Friday, 8 January 2021

೩೧. ದೇಖಾ ಏಕ ಖ್ವಾಬ ತೋ, ಏ ಸಿಲ್ ಸಿಲೇ ಹುಯೇ...

" ಮಲಗಿದಾಗ ಬೀಳುವವು ಕನಸುಗಳಲ್ಲ, ಮಲಗಲು ಬಿಡಲಾರದ್ದೇ ನಿಜವಾದ ಕನಸುಗಳು" ಎಂದರು ಶ್ರೀ ಅಬ್ದುಲ್ ಕಲಾಮ್ ಅವರು. ಪಾಪ, ಅಂಥ ಮಹಾನುಭಾವರಿಗೇನು ಗೊತ್ತು, ನಮ್ಮಂಥವರಿಗೆ ಬೀಳುವ ,ಮೂರನೇ ಪ್ರಕಾರದ ಕನಸುಗಳ ಕಥೆ!!!

ನನ್ನವೂ  ಮಲಗಿದಾಗೇನೋ ಬೀಳುತ್ತವೆ, ಆದರೆ  ಒಮ್ಮೆ ಬಿದ್ದರೆ ಮತ್ತೆ  ಗಾಢವಾಗಿ  ಮಲಗಲು  ಬಿಡುವುದಿಲ್ಲ. ನಿದ್ದೆ- ಎಚ್ಚರಗಳ ಮಧ್ಯದ ತುಂಡು ತುಂಡು ಹಳವಂಡಗಳಂತೆ  ಅವು. " ನಿದ್ದೆಗೊಮ್ಮೆ ನಿತ್ಯ ಕನಸು...ಎದ್ದ ಸಲ ಅಸ್ವಸ್ಥ ಮನಸು" - ಎಂಬ 'ಬೇಂದ್ರೆ ವಿರೋಧಿ' ಕವನಸಾಲು.

ನನಗೆ ಚೆಂದದ ಕನಸು ಬೀಳಲಿ ಎಂಬ 'ದುರಾಸೆ'  ಖಂಡಿತ ಇಲ್ಲ.ಆ ವಯಸ್ಸೂ ಅಲ್ಲ. ವಯಸ್ಸು ಇದ್ದಾಗಲೂ ಅಂಥ ಕನಸುಗಳು ನಮ್ಮ ಪಾಲಿಗೆ ತುಟ್ಟಿಯೇ.
ಕಣ್ಣು ಸರಿಯಾಗಿ ಕಂಡರೆ ಸಾಕು ಎಂಬುದೇ ನನ್ನ ' ಚಿಣ್ಣ ಚಿಣ್ಣ' ಆಸೆ. ಕನ್ನಡ ಕಾದಂಬರಿಗಳ/ ಸಿನೆಮಾ ನಾಯಕಿಯರ ಕನಸುಗಳನ್ನು ಅಲ್ಪ ಕಾಲ
ಕಡ ಪಡೆದುಕೊಂಡ ಸಂಭ್ರಮ ಎಷ್ಟೋ ಅಷ್ಟೇ...

ನಾನನ್ನುವದು,- ಯಾವುದೇ ಕನಸುಬೀಳಲಿ, ಅದೇನು ಎಂಬುದು ' ಕನಿಷ್ಠ ಪಕ್ಷ ನನಗಾದರೂ ತಿಳಿಯಲಿ ' -ಎಂಬ ಅತ್ಯಂತ ಪ್ರಾಮಾಣಿಕ ಬಯಕೆ.  ಆನೆಯ ದೇಹಕ್ಕೆ ಕುದುರೆ ಮುಖ, ಕತ್ತೆ ಬಾಲ, ಎತ್ತಿನ ಕೋಡು, ಸಿಂಹದ ಕಿವಿ ಇದ್ದರೆ ಅದಾವ ಪ್ರಾಣಿಯಾದೀತು? ಅಂಥ ಬರಗೆಟ್ಟ , ಅರೆಬೆಂದ ಕನಸು ಯಾವ ಸುಖಕ್ಕೆ ಅಲ್ವಾ?

ಆದರೆ ನಾನೂ ಅದನ್ನು ಅಲ್ಲಿಗೇ,ಅಷ್ಟಕ್ಕೇ ಬಿಟ್ಟರೆ ತಾನೇ!!  ಆಳ ಅಧ್ಯಯನಕಾರಳ
ವಿಶ್ಲೇಷಣೆಗಲ್ಲದಿದ್ದರೂ, ಕೆಟ್ಟ ಕುತೂಹಲದ  ಕುತ್ಸಿತ   ಬುದ್ಧಿಯಿಂದ ಲಾದರೂ     ಆ  ತುಂಡುಗಳನ್ನು ಕೂಡಿಸಿ ಹೊಲಿದು ' ಕಡೆಗೊಂದು ಕೌದಿ' ಯಾಗಿಸುವ  ಪ್ರಯತ್ನ ಮಾಡುತ್ತೇನೆ. ಆದರೆ, alas!! ಅದು ನನ್ನನ್ನು ಬೆಚ್ಚಗಾಗಿಸಲು  ಬಿಡದೇ  ಬೆಚ್ಚಿಸಿ ಬೆದರಿಸಿದ್ದೇ ಜಾಸ್ತಿ.

ಇದನ್ನು ಗೆಳತಿಯರಿಗೆ ಹೇಳಿದರೆ ಅದೊಂದು ಬೇರೆಯೇ ಅಧ್ವಾನ.
" ನಾವು ಬೇರೆ ಬೇರೆ ವಿಷಯಗಳಲ್ಲಿ busy ಇದ್ದಾಗ ನಮಗೆ ಬಂದ ಅನೇಕ ವಿಚಾರಗಳು ಹೊರಗೆ  ಪ್ರಕಟವಾಗದೇ ' ಸುಷುಪ್ತಿ'ಗೆ ಜಾರಿರುತ್ತವೆ, ರಾತ್ರಿ ಮೈ, ಹಾಗೂ ಮನಸ್ಸು ವಿರಾಮ ಸ್ಥಿತಿಯಲ್ಲಿ ಇದ್ದಾಗ  ಕನಸಿನ ರೂಪದಲ್ಲಿ ಹೊರಬರುತ್ತವೆ"- ಇದು ಒಬ್ಬ ಗೆಳತಿಯ ವಿಶ್ಲೇಷಣೆ."

     " ನಮ್ಮ ಮನಸ್ಸಿನಲ್ಲಿ ಇದ್ದ ಯಾವುದೇ ಆಸೆ ಆಕಾಂಕ್ಷೆಗಳು ಬದುಕಿನಲ್ಲಿ ಈಡೇರಿರದಿದ್ದರೆ , ಅದನ್ನೇ ಧೇನಿಸುವ ಮನಸ್ಸು ಅವುಗಳನ್ನು
ಕನಸಿನಲ್ಲಿ  ಈಡೇರಿಸಿಕೊಳ್ಳಲು ಹವಣಿಸುತ್ತಿದೆ.- ಇನ್ನೊಬ್ಬ ಮನಶ್ಶಾಸ್ತ್ರಜ್ಞಳ  ಬಡಬಡಿಕೆ.

       " ಅದೇನೂ ಮಣ್ಣಲ್ಲ, ಹೆಚ್ಚು ಖಾರ, ಮಸಾಲೆ ,ಎಣ್ಣೆ ಪದಾರ್ಥಗಳನ್ನು ತಿಂದು , ತಡವಾಗಿ ಮಲಗಿದರೆ , ಅಪಚನಕ್ಕೆ   ಪಿತ್ತ ಕೆದರಿ ಇದೆಲ್ಲ ಆಗುತ್ತೆ ,ಸಾದಾ ಉಂಡು, ಬೇಗ ಮಲಗಿ ನಿದ್ರೆ ಮಾಡು, ಸರಿಯಾಗುತ್ತದೆ" - ಇನ್ನೊಬ್ಬ ನನ್ನ ಮುತ್ತಜ್ಜಿಯಂಥ ಗೆಳತಿ.

        ಹಿಂದೆಂದೋ ಒಂದು ಪುರಾಣ
ಕಥೆಯಲ್ಲಿ ಓದಿದ್ದೆ- ಸಂತಾನಾಪೇಕ್ಷಿ ಭಕ್ತಳೊಬ್ಬಳಿಗೆ ದೇವರು ಕೇಳುತ್ತಾನೆ" ಸದ್ಗುಣಿಯಾದ ಅಲ್ಪಾಯುಷಿ ಮಗ ಬೇಕೋ? ದೀರ್ಘಾಯುಷ್ಯವಿರುವ ಕುಪುತ್ರ  ಬೇಕೋ" ,ಎಂದು. ಅವಳು ಏನು ಆಯ್ಕೆ ಮಾಡಿದಳು ಇಲ್ಲಿ ಅಪ್ರಸ್ತುತ. ನನಗೆ ದೇವರೇನಾದರೂ
ಪ್ರತ್ಯಕ್ಷವಾಗಿ ವರ ಕೊಡುತ್ತೇನೆಂದು ಅಂದರೆ ನನ್ನ  ಬೇಡಿಕೆ," ದೇವರೇ, ಅರ್ಥವಾಗದ ನೂರು ಕನಸುಗಳ ಬದಲಿಗೆ, ಅರ್ಥವಾಗುವ ಮೂರು ಕನಸುಗಳೆನಗೆ ಸಾಕು"
   
             ಕೊನೆಗೆ ನನಗನಿಸಿದ್ದು, ಕಠಿಣಾತಿ ಕಠಿಣ ,ವಿಷಯಕ್ಕಿಂತಲೂ ಗಹನ ಈ ವಿಚಾರ, ಅದನ್ನು ಅದರ ಪಾಡಿಗೆ ಬಿಟ್ಟು, ಬಂದಾಗ , ಬಂದಷ್ಟು ನಿದ್ದೆ ಮಾಡುವುದೇ ಸೂಕ್ತ ಎಂದು.
   
          ನೀವೇನಂತೀರಿ???

 

           

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...