ದಿನಾಲೂ ನನ್ನ ದಿನಚರಿಯನ್ನೇ fb post ಗಳಂತೆ ಹಾಕುವ ನಾನು ಅವ್ವನ
ಹೆಸರಲ್ಲಿ ಏನೂ ಹಾಕಲಿಲ್ಲ.ಯಾಕೋ
ಮನಸ್ಸೇ ಒಪ್ಪಲಿಲ್ಲ.ನಾವೆಲ್ಲ ಅವಳಿಗೆ
'ಅಮ್ಮ' ಅನ್ನಲೇಯಿಲ್ಲ, ಅಪ್ಪನಿಗೆ ಅಪ್ಪ'
ಎಂದು ಕರೆಯಲಿಲ್ಲ.ಕೂಡು ಕುಟುಂಬ ಗಳಲ್ಲಿ ಉಳಿದವರು ಅವರನ್ನು ಹೇಗೆ ಕರೆದರೋ ಹಾಗೆ ಅಕ್ಕ/ ಅಣ್ಣ ಎಂದೇ ಕರೆಯುತ್ತಿದ್ದುದು.ಈಗಿನ ವಿಭಕ್ತ ಕುಟುಂಬಗಳಂತೆ ಪ್ರತಿಯೊಬ್ಬರಿಗೆ
ಪ್ರತ್ಯೇಕ ಅಸ್ತಿತ್ವ ಆಗೆಲ್ಲ ಕಡಿಮೆಯೇ...
ಮನೆಯವರೆಲ್ಲರೂ ತಮಗೆ ಆಗುವ/ ವಹಿಸಿಕೊಟ್ಟ/ ಕೆಲಸಗಳನ್ನು ಮಾಡುವದು,ಮಾಡುತ್ತಲೇ ಇರುವದು ...ಕುಟುಂಬ ದೊಡ್ಡದಿದ್ದರಂತೂ 'ಅವ್ವ' ಎಂಬಾಕೆ ಅಕ್ಷರಶಃ ಗಾಣದೆತ್ತು.ಆರ್ಥಿಕ
ಕಾರಣಗಳಿಗಾಗಿ ಕೆಲಸದವರ ಸುದ್ದಿ ಎತ್ತುವಂತಿಲ್ಲ, ಕೆಲಸದಿಂದ ದಣಿದರೂ
ಕ್ಷಣಹೊತ್ತು ಕೂಡುವಂತಿಲ್ಲ,ಅನಾರೋ ಗ್ಯದಿಂದ ನೆಲಕಚ್ಚಿ ಮಲಗುವವರೆಗೂ
'ಹೇಗಿದ್ದೀಯಾ? ವಿಶ್ರಾಂತಿ ತಗೋ,"- ಎಂದು ಹೇಳುವವರಿಲ್ಲ.ಒಂದು ವೇಳೆ ಹೇಳಿದರೂ ದೊಡ್ಡ ಕುಟುಂಬದಲ್ಲಿ ಅದು ಸುಲಭ ಸಾಧ್ಯವಿರಲೇಯಿಲ್ಲ' -ಅದು ಬೇರೆ ಮಾತು
ಇದು ನಮ್ಮ ಮನೆಯದಷ್ಟೇ
ಅಲ್ಲ, ಎಲ್ಲರ ಮನೆಯಲ್ಲೂ ಹಾಗೇನೇ
ಇದ್ದದ್ದು.ಮುಗ್ಧರಾದ ನಮಗೆಲ್ಲ,' ಇಡಿ ಜಗತ್ತು ನಡೆಯುವದೇ ಹಾಗಿರಬಹುದು '- ಎಂಬ ಭಾವ. ನಾವು ದೊಡ್ಡವರಾಗಿ ಆಖಾಡಕ್ಕೆ ಇಳಿದಾಗಲೇ ಅದರ ಕಷ್ಟ
ತಿಳಿದದ್ದು." ನೀವಿನ್ನೂ ಸಣ್ಣವರು, ಎಲ್ಲದಕ್ಕೂ ತಲೆಹಾಕಲು ಬರಬೇಡಿ"-
ಎಂಬುದನ್ನು ಕೇಳಿ, ಕೇಳಿ, ಆಗಿನ ಮಡಿ, ಮೈಲಿಗೆಯ ವಾತಾವರಣದಲ್ಲಿ ಒಂದು
ರೀತಿ ಹೊರತಾದವರಾಗಿ, ಎಲ್ಲೋ ಚಿಕ್ಕ ಪುಟ್ಟ ಚಿಲ್ಲರೆ ಕೆಲಸ ಮಾಡಿಕೊಂಡು
ಹೊರ ಹೊರಗೇ ಬಾಲ್ಯ ಕಳೆದ ನಮಗೆ
ಅವ್ವಂದಿರಿಗೆ ನೆರವಾಗುವದು/ ಅವರ ಸಾಮೀಪ್ಯ ,ಒಡನಾಡಿದ ಖುಶಿ ಎಲ್ಲ ಕಳೆದುಕೊಂಡುದು ತಿಳಿದಾಗ ಬಹಳ ತಡವಾಗಿ ಹೋಗಿತ್ತು.ಮತ್ತೆ ಅದೇ...ಎಲ್ಲರದೂ ಒಂದೇ ರೀತಿ...
ಈಗ ಮಕ್ಕಳು,ಮೊಮ್ಮಕ್ಕಳ
ಜೀವನದ ಪರಿ ನೋಡಿದರೆ, ಅವರಿಗೆ
ಸಿಕ್ಕ ಸ್ವಾತಂತ್ರ್ಯ/ ಶಿಕ್ಷಣ/ ಸಾಮಾಜಿಕ ನೆಲೆ ಇದೆಲ್ಲ ನೋಡಿದರೆ ದಿನದಿನವೂ
ತಾಯಂದಿರ ದಿನವೇ...!!!
No...No...ಇದು ಖಂಡಿತ ಕರುಬುವ ಮಾತಲ್ಲ...ಏಕೆಂದರೆ ಬದಲಾಗುವ ಜಗತ್ತಿನಲ್ಲಿ ನಮ್ಮ ಅವ್ವಂದಿರಿಗಿಂತ ನಾವು ತುಂಬಾನೇ
ಆರಾಮವಾಗಿ ಕಳೆದಿದ್ದಿದೆ. ಅದು ನಮ್ಮ ಅವ್ವಂದಿರಿಗೆ ಸಿಗದ ಬಗ್ಗೆ ಚಡಪಡಿಸಿದ್ದಿ ದೆ. ಅವರ ಮಕ್ಕಳಿಗೆ ಸಿಕ್ಕ ಇನ್ನೂ ಚಂದದ ಜೀವನದ ಬಗ್ಗೆ ಖುಶಿಯಿದೆ...
ಆದರೂ ಅವ್ವನ ಬದುಕಿನ ಬದುಕು- ಬವಣೆಗಳನ್ನು ಕಣ್ಣಾರೆ ಕಂಡು
ನಾವೇ ಎಲ್ಲ ಅನುಭವಿಸುತ್ತಿರುವಾಗ ಬಾಯಿ ಮಾತಿನ Happy mother's day ಹೇಳುವಾಗ ಗಂಟಲಲ್ಲಿ ಏನೋ
ಸಿಕ್ಕಂತಾಗುವದು ಮಾತ್ರ ಸುಳ್ಳಲ್ಲ...
" ಅಕ್ಕಾ! ಎಲ್ಲಿದ್ದೀಯೋ ಅಲ್ಲಿ ಆರಾಮಾಗಿರು...ನಿನ್ನ ಮಕ್ಕಳು/ ಮೊಮ್ಮಕ್ಕಳು ಎಲ್ಲರೂ ಸಹ ಆರಾಮಾಗಿದ್ದೇವೆ" ಎಂದು ಒಂದು ನಿಮಿಷ ಮೌನವಾಗುವದು ನನ್ನ ರೀತಿ.
ಇದು ನನ್ನ, ಕೇವಲ ನನ್ನ ಮನದ ಮಾತು...ಎಲ್ಲರದೂ ಖಂಡಿತ
ಆಗಬೇಕಾಗಿಲ್ಲ...
No comments:
Post a Comment