.
ಒಂದು ಪದ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೆ. ಅದೇ ಆಗ ಆ ಕಾವ್ಯ ಪ್ರಕಾರ ಕಲಿಯುತ್ತಿರುವ ನನಗೆ ಅದರಲ್ಲಿ ತಿದ್ದುಪಡಿಗಳು ಜಾಸ್ತಿ ಇರುತ್ತಿದ್ದವು . ನಾನು direct type ಮಾಡುವದೇ ಹೆಚ್ಚು, ಆದರೆ ಈ ಪದ್ಯ ಪ್ರಕಾರ ಕಠಿಣವಾದುದರಿಂದ ಹಾಳೆಯ ಮೇಲೆ ಬರೆದು, ಬೇಕಾದ ತಿದ್ದು ಪಡಿಗಳು ಮುಗಿದಮೇಲೆ post ಮಾಡುವದನ್ನು ಮಾಡಬೇಕಿತ್ತು .ಇಂದು ಬರೆದಾದಮೇಲೆ ನೋಡುತ್ತೇನೆ , ಕೈಯ ಬೆರಳು ಸಂದುಗಳಲ್ಲಿ ಪೆನ್ನು ಸೋರಿ ಮಸಿ ಇಳಿದಿದೆ. ಒಮ್ಮೆಲೇ ಅದು ಏನು ಕಲೆ ಹೊಳೆಯಲಿಲ್ಲ. ಹೊಳೆದಾಗ ಕಂಗಳಲ್ಲಿ ಝಗ್ಗನೇ ಮಿಂಚು. ಏನೇನೋ ನೆನಪುಗಳ ಸರಮಾಲೆ. ಅರವತ್ತು ವರ್ಷಗಳ ಹಿಂದಿನ flash back ಲೀಲೆ... ಮನದ ಪರದೆಯ ಮೇಲೆ...
ಆಗಿನ್ನೂ refill pen ಗಳ ಬಳಕೆ ಬಂದಿರಲಿಲ್ಲ. ಮಸಿಯ pen ಎಂಥದೇ ಖರೀದಿಸಿದರೂ ಪೆನ್ನಿನ 'ನಾಲಿಗೆ' ಗೆ ಇನ್ನಿಲ್ಲದ ಚಪಲ. ಬೆರಳು ಸೋಂಕಿದರೆ ಸಾಕು, 'ಜೊಲ್ಲು' ಸುರಿಸಿಯೇ ಬಿಡುತ್ತಿತ್ತು...ಊಟದ ವೇಳೆ "ಸ್ವಚ್ಛವಾಗಿ ಕೈ ತೊಳೆದುಕೊಂಡು ಬಂದರೆ ಮಾತ್ರ ಊಟ" ಇದು ಅವ್ವನ ತಾಕೀತು. ಎಷ್ಟು ಉಜ್ಜಿದರೂ ಹೋಗದ ಮಸಿಯ ಕಲೆ . ನೆನಪಿದ್ದ ಹಾಗೆ ಮಲ್ಲಿಗೆಯಂತೆ ಅರಳಿದ ಬಿಳಿ ಅನ್ನ ಉಂಡ ನೆನಪೇಯಿಲ್ಲ. ಪ್ರತಿನಿತ್ಯ ನೀಲಿ, ಕೆಂಪು ಬಣ್ಣಗಳ ಓಕುಳಿಯಾಟ ತಪ್ಪಿದ್ದೇ ಇಲ್ಲ. ಇದೂ ಅಲ್ಲದೇ ಸರಿಯಾಗಿ ಟಿಪ್ಪಣಿ ಬರೆದುಕೊಳ್ಳಬೇಕೆನ್ನುವಾಗಲೇ ಮಸಿ ತೀರುವದು ಅತಿ ಸಾಮಾನ್ಯ. ಅವರಿವರ ಪೆನ್ನಿನಿಂದ ಒಂದಿಷ್ಟು ಎರವಲು ಪಡೆಯುವ ಪ್ರಯತ್ನ ಮಾಡುವದು, ಅದು ಇಬ್ಬರಿಗೂ ದಕ್ಕದಂತೆ desk ಮೇಲೆ ಚಲ್ಲಿಹೋಗಿ ಹಾಳಾಗುವದು ಏನೇನೋ ಅವಾಂತರಗಳು. ಆಗಲೂ ಮೂಡದಿದ್ದರೆ ಪೆನ್ ಮತ್ತೆ ಮತ್ತೆ ಝಾಡಿಸಿ, ಮುಂದೆ ಕುಳಿತವರ ಯುನಿಫಾರ್ಮ್ಗೆ ಅದು ಸಿಡಿದು, ಪುಟ್ಟದೊಂದು 'ಪಾಣಿಪತ್ ' ಯುದ್ಧವಾಗಿ ಶಿಕ್ಷಕರ ' ಜನತಾ ನ್ಯಾಯಾಲಯ' ದಲ್ಲಿ 'ನ್ಯಾಯ ' ಖುಲಾಸೆಯಾಗಬೇಕು. ಒಮ್ಮೊಮ್ಮೆ ಶಿಕ್ಷಕರ mood ಕೈಕೊಟ್ಟರೆ ಮಸಿ ಸಿಡಿಸಿದವರನ್ನು ತಿರುಗಿಸಿ ನಿಲ್ಲಿಸಿ, ಮಸಿ ಸಿಡಿಸಿಕೊಂಡವರಿಂದ ಅವರಿಗೆ ತಿರುಗಿ ಮಸಿ ಪ್ರೋಕ್ಷಣೆ ಮಾಡಿಸಿದ ಅನೇಕ ಪ್ರಕರಣಗಳೂ ಉಂಟು. ಅದರ ನೋವು ಇಬ್ಬರಿಗೂ ಸರಿಸಮವಾಗಿ ಹಂಚುವ ಪ್ರಾಮಾಣಿಕ ಪ್ರಯತ್ನದ ಅಂಗವಾಗಿ... ಇನ್ನು ಯಾರಾದರೂ ಮಕ್ಕಳು desk ಮೇಲೆ ಮಲಗಿ ಅರೆಗಳಿಗೆ ಕಣ್ಮುಚ್ಚಿದರೋ ಆಯಿತು ಅವರ ಅವಸ್ಥೆ...ಮಸಿ ಪೆನ್ನು ಬಳಸಿ ಅವರು ಕಣ್ಣು ಬಿಡುವದರಲ್ಲಿ ಪಾಕಿಸ್ತಾನದ ಭಯೋತ್ಪಾದಕರಂತೆ ಗಡ್ಡ, ಮೀಸೆ ಬರೆದು , ಕಣ್ಣು ತೆರೆದಾಗ' ತಾನಾರೆಂದು ' ಅವರಿಗೇನೇ ತಿಳಿಯದ' ಅಯೋಮಯ ಸ್ಥಿತಿಯುಂಟಾಗುವದೂ ಇತ್ತು. ಹುಡುಗಿಯರ desk ಮೇಲೆ ಕಂಡೂ ಕಾಣದಂತೆ ಕೆಂಪು ಮಸಿ ಸಿಡಿಸಿ ,ಅದರ ಮೇಲೆ ಕುಳಿತಮೇಲೆ ಹೇಗೋ ಗೊತ್ತಾಗಿ ,ಅವರನ್ನು ಗಾಬರಿಗೆ ಸಿಲುಕಿಸಿ ಸಮೀಪದ ಗೆಳತಿಯರ ಮನೆಗೆ ಹೋಗಿ ಯುನಿಫಾರ್ಮ್ ಬದಲಿಸಿ ಬರಬೇಕಾದ ಸಂದರ್ಭಗಳೂ ಅಪರೂಪಕ್ಕೆ ಆದದ್ದುಂಟು .
ಇನ್ನು ವಾರ್ಷಿಕ ಪರೀಕ್ಷೆ ಮುಗಿಯಿತೋ ಕೊನೆಯ ದಿನ ಎರಡು ಮೂರು ಪೆನ್ನುಗಳಿಗೆ ಮಸಿ ತುಂಬಿಸಿ ತರುತ್ತಿದ್ದುದೂ ಉಂಟು. ಕೊನೆಯ ಗಂಟೆ ಯಾಗುತ್ತಲೇ ಹುಡುಗರು ಶಾಲೆಯ ಮುಂದೆ ಜಮಾಯಿಸಿ ಒಬ್ಬರಿಗೊಬ್ಬರು ಮಸಿ ಎರಚಾಟ ಅತಿ ಸಾಮಾನ್ಯ ವಿಷಯ... ಕೆಲವು ಬಡಮಕ್ಕಳು Uniform ಮುಂದಿನ ವರ್ಷಕ್ಕೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ವಲ್ಪು ಮೊದಲೇ paper ಕೊಟ್ಟು ಹೋದರೆ, ಕೆಲವು ಜಾಣ ಮಕ್ಕಳು ಓಕಳಿಗೆ ಸಿದ್ಧರಾಗಿ ಬರುವಂತೆ ಒಂದು ವರ್ಷ ಹಳೆಯ uniform ಕಾದಿರಿಸಿದ್ದುಕೊಂಡು ಆ ದಿನ ಧರಿಸಿ ಬರುತ್ತಿದ್ದುದೂ ಇತ್ತು. ಬಹುತೇಕ ಇಂದಿನ ಬಹಳಷ್ಟು ಪ್ರಸಿದ್ಧ cartoonist/ ಚಿತ್ರಕಾರರ ತರಬೇತಿ , ಮಸಿಯಿಂದ desk ಮೇಲೆ ಗೀಚಿದ ಹುಡುಗಿಯರ/ ಗುರುಗಳ caricatures ದಿಂದಲೇ ಶುರುವಾದದ್ದು ಎಂಬ ಅನುಮಾನ ನನಗೆ. ಬೇಸರ ತರಿಸುವ ಅಥವಾ ಕಬ್ಬಿಣದ ಕಡಲೆಯಂತಹ ಕಠಿಣ ವಿಷಯಗಳನ್ನು ಕಡ್ಡಾಯವಾಗಿ ಕೇಳಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತೋ ಶುರು, ಅವರ ಸೃಜನ ಶೀಲತೆಗೆ ಬಾಗಿಲು ಮುಕ್ತವಾಗಿ ತೆರೆದಂತೆ...ಅವಧಿಯೊಂದು ಕಳೆಯುವದರಲ್ಲಿ desk ಗಳ ಮೇಲೆ , ನೋಟಪುಸ್ತಕಗಳಲ್ಲಿ , ಕೆಲವೊಮ್ಮೆ ಅಪರೂಪಕ್ಕೆ ಮುಂದೆ ಕುಳಿತವರ ಬಿಳಿ ಶರ್ಟು ಗಳ ಮೇಲೂ ಕುಜರಾಹೋ, ಅಜಂತಾ, ಕೊನಾರ್ಕ, ಬೇಲೂರು, ಹಳೆಬೀಡುಗಳಲ್ಲೂ ನೋಡಲು ಸಿಗದ ಕಲಾಕೃತಿಗಳ ಸೃಷ್ಟಿಗಳು... ' ಮಸಿ ಬಳಿಯುವ ಕೆಲಸ' ಅನ್ನುವದು ಅಲ್ಲಿಯವರೆಗೆ ಬಯ್ಗಳು ಎನ್ನುವದು ನಮಗೆ ಗೊತ್ತಿತ್ತು. ಅದೂ ಒಂದು 'ಕಲೆ' ಎಂಬುದು ಅರಿವಾದದ್ದು ವಿದ್ಯಾರ್ಥಿಯಾಗಿದ್ದಕ್ಕೂ ಹೆಚ್ಚಾಗಿ ಶಿಕ್ಷಕಿಯಾದ ಮೇಲೇಯೇ ಹೆಚ್ಚು. ಕುಂಕುಮ ಮರೆತುಬಂದರೆ ಕೆಲವು ಶಿಕ್ಷಕ, ಶಿಕ್ಷಕಿಯರ ಹೆದರಿಕೆಗಾಗಿ ಮಸಿಯಿಂದ ಹಣೆಯಮೇಲೆ Red ink ನಿಂದ ಗುರುತು ಮಾಡುವದು, ಕೂದಲಿಗೇನಾದರೂ ಎದ್ದು ಕಾಣುವಂಥ ಕಲೆ ಹತ್ತಿದರೆ ನೀಲಿ ಅಥವಾ ಕಪ್ಪು ಮಸಿಯಿಂದ ಅದನ್ನು ಮುಚ್ಚುವದೂ ಮುಂತಾದ ' ಮುದ್ದಾಂ' ತುರ್ತು ಉಪಯೋಗಗಳೂ ಇಲ್ಲದಿರಲಿಲ್ಲ. "ಒಂದು ಹನಿ ಮಸಿ ಚಿತ್ತಾರ ನುಂಗಿತು" ಎಂಬ ಗಾದೆ ಮಾತು ಗೊತ್ತಿತ್ತು, ಆದರೆ ಒಂದು ಮಸಿ ಪೆನ್ನಿನಿಂದ ನೂರು ಚಿತ್ತಾರಗಳು ರೂಪುಗೊಳ್ಳುತ್ತಿದ್ದುದನ್ನು ಪ್ರತಿನಿತ್ಯ ಕಾಣುವ ಭಾಗ್ಯ ಶಿಕ್ಷಕ, ಶಿಕ್ಷಕಿಯರ ಪಾಲಿಗೆ ಲಭ್ಯವಿರುತ್ತಿತ್ತು.
ಇಂದು ಅಕಾಸ್ಮಾತ್ ಆಗಿ ಬೆರಳುಗಳ ಸಂದು ಮಸಿಯಿಂದ ನೀಲಿಯಾದಾಗ ಅದು ಮಸಿಯ ನೀಲಿಯಾಗಿ ಕಾಣಲೇಯಿಲ್ಲ. ಹೃದಯಕ್ಕೆ ಹತ್ತಿರವಾದ ಆಕಾಶದ ನೀಲಿ, ಶಾಂತ ಸಮುದ್ರದ ಮನ ಮುದದ ನೀಲಿಯಾಗಿ ಕಂಡದ್ದು ರೋಮಾಂಚಕ ಅನುಭವಲ್ಲದೇ ಮತ್ತೇನು??
ಮನಸ್ಸಿನ ಮೇಲೆ ಮಾಯದ ' ಕಲೆ' ಅಂದರೆ ಇದೇನಾ????
No comments:
Post a Comment