ಉಗ್ರ ಪ್ರತಾಪಿಯ ಭುಜಬಲದ
ಪರಾಕ್ರಮ??
ಮೊನ್ನೆ ಮೈಸೂರಿಗೆ ಒಂದು ವಾರ ಹೋಗಿದ್ದೆ. ಕೊರೋನಾ ಗಲಾಟೆಯಿಂದಾಗಿ ಮರಳಿ ಬರುವ ವರೆಗೂ ಇಡೀ ಊರು ಒಂದು ರೀತಿಯ ಜಡತ್ವದಲ್ಲಿತ್ತು . ಅದು ನಮ್ಮನ್ನು ನಿಯಂತ್ರಿಸಲು ತೊಡಗಿದಾಗ ಮುಂಜಾಗ್ರತಾ ಕ್ರಮವಾಗಿ ಮೈ ಕೊಡವಿಕೊಂಡು ಏಳುವ ದಾರಿ ಹುಡುಕಲೇ ಬೇಕಾಯಿತು. ಸಿನೆಮಾಗಳಿಲ್ಲ, ನೆಂಟರ ಮನೆ ಮಾತೆತ್ತುವ ಹಾಗಿಲ್ಲ, ಹೋಟೆಲು, ಪಾರ್ಕುಗಳೂ safe ಅಲ್ಲ.ಉಳಿದದ್ದು ಪೇಟೆಯಲ್ಲಿ ಒಂದು ರೌಂಡು ."ಕತ್ತೆ ತಪ್ಪಿಸಿಕೊಂಡರೆ ಹಾಳುಗೋಡೆ" _ ಹೆಂಗಸರು ಕಾಣದಿದ್ದರೆ ಸೀರೆ ಅಂಗಡಿ _ ಎಂತಾಯ್ತು, ಒಂದು ರೌಂಡು ಸೀರೆಗಳನ್ನಾದರೂ ನೋಡಿದರಾಯಿತು, ಎಂದುಕೊಂಡು ಮಗಳೊಂದಿಗೆ ಒಂದು ಅಂಗಡಿಗೆ ಹೋದದ್ದಾಯಿತು . ವ್ಯಾಪಾರ ಮಂದವಾಗಿದ್ದ ಕಾರಣ sales boy ಆರಾಮಾಗಿ ತುಂಬ variety ಸೀರೆಗಳನ್ನು ಒಂದೊಂದಾಗಿ ತಂದು ನಮಗೆ ತೋರಿಸುತ್ತಿದ್ದ. ನಮಗೋ ಅವನು ತೋರಿಸುತ್ತಿದ್ದ ಆದರ, ಆಸಕ್ತಿ ಕಂಡು ಏನೋ VIP feelingಉ. ಅದನ್ನು ಸ್ವಲ್ಪ ಹೆಚ್ಚಾಗಿಯೇ ಆನಂದಿಸಿ ಬಿಡುವ ಲಾಲಚಿ ಮನಸ್ಸಾದದ್ದು ಸ್ವಾಭಾವಿಕ. ಆಗ ಅದೆಲ್ಲಿಂದ ಒಕ್ಕರಿಸಿತೋ _ ಬಹುಶಃ ನನಗಿದ್ದ AC/ FAN, ಅಲರ್ಜಿ ಕಾರಣದಿಂದಾಗಿ ಇರಬೇಕು_ ಜೋರಾಗಿ ಸೀನು ಬಂತು. ತಗೊಳ್ಳಿ, ಜೇನು ಹುಟ್ಟಿಗೆ ಬೆಂಕಿ ಬಿದ್ದಂತೆ ಎಲ್ಲರೂ ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿ... ದೂರ ಓಡಿಹೋಗಿ ನನ್ನನ್ನೇ 'ಕೊರೋನಾ virus' ನಂತೆ ಭಯಭೀತರಾಗಿ ಕಣ್ಣು ಅರಳಿಸಿ ನೋಡತೊಡಗಿದರು. ಕರೆದರೆ ಪ್ರತಿಕ್ರಿಯೆನೇ ಇಲ್ಲ.' ಎಲ್ಲ ಅಲ್ಲೇ ಇವೆ, ನೋಡಿಕೊಳ್ಳಿ, ನೀವು ಹೇಳಿದ range ನಲ್ಲಿ ಅಷ್ಟೇ ಇರೋದು' ಎಂದು ಹೇಳುವದರಲ್ಲಿ ಬೆವರಿಟ್ಟರು. ಇನ್ನು ಲಕ್ಷಗಟ್ಟಲೇ ಖರೀದಿಸಿದರೂ ಅವರಾರೂ ಸಮೀಪ ಸುಳಿಯುವದಿಲ್ಲ ಎಂಬುದು ಖಾತ್ರಿಯಾಗಿ ನಾವೂ ಮೆಟ್ಟಲು ಇಳಿಯಲೇಬೇಕಾಯಿತು..
' ಸಮಾನರಾರಿಹರು? ನಮ್ಮ ಸಮಾನರಾರಿಹರು? ಸಮಸ್ತ ಜಗದಲಿ, ಯುಗ ಯುಗಗಳಲಿ ನಮ್ಮ
ಸಮಾನರಾರಿಹರು? ಹಳೆ ಚಿತ್ರಗೀತೆ ನೆನಪಾಗಿ, ನಗುಬಂತು.
"ನಾನಾದರೂ
ಏನು ಮಾಡಲೀ?
'ನಾನು'_
ಯಾವಾಗಲೂ
'ಉತ್ತಮ (ಪ್ರಥಮ)
ಪುರುಷ"...
ಎಂಬ ,
ಎಂದೋ ಓದಿದ ಹನಿಗವನ ನೆನಪಾಯ್ತು. ಸದಾ ' ಅಹಂ ಬ್ರಹ್ಮಾಸ್ಮಿ'
Pose ಕೊಟ್ಟು ಕೊಂಡಿರುವ ಮನುಷ್ಯ
ಪ್ರಾಣಭಯದ ಮುಂದೆ ಎಷ್ಟೊಂದು ಅಲ್ಪನಾಗಿಬಿಡುತ್ತಾನೆ ಎಂಬುದರ ಸಜೀವ ದೃಷ್ಟಾಂತ ಕಣ್ಣೆದುರಿಗೇ ಇತ್ತು.
ಬರಿಗಣ್ಣಿಗೆ ಕಾಣದ virus ಒಂದು ಇಂಥ ಭೂಪರನ್ನು ಮಂಡಿಯೂರಿಸಿದ ಪರಿ ನೋಡಿ, ಹೇಗಿದೆ?
ಲೈಫು ಇಷ್ಟೇನೆ...
No comments:
Post a Comment