Monday, 22 March 2021
೪೩ . ಪುಷ್ಟಿ ಮೈಗಾಗುವದು, ಹೊಟ್ಟೆ ಜೀರ್ಣಿಸುವಷ್ಟೇ... ' ಗದ್ಯಂ ವದ್ಯಂ ಪದ್ಯಂ ಹೃದ್ಯಂ ' ಎಂಬ ತತ್ವವನ್ನು ಓದಿ ನಿಜವೆನಿಸಿ ಒಪ್ಪಿ ಅಪ್ಪಿಕೊಂಡದ್ದು ನಾನು. ನಮ್ಮನೆಯಲ್ಲಿ ಎಲ್ಲರಿಗೂ ಸಾಹಿತ್ಯಾಸಕ್ತಿ ನಮ್ಮಪ್ಪನ ಬಳುವಳಿ. ಎಲ್ಲರಿಗೂ ವಿಪರೀತ ಓದಿನ ಹುಚ್ಚು. ಮನೆಯಲ್ಲಿ ಎಷ್ಟೇ ಇತರ ಕೊರತೆ ಇದ್ದರೂ ಪುಸ್ತಕಗಳ ಕೊರತೆ ಇರಲಿಲ್ಲ. ತಮ್ಮ ತಮ್ಮ ಓದಿನ ಆಸಕ್ತಿಯನ್ನು ಮನೆಯವರೆಲ್ಲರೂ ತಮ್ಮ ತಮ್ಮ ಆಸಕ್ತಿಯ ಹವ್ಯಾಸಗಳಿಗಾಗಿ ಬಳಸಿಕೊಂಡರು. ತಮ್ಮ , ಭಾಷಣಕ್ಕೆ ಒತ್ತು ಕೊಟ್ಟರೆ, ತಂಗಿ 'ಸಣ್ಣ ಕಥಾ' 'ಪ್ರಕಾರವನ್ನು ಆಯ್ದುಕೊಂಡಳು . ನಾನು ಕವನಕ್ಕೆ ಒಲಿದೆ. ನನ್ನ SSLC ಬೀಳ್ಕೊಡುಗೆ ಸಮಾರಂಭದಲ್ಲಿ ನಾ ಬರೆದ ಕವನವೊಂದನ್ನು ನನ್ನೊಬ್ಬ ಆತ್ಮೀಯ ಗೆಳತಿ ಹಾಡಿ ಇಬ್ಬರೂ ಬೆನ್ನು ತಟ್ಟಿಸಿಕೊಂಡಾಗ ನನ್ನ ಆಶೆ ಮೊಳಕೆಯೊಡೆಯಿತು. ಕವನ ಸಂಕಲನಗಳನ್ನು ಕೂಡಿಸುವುದು, ಅವುಗಳನ್ನು ಅನುಸರಿಸಿ ಕವನದ ಸಾಲುಗಳನ್ನು ಗೀಚುವುದು, ಯಾರೋ ಒಬ್ಬರು ನೋಡಿ ಮೆಚ್ಚಿದರೆ ಕವಯಿತ್ರಿ ಯಾಗಿ ಬಿಟ್ಟಂತೆ, ಸತ್ಕಾರ ಸಮಾರಂಭಗಳಾದಂತೆ ಕನಸು ಕಾಣುವುದು , ಮುಂತಾದ ಎಲ್ಲ 'ಹದಿನಾರರ ಹುಚ್ಚು ಖೋಡಿ ಮನಸ್ಸಿನ ಮಂಗಾಟಗಳನ್ನೂ' ಆಡುತ್ತಿದ್ದೆ. ಎಂಟನೇ ಕ್ಲಾಸಿನಲ್ಲಿ ABCD ತಿದ್ದಿದವಳು ನಾನು .ಇಂಗ್ಲಿಷ್ ಸಾಹಿತ್ಯದ ಅಭ್ಯಾಸಕ್ಕೆ ಒಲಿಯುವ ಭಂಡಧೈರ್ಯ ಮಾಡಿದೆ. ಆಗ class ನಲ್ಲಿ ಒಟ್ಟು ಬರಿ ಹತ್ತು ಗಂಡು ಹುಡುಗರು,ನಾನೊಬ್ಬಳೇ ವಿದ್ಯಾರ್ಥಿನಿ. ಆದರೂ ನನ್ನ ನಿರ್ಧಾರ ಸಡಿಲಾಗಲಿಲ್ಲ. ಅಣ್ಣನೂ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು ಅವನ ಗೆಳೆಯರು ನನ್ನ ಗುರುಗಳಾದದ್ದು ಒಂದು ಹೆಚ್ಚುವರಿ ಅನುಕೂಲವಾಗಿತ್ತು . ಮನಸ್ಸಿಗೆ ಬಂದದ್ದು ಗೀಚುವುದು ಬೇರೆ. ಬರೆಯುವುದೇ ಬೇರೆ, ಬರೆಯುವುದಕ್ಕೂ ಮೊದಲು ಹೆಚ್ಚು ಹೆಚ್ಚು ಓದಬೇಕು, ಅರಗಿಸಿಕೊಳ್ಳಬೇಕು, ಅನುಭವಗಳೂ ಬೆಂದು ಗಟ್ಟಿ ಪಾಕವಾಗಬೇಕು, ಎಂಬ ಅಂಶಗಳು ಕ್ರಮೇಣ ಅರ್ಥವಾಗತೊಡಗಿದವು. ನನ್ನ ಕಲಿಕೆ ಹಳ್ಳಿಯಲ್ಲಿ ಆದ್ದರಿಂದ ಇಂಗ್ಲೀಷ್ ತುಂಬಾ ತುಟ್ಟಿಯಾಗಿತ್ತು. ಓದಿದ್ದೆಲ್ಲವನ್ನೂ ಮೊದಲು ಕನ್ನಡಕ್ಕೆ ಮನಸ್ಸಿನಲ್ಲೇ ಭಾಷಾಂತರಿಸಿಕೊಂಡು, ನನಗೆ ತಿಳಿದಂತೆ ಸಾದಾ ಇಂಗ್ಲೀಷ್ನಲ್ಲಿ ಕಾಪಿ ಮಾಡುತ್ತಿದ್ದೆ. ನನ್ನ ಪ್ರಯತ್ನ ಪ್ರಾಮಾಣಿಕವಾಗಿತ್ತೋ, ಒಬ್ಬಳೇ ಹುಡುಗಿ ಎಂಬ ಅನುಕಂಪದ ಪರಿಣಾಮವೋ ಯಾವುದೋ ಒಂದು ಕೆಲಸಮಾಡಿ ನನ್ನ ಆಸಕ್ತಿ ಉಸಿರು ಕಳೆದುಕೊಳ್ಳದಂತೆ ಸಹಕರಿಸಿದವು. ಮೊದಲೇ ಹೇಳಿದಂತೆ ನಾನು ಕವಿತೆಯ ಕಡೆಗೆ ಹೆಚ್ಚು ವಾಲಿದೆ. ಆದರೆ ಅದು ಸುಲಭವಲ್ಲ ಎಂಬ ಸತ್ಯ ಗೊತ್ತಿದ್ದರೂ ಹಿಂಜರಿಯಲಿಲ್ಲ. ಆಗಿನ ಕಾಲದಲ್ಲಿ ಅನಾವಶ್ಯಕ ಪೈಪೋಟಿ ಇರಲಿಲ್ಲ ಎಂಬುದೊಂದು ಧನಾತ್ಮಕ ಅಂಶ ನನಗೆ. ಆಂಗ್ಲ ಕವಿ Keats ಹೇಳಿದಂತೆ," poetry is a spontaneous overflow of feelings recollected in TRANQUILITY ಎಂಬುದನ್ನು ನಮ್ಮ ಆಂಗ್ಲ ಶಿಕ್ಷಕರು ಮನಸ್ಸಿಗೆ ನಾಟುವಂತೆ ಮಾಡಿದ್ದರಿಂದ ನನ್ನ ಕಲಿಕೆಗೂ ವೇಗವಿರಲಿಲ್ಲ. ಅಂತೂ ಒಮ್ಮೆಯೂ ನಪಾಸ ಆಗದಂತೆ ಪದವಿ ಮುಗಿಯುತ್ತಿದ್ದಂತೆಯೇ ಅಲ್ಪ- ಸ್ವಲ್ಪ poetic vocabulary, ಪ್ರಾಸ ಬದ್ಧ ರಚನೆ, Meter, Rythm ಗಳ ಜ್ಞಾನವಿಲ್ಲದೇ ಕೆಲಸ ಸುಲಭವಿಲ್ಲ ಎಂಬ ಅರಿವು ನನ್ನ ಧೈರ್ಯಗುಂದಿಸಿತ್ತು. ನನಗೆ ಬಂದ ರೀತಿಯಲ್ಲಿ ಬರೆದು ಬಲ್ಲವರಿಗೆ ತೋರಿಸಿ ಸಲಹೆ ಪಡೆಯುವುದು, ಇತರ ಭಾಷೆಗಳ ಅನುವಾದ ,ಇಂಥ ಕೆಲಸವಲ್ಲದ ಕೆಲಸದಲ್ಲಿ ತೊಡಗಿಕೊಂಡು ಕ್ರಮೇಣ ಅಂಬೆಗಾಲಿಡುವದನ್ನು ಸುರು ಮಾಡಿದೆ. ನಂತರ ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುತ್ತ, ಜೊತೆಜೊತೆಗೆ ಕಲಿಯುತ್ತಾ ಈಗ ಎಡವುತ್ತ ನಡೆಯುತ್ತಿದ್ದೇನೆ. ಅಷ್ಟಕ್ಕೂ ಇಂದಿಗೂ ಈ ನನ್ನ ಹವ್ಯಾಸ ನನ್ನ fb ಗೆ ಸೀಮಿತವಾಗುವಷ್ಟಾದರೂ ಕೈಹಿಡಿದು ನಡೆಸಿದ್ದು ಆಕಾಶವಾಣಿ ಹಾಗೂ 'ಸ್ವರಚಿತ ಕವನವಾಚನ' ಕಾರ್ಯಕ್ರಮಗಳು .ನವ್ಯ ಪದ್ಯಗಳನ್ನು ಆಸ್ವಾದಿಸುತ್ತೇನಾದರೂ ನನ್ನ ವೈಯಕ್ತಿಕ ಆಯ್ಕೆ ಗೇಯಪದ್ಯಗಳು. ಕಾವ್ಯ ವಾಚನ ಕ್ಕಿಂತಲೂ ಕಾವ್ಯ ಗಾಯನಕ್ಕೆ ನನ್ನ ಆದ್ಯತೆ. ಪ್ರಾಸ-ಪ್ರಸ್ತಾರದ ಕಡೆಗೆ ಒಲವು. ನಾವು ಎಷ್ಟೇ ಹೇಳಲಿ, ಬರೆಯಲೀ, ಪ್ರತಿಯೊಬ್ಬರಿಗೂ ಅವರದೇ ಆಯ್ಕೆಯ ಸ್ವಾತಂತ್ರ್ಯವನ್ನಂತೂ ಎಂದಿಗೂ ಅಲ್ಲಗಳೆಯಲಾಗದು.'ಕವಿತಾ ದಿನ ' ಅಂದ ಕೂಡಲೇ ನನ್ನ ಕವಿತಾಯಾನದ( ಹಾಗೆಂದು ಕರೆಯಬಹುದೇ- ಅನ್ನುವುದೂ ಒಂದು ಪ್ರಶ್ನೆ) ಒಂದು ಝಲಕ್ ಮನಸ್ಸಿನಲ್ಲಿ ಬಂದು ಕ್ಷಣಕಾಲ ಕಾಡಿದ್ದು ಹೀಗೇ...
Subscribe to:
Post Comments (Atom)
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...
No comments:
Post a Comment