ಉಯಿಲು...
ನನ್ನ ಮರಣದ ನಂತರ
ನನ್ನ ಮನೆಯಲ್ಲಿ,
ನನ್ನ ಕೋಣೆಯಲ್ಲಿ
ಅಲ್ಲಿಲ್ಲಿ ಚದುರಿ ಬಿದ್ದ
ನನ್ನದೆನ್ನುವ ಎಲ್ಲವನ್ನೂ
ಒಮ್ಮೆ ಜಾಲಾಡಿಬಿಡಿ ...
ಶತ ಶತಮಾನಗಳಿಂದ
ಹೊರಜಗತ್ತನ್ನೇ ಮರೆತು
ಅಡಿಗೆ ಹಾಗೂ ಮಲಗುವ
ಕೋಣೆಗಳಲ್ಲಿ ಬಂದಿಯಾಗಿ
ಸ್ವಂತ ಬದುಕನ್ನೇ ಮರೆತ
ಮಹಿಳೆಯರಿಗೆ
ನನ್ನೆಲ್ಲ ಕನಸುಗಳನ್ನು
ದಾನ ಮಾಡಿಬಿಡಿ ...
ದೇಶ-ವಿದೇಶಗಳ
ಥಳಕು ಬಳಕಿಗೆ
ಮನಸೋತು,
ವೃದ್ಧಾಶ್ರಮದಲ್ಲಿ
ಹೆತ್ತವರನ್ನು ಅನಾಥರನ್ನಾಗಿಸಿ
ಹಾರಿಹೋದ ಮಕ್ಕಳ
ತಾಯಂದಿರಿಗೆ ನನ್ನ
ಮುಕ್ತ ನಗೆಯನ್ನಿಷ್ಟು
ಸಮನಾಗಿ
ಹಂಚಿಬಿಡಿ...
ನಿನ್ನೆಯ ದಿನವಷ್ಟೇ
'ತ್ರಿವರ್ಣ ಧ್ವಜ' ದಲ್ಲಿ
ಸುತ್ತಿ ತಂದ ಆ ತರುಣ
ಯೋಧನ ಹೆಂಡತಿಯ
ಸೀರೆಯ ತುದಿಗಂಟಿದ
ರಕ್ತದ ಕಲೆಗಳು ಕಾಣದಂತೆ
ನನ್ನ ಮೇಜಿನ ಮೇಲಿನ
ಬಣ್ಣಗಳಿಂದ ರಂಗು
ಬಳಿದು ಬಿಡಿ...
ನನ್ನ ಪ್ರತಿ ಕಣ್ಣಹನಿಯನ್ನೂ
ಸುಂದರ ಕವನವಾಗಿಸಬಲ್ಲ
ಕವಿಮನಸುಗಳಿಗೆ
ನನ್ನ ಕಂಬನಿಗಳನೆಲ್ಲ
ಬಿಟ್ಟು ಬಿಡಿ...
ನಾ ಹಿಡಿದಿಟ್ಟ ಕ್ರೋಧವನ್ನೆಲ್ಲ
ಯುವಜನತೆಯಲ್ಲಿ ತುಂಬಿ
ಸಕಾರಣವೊಂದಕ್ಕೆ
ಕ್ರಾಂತಿಕಾರಿಯಾಗಿ
ಹೊರಹೊಮ್ಮುವಂತೆ
ಅವರನ್ನು
ಹುರಿದುಂಬಿಸಿಬಿಡಿ...
ಕೊನೆಗೆ ಉಳಿದದ್ದು,
ನನ್ನ-
ಮತ್ಸರ.
ದುರಾಸೆ.
ಸಿಟ್ಟು.
ಸುಳ್ಳುಗಳು.
ಸ್ವಾರ್ಥ.
ಇವುಗಳನ್ನು ನನ್ನೊಂದಿಗೆ
ಆಳದಲ್ಲಿ
ಹೂಳಿಬಿಡಿ...
(ಹಿಂದಿ ಕವನವೊಂದರ ಕನ್ನಡ ಭಾವಾನುವಾದ...
ಶ್ರೀಮತಿ, ಕೃಷ್ಣಾ ಕೌಲಗಿ)
No comments:
Post a Comment