Tuesday, 10 April 2018

ಮಕ್ಕಳು ದೊಡ್ಡವರಾಗಿದ್ದಾರೆ...

( WhatsApp ನಲ್ಲಿ share ಆಗಿದ್ದ ಹಿಂದಿ ಕವನದ ಅನುವಾದ...ನನ್ನಿಂದ....ಯಾರು ಬರೆದದ್ದು ಗೊತ್ತಿಲ್ಲ...ನನಗೆ ಅತಿ ಮೆಚ್ಚುಗೆಯಾಯಿತು...ಬರೆದವರಿಗೂ, ಹಂಚಿಕೊಂಡವರಿಗೂ ಧನ್ಯವಾದಗಳು)
ಮಕ್ಕಳು ದೊಡ್ಡವರಾಗಿದ್ದಾರೆ...
ಹೆಗಲಮೇಲೆ ಮಲಗಿ ಈಗ
ಯಾರೂ ನಿದ್ದೆ ಮಾಡುವದಿಲ್ಲ...
ಎದೆಗೊತ್ತಿ ಗುಣಗುಣಿಸುತ್ತಿದ್ದ
ಜೋಗುಳ ನೆನಪಿಲ್ಲ...
ಗಳಿಗೆಗೊಮ್ಮೆದ್ದು ಹೊದಿಕೆ ಸರಿಮಾಡುವ ಗೋಜಿಲ್ಲ...
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ..
ಹಾಸಿಗೆಗಳೀಗ ಸುಕ್ಕಾಗುವದಿಲ್ಲ...
ಉಟ್ಟ ಬಟ್ಟೆಗಳು ಅಲ್ಲಲ್ಲಿ ಬೀಳುವದಿಲ್ಲ...
ರಿಮೋಟಿಗೆ ಮಾರಾಮಾರಿಯಿಲ್ಲ...
ಮನಮೆಚ್ಚಿದ ಊಟ- ತಿಂಡಿಗಳ ಬೇಡಿಕೆಯಿಲ್ಲ...
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ..
ಹಿಂದಿನಿಂದ ಕೊರಳಿಗೆ ಜೋತು ಬೀಳುವದಿಲ್ಲ....
ಬಗ್ಗಿಸಿ ತಗ್ಗಿಸಿ ಬೆನ್ನಮೇಲೆ
ಕುದುರೆ ಸವಾರಿಯಿಲ್ಲ...
ಊಟ ಮಾಡುವಾಗ ಹಕ್ಕಿಗಳೀಗ ಹಾರುವದಿಲ್ಲ..
ಹರಟೆ- ವಾದ- ತರ್ಕಗಳಿಲ್ಲ...
ಜಗಳ ಬಿಡಿಸುವ ಜಂಜಾಟಗಳಿಲ್ಲ...
ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ....
ಕಣ್ಣು ಮುಚ್ಚಿ ತೆಗೆಯುವದರಲ್ಲಿ
ಸ್ವರ್ಗ ಸರಿದಿದೆ...
ಸುಂದರ ಅನುಭೂತಿಗಳು
ಮಾಯವಾಗಿವೆ.....
ಮನೆ ದೊಡ್ಡದಾಗಿ,ವಿಶಾಲವಾಗಿ ಹೆದರಿಸುತ್ತಿದೆ....
ಮಕ್ಕಳೀಗ ಬೆಳೆದು ದೊಡ್ಡವರಾಗಿದ್ದಾರೆ....
ದಿನಕ್ಕೆರಡು ಬಾರಿ
ಆರೋಗ್ಯ ವಿಚಾರಿಸುತ್ತಾರೆ...
ಆರಾಮವಾಗಿರಲು ನೆನಪಿಸುತ್ತಾರೆ...
ನಾವು ಜಗಳ ಬಗೆಹರೆಸುತ್ತಿದ್ದೆವು..
ಅವರೀಗ ನಮಗೆ ಉಪದೇಶಿಸುತ್ತಾರೆ...
ಬಹುಶಃ ನಾವೀಗ  ಮಕ್ಕಳಾಗಿದ್ದೇವೆ..
ಅವರು ಬೆಳೆದು ದೊಡ್ಡವರಾಗಿದ್ದಾರೆ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...