Saturday, 29 April 2023

ನಾನೇಕೆ ಬರೆಯುತ್ತೇನೆ?

ಹೀಗೆಂದು ನನ್ನನ್ನು ನಾನು
ಹಲವು ಬಾರಿ ಕೇಳಿಕೊಂಡಿದ್ದೇನೆ... 
ಕೆಲವೊಂದು ಉತ್ತರಗಳನ್ನು
ಹೊತ್ತಿಗಿರಲೆಂದು ಸಾಕಿಕೊಂಡಿದ್ದೇನೆ...
ಅವು ಸಮರ್ಪಕವಾ?- ಗೊತ್ತಿಲ್ಲ,
ಆದರೂ ಬರೆಯುವದೇನೂ ಬಿಟ್ಟಿಲ್ಲ...
ಬರೆದಿದ್ದೇನೆ...ಬರೆಯುತ್ತಿದ್ದೇನೆ...
ಎಲ್ಲರೂ ಬರೆಯುತ್ತಿಲ್ಲವೇ?
ಎಂಬುದು ನನ್ನ ವಾದ...
ನಾನೇಕಾಗಬೇಕು ಅಪವಾದ?

ಹೇಗೆ ಬರೆಯುತ್ತೇನೆ?
ಪರವಾಗಿಲ್ಲವಾ?  
ಮುಂದುವರಿಸಬಹುದಾ?
ಆಗಾಗ ಆಗಿದೆ ಸ್ವಯಂ ಅವಲೋಕನ-
ಆಗೆಲ್ಲ, ಸಮರ್ಥಿಕೊಂಡದ್ದಿದೆ ನನ್ನನ್ನ...
ಇತರರು ಓದಿದರೆ/ ಲೈಕಿಸಿದರೆ/ 
/ ಕಾಮೆಂಟಿಸಿದರೆ ಖುಶಿ-
ಹಾಗಿಲ್ಲವಾ?-ಕಿಂಚಿತ್ತೂ ಇಲ್ಲ ತಲೆಬಿಸಿ...
ಪ್ರಕಟಣೆಗೆ/ ಪ್ರಶಸ್ತಿಗೆ/ ಪ್ರಶಂಸೆಗೆ ಬೇಕಷ್ಟು ಅರ್ಹರಿದ್ದಾರೆ,
ಅವರಿಗಿರಲಿ ಅದರ ಚಿಂತೆ,
ನನ್ನದು ಬರಿ 'ಬದುಕಿನ ಅಂತೆ- ಕಂತೆ.'

ಹರಳುಗಟ್ಟಿದ ಭಾವಗಳು ಕರಗಬೇಕು,
ತಪ್ಪಾಗಿದ್ದರೆ ಕಿಂಚಿತ್ತಾದರೂ ಕೊರಗಬೇಕು...
ಮನಸ್ಸಿನ ಕಾರ್ಮೋಡಗಳು ಮಳೆ ಸುರಿಸಿ ಲಘುವಾಗಬೇಕು...
ಇತರರ ಅನುಭವ- ಅನುಭಾವಗಳು
ಗುರುವಾಗಬೇಕು...
ಬದುಕಿನ ಪದರುಗಳ ಬಿಡಿಸಿ 
ಬಯಲಾಗಬೇಕು-ಇಂಥವೇ  ಹಳವಂಡಗಳು...
ಮಹಾಭಾರತದ ಹದಿನೆಂಟು 
ಪರ್ವ- ಕಾಂಡಗಳು....

ನಾವು ಅಂದುಕೊಂಡದ್ದೆಲ್ಲ ಬರವಣಿಗೆಯಿಂದಲೇ ಆಗಲಿಕ್ಕಿಲ್ಲ...
ಆಗಬೇಕಾಗಿಯೂ ಇಲ್ಲ...
ಹಾಗಂತ ಬರೆಯುವದನ್ನು 
ಬಿಡಬೇಕಾದ ದರ್ದೂ ಇಲ್ಲ...
ಬರೆಯಬೇಕೆನಿಸಿತಾ-
ಬರೆದು ಬಿಡಬೇಕು...
ಬೇಡವಾ? ತಲೆ ಕೊಡವಿ 
ಎದ್ದು ನಡೆದು ಬಿಡಬೇಕು...
ಅಷ್ಟೇಯಾ...









No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...