ಪ್ರಸಿದ್ಧಳಾಗುವ ಹುಚ್ಚು ನನಗಿಲ್ಲ,
ನೀವು ನನ್ನನ್ನು ಗುರುತಿಸಿದಿರಿ,
ಅಷ್ಟೇ ಸಾಕು ನನಗೆ...
ಒಳ್ಳೆಯವರಿಗೆ ಒಳ್ಳೆಯವಳಾಗಿ,
ಕೆಟ್ಟವರಿಗೆ ಕೆಟ್ಟವಳಾಗಿ ನಾ ಕಂಡೆ, ಅದಕ್ಕಾಗಿ ಕಿಂಚಿತ್ತೂ ಖೇದವಿಲ್ಲ ನನಗೆ.
ಈ ಬದುಕಿನ ರೀತಿಯೇ ಒಂದು ವಿಚಿತ್ರ.
ದಿನದ ಸಂಜೆಗಳು ಕಳೆಯಲು
ದುಸ್ತರವಾಗುತ್ತವೆ...
ಆದರೆ
ವರ್ಷದ ಮೇಲೆ ವರ್ಷಗಳು ಉರುಳುತ್ತಲೇ ಇರುತ್ತವೆ...
ಬದುಕಿನಲ್ಲಿ ಗೆಲುವು ಕಂಡರೆ, ಜನ ಬೇತಾಳದಂತೆ ಬೆನ್ನೇರುತ್ತಾರೆ...
ಸೋಲುಂಡರೆ, ಪರಿಚಯಸ್ಥರು ಸಹ ಕಾಣೆಯಾಗುತ್ತಾರೆ...
ಸಮುದ್ರದಿಂದ ನಾನೊಂದು
ಪಾಠ ಕಲಿತಿದ್ದೇನೆ,
ನನ್ನಷ್ಟಕ್ಕೇ ನಾನು ಬದುಕಿರುವದು,
ಇರುವಿನ ಸೊಗಸನ್ನು ಸವಿಯುವದು.
ಹಾಗೆಂದು ನನ್ನಲ್ಲಿ ಯಾವುದೇ
ಐಬು ಇದೆಯಂದರ್ಥವಲ್ಲ,
ಹಾಗೆಯೇ ಯಾವ ಸುಳ್ಳು ಅಹಮ್ ಸಹ ಇಲ್ಲ...
ನನ್ನ ಬದುಕು/ ಭಾವಗಳಿಂದ
ನನ್ನ ಗೆಳೆತಿಯರಿಗೇನೋ ಅಸೂಯೆ...
ಹಾಗೆಂದು ಆ ಕಾರಣಕ್ಕೆ ನಾನು ಅವರನ್ನಾಗಲೀ, ನನ್ನ ರೀತಿಯನ್ನಾಗಲಿ
ಈಗಲೂ ಬದಲಿಸಿಲ್ಲ...
ಒಂದು ದಿನ ಗಡಿಯಾರ ಖರೀದಿಸಿ
ಕೈಗೆ ಕಟ್ಟಿದ್ದೇ ಬಂತು,
ಸಮಯ ಓಡುತ್ತಲೇ ಇದೆ,
ನನ್ನನ್ನೂ ಓಡಿಸುತ್ತಲೇ ಇದೆ...
ಒಂದು ಮನೆ ಮಾಡಿಕೊಂಡು
ಆರಾಮಾಗಿ ಇರುವ ಕನಸ ಕಂಡೆ,
ಆದರೆ ನಂತರದ ಅವಶ್ಯಕತೆಗಳು
ನನ್ನನ್ನು ಕ್ಷಣಕೂಡ ಆರಾಮು ಕೊಡದೇ
ಕಾಯಮ್ ಅಲೆಮಾರಿಯಾಗಿಸಿವೆ...
ಬಾಲ್ಯದ ಆ ದಿನಗಳು, ಆ ಆನಂದ ಮತ್ತೊಮ್ಮೆ ಬರಲಾರವು, ಗೊತ್ತು...
ದಿನಗಳುರುಳಿದಂತೆ ಬದುಕಿನ ಬಣ್ಣಗಳೇಕೆ ಮಾಸುತ್ತವೆ...?
ಚಂದದ ಗಳಿಗೆಗಳೇಕೆ ಅತ್ಯಂತ ಸಹಜವೆನಿಸತೊಡಗುತ್ತವೆ?
ಹಿಂದೊಮ್ಮೆ, ನಗುನಗುತ್ತಲೇ
ಏಳುವ ಬೆಳಗುಗಳಿದ್ದವು...
ಈಗ, ಒಂದೂ ಮುಗುಳುನಗೆ
ಇಲ್ಲದೇ ದಿನಗಳೇ ಕಳೆದುಹೋಗುತ್ತಿವೆ.
ಬದುಕನ್ನು ಸಂಭ್ರಮಿಸುತ್ತ,
ಸಂಬಂಧಗಳನ್ನು ಬೆಸೆಯುತ್ತ,
ಎಷ್ಟೊಂದು ದೂರ ಪಯಣಿಸಿದ್ದೇನೆ,
ಅದೇ ಕಾಯಕದಲ್ಲಿ ನನ್ನನ್ನು
ನಾನೇ ಕಳೆದುಕೊಂಡು ಹುಡುಕಿದ್ದೇನೆ...
ನಗುತ್ತೇನೆ, ನಗುತ್ತಲೇ ಇರುತ್ತೇನೆ, ನೋವನ್ನೆಲ್ಲ ನುಂಗುತ್ತೇನೆ...
ನನ್ನನ್ನೇ ಅಲಕ್ಷಿಸಿಕೊಂಡು
ಇತರರನ್ನು ಗೌರವಿಸುತ್ತೇನೆ...
ನನಗೆ ಅದಕ್ಜಾಗಿ ಕಿಂಚಿತ್ತೂ ಖೇದವಿಲ್ಲ.
ನನಗೆ ಗೊತ್ತಿದೆ,
ಇದರ ಮೌಲ್ಯ ಎಲ್ಲರಿಗೂ
ಅರಿವಾಗುವುದಿಲ್ಲ, ಎಂದು.
ಪರವಾಯಿಲ್ಲ,
ನನಗೆ ಇದೂ ಗೊತ್ತಿದೆ...
ಇದರಿಂದ ನಾನು ಅನೇಕ ಬಹುಮೌಲ್ಯ
ಸಂಬಂಧಗಳನ್ನು ಗಳಿಸಿ
ಉಳಿಸಿಕೊಳ್ಳುವೆನೆಂದು...
No comments:
Post a Comment