* ನನಗೆ ಆಹಾರವೆಂದರೆ ತುಂಬಾ ಪ್ರೀತಿ.
* ಚಿಕ್ಕ ಮಕ್ಕಳು ಭಗವಂತನ ಅದ್ಭುತ ಸೃಷ್ಟಿ.
*ನಾನು ನಕ್ಕು, ನಕ್ಕು ಸಾಯುತ್ತೇನೆ ಎಂದು ಅನಿಸುತ್ತದೆ.
* ದೇವರು ನನ್ನನ್ನು ಹುಟ್ಟಿಸಿ ಮರೆತೇ ಬಿಟ್ಟಿದ್ದಾನೆ.
* ನಾನು ಎಷ್ಟು ನಗುತ್ತೇನೆ ಅಂದ್ರೆ ಕೊನೆಗೆ ಅದು ಅಳುವಿನಲ್ಲಿ ಮುಗಿಯುತ್ತದೆ.
* ನಿಮಗೆ ಜೀವನದಲ್ಲಿ ಏನಾದರೂ ಬದಲಾಯಿಸಲಾಗದಿದ್ದರೆ ಅದನ್ನು ಮರೆತುಬಿಡಿ.
* ಸದಾಕಾಲವೂ ಇರುವ ನನ್ನ ಮುಖದ ಮೇಲಿನ ಮುಗುಳ್ನಗೆಯೇ ನನ್ನ ದೀರ್ಘ ಆಯುಷ್ಯದ ಗುಟ್ಟು.
* ನನಗೀಗ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ, ಆದರೂ ಚೆನ್ನಾಗಿಯೇ
ಇದ್ದೇನೆ.
* ಸಾವು ತಾನಾಗಿಯೇ ಬರುವವರೆಗೂ ನಾನು ಬದುಕಬೇಕು.
* ನನ್ನವು ಉಕ್ಕಿನ
ಕಾಲುಗಳು, ಆದರೆ ಇತ್ತೀಚಿಗೆ ಸ್ವಲ್ಪವೇ ಜಂಗು ಹಿಡಿಯುತ್ತಿವೆ.
* ನಾನು ಇದುವರೆಗೂ ಸ್ವಚ್ಛ, ಪಶ್ಚಾತ್ತಾಪ ರಹಿತ ಆನಂದದ ಬದುಕನ್ನೇ ಬದುಕಿದ್ದೇನೆ. ಈ ವಿಷಯದಲ್ಲಿ ನಾನು ಅದೃಷ್ಟವಂತೆ.
* ಮಾನಸಿಕವಾಗಿ ಸದಾ ತಾರುಣ್ಯದಿಂದಿರುವದು
ಸಾಧ್ಯ .ನಾನೀಗಲೂ ತರುಣಿಯೇ. ಈಗ 70 ವರ್ಷಗಳಿಂದ ಸ್ವಲ್ಪ ಹಾಗೆ ಕಾಣುತ್ತಿಲ್ಲ ಅಷ್ಟೇ.
ಇದು 122ವರ್ಷ,164 ದಿನಗಳ ಕಾಲ ( ಇತಿಹಾಸದಲ್ಲೇ ಇದುವರೆಗಿನ ದೀರ್ಘ ಆಯುಷ್ಯ...) ಬದುಕಿದ , ಮ್ಯಾಡಮ್ ಜೇನ್ ಲೂಯಿಸ್ ಕಾರ್ಮೆಲ್ ಎಂಬ ಫ್ರೆಂಚ್ ಮಹಿಳೆಯ ಜೀವನದೃಷ್ಟಿ.
ಅವಳ ಮರಣ ಪೂರ್ವ ಸಂದರ್ಶನವೊಂದರ ವೇಳೆಯಲ್ಲಿ ಸಂದರ್ಶನಕಾರ
"ಆಯ್ತು ಮೇಡಮ್, ಮತ್ತೊಮ್ಮೆ ಭೇಟಿಯಾಗೋಣ ಅಂದಾಗ ,
ಅವಳು ಹೇಳಿದ್ದು," ಅವಶ್ಯವಾಗಿ ಆಗೋಣ, ನಿನಗೇನೂ ಇನ್ನೂ ಅಷ್ಟು ಹೆಚ್ಚು ವಯಸ್ಸಾಗಿಲ್ಲ, ನೀನಿನ್ನೂ ಕೆಲವರ್ಷ ಬದುಕಬಲ್ಲೆ."
***** ***** ***** ***** *****
ಎಂತಹ positive thinking!!!
ಗೊತ್ತು, ಇದು ಎಲ್ಲರ ಅಂಗೈ ನೆಲ್ಲಿಯಲ್ಲ. ಹಾಗಿರುವದಕ್ಕೆ ತುಂಬಾ ಧೈರ್ಯ, ಮನೋಸ್ಥೈರ್ಯ ಬೇಕು. ಅದನ್ನು ಗಳಿಸುವುದಕ್ಕೆ ತಪಸ್ಸು ಬೇಕು. ಆದರೆ ಇಂಥ ವಿಚಾರಗಳನ್ನು ಬೆಳೆಸಿಕೊಳ್ಳುವುದೂ ಅಥವಾ ಅದರ ಬಗ್ಗೆ ಯೋಚಿಸುವುದೂ ಕೂಡ ಕಡಿಮೆಯೇನೂ ಅಲ್ಲ... ಸ್ವಲ್ಪರ ಮಟ್ಟಿಗಿನ ಪ್ರಯತ್ನ ಕೂಡ ಧನಾತ್ಮಕ ಬದಲಾವಣೆಯೇ. ನಮ್ಮಲ್ಲಿ ನಮಗೇ ಗೊತ್ತಾಗದೇ ಬೆಳೆಯುವ ನಕಾರಾತ್ಮಕ ಯೋಚನೆಗಳನ್ನು ತಡೆದರೂ ಮೊದಲ ಹೆಜ್ಜೆಯಾಗಿ ಬೇಕಾದಷ್ಟಾಯಿತು. ನಾನು ಇಂತಹದನ್ನು ಯೋಚಿಸುವುದು, ಅಂತಹದೊಂದರ ಬಗ್ಗೆ ಬರೆಯುವದು ನನಗಾಗಿಯೇ. ಸಾಧ್ಯವಾದರೆ ಇತರರಿಗೂ ಸಹಾಯವಾಗಲಿ ಎಂಬ ಕಾರಣಕ್ಕೆ ಮಾತ್ರ Loud thinking ಈ ರೂಪದ ಬರಹಗಳಲ್ಲಿ... ನಿಜವಾಗಿಯೂ ಅದು ನನಗೆ ನೆಮ್ಮದಿ ತರುತ್ತದೆ. ಎಪ್ಪತೈದರ ಬೆಂಗಳೂರಿನ ವಾಸ್ತವ್ಯವನ್ನು
ಸಹನೀಯವಾಗಿಸಿದೆ. Covid ಕಾರಣದಿಂದಾಗಿ ಒಂದು ವರ್ಷದಿಂದ ನಡೆದಿರುವ ವನವಾಸ/ ಅಜ್ಞಾತವಾಸಗಳು ನನ್ನನ್ನು ಕಿಂಚಿತ್ತೂ ಬೆದರಿಸಿಲ್ಲ. ಬದಲಿಗೆ ವಿವಿಧ ಚಟುವಟಿಕೆಗಳಲ್ಲಿ ಮನಸ್ಸು ತೊಡಗಿಸುವಂತೆ ಪ್ರಚೋದಿಸುತ್ತಿವೆ.
ಹಾಗೆ ತೊಡಗಿಸಿಕೊಂಡಾಗ ನಾ ಕಂಡ ಸುಲಭ, ಸರಳ, ಸತ್ಯಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲು
ನಮ್ಮ "ಧಾರವಾಡದ ಬೆಸುಗೆ" ಒಂದು
ವೇದಿಕೆಯಾಗಿ ನನ್ನ ಜೊತೆಗಿದೆ. ಅನೇಕರ ಧನಾತ್ಮಕವಾದ ಪ್ರತಿಕ್ರಿಯೆಗಳು ನನ್ನ ಹುರುಪನ್ನು ಹೆಚ್ಚಿಸಿವೆ...
ಮತ್ತೇನೂ ಬೇಕೆನಿಸುವದಿಲ್ಲ ನನಗೆ...
No comments:
Post a Comment