ಇಂಥ ಅರಿವು, ಸ್ಥಿತಪ್ರಜ್ಞತೆ ಎಲ್ಲರ ಕೈಯೊಳಗಿನ ತುತ್ತಲ್ಲ. ಅದಕ್ಕೆ ವಿಶೇಷ ಪ್ರಜ್ಞೆ ಬೇಕು. ಮನಸ್ಸು, ಬುದ್ಧಿಗಳ ಪರಿಪಕ್ವ ಮೇಳ ಬೇಕು. ಅವೆರಡರ ಮೇಲೂ ಒಂದು 'ಬಿಗಿ ಹಿಡಿತ' ಬೇಕು.
ನಾವು ಶಾಲೆಯಲ್ಲಿದ್ದಾಗ ಒಂದು ಆಟವಾಡುತ್ತಿದ್ದೆವು. ಕಾಗದ, ಇಲ್ಲವೇ ಪಾಟಿಯ ಮೇಲೆ ಒಂದು ಗೆರೆಯಳೆದು ಎದುರಿನವರು ಅದನ್ನು ಮುಟ್ಟದೇ ಸಣ್ಣದಾಗಿಸಬೇಕೆಂಬುದು ನಮ್ಮ ಕರಾರು. ಬಹಳ ಜನರಿಗೆ ಗೊತ್ತಾಗುತ್ತಿರಲಿಲ್ಲ. ಯಾರೋ ಒಬ್ಬಿಬ್ಬರು ಅದರ ಕೆಳಗೆ ಒಂದು ಅದಕ್ಕೂ ದೊಡ್ಡ ಗೆರೆ ಎಳೆದಾಗ
ಮೊದಲಿನದು ತಂತಾನೇ ಚಿಕ್ಕದಾಗುತ್ತಿತ್ತು...
ಬಹುಶಃ ಆ ದೇವರಿಗೂ ಈ ಆಟ ಗೊತ್ತು
ಎನಿಸುತ್ತದೆ. ಡಿಸೆಂಬರ್ ೧೮ ನೇ ತಾರೀಖು ಅರ್ಧ ಗಂಟೆಯಲ್ಲಿ ಬರುತ್ತೇನೆ ಎಂದು ಹೊರಬಿದ್ದ ನನ್ನ ತಮ್ಮ ಮರಳಿ ಮನೆಗೆ ಬಂದದ್ದು ಪಾರ್ಥಿವ ಶರೀರದ ರೂಪದಲ್ಲಿ. ನಾವಷ್ಟೇ ಏಕೆ, ಯಾರೊಬ್ಬರೂ ಊಹಿಸಿರದ ರೀತಿಯಲ್ಲಿ... ಅದನ್ನು ಅರಗಿಸಿಕೊಳ್ಳಲು
ಸಾಧ್ಯವೇಯಿಲ್ಲ ಎಂಬಂಥ ಸ್ಥಿತಿಯಲ್ಲಿ.
ಆ ಮಾತಿಗೆ ತಿಂಗಳೂ ಆಗಿಲ್ಲ, ಧಾರವಾಡದ bypass ರಸ್ತೆಯ ಅಪಘಾತಕ್ಕೆ ದಾವಣಗೆರೆಯ ಹನ್ನೆರಡು ಮಹಿಳೆಯರು ಬಲಿ, ಮೂವರು ಗಂಭೀರ ವಾಗಿ ಗಾಯಗೊಂಡವರು. ಎಲ್ಲರದೂ ೪೦/೪೫ರ ಆಸುಪಾಸಿನ ವಯಸ್ಸು.
ಬದುಕಿನ ಸಂಘರ್ಷದ ಮೊದಲ ಹಂತ ಮುಗಿಸಿ, ಹರೆಯದ ಮಕ್ಕಳ ಕಣ್ಣಿನ ಕನಸುಗಳಿಗೆ ಬಣ್ಣ ತುಂಬುವ ಕಾಯಕದ
ಸಿದ್ಧತೆಯಲ್ಲಿದ್ದವರು. ನಡುವೆ ಕಷ್ಟಪಟ್ಟು ತಮ್ಮದಾಗಿಸಿಕೊಂಡ ತುಸು ವೇಳೆಯನ್ನು
ಮಜವಾಗಿ ಕಳೆಯುವ ಕನವರಿಕೆಯಲ್ಲಿ
ಅಲ್ಪಕಾಲಿಕ ಪ್ರವಾಸಕ್ಕೆಂದು ಹೊರಟವರು...ಮೂರೇ ಗಂಟೆಗಳಲ್ಲಿ
ಅವರ ದುರಾದೃಷ್ಟ ಕರೆದುಕೊಂಡು ಹೋದ ಜಾಗ ಮತ್ತೆಂದೂ ಮರಳಿ ಬರಲಾರದಂತಾದುದು ಯಾವ ಪಾಪಕ್ಕಾಗಿ ???ಯಾರು ಹೇಳಬೇಕು???
ಈ ದೊಡ್ಡ ದುರಂತ ನಮ್ಮ ವೈಯಕ್ತಿಕ ನಷ್ಟವನ್ನು ಕೆಲಕಾಲ ಬದಿಗೆ ಒತ್ತಿದ್ದೇನೋ ಹೌದು. ಅದೇ ದೊಡ್ಡ ಗೆರೆಯೊಂದು ಪಕ್ಕದ ಸಣ್ಣ ಗೆರೆಯನ್ನು ಚಿಕ್ಕದಾಗಿಸಿದಂತೆ.
ಹಿಂದೆ ಹತ್ತನೇ ವರ್ಗದವರಿಗೊಂದು ಆಂಗ್ಲ ಕವಿತೆಯಿತ್ತು.'MOTHER' ಎಂದು ಹೆಸರು. ಅದು mother/ ಹಾಗೂ mother nature ಎರಡರ ನಡುವಿನ ಸಾಮ್ಯತೆಯ ಕುರಿತಾದದ್ದು. ತಾಯಿ ಮಕ್ಕಳ ಆನಂದಕ್ಕಾಗಿ ಆಡಲು ಆಟಿಗೆ ಕೊಡಿಸಿ ಆಡಲೆಂದು ಬಿಡುತ್ತಾಳೆ. ಮಗು ಚಂದಾತಿಚಂದದ ಆಟಿಗೆಗಳಿಂದ
ಆಕರ್ಷಣೆಗೊಂಡು ಇಡೀ ದಿನ ಅವುಗಳೊಂದಿಗೆ ಆಡುತ್ತದೆ .ರಾತ್ರಿಯಾಗಿ ದೇಹ/ ಮನಸ್ಸು ಪೂರ್ತಿ ದಣಿದು, ಬಂದ ನಿದ್ರೆಯನ್ನು ಹಿಮ್ಮೆಟ್ಟಿಸಿ ತೂಕಡಿಸಿದರೂ
ಅಪ್ಪಿ ಹಿಡಿದ ಆಟಿಗೆಗಳ ಹಿಡಿತ ಸಡಲಿಸುವುದಿಲ್ಲ. ಬೇರೆ ಮಾರ್ಗವೇ ಇಲ್ಲದೇ ತಾಯಿ ಮಗುವನ್ನು ರಮಿಸಿ, ಮುದ್ದು ಮಾಡಿ, ಮರುದಿನ ಹೊಸ ಆಟಿಕೆಗಳ ಭರವಸೆ ಕೊಟ್ಟು ಮಲಗಿಸಲು ಕರೆದೊಯ್ಯುತ್ತಾಳೆ.
ಈ ಹೋಲಿಕೆ ಕೊಟ್ಟು ಕವಿ ಮನುಷ್ಯ ನನ್ನು ಮಗುವಿಗೆ, ಅವನ ಐತಿಕ ಭೋಗದ ವಸ್ತುಗಳನ್ನು ಆಟಿಗೆಗೆ, ರಾತ್ರಿ ನಿದ್ದೆಯನ್ನು ' ಸಾವಿಗೆ' ಸಮೀಕರಣಗೊಳಿಸಿ ಬರೆದ ಸುಂದರ ಕವನವದು. 8/10 ವರುಷ ಶಾಲಾ ಮಕ್ಕಳಿಗೆ ನಿರ್ಭಾವುಕವಾಗಿ ಕಲಿಸಿದ್ದರೂ
ಈಗ ನನಗೆ ಬದುಕು ಅದನ್ನೇ ದಿನನಿತ್ಯ
ಕಲಿಸುತ್ತಿದೆ.
"ಆಡಿಸಿದಾತ ಬೇಸರ ಬಂದು ಆಟ ಮುಗಿಸಿದ" ಎನ್ನುತ್ತಾರಲ್ಲ, ಥೇಟ್ ಹಾಗೆಯೇ ಘಟನೆಗಳು ನಡೆಯುತ್ತವೆ ಎಂದು ಎಷ್ಟೇ ಅಂದುಕೊಂಡು ,ಸಮಾಧಾನ ಮಾಡಿಕೊಂಡರೂ ಇಂಥ ಆಘಾತಗಳನ್ನು ಗೆಲ್ಲುವುದು ಕಷ್ಟಸಾಧ್ಯ, ಬಹುತೇಕ ಅಸಾಧ್ಯ. ಅತೀವ ವಯಸ್ಸಾಗಿದ್ದರೆ, ತೀವ್ರ ತರದ ಅನಾರೋಗ್ಯ ಕಾಡುತ್ತಿದ್ದರೆ, ಆ ಮಾತು ಬೇರೆ. ಸಂಬಂಧಿಸಿದವರಿಗೆ ಸ್ವಲ್ಪವಾದರೂ ಮಾನಸಿಕ ತಯಾರಿ ಇರುತ್ತದೆ ಎನ್ನಬಹುದು. ಆದರೆ ' ಗುಬ್ಬಿಯೊಂದು ಹಾರಿಬಂದು ಗಬಕ್ಕನೇ ಕೈ ತುತ್ತನ್ನು ಕಸಿದುಕೊಂಡು ಹೋದಂತೆ'-
ಘಟನೆ ನಡೆದರೆ ಸಂಬಂಧಿಸಿದವರು
ಅನುಭವಿಸಬೇಕಾದ ನೋವು ಮಾತ್ರ
ಅಪಾರ...
.
No comments:
Post a Comment