ನಾಳೆ ಹೇಗೆಂಬುದನು ನಾನರಿಯೆ...
B.A.ಆದಕೂಡಲೇ ನೌಕರಿಗೆ
ಸೇರಿದವಳಲ್ಲ ನಾನು.ಮೂರು ಮಕ್ಕಳ
ಜವಾಬ್ದಾರಿ ವಹಿಸಿಕೊಂಡು ಪ್ರತಿಶತ
ನೂರರಷ್ಟು ಗ್ರಹಿಣಿಯಾಗಿದ್ದೆ ಹತ್ತು ವರುಷ ಕಾಲ...ಮೈ ತುಂಬ ಕೆಲಸ.ದೊಡ್ಡ ಮನೆಯ ನಿರ್ವಹಣೆ. ಬರುವವರು/ಹೋಗುವವರ ನಡುವೆ ಪೂರ್ತಿಯಾಗಿಯೇ ಕಳೆದುಹೋಗಿದ್ದೆ.
ಅಂಥದರಲ್ಲಿ ಮಕ್ಕಳು " ಅವ್ವ ,ಬಾಯಿಲ್ಲೆ ನಿಂಗ ಮಜಾ ತೋರಸ್ತೇನಿ "- ಅಂತ ಬೆಳಗಿನ ಹೊತ್ತು ಕರೆದರೆ ಹೋಗಲಾಗುತ್ತಿರಲಿಲ್ಲ .ಏನೋ ಹೇಳಿ ಸಾಗಹಾಕುವುದು/ ಅವುಗಳು ಮುಖ ಮುದುಡಿಸಿಕೊಂಡು ಕೂಡುವುದೂ ಮಾಮೂಲಾಗಿತ್ತು.ಆಗ ಅವರ ಅಪ್ಪಾಜಿ ಹತ್ತಿರವಿದ್ದರೆ ಪರಿಸ್ಥಿತಿ
ಸಂಭಾಳಿಸಿ ಮಕ್ಕಳ ಜೊತೆ ಹೋಗಿ
ಅವರ ಜೊತೆ ಕೆಲ ನಿಮಿಷಗಳಿದ್ದು
ಅವರ ಮುಖ ಅರಳುವಂತೆ ಮಾಡುತ್ತಿದ್ದುದೂ ಇತ್ತು." ಹಾಗೆ ಮಕ್ಕಳ ಕುತೂಹಲ/ ಉತ್ಸಾಹ ತಣ್ಣಗಾಗಿಸಬಾ ರದು.ಕೆಲವೇ ನಿಮಿಷಗಳಲ್ಲಿ ಏನೂ
ಕಳೆದುಕೊಳ್ಳುವುದು ಇರುವುದಿಲ್ಲ.
ಕೆಲಸ ಬಿಟ್ಟು ಹೋಗು, ಅವರು ಹೇಳುವುದನ್ನು ಕೇಳಿಸಿಕೋ.ತಕ್ಷಣ ಮೆಚ್ಚುಗೆಯ ಎರಡು ಮಾತನಾಡು. ಅದು ಅವರ ವ್ಯಕ್ತಿತ್ವಕ್ಕೆ ಸಹಕಾರಿ"- ಎಂದು ನನಗೂ ಒಂದು class ತೆಗೆದುಕೊಳ್ಳುತ್ತಿದ್ದರು.ಆದರೆ
ಒಂಬತ್ತೂವರೆಗೆ ಎಲ್ಲರೂ ಮನೆ ಬಿಡುವುದು ಅನಿವಾರ್ಯವಾದಾಗ
ಅದು ಕಷ್ಟ ಸಾಧ್ಯ, ಬಹಳವೇ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದೂ
ಅವರಿಗೆ ಗೊತ್ತಿತ್ತು...ಕೆಲಸದ ಗಡಿಬಿಡಿ ಯಲ್ಲಿ ರೇಗಿದರೆ ತಟ್ಟನೇ ಹಾಜರಾಗಿ ಮಕ್ಕಳನ್ನು ಸಮಾಧಾನ ಮಾಡುವುದು ಅವರ ಕೆಲಸ..." ನೋಡು, ಮಕ್ಕಳನ್ನು ಅಮ್ಮ- ಅಪ್ಪ ಇಬ್ಬರೂ ಒಂದೇ ಸಲ ಬಯ್ಯಬಾರದು.ಕಂಗಾಲಾಗುತ್ತವೆ, ಅಸಹಾಯಕರಾಗುತ್ತಾರೆ.ನಾನು ಬಯ್ದಾಗ ನೀನು ಅವರ ಪರ ನಿಲ್ಲು. ಹಾಗೇ ನೀನು ಏನಾದರೂ ಅಂದರೆ ನಾನು ಅವರನ್ನು ಸಂಭಾಳಿಸುತ್ತೇನೆ. ಅದು ಮಕ್ಕಳಿಗೆ ಬಲ ಕೊಡುತ್ತದೆ.
ನಮ್ಮ ನಮ್ಮಲ್ಲಿಯೇ ಇದು ಸದಾ ನೆನಪಿರಲಿ.ಮಕ್ಕಳ ಆತ್ಮ ವಿಶ್ವಾಸಕ್ಕೆ
ಕುಂದಾಗುವ ಹಾಗೆ ಯಾವ ಕಾರಣಕ್ಕೂ
ನಾವು ನಡೆದುಕೊಳ್ಳುವುದು ಬೇಡ..."
ಇಂಥ ಸಣ್ಣಪುಟ್ಟ ದಿನನಿತ್ಯದ ವಿಷಯಗಳಿಗೂ ಗಮನ ಕೊಡಲೇ ಬೇಕಾದುದೂ ಹಿರಿಯರಿಲ್ಲದ ಮನೆಯ ಪ್ರಥಮ ಆದ್ಯತೆಯಾಗಿತ್ತು...ಬಹುಶಃ ಎಂಬತ್ತು- ತೊಂಬತ್ತರ ದಶಕಗಳಲ್ಲಿ
ಮಧ್ಯಮ ವರ್ಗದ ಮನೆಗಳಲ್ಲಿ ಇದು
ಸಾಮಾನ್ಯವಾಗಿ ಕಂಡು ಬರುವ ಪ್ರತಿ
ಮನೆಯ ದೃಶ್ಯವಾಗಿತ್ತು...
ಇದೆಲ್ಲ ಈಗ ನೆನಪಾಗಲು
ಮೊನ್ನೆ ರೈಲಿನಲ್ಲಿ ನಡೆದ ಒಂದು ಘಟನೆ
ಕಾರಣ.ಕೆಲ ದಿನಗಳ ಹಿಂದೆ ' ಚನ್ನಮ್ಮ Express' ನಲ್ಲಿ ಧಾರವಾಡಕ್ಕೆ ಹೋಗಬೇಕಿತ್ತು.ನಮ್ಮ ಬೋಗಿಯಲ್ಲಿ
ಒಂದು ಚಿಕ್ಕ ಕುಟುಂಬವೂ ಇತ್ತು.
ಬೆಳಿಗ್ಗೆ ಐದು ಗಂಟೆಗೆ ಹುಬ್ಬಳ್ಳಿ station
ಗೆ ಬರುತ್ತಲೇ ಅಪ್ಪ ತನ್ನ ಮಗನನ್ನು
ಎಬ್ಬಿಸಲು ಸುರುವಿಟ್ಟುಕೊಂಡರು. ಎದ್ದು ಹಾಸಿಗೆ ಮಡಚಿ,Shoes ಧರಿಸಿ
ಸಾಮಾನುಗಳನ್ನು ಬಾಗಿಲ ಬಳಿ ಸರಿಸಿಟ್ಟು ಸಾವಧಾನದಿಂದ ಇಳಿಯುವ ಯೋಜನೆ ಅವರದು.ಹದಿಮೂರು- ಹದಿನಾಲ್ಕರ ಅವರ ಮಗ ಏಳಲು ತಯಾರಿಲ್ಲ.'ಏಳು - ಎಂದು ಅಪ್ಪನ ಒತ್ತಾಯ.' ಮಲಗಲಿ ಬಿಡಿ'- ಅಂತ ಅಮ್ಮನ ಜೋರು.ಇದರ ಸಂಪೂರ್ಣ ಲಾಭ ಪಡೆದ ಮಗ ಎದ್ದಿದ್ದರೂ ಕೆಳಗೆ ಬರದೇ Mobile ನಲ್ಲಿ ಮುಳುಗಿದ್ದ. ಕೊನೆಗೆ ಅಪ್ಪ ಅವನನ್ನು ಕೆಳಗಿಳಿಸಿ ಅವನ ಕಾಲನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು,Shoes ಹಾಕತೊಡಗಿ ದರೂ ಅವ್ವ- ಮಗ ತುಟಿ ಪಿಟ್ಟೆನ್ನಲಿಲ್ಲ. ಅಷ್ಟೇ ಅಲ್ಲ ಒಂದು ಕಾಲಿಗೆ ಬೂಟು ಹಾಕಿಯಾದ ಮೇಲೆ, mobile
ನೋಡುತ್ತಲೇ ಮಗ,ಅದನ್ನು ಕೆಳಗಿಳಿಸಿ
ಇನ್ನೊಂದು ಕಾಲನ್ನು ಅಪ್ಪನ ತೊಡೆಯ
ಮೇಲೆ ಧಪ್ ಎಂದು ಬೀಸಿ ಹಾಕಿದ. ಇಷ್ಟಾದರೂ ಅಮ್ಮ ತನ್ನದೇನೋ ಮಾಡುವದರಲ್ಲಿ ಒಂದೇ ಒಂದು ಶಬ್ದವಾಡಲಿಲ್ಲ.ಆದ ದಿಗ್ಭ್ರಮೆಯಲ್ಲಿ ಉಳಿದ ವೇಳೆ ಕಳೆದು ಧಾರವಾಡ station ನಲ್ಲಿ ನಮ್ಮ ಪಾಡಿಗೆ ನಾವಿಳಿದು ಹೋದದ್ದಷ್ಟೇ ನಾವು ಮಾಡಿದ್ದು...
ಒಂದೋ ಎರಡೋ ಮಕ್ಕಳು, ಯಾವುದಕ್ಕೂ ಕೊರತೆ ಕಾಡುವ ಮಾತೇಯಿಲ್ಲ,ಸಮೃದ್ಧತೆಯೇ ಸುಖ ಎಂಬ ತಪ್ಪು ಭಾವನೆ...ಜೊತೆಗೆ ಸ್ವಲ್ಪು
ಹೆಚ್ಚಾಗಿಯೇ ಕೊಟ್ಟ ಸ್ವಾತಂತ್ರ್ಯ- ಪ್ರೀತಿ...
ಇವೆಲ್ಲವುಗಳ ಒಟ್ಟು ಪರಿಣಾಮ ವಿರಬಹುದಾ?ಇದೇ ಮುಂದುವರಿದರೆ
ನಾಳೆ ಹೇಗೋ?!!
No comments:
Post a Comment