೋಣಿಯ ಪಥ ದಿಕ್ಕೆಟ್ಟರೆ ಅದನ್ನು ತಡೆಯಲಾಗುವುದಿಲ್ಲ. ಏಕೆಂದರೆ ಹಾಯಿಯನ್ನು ಪೂರಕ್ಕೆ ಪೂರ ಬಿಚ್ಚಿಡದಿದ್ದರೆ ಅದಕ್ಕೆ ಬಿರುಗಾಳಿಗೆ ತನ್ನನ್ನು ಒಡ್ಡಿಕೊಳ್ಳಲೂ ಗೊತ್ತಾಗುವುದಿಲ್ಲ, ಅದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿರುವುದಿಲ್ಲ. ಸಾವಧಾನದಿಂದಿದ್ದರೆ ಈ ಎಲ್ಲ ಏರುಪೇರುಗಳಿಗೂ ಅದು ತನ್ನನ್ನು ತಾನು ಒಡ್ಡಿಕೊಂಡೂ ಗಮ್ಯವನ್ನು ಮುಟ್ಟಲು ಸಾಧ್ಯ..
'ಜೀವನ' ಎಂದರೂ ಹಾಗೇ... ಉಸಿರು ನಿಲ್ಲೋ ತನಕ ಮುಗಿಯದ ಪಯಣ.ಅದೃಷ್ಟ ಶಕ್ತಿಯೊಂದು ಅದನ್ನು ನಿರ್ದೇಶಿಸುತ್ತಿರುತ್ತದೆ. ಹಾಗಾಗಿ ಈ ಪಯಣ ಎಂದರೆ ಹಾಯಿ ದೋಣಿಯ ಪಯಣವಿದ್ದಂತೆ-ಅದು ಒಯ್ದತ್ತಲೇ ನಮ್ಮ ದಾರಿ...
ಈ ಜೀವನದಲ್ಲಿ ಎಲ್ಲ ರೀತಿಯ ವ್ಯಕ್ತಿಗಳ ಪರಿಚಯವಾಗುತ್ತದೆ. ಒಳ್ಳೆಯತನ, ಕೆಟ್ಟತನಗಳ ಅರಿವಾಗುತ್ತದೆ. ಒಮ್ಮೊಮ್ಮೆ ನಮ್ಮಲ್ಲಿ ಅತ್ಯುತ್ಸಾಹವು ತುಂಬಿ ತುಳುಕಿದರೆ ಇನ್ನೊಮ್ಮೆ ನಿರುತ್ಸಾಹವೇ ಹಾಸಿ ಹೊದೆಯುವಷ್ಟು ಮಟ್ಟಿಗೆ ಮುಸುಕುತ್ತದೆ. ಹೀಗೆ ಎಲ್ಲ ಮುಖಗಳ ಈ ಅನುಭವಗಳ ಒಟ್ಟು ಸಂಗಮವೇ ಈ ಜೀವನ ಯಾನ...
ಮಕ್ಕಳು ಓದಿದರೆ ನೆನಪು ಮನದಲ್ಲಿ ಬೇರೂರುವಂತೆ, ಯುವಜನರಿಗೆ ವರುಷಗಳು ಕಳೆದಂತೆ ತಾಯಿ-ತಂದೆಯರ ಸಂಸ್ಕಾರದ ನೆನಪುಗಳು/ ತಾಯಿಗೆ ತನ್ನ ಮಕ್ಕಳ ತುಂಟಾಟಗಳು, ಆಪ್ತರಲ್ಲಿ ಜಗಳ- ಮನಸ್ತಾಪವಾದಾಗ ಅವರೊಂದಿಗೆ ಕಳೆದ ಮಧುರ ಕ್ಷಣಗಳು-ಇಂಥ ನೆನಪುಗಳ ಸಂಪುಟವನ್ನು ತೆರೆದಾಗ ಎಂಥ ಜೀವನವೂ ಕುತೂಹಲವೆನ್ನಿಸುತ್ತದೆ.
ಒಮ್ಮೆ ಆ ಅನುಭವಗಳನ್ನು ದಾಟಿ ಬಂದೆವಾದರೆ ಆ ನೆನಪುಗಳು ಸವಿ ಸವಿ ನೆನಪುಗಳು.. ಅಂದಿನ ಕಹಿ ನೆನಪುಗಳೂ ಕೂಡ ಇಂದಿನ ದಾರಿದೀಪಗಳಾಗಿಬಿಡುತ್ತವೆ. ಆಗೆಲ್ಲ
ಯಾವುದೇ ಭಾವನಾ ತೀವ್ರತೆಗೆ ಸಿಲುಕದೇ ಹೊರಗೆ ನಿಂತುಕೊಂಡೇ ಅವುಗಳನ್ನು ನೆನೆಯಬಹುದು...
ಹೀಗೆಯೇ ನೆನೆಯುತ್ತಾ ಹೋದ
ನೆನಪುಗಳ ಸಂಕಲನ ' ಹಾಯಿ ದೋಣಿಯ ಪಯಣ'. ಇದು ಶ್ರೀಮತಿ ಕೃಷ್ಣಾ ಕೌಲಗಿಯವರ ಮೂರನೇಯ
ಲಘು ಲಹರಿ ಬರೆಹಗಳ ಸಂಗ್ರಹ...
' ನೀರ ಮೇಲೆ ಅಲೆಯ ಉಂಗುರ' ಹಾಗೂ ' ತುಂತುರು ಇದು ನೀರ ಹಾಡು' ಇವೆರಡೂ ಮೊದಲಿನವು...ಪ್ರಸ್ತುತ ಪುಸ್ತಕದ ಮೊದಲ ಲೇಖನ “ಹೊಸ ವರ್ಷದ ಹೊಸ್ತಿಲಲ್ಲಿ ನಿಂತು-" ಲೇಖಕಿಗೆ ತಾವು ಶಿಕ್ಷಕಿಯಾಗಿದ್ದಾಗಿನ ಒಂದು ನೆನಪು. ಹೊಸ ವರ್ಷದ ಶುಭಾಶಯಗಳ ವಿನಿಮಯ, ಸಿಹಿಯನ್ನು ಹಂಚುವುದು, ಪಟಾಕಿ ಹೊಡೆಯುವುದು ಎಂಬ ಇಂದಿನ ಟ್ರೆಂಡ್‌ಗಳ ಬಗ್ಗೆ ಹೇಳುತ್ತ ಲೇಖಕಿ ವಿಷಯ ವಿಸ್ತರಿಸುತ್ತ ಹೋಗುತ್ತಾರೆ... ತಮ್ಮ ಬಾಲ್ಯದಲ್ಲಿಯ: ಹೊಸವರ್ಷದ ಹಬ್ಬದ ಆಚರಣೆಗೆ ಹೋಲಿಸಿಕೊಳ್ಳುತ್ತ ಯುಗಾದಿ ಎಂದರೆ ಎಣ್ಣೆ ಮಜ್ಜನದಿಂದ ಪ್ರಾರಂಭಗೊಂಡು ಮನೆಬಾಗಿಲಿಗೆ ಛಂದದ ರಂಗೋಲಿ, ತಳಿರು ತೋರಣ, ಸಿಹಿಯೂಟ, ಹೊಸಬಟ್ಟೆ, ದೇವರ ದರ್ಶನ, ಪಂಚಾಂಗ ಶ್ರವಣಗಳ ಹೈಲೈಟ್ಸ್ ಲೇಖನದ ತಿರುಳು. ನಂತರದ ದಿನಗಳಲ್ಲಿ ಹೊಸವರ್ಷದ ಗದ್ದಲ, ಕೇಕ್ ಕತ್ತರಿಸುವುದು, ಅಷ್ಟೇ ಅಲ್ಲ, ಕುಡಿತ, ಕುಣಿತಗಳು ಇವುಗಳನ್ನು ನೆನೆದಾಗ - ಸಭ್ಯ ಸಂಪ್ರದಾಯದಿಂದ ಎಷ್ಟು ದೂರ ಬಂದಿದ್ದೇವೆ ಎಂದೆನ್ನಿಸುವುದು ತೀರ ಸಹಜವೇ. ಕೊನೆಯಲ್ಲಿ ಅವರವರಿಗೆ ಇಷ್ಟಬಂದಂತೆ ಹಬ್ಬಗಳನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಲೇಖಕಿ ವಿಡಂಬನಾತ್ಮಕವಾಗಿ ಜೋಕಿಸುತ್ತಾರೆ.
ತಮ್ಮ ಗಡಿಬಿಡಿಯ ಸ್ವಭಾವದ ಬಗ್ಗೆ ಹೇಳುತ್ತಾ ಸಮಯಕ್ಕೆಸರಿಯಾಗಿ ಎಲ್ಲವನ್ನೂ ಮಾಡಬೇಕೆಂಬ ಆತುರ ದಲ್ಲಿ ಅನೇಕ ಎಡವಟ್ಟುಗಳೂ ಆಗುತ್ತಿದ್ದುದುಂಟೆಂದು ನೆನೆಯುವಾಗ
ಓದುಗರಿಗೆ ತಮ್ಮದೇ ಅನುಭವಗಳು
ನೆನಪಾದರೆ ಅಚ್ಚರಿ ಪಡಬೇಕಿಲ್ಲ.
ಹಳ್ಳಿಗಳಲ್ಲಿಯ ಪರಸ್ಪರ ಆತ್ಮೀಯ ಸಂಬಂಧಗಳ ಬಗ್ಗೆ ತಿಳಿಸುತ್ತಾ ತಾವು ಆಚರಿಸುತ್ತಿದ್ದ ದೀಪಾವಳಿಯ ಸಂಭ್ರಮವನ್ನು ನೆನೆಯುವಾಗ ಈಗಿನ ಕುಟುಂಬಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ ಎಲ್ಲ ಹಬ್ಬಗಳ ಆಚರಣೆಗಳು ಕಿಂಗ ಸೈಜಿನಿಂದ ನ್ಯೂಕ್ಲಿಯರ್ ಸೈಜಿಗಿಳಿದಿದೆ ಎನ್ನುವ ಅಭಿಪ್ರಾಯ ಅವರದು...
ಸುಖವೆಂದರೆ ಐಷಾರಾಮಿ ಜೀವನ ಎಂದು ತಿಳಿದಿರುವ ಈಗಿನ ಯುವಪೀಳಿಗೆಗೆ ಹಿರಿಯ ನಾಗರಿಕರನ್ನು ಇತ್ತೀಚಿನ ದಿನಗಳಲ್ಲಿ ಮಾತನಾಡಿಸುವ ವರೇ ಇರುವುದಿಲ್ಲದುದರಿಂದ ಅವರು ಮಾತನ್ನೇ ಮರೆತಂತಾಗಿ ಮಾನಸಿಕ ವಾಗಿ ಕುಗ್ಗಿ ಮರೆವಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಎಚ್ಚರಿಕೆ ಯನ್ನೂ ರವಾನಿಸಲು ಲೇಖಕಿ ಇಲ್ಲಿ ಮರೆಯುವುದಿಲ್ಲ.ಇಂಥ ಕೆಲವನ್ನು
ಹೇಳುವುದಕ್ಕಿಂತ ಓದಿ ಅನುಭವಿಸಿ ದರೇ ಚೆನ್ನ!ಏಕೆಂದರೆ ಜೀವನವೆಂದರೇನೇ ಅನುಭವಗಳು
ತುಂಬಿದ ಕಣಜ...ಸ್ಥಿತ್ಯಂತರಗಳು ಬದುಕಿನ ಅನಿವಾರ್ಯ ಭಾಗ. ಈಗಂತೂ ಅದರ ವೇಗ ಕಲ್ಪನೆಗೂ ನಿಲುಕದ್ದು.ತಮ್ಮ ಅರಿವಿಗೆ ಹೊಸದಾದ ವಿಷಯಗಳಲ್ಲಿ ಹಿರಿಯರೂ ತಾವೇ ಸೋತು ತಲೆಬಾಗಿ ಮಕ್ಕಳ ಮಾತಿಗೆ ಒಪ್ಪಿಕೊಳ್ಳಲೇಬೇಕು ಎನ್ನುವ ಅವರು ಅದು ಅವಶ್ಯವಷ್ಟೇ ಅಲ್ಲ, ಸಧ್ಯದ ಮಟ್ಟಿಗೆ ಬುದ್ಧಿವಂತಿಕೆಯೂ ಹೌದು ಎನ್ನುವ ನಿಲುವನ್ನು ತಾಳುತ್ತಾರೆ.
ಇಂದು ಹೀಗೆ ತಮ್ಮಂಥವರನ್ನೂ ಮೊದಲ್ಗೊಂಡು ಬಹುಜನರ ಸಮಸ್ಯೆ. ಬದುಕಿನ ಧಾವಂತದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸುತ್ತಲೂ ಜನರಿದ್ದೂ ಒಂಟಿಯಾಗುವ ನಮಗೆ ಬೇಡದ ಭಾವಗಳು ಮನಸ್ಸಿನಲ್ಲಿ ದಟ್ಟವಾಗಿ ಮೋಡಗಟ್ಟುತ್ತಾ ಹೋಗುತ್ತವೆ. ತನ್ನ ಯೋಗ್ಯತೆ ಮೀರಿ ಸಾಂದ್ರತೆ ಹೆಚ್ಚಾದಾಗ ಹೊರಬಂದು ಸುರಿದು ಬರಿದಾಗಲು ತಹತಹಿಸುತ್ತವೆ. ಆ ಗಳಿಗೆಗೊಂದು ಜೊತೆ ಕಿವಿ ಬೇಕು. ಇಡಲು ಹೆಗಲು ಬೇಕು. ಒಂದಿಷ್ಟು ಆರ್ದ್ರ ಹೃದಯದ ಸಿಂಚನ ಬೇಕು ಎನ್ನುವ ಅವರ ಮಾತು ಎಲ್ಲರೂ ಒಪ್ಪಿಕೊಳ್ಳುವ ಸತ್ಯ.
ಈ ಬದುಕು ಎಲ್ಲರಿಗೂ ಏನನ್ನೋ ಕೊಡುತ್ತದಾದರೂ ಏನೋ ಒಂದನ್ನು ಕಸಿದುಕೊಂಡೇ ಕೊಡುತ್ತದೆ. ಏಕೆಂದರೆ ಬದುಕೆಂದರೆ ಹೋಟೆಲ್ ಟೇಬಲ್ ಅಲ್ಲವಲ್ಲ, ಯಾರನ್ನೋ ಕೈ ಮಾಡಿ ಕರೆದು Instant orders ಕೊಟ್ಟು ಇಲ್ಲಿ ಏನನ್ನೂ ಪಡೆಯಲಾಗುವುದಿಲ್ಲ... ಅದೊಂದು ಸದಾ ಹರಿವ ನದಿಯ ರೀತಿ. ಒಮ್ಮೆ ಗತಿ ಪಡೆದುಕೊಂಡರಾ ಯಿತು. ತನ್ನ ಮರ್ಜಿಯ ಮೇಲೆ ತನ್ನದೇ ಆದ ವೇಗದಲ್ಲಿ, ತನ್ನದೇ ರೀತಿಯಲ್ಲಿ ಹರಿಯುತ್ತಿರುತ್ತದೆ,'ಥೇಟ್ ಹಾಯಿ ದೋಣಿಯ'ದೇ ತರಹ.. ಇಂಥ ಪಯಣದ ನಡುವೆಯೇ ಜೀವನದ ಪಾಠಗಳೂ ಸಿಗುತ್ತವೆ. ಎಲ್ಲದಕ್ಕೂ ಮೈಯೊಡ್ಡಿ ಈಸಬೇಕು... ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವದಕ್ಕೆ
ಈ ಸಂಗ್ರಹದಲ್ಲಿ ಅನೇಕ ಲೇಖನಗಳಿವೆ.ಹೀಗೆ ಹಲವು
ವಿಭಿನ್ನ ನೆನಪುಗಳನ್ನೊಳಗೊಂಡ ಹೊತ್ತಿಗೆಗೆ ಮುನ್ನುಡಿ ಬರೆಯಲು ಖುಶಿ ಎನ್ನಿಸಿತು. ಧನ್ಯವಾದಗಳು ಕೃಷ್ಣಾ ಅವರೆ. ಇಂಥ ಅನೇಕ ಸುಂದರ ಅನುಭವಗಳನ್ನು ಹೊತ್ತ ಇನ್ನೂ ಅನೇಕ ಅನುಭವಗಳ ಸಂಚಿಯೇ
ಮುಂದೆಯೂ ಓದುಗರೆದುರು ಬಿಚ್ಚಲಿ ಎಂಬ ಹಾರೈಕೆಯೊಂದಿಗೆ, ನಿಮ್ಮೆಲ್ಲರ ವಿಶ್ವಾಸಿ,
ಮಾಲತಿ ಮುದಕವಿ
ಧಾರವಾಡ- ೭...
No comments:
Post a Comment