Saturday, 6 March 2021

 "ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ..."
        ‌‌‌‌‌    
          ‌‌‌‌‌  ಸುಮಾರು ಎರಡು ದಿನಗಳ ಹಿಂದೆ ಬೆಳಿಗ್ಗೆ ನನ್ನ  mobile ಸದ್ದಾಯಿತು. ಎತ್ತಿ 'ಹಲೋ' ಎಂದೆ.

" ನಮಸ್ಕಾರ ಮ್ಯಾಡಮ್, ಕೃಷ್ಣಾ ಕೌಲಗಿಯವರು ಬೇಕಾಗಿತ್ತು".

" ನಮಸ್ಕಾರ ಸರ್, ನಾನೇ ಮಾತಾಡ್ತಿರೋದು, ಹೇಳಿ"

" ನಿಮ್ಮ  ಪುಸ್ತಕ ಬಂದು ಮುಟ್ಟಿದೆ  ಮ್ಯಾಡಮ್. ತುಂಬ ಚನ್ನಾಗಿದೆ. ಸುಲಭವಾಗಿ  ಓದಿಸಿಕೊಂಡು  ಹೋಗ್ತಿದೆ. ಅಭಿನಂದನೆಗಳು ನಿಮಗೆ".

" ಸರ್, ಧನ್ಯವಾದಗಳು , ನಿಮ್ಮ ಅಭಿಪ್ರಾಯಕ್ಕೆ. ಖುಶಿಯಾಯ್ತು".

" ಇನ್ನೊಂದು ಮಾತು ಹೇಳಬಹುದಾ ಮ್ಯಾಡಮ್, ತಪ್ಪು ಭಾವಿಸಬಾರದು".

" ಇಲ್ಲ , ದಯವಿಟ್ಟು  ಹೇಳಿ"

"ನೀವು ಕನ್ನಡ ಲೇಖನಗಳಲ್ಲಿ ಇಂಗ್ಲಿಷ/ ಹಿಂದಿ ಶೀರ್ಷಿಕೆ, ಹಾಗೂ  ಪದಗಳ ಬಳಕೆ ಮಾಡಬಾರದಿತ್ತು" .

"ಊಟ  ಅಚ್ಚ  ಕನ್ನಡದ್ದೇ ಸರ್.  ಭಾಷೆಯ ಬಳಕೆ ಬರಿ  ಉಪ್ಪಿನಕಾಯಿ/ ಚಟ್ನಿಯಿದ್ದ ಹಾಗೇ".

" ಅದೂ ಬೇಡವಾಗಿತ್ತು. ನೀವು ಶಿಕ್ಷಕಿ. ಮೇಲಾಗಿ  ಹಿರಿಯರು.
ನೀವೇ ಕನ್ನಡ ಪೋಷಿಸದಿದ್ದರೆ ಹೇಗೆ? ಅಲ್ವಾ?"

" ಅದು ಕನ್ನಡದ ಅವಗಣನೆ ಅಲ್ಲ ಸರ್. ಕನ್ನಡಕ್ಕಿಷ್ಟು ಅಲಂಕಾರ. ಅಲ್ಲದೇ ಪ್ರತಿವರ್ಷ ಸಾವಿರಾರು ಕನ್ನಡ ಪದಗಳು ಆಕ್ಸಫರ್ಡ ಶಬ್ದಕೋಶದಲ್ಲಿ
ಇದ್ದ ರೀತಿಯಲ್ಲೇ ಒಪ್ಪಿತವಾಗುತ್ತಿವೆ. ಸರ್ವಸಮ್ಮತವೆನಿಸುತ್ತವೆ.  ವಿವಿಧ ಭಾಷೆಗಳ ನಡುವಣ ಅಡ್ಡಗೋಡೆ ಶಿಥಿಲವಾಗ್ತಿದೆ. ರೈಲು ನಿಲ್ದಾಣ, ದ್ವಿಚಕ್ರವಾಹನ, ಮಹಾವಿದ್ಯಾಲಯ, ಉಗಿಬಂಡಿ ,ವರ್ತಮಾನ ಪತ್ರಿಕೆಗಳು  ಹೀಗೆ ಬಳಸಿದರೆ ಸುಲಭಕ್ಕೆ ಅರ್ಥವಾಗದಷ್ಟು railway station, bicycle, college, University, Train , ಪೇಪರ್ಗಳು  ಕನ್ನಡದಲ್ಲಿ  ಹಾಸು ಹೊಕ್ಕಾಗಿವೆ. ಅಲ್ವಾ?"

"ಇರಬಹುದು  ಮ್ಯಾಡಮ್, ಆದರೂ ಅವೇ ಶಬ್ದಗಳನ್ನು ಕನ್ನಡ ಲಿಪಿಯಲ್ಲಿ ಬರೆಯೋಣ, ನಮ್ಮ ಊರಲ್ಲಿ ಸರಕಾರೀ ಕನ್ನಡ ಶಾಲೆಯಲ್ಲಿ ಇಂಗ್ಲಿಷ ಅಂಕಿಗಳನ್ನು ಬರೆಯುತ್ತಿದ್ದರು, ನಾನು ದಿನಾಲೂ ಶಾಲೆಗೆ ಹೋಗಿ ಕನ್ನಡದಲ್ಲಿ  ಕಲಿಸಲೇ
ಬೇಕೆಂದು ಆಗ್ರಹಿಸಿದೆ. ಈಗ ಅದನ್ನು  ಮಾಡುತ್ತಿದ್ದಾರೆ.
ನಾವು ಕೆಲ ಹಿರಿಯರಾದರೂ ಕನ್ನಡ ಉಳಿಸಲು ಪ್ರಯತ್ನಿಸೋಣ ಮ್ಯಾಡಮ್, ನಾಳಿನ ಪೀಳಿಗೆಗೆ ' ಬಿತ್ತಲು ಕನ್ನಡದ ಬೀಜಗಾಳುಗಳನ್ನು ಕಾಯ್ದಿಡೋಣ. ಇಲ್ಲದಿದ್ದರೆ  ನಮ್ಮ ಕನ್ನಡ ಬಹುಕಾಲ
ಉಳಿಯುವುದಿಲ್ಲ ಅಲ್ಲವೇ
ಮ್ಯಾಡಮ್?."

              ‌ನಿಜವಾದ ಅರ್ಥದಲ್ಲಿ ಯಾವುದೇ ಪ್ರಚಾರದ ಗೀಳಿಗೆ ಬೀಳದೇ  ಮನದಾಳದಿಂದ ಕನ್ನಡಕ್ಕಾಗಿ ಮಿಡಿಯುವ  ಹಿರಿಯ ,ಪ್ರಬುದ್ಧ ಹೃದಯವೊಂದನ್ನು ವೈಚಾರಿಕವಾಗಿ ವಾದಕ್ಕಿಳಿಸಿ  ಗಾಸಿಗೊಳಿಸಲು ಮನಸ್ಸಾಗಲಿಲ್ಲ. ಅವರು "' ನವೆಂಬರ್ ತಿಂಗಳಿಗೆ" ಮಾತ್ರ ಸೀಮಿತರಾದ ಕನ್ನಡಿಗರಾಗಿರಲಿಲ್ಲ. ಹುಟ್ಟಾ ಕನ್ನಡಿಗರಾಗಿದ್ದರು. ಅವರನ್ನು ಎದುರಿಸುವ ಯಾವುದೇ ಸಮರ್ಥವಾದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಇರಲಿಲ್ಲ.ಬುದ್ಧಿ ಮಾತಾಡಿದ್ದರೆ ನನ್ನಮೆದುಳೂ ಉತ್ತರಿಸುತ್ತಿತ್ತು .ಅಲ್ಲಿ ಮಾತಾಡಿದ್ದು ಹೃದಯ. ಎರಡಕ್ಕೂ ತಾಳಮೇಳವಿರುವದಿಲ್ಲ ಎಂದೆನಿಸಿ ಅವರಿಗೆ ' ಆಯಿತು' ಎಂದು ಹೇಳಿ ಮಾತು ಮುಗಿಸಿ ಫೋನಿಟ್ಟೆ.
              'ಇಂಗ್ಲಿಷ  ಗೀತಗಳು' ಎಂಬ ಹೆಸರಿನಲ್ಲಿ ಅನೇಕ ಇಂಗ್ಲಿಷ ಭಾಷೆಯ ಅತ್ಯಮೂಲ್ಯ ಕವನಗಳನ್ನು ಕನ್ನಡಕ್ಕೆ ಕೊಟ್ಟ ಬಿ.ಎಮ್.ಶ್ರೀಯವರೇ ' ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ'_ ಎಂದಿದ್ದಾರೆ. ಇಂಗ್ಲಿಷ್ ಬೀಜಗಳನ್ನು ಬಿತ್ತಿ ಕನ್ನಡದ ಸಮೃದ್ಧ ಫಸಲು ತೆಗೆಯುವ ಕೆಲಸ ಮಾಡಿದ್ದಾರೆ. "ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು" ದಂಥ ಹಲವಾರು ಕವನಗಳು ಇಂಥ ಪ್ರಯತ್ನಗಳ ಫಲಶ್ರುತಿ.    ನಾನು ಅವರ ಪರಮ ಭಕ್ತೆ. ನನಗೆ ಕನ್ನಡದ ಬಗ್ಗೆ ಅಸಡ್ಡೆ ಇಲ್ಲ. ಇಂಗ್ಲಿಷ/ ಹಿಂದಿ  ನನ್ನ ಪದವಿಯ ವಿಷಯಗಳಾದರೂ ನನ್ನ ಬರಹಗಳಿಗೆ  ಕನ್ನಡವೇ ಆದ್ಯ.
ಏನಾದರೂ ಬೇರೆ ಭಾಷೆಯ ಒಲವಿದ್ದರೆ ಅದು ನನ್ನ ಕನ್ನಡವನ್ನು ಅಲಂಕರಿಸಿ ಚಂದಗೊಳಿಸಲಿಕ್ಕೆ ಮಾತ್ರ.
ಅನೇಕರು ' ನೀರ  ಮೇಲೆ ಅಲೆಯ ಉಂಗುರ" ದ ಅನ್ಯ ಭಾಷೆಯ ಶೀರ್ಷಿಕೆಗಳನ್ನು  ಮನಸಾರೆ ಮೆಚ್ಚಿದ್ದಾರೆ. ಪ್ರಶಂಶಿಸಿದ್ದಾರೆ. ಹಾಗೆಂದ ಮಾತ್ರಕ್ಕೆ  ನನಗೆ ಫೋನು ಮಾಡಿ ಸಲಹೆಯೊಂದನ್ನು ಕೊಟ್ಟ ಹಿರಿಯರನ್ನು ಧಿಕ್ಕರಿಸಿದೆ ಅಂತಲ್ಲ. ಅವರಿಗೆ  ನತಮಸ್ತಕಳಾಗಿ ಒಂದು ಮಾತು, _
   ‌‌‌     ಸರ್, ನೀವು ನೂರಕ್ಕೆ ನೂರು ಸರಿ...ನಿಮಗೆ ನತಮಸ್ತಕಳಾಗಿ ವಂದನೆಗಳನ್ನು ಸಲ್ಲಿಸುತ್ತೇನೆ, ಆದರೆ ನನ್ನದೂ ತಪ್ಪಲ್ಲ...🙏🙏🙏🙏🙏

                ‌ಭಾಷೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಜಗತ್ತೇ ಒಂದು ಹಳ್ಳಿಯಂತೆ ಬದಲಾಗುತ್ತಿರುವ ಈ  ಪರ್ವಕಾಲದಲ್ಲಿ ಕಾಲ ಹಾಗೂ ಸಮಯದ ಜೊತೆ ಹೆಜ್ಜೆ ಹಾಕಲು ಸಹಕಾರಿಯಾಗಲಿವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಅಂಗವಾಗಿ ಕ್ರಮೇಣ ಕಿರಿದಾಗುತ್ತ ಹೊರಟು Global village ಎಂದು ಗುರುತಿಸಿಕೊಂಡಿರುವ  ಹೊಸ ಜಗತ್ತನ್ನು ಎಲ್ಲರಿಗೂ ಸರಿ ಸಮಾನ
ವಾಗಿ ತೆರೆದಿಡುವ ಬೆಳಕಿಂಡಿಗಳಾಗಿವೆ. ಬಡ, ಪ್ರಾಚೀನ, ಹಿಂದುಳಿದ,ಎಂಬ ಸಲ್ಲದ ನಾಮಾಂಕಿತಗಳಿಂದ ಒಂದು ಕಾಲಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದ ಭಾರತವೀಗ ವಿಶ್ವಗುರುವಾಗಿ ಗುರುತಿಸಿ ಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಭಾರತೀಯರೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ  ಆಯ್ಕೆಯಾಗಿರುವದನ್ನು
ನೋಡುತ್ತಿದ್ದೇವೆ. ಸಂಸ್ಕೃತ , ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸಗಳು Indian Image ಕಳಚಿಕೊಂಡು ವಿಶ್ವ ಮಾನ್ಯವಾಗುತ್ತಿವೆ.
ಇಂತಹ ವೇಳೆಯಲ್ಲಿ ಕಣ್ಣುಮುಚ್ಚಿ ಕುಳಿತರೆ ನಷ್ಟ ನಮಗೇ ಹೊರತು ಅನ್ಯರಿಗಲ್ಲ. 
         
‌   ಕಾರಣ ಎಲ್ಲವೂ ಬೇಕು. ನಮ್ಮದನ್ನು
ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಯೊಂದಿಗೆ ಅನ್ಯರದು ಎಷ್ಟು? ಎಲ್ಲಿ? ಏಕೆ? ಹೇಗೆ? ಯಾವಾಗ? ಎಂಬುದನ್ನು ಚೆನ್ನಾಗಿ ಅರಿತು ನಡೆದರೆ ಯಾರೂ ನಮ್ಮನ್ನು, ನಮ್ಮದನ್ನು, ನಮ್ಮಿಂದ ಯಾವಕಾಲಕ್ಕೂ ಕಸಿಯಲಾರರು... 

  ಇದು ನನ್ನ ಅನಿಸಿಕೆ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...