Sunday, 4 February 2024

ಬದುಕು ಹಾಗೇ ಸಾಗುತ್ತಿದೆ...

 'ಸಂಧ್ಯಾ- ರಾಗ'...
     
ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...ಆದರೂ ಪರವಾಯಿಲ್ಲ, ಸಾಗುತಿದೆ ಬದುಕು...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ
ಕಾಲ ಒಳಗಿಣುಕುತ್ತಾನೆ,
ಹಾಗೇ ಸಾಗುತಿದೆ ಬದುಕು...

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು,ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಒಟ್ಟಿನಲ್ಲಿ ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -ಅವರನ್ನು ಮನೆಗೆ ಕರೆಯುತ್ತೇನೆ...
ನನ್ನದೇ ಮರ್ಜಿಯಲ್ಲಿ ಸಾಗುತಿದೆ ಬದುಕು...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  
'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚು-ಕಡಿಮೆ ಸಾಗುತಿದೆ ಬದುಕು...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...
ನಮ್ಮಿಬ್ಬರ ಜುಗಲ್ಬಂದಿಯಲ್ಲಿ ಸಾಗುತಿದೆ ಬದುಕು...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಹೀಗೇ ಒಂದು ಲಯದಲ್ಲಿ 
ನಿತ್ಯ ಸಾಗುತಿದೆ ಬದುಕು...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಹೆಚ್ಚು ಕಡಿಮೆ ಹಾಗೇ ಸಾಗುತಿದೆ ಬದುಕು..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, 
ಅರಿವಿಗೇ ಬರದೇ ಸಾಗುತಿದೆ ಬದುಕು.

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...
ಎಂಬ ಜ್ಞಾನದೊಂದಿಗೆ ಸಾಗುತಿದೆ
ಬದುಕು...

( ಮೂಲ: ಹಿಂದಿಯಿಂದ...)

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...