ಸದಾ ವಿನೋದಪ್ರಿಯರು. ನಗುವ, ನಗಿಸುವ ಅತಿಶಯದ ಧರ್ಮ ಅವರದು. ನಗುತ್ತಾ ಈ ಲೋಕ ತೊರೆದು ಹೋದವರು. ಅಂಥವರ ಪುಣ್ಯತಿಥಿಗೆ ಜನ ಬಿಳಿ ಬಟ್ಟೆಯಲ್ಲಿ ಬಂದು ತಲೆ ಕೆಳಗೆ ಹಾಕಿ ಸಂತಾಪದ ನುಡಿಯಾಡುವದು ಬೇಡ. ನಕ್ಕು ,ನಗಿಸಿ, ಖುಶಿಯಿಂದ ಹೋಗುವಂತಾಗಲಿ.ಅಂದರೆ ನನ್ನ ತಂದೆಗೂ ತೃಪ್ತಿಯಾಗುತ್ತದೆ ಅಂದೆ. ಮನೆಯವರೆಲ್ಲರೂ ತಕ್ಷಣ ಅನುಮೋದಿಸಿದರು. ಅದಕ್ಕಾಗಿಯೇ ಈ ಹಾಸ್ಯ ಗೋಷ್ಠಿ. ನಮ್ಮ ತಂದೆಯವರ
ಪರೋಕ್ಷ ಸಾನಿಧ್ಯದಲ್ಲಿ..."
ಇದು ಹಿಂದಿ ನಟ ಅನುಪಮ್ ಖೇರ್ ತಮ್ಮ ತಂದೆಯ ಮರಣಾನಂತರದ ಹದಿಮೂರನೇ ದಿನ ಮಾಡಿದ ಭಾಷಣ.
ಹಾಗೆಯೇ ನಮ್ಮ ದೂರದ ಸಂಬಂಧಿಕರೊಬ್ಬರಿದ್ದರು. ಗಂಡ ,ಹೆಂಡತಿ ಆದರ್ಶ ದಾಂಪತ್ಯಕ್ಕೊಂದು ಅದ್ಭುತ ಮಾದರಿ. ಅನಿವಾರ್ಯತೆ ಹೊರತುಪಡಿಸಿದರೆ ಅವರನ್ನು ಬೇರೆ ಬೇರೆ ಕಂಡಿದ್ದೇ ಇಲ್ಲ.ಅಷ್ಟು ಹೊಂದಾಣಿಕೆ ಅವರಲ್ಲಿ.ಜಗಳವಂತೂ ಕಂಡರಿಯದ್ದು. ಮಕ್ಕಳೇ ಅವರಿಗೆ forever honeymoon pair ಎಂದು ಛೇಡಿಸುತ್ತಿದ್ದರು. ಕೆಲವರ್ಷಗಳ ನಂತರ ಗಂಡ ಹೃದಯ ಸ್ಥಂಬನದಿಂದ ತೀರಿಕೊಂಡಾಗ ಕೆಲ ದಿನ ಸ್ವಾಭಾವಿಕ ವಾಗಿಯೇ ಹೊರಗೆ ಕಾಣಿಸಿಕೊಳ್ಳಲಿಲ್ಲ. ಕೊನೆಗೊಮ್ಮೆ ಹೊರಬಂದಾಗ ಅವರಲ್ಲಿ ಕಿಂಚಿತ್ತೂ ಬದಲಾವಣೆ ಇರಲಿಲ್ಲ. ಅದೇ ಶಾಂತ ಮುಖ, ಅದೇ ಇರುವಿಕೆ, ಅದೇ ಆರ್ದ್ರತೆ...ಎಲ್ಲರಿಗೂ ತೀವ್ರ ಅಚ್ಚರಿ. ಬೇರೆಯದನ್ನೇ ಊಹಿಸಿಕೊಂಡು ಸಂತೈಸಲು ತಯಾರಾದವರು ಕಂಗಾಲು.
" ಹೌದು, ನನಗೆ ದುಃಖವಾಗಿದೆ. ಅದು ನನ್ನ ಸ್ವಂತ ಭಾವನೆ. ಅದನ್ನು ಸದಾ ಮುಖದ ಮೇಲೆ ಹೊತ್ತು ಇತರರ ಮೇಲೂ ಹೇರುವ ಅಧಿಕಾರ ನನಗಿಲ್ಲ. ಅದೆಲ್ಲ ನನ್ನ ವೈಯಕ್ತಿಕ ವಲಯಕ್ಕೆ / ಅತಿ ಆತ್ಮೀಯರೊಂದಿಗೆ ಸೀಮಿತ. ನನ್ನ ಖಿನ್ನ ಮುಖ, ಕಣ್ಣೀರು, ಅಸ್ತವ್ಯಸ್ತ ಇರುವಿಕೆ
ಹೊರಗಿನ ಜನಕ್ಕೆ ತಪ್ಪು ಅಂದಾಜನ್ನೇ
ಕೊಡಬಹುದು. " ಪಾಪ, ಎಷ್ಟು ಚನ್ನಾಗಿದ್ದರು, ಈಗ ನೋಡಿ ಏನು ಅವಸ್ಥೆ!! ಮಕ್ಕಳು ಒಂದಿಷ್ಟು ಚನ್ನಾಗಿ ನೋಡಿ ಕೊಳ್ಳಬಾರದೇ?" ಅಂದರೆ ನಾನು ಇದ್ದೂ ಸತ್ತಂತೆ. ಮೊದಲ ಸಲ ಹೃದಯಾಘಾತವಾದಾಗಲೇ ನನ್ನವರು ನನ್ನಿಂದ ವಚನ ತೆಗೆದುಕೊಂಡಿದ್ದರು. ಅವರ ಇಚ್ಛೆಯಂತೆ ಇರಬೇಕಾದ್ದು ನನ್ನ ಮೊದಲ ಆದ್ಯತೆ." - ಇದು ಆತ್ಮೀಯರೆದುರು ಅವರು ತೆರೆದಿಟ್ಟ ಸತ್ಯ.
ಮೇಲಿನ ಎರಡೂ ನಿಲುವುಗಳು ಮೇಲ್ನೋಟಕ್ಕೆ ಅಸಂಗತ. ಆದರೆ ಸ್ವಲ್ಪವೇ ಒಳಹೊಕ್ಕರೂ ಇದನ್ನೇ ಅಲ್ಲವೇ ನಮ್ಮ ದಾರ್ಶನಿಕರು ,ತಿಳಿದವರು, ಪುರಾಣಗಳು ಹೇಳಿದ್ದು, ಹೇಳುತ್ತಲೇ ಬಂದಿದ್ದು. ನಿಜ, ಬದುಕು ಪುಸ್ತಕ ಓದಿ, ಪುರಾಣ ಕೇಳಿ , ರೂಪಿಸಿಕೊಳ್ಳವಷ್ಟು ಸುಲಭ ಸಾಧ್ಯವಲ್ಲ.ಆದರೆ ಕೆಲವರಾದರೂ ಆ ಮಟ್ಟಕ್ಕೆ ತಲುಪುವ ಸಾಮರ್ಥ್ಯ ತೋರಿಸಿದರೆ ಖಂಡಿತ ಖಂಡಿಸಬಾರದು.
ಒಳಹೊಕ್ಕು ಬೇರೆ ಬೇರೆ ಆಯಾಮದಿಂದಲೂ ಯೋಚಿಸಿ, ನಮಗಾಗದ್ದನ್ನು ಅವರು ಮಾಡಿ ತೋರಿಸಿದ್ದಕ್ಕಾಗಿ ಅಭಿನಂದಿಸಬೇಕು.
"ಪರಿವರ್ತನೆ ಜಗದ ನಿಯಮ" ಎಂದು
ಭಗವದ್ಗೀತೆಯ ಸಾರವೇ ಹೇಳಿದ್ದನ್ನು ನಾವು ಒಪ್ಪಲಿ, ಬಿಡಲಿ, ಒಪ್ಪಿದವರನ್ನು
ಪ್ರಶ್ನಿಸುವ ಹಕ್ಕಂತೂ ಖಂಡಿತ ನಮಗಿಲ್ಲ.
No comments:
Post a Comment