Monday, 8 February 2021

೩೭.' ಹಬ್ಬ'ಗಳೇ 'ಹುಟ್ಟಿದ ದಿನ'ಗಳಾಗುತ್ತಿದ್ದ ' ಕಾಲ' ನಮ್ಮದು...

ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ'  ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ  ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮ ವಿಚಿತ್ರವಲ್ಲವೇ? _ಹೀಗೆಂದು ನಮ್ಮ ಗುರುಗಳನ್ನು ಕೇಳಿದ್ದೆ.
" ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.
ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ, ನಂತರ ವೋ  ಅಂಗವಿಕಲರಾಗಿರುತ್ತಾರೆ.
ಇದಾವುದೂ ಇಲ್ಲದೇ ದೈವೀ ಕೃಪೆಯಿಂದ
ಕೆಲವರ್ಷಗಳನ್ನು ಕಳೆಯುವಂತಾದರೆ
ಅದು ಸಂಭ್ರಮವಲ್ಲವೇ?"- ಎಂದಿದ್ದರು
ಗುರುಗಳು. ಮರುಮಾತಾಡದೇ ಒಪ್ಪಿಕೊಂಡಿದ್ದೆ.

ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು. ಅಂದಮೇಲೇ 'ಹುಟ್ಟು' 'ಹಬ್ಬ'ವಾಗುವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.  ಆದರೆ ಅದಕ್ಕೆ ಮುಂಬರುವ ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು.
'ಎರೆದುಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ ,ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' ಮೆನ್ಯೂ'.

ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು.ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ,ಅವರ ಬದುಕನ್ನು , ನೋಡಿಯೇ...

ಇಂದು ಚಿತ್ರ ಸಂಪೂರ್ಣ ತದ್ವಿರುದ್ಧವಾಗಿ ಬದಲಾಗಿದೆ. ಆಗ  'scarcity' (ಕೊರತೆ) ಯ ಸಮಸ್ಯೆಯಿತ್ತು. ಇಂದು 'abundance'- 'ವಿಪುಲತೆ'ಯ  ಸಮಸ್ಯೆ. Software  ಕ್ರಾಂತಿಯಿಂದಾಗಿ   ಎಲ್ಲರಿಗೂ, ಯಾವುದಕ್ಕೂ ಒಂದಿಷ್ಟೂ ಕಡಿಮೆಯಿಲ್ಲ. ಎಲ್ಲರಿಗೂ ತಮ್ಮ, ತಮ್ಮ status ತೋರಿಸುವ ಹಂಬಲ. ಹೀಗಾಗಿ ಅವಶ್ಯಕತೆ ಇರಲಿ, ಬಿಡಲಿ  ವಿಪರೀತ ಖರ್ಚು  ಮಾಡಬೇಕೆಂಬ ಹುಚ್ಚು. ಹೀಗಾಗಿ ಮದುವೆ, ಮುಂಜಿವೆಗಳಂತೆ  ಹುಟ್ಟು ಹಬ್ಬವೂ ಒಂದು Event ಅನ್ನುವ ಮಟ್ಟಕ್ಕೆ ಬಂದು ತಲುಪಿದೆ. ಖಂಡಿತ ನಾನದನ್ನು ಟೀಕಿಸುತ್ತಿಲ್ಲ. ಆದರೆ  ಸಾಧ್ಯವಿರಲಿ, ಬಿಡಲಿ, ಒದ್ದಾಡಿ ಕೊಂಡಾದರೂ ಮಾಡಲೇಬೇಕು ಅನ್ನುವವರು ಒಮ್ಮೆ ಯೋಚಿಸುವುದು ಒಳಿತು ಎಂಬುದು ನನ್ನ ಅನಿಸಿಕೆ. ಅಲ್ಲದೇ ಕೌಟುಂಬಿಕ ನೆಲೆಯಲ್ಲಿ , ಮನೆ ಜನರ ಸಮ್ಮುಖದಲ್ಲಿ  ಆಚರಿಸುವ ಹಬ್ಬದ ಆಪ್ತತೆ ಇಂಥ Big and Fat function ಗಳಲ್ಲಿ ಕಂಡುಬರುವುದಿಲ್ಲ ಎಂಬುದು ಮಾತ್ರ ಅನುಭವ ವೇದ್ಯ...

ಇಂದಿಗೆ ನಾನು  'ಎಪ್ಪತ್ತೈದು' ಮುಗಿಸಿ ಎಪ್ಪತ್ತಾರಕ್ಕೆ ಕಾಲಿಟ್ಟೆ. ನಿನ್ನೆಯಿಂದ ಮನೆಯಲ್ಲಿ ಮೊಮ್ಮಕ್ಕಳ ಚರ್ಚೆ,"ಅಜ್ಜಿ, ಏನು ಮಾಡೋಣ?" ಎಂದು. ಈ  ೭೫ ರ ಅವಧಿಯಲ್ಲಿ ನಾನು ಕಂಡ  ಎಲ್ಲ ರೀತಿಯ ಹುಟ್ಟುಹಬ್ಬಗಳ ಒಂದು ಚಿತ್ರಣ 
ಹಾಗೆಯೇ ಕಣ್ಣಮುಂದೆ ಸುಮ್ಮನೇ ಹಾದು ಹೋದದ್ದು ಹೀಗೆ, ಇದೇ  ಸಮಯದಲ್ಲಿ.  ಸುಮ್ಮನಿರಲಾರದೇ ಅದಕ್ಕೊಂದು ಶಬ್ದರೂಪ ಕೊಟ್ಟೆ.
ಅಷ್ಟೇ  ವಿಷಯ, ಬೇರಿನ್ನೇನೂ ಇಲ್ಲ..
ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions...
90% Emotions...ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...





No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...