Monday, 29 March 2021

‌ ನಿನ್ನೆ ಪೇಪರ್ ಓದುತ್ತಿದ್ದೆ, print ದೋಷವೋ,ನನ್ನ ಕಣ್ಣಿನ ಆಭಾಸವೋ ಕೆಲ ಭಾಗ ಸ್ಪಷ್ಟವೆನಿಸಲಿಲ್ಲ. ಆ ಭಾಗವನ್ನು ZOOM ಮಾಡಲು ನೋಡಿ ವಿಫಲಳಾದೆ. ಅದು ಪೇಪರ್, ಅದನ್ನು zoom ಮಾಡಲಾಗದು ಎಂಬುದು ನಂತರ ಹೊಳೆಯಿತು .ಮೊನ್ನೆ ಒಂದು ದಿನ mobile ಕೈಲಿ ಹಿಡಿದು TV on ಮಾಡುವ ಪ್ರಯತ್ನ ಮಾಡಿಯೂ ಆಗಿತ್ತು. ಹಿಂದೆಂದೋ ಒಂದಿನ ಕೂದಲು ಬಾಚುತ್ತ ಮುಖ ಕಾಣುವದಿಲ್ಲ ಎಂದು ಪೇಚಾಡಿದೆ. ನಿಂತದ್ದು ಕನ್ನಡಿಯ ಮುಂದಲ್ಲ, ಬಟ್ಟೆಯ cupboard ಮುಂದೆ. ಎದುರಿಗಿದ್ದ ಕುಕ್ಕರ್ ಸೀಟಿ ಹೊಡೆದರೆ, ಯಾರದಾದರೂ ಕರೆಗಂಟೆ ಬಾರಿಸಿದರೆ mobile ರಿಂಗಣಿಸಿತೆಂದು ಗೋಡೆ ಗೋಡೆ ಹಾಯುವದು.. ‌‌ಈ ಅಭ್ಯಾಸ ಹೊಸದಲ್ಲ. ನಾನು ನೌಕರಿ ಮಾಡುವಾಗ ನನ್ನ ಶಾಲೆಯಲ್ಲಿ ಮರೆವಿಗೆ ನನ್ನ ಹೆಸರು ಪರ್ಯಾಯವಾಗಿ ಬಳಕೆಯಾಗುತ್ತಿತ್ತು. ಹಲವಾರು ಸಲ ಮೋಜಿಗೆ, ಕೆಲವೊಮ್ಮೆ ಪೇಚಿಗೆ ಸಿಗಿಸುತ್ತಿತ್ತು. ನನ್ನ ಸಣ್ಣ ಪುಟ್ಟ ದೋಷಗಳು ಸಲೀಸಾಗಿ ಇತರರಿಂದ ಮಾನ್ಯವಾಗಿಬಿಡುತ್ತಿದ್ದವು. ನನಗೇ ಮುಜುಗರವಾಗುತ್ತಿತ್ತು. ನನ್ನ ಲೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೇನೆಂದು ಅವರು ಅರ್ಥೈಸಿದರೆ ಎಂದು ಒಂದು ರೀತಿಯ ಮುಜುಗರವೆನಿಸುತ್ತಿತ್ತು. ರಿಟೈರ್ ಆಗುವವರೆಗೂ ಅಂಥ ಅವಘಡ ವೇನೂ ಸಂಭವಿಸದೇ ನನ್ನನ್ನು ಸರಳವಾಗಿ ನಿವೃತ್ತಿಯಾಗುವಂತೆ ಆಗಿದ್ದು ನನ್ನ ಪುಣ್ಯ. ಸಹೋದ್ಯೋಗಿಗಳ ದಯೆ.. ‌ಇದೇಕೆ ಹೀಗಾಗುತ್ತದೆ??. ಆಗಿನದು ಅರ್ಥವಾಗುತ್ತದೆ. ಏಕಾಏಕಿ single parent ಆಗಿ ಮೂರು ಚಿಕ್ಕಚಿಕ್ಕ ಮಕ್ಕಳನ್ನು ನಿಭಾಯಿಸಬೇಕಾಗಿ ಬಂದಾಗಿನ ಮಾನಸಿಕ ಗೊಂದಲ, ಅಧೈರ್ಯ, ಅನಿವಾರ್ಯತೆಯಿಂದ ಹಾಗಾಗುತ್ತಿತ್ತು ಎಂದು ಅರ್ಥೈಸಬಹುದಿತ್ತು. ಈಗ ಆ ಕಾರಣ ಕೊಡುವಂತೆಯೇ ಇಲ್ಲ. ಈಗಿನದೇ ಬೇರೆ...ಆಧುನಿಕ ಶೈಲಿಯ ಜೀವನದಿಂದಾಗಿ multi task life style ನ ಪರಿಣಾಮವಿದು...ಇದು ನಾನು ಹೇಳಿದಾಗಲೆಲ್ಲ ನನ್ನ ಪರಿಚಯಸ್ಥರು ಅಚ್ಚರಿಪಡುವದಿಲ್ಲ..ಅಸಡ್ಡೆ ಮಾಡುವದಿಲ್ಲ...ನನ್ನದೂ ಇದೇ ಹಣೆಬರಹ ಎಂದು ಸಮ್ಮತಿಸುತ್ತಾರೆ...ಅದೇ ಸಮಾಧಾನ..ಎಲ್ಲರ ಬದುಕಿಗೂ ತನ್ನದೇ ವೇಗ...ಧಾವಂತ...ಕೆಲಸದ ದರ್ದು...traffic ಬೇಗ ದಾಟುವ ತರಾತುರಿ....ಮಕ್ಕಳ ದಿನಚರಿಯ follow ಮಾಡುವಿಕೆ, ಆಗಾಗ ಕಾಣಿಸಿಕೊಳ್ಳುವ ಅತಿಥಿಗಳ ಉಪಚಾರ.... ಹೀಗಾಗಿ ಬೇಕಾಗಿಯೋ,ಬೇಡವಾಗಿಯೋ ಎಲ್ಲರೂ ಚಕ್ರವ್ಯೂಹದ ಅಭಿಮನ್ಯುಗಳೇ...ಒಳಹೋದವರಿಗೆ ಹೊರಬರುವ ದಾರಿಕಾಣದೇ ಕಂಗಾಲು...ಆಗ ಬೇಡವಾದ ಸರಕುಗಳ ಗೋಡೌನ್ ಆದ ತಲೆ ಕಾರ್ಯ ನಿರ್ವಹಣೆಯಲ್ಲಿ ಎಡುಹುವದು ಸಹಜ.... ‌ ಮೇಲಿನ ಯಾವೂ ಕಾರಣಗಳು ನನಗೀಗ ನೆವಗಳಲ್ಲ..ಅದು ನನಗೆ ಗೊತ್ತು..." ಕೃಷ್ಣಾ,ನಿನಗೆ ವಯಸ್ಸಾಯ್ತು"_ ಎಂಬುದರ ಸ್ಪಷ್ಟ ಸೂಚನೆ ಒಂದು ಕಡೆಯಾದರೆ, ಏಕ ಕಾಲಕ್ಕೆ ಹಲವು ಕೆಲಸಮಾಡಬಲ್ಲೆವೆಂಬ over-confidence ಸಮಯಕ್ಕೆ ಸರಿಯಾಗಿ ಕೈ ಕೊಡುವದು ಇನ್ನೊಂದು ಕಾರಣ...ನನಗೆ ಈ ಬಗ್ಗೆ ಅಪಮಾನವಾಗಲಿ,ಅಸಡ್ಡೆಯಾಗಲಿ ಖಂಡಿತ ಇಲ್ಲ...ದೇಹ,ಮನಸ್ಸು,ಇಚ್ಛಾಶಕ್ತಿ,ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ, ದೇಹ- ಮನಸ್ಸುಗಳ 'ಜಗಳ'ಬಂದಿ ಇಂಥ ,ಹೇಳಬಲ್ಲ,ಹೇಳಲಾಗದ ಹತ್ತು ಹಲವು ಕಾರಣಗಳು...ಹೀಗಾದಾಗಲೆಲ್ಲ ನನ್ನ ತಲೆಯನ್ನು ನಾನೇ ಮೊಟಕಿಕೊಂಡು,ಒಮ್ಮೆ ಹುಸಿನಗೆ ನಕ್ಕು, ಹಗುರಾಗಿ ಮುನ್ನಡೆದು ಕಂಡಕ್ಟರನಂತೆ ' right...right..' ಅನ್ನುವದನ್ನು ರೂಢಿಸಿಕೊಂಡಿದ್ದೇನೆ...' ಕಾಲಾಯ ತಸ್ಮೈನಮಃ'...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...